Tag: SSC exam

  • ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು – ಮಧ್ಯಾಹ್ನ 2 ಗಂಟೆಗೆ ನಿಗದಿ, ರಾತ್ರಿ 10 ಕಳೆದರೂ ಆರಂಭವಾಗದ ಪರೀಕ್ಷೆ

    ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು – ಮಧ್ಯಾಹ್ನ 2 ಗಂಟೆಗೆ ನಿಗದಿ, ರಾತ್ರಿ 10 ಕಳೆದರೂ ಆರಂಭವಾಗದ ಪರೀಕ್ಷೆ

    ಹುಬ್ಬಳ್ಳಿ: ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗದೇ ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟಾಗಿದೆ.

    ಹುಬ್ಬಳ್ಳಿ ಕೇಶ್ವಾಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಆಗರವೇ ಕಂಡುಬಂದಿದೆ. ಈ ಮೂಲಕ ಭವಿಷ್ಯದ ಕೇಂದ್ರ ಸರ್ಕಾರಿ ನೌಕರರ ಜೊತೆಗೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹುಡುಗಾಟವಾಡಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಪರೀಕ್ಷೆಗಾಗಿ ಆಗಮಿಸಿದ್ದರು. ಆದರೆ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ರಾತ್ರಿ ಹತ್ತು ಗಂಟೆಯಾದರೂ ಆರಂಭವಾಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಆನ್‌ಲೈನ್ ಪರೀಕ್ಷೆಗೆ ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ವಿದ್ಯುತ್ ಮತ್ತು ಸರ್ವರ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡದೇ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

    ಇನ್ನೂ ಅಭ್ಯರ್ಥಿಗಳ ಸಮಸ್ಯೆಗಳನ್ನು ಕೇಳಲು ಯಾವುದೇ ಅಧಿಕಾರಿಗಳು ಸಹ ಇಲ್ಲ. ಇದರಿಂದ ರೊಚ್ಚಿಗೆದ್ದು ಪರೀಕ್ಷಾ ಕೇಂದ್ರದ ಎದುರೇ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

  • ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮುಂಬೈ: ಬಾಲಕನೊಬ್ಬ ಮಧ್ಯರಾತ್ರಿ ವೇಳೆ ತನ್ನ ತಾಯಿಗಾಗಿ ಕೂಗಿ ನುಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ವೊರ್ಲಿಯ ಆದರ್ಶ್ ನಗರ್ ನಿವಾಸಿಯಾದ ಋತ್ವಿಕ್ ಘಾದ್ಶಿ ಮೃತ ಬಾಲಕ. ಈತ ದಾದರ್‍ನ ಶಿಶುವಿಹಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗುರುವಾರದಂದು ಆರಂಭವಾಗಬೇಕಿದ್ದ 10ನೇ ತರಗತಿ ಪರೀಕ್ಷೆಗಾಗಿ ಋತ್ವಿಕ್ ಸಿದ್ಧತೆ ನಡೆಸಿದ್ದ. ಬುಧವಾರ ರಾತ್ರಿ 11.30 ವೇಳೆಗೆ ಮಲಗುವಾಗ ಬೆಳಗ್ಗೆ 5 ಗಂಟೆಗೆ ಎದ್ದೇಳಿಸುವಂತೆ ತಾಯಿಗೆ ಹೇಳಿದ್ದ. ಆದ್ರೆ ಮಧ್ಯರಾತ್ರಿ ಸುಮಾರು 1.15ರ ಹೊತ್ತಿಗೆ ಅಮ್ಮನಿಗಾಗಿ ಕೂಗಿ ಬಳಿಕ ಸಾವನ್ನಪ್ಪಿದ್ದಾನೆ.

    ಋತ್ವಿಕ್ ಒಳ್ಳೇ ವಿದ್ಯಾರ್ಥಿಯಾಗಿದ್ದ. ಆತನಿಗೆ ಪರೀಕ್ಷೆಯ ಭಯ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬುಧವಾರದಂದು ತನ್ನ ಸ್ನೇಹಿತರ ಜೊತೆ ಖುಷಿಯಿಂದ ಹೋಳಿ ಆಡಿದ್ದ. ಋತ್ವಿಕ್ ಹಾಗೂ ಇಬ್ಬರು ಸಹೋದರಿಯರನ್ನ ತಾಯಿ ಒಬ್ಬರೇ ಮನೆಗೆಲಸ ಮಾಡಿ ಸಾಕುತ್ತಿದ್ದರು ಎಂದು ವರದಿಯಾಗಿದೆ.

    ಮಧ್ಯರಾತ್ರಿ 1.15ರ ವೇಳೆಗೆ ತಾಯಿಗಾಗಿ ಕಿರುಚಿ, ಆತನಿಗೆ ಸ್ಥಳದಲ್ಲೇ ಮಲ ಮೂತ್ರ ವಿಸರ್ಜನೆಯಾಯಿತು. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ ಎಂದು ಕಾಲೇಜು ವಿದ್ಯಾರ್ಥಿನಿಯಾದ ಋತ್ವಿಕ್ ಸಹೋದರಿ ಮನಾಲಿ ಹೇಳಿದ್ದಾರೆ. ಋತ್ವಿಕ್‍ನ ಮತ್ತೊಬ್ಬ ಸಹೋದರಿ ನರ್ಸ್ ತರಬೇತಿ ಪಡೆಯುತ್ತಿದ್ದು, ಕೆಲಸಕ್ಕಾಗಿ ಹೋಗಿದ್ದರು. ಘಟನೆ ನಡೆದಾಗ ಮನಾಲಿ ಕೂಡಲೇ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದು, ಅವರು ಋತ್ವಿಕ್‍ನಲ್ಲಿ ಕೆಇಎಮ್ ಆಸ್ಪತ್ರೆಗೆ ರವಾನಿಸಿದ್ದರು ಎಂದು ವರದಿಯಾಗಿದೆ.

    ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೇ ಈ ಬಗ್ಗೆ ಪ್ರತಿಕ್ರಿಯಿಸಿ, ಬಾಲಕನನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಸಾವನ್ನಪ್ಪಿದ್ದ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಅನಿಶ್ಚಿತವಾಗಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾಸಕೋಶ ಹಾಗೂ ಅಂಗಾಂಶಗಳನ್ನು ಕಲೀನಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.

    ಋತ್ವಿಕ್ ಒಂದು ತಿಂಗಳ ಹಿಂದೆ ಜಾಂಡೀಸ್‍ನಿಂದ ಬಳಲುತ್ತಿದ್ದ. ಎರಡು ವಾರಗಳ ಹಿಂದಷ್ಟೇ ಆತನ ಚಿಕಿತ್ಸೆ ಮುಗಿದಿತ್ತು ಎಂದು ಮನಾಲಿ ತಿಳಿಸಿದ್ದಾರೆ.