Tag: SSLC Examination

  • ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ರಾಯಚೂರು: ಇಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಪರೀಕ್ಷೆ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‍ನಲ್ಲಿ ವಾಟ್ಸಪ್, ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದೆ. ಆದರೆ ಯಾರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ತಿಳಿದುಬಂದಿಲ್ಲ. ಹೀಗಾಗಿ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೃಷಭೇಂದ್ರಯ್ಯ ಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌

    ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೂ ಮೊದಲೇ ಲೀಕ್ ಆಗಿಲ್ಲ. ಆದರೆ ಪರೀಕ್ಷೆಯ ಆರಂಭವಾದ ಬಳಿಕ ಯಾರೋ ಫೋಟೋ ತೆಗೆದಿರುವ ಸಾಧ್ಯತೆಯಿದೆ. ಇದನ್ನೂ ಓದಿ:  ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ಭರ್ಜರಿ ನಕಲು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಭರ್ಜರಿ ನಕಲು ಸಹ ನಡೆದಿದೆ. ರಾಯಚೂರು ನಗರದ ಆಶಾಪೂರ ರಸ್ತೆಯ ಮೊರಾರ್ಜಿ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ರಿಪೀಟರ್ಸ್ ಪರೀಕ್ಷೆ ಬರೆಯುತ್ತಿದ್ದು ಎಗ್ಗಿಲ್ಲದೆ ನಕಲು ನಡೆದಿದೆ. ವಿದ್ಯಾರ್ಥಿಗಳ ಪೋಷಕರೇ ಹೊರಗಿನಿಂದ ನಕಲು ಮಾಡಿ ಒಳಗಡೆ ಹೋಗಿ ಚೀಟಿ ಕೊಟ್ಟು ಬರುತ್ತಿದ್ದಾರೆ.

    ಪರೀಕ್ಷಾ ಕೇಂದ್ರದಲ್ಲಿದ್ದವರೇ ಬಂದು ಚೀಟಿ ತೆಗೆದುಕೊಂಡು ಹೋಗುತ್ತಿದ್ದರು ಕೇಳುವವರಿಲ್ಲದಂತಾಗಿದೆ. ಕಣ್ಮುಂದೆ ಪರೀಕ್ಷಾ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

  • ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

    ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

    ಮಂಡ್ಯ: ಬಾಲ್ಯ ವಿವಾಹ ನಿಷೇಧ ಎಂದು ತಿಳಿದಿದ್ದರೂ ಸಹ ಪೋಷಕರು 10ನೇ ತರಗತಿ ಓದುತ್ತಿದ್ದ ಬಾಲಕಿಗೆ ವಿವಾಹ ಮಾಡಿಸಿದ್ದಾರೆ. ಇದು ತಿಳಿದರೆ ತಮ್ಮ ವಿರುದ್ಧ ಕೇಸ್ ದಾಖಲಾಗುತ್ತೆ ಎಂದು ಬಾಲಕಿಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 27 ರಂದು ಎಸ್‍ಎಸ್‍ಎಲ್‍ಸಿ ಬಾಲಕಿಗೆ ಪೋಷಕರು ಮನೆಯಲ್ಲೇ ಗುಟ್ಟಾಗಿ ಕೆಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಈ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಿರಲಿಲ್ಲ. ಆದರೆ 28 ರಂದು ಎಸ್‍ಎಸ್‍ಎಲ್‍ಸಿ ಇದ್ದ ಕಾರಣ ಪೋಷಕರು ಬಾಲಕಿಯ ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಕಳುಹಿಸಿದ್ದರು. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ಪರೀಕ್ಷೆ ಬರೆಯಲು ಹೋದಾಗ ಬಾಲಕಿ ತನ್ನ ಸ್ನೇಹಿತೆಗೆ ಮದುವೆ ಬಗ್ಗೆ ಹೇಳಿಕೊಂಡಿದ್ದಾಳೆ. ಮಾಹಿತಿ ಬಹಿರಂಗಗೊಂಡ ಬಳಿಕ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿ ಇದ್ದಾಳೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರನ್ನು ನೀಡಿದ್ದಾರೆ.

    ಬಾಲಕಿಗೆ ಮದುವೆ ನಿಶ್ಚಯವಾಗಿದೆ ಎಂದು ಕಂಪ್ಲೇಂಟ್ ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 25 ರಂದು ಅಧಿಕಾರಿಗಳು ಬಾಲಕಿ ಮನೆಗೆ ಭೇಟಿ ನೀಡಿ ವಾರ್ನಿಂಗ್ ನೀಡಿದ್ದರು. ಆದರೂ ಪೋಷಕರು ಅಧಿಕಾರಿಗಳ ಬುದ್ದಿ ಮಾತಿಗೂ ಕೇರ್ ಮಾಡದೇ 27ರಂದು ಬಾಲಕಿಗೆ ಕದ್ದು ವಿವಾಹ ಮಾಡಿದ್ದರು. ಇದನ್ನೂ ಓದಿ: ಪುನೀತ್ ನಿವಾಸಕ್ಕೆ ರಾಹುಲ್ ಭೇಟಿ – ಕನ್ನಡದಲ್ಲಿ ಅಪ್ಪುಗೆ ನಮನ ಸಲ್ಲಿಸಿದ ಕೈ ನಾಯಕ

  • ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡ್ತಾರೆ: ಯುಟಿ ಖಾದರ್

    ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡ್ತಾರೆ: ಯುಟಿ ಖಾದರ್

    ಮಂಗಳೂರು: ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡುತ್ತಾರೆ. ಆದರೆ ಬಿಜೆಪಿಯವರು ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡುತ್ತಾರೆ. ಆದರೆ ಬಿಜೆಪಿಯವರು ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಸ್ವಾಮಿಜಿಗಳು ಸಿದ್ದರಾಮಯ್ಯನವರ ಜೊತೆ ಆತ್ಮೀಯತೆಯಿಂದ ಇದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾರಾದರೂ ಸ್ವಾಮೀಜಿ ಪ್ರತಿಭಟನೆ ಮಾಡಿದ್ರಾ? ಮೂಢನಂಬಿಕೆ ಕಾಯ್ದೆ ಕೂಡ ಆವತ್ತು ಸ್ವಾಮೀಜಿಗಳ ಮನವಿ ಮೇರೆಗೆ ಸಿದ್ದರಾಮಯ್ಯ ಕೈ ಬಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಯಾವುದಕ್ಕೂ ಬೆಲೆ ಕೊಡದೇ ಆ ಬಿಲ್ ಜಾರಿ ಮಾಡಿತ್ತು. ಬಿಜೆಪಿ ಸ್ವಾಮೀಜಿಯವರ ಬೇಡಿಕೆ ಮತ್ತು ಜನರ ಭಾವನೆ ಅರ್ಥ ಮಾಡಿಕೊಳ್ಳಲ್ಲ. ಸಿದ್ದರಾಮಯ್ಯ ದೇವಸ್ಥಾನದ ಅರ್ಚಕರ ಗೌರವಧನ ಹೆಚ್ಚಳ ಮಾಡಿದರು. ಆದರೆ ಬಿಜೆಪಿ ಈವರೆಗೆ ಆ ಕೆಲಸ ಮಾಡಲೇ ಇಲ್ಲ. ಅದನ್ನು ಬಿಟ್ಟು ಸುಮ್ಮನೇ ಜನರ ಮಧ್ಯೆ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಎಲ್ಲರೂ ನೆಮ್ಮದಿಯಿಂದ ಮಾನಸಿಕ ಒತ್ತಡ ಇಲ್ಲದೇ ಪರೀಕ್ಷೆ ಬರೆಯಿರಿ. ಸರ್ಕಾರ ಈಗಾಗಲೇ ಹಿಜಬ್ ಕುರಿತು ಆದೇಶ ಮಾಡಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಅವರಿಗೆ ಮಾನಸಿಕ ಒತ್ತಡ ಆಗದಂತೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಅಗತ್ಯ ಗಮನ ಹರಿಸಬೇಕು. ಸರ್ಕಾರದ ಆದೇಶದಂತೆ ಸಮವಸ್ತ್ರ ನಿಯಮ ಗೌರವಿಸಿ ಪರೀಕ್ಷೆ ಬರೆಯಬೇಕು ಎಂದಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    HIJAB

    ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ನಿಯಮ ಪಾಲಿಸಬೇಕು. ಖಾಸಗಿಯವರು ಶಿಕ್ಷಣಕ್ಕೆ ಒತ್ತು ಕೊಟ್ಟು ಎಲ್ಲವನ್ನು ನಿಭಾಯಿಸಲಿ. ಎಲ್ಲಾ ಧಾರ್ಮಿಕ ಗುರುಗಳು ಈ ಬಗ್ಗೆ ಪೂರಕವಾಗಿ ಮಾತನಾಡಿದ್ದಾರೆ. ಸಂವಿಧಾನಬದ್ದ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಹಾಕಲಾಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ಇದಕ್ಕೆ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ. ವಿದ್ಯಾರ್ಥಿಗಳು ಈ ಬಗ್ಗೆ ಚಿಂತೆ ಮಾಡಬಾರದು, ಪರೀಕ್ಷೆ ಅಷ್ಟೇ ಬರೆಯಬೇಕು. ನನ್ನ ಮಗಳಿಗಾದರೂ ನಾನು ಇದನ್ನೇ ಹೇಳುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಮಾಡಿದ ಆದೇಶ ಗೌರವಿಸಿ. ಆ ಆದೇಶ ಗೌರವಿಸಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ ಮತ್ತು ಹೆತ್ತವರು ಕೂಡ ಈ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು

  • SSLC ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ : ಬೊಮ್ಮಾಯಿ

    SSLC ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ : ಬೊಮ್ಮಾಯಿ

    ಹುಬ್ಬಳ್ಳಿ: ನಾಳೆಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ರಾಜ್ಯಾದ್ಯಂತ ಪರೀಕ್ಷೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಿರಿ ನಿಮ್ಮ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಕೋರಿದ್ದಾರೆ.

    ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಹಿಜಬ್ ವಿಚಾರ ಕೋರ್ಟ್‍ನಲ್ಲಿ ತೀರ್ಪು ಬಂದಿದೆ. ತೀರ್ಪು ಬಂದ ನಂತರ ವಿವಾದಾತ್ಮಕ ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದಿದ್ದರೆ. ಇದನ್ನೂ ಓದಿ: ಜೋಗಿಮಟ್ಟಿ ಗಿರಿಧಾಮಕ್ಕೆ ಕಿಡಿಗೇಡಿಗಳಿಂದ ಬೆಂಕಿ – ಅಪಾರ ಸಸ್ಯಕಾಶಿ ಸುಟ್ಟು ಭಸ್ಮ

    ಇದೇ ವೇಳೆ ಜಲ ವಿವಾದ ಬಗ್ಗೆ ದೆಹಲಿಗೆ ನಿಯೋಗ ಕೊಂಡುಯ್ಯುವ ಬಗ್ಗೆ ಚಿಂತನೆ ನಡೆದಿದೆ. ಅಂತರಾಜ್ಯ ಜಲ ವಿವಾದ ಶೀಘ್ರದಲ್ಲಿಯೇ ಬಗೆಹರಿಯುತ್ತದೆ. ಕಾನೂನಾತ್ಮಕ ರೀತಿಯಲ್ಲಿ ಕೆಲವು ನ್ಯಾಯಲಯಗಳಿಂದ ನಮಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೇಂದ್ರದಿಂದ ಸಹ ಹಲವು ಅನುಮತಿಗೆ ಸಿದ್ಧತೆ ಮಾಡಿಕೊಳ್ಳಲು ಹೇಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂಲ ಕಾಂಗ್ರೆಸ್‍ನವರು ಈ ರೀತಿ ಮಾತಾಡಲ್ಲ, ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಬಿ.ಸಿ ನಾಗೇಶ್

    30ರಂದು ಬಜೆಟ್ ಅಧಿವೇಶನ ಮುಗಿಯುತ್ತದೆ. ಬಜೆಟ್‍ನಲ್ಲಿ ಘೋಷಣೆಯಾದ ಎಲ್ಲವೂ ಅನುಷ್ಠಾನಕ್ಕೆ ಬರುವಂತೆ ಸೂಚನೆ ನೀಡಿದ್ದೇನೆ. ಹಣಕಾಸಿನ ನೆರವು ಆಗಬೇಕು. ಈ ನಿಟ್ಟಿನಲ್ಲಿ ಸಮಿತಿ ರಚನೆ ಆಗಿದೆ. ಕೈಗಾರಿಕೆಯ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಇದು ಅಭಿವೃದ್ಧಿ ಕಾಲ ಆಗಿರುವುದರಿಂದ ಆದಷ್ಟು ಬೇಗ ಅಭಿವೃದ್ಧಿಗೆ ವೇಗ ಹೆಚ್ಚಲಿದೆ. ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಯಾವುದೇ ಅಭಿವೃದ್ಧಿ ಆಗಿಲ್ಲ. ಇದೀಗ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಿದ್ದೇವೆ ಎಂದಿದ್ದಾರೆ.

  • ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು: ಸುರೇಶ್ ಕುಮಾರ್

    ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು: ಸುರೇಶ್ ಕುಮಾರ್

    ಬೆಂಗಳೂರು: ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಉಚ್ಚ ನ್ಯಾಯಾಲಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪುರಸ್ಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಗೆ ಭರವಸೆ ಮೂಡಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

    ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪರೀಕ್ಷೆ ಸಂಬಂಧದಲ್ಲಿ ಈ ವರ್ಷ ಕೈಗೊಂಡಿರುವ ಸರಳೀಕೃತ ಪರೀಕ್ಷಾ ವ್ಯವಸ್ಥೆ ಮತ್ತು ರಾಜ್ಯ ಆರೋಗ್ಯ ಇಲಾಖೆ ರೂಪಿಸಿದ ಎಸ್ ಒ ಪಿ ಪಾಲನೆಗಳಂತಹ ಉಪಕ್ರಮಗಳ ಕುರಿತಂತೆ ಸರ್ಕಾರದ ವೈಜ್ಞಾನಿಕ ಆಲೋಚನೆಗಳನ್ನು ಪುರಸ್ಕರಿಸಿ, ಇದು ಇಡೀ ರಾಷ್ಟ್ರಕ್ಕೆ ಮಾದರಿಯಾದ ಉಪಕ್ರಮವಾಗಿದೆ ಎಂದಿರುವ ಹೈಕೋರ್ಟ್ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದು ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹೈಕೋರ್ಟ್ ಸಕಾಲಿಕ ನಿರ್ಧಾರವನ್ನು ಕೈಗೊಂಡಿದ್ದು, ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಸರ್ಕಾರದ ಕ್ರಮಕ್ಕೆ ಬಲ ಬಂದಂತಾಗಿದ್ದು, ನಮ್ಮೆಲ್ಲರಲ್ಲೂ ಒಂದು ಭರವಸೆ ಮೂಡಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಕಳೆದ ವರ್ಷವೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧದಲ್ಲಿ ಇದೇ ರೀತಿಯಲ್ಲಿ ಹೈಕೋರ್ಟ್ ತೀರ್ಪು ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿದಾರರ ಸಲ್ಲಿಸಿದ್ದ ಎಸ್‍ಎಲ್‍ಪಿ. ಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು ರಾಜ್ಯದ ಕ್ರಮವನ್ನು ಪುರಸ್ಕರಿಸಿತ್ತು ಎಂದು ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

  • ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಪರೀಕ್ಷೆ ಬರೆಯಲು ಉತ್ಸುಕರಾಗಿದ್ದೇವೆ – ಸಚಿವರ ಸಂವಾದದಲ್ಲಿ ವಿದ್ಯಾರ್ಥಿಗಳ ಮನದಾಳದ ಮಾತು

    ಬೆಂಗಳೂರು: ಪರೀಕ್ಷೆ ಬರೆಯಲು ನಾವು ಸಿದ್ದರಿದ್ದೇವೆ ಎಂದು ಎಸ್‍ಎಸ್‍ಎಲ್‍ಸಿ ಮಕ್ಕಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಂವಾದದಲ್ಲಿ ತಿಳಿಸಿದ್ದಾರೆ. ಮಕ್ಕಳ ಅಭಿಪ್ರಾಯ ಸಂಗ್ರಹ ಮಾಡಲು ಇಂದು ವಿದ್ಯಾರ್ಥಿಗಳ ಜೊತೆ ಸುರೇಶ್ ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಅನೇಕ ರಾಜ್ಯಗಳು ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಯಾವುದೇ ರೂಪದಲ್ಲೇ ಆಗಲಿ ಪರೀಕ್ಷೆ ನಡೆಸುವ ಮೂಲಕ ನಮ್ಮ ಆತ್ಮವಿಶ್ವಾಸ ಮೂಡಿಸಿದ್ದಲ್ಲದೇ ನಮ್ಮ ಪ್ರತಿಭೆ, ಸಾಮಥ್ರ್ಯ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು, ಪರೀಕ್ಷೆಯಿಲ್ಲದೇ ಉತ್ತೀರ್ಣರಾದವರೆಂದು ಜೀವನವಿಡೀ ಕಾಡುತ್ತಿದ್ದ ಮುಜುಗರ,ತಪ್ಪಿತಸ್ಥ ಭಾವನೆಯಿಂದ ನಮ್ಮನ್ನು ಮುಕ್ತಗೊಳಿಸಿದ್ದಕ್ಕೆ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇಂದು ಸಂವಾದದಲ್ಲಿ ಭಾಗಿಯಾದ ಮಕ್ಕಳು ಹರ್ಷ ವ್ಯಕ್ತಪಡಿಸಿದರು.

    ಈಗಾಗಲೇ ಪರೀಕ್ಷಾ ಮಂಡಳಿಯಿಂದ ಕಳುಹಿಸಿದ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಒಎಂಆರ್ ಶೀಟ್‍ಗಳನ್ನು ಉತ್ತರಿಸಿದ್ದೇವೆ. ನಮಗೆ ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಕ್ಕಳು ಅಭಿಪ್ರಾಯಪಟ್ಟರು. ಪರೀಕ್ಷೆ ಅಂಕಗಳು, ಪರೀಕ್ಷಾ ಸಮಯ ಕುರಿತು ತಮ್ಮ ಆತಂಕ, ಗೊಂದಲಗಳನ್ನು ನಿವಾರಿಸಿಕೊಂಡ ಮಕ್ಕಳು ರಫ್ ವರ್ಕ್ ಪ್ರಶ್ನೆ ಪತ್ರಿಕೆಯೊಂದಿಗೆ ಹೆಚ್ಚುವರಿ ಹಾಳೆಗಳನ್ನು ಒದಗಿಸುವ ಮಂಡಳಿ ಕ್ರಮವನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಬಹುತೇಕ ಮಕ್ಕಳು ಪರೀಕ್ಷಾ ವೇಳೆ ನಿಗದಿ ಕುರಿತು ಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆ ಕುರಿತು ಕೈಗೊಂಡ ವಿವಿಧ ಕ್ರಮಗಳು, ಪರೀಕ್ಷಾ ಪಾವಿತ್ರ್ಯತೆಯ ಕ್ರಮಗಳನ್ನು ಮಕ್ಕಳು ಶ್ಲಾಘಿಸಿದರು. ಇದನ್ನೂ ಓದಿ: ಸಿಇಟಿ- 2021 ಪರೀಕ್ಷೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಇನ್ನು ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರವಿಲ್ಲದೇ ಇರುವುದರಿಂದ ಬಸ್ ಸೌಲಭ್ಯ ಒದಗಿಸುವ ಕುರಿತ ಅವಳ ಆತಂಕ ನಿವಾರಿಸಿದ ಸಚಿವರು ಬಸ್ ಸೌಲಭ್ಯ ಒದಗಿಸುವ ಕುರಿತು ಇಂದು ನಿಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗುವುದು. ನೀವು ಪರೀಕ್ಷೆ ತಯಾರಾಗುವುದಕ್ಕೆ ಮಾತ್ರವೇ ತಮ್ಮ ಏಕಾಗ್ರತೆ ಇರಲಿ ಎಂದು ಸುರೇಶ್ ಕುಮಾರ್ ಅಭಯ ನೀಡಿದರು.

    ಪರೀಕ್ಷೆ ಬರೆಯಲು ಸಾಕ್ಷಿ:
    ಕಾರವಾರ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾಕ್ಷಿ ಎಂಬ ವಿದ್ಯಾರ್ಥಿನಿ, ‘ನೀವು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಯುತ್ತದೆ ಮತ್ತು ಪರೀಕ್ಷೆ ಬರೆಯುವ ಮೂಲಕವೇ ನಮ್ಮ ಸಾಮಥ್ರ್ಯ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ನಾವೆಲ್ಲ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಸಿದ್ಧವಾಗಿರುವುದಕ್ಕೆ ನಾನೇ ಸಾಕ್ಷಿ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದಾಗ ಮುಕ್ತ ಸಂವಾದದಲ್ಲಿ ಭಾಗಿಯಾದ ರಾಜ್ಯದ 1000ಕ್ಕೂ ಹೆಚ್ಚು ಮಕ್ಕಳು ಖುಷಿಯಿಂದ ಚಪ್ಪಾಳೆ ತಟ್ಟಿ ತಾವೆಲ್ಲ ಪರೀಕ್ಷೆ ಬರೆಯಲು ದಿನಗಣನೆ ಮಾಡುತ್ತಿರುವುದನ್ನು ಮುಕ್ತವಾಗಿ ಹಂಚಿಕೊಂಡರು.

    ಪರೀಕ್ಷೆ ನಡೆಸದೇ ಹೋಗಿದ್ದರೆ ನಾವು ಕೊರೊನಾ ಬ್ಯಾಚ್ನಲ್ಲಿ ಪರೀಕ್ಷೆ ಬರೆಯದೇ ಪಾಸಾದವರೆಂಬ ಒಂದು ಅಪಖ್ಯಾತಿ ನಮ್ಮ ಮೇಲೆ ಉಳಿದುಬಿಡುತ್ತಿತ್ತೇನೋ ಎಂಬ ಆತಂಕ ನಮ್ಮಲ್ಲಿ ಉಳಿಯದಂತೆ ಮಾಡಿದ್ದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಈ ವೇದಿಕೆಯನ್ನು ಮೊದಲು ಬಳಸಿಕೊಳ್ಳುತ್ತೇವೆಂದು ಅನೇಕ ಮಕ್ಕಳು ಹೇಳಿದ್ದು ವೈಯಕ್ತಿಕವಾಗಿ ನಮ್ಮ ಅಧಿಕಾರಿಗಳು, ಶಿಕ್ಷಕರು ಮತ್ತು ನಮಗೆಲ್ಲರಿಗೂ ಅತ್ಯಂತ ಖುಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ – ಸುರೇಶ್ ಕುಮಾರ್

    ಇಳಿಮುಖವಾದ ಕೊರೊನಾ – ಭಯ ಬೇಡ:
    ನಾವು ಪರೀಕ್ಷೆ ಮಾಡಲು ಮುಂದಾದಾಗ ನಮ್ಮ ಮುಖ್ಯಮಂತ್ರಿಯವರು ಕೊರೊನಾ ಪ್ರಕರಣಗಳು ಕಡಿಮೆಯಾದರೆ ಮಾತ್ರವೇ ಪರೀಕ್ಷೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದಂತೆ ಈಗ ನಾವು ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕಳೆದ ವರ್ಷ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವಿಟಿ ದರ 13.2ರಷ್ಟಿದ್ದರೆ ಅದು ಈ ವರ್ಷ 1.7ರ ಆಸುಪಾಸಿನಲ್ಲಿದೆ, ಈ ಬಾರಿಯ ಪರೀಕ್ಷೆ ಕಳೆದ ಬಾರಿಯ ಪರೀಕ್ಷೆಗಿಂತ ಹೆಚ್ಚಿನ ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳು ದ್ವಿಗುಣವಾಗಿವೆ. ಪರೀಕ್ಷಾ ಕೊಠಡಿಗಳು ಮೂರು ಪಟ್ಟು ಹೆಚ್ಚಾಗಿವೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ. ಕೇವಲ ಎರಡೇ ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ತೊಂದರೆಗೆ ಅವಕಾಶವೇ ಇಲ್ಲ. ರಾಜ್ಯದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಮತ್ತು ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿರುವ ಕುರಿತು ನಮಗೆಲ್ಲಾ ಭರವಸೆಯಿದ್ದು ತಮ್ಮ ಪೋಷಕರು ನಮ್ಮನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಮಕ್ಕಳು ಹೇಳಿದರು. ರಾಜ್ಯದ 34ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಕಚೇರಿ ಮತ್ತು ಡಯಟ್ ಕೇಂದ್ರಗಳಲ್ಲಿ ಹಾಜರಿದ್ದ ಮಕ್ಕಳು ಸಚಿವರೊಂದಿಗೆ ಪರೀಕ್ಷೆ ಕುರಿತ ತಮ್ಮ ಶಂಕೆಗಳನ್ನು ನಿವಾರಿಸಿಕೊಂಡರು. 90 ಮಕ್ಕಳು ನೇರವಾಗಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಶೇ.98ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್:
    ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಕೊರೊನಾ ವ್ಯಾಕ್ಸಿನೇಷನ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:
    ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಚರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್‍ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆಂದು ಸಚಿವರು ತಿಳಿಸಿದರು.ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸ್ಯಾನಿಟೈಸರ್, ಮಾಸ್ಕ್ ಕೊಡುಗೆ ಕೊಟ್ಟ ದಾನಿಗಳು

    ಶೀಘ್ರವೇ ಕಾರ್ಯಪಡೆ ಕಾರ್ಯಾರಂಭ:
    ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಸಚಿವರು ವಿವರಿಸಿದರು.

    ಜುಲೈ ಕೊನೇ ವಾರದಲ್ಲಿ ಪಿಯುಸಿ ಫಲಿತಾಂಶ:
    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಎಲ್ಲ ಜಿಲ್ಲೆಗಳ ಡಿಡಿಪಿಐಗಳು, ಡಯಟ್ ಪ್ರಾಚಾರ್ಯರು ಭಾಗವಹಿಸಿದ್ದರು.

  • ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ

    ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ

    ಮೈಸೂರು: ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಡೆಲ್ಟಾ ಅಲೆ ಮತ್ತು ಕೊರೊನಾ ಮೂರನೇ ಅಲೆ ಶುರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಯಾಕೆ ಬೇಕು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಇಲಾಖೆ ನಿರ್ಧಾರವನ್ನು ಖಂಡಿಸಿ ಮಾತನಾಡಿದ ಅವರು, ಸಾವಿನ ಕೂಪಕ್ಕೆ ಮಕ್ಕಳನ್ನು ತಳ್ಳುವ ಕೆಲಸ ಇದು. ಶಿಕ್ಷಣ ಇಲಾಖೆ ಮಾಜಿ ಸಚಿವರ ಜೊತೆ ಹಾಲಿ ಸಚಿವರು ಚರ್ಚೆ ಮಾಡಬೇಕಿತ್ತು. ಯಾರದ್ದೋ ಮಾತು ಕೇಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ ಎಂದು ಟೀಕಿಸಿದರು.

    ಪರೀಕ್ಷೆ ಬರೆಯಲು ಬರುವ ಮಕ್ಕಳ ಆರೋಗ್ಯ ಜವಾಬ್ದಾರಿ ಯಾರದ್ದು? ಯಾಕೆ ಶಿಕ್ಷಣ ಸಚಿವರು ಈ ರೀತಿಯ ಈಗೋ ತೋರಿಸುತ್ತಿದ್ದಾರೆ. ಮಕ್ಕಳನ್ನು ಸಾಯಿಸಲು, ಶಿಕ್ಷಕರನ್ನು ಸಾಯಿಸಲು ಈ ಪರೀಕ್ಷೆ ಮಾಡುತ್ತೀದ್ದಿರಾ? ಮಕ್ಕಳನ್ನು ಸಾಯಿಸಿ ಅವರ ಪೋಷಕರ ಸಾಯಿಸಲು ಮುಂದಾಗಿದ್ದೀರಾ? ಪರೀಕ್ಷೆ ಮಾಡುವ ಹಠ ಶಿಕ್ಷಣ ಸಚಿವರಿಗೆ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡುವ ನಿರ್ಧಾರಕ್ಕೆ ಬಂದಿದ್ದೀರಾ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನನಗೆ ಎಲ್ಲಾ ಗೊತ್ತು ಎಂಬ ಈಗೋ ಮಂತ್ರಿಗೆ ಇರಬಾರದು. ಪಾಠವೇ ಇಲ್ಲದೇ ಪರೀಕ್ಷೆ? ಇದು ಮೂರ್ಖತನ ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕು ಎಂಬ ತೀರ್ಮಾನ ಹಿಂಪಡೆಯಿರಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಅರಣ್ಯದಲ್ಲಿ ಕಾಣೆಯಾಗಿದ್ದ 110ರ ವೃದ್ಧ ನಾಲ್ಕು ದಿನಗಳ ಬಳಿಕ ಪತ್ತೆ

  • ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು

    ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು

    – ಪರೀಕ್ಷಾ ಕೇಂದ್ರಕ್ಕೆ ತೆರಳುವ ವೇಳೆ ಸೋಂಕು ಪತ್ತೆ

    ಕೊಪ್ಪಳ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವೇಳೆ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದ್ದು, ಇದೀಗ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತಂಕ ಎದರಾಗಿದೆ.

    ಜಿಲ್ಲೆಯ ಕಾರಟಗಿ ನಗರದ ಖಾಸಗಿ ಶಾಲಾ ಪರೀಕ್ಷಾ ಕೇಂದ್ರದಲ್ಲಿನ ವಿದ್ಯಾರ್ಥಿನಿಗೆ ಸೋಂಕು ದೃಢವಾಗಿದೆ. ಕಳೆದ ಎರಡು ವಿಷಯಗಳ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿನಿಗೆ ಇಂದು ಸೋಂಕು ದೃಢವಾಗಿದೆ. ಈ ಹಿನ್ನಲೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಸಮಯದಲ್ಲಿಯೇ ವಿದ್ಯಾರ್ಥಿನಿಗೆ ಕೊರೊನಾ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಳೆದ ಮೂರು ತಿಂಗಳ ಹಿಂದೆ ವಿದ್ಯಾರ್ಥಿನಿ ಕೂಲಿ ಅರಿಸಿಕೊಂಡು ತಂದೆ ತಾಯಿಗಳ ಜೊತೆಗೆ ಬೆಂಗಳೂರಿಗೆ ತೆರಳಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರನಲ್ಲಿರುವ ಚಿಕ್ಕಮ್ಮ ಅವರ ಮನೆಯಲ್ಲಿ ವಾಸವಾಗಿದ್ದಳು. ಈ ಹಿಂದಿನ ಎರಡು ಪರೀಕ್ಷೆಗಳನ್ನು 18 ವಿದ್ಯಾರ್ಥಿಗಳಿರುವ ಕೊಠಡಿಯಲ್ಲಿ ಬರೆದಿರುವ ಹಿನ್ನಲೆಯಲ್ಲಿ 18 ವಿದ್ಯಾರ್ಥಿಗಳು ಸೇರಿದಂತೆ 4 ಜನ ಕೊಠಡಿ ಮೇಲ್ವಿಚಾರಕರನ್ನು ಕ್ವಾರಂಟೈನ್ ಮಾಡಲು ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

    ಜಿಲ್ಲೆಯಲ್ಲಿ ಇಂದು 13 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ 8 ಜನರಿಗೆ, ಕೊಪ್ಪಳ ತಾಲೂಕಿನ ಇಬ್ಬರಿಗೆ ಹಾಗೂ ಕುಷ್ಟಗಿ ತಾಲೂಕಿನ ಮೂವರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 97 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದರಲ್ಲಿ 41 ಜನ ಗುಣಮುಖವಾಗಿದ್ದರೆ. 55 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.

  • ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಬಸ್ ವ್ಯವಸ್ಥೆ ಕಲ್ಪಿಸಿದ KSRTC

    ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಲು ಬಸ್ ವ್ಯವಸ್ಥೆ ಕಲ್ಪಿಸಿದ KSRTC

    ಕಾರವಾರ: ಕೊರೊನಾ ಆತಂಕದ ನಡುವೆಯೇ ಮೊದಲ ದಿನವಾದ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇದೇ ವೇಳೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಹಾಜರಾಗಲು ಒಂದು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದ ಘಟನೆ ಶಿರಸಿಯಲ್ಲಿ ನಡೆದಿದೆ.

    ಇಂದು ಜೂ.25 ರಂದು ನಿಗದಿಯಾಗಿದ್ದ ದ್ವಿತೀಯ ಭಾಷೆ ಪರೀಕ್ಷೆಗೆ ದೂರದ ಊರುಗಳಿಂದ ಹಾಜರಾಗಲು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಶಿರಸಿ ತಾಲೂಕಿನ ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯ 42 ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು ಕೆಲವೊಂದು ವಿದ್ಯಾರ್ಥಿಗಳು ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದಿರುವುದರಿಂದ ಉಳಿದ 30 ವಿದ್ಯಾರ್ಥಿಗಳಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿತ್ತು.

    ವಿದ್ಯಾರ್ಥಿ ಕುಮಾರ ಶ್ರೀಧರ ಗೌಡ ಶಿರಸಿಯ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿತ್ತು. ಆದ್ದರಿಂದ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

    ಇತ್ತ ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ರೇಣುಕಾ ಗೌಡ ಪ್ರತಿ ದಿನ ಪರೀಕ್ಷೆ ಬರೆಯಲು ಶಿರಸಿಗೆ ಹೋಗಿ ಬರಬೇಕಾಗಿತ್ತು. ಆದರೆ ಪ್ರತಿದಿನ ವಿದ್ಯಾರ್ಥಿನಿ ಶಿರಸಿಗೆ ಹೋಗಿ ಬರುವುದರಿಂದ ತಮ್ಮ ಊರಿಗೆ ಕೊರೊನಾ ಬರುತ್ತದೆ ಎನ್ನುವ ಭಯಕ್ಕೆ ಗ್ರಾಮಸ್ಥರು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನಿರ್ಬಂಧ ಹೇರಿದ್ದರು. ಆದರೆ ಸರ್ಕಾರಿ ಪ್ರೌಢಶಾಲೆ ದೇವನಹಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ರೂಪಾ ನಾಯ್ಕ ಅವರು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿನಿಗೆ ವಸತಿ ವ್ಯವಸ್ಥೆ ಮಾಡಿ ಸರ್ಕಾರಿ ಪ್ರೌಢಶಾಲೆ ನಿಲೇಕಣಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.

    ಉಳಿದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಇಂದು ನಡೆದ ದ್ವಿತೀಯ ಭಾಷೆ ಪರೀಕ್ಷೆಗೆ 7.85 ಲಕ್ಷ ವಿದ್ಯಾರ್ಥಿಗಳ ಪೈಕಿ 7.71 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಕಂಟೈನ್ಮೆಂಟ್ ಝೋನ್‍ನಿಂದ ಬಂದಿದ್ದ 998 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಿರ್ವಹಿಸಲಾಯ್ತು. ದೇಹದ ಉಷ್ಣಾಂಶದಲ್ಲಿ ಏರಿಳಿತ ಕಂಡು ಬಂದ 201 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. 12 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳು ಅವರಿದ್ದ ಜಾಗದಲ್ಲೇ ಪರೀಕ್ಷೆ ಬರೆದಿದ್ದಾರೆ. 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಕಾರಣ ತಿಳಿದುಕೊಂಡು ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

  • ಅಜ್ಜಿ ಸತ್ತ ದುಃಖ, ಕೊರೊನಾ ಭಯಕ್ಕೆ ಪರೀಕ್ಷೆ ಬರೆಯದಿದ್ದ ವಿದ್ಯಾರ್ಥಿಗಳ ಮನವೊಲಿಕೆ!

    ಅಜ್ಜಿ ಸತ್ತ ದುಃಖ, ಕೊರೊನಾ ಭಯಕ್ಕೆ ಪರೀಕ್ಷೆ ಬರೆಯದಿದ್ದ ವಿದ್ಯಾರ್ಥಿಗಳ ಮನವೊಲಿಕೆ!

    ಚಾಮರಾಜನಗರ: ಅಜ್ಜಿ ಸಾವನ್ನಪ್ಪಿದ್ದ ದುಃಖದಲ್ಲಿದ್ದ ವಿದ್ಯಾರ್ಥಿನಿ ಹಾಗೂ ಕೊರೊನಾ ಭೀತಿಯಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಮನವೊಲಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸದಲ್ಲಿ ತಿಂಗಳ ಹಿಂದೆ ವಿದ್ಯಾರ್ಥಿನಿ ಪಾರ್ವತಿ ಅವರ ಅಜ್ಜಿ ಗೌರಮ್ಮ ನಿಧನರಾಗಿದ್ದರು. ಈ ದುಃಖದಲ್ಲಿದ್ದಲ್ಲಿದ್ದ ವಿದ್ಯಾರ್ಥಿನಿ ಪಾವರ್ತಿ ಪರೀಕ್ಷೆಯಿಂದ ದೂರ ಉಳಿದಿದ್ದರು. ಅಲ್ಲದೇ ವಿದ್ಯಾರ್ಥಿನಿಯ ಚಿಕ್ಕಪ್ಪನ ಪುತ್ರಿಯರಾದ ಪ್ರೀತಿ ಮತ್ತು ಪುಷ್ಪ ಕೂಡ ಕೊರೊನಾ ಭೀತಿಯಿಂದ ಮನೆಯಲ್ಲಿ ಉಳಿದುಕೊಂಡಿದ್ದರು.

    ಇಂದು ಆರಂಭವಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮೂವರು ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಈ ಮಾಹಿತಿ ತಿಳಿದ ಬಿಇಒ ಚಂದ್ರಪಾಟೀಲ್, ಸಿಂಗಾನಲ್ಲೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಶಾಸಕ ಆರ್.ನರೇಂದ್ರ ಅವರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ತುರ್ತಾಗಿ ಮೂವರು ವಿದ್ಯಾರ್ಥಿನಿಯರನ್ನು ಮನವೊಲಿಸಿ ಪರೀಕ್ಷೆ ಬರೆಸಲು ನಿರ್ದೇಶಿತರಾದರು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮಧುವನಹಳ್ಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸಿಂಗಾನಲ್ಲೂರು ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಇಂಗ್ಲೀಷ್ ಪರೀಕ್ಷೆ ಬರೆಸುವಲ್ಲಿ ಯಶಸ್ವಿಯಾಗಿದ್ದಾರೆ.