Tag: Srujan Lokesh

  • ದರ್ಶನ್ ನಂತ್ರ ಕಿಲ್ಲರ್ ವೆಂಕಟೇಶ್‍ಗೆ ಸೃಜನ್‍ ಸಹಾಯ

    ದರ್ಶನ್ ನಂತ್ರ ಕಿಲ್ಲರ್ ವೆಂಕಟೇಶ್‍ಗೆ ಸೃಜನ್‍ ಸಹಾಯ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂತರ ನಟ ಸೃಜನ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ಸೃಜನ್ ಲೋಕೇಶ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗಾಗಿ 50 ಸಾವಿರ ರೂ. ನೀಡಿದ್ದಾರೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ, “ಧನ್ಯವಾದಗಳು ಸೃಜನ್ ಲೋಕೇಶ್, ಕಿಲ್ಲರ್ ವೆಂಕಟೇಶ್ ಕಲಾಬಂಧುವಿನ ಕಷ್ಟಕ್ಕೆ ಸ್ಪಂದಿಸಿದಕ್ಕೆ. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ” ಎಂದು ಟ್ವೀಟ್ ಮಾಡಿದ್ದಾರೆ.

    ಅನಾರೋಗ್ಯದ ಕಾರಣ ಕಿಲ್ಲರ್ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಅವರ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ಜಗ್ಗೇಶ್ ಸಹಾಯ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಜಗ್ಗೇಶ್ ಅವರು ದರ್ಶನ್ ಅವರಿಗೆ ತಿಳಿಸಿದ್ದರು ಜಗ್ಗೇಶ್ ಫೋನ್‍ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್, ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು.

    ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಅವನ ಚಿಕಿತ್ಸೆಗೆ 1 ಲಕ್ಷ ರೂ. ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ ಎಂದು ಜಗ್ಗೇಶ್ ಬರೆದುಕೊಂಡಿದ್ದರು. ಅಲ್ಲದೆ “ವಿಕ್ಟೋರಿಯಾ ಆಸ್ಪತ್ರೆಯ ಡಾ.ಗಿರೀಶ್ ಮತ್ತು ಅವರ ವಿಶೇಷ ತಂಡ ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಧನ್ಯವಾದಗಳು. ನನ್ನ ಕರೆಗೆ ಸ್ಪಂದಿಸಿದ ಕಲಾಬಂಧು ದರ್ಶನ ಅವರಿಗೆ, ಸಾ.ರಾ ಬಾಮಾ ಹರೀಶ್ ಮಾಧ್ಯಮ ಮಿತ್ರರಿಗೆ” ಎಲ್ಲರಿಗೂ ಅಭಿನಂದನೆ ತಿಳಿಸಿದ್ದರು.

    ಜೊತೆಗೆ “ಮಾಧ್ಯಮಮಿತ್ರರೆ, ಕಲಾಭಿಮಾನಿಗಳೇ, ಸಹೃದಯರೇ 35 ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ, ಯಕೃತ್ ಕಸಿಗೆ ತುಂಬಾ ದೊಡ್ಡ ಮೊತ್ತ ಆಗುತ್ತದೆ ಹಾಗಾಗಿ ವಿನಂತಿ” ಎಂದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

    250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರದಾಡುತ್ತಿದ್ದಾರೆ.

  • ಸಸ್ಪೆನ್ಸ್-ಥ್ರಿಲ್ಲರ್ ಕಥೆಯಲ್ಲಿ ಟಾಕಿಂಗ್ ಸ್ಟಾರ್? – ಮತ್ತೆ ಒಂದಾಯ್ತು ‘ಎಲ್ಲಿದ್ದೆ ಇಲ್ಲಿ ತನಕ’ ಜೋಡಿ?

    ಸಸ್ಪೆನ್ಸ್-ಥ್ರಿಲ್ಲರ್ ಕಥೆಯಲ್ಲಿ ಟಾಕಿಂಗ್ ಸ್ಟಾರ್? – ಮತ್ತೆ ಒಂದಾಯ್ತು ‘ಎಲ್ಲಿದ್ದೆ ಇಲ್ಲಿ ತನಕ’ ಜೋಡಿ?

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಫ್ಯಾನ್ಸ್ ಗಳಿಗೊಂದು ಖುಷಿ ವಿಷ್ಯ ಇದೆ. ಹೌದು ಸಖತ್ ಮಾತು, ಮೋಜು ಮಸ್ತಿ ಮಾಡ್ತಾ ಅಭಿಮಾನಿಗಳ ಹಾರ್ಟ್ ಫೇವರೀಟ್ ಟಾಕಿಂಗ್ ಆಗಿದ್ದ ಸೃಜಾ ‘ಎಲ್ಲಿದ್ದೆ ಇಲ್ಲಿ ತನಕ’ ಅಂತ ಸ್ಯಾಂಡಲ್‍ವುಡ್ ನಾಯಕನಾಗಿ ಹರಿಪ್ರಿಯ ಜೊತೆ ಡ್ಯುಯೇಟ್ ಮಾಡಿದ್ದರು. ಚಿತ್ರ ಇಷ್ಟ ಪಟ್ಟಿದ್ದ ಫ್ಯಾನ್ಸ್ ಮತ್ಯಾವ ಸಿನೆಮಾದಲ್ಲಿ ಸೃಜಾ ಬಿಗ್ ಸ್ಕ್ರೀನ್ ನಲ್ಲಿ ಕಾಣ್ತಾರೆ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ದರು. ಆದರೆ ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ತೇಜಸ್ವಿಯವರೇ ಸೃಜಾರ ಮತ್ತೊಂದು ಸಿನೆಮಾಗೂ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಗಿದಿದ್ದು, ನಾಯಕಿ ಮತ್ತು ಸಂಗೀತ ನಿರ್ದೇಶಕರ ಹುಡುಕಾಟದಲ್ಲಿದೆಯಂತೆ ಚಿತ್ರತಂಡ. ಕೊಂಚ ಡಿಫ್ರೆಂಟ್ ಅನ್ನಿಸೋ ಎಳೆಯ ಕಥಾಹಂದರವಿರೋ ಈ ಚಿತ್ರದಲ್ಲಿ ಸಸ್ಪೇನ್ಸ್ ಥ್ರಿಲ್ಲರ್ ಅಂಶಗಳಿದ್ದು, ಕಥೆಯೇ ಪ್ರಧಾನವಂತೆ. ಜೊತೆಗೆ ಇನ್ನೂ ಶೀರ್ಷಿಕೆ ಫೈನಲ್ ಆಗದ ಈ ಚಿತ್ರಕ್ಕೆ ವೇಣು ಸಿನಿಮಾಟೋಗ್ರಾಫರ್ ಇರಲಿದೆ. ಪ್ರಸ್ತುತ ಸಮಾಜದಲ್ಲಿ ಆತಂಕಕ್ಕೆ ಕಾರಣವಾಗ್ತಿರೋ, ಅಪಹರಣ, ಅತ್ಯಾಚಾರಗಳ ವಿಷಯದ ಎಳೆ ಹೊತ್ತಿರೋ ಚಿತ್ರದ ಶೂಟಿಂಗ್ ಕೆಲಸ ಫೆಬ್ರವರಿಯಿಂದ ಶುರುವಾಗಲಿದ್ದು, ಮತ್ತೆ ಒಂದಾದ ಸೃಜನ್-ತೇಜಸ್ವಿ ಜೋಡಿ ಮೇಲೆ ಕುತೂಹಲ ಸಾಮಾನ್ಯವಾಗೇ ಹೆಚ್ಚಾಗಿದೆ.

  • ಎಲ್ಲಿದ್ದೆ ಇಲ್ಲಿತನಕ: ಸೃಜನ್ ಲೋಕೇಶ್ ಮೋಡಿಗೆ ಮರುಳಾದ ಪ್ರೇಕ್ಷಕರು!

    ಎಲ್ಲಿದ್ದೆ ಇಲ್ಲಿತನಕ: ಸೃಜನ್ ಲೋಕೇಶ್ ಮೋಡಿಗೆ ಮರುಳಾದ ಪ್ರೇಕ್ಷಕರು!

    ಬೆಂಗಳೂರು: ಮಜಾ ಟಾಕೀಸ್ ಎಂಬ ಕಿರುತೆರೆ ಶೋ ಮೂಲಕ ಪ್ರೇಕ್ಷಕರೆಲ್ಲರಿಗೂ ಮಸ್ತ್ ಮಜಾ ನೀಡುತ್ತಾ, ಆ ಮೂಲಕವೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ಪಡೆದುಕೊಂಡಿರುವವರು ಸೃಜನ್ ಲೋಕೇಶ್. ಅವರೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆಂದ ಮೇಲೆ ಸಹಜವಾಗಿಯೇ ಜನ ಅದರತ್ತ ಕುತೂಹಲಗೊಳ್ಳುತ್ತಾರೆ. ಕಿರುತೆರೆ ಲೋಕದಲ್ಲಿ ಅವರು ಸೃಷ್ಟಿಸಿದ್ದ ಯಶಸ್ಸಿನ ಪ್ರಭೆ ಮತ್ತು ನಿರ್ದೇಶಕ ತೇಜಸ್ವಿಯವರು ಅದ್ಭುತವಾದ ಕಥೆಯೊಂದಿಗೆ ದೃಶ್ಯ ಕಟ್ಟಿದ ರೀತಿಗೆ ಪ್ರೇಕ್ಷಕರು ಮರುಳಾಗಿದ್ದಾರೆ.

    ಪ್ರೇಕ್ಷಕರು ಯಾವ್ಯಾವ ಉದ್ದೇಶವಿಟ್ಟುಕೊಂಡು ಸಿನಿಮಾ ನೋಡಲು ಬರುತ್ತಾರೆ? ಅವರಿಗೆ ನಿಜಕ್ಕೂ ಬೇಕಾಗಿರೋ ಕಂಟೆಂಟ್ ಎಂಥಾದ್ದೆಂಬುದರ ಬಗ್ಗೆ ಕ್ಲಾರಿಟಿ ಇರುವ ನಿರ್ದೇಶಕ ಗೆಲ್ಲೋದರಲ್ಲಿ ಯಾವ ಸಂದೇಹವೂ ಇಲ್ಲ. ದಶಕಗಳಿಂದೀಚೆಗೆ ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡು ಆ ಬಲದಿಂದಲೇ ಗೆಲುವು ಕಂಡಿದ್ದವರು ತೇಜಸ್ವಿ. ಅದೇ ರೀತಿ ಅವರು ಸಿನಿಮಾ ಪ್ರೇಕ್ಷಕರನ್ನೂ ಅರ್ಥ ಮಾಡಿಕೊಂಡಿದ್ದಾರೆ. ಅದಿಲ್ಲದೇ ಹೋಗಿದ್ದಿದ್ದರೆ ಖಂಡಿತಾ ಎಲ್ಲಿದ್ದೆ ಇಲ್ಲಿತನಕ ಈ ಪಾಟಿ ಯಶಸ್ವಿ ಪ್ರದರ್ಶನದೊಂದಿಗೆ ಮುಂದುವರೆಯೋದು ಸಾಧ್ಯವಾಗುತ್ತಲೇ ಇರಲಿಲ್ಲ.

    ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯೋದು ಯಾವುದೇ ಚಿತ್ರದ ಯಶಸ್ವಿ ಫಾರ್ಮುಲಾ. ಆರಂಭಿಕ ಹಂತದಿಂದಲೇ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ಸೃಜಾ ಮತ್ತು ಹರಿಪ್ರಿಯಾ ಜೋಡಿಯನ್ನು ಕಣ್ತುಂಬಿಕೊಂಡಿದ್ದರು. ಮೊದಲ ದಿನವೇ ಪ್ರತೀ ಪ್ರೇಕ್ಷಕರನ್ನೂ ಥ್ರಿಲ್ ಆಗಿಸಿದ್ದ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ಊರು ತುಂಬಾ ಹರಡಿಕೊಂಡಿದ್ದವು. ಅದಕ್ಕೆ ಸರಿಯಾಗಿ ಬೆನ್ನು ಬೆನ್ನಿಗೆ ದಸರಾ ರಜೆ ಬಂತಲ್ಲಾ? ಅದು ಪ್ರತೀ ಪ್ರೇಕ್ಷಕರ ಪಾಲಿಗೂ ಎಲ್ಲಿದ್ದೆ ಇಲ್ಲಿತನಕ ಚಿತ್ರ ನಿಜಕ್ಕೂ ಹಬ್ಬವಾಗಿಸಿದೆ. ಭರ್ಜರಿ ಮನೋರಂಜನೆ, ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಯೊಂದಿಗೆ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭರ್ಜರಿ ಗೆಲುವು ಪಡೆದುಕೊಂಡು ಮುನ್ನುಗ್ಗುತ್ತಿದೆ.

  • ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಬೆಂಗಳೂರು: ಕಿರುತೆರೆಗೂ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಪ್ರೇಕ್ಷಕರ ನಾಡಿಮಿಡಿತವನ್ನು ಸ್ಪಷ್ಟವಾಗಿ ಗ್ರಹಿಸುವ ತಾಕತ್ತಿರುವ ನಿರ್ದೇಶಕನ ಪಾಲಿಗೆ ಆ ವ್ಯತ್ಯಾಸ ಸವಾಲಿನ ಸಂಗತಿಯಲ್ಲ. ನಿರ್ದೇಶಕ ತೇಜಸ್ವಿ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸಾಬೀತುಗೊಳಿಸಿದ್ದಾರೆ. ಅವರು ನಿರ್ದೇಶನ ಮಾಡಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭಾರೀ ಸದ್ದು ಮಾಡುತ್ತಲೇ ಸಾಗಿ ಬಂದಿತ್ತು. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಫ್ರೆಶ್ ಆದ ಕಥೆಯ ಹಿಂಟ್ ಬಿಟ್ಟು ಕೊಡುತ್ತಲೇ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿತ್ತು. ಅದೀಗ ಬಿಡುಗಡೆಯಾಗಿದೆ. ಈ ಮೂಲಕ ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟುವಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆದ್ದಿದ್ದಾರೆ.

    ಸೃಜನ್ ಲೋಕೇಶ್ ಇಲ್ಲಿ ಸೂರ್ಯ ಎಂಬ ಪಾತ್ರವನ್ನು ಸಂಪೂರ್ಣವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರೆ. ತಂದೆಯ ಪಾಲಿಗೆ ಸೂರ್ಯ ಮುದ್ದಿನ ಮಗ. ಆತ ಅದೆಲ್ಲಿ ಸಹವಾಸ ದೋಷದಿಂದ ಹಾಳಾಗುತ್ತಾನೋ ಎಂಬ ಭಯದಿಂದ ಆತನನ್ನು ತಂದೆ ವಿದೇಶಕ್ಕೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಅದೇನೇ ಸೌಕರ್ಯಗಳು ಸಿಕ್ಕರೂ ಸೂರ್ಯನನ್ನು ಕಳ್ಳುಬಳ್ಳಿಯ ಬಂಧ ಸದಾ ಸೆಳೆಯುತ್ತಿರುತ್ತೆ. ಒಂದಷ್ಟು ವರ್ಷಗಳ ನಂತರ ಆತ ಹಳೇ ಗೆಳೆಯರನ್ನರಸಿ ಸ್ವದೇಶಕ್ಕೆ ಮರಳುತ್ತಾನೆ. ಈ ನಡುವೆ ಮದುವೆ ಮನೆಯೊಂದರಲ್ಲಿ ದಂತದ ಬೊಂಬೆಯಂಥಾ ಹುಡುಗಿ ಆತನ ಮನ ಸೆಳೆದಿರುತ್ತಾಳೆ. ಅದೇ ಗುಂಗಿನಲ್ಲಿ ತೇಲಾಡುತ್ತಲೇ ಸೂರ್ಯ ಗೆಳೆಯನ ಚಾಲೆಂಜು ಸ್ವೀಕರಿಸಿ ಕೆಲಸ ಹುಡುಕ ಹೋದರೆ ಆ ಕಂಪನಿಯಲ್ಲಿಯೂ ಸಾಕ್ಷಾತ್ತು ನಂದಿನಿಯ ದರ್ಶನವಾಗಿ ಸೂರ್ಯನೊಳಗೆ ಪ್ರೀತಿಯ ಪ್ರಭೆ ಮತ್ತಷ್ಟು ಪ್ರಕಾಶಮಾನವಾಗುತ್ತೆ.

    ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆಂಬುದಕ್ಕಿಂತಲೂ ನಂದಿನಿಯನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸೂರ್ಯ ಅದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಆ ನಂತರದದ್ದು ಆಕೆಯನ್ನು ಒಲಿಸಿಕೊಳ್ಳೋ ಪಡಿಪಾಟಲು. ನಂದಿನಿ ಸುಳ್ಳಿನ ನೆರಳು ಸೋಕಿದರೂ ಕೊಸರಾಡುವ ಪೈಕಿ. ಆದರೆ ಸೂರ್ಯ ಸುಳ್ಳಿನ ಮಹಲಿನಲ್ಲಿಯೇ ಪ್ರೇಮಸೌಧ ಕಟ್ಟಿ ಬಿಟ್ಟಿರುತ್ತಾನೆ. ಅದಕ್ಕೆ ಮದುವೆ ಮೂಲಕ ಬ್ರೇಕ್ ಹಾಕೋ ಉದ್ದೇಶದಲ್ಲಿ ಸೂರ್ಯನಿರುವಾಗಲೇ ಮದುವೆ ಮನೆಯಲ್ಲಿಯೇ ಆತನ ಸುಳ್ಳಿನ ಪುರಾಣ ನಂದಿನಿ ಮುಂದೆ ಬಿಚ್ಚಿಕೊಳ್ಳುತ್ತೆ. ಆ ನಂತರದಲ್ಲಿ ಏನಾಗುತ್ತೆಂಬುದೂ ಸೇರಿದಂತೆ ಇಡೀ ಚಿತ್ರ ರೋಚಕವಾಗಿ ಮೂಡಿ ಬಂದಿದೆ.

    ತೇಜಸ್ವಿ ಪ್ರೇಕ್ಷಕರ ಅಭಿಲಾಶೆ ಮತ್ತು ಸೃಜನ್ ಲೋಕೇಶ್ ಅವರಿಗೆ ತಕ್ಕುದಾಗಿಯೇ ಕಥೆ ಹೊಸದು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಳಿಕೇಳಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್. ಇಲ್ಲಿ ಆ ಬಿರುದು ಮತ್ತಷ್ಟು ಮಿರುಗುವಂಥ ಮಾತಿನ ಜುಗಲ್ಬಂಧಿ ಇದೆ. ಅಚ್ಚರಿಯಾಗೋದು ಸೃಜನ್ ಅವರ ಬದಲಾವಣೆ. ಸೃಜನ್ ಅದ್ಭುತ ನಟನಾಗಿ ಬದಲಾಗಿದ್ದಾರೆ. ಡ್ಯಾನ್ಸು, ಫೈಟಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಸೃಜಾ ತಾಜಾ ತಾಜ. ಇನ್ನುಳಿದಂತೆ ನಾಯಕಿಯಾಗಿ ಹರಿಪ್ರಿಯಾ ನಟನೆ ಬಗ್ಗೆ ಎರಡು ಮಾತಿಲ್ಲ. ಅಮ್ಮನಾಗಿ ನಟಿಸಿರೋ ತಾರಾ ಅವರದ್ದು ಎಂದಿನಂತೆ ಮಂತ್ರಮುಗ್ಧಗೊಳಿಸೋ ನಟನೆ. ಮಿಕ್ಕೆಲ್ಲ ತಾರಾಗಣವೂ ಅದಕ್ಕೆ ಸಾಥ್ ಕೊಟ್ಟಿದೆ. ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ತುಸುವೂ ತತ್ವಾರವಾಗದಂತೆ ತೇಜಸ್ವಿ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ.

    ರೇಟಿಂಗ್: 3.5/5

  • ಎಲ್ಲಿದ್ದೆ ಇಲ್ಲಿತನಕ: ರೊಮ್ಯಾಂಟಿಕ್ ಮೂಡಿಗೆ ಜಾರಿದ ಹರಿಪ್ರಿಯಾ!

    ಎಲ್ಲಿದ್ದೆ ಇಲ್ಲಿತನಕ: ರೊಮ್ಯಾಂಟಿಕ್ ಮೂಡಿಗೆ ಜಾರಿದ ಹರಿಪ್ರಿಯಾ!

    ಬೆಂಗಳೂರು: ನಟಿ ಹರಿಪ್ರಿಯಾ ಎಂಬ ಹೆಸರು ಕೇಳಿದರೇನೇ ಭಿನ್ನ ಬಗೆಯ ಪಾತ್ರಗಳೇ ಪ್ರೇಕ್ಷಕರ ಕಣ್ಮುಂದೆ ಸುಳಿಯಲಾರಂಭಿಸುತ್ತವೆ. ಇಮೇಜಿನಾಚೆಗೆ ಓರ್ವ ಪರಿಪೂರ್ಣ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಿರೋ ಹರಿಪ್ರಿಯಾ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಮೂಲಕ ಮೊದಲ ಬಾರಿ ಸೃಜನ್ ಲೋಕೇಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಈವರೆಗೂ ಯಾವ ಸುಳಿವೂ ಸಿಗದಂತೆ ಎಚ್ಚರ ವಹಿಸುತ್ತಲೇ ಸಾಗಿ ಬಂದಿದೆ. ಹರಿಪ್ರಿಯಾ ಇದುವರೆಗಿನ ಸಿನಿಮಾಗಳಲ್ಲಿ ಆರಿಸಿಕೊಂಡಿರೋ ಪಾತ್ರಗಳ ಪರಿಚಯವಿರುವ ಪ್ರತಿಯೊಬ್ಬರಿಗೂ ಕೂಡಾ ಈ ಸಿನಿಮಾದಲ್ಲಿಯೂ ಅವರ ಪಾತ್ರ ವಿಶೇಷವಾಗಿರಲಿದೆಯೆಂಬ ನಂಬಿಕೆಯಿದೆ.

    ಇದು ಸೃಜನ್ ಮತ್ತು ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿರೋ ಮೊದಲ ಚಿತ್ರ. ಯಾವುದೇ ಸಿನಿಮಾವಾದರೂ ಹಾಡುಗಳ ಮುಲಕವೇ ಪ್ರೇಕ್ಷಕರು ಅದರತ್ತ ಆಕರ್ಷಿತರಾಗೋದು ಸಾಮಾನ್ಯ ವಿದ್ಯಮಾನ. ಆದರೆ ಅದರಲ್ಲಿ ಯಶ ಕಾಣೋದು ಸಾಮಾನ್ಯ ಸಂಗತಿಯೇನಲ್ಲ. ಎಲ್ಲಿದ್ದೆ ಇಲ್ಲಿತನಕ ಚಿತ್ರ ಅದರಲ್ಲಿ ಯಶ ಕಂಡಿದೆ. ಈ ಹಾಡುಗಳ ಮೂಲಕವೇ ಹರಿಪ್ರಿಯಾ ಮತ್ತು ಸೃಜನ್ ಜೋಡಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಅದರಲ್ಲಿಯೂ ಹರಿಪ್ರಿಯಾ ಕಾಣಿಸಿಕೊಂಡಿರೋ ರೀತಿಯಂತೂ ಅವರ ಅಭಿಮಾನಿಗಳೇ ಖುಷಿಗೊಳ್ಳುವಂತೆ ಮಾಡಿದೆ.

    ಹಾಡುಗಳಲ್ಲಿ ಹರಿಪ್ರಿಯಾ ರೊಮ್ಯಾಂಟಿಕ್ ಮೂಡಲ್ಲಿ ಕಾಣಿಸಿಕೊಂಡಿದ್ದಾರಲ್ಲಾ? ಅವರು ಇಡೀ ಸಿನಿಮಾದಲ್ಲಿ ಅದೇ ರೀತಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಬಗ್ಗೆ ಚಿತ್ರತಂಡ ಯಾವುದನ್ನೂ ನಿಖರವಾಗಿ ಹೇಳದೆ ಕುತೂಹಲ ಕಾಯ್ದಿಟ್ಟುಕೊಂಡಿದೆ. ಒಂದು ಮೂಲದ ಪ್ರಕಾರ ಈ ಸಿನಿಮಾದಲ್ಲಿ ಹರಿಪ್ರಿಯಾ ಪಾತ್ರಕ್ಕೆ ಬೇರೆ ಶೇಡುಗಳೂ ಇವೆಯಂತೆ. ಅದೇನೆಂಬುದು ನಿಜವಾದ ಸರ್‍ಪ್ರೈಸ್. ಅದೆಲ್ಲವೂ ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಒಟ್ಟಾರೆಯಾಗಿ ಈ ಮೂಲಕ ಸೃಜನ್ ಮತ್ತು ಹರಿಪ್ರಿಯಾ ಜೋಡಿ ಸಾರ್ವಕಾಲಿಕ ಮೋಡಿ ಮಾಡೋ ಲಕ್ಷಣಗಳೇ ಢಾಳಾಗಿವೆ.

  • ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಛಾಯೆಯೊಂದಿಗೆ ಕಾಮಿಡಿ ಮಾಯೆ!

    ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಛಾಯೆಯೊಂದಿಗೆ ಕಾಮಿಡಿ ಮಾಯೆ!

    ಬೆಂಗಳೂರು: ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವೀಗ ಮುದ್ದಾದ ರೊಮ್ಯಾಂಟಿಕ್ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಈ ಕ್ಷಣಕ್ಕೂ ಒಂದಷ್ಟು ಮಂದಿ ಇದು ಪ್ರೇಮ ಕಥೆಯೇ ಪ್ರಧಾನವಾಗಿರೋ ಸಿನಿಮಾ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಸೃಜನ್ ಮತ್ತು ನಾಯಕಿ ಹರಿಪ್ರಿಯಾ ಈ ಹಾಡುಗಳಲ್ಲಿ ಕಾಣಿಸಿಕೊಂಡಿರೋ ರೀತಿಯೇ ಅಂಥಾದ್ದಿದೆ. ಆದರೆ ಎಲ್ಲಿದ್ದೆ ಇಲ್ಲಿತನಕ ಬರೀ ಪ್ರೇಮಕಥೆಯನ್ನು ಹೊಂದಿರೋ ಚಿತ್ರವೆಂಬುದು ಅರ್ಧಸತ್ಯವಷ್ಟೇ!

    ಯಾಕೆಂದರೆ, ನಿರ್ದೇಶಕ ತೇಜಸ್ವಿ ಈ ಸಿನಿಮಾವನ್ನು ಪ್ರೀತಿಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ರೂಪಿಸಿದ್ದಾರೆ. ಆದ್ದರಿಂದಲೇ ಇಲ್ಲಿ ಪ್ರೀತಿಯೂ ಸೇರಿದಂತೆ ಸಕಲ ರಸಗಳೂ ಸೇರಿಕೊಂಡಿವೆ. ಇದೆಲ್ಲದರೊಂದಿಗೆ ಸೃಜನ್ ಅವರ ಟಾಕಿಂಗ್ ಸ್ಟಾರ್ ಎಂಬ ಇಮೇಜಿಗೆ ತಕ್ಕುದಾದ ಅಂಶಗಳೂ ಈ ಸಿನಿಮಾದಲ್ಲಿರಲಿವೆ. ಎಲ್ಲಿದ್ದೆ ಇಲ್ಲಿತನಕ ಪ್ರೇಮ ಕಥೆಯಾಗಿಯೂ ಕಾಡುತ್ತದೆ. ಅದರ ಜೊತೆಗೇ ಪಕ್ಕಾ ಕಾಮಿಡಿ ಕಿಕ್ಕಿನ ಮೂಲಕ ಎಲ್ಲರನ್ನೂ ಮತ್ತೇರಿಸುವಂತೆ ಕಚಗುಳಿ ಇಡಲಿದೆ.

    ಮಜಾ ಟಾಕೀಸ್ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಎಲ್ಲಿದ್ದೆ ಇಲ್ಲಿತನಕ ಚಿತ್ರಕ್ಕಾಗಿ ತಯಾರಿ ಆರಂಭವಾಗಿತ್ತು. ಮಜಾ ಟಾಕೀಸ್ ಟೀಮೆಲ್ಲ ಸೇರಿಕೊಂಡು ತೇಜಸ್ವಿಯವರ ಸಾರಥ್ಯದಲ್ಲಿ ಸೃಜಾಗೆ ಯಾವ ಕಥೆ ಸೂಕ್ತ ಎಂಬ ಬಗ್ಗೆ ತಿಂಗಳು ಗಟ್ಟಲೆ ಚರ್ಚೆಗಳು ನಡೆದಿದ್ದವು. ಅದೆಷ್ಟೋ ಕಥೆಗಳೂ ಚರ್ಚೆಯಾಗಿದ್ದವು. ಆದರೆ ಪ್ರೀತಿ, ಸಾಹಸ ಮತ್ತು ಕಾಮಿಡಿಯಂಥಾ ಒಂದೇ ಜಾನರಿನ ಚಿತ್ರಕ್ಕಿಂತಲೂ ಈ ಎಲ್ಲ ಅಂಶಗಳನ್ನು ಬೆರೆಸಿ ಒಂದು ಕಥೆ ಸೃಷ್ಟಿಸೋದೇ ಸೂಕ್ತ ಎಂಬ ನಿರ್ಧಾರಕ್ಕೆ ಇಡೀ ತಂಡ ಬಂದಿತ್ತು. ಹಾಗೆ ಸೃಷ್ಟಿಯಾಗಿದ್ದ ಎಲ್ಲಿದ್ದೆ ಇಲ್ಲಿತನಕದ ಫೈನಲ್ ಕಥೆ. ಅದು ಎಲ್ಲ ಅಂಶಗಳನ್ನೂ ಅರೆದು ತಯಾರಿಸಿದ ರಸಪಾಕದಂಥಾ ಚಿತ್ರ. ಅದರ ನಿಜವಾದ ಮಜಾ ಏನೆಂಬುದು ಈ ವಾರವೇ ಗೊತ್ತಾಗಲಿದೆ.

  • ಎಲ್ಲಿದ್ದೆ ಇಲ್ಲಿತನಕ: ಮಗನ ಸಾಹಸಕ್ಕೆ ಮದರ್ ಇಂಡಿಯಾ ಬೆಂಬಲ!

    ಎಲ್ಲಿದ್ದೆ ಇಲ್ಲಿತನಕ: ಮಗನ ಸಾಹಸಕ್ಕೆ ಮದರ್ ಇಂಡಿಯಾ ಬೆಂಬಲ!

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಜಾ ಟಾಕೀಸ್ ಎಂಬ ಶೋ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವವರು ಸೃಜನ್. ಆ ಪ್ರೇಕ್ಷಕರ ಪಾಲಿಗೆ ಪ್ರೀತಿಯ ಸೃಜಾ ಆಗಿರೋ ಅವರ ಈ ಸಿನಿಮಾ ಬಗ್ಗೆ ಈಗ ಎಲ್ಲ ಕೋನಗಳಿಂದಲೂ ಗೆಲುವಿನ ಲಕ್ಷಣಗಳೇ ಮಿರುಗಲಾರಂಭಿಸಿವೆ. ಈ ಸಿನಿಮಾ ಮೇಲೆ ಬಹಳಷ್ಟು ಕನಸಿಟ್ಟುಕೊಂಡೇ ಸೃಜನ್ ತಮ್ಮ ಹೋಂ ಬ್ಯಾನರಿನಲ್ಲಿಯೇ ಇದನ್ನು ನಿರ್ಮಾಣ ಮಾಡಿದ್ದಾರೆ. ಒಂದು ಬೃಹತ್ ತಾರಾಗಣವೇ ಅವರಿಗಿಲ್ಲಿ ಸಾಥ್ ಕೊಟ್ಟಿದೆ.

    ವಿಶೇಷವೆಂದರೆ ಈ ಸಿನಿಮಾದಲ್ಲಿ ಗಿರಿಜಾ ಲೋಕೇಶ್ ಕೂಡ ಸೃಜನ್ ಜೊತೆ ನಟಿಸಿದ್ದಾರೆ. ಮಗನ ಈವರೆಗಿನ ಸಾಧನೆಯ ಹಾದಿಯಲ್ಲಿ ನೆರಳಾಗುತ್ತಾ ಬಂದಿರುವವರು ಗಿರಿಜಾ ಲೋಕೇಶ್. ಸದಾ ಮಗನಿಗೆ ಮಾರ್ಗದರ್ಶನ ನೀಡುತ್ತಾ ಬಂದಿರೋ ಗಿರಿಜಮ್ಮ, ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿಯೂ ನಟಿಸಿದ್ದಾರೆ. ಆದರೆ ಇದುವರೆಗೂ ನಿರ್ದೇಶಕರಾಗಲಿ, ಚಿತ್ರತಂಡವಾಗಲೀ ಈ ಪಾತ್ರದ ಬಗ್ಗೆ ತೆಳುವಾಗಿ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದೆಯಷ್ಟೆ. ಈ ಸಿನಿಮಾದಲ್ಲಿ ಒಟ್ಟಾರೆ ವಿಶೇಷತೆಗಳಿವೆಯಲ್ಲಾ? ಅದರಲ್ಲಿ ಗಿರಿಜಾ ಲೋಕೇಶ್ ಅವರ ಪಾತ್ರವೂ ಸೇರಿಕೊಂಡಿದೆ.

    ಗಿರಿಜಾ ಲೋಕೇಶ್ ಅವರಿಗಿಲ್ಲಿ ವಿಶಿಷ್ಟವಾದ ಪಾತ್ರವೇ ಸಿಕ್ಕಿದೆ. ಅಷ್ಟಕ್ಕೂ ಗಿರಿಜಮ್ಮನ ಪಾಲಿಗೆ ಈವರೆಗೆ ಎಲ್ಲ ಪಾತ್ರಗಳೂ ಒಲಿದು ಬಂದಿವೆ. ಆದರೆ ಮಗನೇ ನಾಯಕನಾಗಿರೋ ಈ ಚಿತ್ರದಲ್ಲವರ ಪಾತ್ರ ನಿಜಕ್ಕೂ ಸ್ಪೆಷಲ್ ಆಗಿದೆಯಂತೆ. ಆದರೆ ಅದು ಬಿಡುಗಡೆಯ ದಿನವಷ್ಟೇ ಗೊತ್ತಾಗಬೇಕಿದೆ. ಅದಕ್ಕಾಗಿ ಈಗ ಕ್ಷಣಗಣನೆ ಶುರುವಾಗಿದೆ. ಅಂತೂ ಈ ಸಿನಿಮಾ ಕೇವಲ ಸೃಜನ್ ಅವರಿಗೆ ಮಾತ್ರವಲ್ಲದೇ ಗಿರಿಜಾ ಲೋಕೇಶ್ ಪಾಲಿಗೂ ವಿಶೇಷವೇ. ಅಮ್ಮ ಗಿರಿಜಮ್ಮ ಮಾತ್ರವಲ್ಲದೇ ಅನೇಕಾನೇಕ ಕಲಾವಿದರಿಲ್ಲಿ ಸೃಜನ್‍ಗೆ ಸಾಥ್ ನೀಡಿದ್ದಾರೆ. ಅವರೆಲ್ಲರ ಪಾತ್ರಗಳ ಮಜಾ ಜಾಹೀರಾಗೋದಕ್ಕೆ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ.

  • ಎಲ್ಲಿದ್ದೆ ಇಲ್ಲಿತನಕ: ಕೊಳ್ಳೇಗಾಲದಿಂದ ಬಂದ ತೇಜಸ್ವಿಯ ಬಂಡವಾಳವಾಗಿದ್ದದ್ದು ಬರವಣಿಗೆ ಮಾತ್ರ!

    ಎಲ್ಲಿದ್ದೆ ಇಲ್ಲಿತನಕ: ಕೊಳ್ಳೇಗಾಲದಿಂದ ಬಂದ ತೇಜಸ್ವಿಯ ಬಂಡವಾಳವಾಗಿದ್ದದ್ದು ಬರವಣಿಗೆ ಮಾತ್ರ!

    ಬೆಂಗಳೂರು: ಸುಮ್ಮನೆ ಒಂದು ಸಲ ಕನ್ನಡ ಚಿತ್ರರಂಗದತ್ತ ಕಣ್ಣು ಹಾಯಿಸಿ ಅಲ್ಲಿ ಪ್ರಸಿದ್ಧಿ ಪಡೆದುಕೊಂಡವರು, ಗೆದ್ದವರ ಹಿನ್ನೆಲೆಗಳನ್ನೊಮ್ಮೆ ಕೆದಕಿದರೆ ಯಾವ್ಯಾವುದೋ ದಿಕ್ಕುಗಳಿಂದ ಮನಮಿಡಿಯುವ, ಅಚ್ಚರಿ ಹುಟ್ಟಿಸುವ ಕಥೆಗಳು ತೆರೆದುಕೊಳ್ಳುತ್ತವೆ. ಯಾವುದೋ ಹಳ್ಳಿ ಮೂಲೆಯಿಂದ ಬಂದು ಎಲ್ಲೋ ಕಳೆದು ಹೋಗಬೇಕಿದ್ದವರನ್ನೂ ಸಿನಿಮಾ ಮಾಯೆಯೆಂಬುದು ಸುತ್ತಿ ಬಳಸಿ ಬರ ಸೆಳೆದುಕೊಂಡ ಕಥೆಗಳೂ ತೆರೆದುಕೊಳ್ಳುತ್ತವೆ. ಹೀಗೆ ಬಂದ ಬಹುತೇಕರ ಬಂಡವಾಳ ಪ್ರತಿಭೆ ಮಾತ್ರವೇ ಆಗಿರುತ್ತದೆ. ಇದೇ ತಿಂಗಳ 11ರಂದು ತೆರೆಗಾಣಲಿರುವ `ಎಲ್ಲಿದ್ದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿಯವರ ಬದುಕಿನ ಹಾದಿಯೂ ಇದಕ್ಕೆ ಪೂರಕವಾಗಿದೆ.

    ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಯಶಸ್ವಿ ಕಿರುತೆರೆ ಶೋ ಮಜಾ ಟಾಕೀಸ್. ಅದರ ಕ್ರಿಯೇಟಿವ್ ನಿರ್ದೇಶಕರಾಗಿ, ಯಶಸ್ಸಿನ ರೂವಾರಿಗಳಲ್ಲೊಬ್ಬರಾಗಿರುವವರು ತೇಜಸ್ವಿ. ಅದಕ್ಕೂ ಹಿಂದೆಯೇ ಒಂದಷ್ಟು ಕಿರುತೆರೆ ಶೋಗಳನ್ನು ನಿರ್ವಹಿಸುತ್ತಾ, ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಾ ಪ್ರಸಿದ್ಧಿ ಪಡೆದುಕೊಂಡಿರುವವರು, ಪ್ರತಿಭಾವಂತರಾಗಿ ಗುರುತಿಸಿಕೊಂಡಿರುವವರು ತೇಜಸ್ವಿ. ಅವರು ಸೃಜನ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನು ಕೂಡ ಭಿನ್ನವಾಗಿಯೇ ನಿರ್ದೇಶನ ಮಾಡಿರುತ್ತಾರೆಂಬ ನಂಬಿಕೆ ಹುಟ್ಟಿಕೊಂಡಿರೋದಕ್ಕೆ ತೇಜಸ್ವಿಯವರ ಈವರೆಗಿನ ಕಲಾ ಯಾನವೇ ಕಾರಣವಾಗಿದೆ. ಹಂತ ಹಂತವಾಗಿ ಹೊರಬಂದು ಸೂಪರ್ ಹಿಟ್ ಆಗಿರೋ ಹಾಡುಗಳು ಮತ್ತು ಎಲ್ಲರಿಗೂ ಮೆಚ್ಚುಗೆಯಾಗಿರೋ ಟ್ರೇಲರ್ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಂಡಿದೆ. ತಾಜಾ ಕಥೆಯ ಸುಳಿವಿನೊಂದಿಗೆ ಪ್ರೇಕ್ಷಕರೆಲ್ಲ ಬಿಡುಗಡೆಯ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತೆಯೂ ಮಾಡಿದೆ.

    ಇವತ್ತಿಗೆ ಎಲ್ಲಿದ್ದೆ ಇಲ್ಲಿತನಕ ಸಿನಿಮಾ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರೋ ತೇಜಸ್ವಿಯವರು ಸಾಗಿ ಬಂದ ರೀತಿಯೇ ವಿಶೇಷವಾದದ್ದು. ಸಾಮಾನ್ಯವಾಗಿ ಹಳ್ಳಿಗಾಡುಗಳಿಂದ ಬಂದು ಹೀಗೆ ಬಣ್ಣದ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದವರು ಅದನ್ನೇ ಗುರಿಯಾಗಿಸಿಕೊಂಡಿರುತ್ತಾರೆ. ಆದರೆ ಕೊಳ್ಳೇಗಾಲದಲ್ಲಿಯೇ ಹುಟ್ಟಿ ಅಲ್ಲಿಯೇ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದ ತೇಜಸ್ವಿಯವರ ಪಾಲಿಗೆ ಅಂಥಾ ಕನಸೇನೂ ಇರಲಿಲ್ಲ. ಚಿಕ್ಕ ವಯಸ್ಸಿಗೇ ಹಚ್ಚಿಕೊಂಡಿದ್ದ ಓದಿನ ಹುಚ್ಚು ಅವರೊಳಗೆ ಬರವಣಿಗೆಯ ಆಸಕ್ತಿ ಹುಟ್ಟಿಸಿತ್ತು. ಅದುವೇ ನಾಟಕ ಮತ್ತು ರಂಗಭೂಮಿಯ ನಂಟನ್ನೂ ಬೆಳೆಸುವಂತೆ ಮಾಡಿತ್ತು. ಆದರೆ ಬದುಕಿನ ಅನಿವಾರ್ಯತೆಗೆ ದುಡಿಯಲೇ ಬೇಕಾದ ಅನಿವಾರ್ಯ ಸೃಷ್ಟಿಸಿದಾಗ ತೇಜಸ್ವಿ ದಶಕಗಳಷ್ಟು ಹಿಂದೆ ಮುಖ ಮಾಡಿದ್ದು ಬೆಂಗಳೂರಿನತ್ತ. ಆ ಕ್ಷಣದಲ್ಲಿ ಅವರ ಮುಂದಿದ್ದದ್ದು ಯಾವುದಾದರೊಂದು ಕೆಲಸ ಮಾಡಿ ಮನೆಯಲ್ಲಿದ್ದ ಆರ್ಥಿಕ ಸಂಕಷ್ಟ ನೀಗಿಸಬೇಕೆಂಬುದರ ಹೊರತಾಗಿ ಬೇರೆ ಯಾವ ಇಂಗಿತವೂ ಇರಲಿಲ್ಲ.

    ಆದರೆ, ಅವರಿಗೇ ಅರಿವಿಲ್ಲದಂತೆ ಇಡೀ ಬದುಕು ಬೆಳಗಿ ಬಿಡುವಂತಹ ಬರವಣಿಗೆಯ ಕಲೆ ಅವರೊಳಗಿತ್ತು. ಅದುವೇ ಅಚ್ಚರಿದಾಯಕವಾಗಿ ಅವರನ್ನು ಬಣ್ಣದ ಲೋಕಕ್ಕೆ ಕೈ ಹಿಡಿದು ಸೆಳೆದುಕೊಂಡಿತ್ತು. ಬೆಂಗಳೂರಿಗೆ ಬಂದಿಳಿದ ತೇಜಸ್ವಿಯವರಿಗೆ ರಂಗಭೂಮಿಯಲ್ಲಿಯೂ ಹೆಸರು ಮಾಡಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್ ಸೂಳೇರಿಪಾಳ್ಯ ಪರಿಚಯವಾಗಿದ್ದರು. ಅವರೇ ತೇಜಸ್ವಿಯೊಳಗಿನ ಬರವಣಿಗೆಯ ತೇಜಸ್ಸನ್ನು ಪತ್ತೆಹಚ್ಚಿ ಬರೆಯಲು ಪ್ರೇರೇಪಿಸಿದ್ದರು. ಹಾಗೆ ಕಿರುತೆರೆಗೆ ಬರವಣಿಗೆಯ ಮೂಲಕ ಎಂಟ್ರಿ ಕೊಟ್ಟಿದ್ದ ತೇಜಸ್ವಿ, ಅಲ್ಲಿನ ಎಲ್ಲ ಪಟ್ಟುಗಳನ್ನೂ ಶ್ರದ್ಧೆಯಿಂದಲೇ ಕರಗತ ಮಾಡಿಕೊಂಡಿದ್ದರು. ಆ ನಂತರ ಒಂದಷ್ಟು ವರ್ಷಗಳ ಕಾಲ ಅಲ್ಲಿಯೇ ಸಕ್ರಿಯರಾಗಿದ್ದರು. ಕಡೆಗೂ ಸೃಜನ್ ಲೋಕೇಶ್ ಸಂಪರ್ಕಕ್ಕೆ ಬಂದ ತೇಜಸ್ವಿಯವರ ಮುಂದೆ ಹೊಸ ಸಾಧ್ಯತೆಗಳು ಬಿಚ್ಚಿಕೊಳ್ಳಲಾರಂಭಿಸಿದ್ದವು.

    ಸೃಜನ್ ಜೊತೆ ಕಿಚನ್ ಕಿಲಾಡಿ ಎಂಬ ಶೋ ಆರಂಭಿಸಿದ್ದ ತೇಜಸ್ವಿ ಆ ನಂತರದಿಂದ ಇಲ್ಲಿವರೆಗೂ ಸೃಜನ್ ಜೊತೆಯಾಗಿಯೇ ಸಾಗಿ ಬಂದಿದ್ದಾರೆ. ಜೊತೆಯಾಗಿಯೇ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಆ ಬಳಿಕ ಸೃಜನ್ ಪ್ರೊಡಕ್ಷನ್ಸ್ ಅಡಿಯಲ್ಲಿಯೇ ಮಜಾ ಟಾಕೀಸ್ ಎಂಬ ಯಶಸ್ವೀ ಕಾರ್ಯಕ್ರಮವನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಹೀಗೆ ಹಲವಾರು ವರ್ಷಗಳಿಂದ ಸೃಜನ್ ಲೋಕೇಶ್ ಅವರೊಂದಿಗೆ ಒಡನಾಡಿರುವ ತೇಜಸ್ವಿ ಇದೀಗ ಅವರಿಗಾಗಿ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಇದು ಅವರು ನಿರ್ದೇಶನ ಮಾಡಿರೋ ಮೊದಲ ಚಿತ್ರ. ಆದರೆ ಅದು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಎಲ್ಲ ಲಕ್ಷಣಗಳನ್ನೂ ಹೊಮ್ಮಿಸುತ್ತಿದೆ. ಕಿರುತೆರೆಯಲ್ಲಿ ಆರಂಭದಿಂದಲೂ ಯಶಸ್ವಿಯಾಗುತ್ತಾ ಬಂದಿರೋ ತೇಜಸ್ವಿ ಎಲ್ಲಿದ್ದೆ ಇಲ್ಲಿತನಕ ಮೂಲಕ ಸಿನಿಮಾ ನಿರ್ದೇಶಕರಾಗಿಯೂ ಗೆಲ್ಲುವ ಲಕ್ಷಣಗಳೇ ದಟ್ಟವಾಗಿವೆ.

  • ಎಲ್ಲಿದ್ದೆ ಇಲ್ಲಿತನಕ: ಗೆಳೆಯನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು ದರ್ಶನ್!

    ಎಲ್ಲಿದ್ದೆ ಇಲ್ಲಿತನಕ: ಗೆಳೆಯನ ಚಿತ್ರದ ಟ್ರೇಲರ್ ಲಾಂಚ್ ಮಾಡಿದರು ದರ್ಶನ್!

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯಿಸಿರೋ ಎಲ್ಲಿದ್ದೆ ಇಲ್ಲಿತನಕ ಚಿತ್ರ ಹಾಡುಗಳ ಮೂಲಕವೇ ಮೆಲೋಡಿ ಹಿಮ್ಮೇಳದೊಂದಿಗೆ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದರ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಯಾನಕ್ಕೆ ಸದಾ ಬೆಂಬಲಿಸುತ್ತಾ ಬಂದಿರುವ ದರ್ಶನ್, ಈ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ. ಅದನ್ನು ಮೆಚ್ಚಿಕೊಂಡೂ ಮಾತಾಡಿದ್ದಾರೆ. ಹೀಗೆ ಹೊರ ಬಂದಿರೋ ಟ್ರೇಲರ್ ಮನೋರಂಜನೆ, ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಮಿಳಿತವಾದ ಕಥೆಯ ಸುಳಿವು ನೀಡುತ್ತಲೇ ಹೆಚ್ಚಿನ ವೀಕ್ಷಣೆ ಮತ್ತು ಪ್ರತಿಕ್ರಿಯೆಗಳನ್ನೂ ಪಡೆದುಕೊಳ್ಳುತ್ತಿದೆ.

    ತೇಜಸ್ವಿ ನಿರ್ದೇಶನದ ಎಲ್ಲಿದ್ದೆ ಇಲ್ಲಿತನಕ ಹಾಡುಗಳೊಂದಿಗೇ ಜನರನ್ನು ಸೆಳೆಯುತ್ತಿದೆ. ಇತ್ತೀಚೆಗಷ್ಟೇ ರೊಮ್ಯಾಂಟಿಕ್ ಆಗಿರೋ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿತ್ತು. ಅದು ದಾಖಲೆ ಮಟ್ಟದ ವೀಕ್ಷಣೆಗಳೊಂದಿಗೆ ಸೂಪರ್ ಹಿಟ್ ಆಗುತ್ತಲೇ ಅದರ ಬೆನ್ನಿಗೇ ಇದೀಗ ಟ್ರೇಲರ್ ಬಿಡುಗಡೆಯಾಗಿದೆ. ಮಜವಾದ ಕಥೆ, ರಿಚ್ ಆಗಿ ಮೂಡಿ ಬಂದಿರೋ ಮೇಕಿಂಗ್‍ನ ಲಕ್ಷಣಗಳನ್ನು ಕಾಣಿಸುತ್ತಲೇ ಸದರಿ ಟ್ರೇಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ.

    ಎಲ್ಲಿದ್ದೆ ಇಲ್ಲಿತನಕ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿದೆ. ತೇಜಸ್ವಿ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ತಾರಾ ಅಮ್ಮನಾಗಿ ನಟಿಸಿದರೆ, ಸಾಧು ಕೋಕಿಲಾ, ಸಿಹಿಕಹಿ ಚಂದ್ರು, ತರಂಗ ವಿಶ್ವ ಮುಂತಾದವರ ಅದ್ಧೂರಿ ತಾರಾಗಣವಿದೆ. ಹರಿಪ್ರಿಯಾ ಮತ್ತು ಸೃಜನ್ ಹಾಡಿನಲ್ಲಿ ಕಂಡುಬಂದಂಥಾದ್ದೇ ರೊಮ್ಯಾಂಟಿಕ್ ಮೂಡಿನಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆಂದು ಕೂಡಾ ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಸೃಜನ್ ಅಂದರೆ ಕಚಗುಳಿ ಇಡೋ ಮಾತು ಮತ್ತು ಹಾಸ್ಯಕ್ಕೆ ಹೆಸರಾಗಿರುವವರು. ಈ ಚಿತ್ರದಲ್ಲಿ ಅಂಥಾ ಹಾಸ್ಯದೊಂದಿಗೇ, ಪ್ರೀತಿ, ಕೌಟುಂಬಿಕ ಕಥೆಯೂ ಇದೆ. ಇದೆಲ್ಲದರೊಂದಿಗೆ ಭರ್ಜರಿ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಚಿತ್ರ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.

  • ನಟಿ ಹರಿಪ್ರಿಯಾ ಜೊತೆ ಸೃಜನ್ ಲಿಪ್‍ಲಾಕ್

    ನಟಿ ಹರಿಪ್ರಿಯಾ ಜೊತೆ ಸೃಜನ್ ಲಿಪ್‍ಲಾಕ್

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ನಟಿ ಹರಿಪ್ರಿಯಾ ಅವರ ಜೊತೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದಾರೆ.

    ಸೃಜನ್ ಲೋಕೇಶ್ ಹಾಗೂ ಹರಿಪ್ರಿಯಾ ಅವರು ‘ಎಲ್ಲಿದೆ ಇಲ್ಲಿ ತನಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಸೃಜನ್ ಹಾಗೂ ಹರಿಪ್ರಿಯಾ ಕಿಸ್ಸಿಂಗ್ ಸೀನ್ ಮಾಡಿದ್ದಾರೆ.

    ಎಲ್ಲಿದೆ ಇಲ್ಲಿ ತನಕ ಚಿತ್ರದ ಟೈಟಲ್ ಹಾಡು ಭಾನುವಾರ ಬಿಡುಗಡೆ ಆಗಿದೆ. ಇದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಸೃಜನ್ ಹಾಗೂ ಹರಿಪ್ರಿಯಾ ಕಿಸ್ಸಿಂಗ್ ಸೀನ್ ಮಾಡಿರುವುದು ಕಂಡು ಬಂದಿದೆ. ಈ ಹಾಡಿನಲ್ಲಿ ಇಬ್ಬರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

    ಈ ಚಿತ್ರ ತೇಜಸ್ವಿ ಅವರ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕೆ ವೇಣು ಛಾಯಾಗ್ರಹಣ ಹಾಗೂ ಅರ್ಜುನ್ಯ ಜನ್ಯ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಗಿರಿಜಾ ಲೋಕೇಶ್, ಅವಿನಾಶ್, ತಬಲಾನಾಣಿ, ರಾಧಿಕಾ ರಾವ್, ಯಶಸ್ ಸೂರ್ಯ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದ್ದು, ಮುಖ್ಯವಾಗಿ ಸೃಜನ್ ಲೋಕೇಶ್ ಪುತ್ರ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.