Tag: Sruthi Hariharan

  • ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಮಗಳಿಗೆ ಜಾನಕಿ ಎಂದು ಹೆಸರಿಟ್ಟ ಶ್ರುತಿ – ಪತಿಯಿಂದ ನಾಮಕರಣದ ಫೋಟೋ ಪೋಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಶ್ರುತಿ ತಮ್ಮ ಮಗಳ ನಾಮಕರಣವನ್ನು ಸಾಂಪ್ರದಾಯಿಕವಾಗಿ ಕುಟುಂಬಸ್ಥರ ಜೊತೆ ಮಾಡಿದ್ದಾರೆ. ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ.

    ಸೋಮವಾರ ನಾಮಕರಣ ಕಾರ್ಯಕ್ರಮ ನಡೆದಿದ್ದು, ಶ್ರುತಿ ಹಾಗೂ ರಾಮ್ ತಮ್ಮ ಮಗಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ. ಶ್ರುತಿ ಈವರೆಗೂ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಈಗ ರಾಮ್ ಪೋಸ್ಟ್ ಮಾಡಿದ ಫೋಟೋದಲ್ಲೂ ಮಗುವಿನ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಮಗಳ ಫೋಟೋ ರಿವೀಲ್ ಮಾಡಿ ಎಂದು ಶ್ರುತಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ತಮ್ಮ ಮಗಳ ವಿಡಿಯೋ ಶೇರ್ ಮಾಡಿ, “ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯಬಹುದು. ಒಂದು ದಿನ ನಾನು ಬಿಗಿ ಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಆದರೆ ಇಂದು ಈ ಕಾಲುಗಳು ಸಂತೋಷವಾಗಿದೆ. ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಕಳೆದಿದ್ದೇನೆ. ಈ ರೀತಿಯ ಪ್ರೀತಿಯನ್ನು ಎಂದಿಗೂ ಕಂಡಿರಲಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ಶ್ರುತಿ ಹರಿಹರನ್ ಸದ್ಯ ಕೇರಳದಲ್ಲಿದ್ದು, ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

  • ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್

    ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ತಮ್ಮ ಪುತ್ರಿಯ ವಿಡಿಯೋವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಶ್ರುತಿ ಹರಿಹರನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ, ಸ್ವಲ್ಪ ದೂರ ನಡೆಯಲು ಅಥವಾ ಓಡಾಡಲು ಒಂದು ದಿನ ನಾನು ಕೊಚ್ಚೆ ಗುಂಡಿಗಳನ್ನು ಜಿಗಿಯುತ್ತೇನೆ. ಒಂದು ದಿನ ರಸ್ತೆ ದಾಟುತ್ತೇನೆ ಅಥವಾ ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದು ದಿನ ನಾನು ಪರ್ವತವನ್ನು ಅಳೆಯುತ್ತೇನೆ ಅಥವಾ ಬ್ಯಾಲೆ ಕಾಪ್ರ್ಸ್ ಸೇರುತ್ತೇನೆ. ಒಂದು ದಿನ ನಾನು ಬಿಗಿಹಗ್ಗದ ಮೇಲೆ ನಡೆಯುತ್ತೇನೆ ಅಥವಾ ಸಾಗರ ತಳದಲ್ಲಿ ಈಜುತ್ತೇನೆ. ಒಂದು ದಿನ ಈ ಪಾದಗಳು ಕೆಲಸಗಳನ್ನು ಮಾಡುತ್ತವೆ. ಇದು ಸ್ವರ್ಗಕ್ಕೆ ಮಾತ್ರ ತಿಳಿದಿದೆ. ಆದರೆ ಇಂದು ಅವರು ಸಂತೋಷವಾಗಿದ್ದಾರೆ. ಸಂತೋಷ, ಅವರ ಎಲ್ಲಾ ಕಾಲ್ಬೆರಳುಗಳನ್ನು ಅಲುಗಿಸುತ್ತವೆ. ತಿಳಿದಿಲ್ಲ… ಆತ್ಮೀಯ ಜೆ. ನಿಮ್ಮೊಂದಿಗೆ ಎರಡು ತಿಂಗಳುಗಳು ಸಂಪೂರ್ಣ ಹುಚ್ಚುತನವಾಗಿದೆ, ಈ ರೀತಿಯ ಪ್ರೀತಿಯನ್ನು ಎಂದಿಗೂ ತಿಳಿದಿರಲಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    https://www.instagram.com/p/B3HExcyJ44W/

    ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯ ಕಾಲುಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹರಿಹರನ್ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ”ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    ಮಗುವಿಗೆ ಜನ್ಮ ನೀಡಿದ ದಿನವೇ ಶ್ರುತಿ ಹರಿಹರನ್ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿತ್ತು. ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ನಟಿ ಶ್ರುತಿ ಹರಿಹರನ್ ಅಭಿನಯದ `ನಾತಿಚರಾಮಿ’ ಸಿನಿಮಾ ಬರೋಬ್ಬರಿ 5 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಎಡಿಟಿಂಗ್ ಹಾಗೂ ಸಿನಿಮಾ ನಟಿ ಶೃತಿ ಹರಿಹರನ್ ಅವರಿಗೆ ವಿಶೇಷ ಅಭಿನಯದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು.

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    ಶ್ರುತಿ ದೂರಿನಲ್ಲಿ ಮದುವೆಯಾಗಿದೆ ಎಂದು ನಮೂದಿಸುವ ಮೊದಲು ರಾಮ್ ಕುಮಾರ್ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಹೇಳಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ `ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿದ್ದರು.

  • ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಶ್ರುತಿ ಪೋಸ್ಟ್‌‌ಗೆ ಅಭಿಮಾನಿಗಳ ಕಮೆಂಟ್ – ರೊಚ್ಚಿಗೆದ್ದ ಪ್ರಥಮ್

    ಬೆಂಗಳೂರು: ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅಭಿಮಾನಿಗಳು ಶ್ರುತಿ ಅವರ ಪೋಸ್ಟಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ವಿಜೇತ ಪ್ರಥಮ್ ರೊಚ್ಚಿಗೆದ್ದಿದ್ದಾರೆ.

    ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ನಲ್ಲಿ ಮಂಗಳವಾರ ಪೋಸ್ಟ್ ಮಾಡಿದ್ದರು. “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು.

    ಈ ಪೋಸ್ಟ್‌‌ಗೆ ಹಲವರು ಶ್ರುತಿ ಅವರನ್ನು ನಿಂದಿಸಿ ಮಗುವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲದೆ ನಟ ಅರ್ಜುನ್ ಸರ್ಜಾ ಅವರನ್ನು ಟ್ಯಾಗ್ ಮಾಡುವ ಮೂಲಕ ಕಮೆಂಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಪ್ರಥಮ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಪ್ರಥಮ್ ಹೇಳಿದ್ದೇನು?
    ಮುಖ್ಯವಾದ ವಿಷಯ. ನಾನು ಸಾಮಾನ್ಯವಾಗಿ ಯಾರ ಪ್ರೊಫೈಲ್‍ನಲ್ಲೂ ಕಮೆಂಟ್ ಮಾಡಲ್ಲ. ನಿಮಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ದರೂ ಇಟ್ಟುಕೊಳ್ಳಿ. ಅದು ನಿಮ್ಮ ಇಷ್ಟ. ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವೇ? ಗುರು ಆ ಮಗುವಿನ ಚರಿತ್ರೆ ನೀವೆಲ್ಲ ಯಾರಪ್ಪ ಸರ್ಟಿಫಿಕೇಟ್ ಕೊಡೋಕೆ? ಮುಖ್ಯವಾದ ವಿಷಯ ಏನೆಂದರೆ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿ.

    ಪ್ರಪಂಚನೇ ನೋಡದೇ ಇರೋ ಮಗು ಬಗ್ಗೆ ಯಾಕ್ರೋ ಪಾಪದ ಮಾತಾಡ್ತೀರಾ? ನೆನಪಿರಲಿ. ನಿಮ್ಮಿಷ್ಟ ನಿಮ್ಮ ಲೈಫ್. ಆದರೆ ಇನ್ನೂ ಹುಟ್ಟದೇ ಇರೋ ಮಗುವಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬೇಡ. ಅವರ ಲೈಫ್ ಅವರ ಇಷ್ಟ. ಯಾರನ್ನೂ ಮುಜಗರ ಮಾಡಬೇಡಿ. ಇದರ ಬಗ್ಗೆ ಯಾರು ಮಾತಾಡಲಿಲ್ಲ. ಹಾಗಾಗಿ ನಾನು ಮಾತನಾಡಿದೆ ಎಂದು ಕಮೆಂಟ್ ಮಾಡುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಥಮ್ ಕಮೆಂಟ್ ನೋಡಿದ ಶ್ರುತಿ ಹರಿಹರನ್ ಪ್ರತಿಕ್ರಿಯೆ ನೀಡಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಿಮ್ಮ ಕಮೆಂಟ್ ಅನ್ನು ನಾನು ಪ್ರಶಂಶಿಸುತ್ತೇನೆ. ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ.

  • ನಟಿ ಶ್ರುತಿ ಹರಿಹರನ್ ಗರ್ಭಿಣಿ

    ನಟಿ ಶ್ರುತಿ ಹರಿಹರನ್ ಗರ್ಭಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಗರ್ಭಿಣಿಯಾಗಿದ್ದು, ಈ ವಿಷಯವನ್ನು ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ.

    ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    2017ರ ನವೆಂಬರ್ ತಿಂಗಳಲ್ಲಿ ವೆಬ್‍ಸೈಟ್ ಒಂದು ಮೂರು ತಿಂಗಳ ಹಿಂದೆ ಶ್ರುತಿ ಹರಿಹರನ್ ರಹಸ್ಯವಾಗಿ ಮದುವೆಯಾಗಿದ್ದಾರೆ. ಕನ್ನಡ ಸಿನಿಮಾ ಹ್ಯಾಪಿ ನ್ಯೂ ಇಯರ್ ಸಿನಿಮಾದ ಬಳಿಕ ಶ್ರುತಿ ರಾಮ್ ಅವರ ಮದುವೆ ನಡೆದಿದೆ ಎಂದು ವರದಿ ಮಾಡಿತ್ತು.

    ರಾಮ್ ಅವರು ಕೇರಳದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ಕೇರಳದ ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ರಾಮ್ ಹೆಸರು ಮಾಡಿದ್ದಾರೆ.

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು.

    ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದರು.

    ಶ್ರುತಿ ದೂರಿನಲ್ಲಿ ಮದುವೆಯಾಗಿದೆ ಎಂದು ನಮೂದಿಸುವ ಮೊದಲು ರಾಮ್ ಕುಮಾರ್ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಹೇಳಿಕೊಂಡಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ `ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಒಟ್ಟಾಗಿ ಅಭಿನಯಿಸಿದ್ದರು.

  • 7 ತಿಂಗಳ ಬಳಿಕ ಶ್ರುತಿ ಹರಿಹರನ್ ಟ್ವಿಟ್ಟರ್‌ಗೆ ಎಂಟ್ರಿ

    7 ತಿಂಗಳ ಬಳಿಕ ಶ್ರುತಿ ಹರಿಹರನ್ ಟ್ವಿಟ್ಟರ್‌ಗೆ ಎಂಟ್ರಿ

    ಬೆಂಗಳೂರು: ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ಮೀಟೂ ವಿವಾದದ ಬಳಿಕ ಟ್ವಿಟ್ಟರ್ ನಿಂದ ದೂರ ಉಳಿದಿದ್ದರು. 7 ತಿಂಗಳ ಬಳಿಕ ಮತ್ತೆ ಟ್ವಿಟ್ಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆಯಾದ ಹೆಜ್ಜೆ ಮೂಡಿಸಿದ್ದ ಶ್ರುತಿ ಹರಿಹರನ್ ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ದಕ್ಷಿಣ ಭಾರತದಲ್ಲಿ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯಾರಾಗಿದ್ದ ಶ್ರುತಿ, ಕೊನೆಯದಾಗಿ ನವೆಂಬರ್ ತಿಂಗಳಿನಲ್ಲಿ ಮೀಟೂ ಬಗ್ಗೆಯೇ ಒಂದು ಟ್ವೀಟ್ ಮಾಡಿ ಶ್ರುತಿ ಸುಮ್ಮನಾಗಿದ್ದರು.

    ಇತ್ತೀಚೆಗೆ ತೆರೆಕಂಡ ತಮ್ಮ `ನಾತಿಚರಾಮಿ’ ಸಿನಿಮಾ ಬಗ್ಗೆ ಹಾಗೂ ಕೆಲವು ಸಣ್ಣ ಪುಟ್ಟ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟು ಬಿಟ್ಟರೆ ಇನ್ನು ಯಾವುದರ ಬಗ್ಗೆಯೂ ಅವರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

    ಆದರೆ, ಇದೀಗ 7 ತಿಂಗಳುಗಳ ಬಳಿಕ ಮತ್ತೆ ಟ್ವಿಟ್ಟರ್ ನಲ್ಲಿ ಶ್ರುತಿ ಹರಿಹರನ್ ಪ್ರತ್ಯಕ್ಷರಾಗಿದ್ದಾರೆ. ಇಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದು, ಈ ಬಗ್ಗೆ ಶ್ರುತಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಒಬ್ಬ ಲೆಜೆಂಡ್‍ರನ್ನು ಕಳೆದುಕೊಂಡ ನೋವನ್ನು ಹಂಚಿಕೊಳ್ಳಲು ಬಹಳ ಕಾಲದ ಬಳಿಕ ಸಾಮಾಜಿಕ ಜಾಲತಾಣಕ್ಕೆ ಬರುತ್ತಿದ್ದೇನೆ. ಇಂತಹ ಅದ್ಭುತ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಅವಕಾಶ ಒಮ್ಮೆ ನನಗೆ ಸಿಕ್ಕಿತ್ತು. ಅವರ ಸರಳತೆ ಹಾಗೂ ಜ್ಞಾನ ವಿಸ್ಮಯವಾದದ್ದು, ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ ಎಂದು ಟ್ವೀಟ್ ಮಾಡಿ ನೆನೆದಿದ್ದಾರೆ.

    ಗಿರೀಶ್ ಕಾರ್ನಾಡ್ ಅವರ ಜೊತೆಗೆ ಕನ್ನಡದ ಇಂದಿನ ಯುವ ನಟಿಯರಿಗೆ ನಟಿಸುವ ಅವಕಾಶ ಸಿಕ್ಕಿದ್ದು ಕಡಿಮೆ. ಆದರೆ ಇಂತಹ ಅದ್ಭುತ ನಟನ ಜೊತೆಗೆ ಶ್ರುತಿ ಹರಿಹರನ್ ಅವರಿಗೆ ಒಮ್ಮೆ ನಟಿಸುವ ಭಾಗ್ಯ ಸಿಕ್ಕಿತ್ತು. ಜಾಕಬ್ ವರ್ಗಿಸ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಸವಾರಿ 2′ ಸಿನಿಮಾದಲ್ಲಿ ಕಾರ್ನಾಡರ ಜೊತೆಗೆ ಶ್ರುತಿ ನಟಿಸಿದ್ದರು.

  • ನಾತಿಚರಾಮಿ: ಮೈ ಮನಸುಗಳ ಸೂಕ್ಷ್ಮ ಸಂಘರ್ಷ!

    ನಾತಿಚರಾಮಿ: ಮೈ ಮನಸುಗಳ ಸೂಕ್ಷ್ಮ ಸಂಘರ್ಷ!

    ಬೆಂಗಳೂರು: ಒಬ್ಬಳನ್ನು ಬಾಧಿಸುವ ಗಂಡನಿಲ್ಲದ ನೀರವ. ಅವನ ನೆನಪಲ್ಲಿಯೇ ಬದುಕಿ ಬಿಡುವ ಗಟ್ಟಿ ನಿರ್ಧಾರಕ್ಕೆ ನೇತುಬೀಳೋ ದೈಹಿಕ ವಾಂಛೆ. ಇನ್ನೊಬ್ಬಳಿಗೆ ಗಂಡ ಇದ್ದರೂ ಆತನ ಪಾಲಿಗವಳು ಸುಖದ ಸರಕು ಮಾತ್ರ. ಆಕೆಯ ಪಾಲಿಗೆ ದೈಹಿಕ ಬಯಕೆ ನೀಗಿಕೊಂಡೂ ಆತ್ಮಸಾಂಗತ್ಯವಿಲ್ಲದ ನಿತ್ಯ ಸೂತಕ. ಮತ್ತೊಬ್ಬಾಕೆ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಸ್ಥಿತಪ್ರಜ್ಞೆಯುಳ್ಳ ಗಟ್ಟಿಗಿತ್ತಿ. ಈ ಮೂರು ಪಾತ್ರಗಳ ಮೂಲಕವೇ ಕಟ್ಟುಪಾಡುಗಳೊಳಗೆ ಅದೆಷ್ಟೋ ಮಹಿಳೆಯರು ಕಟ್ಟಿಟ್ಟುಕೊಂಡ ಭಾವಗಳಿಗೆ ಬಿಂದಾಸ್ ಆಗಿಯೇ ಮಾತು ಕೊಟ್ಟಿರೋ ಚಿತ್ರ ನಾತಿಚರಾಮಿ. ಈ ಮೂಲಕ ನಿರ್ದೇಶಕ ಮಂಸೋರೆಯವರ ಎರಡನೇ ಮ್ಯಾಜಿಕ್ಕು ಮನಸೂರೆಗೊಂಡಿದೆ.

    ಲೈಂಗಿಕ ತುಮುಲಗಳಿಗೂ ಮಡಿಬಟ್ಟೆ ಹೊದ್ದು ಬದುಕೋ ವಾತಾವರಣ ಈ ನೆಲದ್ದು. ಅದರಲ್ಲಿಯೂ ಹೆಣ್ಣಿನ ಪಾಲಿಗೆ ಇಂಥಾ ದೈಹಿಕ ವಾಂಛೆಗಳನ್ನು ಅಭಿವ್ಯಕ್ತಗೊಳಿಸೋದೇ ನಿಷಿದ್ಧ. ಆದರೆ ಮಂಸೋರೆ ನಾತಿಚರಾಮಿ ಮೂಲಕ ಮಡಿವಂತಿಕೆಯೊಳಗೇ ಅವಿತಿರೋ ಕುತೂಹಲ, ಹತ್ತಿಕ್ಕಲಾರದ ತಲ್ಲಣಗಳನ್ನು ಬಿಡುಬೀಸಾಗಿ ಹೇಳಿದ್ದಾರೆ. ಇದಕ್ಕೆ ಸಂಧ್ಯಾರಾಣಿಯವರ ಕಥೆ ಮತ್ತು ಸಂಭಾಷಣೆ ಸಖತ್ತಾಗಿಯೇ ಸಾಥ್ ನೀಡಿದೆ.

    ಮಂಸೋರೆ ಮೂರು ಸ್ಥರಗಳ ಮೂರು ಮಹಿಳಾ ಪಾತ್ರಗಳ ಮೂಲಕ ಬೇರೆಯದ್ದೇ ಒಂದು ಮನೋಲೋಕವನ್ನು ಕಟ್ಟಿ ಕೊಟ್ಟಿದ್ದಾರೆ.

    ಶ್ರುತಿ ಹರಿಹರನ್ ಗಂಡನನ್ನು ಕಳೆದುಕೊಂಡು ಆತನ ನೆನಪಲ್ಲಿಯೇ ಬೇಯುತ್ತಾ, ನೆನಪಿನಂತೆಯೇ ಕಾಡುವ ದೈಹಿಕ ತುಮುಲವನ್ನು ಹತ್ತಿಕ್ಕಲಾರದೆ ಒದ್ದಾಡೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಮೂಲಕವೇ ಅವರೊಳಗಿನ ಪರಿಪೂರ್ಣ ನಟಿಯ ದರ್ಶನವೂ ಆಗುತ್ತದೆ. ಇನ್ನು ಶರಣ್ಯ ಗಂಡ ಇದ್ದರೂ ಮಾನಸಿಕ ನೆಮ್ಮದಿಯಿಲ್ಲದ ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ವೇತಾ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಹೆಂಗಸಾಗಿ ನಟಿಸಿದ್ದಾರೆ. ಈ ಮೂರೂ ಪಾತ್ರಗಳು ಬೆಚ್ಚಿ ಬೀಳಿಸುತ್ತಾ ಬೆರಗಾಗಿಸುತ್ತಾ ಬದುಕಿನ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತವೆ.

    ಇಂಥಾ ಸೂಕ್ಷ್ಮ ವಿಚಾರ ಹೇಳುವಾಗ ಕೊಂಚ ಸಿನಿಮಾ ಕುಸುರಿಯನ್ನು ಮರೆತರೂ ದೃಶ್ಯ ಪೇಲವವಾಗುತ್ತದೆ. ಆದರೆ ಮಂಸೋರೆ ಅಂಥಾ ಯಾವ ಅವಘಡವೂ ಆಗದಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಸ್ವತಃ ಕಲಾ ನಿರ್ದೇಶಕರೂ ಆಗಿರೋ ಮಂಸೋರೆ ಅದನ್ನೂ ಪಾತ್ರವಾಗಿಸಿದ್ದಾರೆ. ಬಟ್ಟೆಗಳೂ ಇಲ್ಲಿ ಏನನ್ನೋ ಧ್ವನಿಸುತ್ತವೆ. ಮೌನವೂ ಕೂಡಾ ಮಾತಿಗಿಂತ ತೀವ್ರವಾಗಿ ತಟ್ಟುತ್ತದೆ. ಇದಕ್ಕೆ ಬಿಂದುಮಾಲಿನಿಯವರ ಸಂಗೀತ ಸಾಥ್ ನೀಡುತ್ತದೆ.

    ಒಟ್ಟಾರೆಯಾಗಿ ಹೊಸಾ ಬಗೆಯಲ್ಲಿ, ಎಲ್ಲ ಸಿದ್ಧ ಸೂತ್ರಗಳನ್ನು ಮೀರಿದ ಚಿತ್ರವೊಂದನ್ನು ಕಟ್ಟಿ ಕೊಡುವಲ್ಲಿ ಮಂಸೋರೆ ಯಶ ಕಂಡಿದ್ದಾರೆ. ಬಾಲಾಜಿ ಮನೋಹರ್, ಪೂರ್ಣಚಂದ್ರ ಮೈಸೂರು, ಗೋಪಾಲ ದೇಶಪಾಂಡೆ, ಕಲಾಗಂಗೋತ್ರಿ ಮಂಜು ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಮಾನಸಾ ಮುಸ್ತಫಾ ಕಾಸ್ಟ್ಯೂಮಿನಲ್ಲಿಯೂ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಸಿದ್ಧ ಸೂತ್ರಗಳಾಚೆಗಿನ ಈ ಚಿತ್ರ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುವಲ್ಲಿ ಶಕ್ತವಾಗಿದೆ.

    ರೇಟಿಂಗ್: 4/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾದಲ್ಲಿ ಅವಕಾಶ ಕಡಿಮೆ ಆಗಿದೆ ಅನ್ನೋ ಬೇಸರವಿಲ್ಲ- ಶೃತಿ ಹರಿಹರನ್

    ಸಿನಿಮಾದಲ್ಲಿ ಅವಕಾಶ ಕಡಿಮೆ ಆಗಿದೆ ಅನ್ನೋ ಬೇಸರವಿಲ್ಲ- ಶೃತಿ ಹರಿಹರನ್

    ಬೆಂಗಳೂರು: ಮೀಟೂ ಆರೋಪದ ಬಳಿಕ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿವೆ. ಹಾಗಾಂತ ಮೀಟೂ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೇಸರವಿಲ್ಲ. ನಾನು ಮಾತನಾಡಿದ್ದು ತಪ್ಪು ಅಂತಾನೂ ಅನಿಸಿಲ್ಲ. ಎಲ್ಲವನ್ನೂ ಕಾಲ ನಿರ್ಣಯಿಸುತ್ತೆ ಅಂತ ನಟಿ ಶೃತಿ ಹರಿಹರನ್ ತಿಳಿಸಿದ್ದಾರೆ.

    ನಗರದಲ್ಲಿ ಇಂದು ತಮ್ಮ ಹೊಸ ಚಿತ್ರ ನಾತಿಚರಾಮಿ ಕುರಿತು ಸುದ್ದಿಗೋಷ್ಠಿ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೆಚ್ಚು ಕೆಲಸ ಮಾಡಬೇಕೋ ಬೇಡವೋ ಅನ್ನೋದನ್ನು ಕಾಲ ನಿಗದಿ ಮಾಡುತ್ತೆ. ಚಿತ್ರದಲ್ಲಿ ನಟಿಸುವ ಅವಕಾಶಗಳು ಕಮ್ಮಿಯಾಗಿರಬಹು. ಆದ್ರೆ ಅದನ್ನು ಕಾಲ ಹೇಳುತ್ತೆ. ನಾವು ಎಲ್ಲವನ್ನೂ ಮಾಡೋದು ಜನರಿಗೋಸ್ಕರ ಅಲ್ವ. ಹೀಗಾಗಿ ಜನ ಅದನ್ನು ನಿರ್ಧರಿಸಬೇಕು ಅಂದ್ರು.

    ನಟ ಅರ್ಜುನಾ ಸರ್ಜಾ ಮೇಲೆ ಮಾಡಿರುವ ಮೀಟೂ ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಸದ್ಯದಲ್ಲಿ ಈ ಕುರಿತು ಪ್ರೆಸ್ ಮೀಟ್ ಮಾಡೋದಾಗಿ ತಿಳಿಸಿದ್ರು.

    ನಾತಿಚರಾಮಿ ಚಿತ್ರದ ಬಗ್ಗೆ:
    ಈ ಸಿನಿಮಾವನ್ನು ತುಂಬಾನೇ ಇಷ್ಟಪಟ್ಟು ಮಾಡಿದ್ದೇವೆ. ಈ ಶುಕ್ರವಾರ ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಅನ್ನೋ ಭಯ ಸಾಮಾನ್ಯವಾಗಿ ಇರುತ್ತದೆ. ಆದ್ರೆ ಈ ಬಾರಿ ಸ್ವಲ್ಪ ಜಾಸ್ತಿನೇ ಭಯ ಇದೆ. ಯಾಕಂದ್ರೆ ಇದೊಂದು ಎಕ್ಸ್ಟ್ರಾ ಸೆನ್ಸಿಸಿಟಿವ್ ವಿಷಯ ಚಿತ್ರವಾಗಿದೆ. ಜನರಲ್ ಆಗಿ ಒಂದು ಸಿನಿಮಾದಲ್ಲಿ ನಾವು ಪ್ರೀತಿ, ತಂದೆ-ತಾಯಿ ಅಥವಾ ತಂದೆ-ಮಗಳ ಮಧ್ಯೆ ಇರುವ ಸಮಸ್ಯೆಗಳನ್ನು ಹೇಳುತ್ತೇವೆ. ಆದ್ರೆ ಇಲ್ಲಿ ಈ ವಿಷಯಗಳಲ್ಲದೇ ಮದುವೆ ಅಂದ್ರೆ ಏನು ಅನ್ನೋ ಪ್ರಶ್ನೆ ಕೇಳುವ ಸಿನಿಮಾವಾಗಿದೆ ಅಂದ್ರು.

    ಮೈಂಡ್ ಲೆಸ್ ಎಂಟರ್ ಟೈನ್ ಮೆಂಟ್ ಸಿನಿಮಾ ಅಲ್ಲ. ಆದ್ರೆ ಚಿತ್ರದಲ್ಲಿ ಮನರಂಜನೆ ಇದೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಎಂಟರ್ ಟೈನ್ ಮೆಂಟ್, ನಗು, ಅಳು ಹಾಗೂ ಮ್ಯೂಸಿಕ್ ಎಲ್ಲವೂ ಸೇರಿಕೊಂಡಿದೆ. ಈ ಚಿತ್ರ ಗೌರಿ, ಸುರೇಶ್ ಹಾಗೂ ಸುಮಾ ಎಂಬ ಮೂವರ ಜರ್ನಿ ಮಧ್ಯೆ ಒಂದು ಸೊಗಸಾದ ಕಥೆಯನ್ನು ಸಂಧ್ಯಾರಾಣಿ ಮೇಡಂ ಬರೆದಿದ್ದಾರೆ. ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ನಾನು ಗೌರಿ-ಮಹೇಶ್ ಅನ್ನೋ ಪಾತ್ರ ನಿರ್ವಹಿಸಿದ್ದೇನೆ ಅಂದ್ರು. ಇದನ್ನೂ ಓದಿ: ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಮದುವೆಯಾದ ಆಧುನಿಕ ಮಹಿಳೆಯ ಗಂಡ ಏಕಾಏಕಿ ತೀರಿಕೊಂಡ ನಂತರ ಮದುವೆ ಅನ್ನೋ ಒಂದು ಪದಕ್ಕೆ ಏನು ಅರ್ಥ ಅನ್ನೋ ಹುಡುಕಾಟದಲ್ಲಿ ಇರುವಂತಹ ಒಂದು ಪಾತ್ರವಾಗಿದೆ. ಸಾಮಾನ್ಯವಾಗಿ 1 ತಿಂಗಳು ಇರುವ ಶೂಟಿಂಗ್ ಅನ್ನು ನಾವು 15 ದಿನದಲ್ಲಿ ಮುಗಿಸಿದ್ದೇವೆ. ಹಗಲು-ರಾತ್ರಿ ಕೆಲಸ ಮಾಡಿ ಒಂದು ಸಿನಿಮಾವನ್ನು ಮಾಡಿದ್ದೇವೆ ಅಂತ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ಅವರು, ಸಿನಿಮಾ ನೋಡಿ ಪ್ರೋತ್ಸಾಹಿಸಿ ಅಂತ ಮನವಿ ಮಾಡಿಕೊಂಡರು.

    ಚಿಕ್ಕವಯಸ್ಸಲ್ಲೇ ತಂದೆಯನ್ನ ಕಳೆದುಕೊಂಡೆ:
    ನನ್ನ ತಂದೆಯನ್ನು ನಾನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡಿದ್ದೇನೆ. ನನ್ನ ತಾಯಿ ಈ ಸಮಾಜವನ್ನು ಎದುರಿಸಿಕೊಂಡು 2 ಮಕ್ಕಳನ್ನು ಬೆಳೆಸಿದ್ದಾರೆ. ಹೀಗಾಗಿ ಈ ಒಂದು ಕಥೆ ಬಂದ ತಕ್ಷಣವೇ ಯಾಕೋ ಗೌರಿ(ನನ್ನ ಪಾತ್ರ)ನಲ್ಲಿ ನನ್ನ ತಾಯಿಯನ್ನು ಕಂಡೆ. ಒಂದು ಹೆಣ್ಣಾಗಿ ನಾವು ಆಚೆ ಮಾತನಾಡದೇ ಇರೋವಂತಹ ಹಲವಾರು ವಿಷಯಗಳು ನಮ್ಮ ಮನಸ್ಸಲ್ಲೇ ಇವೆ. ಚಿತ್ರದಲ್ಲಿ ಗೌರಿಯೂ ಹಾಗೆ. ಅವಳ ಮನಸ್ಸಲ್ಲಿರುವಂತಹ ಅಷ್ಟೊಂದು ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಸಿನಿಮಾ ಸಾಲಲ್ಲ.  2, 3 ನಾತಿಚರಾಮಿ ಸಿನಿಮಾ ಮಾಡಿದ್ರೂ ಗೌರಿಯ ಎಲ್ಲಾ ಕಥೆಗಳನ್ನು ಹೇಳಿಕೊಳ್ಳಲು ಸಾಧ್ಯನಾ ಎಂದು ನನಗೆ ಗೊತ್ತಿಲ್ಲ. ಹಾಗಾಗಿ ಅವಳ ಗುಂಗಿನಲ್ಲೇ ಬದುಕುತ್ತಾ ಇದ್ದೀನಿ ಅಂದ್ರು.

    ನನ್ನ ಮನಸ್ಸಿನ ಒಳಗಡೆ ಇರುವ ಕೆಲವೊಂದು ವಿಚಾರಗಳನ್ನು ಹೊರಗೆ ತರಲು ನಾತಿಚರಾಮಿ ಒಂದು ಔಟ್ ಲೆಟ್ ಆಗಿದೆ. ಇನ್ನು ಮಂದೆ ನಾನು ಸಿನಿಮಾ ಮಾಡಿದ್ರೆ ಅಥವಾ ನಿರ್ದೇಶಿಸಿದ್ರೆ ಖಂಡಿತಾ ತನ್ನ ಮನಸ್ಸಿನ ಒಳಗಡೆ ಇರುವಂತಹ ಗೊಂದಲಗಳನ್ನು ಹಂಚಿಕೊಳ್ಳುವುದೇ ಆಗಿರುತ್ತದೆ. ನಿರ್ದೇಶನ ಮಾಡುವ ಆಸೆ ಇದೆ. ಸಂದರ್ಭ ಬಂದ್ರೆ ಖಂಡಿತಾ ಮಾಡುವುದಾಗಿ ಹೇಳಿದ್ರು.

    ಎಷ್ಟು ಸಿನಿಮಾ ಬಾಕಿದೆ? ಎಷ್ಟು ಸಿನಿಮಾದಲ್ಲಿ ಬ್ಯುಸಿ ಇದ್ದೀರಿ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸಿನಿಮಾ ಯಾವುದಕ್ಕೂ ನಾನು ಸಹಿ ಮಾಡಿಲ್ಲ. `ಆದ್ಯ’ ಅನ್ನೋ ಒಂದು ಸಿನಿಮಾ ಇದೆ. ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿರಂಜೀವಿ ಸರ್ಜಾ ಹಾಗೂ ಸಂಗೀತಾ ಭಟ್ ಕೂಡ ಅಭಿನಯಿಸಿದ್ದಾರೆ. ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ. ಮಂಜು ಸರ್ ಅವರು ನಿರ್ದೇಶಿಸಿರುವ ಒಂದು ಹಾರರ್ ಸಿನಿಮಾ ಕೂಡ ಇದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಬೆಂಗಳೂರು: ಮೊದಲ ಚಿತ್ರ ‘ಹರಿವು’ ಮೂಲಕವೇ ಪ್ರತಿಭಾವಂತ ನಿರ್ದೇಶಕರಾಗಿ ಹೊರಹೊಮ್ಮಿದ್ದವರು ಮಂಸೋರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಕಲಾತ್ಮಕ ಚಿತ್ರವಾದರೂ ಎಂಥಾ ಕಲ್ಲೆದೆಯನ್ನೂ ಕರಗಿಸಬಲ್ಲ ಸೂಕ್ಷ್ಮ ಗುಣದಿಂದ ಈ ಚಿತ್ರ ಜನಸಾಮಾನ್ಯರನ್ನೂ ತಲುಪಿಕೊಂಡಿತ್ತು. ಇಂಥಾ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿ ಇದೇ ತಿಂಗಳ 28ರಂದು ತೆರಕಾಣಲು ಅಣಿಗೊಂಡಿದೆ.

    ಮೊದಲ ಚಿತ್ರ ಹರಿವು ಕಲಾತ್ಮಕ ಜಾಡಿನದ್ದಾಗಿತ್ತು. ಹಾಗಿದ್ದರೆ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿಯೂ ಅದೇ ಬಗೆಯದ್ದಾ ಎಂಬ ಪ್ರಶ್ನೆ ಸಹಜವೇ. ಆದರೆ ಈ ಚಿತ್ರದ ಮೂಲಕ ಮಂಸೋರೆ ಹೊಸಾ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಅದೇನೆಂಬುದು ಈ ತಿಂಗಳ ಇಪ್ಪತ್ತೆಂಟರಂದೇ ಜಾಹೀರಾಗಬೇಕಾದರೂ ಇದೊಂದು ಕಲಾತ್ಮಕ ಕಮರ್ಶಿಯಲ್ ಚಿತ್ರ ಎನ್ನಲಡ್ಡಿಯಿಲ್ಲ.

    ಕಮರ್ಶಿಯಲ್ ಅಂದಾಕ್ಷಣ ಸೊಂಟ ಬಳುಕಿಸೋ ಐಟಂ ಸಾಂಗು, ಮಸಾಲೆ ಐಟಮ್ಮುಗಳು ಅಂದುಕೊಂಡರೆ ನಾತಿಚರಾಮಿ ಆ ಥರದ್ದಲ್ಲ. ಆದರೆ ಭಿನ್ನ ಕಥಾ ಹಂದರ ಹೊಂದಿರೋ ಈ ಚಿತ್ರ ಹೊಸಾ ಅಲೆಯದ್ದು ಎನ್ನಲಡ್ಡಿಯಿಲ್ಲ. ಕಥೆಯ ಸೃಷ್ಟಿ ಮತ್ತು ಅದನ್ನು ಮನಸಿಗೆ ನಾಟುವಂತೆ ನಿರೂಪಣೆ ಮಾಡೋ ಚಾಕಚಕ್ಯತೆ ಮಂಸೋರೆ ಅವರಿಗಿದೆ ಎಂಬುದಕ್ಕೆ ಹರಿವು ಚಿತ್ರವೇ ಉದಾಹರಣೆ. ನಾತಿಚರಾಮಿಯಲ್ಲಿ ಬೇರೆಯದ್ದೇ ಥರದ ಕಥೆಯೊಂದಕ್ಕೆ ದೃಶ್ಯದ ಚೌಕಟ್ಟು ತೊಡಿಸಲಾಗಿದೆಯಂತೆ.

    ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವವರು ಎನ್. ಸಂಧ್ಯಾರಾಣಿ. ಈಗಾಗಲೇ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರ್ತಿಯಾಗಿ, ಅಂಕಣಗಾರ್ತಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರೋ ಸಂಧ್ಯಾರಾಣಿ ಈ ಚಿತ್ರಕ್ಕಾಗಿ ವಿಭಿನ್ನವಾದ ಕಥೆ ಬರೆದಿದ್ದಾರಂತೆ. ಮೊದಲ ಸಲ ಅವರು ಸಂಭಾಷಣೆಯನ್ನೂ ಬರೆದಿರೋದು ವಿಶೇಷ.

    ಹೇಳಿ ಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಗಾಳಿ ಬೀಸುತ್ತಿದೆ. ಈ ಅಲೆಯಲ್ಲಿ ಬಂದು ಕಸುವು ಹೊಂದಿದ ಕಥೆಯನ್ನೆಲ್ಲ ಪ್ರೇಕ್ಷಕರು ಗೆಲ್ಲಿಸಿದ್ದಾರೆ. ನಾತಿಚರಾಮಿ ಕೂಡಾ ಪ್ರೇಕ್ಷಕರ ಮನಮುಟ್ಟುವ, ಕಾಡುವ ಚಿತ್ರವಾಗಿ ಮೂಡಿ ಬಂದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಮಂಸೋರೆಯವರ ಎರಡನೇ ಮ್ಯಾಜಿಕ್ ಎಂಥಾದ್ದೆಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರುತಿ ಹರಿಹರನ್ ಬದಲಿಗೆ ರಾಶಿ ಮಹದೇವ್?

    ಶ್ರುತಿ ಹರಿಹರನ್ ಬದಲಿಗೆ ರಾಶಿ ಮಹದೇವ್?

    ಬೆಂಗಳೂರು: ಮೀಟೂ ಗಲಾಟೆಯ ನಡುವಲ್ಲಿ ಶ್ರುತಿ ಹರಿಹರನ್ ಕೈಲಿದ್ದ ಕನ್ನಡದ ಅವಕಾಶಗಳೆಲ್ಲವೂ ಜಾರಿ ಹೋಗುತ್ತಿದೆ. ಇದರೊಂದಿಗೇ ಶ್ರುತಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ಬಿಡುತ್ತಾರಾ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಹೀಗಿರುವಾಗಲೇ ಶ್ರುತಿ ನಟಿಸಬೇಕಿದ್ದ ಚಿತ್ರವೊಂದಕ್ಕೆ ಬೇರೊಬ್ಬ ನಟಿಯ ಆಗಮನವಾದ ಸುದ್ದಿ ಹರಿದಾಡುತ್ತಿದೆ.

    ಬಿ.ಎಸ್. ಲಿಂಗದೇವರು ದಾರಿ ತಪ್ಪಿಸು ದೇವರೇ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋ ವಿಚಾರ ಈ ಹಿಂದೆಯೇ ಹೊರ ಬಿದ್ದಿತ್ತು. ಇದರ ಜೊತೆ ಜೊತೆಗೆ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ನಟಿಸಲಿದ್ದಾರೆಂಬುದನ್ನು ನಿರ್ದೇಶಕರೇ ಹೇಳಿಕೊಂಡಿದ್ದರು. ಆದರೆ ಮೀಟೂ ವಿವಾದದ ನಂತರ ಶ್ರುತಿಯನ್ನು ಈ ಚಿತ್ರದಿಂದ ಕೈ ಬಿಡಲಾಗಿದೆ ಅಂತಲೂ ರೂಮರ್ ಹಬ್ಬಿಕೊಂಡಿತ್ತು.

    ಇದೀಗ ಅದು ನಿಜವಾದಂತಿದೆ. ದಾರಿ ತಪ್ಪಿಸು ದೇವರೇ ಚಿತ್ರಕ್ಕೆ ನಾಯಕಿಯಾಗಿ ರಾಶಿ ಮಹದೇವ್ ಆಗಮಿಸಿದ್ದಾರೆ. ವಿಜಯ್ ರಾಘವೇಂದ್ರ ನಾಯಕರಾಗಿರೋ ಪರದೇಸಿ ಕೇರಾಫ್ ಲಂಡನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ರಾಸಿ ಮಹದೇವ್ ಪಾಲಿಗೆ ದಾರಿ ತಪ್ಪಿಸು ದೇವರೇ ಕನ್ನಡದಲ್ಲಿ ಎರಡನೇ ಚಿತ್ರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಗೆ ಹೇಳಿಯೇ ಇಲ್ಲ, ನಾನು ನಿಮ್ಮನ್ನ ತುಂಬಾ ಗೌರವಿಸ್ತೀನಿ: ವರಸೆ ಬದಲಿಸಿದ ಶೃತಿ ಹರಿಹರನ್

    ಹಾಗೆ ಹೇಳಿಯೇ ಇಲ್ಲ, ನಾನು ನಿಮ್ಮನ್ನ ತುಂಬಾ ಗೌರವಿಸ್ತೀನಿ: ವರಸೆ ಬದಲಿಸಿದ ಶೃತಿ ಹರಿಹರನ್

    ಬೆಂಗಳೂರು: ಇಂದು ನಟಿ ಶೃತಿ ಹರಿಹರನ್ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಕಚೇರಿಗೆ ಆಗಮಿಸಿದ ಶೃತಿ ಹರಿಹರನ್, ನಾನು ಸಕ್ಕರೆ ಇದ್ದಂತೆ.. ಮಾಧ್ಯಮಗಳು ಇರುವೆ ಅಂತಾ ಹೇಳಿದ್ದರು. ಮಹಿಳಾ ಆಯೋಗದಿಂದ ಹೊರ ಬಂದಾಗ ಈ ಕುರಿತು ಪ್ರಶ್ನಿಸಿದಾಗ, ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಮಾತು ಬದಲಿಸಿದರು.

    ನನ್ನ ಜೀವನದಲ್ಲಿ ಮಾಧ್ಯಮಗಳನ್ನು ತುಂಬಾ ಗೌರವಿಸುತ್ತೇನೆ. ನಾನು ಆ ರೀತಿ ಹೇಳಿಲ್ಲ ಅಂತಾ ಹೇಳಿದಾಗ, ನಮ್ಮ ಪ್ರತಿನಿಧಿ, ನೀವು ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ಇದೆ. ಬೇಕಾದರೆ ಒಂದು ಸಾರಿ ಕೇಳಿ ಎಂದು ಪ್ರಶ್ನೆ ಮಾಡಿದರು. ಒಂದು ಕ್ಷಣ ಗೊಂದಲಕ್ಕೊಳಗಾದ ಶೃತಿ ನಗುವೊಂದನ್ನು ಬೀರಿ ಕಾರ್ ಹತ್ತಿ ಹೊರಟು ಹೋದರು.

    ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಧ್ಯಮಗಳ ಮುಂದೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಮಹಿಳಾ ಅಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡ ಮಹಿಳಾ ಅಯೋಗ ಶೃತಿಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಸೂಚಿಸಿತ್ತು. ಅದ್ಯಾಕೋ ಶೃತಿ ಮಾತ್ರ ಕಳೆದ ಕೆಲ ದಿನಗಳಿಂದ ಫುಲ್ ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಕೀಲ ಅನಂತ್ ನಾಯ್ಕ್ ಅವರ ಜೊತೆ ಮಹಿಳಾ ಆಯೋಗದ ಮುಂದೆ ಹಾಜರಾದ ಶೃತಿ, ವಿಸ್ಮಯ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಶೃತಿಯನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡ ಹೋದ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ.

    https://www.youtube.com/watch?v=M2Dxy7i5YEU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews