Tag: Srinivasa Gowda

  • ದೇವೇಗೌಡರಿಗೆ ಮಕ್ಕಳ ಮೇಲೆ ನಂಬಿಕೆ ಇಲ್ಲ :  ಶ್ರೀನಿವಾಸಗೌಡ

    ದೇವೇಗೌಡರಿಗೆ ಮಕ್ಕಳ ಮೇಲೆ ನಂಬಿಕೆ ಇಲ್ಲ : ಶ್ರೀನಿವಾಸಗೌಡ

    ಕೋಲಾರ : ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿದೆ ಹಾಗಾಗಿ ಸ್ವತಃ ತಾವೇ ರಾಜ್ಯದಲ್ಲಿ ಸಂಚಾರ ಮಾಡುವುದಾಗಿ ಹೇಳಿದ್ದಾರೆ ಮತ್ತು ಮೇಕೆದಾಟು ಯೋಜನೆ ಕಾಂಗ್ರೆಸ್ ಅವರದ್ದೇ ಜೆಡಿಎಸ್‍ನವರು ಏನೇನೋ ಹೇಳುತ್ತಾರೆ ಎಂದು ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ದಾರೆ.

    ಕೋಲಾರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‍ಸಿ ಚುನಾವಣೆಯಲ್ಲಿ ಹಾಸನದಲ್ಲಿ ಒಂದೇ ಒಂದು ಸ್ಥಾನ ಗೆದ್ದಿರುವ ಜೆಡಿಎಸ್‍ನವರು ಮುಂದೆ ರಾಜ್ಯದಲ್ಲಿ 132 ಸ್ಥಾನ ಗೆಲ್ಲುತ್ತಾರೆ. ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿರುವುದರಿಂದ, ದೇವೇಗೌಡರೆ ರಾಜ್ಯದಲ್ಲಿ ಸಂಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಸಮ್ಮಿಶ್ರ ಸರ್ಕಾರ ಇದ್ದಾಗ ಕುಣಿಲಾರದೆ ನೆಲ ಡೊಂಕು ಎನ್ನುವಂತೆ ಆಡಳಿತ ಮಾಡಿದ್ದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಮನ್ನಣೆ ಹಾಕುತ್ತಾರೆ ಎಂದು ಜೆಡಿಎಸ್ ವಿರುದ್ಧ ಮಾತಿನ ಸಮರ ಸಾರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು

    ಇದೇ ವೇಳೆ ಮೇಕೆದಾಟು ವಿಚಾರ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರು ಒಳ್ಳೆಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಮೇಕೆದಾಟು ಯೋಜನೆ ಕಾಂಗ್ರೆಸ್‍ನಿಂದಲೇ ಆಗಿರುವುದು. ಜೆಡಿಎಸ್‍ನವರು ಏನೇನೊ ಹೇಳಿಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಆದ್ಯತೆ ಕೊಡುವ ಅಗತ್ಯವಿಲ್ಲ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ತಗೆದುಕೊಳ್ಳುತ್ತೆ: ಭಗವಂತ್ ಖೂಬಾ

  • ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

    ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್

    – ವಿಧಾನಸೌಧದಲ್ಲಿ ಸಿಎಂ ಸನ್ಮಾನ
    – ಅರ್ಧ ಗಂಟೆ ತಡವಾಗಿ ಬಂತು 3 ಲಕ್ಷದ ಚೆಕ್

    ಬೆಂಗಳೂರು: ಕಂಬಳ ವೀರ ಶ್ರೀನಿವಾಸ್‍ಗೌಡರನ್ನು ಕೆಲ ಸಚಿವರು ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡ್ರಾ ಎನ್ನುವ ಪ್ರಶ್ನೆ ಎದ್ದಿದೆ. ಇವತ್ತು ಮಂಗಳೂರಿನ ಶ್ರೀನಿವಾಸ್‍ಗೌಡರನ್ನು ವಿಧಾನಸೌಧಕ್ಕೆ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಸನ್ಮಾನ ಮಾಡಿದರು.

    ಸನ್ಮಾನದ ಬಳಿಕ ಚೆಕ್ ವಿತರಿಸುವಂತೆ ಸೂಚಿಸಿ ಸಿಎಂ ಅಲ್ಲಿಂದ ನಿರ್ಗಮಿಸಿದರು. ಆದರೆ ಚೆಕ್ ಬರುವುದು ತಡವಾದ ಕಾರಣ ಶ್ರೀನಿವಾಸ್ ಗೌಡರಿಗೆ ಖಾಲಿ ಕವರ್ ನೀಡಿ ಸಚಿವರಾದ ಸಿಟಿ ರವಿ ಮತ್ತು ಶಿವರಾಮ್ ಹೆಬ್ಬಾರ್ ಪೋಸ್ ನೀಡಿದರು.

    ಇದು ಖಾಲಿ ಕವರ್ ಅಂತಾ ಕೈ ಸನ್ನೆಯಲ್ಲೇ ಸಿಟಿ ರವಿ ತಿಳಿಸುವ ಪ್ರಯತ್ನ ಮಾಡಿದರು. ಅರ್ಧಗಂಟೆ ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರೀನಿವಾಸ್ ಗೌಡರಿಗೆ 3 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು. ಇದನ್ನೂ ಓದಿ: ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಈಗ ಹೋಗಲ್ಲ: ಕಂಬಳ ಸ್ಪರ್ಧೆಗಳು ಇರುವ ಕಾರಣ ಸದ್ಯಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ತೆರಳದೇ ಇರಲು ಶ್ರೀನಿವಾಸ್‍ಗೌಡ ತೀರ್ಮಾನಿಸಿದ್ದಾರೆ. ನಂಗೆ ಕಂಬಳದ ಗದ್ದೆಯೇ ಇಷ್ಟ ಎಂದಿದ್ದಾರೆ.

    https://twitter.com/CMofKarnataka/status/1229369073038848000

    ಈ ಮೊದಲೇ ನಾನು ಕಂಬಳದಲ್ಲಿ ಭಾಗವಹಿಸುತ್ತೇನೆ ಎಂದು ಕೋಣದ ಯಜಮಾನರಿಗೆ ಮಾತು ನೀಡಿದ್ದೇನೆ. ಈ ಋತುವಿನ ಎರಡು ಕಂಬಳ ಬಾಕಿಯಿದೆ. ಈ ಸಂಬಂಧ ಈಗಾಗಲೇ ನಾನು ಒಪ್ಪಂದ ಮಾಡಿಕೊಂಡಿದ್ದೇನೆ. ಕಂಬಳದ ಋತು ಮುಗಿದ ಬಳಿಕ ಸಾಯ್ ಮೌಲ್ಯಮಾಪನಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.

    ವೇಣೂರು- ಪೆಂರ್ಬುಡ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳದಲ್ಲೂ ಶ್ರೀನಿವಾಸ ಗೌಡ ಅವರ ಮೂರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಗೌಡರು ಗೆದ್ದ ಪದಕಗಳ ಸಂಖ್ಯೆ 157ಕ್ಕೆ ಏರಿಕೆಯಾಗಿದೆ.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರು ಕನ್ನಡದಲ್ಲಿ ಟ್ವೀಟ್ ಮಾಡಿ,”ಶ್ರೀನಿವಾಸರ ಪ್ರತಿಭೆಯನ್ನು ಗುರುತಿಸಿ, ಒಲಿಂಪಿಕ್ಸ್ ಗೆ ಅವರ ಕೌಶಲವನ್ನು ಅಣಿಗೊಳಿಸಲು ತರಬೇತಿ ನೀಡುವುದಾಗಿ ತಿಳಿಸಿರುವ ಕೇಂದ್ರ ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ಅವರಿಗೆ ನನ್ನ ಅಭಿನಂದನೆಗಳು. ಕಂಬಳ ಸ್ಪರ್ಧೆಯ ವೇಳೆ ಅಪರೂಪದ ಸಾಧನೆ ಮಾಡಿ, ಉಸೇನ್ ಬೋಲ್ಟ್ ನೊಂದಿಗೆ ಹೋಲಿಸಲ್ಪಡುತ್ತಿರುವ ಕರ್ನಾಟಕದ ಶ್ರೀನಿವಾಸ ಗೌಡ ಕೀರ್ತಿ ಪಡೆದಿದ್ದಾರೆ. ದೇಶದಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿದ್ದು, ಅವರ ಪೂರ್ಣ ಸಾಮರ್ಥ್ಯದ  ಸಾಕಾರಕ್ಕಾಗಿ ಅದನ್ನು ತಿಳಿಯುವ, ಮನ್ನಣೆ ನೀಡುವ, ಗೌರವಿಸುವ ಮತ್ತು ಪೋಷಿಸುವ  ಅಗತ್ಯವಿದೆ” ಎಂದು ಬರೆದು ಶ್ಲಾಘಿಸಿದ್ದರು.

    ಶ್ರೀನಿವಾಸ ಗೌಡ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ಮೂಡುಬಿದ್ರೆಯ ಮಿಜಾರಿನ ಅಶ್ವತ್ಥಪುರದ ನಿವಾಸಿಯಾಗಿರುವ ಶ್ರೀನಿವಾಸ ಗೌಡ, ಪರಿಶಿಷ್ಟ ವರ್ಗಕ್ಕೆ ಸೇರಿದ ಕುಡುಂಬಿ ಜನಾಂಗದ ವ್ಯಕ್ತಿ. ಆದರೆ,ಕಂಬಳದಲ್ಲಿ ಮಾಡಿದ ಸಾಧನೆ ಮಾತ್ರ ಶ್ರೀನಿವಾಸ ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ. ಅತಿ ವೇಗದ ಓಟದ ದಾಖಲೆಯ ಉಸೇನ್ ಬೋಲ್ಟ್ ಮೀರಿಸುವ ಸಾಧನೆ ಮಾಡಿದ್ದಾಗಿ ಹೋಲಿಸಲಾಗುತ್ತಿದೆ.ಇಂಥ ಖ್ಯಾತಿ ಬಂದಿದ್ದರೂ, ಶ್ರೀನಿವಾಸ ಮಾತ್ರ ಎಂದಿನಂತೇ ಕಂಬಳದಲ್ಲಿತೊಡಗಿಸಿಕೊಂಡಿದ್ದಾರೆ. ಕಂಬಳ ಬಿಟ್ಟರೆ ಕಟ್ಟಡ ಕೆಲಸದ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.

    ಶ್ರೀನಿವಾಸ ಗೌಡರ ಸಾಧನೆ ವಿಶ್ವದ ಗಮನ ಸೆಳೆದಿದ್ದರೂ, ಪದಕದ ಬೇಟೆ ನಿಂತಿಲ್ಲ. ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಮೂರು ವಿಭಾಗದಲ್ಲಿ ಮತ್ತೆ ಮೂರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಬಾರಿಯ ಕಂಬಳದ ಋತುವಿನಲ್ಲಿ ಸತತವಾಗಿ ಚಿನ್ನದ ಪದಕ ಗೆಲ್ಲುತ್ತಾ ಬಂದು ದಾಖಲೆ ಮಾಡಿದ್ದಾರೆ. ಈ ಬಾರಿ ಇನ್ನೆರಡು ಕಂಬಳ ಮಾತ್ರ ಉಳಿದಿದ್ದು, ನಾಲ್ಕು ಕೋಣಗಳ ಜೊತೆ ಓಡುವ ಶ್ರೀನಿವಾಸ ಗೌಡ ಚಿನ್ನಕ್ಕೆ ಲಗ್ಗೆಯಿಟ್ಟು ಹೊಸ ದಾಖಲೆ ನಿರ್ಮಿಸುವ ಇರಾದೆಯಲ್ಲಿದ್ದಾರೆ.

  • ಮತ್ತೆ ಚಿನ್ನದ ಪದಕ ಬಾಚಿದ ಕಂಬಳದ ಉಸೇನ್ ಬೋಲ್ಟ್

    ಮತ್ತೆ ಚಿನ್ನದ ಪದಕ ಬಾಚಿದ ಕಂಬಳದ ಉಸೇನ್ ಬೋಲ್ಟ್

    – ಸಿಎಂ ಯಡಿಯೂರಪ್ಪರಿಂದ ಸನ್ಮಾನ
    – ಟ್ರ್ಯಾಕ್‍ನಲ್ಲಿ ಓಡಲ್ಲ, ಕಂಬಳದಲ್ಲೇ ಸಾಧನೆ

    ಮಂಗಳೂರು: ಕರಾವಳಿಯಲ್ಲಿ ಈಗ ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದ ಕಂಬಳ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರದ್ದೇ ಹವಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಮೂರು ಚಿನ್ನವನ್ನು ಉಡಾಯಿಸಿದ ಶ್ರೀನಿವಾಸ್ ಭಾನುವಾರ ಕಮಾಲ್ ಮಾಡಿದರು.

    ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕಂಬಳದಲ್ಲಿ ಶ್ರೀನಿವಾಸನ ಓಟ ನೋಡಲೆಂದೇ ಕಂಬಳ ಅಭಿಮಾನಿಗಳು ಆಗಮಿಸಿದರು. ಅದಕ್ಕೆ ಕಾರಣ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವೇಗವನ್ನ ಹಿಂದಿಕ್ಕಿ ಪ್ರಸಿದ್ಧಿಯಾದ ಬಳಿಕ ಆಡುತ್ತಿರುವ ಮೊದಲನೇ ಕಂಬಳ. ಓಟದ ಬ್ರೇಕ್ ಸಿಕ್ಕಾಗ ಸಿನಿಮಾ ನಟರ ಜೊತೆ ಸೆಲ್ಪಿ ತೆಗೆಸಿಕೊಳ್ಳುವಂತೆ ಜನ ಮುಗಿಬಿದ್ದಿದ್ರು. ಶ್ರೀನಿವಾಸ ನಾಚುತ್ತಲೇ ಸೆಲ್ಫಿಗೆ ಪೋಸ್ ನೀಡುತ್ತಿದ್ರು. ಈ ಮಧ್ಯೆ ಕರಾವಳಿ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಕೋಣಗಳನ್ನು ಮಿಂಚಿನ ವೇಗದಲ್ಲಿ ಓಡಾಡಿಸುತ್ತಿದ್ರೆ ಶಿಳ್ಳೆ, ಚಪ್ಪಾಳೆಗಳ ಅಬ್ಬರವೇ ತುಂಬಿ ಹೋಗುತ್ತಿತ್ತು. ಹೀಗಿರೋವಾಗಲೇ ಆಟದ ಕಣಕ್ಕೆ ಎಂಟ್ರಿ ಕೊಟ್ಟ ಶ್ರೀನಿವಾಸ್ ಭರ್ಜರಿಯಾಗಿ ಓಡಿ ಎಲ್ಲರನ್ನು ರಂಜಿಸಿದ್ರು. ಇದನ್ನೂ ಓದಿ: ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಶ್ರೀನಿವಾಸ್ ಗೌಡ ಅವರ ಈ ರೀತಿಯ ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳೂ ಅವರ ಸಾಧನೆಯನ್ನು ಗುರುತಿಸಿದೆ. ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ನಡೆಸಲಿದ್ದಾರೆ. ಶ್ರೀನಿವಾಸ್ ಅವರು ಕಟ್ಟಡ ಕಾರ್ಮಿಕರಾಗಿರೋದ್ರಿಂದ ಕಾರ್ಮಿಕ ಮತ್ತು ಕ್ರೀಡಾ ಇಲಾಖೆಗಳು ಜಂಟಿಯಾಗಿ ಸನ್ಮಾನ ಏರ್ಪಡಿಸಿಕೊಂಡಿದ್ದು ಎರಡು ಇಲಾಖೆಯ ಸಚಿವರುಗಳು ಭಾಗವಹಿಸಿಲಿದ್ದಾರೆ.

    ದೆಹಲಿಗೆ ಹೋಗಿ ಕೇಂದ್ರ ಕ್ರೀಡಾ ಸಚಿವರ ಅನ್ನು ಭೇಟಿಯಾಗುವ ಬಗ್ಗೆ ಕೂಡ ಇಂದು ಚರ್ಚೆಯಾಗಲಿದೆ. ಆದರೆ ತನಗೆ ಟ್ರ್ಯಾಕ್ ನಲ್ಲಿ ಓಡಲು ಸಾಧ್ಯವಿಲ್ಲ, ನಾನೇನಿದ್ದರೂ ಕಂಬಳ ಗದ್ದೆಯಲ್ಲೇ ಕೋಣಗಳ ಜೊತೆ ಓಡುವವನು. ಹೀಗಾಗಿ ಮುಂದೆಯೂ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ವಿನಯದಿಂದಲೇ ಶ್ರೀನಿವಾಸ ಗೌಡ ಹೇಳುತ್ತಾರೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಶ್ರೀನಿವಾಸ ಗೌಡ ಕಂಬಳದ ಚಿನ್ನದ ಮಗ:
    28 ವರ್ಷ ವಯಸ್ಸಿನ ಶ್ರೀನಿವಾಸ್ ಗೌಡ ಅವರು ತನ್ನ 18ನೇ ವಯಸ್ಸಿನಲ್ಲಿ ಕಂಬಳದ ಓಟಗಾರನಾಗಬೇಕೆಂದು ಬಂದಿದ್ದು, ಅಂದಿನಿಂದ ನಿಷ್ಠೆಯಿಂದ ಕಂಬಳವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಅವರು ಓಡಿಸುವ ಕೋಣಗಳ ಮಾಲಕರಿಗೂ ಶ್ರೀನಿವಾಸ ಎಂದರೆ ಅಚ್ಚುಮೆಚ್ಚು. ಆತ ಕಂಬಳದ ಚಿನ್ನದ ಮಗನಾಗಿರೋದ್ರಿಂದ ಕಂಬಳದಲ್ಲೇ ಮುಂದುವರಿದರೆ ಒಳ್ಳೆಯದು. ಜೊತೆಗೆ ಇನ್ನೂ ಎತ್ತರಕ್ಕೆ ಏರಿ ದೇಶಕ್ಕೆ ಹೆಸರು ತರೋದಾದ್ರೂ ಹೆಮ್ಮೆಯ ವಿಚಾರ ಎಂದು ಶ್ರೀನಿವಾಸ ಓಡಿಸುವ ಕಂಬಳ ಕೋಣದ ಮಾಲಕ ಹರ್ಷವರ್ಧನ್ ಪಡಿವಾಳ್ ಹಾಗೂ ಇರುವೈಲು ಪಣಿಲ ಬಾಡು ಪೂಜಾರಿ ಹೇಳಿದ್ದಾರೆ.

    ಮನೆ ಬಾಗಿಲಿಗೆ ಬಂದ ಅಧಿಕಾರಿಗಳು:
    ಶ್ರೀನಿವಾಸ್ ಗೌಡ ಒಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ. ಹೀಗಾಗಿ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಾಗಿ ಅವರ ಮನೆಗೆ ನಿನ್ನೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪಡೆದುಕೊಂಡರು. ಇಲಾಖೆಯಿಂದ ಸಿಗಬೇಕಾದ ಸವಲತ್ತಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ದೇಶವೇ ಈಗ ಶ್ರೀನಿವಾಸ ಗೌಡರ ಕಡೆ ನೋಡುತ್ತಿದ್ದು ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಓಡುತ್ತಾರಾ ಇಲ್ವಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಒಟ್ಟಿನಲ್ಲಿ ಶ್ರೀನಿವಾಸ ಗೌಡರ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.

  • ಶ್ರೀನಿವಾಸಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ: ಎಸ್.ಆರ್.ವಿಶ್ವನಾಥ್

    ಶ್ರೀನಿವಾಸಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ: ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸಗೌಡರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

    ರಮಡ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿ ಉತ್ತರ ನೀಡದಿರಲು ಕಾರಣ ಬೇರೆ ಇತ್ತು. ವಿಶ್ವಾಸಮತ ಯಾಚನೆಯಾಗುವುದು ಬಹಳ ಮುಖ್ಯವಾಗಿತ್ತು. ಹೀಗಾಗಿ ಸದನದಲ್ಲಿ ಉತ್ತರಿಸಲಿಲ್ಲ. ಈ ಕುರಿತು ಸಭಾದ್ಯಕ್ಷರಿಗೆ ಹಕ್ಕುಚ್ಯುತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ನಾವು ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದೇವೆ ಎಂದು ಸದನದಲ್ಲೇ ಆರೋಪಿಸಿದ್ದಾರೆ. ಈ ಕುರಿತು ಶ್ರೀನಿವಾಸಗೌಡ ವಿರುದ್ಧ ಸೋಮವಾರ ಇಲ್ಲವೆ ಮಂಗಳವಾರ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

    ಪ್ರಕರಣ ರದ್ದಾದ ಮೇಲೂ ಈ ರೀತಿ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ನಾವು ಅವರಿಗೆ ದುಡ್ಡು ಕೊಟ್ಟಿರೋದಕ್ಕೆ ಸಾಕ್ಷಿ ನೀಡಲಿ. ಇಂತಹ ಹೇಳಿಕೆಗಳ ಮೂಲಕ ಕಲಾಪವನ್ನು ಅಡ್ಡದಾರಿಗೆ ಎಳೆಯಲು ಮುಂದಾಗಿದ್ದಾರೆ. ಕಲಾಪವನ್ನು ಒಂದು ದಿನ ಮುಂದೆ ಹಾಕಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂದು ಹರಿಹಾಯ್ದರು. ಸೋಮವಾರ ಸಭಾಧ್ಯಕ್ಷರು ರೂಲಿಂಗ್ ನೀಡಿದ್ದಾರೆ, ರೂಲಿಂಗ್ ತಪ್ಪುವುದಿಲ್ಲ ಎಂಬ ಭರವಸೆ ಇದೆ ಎಂದು ಇದೇ ವೇಳೆ ತಿಳಿಸಿದರು.

    ಏನಿದು 5 ಕೋಟಿ ರಾದ್ಧಾಂತ ?
    ಆಪರೇಷನ್ ಕಮಲ ಮಾಡುವುದಕ್ಕಾಗಿ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ ಹಾಗೂ ಎಸ್.ಆರ್.ವಿಶ್ವನಾಥ್ ಅವರು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದರು. ಸ್ವತಃ ಇಬ್ಬರೂ ಶಾಸಕರು ನಮ್ಮ ಮನೆಗೆ ಹಣ ಕಳುಹಿಸಿದ್ದರು ಎಂದು ಶ್ರೀನಿವಾಸಗೌರ ಅವರು ಈ ಹಿಂದೆ ಮಾತ್ರವಲ್ಲದೆ, ಶುಕ್ರವಾರ ಸದನದಲ್ಲಿಯೂ ಹೆಸರು ಸಮೇತ ಪ್ರಸ್ತಾಪಿಸಿದ್ದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ಧ್ವನಿಗೂಡಿಸಿ, ಇದಕ್ಕಿಂತ ಉದಾಹರಣೆ ಬೇಕೆ? ಆನ್ ರೆಕಾರ್ಡ್ ಸದನದಲ್ಲಿ ಶಾಸಕರೊಬ್ಬರು ಹೆಸರು ಸಮೇತ ಆಪರೇಷನ್ ಕಮಲದ ವಿವರ ನೀಡಿದ್ದಾರೆ ಎಂದು ಗದ್ದಲ ಎಬ್ಬಿಸಿದ್ದರು.

  • ನಾನು ರಾಜೀನಾಮೆ ನೀಡಲ್ಲ – ದೆಹಲಿಯಲ್ಲಿ ಶ್ರೀನಿವಾಸ ಗೌಡ ಹೇಳಿಕೆ

    ನಾನು ರಾಜೀನಾಮೆ ನೀಡಲ್ಲ – ದೆಹಲಿಯಲ್ಲಿ ಶ್ರೀನಿವಾಸ ಗೌಡ ಹೇಳಿಕೆ

    ನವದೆಹಲಿ: ನಾನು ರಾಜೀನಾಮೆ ನೀಡುವುದಿಲ್ಲ ಮತ್ತು ಬಿಜೆಪಿಗೆ ಹೋಗುವುದಿಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

    ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಫ್ಕೋ ಸಂಸ್ಥೆ ಸಭೆಗಾಗಿ ದೆಹಲಿಗೆ ಬಂದಿದ್ದೇನೆ. ದೆಹಲಿಗೆ ಬರುವ ಮುನ್ನ ಸಿಎಂ ಕುಮಾರಸ್ವಾಮಿಗೆ ತಿಳಿಸಿದ್ದೇನೆ ಎಂದರು.

    ನಾನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆ ಬಂದಿದ್ದೇನೆ ಎನ್ನುವುದು ಸುಳ್ಳು. ವಿಮಾನದಲ್ಲಿ ನಾನು ಅವರ ಮುಖವನ್ನೇ ನೋಡಿಲ್ಲ ಎಂದು ಹೇಳಿದರು. ಹಿಂದೆ ನನಗೆ ಬಿಜೆಪಿ 5 ಕೋಟಿ ಆಫರ್ ಮಾಡಿತ್ತು. ಆಗ ನಾನು ಅದನ್ನು ಬಹಿರಂಗವಾಗಿ ಹೇಳಿದ್ದು, ಈಗ ನನ್ನನ್ನು ಯಾವ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ ಎಂದು ತಿಳಿಸಿದರು.

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯೇಂದ್ರ ಜೊತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ಸಹ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು.

    https://www.youtube.com/watch?v=_SWeDFTmboc