Tag: Srirangapatna

  • ಶ್ರೀರಂಗಪಟ್ಟಣ ಜೆಡಿಎಸ್ ಶಾಸಕರನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಕಾರ್ಯಕರ್ತರಿಂದ ತರಾಟೆ: ವಿಡಿಯೋ ವೈರಲ್

    ಶ್ರೀರಂಗಪಟ್ಟಣ ಜೆಡಿಎಸ್ ಶಾಸಕರನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಕಾರ್ಯಕರ್ತರಿಂದ ತರಾಟೆ: ವಿಡಿಯೋ ವೈರಲ್

    ಮಂಡ್ಯ: ಶ್ರೀರಂಗಪಟ್ಟಣ ಮತಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಕಿರಗಂದೂರಿಗೆ ಬರದಂತೆ ಪಕ್ಷದ ಕಾರ್ಯಕರ್ತರೇ ರಸ್ತೆ ಮಧ್ಯದಲ್ಲಿಯೇ ತಡೆದು, ತರಾಟೆಗೆ ತಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್  ಆಗಿದೆ.

    ಇತ್ತೀಚೆಗೆ ಕಿರಗಂದೂರು ಗ್ರಾಮಕ್ಕೆ ಶಾಸಕರು ಅಧಿಕಾರಿಗಳೊಂದಿಗೆ ಭೇಟಿ ನೀಡಲು ಆಗಮಿಸುತ್ತಿದ್ದರು. ತಕ್ಷಣವೇ ಮಾಹಿತಿ ಪಡೆದ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಶಾಸಕರನ್ನು ತಡೆದು, ನೀವು ಬರುವುದನ್ನು ಮೊದಲೇ ಹೇಳಬೇಕಿತ್ತು. ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ನೀವು ಹಣ ನೀಡುವ ಅಗತ್ಯವಿರಲಿಲ್ಲ, ನಮ್ಮ ಸ್ವಂತ ಹಣದಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಸ್ವಾಗತ ಮಾಡಿಕೊಳ್ಳುತ್ತಿದ್ದೇವು. ಕಾರ್ಯಕರ್ತರಿಗೆ ತಿಳಿಸದೇ ದಿಢೀರ್ ಗ್ರಾಮಕ್ಕೆ ಭೇಟಿ ನೀಡಲು ಮುಂದಾದ ನಿಮ್ಮ ನಡೆ ಸೂಕ್ತವಲ್ಲ ಎಂದು ದೂರಿದರು.

    ಪಕ್ಷದ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಹೀಗೆ ನಡೆದುಕೊಂಡಿದ್ದರಿಂದ ರೋಸಿ ಹೋದ ಶಾಸಕರು, ಇವತ್ತು ನಿಮ್ಮ ಯೋಗ್ಯತೆಯನ್ನು ತೋರಿಸಿದ್ದೀರಿ. ಇನ್ನು ಮುಂದೆ ನಾನು ಯಾವತ್ತೂ ನಿಮಗೆ ಹತ್ತಿರ ಆಗಿರಲು ಸಾಧ್ಯತೆ ಇಲ್ಲ. ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಕ್ಕೆ ಬರುವಾಗ ಹೀಗೆ ನಡೆದುಕೊಂಡಿದ್ದು ಸೂಕ್ತವಲ್ಲ ಎಂದು ಕಾರು ಹತ್ತಿ ಕುಳಿತ ಶಾಸಕರು, ನಾನು ರಾಜಕೀಯ ನೋಡಿರುವೆ, ನಿಮಗೆ ಹೆದರಿ ಹೋಗುತ್ತಿಲ್ಲ. ನೀವು ನನ್ನ ಅಡ್ಡಗಟ್ಟಿ ಮರ್ಯಾದೆ ಕಳೆಯುವ ಕೆಲಸ ಮಾಡಿದ್ದೀರಿ ಎಂದು  ಹೇಳಿ ಜಾಗ ಖಾಲಿ ಮಾಡಿದರು.

    ಕಾರು ಏರಿ ಶಾಸಕರು ಜಾಗ ಖಾಲಿ ಮಾಡುತ್ತಿದ್ದಂತೆ, ನಮ್ಮ ಗ್ರಾಮದ ಅಭಿವೃದ್ಧಿಯನ್ನು ಹೇಗೆ ಮಾಡಿಕೊಳ್ಳಬೇಕು ಅಂತಾ ಗೊತ್ತು. ಹೋಗಿ, ಹೋಗಿ ಎಂದು ಕಾರ್ಯಕರ್ತರು ವ್ಯಂಗ್ಯವಾಡಿದರು. ಶಾಸಕರು ಹಾಗೂ ಕಾರ್ಯಕರ್ತರ ವಾಗ್ದಾಳಿಯನ್ನು ಸ್ಥಳಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

    https://youtu.be/oNt9qzy9Bso

  • ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ಮಂಡ್ಯ: ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದೇವಸ್ಥಾನದಿಂದ ಹೊರಬರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರೂ ಸ್ವಾಮೀಜಿಯೊಬ್ಬರು ಇದಕ್ಕೆ ಒಪ್ಪದೇ ಅಲ್ಲಿಯೇ ಕುಳಿತಿದ್ದಾರೆ.

    ಕಾವೇರಿ ನದಿ ಪಾತ್ರದ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ದೇವಸ್ಥಾನ ಈಗಾಗಲೇ ನದಿ ಪ್ರವಾಹದಿಂದ ಅರ್ಧ ಮುಳುಗಡೆಯಾಗಿದೆ. ಮತ್ತೇ ಕೆಆರ್‌ಎಸ್‌ ಡ್ಯಾಂ ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ದೇವಸ್ಥಾನವೇ ಮುಳುಗಡೆ ಆಗುತ್ತದೆ. ಹೀಗಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳಕ್ಕೆ ಭೇಟಿ ನೀಡಿ, ಸ್ವಾಮೀಜಿಗಳಿಗೆ ಕರೆ ಮಾಡಿ ದೇವಸ್ಥಾನ ಬಿಟ್ಟು ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

    ನೀರು ಬಂದರೂ ನಮಗೆನೂ ಆಗಲ್ಲ. ನಾನು ಗೌತಮ ಕ್ಷೇತ್ರದಿಂದ ಹೊರ ಬರುವುದಿಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ ಮಂಜುಶ್ರೀ ಅವರು, ನೀರಿನ ಮಟ್ಟ ಹೆಚ್ಚಾಗಿ ನೀವು ತೊಂದರೆಗೆ ಒಳಗಾಗುತ್ತಿದ್ದಂತೆ ತಿಳಿಸಿ, ನಾವು ನಿಮ್ಮನ್ನು ಬೋಟ್‍ನಲ್ಲಿ ಕರೆದು ತರುತ್ತೇವೆ ಎಂದು ಸಲಹೆ ನೀಡಿದ್ದಾರೆ.

    ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಯಾವುದೇ ಅವಘಡ ಸಂಭವಿಸದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದಾರೆ.

  • ಮಂಡ್ಯ ಶಾಸಕರಿಗೆ ಉತ್ತಮ ಖಾತೆ ನೀಡಿದ್ದಾರೆ – ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕರ ಟಾಂಗ್

    ಮಂಡ್ಯ ಶಾಸಕರಿಗೆ ಉತ್ತಮ ಖಾತೆ ನೀಡಿದ್ದಾರೆ – ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕರ ಟಾಂಗ್

    ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನ ಸೇವೆ ಮಾಡಲು ಮಂಡ್ಯ ಜಿಲ್ಲೆಯ ಶಾಸಕರಿಗೆ ಎರಡು ಉತ್ತಮ ಖಾತೆ ನೀಡಿದ್ದಾರೆ ಎಂದು ಹೇಳುವ ಮೂಲಕ, ಸಣ್ಣನೀರಾವರಿ ಖಾತೆ ವಿರೋಧಿಸಿ ಸಚಿವ ಪುಟ್ಟರಾಜು ಪರ ಪ್ರತಿಭಟನೆ ಮಾಡಿದ ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಇಂದು ಶ್ರೀರಂಗಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ತಮ್ಮ ನೂತನ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲೆಯ ಏಳೂ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ದೇವೇಗೌಡರ ಸಂಬಂಧಿ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮತ್ತು ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ನಡುವೆ ನಡೆಯುತ್ತಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಂಬಂಧಿಸಿದ ಹಗ್ಗ ಜಗ್ಗಾಟದ ಬಗ್ಗೆ ಮಾತನಾಡಿ, ಜಿಲ್ಲೆಯ ನಾಯಕರಲ್ಲಿ ಯಾವ ಗೊಂದಲವೂ ಇಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ತಿಳಿಸಿದರು.

    ಇದೇ ವೇಳೆ ಪುಟ್ಟರಾಜುಗೆ ನೀಡಿರುವ ಖಾತೆ ಒಳ್ಳೆಯ ಖಾತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡುತ್ತಾರೆ ಎಂದು ಇದೇ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

  • ರಾಹುಲ್ ಗಾಂಧಿ ಸ್ವಾಗತಕ್ಕೆ ಹಾಕಲಾಗುತ್ತಿದ್ದ ನೈಟ್ರೋಜನ್ ಬಲೂನ್ ಬ್ಲಾಸ್ಟ್-8 ಮಕ್ಕಳಿಗೆ ಗಾಯ

    ರಾಹುಲ್ ಗಾಂಧಿ ಸ್ವಾಗತಕ್ಕೆ ಹಾಕಲಾಗುತ್ತಿದ್ದ ನೈಟ್ರೋಜನ್ ಬಲೂನ್ ಬ್ಲಾಸ್ಟ್-8 ಮಕ್ಕಳಿಗೆ ಗಾಯ

    ಮಂಡ್ಯ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಾಗತಕ್ಕೆ ಹಾಕಲಾಗುತ್ತಿದ್ದ ನೈಟ್ರೋಜನ್ ಬಲೂನ್ ಬ್ಲಾಸ್ಟ್ ಆಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ, ಸಂತೆ ಮೈದಾನದ ಬಳಿ ನಡೆದಿದೆ.

    ನೈಟ್ರೋಜನ್ ಬಲೂನ್ ಹಾಕುತ್ತಿದ್ದನ್ನು ನೋಡುತ್ತಿದ್ದ 8 ಮಕ್ಕಳು ಗಾಯಗೊಂಡಿದ್ದಾರೆ. 8 ಮಕ್ಕಳಲ್ಲಿ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಅಂತಾ ಹೇಳಲಾಗುತ್ತಿದೆ. ಘಟನೆ ಬಳಿಕ ಕೂಡಲೇ ಗಾಯಗೊಂಡ ಮಕ್ಕಳನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ನಾಳೆಯಿಂದ ರಾಹುಲ್ ಗಾಂಧಿ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಕ್ಕಾಗಿ ನೈಟ್ರೋಜನ್ ಬಲೂನ್ ಹಾಕಲಾಗುತ್ತಿತ್ತು. ಬಲೂನ್ ಗೆ ಗಾಳಿ ತುಂಬುವಾಗ ಅವಘಢ ಸಂಭವಿಸಿದೆ. ಶ್ರೀರಂಗ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕ್ರೇನ್ ಮೂಲಕ ಸಚಿವ ಶಿವಕುಮಾರ್ ಗೆ 300 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನ!

    ಕ್ರೇನ್ ಮೂಲಕ ಸಚಿವ ಶಿವಕುಮಾರ್ ಗೆ 300 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನ!

    ಮಂಡ್ಯ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೂರಾರು ಸೇಬು ಹಣ್ಣುಗಳುವುಳ್ಳ ಬೃಹತ್ ಹಾರವನ್ನು ಹಾಕಿ ಸನ್ಮಾನಿಸಲಾಗಿದೆ.

    ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಂಡವಾಳು ಸಚ್ಚಿದಾನಂದ್ ಅವರು ಈ ಹಾರವನ್ನು ಹಾಕಿಸಿದ್ದಾರೆ. ಕ್ರೇನ್ ಮೂಲಕ 300 ಕೆ.ಜಿ. ತೂಕವುಳ್ಳ ಸೇಬಿನ ಹಾರ ಹಾಕುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಸೇಬನ್ನು ಕಿತ್ತು ತಿಂದು ಜನರತ್ತ ಸಂತೋಷದಿಂದ ಕೈ ಬೀಸಿದರು. ಸೇಬಿನ ಹಾರಕ್ಕೆ ಬರೋಬ್ಬರಿ 1 ಲಕ್ಷದ 60 ಸಾವಿರ ರೂ. ಖರ್ಚಾಗಿದೆ ಅಂತಾ ತಿಳಿದು ಬಂದಿದೆ.

    ಕ್ಷೇತ್ರದಲ್ಲಿನ ನಾಯಕರ ಬಂಡಾಯ ಶಮನ ಮಾಡಲು ಸಚಿವರು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿರುವ ಸಚ್ಚಿದಾನಂದ್ ಅವರು ಅದ್ಧೂರಿ ಸ್ವಾಗತದ ಮೂಲಕ ಸಚಿವರನ್ನು ಓಲೈಕೆಗೆ ಮುಂದಾಗಿದ್ದಾರೆ. ಸುಮಾರು 10 ಕಿ.ಮೀ.ವರೆಗೆ ನಡೆದ ಮೆರವಣಿಗೆಯಲ್ಲಿ ಕ್ರೇನ್ ಮೂಲಕ ಹೂ ಮಳೆ ಸುರಿಸುವ ಮೂಲಕ ಸಚ್ಚಿದಾನಂದ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ರು.

    ಬೃಹತ್ ಮತ್ತು ವಿಭಿನ್ನ ಹಾರ ಹಾಕಿದ್ದಕ್ಕೆ ಪರ-ವಿರೋಧಗಳು ಚರ್ಚೆ ಆಗ್ತಿವೆ. ಹಣವುಳ್ಳವರ ರಾಜಕೀಯ ಅಂತಾ ಕೆಲವರು ಟೀಕಿಸಿದ್ರೆ, ಇನ್ನು ಕೆಲವರು ಅಭಿಮಾನದ ಹಾರ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಹಾರ ಹಾಕಿದ ನಂತರ ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ಸೇಬು ಹಣ್ಣಿಗಾಗಿ ಕಿತ್ತಾಡಿದ ಘಟನೆಯೂ ನಡೆಯಿತು.

  • ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ಮಂಡ್ಯ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಕಿರಂಗೂರು ವೃತ್ತದ ಬಳಿ ಅಪಘಾತ ನಡೆದಿದ್ದು, ನೀಲನಹಳ್ಳಿ ಗ್ರಾಮದ 23 ವರ್ಷದ ಯುವಕ ಅಭಿಷೇಕ್ ಮೃತಪಟ್ಟಿದ್ದಾರೆ. ರಸ್ತೆ ಬದಿಯ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನೊಳಗಿದ್ದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಮಿಷಾಂಬ ದೇವಸ್ಥಾನದ ಬಳಿ ಮಾಂಗಲ್ಯ ಸರ ಕದಿಯಲೆತ್ನಿಸಿದ ಕಳ್ಳನನ್ನು ಹಿಡಿದ ಮಹಿಳೆ

    ನಿಮಿಷಾಂಬ ದೇವಸ್ಥಾನದ ಬಳಿ ಮಾಂಗಲ್ಯ ಸರ ಕದಿಯಲೆತ್ನಿಸಿದ ಕಳ್ಳನನ್ನು ಹಿಡಿದ ಮಹಿಳೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾದ ಸರಗಳ್ಳನನ್ನ ಆ ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬೆಂಗಳೂರಿನ ರಾಜಾಜಿನಗರದ ನಿವಾಸಿ ನವ್ಯಾ ಎಂಬವರು ಕಳ್ಳನನ್ನು ಹಿಡಿದ ದಿಟ್ಟ ಮಹಿಳೆ. ಪಾಂಡವಪುರ ತಾಲೂಕಿನ ಸಣಬ ಗ್ರಾಮದ ರಾಜು ಎಂಬಾತ ಬಂಧಿತ ಆರೋಪಿ. ಇಂದು ನವ್ಯಾ ಅವರು ನಿಮಿಷಾಂಬ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ರಾಜು ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದನು. ಈ ವೇಳೆ ಎಚ್ಚೆತ್ತ ನವ್ಯಾ ಕಳ್ಳ ರಾಜುನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ರಾಜುನನ್ನು ಹಿಡಿಯಲು ಸಹಕರಿಸಿದ್ದಾರೆ.

    ನಂತರ ಆರೋಪಿ ರಾಜುನನ್ನು ಶ್ರೀರಂಗಪಟ್ಟಣ ಪೊಲೀಸರ ವಶಕ್ಕೆ ನೀಡಲಾಗಿದೆ.

     

  • ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಮಂಡ್ಯ: ಕಾವೇರಿ ಕೊಳ್ಳದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಶ್ರೀರಂಗ ಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ.

    ಈಗ 1262 ಕ್ಯೂಸೆಕ್ ಒಳಹರಿವು ಇದ್ದು, 1076 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ 67.90 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

     

  • ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ

    ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ

    ಮಂಡ್ಯ: ತಂದೆಯಿಂದಲೇ ಹೆಣ್ಣು ಮಗು ಮಾರಾಟಕ್ಕೆ ಯತ್ನ ನಡೆದಿರುವ ಘಟನೆ ಜಿಲ್ಲೆಯ  ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ವಿನೋದ್ ಎಂಬಾತ ತನ್ನ ಹೆಣ್ಣು ಮಗು ಅಂಜಲಿ (3)ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತ ಶಂಕೆ ವ್ಯಕ್ತಪಡಿಸಲಾಗಿದೆ.

    ಅಲ್ಲಿಯ ಸ್ಥಳಿಯರು ಹೆಣ್ಣು ಮಗುವನ್ನು ರಕ್ಷಣೆ ಮಾಡಿದ್ದಾರೆ. ವಿಚಾರ ತಿಳಿದು ಕೂಡಲೇ ಪೊಲೀಸ್ ಆಗಮಿಸಿ ತಂದೆ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀರೆ ಕೊಡ್ತೀನಿ ಹುಟ್ಟು ಹಬ್ಬಕ್ಕೆ ಬನ್ನಿ ಅಂದ್ರು, ನಂತ್ರ ಕೊಡಲಿಲ್ಲ: ಶಾಸಕರ ಹುಟ್ಟುಹಬ್ಬದಲ್ಲಿ ಸೀರೆ ಪಾಲಿಟಿಕ್ಸ್

    ಸೀರೆ ಕೊಡ್ತೀನಿ ಹುಟ್ಟು ಹಬ್ಬಕ್ಕೆ ಬನ್ನಿ ಅಂದ್ರು, ನಂತ್ರ ಕೊಡಲಿಲ್ಲ: ಶಾಸಕರ ಹುಟ್ಟುಹಬ್ಬದಲ್ಲಿ ಸೀರೆ ಪಾಲಿಟಿಕ್ಸ್

    ಮಂಡ್ಯ: ಹುಟ್ಟುಹಬ್ಬದಲ್ಲಿ ಪಾಲ್ಗೊಂಡ್ರೆ ಸೀರೆ ನೀಡೋದಾಗಿ ಟೋಕನ್ ಕೊಟ್ಟು, ನಂತ್ರ ಸೀರೆ ಕೊಡದೇ ವಂಚಿಸಿದ್ದರಿಂದ ಜಿಲ್ಲೆಯ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ಮಹಿಳೆಯರು ಕಿಡಿಕಾರುತ್ತಿದ್ದಾರೆ.

    ಇಂದು ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಶ್ರೀರಂಗಪಟ್ಟಣದಲ್ಲಿ ಆಚರಿಸಿದ್ರು. ರಮೇಶ್‍ಬಾಬು ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಆರೋಗ್ಯ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ರು. ಇವುಗಳ ಜೊತೆಗೆ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಸೀರೆ ವಿತರಿಸುತ್ತೇವೆ ಅಂತಾ ಹೇಳಿ ಟೋಕನ್ ಕೂಡ ನೀಡಲಾಗಿತ್ತು.

    ಟೋಕನ್ ಪಡೆದ ಮಹಿಳೆಯರು ಸೀರೆ ಕೊಡ್ತಾರಲ್ಲ ಅಂತಾ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ರು. ಆದ್ರೆ ಕಾರ್ಯಕ್ರಮ ಆಯೋಜಕರು ಕೆಲವರಿಗಷ್ಟೇ ಸೀರೆ ನೀಡಿ, ನಂತ್ರ ಸೀರೆ ಖಾಲಿಯಾಯ್ತು ಅಂತಾ ಸಬೂಬು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಮಹಿಳೆಯರು ಸೀರೆ ಕೊಡದಿದ್ರೆ ಟೋಕನ್ ಕೊಟ್ಟು ಬಿಸಿಲಲ್ಲಿ ನಮ್ಮನ್ನು ಯಾಕೆ ಕರೆಸಬೇಕಿತ್ತು ಅಂತಾ ಶಾಸಕರ ಅಭಿಮಾನಿಗಳ ವಿರುದ್ಧ ತಮ್ಮ ಕಿಡಿಕಾರಿದ್ದಾರೆ.

    https://www.youtube.com/watch?v=ZVXpXOsgvWI