ಮಂಡ್ಯ: ರಾಜಕೀಯ ವಿರೋಧ ಎಷ್ಟೇ ಇದ್ದರು ಸಹ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ, ನಾನು ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಕಾಮಗಾರಿಗಳನ್ನು ಸುಮಲತಾ ಅಂಬರೀಶ್ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಶುಗರ್ ಕಾರ್ಖಾನೆ ಈ ವರ್ಷ ಆರಂಭವಾಗುತ್ತದೆ. ಪ್ರತಿಯೊಂದು ವಿಷಕ್ಕೂ ವಿರೋಧಗಳು ಇರುತ್ತವೆ. ಇದರ ಬಗ್ಗೆ ತಲೆಕೆಡಿಸಿಕೊಂಡರೇ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾನು ಜನರಿಗೆ ಮಾತು ಕೊಟ್ಟಿರುವ ಪ್ರಕಾರ ಮೈಶುಗರ್ ಕಾರ್ಖಾನೆ ಪುನಾರಂಭವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲು ಒತ್ತಡ ತರುತ್ತಿದ್ದೇನೆ. ಟೆಂಡರ್‍ನಲ್ಲಿ ಸ್ಪಲ್ಪ ವ್ಯತ್ಯಾಸ ಆಗಿದೆ. ಇದು ಸರಿ ಪಡಿಸಿಕೊಂಡು ಕಾರ್ಖಾನೆಯ ಆರಂಭ ಮಾಡಲಾಗುತ್ತದೆ. ಈ ವರ್ಷದಲ್ಲಿ ಮೈಶುಗರ್ ಆರಂಭವಾಗುತ್ತದೆ. ಇದರಿಂದ ರೈತರಿಗೆ ಒಳ್ಳೆಯದು ಆಗಲಿದೆ ಎಂದು ತಿಳಿಸಿದ್ದಾರೆ.
ಮಂಡ್ಯ: ಪೊಲೀಸರ ಮುಂದೆಯೇ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಗೂಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ನಡೆದಿದೆ.
ಅರಕೆರೆ ಗ್ರಾಮದಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಜೆಸಿಬಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. ರಸ್ತೆ ಅಗಲೀಕರಣ ನಡೆಸಕೂಡದು ಎಂದು ಆಗ್ರಹಿಸಿ ಪೊಲೀಸರ ಮುಂದೆಯೇ ಗೂಂಡಾಗಿರಿ ಮಾಡಿದ್ದಾರೆ. ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರು ಮಾಜಿ ಶಾಸಕರಿಗೆ ಸ್ಪಷ್ಟನೆ ನೀಡಿದ್ರೂ ಕೇಳದ ಮಾಜಿ ಶಾಸಕ ಪುಡಿ ರೌಡಿಯಂತೆ ವರ್ತಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಎಸ್‍ಪಿ ಪರಶುರಾಮ್, ಅರಕೆರೆಯಲ್ಲಿ ಇಂದು ರಸ್ತೆ ಅಗಲಿಕರಣ ಕೆಲಸ ನಡೆಯುತ್ತಿತ್ತು. ಅಧಿಕಾರಿಗಳು ಎಲ್ಲರೂ ಸ್ಥಳದಲ್ಲಿದ್ದು ಸಮಾಜಯಿಷಿ ನೀಡಿದ್ರು ಕೆಲವರು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರಿ ಅಧಿಕಾರಿಗಳ ಅನತಿಯಂತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಮಾಜಿ ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯ: ಸದಾ ವಿವಾದ ಮತ್ತು ಗಲಾಟೆಗಳ ಮೂಲಕ ಸುದ್ದಿಯಾಗೋ ತನ್ನನ್ನ ತಾನೇ ಫೈರಿಂಗ್ ಸ್ಟಾರ್ ಅಂತ ಕರೆದುಕೊಳ್ಳುವ ಹುಚ್ಚ ವೆಂಕಟ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾನಸಿಕ ಅಸ್ವಸ್ಥನ ಹಾಗೆ ಓಡಾಡಿರುವ ವಿಡಿಯೋ ವೈರಲ್ ಆಗಿದೆ.
ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಹುಚ್ಚನಂತೆ ಅಲೆದಾಡುತ್ತಿದ್ದ ವೆಂಕಟ್ ನನ್ನು ಸ್ಥಳೀಯರು ಗುರುತಿಸಿದ್ದಾರೆ. ವೆಂಕಟ್ ಬಳಿ ತೆರಳಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಹುಚ್ಚ ವೆಂಕಟ್ ಸ್ಥಳೀಯರಿಗೆ ಬೈದು ಕಿರುಚಾಡಿದ್ದರಿಂದ ಸಾರ್ವಜನಿರು ಹೆದರಿಕೊಂಡು ಆತನಿಂದ ದೂರ ಹೋಗಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಚೆನ್ನೈನಲ್ಲಿ ಬರಿಗಾಲಿನಲ್ಲಿ ಓಡಾಡಿಕೊಂಡಿದ್ದ ಹುಚ್ಚ ವೆಂಕಟ್ ನನ್ನು ಅಲ್ಲಿಯ ಕನ್ನಡಿಗರು ಗುರುತಿಸಿ ಕರ್ನಾಟಕಕ್ಕೆ ಕಳುಹಿಸಿದ್ದರು. ತದನಂತರ ಮಂಡ್ಯದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಸ್ಥಳೀಯರು ಹುಚ್ಚ ವೆಂಕಟ್ ನನ್ನು ಥಳಿಸಿದ್ದರು.
– ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ
– ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ವಿಜ್ಞಾನಿಯಿಂದ ಲೇಖನ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿಯೇ ಬಜೆಟ್‍ನಲ್ಲಿ ನೂರಾರು ಕೋಟಿಯನ್ನು ಮೀಸಲಿಟ್ಟಿದೆ. ಇಂತಹ ಸಂಧರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾದ ಲೀಥಿಯಂ ಲೋಹ ಪತ್ತೆಯಾಗಿದ್ದು, ಭಾರೀ ಸಂಚಲನ ಉಂಟುಮಾಡಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ತಯಾರಿಸಲು ಅತ್ಯವಶ್ಯಕವಾದ ಲೀಥಿಯಂ ಲೋಹ ಭಾರತದಲ್ಲೇ ಪತ್ತೆಯಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನ ಸಂಶೋಧಕ, ಭಾರತೀಯ ವಿಜ್ಞಾನ ಕೇಂದ್ರದ ಗೌರವ ಪ್ರಾಧ್ಯಾಪಕರಾದ ಎನ್.ಮುನಿಚಂದ್ರಯ್ಯ ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ.
‘ಕರೆಂಟ್ ಸೈನ್ಸ್’ ಲೇಖನದ ಪ್ರಕಾರ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಅಲ್ಲಾಪಟ್ಟಣ-ಮರಳಗಾಲ ಗ್ರಾಮಗಳು ಈ ಪ್ರದೇಶಕ್ಕೆ ಹೊಂದಿಕೊಂಡಿವೆ. ಇನ್ನೂ ಇಡೀ ದೇಶದಲ್ಲಿ ಸಿಗದ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆಯಾಗಿರುವುದು ಇದೀಗ ಬಾರಿ ಸಂಚಲನ ಮೂಡಿಸಿದೆ. 2017ನೇ ಸಾಲಿನಲ್ಲಿ 384 ದಶಲಕ್ಷ ಲೀಥಿಯಂ ಬ್ಯಾಟರಿಗಳನ್ನು ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. 2019ರಲ್ಲಿ ಅದರ ಪ್ರಮಾಣ 1.2 ಶತಕೋಟಿಗೆ ಏರಿಕೆಯಾಗಿತ್ತು. ಆದ್ರೆ ಇದೀಗ ಭಾರತದಲ್ಲೇ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ.
ಪತ್ರಿಕೆ ವರದಿ ಪ್ರಕಾರ ಅಲ್ಲಾಪಟ್ಟಣ-ಮರಳಗಾಲ ವ್ಯಾಪ್ತಿಯಲ್ಲಿ 14,100 ಟನ್‍ಗಳಷ್ಟು ಲೀಥಿಯಂ ಸಿಗುವ ಸಾಧ್ಯತೆ ಇದೆ. ಆದರೆ ಚಿಲಿ, ಆಸ್ಟ್ರೇಲಿಯಾ, ಪೋರ್ಚುಗಲ್ ದೇಶಗಳಲ್ಲಿ ಸಿಗುವಂತೆ ಇಲ್ಲಿ ಸಿಗಲಾರದು ಎಂದು ಉಲ್ಲೇಖಿಸಲಾಗಿದೆ. ಚಿಲಿಯಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೀನಾದಲ್ಲಿ 1.7ಮಿಲಿಯನ್ ಟನ್, ಪೋರ್ಚುಗಲ್‍ನಲ್ಲಿ ವಾರ್ಷಿಕವಾಗಿ 60 ಸಾವಿರ ಟನ್‍ಗಳಷ್ಟು ಈ ಲೋಹ ಸಿಗುತ್ತದೆ. ಮಂಡ್ಯದಲ್ಲಿ ಪತ್ತೆಯಾಗಿರುವ ಪ್ರದೇಶದಲ್ಲಿ 14,100 ಟನ್‍ಗಳಷ್ಟೇ ಲೀಥಿಯಂ ಸಿಗುವ ಸಾಧ್ಯತೆಗಳಿದ್ದು, ಲೀಥಿಯಂ ಉತ್ಪಾದಿಸುವ ದೇಶಗಳಿಗೆ ಹೋಲಿಸಿದ್ರೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಮರಳಗಾಲ-ಅಲ್ಲಾಪಟ್ಟಣ ವ್ಯಾಪ್ತಿಯಲ್ಲಿ ಕಳೆದೆರಡು ದಶಕಗಳಿಂದ ಭಾರತ ಸರ್ಕಾರದ ಅಣು ಖನಿಜ ಸಂಶೋಧನಾ ಘಟಕದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಆರಂಭದಲ್ಲಿ ಈ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಸುದ್ದಿಯಾಗಿತ್ತು. ಸಂಶೋಧನೆ ಮುಂದುವರಿದಂತೆ ಇಲ್ಲಿ ಕಾಗೆ ಬಂಗಾರ ಸಿಗಲಾರಂಭಿಸಿತ್ತಾದ್ರು, ಇದೀಗ ಲೀಥಿಯಂ ನಿಕ್ಷೇಪ ಪತ್ತೆಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಅಣು ಖನಿಜ ವಿಜ್ಞಾನಿಗಳನ್ನ ವಿಚಾರಿಸಿದಾಗ. ಲೀಥಿಯಂ ಪತ್ತೆಯಾಗಿರುವುದು ನಿಜ. ಲೋಹ ಪ್ರಮಾಣ ಕಡಿಮೆಯಿದ್ದು ಇಷ್ಟೇ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುವುದಿಲ್ಲ. ಇನ್ನಷ್ಟು ದಿನಗಳಕಾಲ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ.
ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಪ್ರದೇಶದಲ್ಲಿ ಸರ್ಕಾರದಿಂದ ಬಂದ ರೈತರ ಜಮೀನುಗಳಿವೆ. ಮಾಲೀಕರ ಅನುಮತಿ ಪಡೆಯದೇ ಭೂಮಿಯನ್ನು ಅಗೆಯಲಾಗುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ. ಒಟ್ಟಾರೆ ಭಾರತದಲ್ಲೇ ಅಪರೂಪದ ಲೋಹ ಲೀಥಿಯಂ ಪತ್ತೆಯಾದ ವಿಚಾರ ವಿಜ್ಞಾನಿಗಳಿಗೆ ಸಂತಸ ತರಿಸಿದ್ದು. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ಖಚಿತ ಮಾಹಿತಿ ಹೊರಬೀಳಬೇಕಿದೆ.
ಮಂಡ್ಯ: ಡಿಸೆಂಬರ್ 26 ರಂದು ಜಿಲ್ಲೆಯಲ್ಲಿ ಸೂರ್ಯ ಗ್ರಹಣ ಬೆಳಗ್ಗೆ 8.5ಕ್ಕೆ ಕಾಣಿಸಿಕೊಳ್ಳಲಿದ್ದು, ಬೆಳಗ್ಗೆ 9.37ಕ್ಕೆ ಗ್ರಹಣದ ಮಧ್ಯಕಾಲ ಇದ್ದು, ಗ್ರಹಣದ ಮೋಕ್ಷ ಕಾಲ 11.8ಕ್ಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ನಿಮಿಷಾಂಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 4 ಗಂಟೆಯಿಂದ 6 ಗಂಟೆವರೆಗೆ ಸುಪ್ರಭಾತ ಸೇವೆ ಹಾಗೂ ಧನುರ್ಮಾಸದ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಿ ಗ್ರಹಣ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆದು ಶುಚಿತ್ವಗೊಳಿಸಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬಾಗಿಲು ಬೆಳಗ್ಗೆ 4.30 ತೆರೆದು 6 ಗಂಟೆಯ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ. ಗ್ರಹಣ ಮುಗಿದ ಬಳಿಕ 12.30ಕ್ಕೆ ದೇವಸ್ಥಾನದ ಬಾಗಿಲು ತೆರೆದು, ದೇವಸ್ಥಾನವನ್ನು ಶುದ್ಧಿಗೊಳಿಸಿ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇನ್ನೂ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲೂ ಕೂಡ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 4 ಗಂಟೆಯಿಂದ ಧನುರ್ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಲಾಗುತ್ತದೆ. ಬಳಿಕ ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನದ ಶುದ್ಧಿಕರಣಗೊಳಿಸಿ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಲಾಗುತ್ತದೆ.
ಮಂಡ್ಯ: ಕಾವೇರಿ ನದಿಗೆ ಬಿದ್ದಿದ್ದ ಮಗುವನ್ನು ರಕ್ಷಿಸಲು ಹೋಗಿದ್ದ ಯುವಕನು ಕೂಡ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ಕಾವೇರಿ ಸಂಗಮದಲ್ಲಿ ನಡೆದಿದೆ.
ಬೆಂಗಳೂರು ನಿವಾಸಿಗಳಾದ ಸಲೀಂ (23) ಮತ್ತು ಮುನಾನ್ (3) ಮೃತ ದುರ್ದೈವಿಗಳು. ಪ್ರವಾಸಕ್ಕೆಂದು ಬಂದಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಲೀಂ ಕುಟುಂಬ ಸಮೇತ ಪ್ರವಾಸಕ್ಕೆಂದು ಶ್ರೀರಂಗಪಟ್ಟಣದ ಕಾವೇರಿ ಸಂಗಮಕ್ಕೆ ಬಂದಿದ್ದ. ಚಿಕ್ಕ ಮಗು ಮುನಾನ್ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ. ಇದನ್ನು ನೋಡಿದ ಸಲೀಂ ತಕ್ಷಣವೇ ನದಿಗೆ ಹಾರಿ ಮಗುವನ್ನು ರಕ್ಷಿಸಲು ಮುಂದಾಗಿದ್ದ. ದುರಾದೃಷ್ಟವಶಾತ್ ನೀರಿನ ರಭಸಕ್ಕೆ ಸಲೀಂ ಕೂಡ ಕೊಚ್ಚಿ ಹೋಗಿದ್ದಾನೆ.
ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಲೀಂ ಹಾಗೂ ಮುನಾನ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.
ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.
ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.
ಮಂಡ್ಯ: ಅಸ್ಥಿ ವಿಸರ್ಜನೆ ಮಾಡಿಸುವ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾರಮಾರಿ ನಡೆದ ಘಟನೆ ಶ್ರೀರಂಗಪಟ್ಟಣದ ಪಟ್ಟಣಕ್ಕೆ ಸಮೀಪದ ಕಾವೇರಿ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ಅಸ್ಥಿವಿಸರ್ಜನೆ ಮಾಡಿಸುವ ಎರಡು ಗುಂಪಿನ ಯುವಕ ನಡುವೆ ಮೊದಲು ಜಗಳ ಆರಂಭವಾಗಿದೆ. ಬಳಿಕ ಮಚ್ಚಿನಿಂದ ಯುವಕರು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಭಯಭೀತರಾಗಿದ್ದು, ಸ್ಥಳದಲ್ಲಿ ಕೆಲಕಾಲ ಅತಂಕದ ವಾತವರಣ ನಿರ್ಮಾಣವಾಗಿದೆ.
ಶ್ರೀರಂಗಪಟ್ಟಣದ ಕಾವೇರಿ ನದಿಯಯಲ್ಲಿ ಅಸ್ಥಿ ವಿಸರ್ಜಿಸಲು ದೇಶದ ನಾನಾ ಭಾಗಗಳಿಂದ ಆಸ್ತಿಕರು ಆಗಮಿಸುತ್ತಾರೆ. ಹೀಗಾಗಿ ಅಸ್ಥಿ ವಿಸರ್ಜನೆ ಒಂದು ರೀತಿ ಹಣ ಗಳಿಕೆಯ ಮಾರ್ಗವಾಗಿ ಮಾರ್ಪಟ್ಟಿದೆ. ಅಸ್ಥಿ ವಿಸರ್ಜನೆ ಮಾಡಲು ಬರುವವರನ್ನು ತಮ್ಮತ್ತ ಸೆಳೆಯಲು ಕ್ರಿಯೆ ವಿಧಿವಿಧಾನ ನಡೆಸುವವರ ನಡುವೆಯೇ ಪೈಪೋಟಿ ನಡೆಯುತ್ತಿದೆ. ಈ ರೀತಿಯ ಪೈಪೋಟಿಯ ವೇಳೆ ಅಸ್ಥಿ ವಿಸರ್ಜನೆ ಮಾಡಲು ಬಂದವರನ್ನು ತಮ್ಮತ್ತ ಸೆಳೆಯಲು ಎರಡು ಗುಂಪುಗಳ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ.
ಈ ಘಟನೆ ಮಂಗಳವಾರ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಸ್ಥಳೀಯ ಪೊಲೀಸರು ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
124 ಮಿ.ಮಿ.ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನು 4 ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಕಡೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ:
ಕಾವೇರಿ ಕಣಿವೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಒಂದು ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಮಧ್ಯಾಹ್ನ ವೇಳೆಗೆ 1,20,000 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡುವ ಸಾಧ್ಯತೆ ಇದ್ದು, ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಬಸವರಾಜೇಗೌಡ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗದೆ ಮಂಡ್ಯ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಹೊರಹರಿವಿನ ಪ್ರಮಾಣದಲ್ಲೂ ಹೆಚ್ಚಾಗಿದೆ. 1994ರ ಜುಲೈ ತಿಂಗಳಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ 1,64,603 ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಆದರೆ ಆ ನಂತರ ಕೆಆರ್‌ಎಸ್ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ಗಡಿ ದಾಟಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಾಡಿದ ಭೀಕರ ಬರಗಾಲದಿಂದ ಕೆಆರ್‍ಎಸ್ ಅಣೆಕಟ್ಟೆಯ ಹೊರಹರಿವಿನ ಪ್ರಮಾಣ ಇಳಿಮುಖವಾಗುತ್ತಾ ಹೋಗಿತ್ತು.
ಇದೀಗ ಮತ್ತೆ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೊರಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಇದರಿಂದಾಗಿ ನದಿ ಪಾತ್ರದ ಜಮೀನಿಗೆ ನೀರು ನುಗ್ಗಿದೆ. ನದಿ ಬಳಿಯಿರುವ ಮಂಟಪಗಳು ನೀರಿನಿಂದ ಆವೃತ್ತವಾಗಿದೆ. ಶ್ರೀರಂಗಪಟ್ಟಣ ನಿಮಿಷಾಂಭ ದೇವಾಲಯದ ಬಳಿಯಿರುವ ಬಟ್ಟೆ ಬದಲಿಸುವ ಸ್ಥಳ ನೀರಿನಿಂದ ಆವೃತ್ತವಾಗಿದೆ. ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಆಗಿದೆ. ಅದೇ ರೀತಿ ಸಾಯಿ ಮಂದಿರ ಒಳಗೂ ಕೂಡ ನೀರು ನುಗ್ಗಿದೆ.
ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಜಲಾಶಯಕ್ಕೆ 29,363 ಕ್ಯೂಸೆಕ್ ಒಳ ಹರಿವು ಇದೆ. ಈಗ ನದಿ, ನಾಲೆಗೆ ಸೇರಿ ಒಟ್ಟು 33,325 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ ಸಲೂನ್‍ಗಳು, ಹೋಟೆಲ್, ಮಳಿಗೆಗಳು ಈಗಾಗಲೇ ತೆರೆದುಕೊಂಡಿವೆ. ಈಗ ಶ್ರೀರಂಗಪಟ್ಟಣದ ಕೋಟೆ ಬೀದಿಯಲ್ಲಿ ಟೀ ಸ್ಟಾಲ್ ಕೂಡ ಆರಂಭವಾಗಿದೆ.
ಹೌದು, ಶ್ರೀರಂಗಪಟ್ಟಣದಲ್ಲಿ ರಾತ್ರೋರಾತ್ರಿ ದರ್ಶನ್ ಅವರ ಹೆಸರಿನ ಟೀ ಅಂಗಡಿ ತೆರೆದುಕೊಂಡಿದೆ. ಒಂದೇ ಒಂದು ವಿಶೇಷವೆಂದರೆ, ಇದು ಚಿತ್ರೀಕರಣಕ್ಕಾಗಿ ನಿರ್ಮಿಸಿರೋ ಅಂಗಡಿಯಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸುತ್ತಿರುವ `ಟಕ್ಕರ್’ ಸಿನಿಮಾಗಾಗಿ ಈ ಸೆಟ್ ಅನ್ನು ನಿರ್ಮಿಸಿದ್ದಾರೆ. ನಾಗೇಶ್ ಕೋಗಿಲು ಅವರ ಎಸ್.ಎಲ್.ಎನ್ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಮಾತಿನ ಭಾಗ ಬಹುತೇಕ ಮುಕ್ತಾಯವಾಗಿದೆ. ಮೈಸೂರಿನಲ್ಲಿ ಕಳೆದ ಇಪ್ಪತ್ತೈದು ದಿನಗಳಿಂದ ಬೀಡುಬಿಟ್ಟಿದ್ದ ಟಕ್ಕರ್ ತಂಡ ಇಂದು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮುಗಿಸಿ ನೇರವಾಗಿ ಬೆಂಗಳೂರಿಗೆ ವಾಪಸ್ಸಾಗಲಿದೆ.
ಕಲಾನಿರ್ದೇಶಕರಾದ ರತನ್ ಮತ್ತು ಬಿಜು ಸೇರಿ ನಿರ್ಮಿಸಿರುವ ಈ ಟೀ ಸ್ಟಾಲ್ ಸೆಟ್ ಪರ್ಮನೆಂಟಾಗೇ ಉಳಿದರೂ ಅಚ್ಚರಿಯಿಲ್ಲ. ಯಾಕೆಂದರೆ ಹೇಳಿಕೇಳಿ ಶ್ರೀರಂಗಪಟ್ಟಣದಲ್ಲಿ ದರ್ಶನ್ ಅವರ ಪರಮ ಅಭಿಮಾನಿಗಳಿದ್ದಾರೆ. ಚಿತ್ರೀಕರಣಕ್ಕೆಂದು ನಿರ್ಮಿಸಿದ ಈ ಟೀ ಸ್ಟಾಲ್ ಅನ್ನು ಕೆಡವಲು ಅವರು ಬಿಡಬೇಕಲ್ಲಾ? ಯಾರಾದರೂ ವ್ಯಾಪಾರ ಮಾಡುವ ಮನಸ್ಸಿದ್ದರೆ ಈಗಲೇ ಹೋಗಿ ಟೀ ಅಂಗಡಿ ಆರಂಭಿಸಬಹುದು.