Tag: Sringeri Suresh

  • ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

    ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

    ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

    ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

    ರೇಟಿಂಗ್: 3.5/5 

  • ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಸುರೇಶ್ ಶೃಂಗೇರಿ ನಿರ್ದೇಶನ ಮಾಡಿರುವ ವೀಕೆಂಡ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಂಡಿರೋದರ ಹಿಂದೆ ಅನಂತ್ ಪಾತ್ರದ ವೈಶಿಷ್ಟ್ಯವೂ ಸೇರಿಕೊಂಡಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಚಿತ್ರ ವೀಕೆಂಡ್. ಇದೊಂದು ಯುವ ಆವೇಗವನ್ನು ಒಳಗೊಂಡಿರುವ, ಈ ಮೂಲಕವೇ ಸಾಮಾಜಿಕ ಕಾಳಜಿಯನ್ನೂ ಕೂಡಾ ಪ್ರಚುರಪಡಿಸೋ ಪಕ್ಕಾ ಕಮರ್ಶಿಯಲ್ ಚಿತ್ರ. ಹೊಸ ತಂತ್ರಜ್ಞಾನ, ಹೊಸ ಬಗೆಯ ನಿರೂಪಣೆಯೊಂದಿಗೆ ವೀಕೆಂಡ್ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರಿಗೆಲ್ಲ ಮಜಾ ಕೊಡುವಂತೆ ಮೂಡಿ ಬಂದಿದೆಯಂತೆ.

    ಇಲ್ಲಿ ಸಾಫ್ಟ್‍ವೇರ್ ಉದ್ಯೋಗಿಗಳ ಜಗತ್ತನ್ನು ಕಣ್ಣಿಗೆ ಕಟ್ಟಿದಂತೆ ಅನಾವರಣಗೊಳಿಸಲಾಗಿದೆಯಂತೆ. ಹೇಳಿ ಕೇಳಿ ಐಟಿ ವಲಯದ ಮಂದಿಗೆ ಈ ವೀಕೆಂಡ್ ಮೋಜು ಮಸ್ತಿ ಅನ್ನೋದು ಫೇವರಿಟ್ ಅಂಶ. ಆದರೆ ಅಳತೆ ಮೀರಿದರೆ ವೀಕೆಂಡ್ ಮಸ್ತಿ ಎಂಬುದು ಭೀಕರ ಅನಾಹುತಗಳಿಗೂ ಕಾರಣವಾಗಿ ಬಿಡುತ್ತದೆ. ಅಂಥಾ ಅಂಶಗಳನ್ನು ಫ್ಯಾಮಿಲಿ ಸೆಂಟಿಮೆಂಟಿನ ಸುತ್ತ ಬೆಸೆದು ರೋಚಕವಾದ ಕಥೆಯ ಮೂಲಕ ಈ ಚಿತ್ರವನ್ನು ಅಣಿಗೊಳಿಸಲಾಗಿದೆ.

    ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕನ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರದ್ದು ಯುವ ಸಮೂಹವನ್ನು ಸರಿ ದಾರಿಗೆ ತರುವ, ತನ್ನ ಮೊಮ್ಮಗನನ್ನು ಎಲ್ಲ ಎಡವಟ್ಟುಗಳಿಂದ ಪಾರುಗಾಣಿಸೋ ಪಾತ್ರ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.

  • ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಅನಂತ್ ನಾಗ್ ಯಾವ ಚಿತ್ರದಲ್ಲಿಯೇ ಆದರೂ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆಂದರೇನೇ ಅದರೆಡೆಗೆ ಜನ ಆಕರ್ಷಿತರಾಗುತ್ತಾರೆ. ಹಾಗಿರೋವಾಗ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆಂದರೆ ಕುತೂಹಲ ಹುಟ್ಟದಿರಲು ಸಾಧ್ಯವೇ ಇಲ್ಲ. ಇಂಥಾದ್ದೊಂದು ಕಾರಣದಿಂದಲೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಚಿತ್ರ ವೀಕೆಂಡ್. ಇದೀಗ ಇದು ಬಿಡುಗಡೆಯಾಗೋ ದಿನಾಂಕ ಫಿಕ್ಸಾಗಿದೆ.

    ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ ವೀಕೆಂಡ್ ಚಿತ್ರ ಈಗಾಗಲೇ ಭರ್ಜರಿಯಾಗಿ ಸೌಂಡ್ ಮಾಡಿದೆ. ಟ್ರೈಲರ್ ಮೂಲಕವೇ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಸುಳಿವನ್ನು ಕುತೂಹಲವಾಗಿ ಪ್ರೇಕ್ಷಕರತ್ತ ದಾಟಿಸುವಲ್ಲಿಯೂ ಚಿತ್ರತಂಡ ಯಶ ಕಂಡಿದೆ.

    ಅಖಂಡ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದು ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು ಶೃಂಗೇರಿ ಸುರೇಶ್. ಶಂಕರ್ ನಾಗ್ ಅವರಂಥಾ ಮೇರು ನಟರ ಚಿತ್ರಗಳಿಗೂ ಕೆಲಸ ಮಾಡಿದ್ದ ಅವರು ಹಲವಾರು ಹಿರಿಯ ನಟರೊಂದಿಗೂ ಆತ್ಮೀಯ ಸಖ್ಯ ಹೊಂದಿರುವವರು. ಸುರೇಶ್ ತೀರಾ ಈಗಿನ ಜನರೇಷನ್ನಿನ ಆವೇಗಗಳನ್ನು ಆವಾಹಿಸಿಕೊಂಡೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.

    ವೀಕೆಂಡ್ ಅಂದರೆ ಐಟಿ ವಲಯದಲ್ಲಿರುವವರೂ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಐಟಿ ವಲಯದವರಿಗೆ ವೀಕೆಂಡ್ ಮೋಜು ಮಸ್ತಿಯಿಲ್ಲದಿದ್ದರೆ ಕಾಲವೆಂಬುದು ರುಚಿಸೋದಿಲ್ಲ. ಆದರೆ ಕೊಂಚ ಎಚ್ಚರ ತಪ್ಪಿದರೂ ಕೂಡಾ ಈ ಮೋಜು ಮಸ್ತಿ ಬದುಕನ್ನೇ ಅಲ್ಲಾಡಿಸಿ ಹಾಕಿ ಬಿಡುತ್ತದೆ. ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಥ್ರಿಲ್ಲರ್ ಶೈಲಿಯಲ್ಲಿ ನಿರೂಪಿಸಲಾಗಿದೆಯಂತೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ಹಿರಿಯ ನಟ ಅನಂತ್ ನಾಗ್ ಒಂದು ಸಿನಿಮಾವನ್ನು ಒಪ್ಪಿಕೊಳ್ಳಲು ಅನುಸರಿಸೋ ರೀತಿ ರಿವಾಜುಗಳ ಬಗ್ಗೆ ಚಿತ್ರರಂಗದ ಮಂದಿಗೆ ಸ್ಪಷ್ಟವಾದ ಅಂದಾಜಿರುತ್ತದೆ. ತಮ್ಮ ಪಾತ್ರ ಮಾತ್ರವಲ್ಲ, ಇಡೀ ಕಥೆಯ ಇಂಚಿಂಚನ್ನೂ ಅಳೆದೂ ತೂಗಿದ ನಂತರವಷ್ಟೇ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅದು ತುಂಬಾ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸ್ಕ್ರಿಪ್ಟ್ ನೋಡಿಯೇ ಅನಂತ್ ನಾಗ್ ಮೆಚ್ಚಿಕೊಳ್ಳುತ್ತಾರೆಂದರೆ ಅದು ಯಾವ ಚಿತ್ರಕ್ಕಾದರೂ ಗೆಲುವಿನ ಸ್ಪಷ್ಟ ಸೂಚನೆ. ಈ ವಾರ ಬಿಡುಗಡೆಗೆ ಅಣಿಯಾಗಿರುವ ವೀಕೆಂಡ್ ಚಿತ್ರ ಖುದ್ದು ಅನಂತ್ ನಾಗ್ ಅವರಿಂದಲೇ ಮೆಚ್ಚಿಗೆ ಗಳಿಸಿಕೊಂಡಿತ್ತೆಂಬುದು ನಿಜವಾದ ವಿಶೇಷ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ, ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಟೆಕ್ಕಿಗಳ ಜಗತ್ತಿನ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಇದರಲ್ಲಿ ಅನಂತ್ ನಾಗ್ ಟೆಕ್ಕಿಯ ತಾತನಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಎಲ್ಲವನ್ನೂ ನೇರ ನಿಷ್ಠುರವಾಗಿಯೇ ಹೇಳಿ ಬಿಡುವ ಸ್ವಭಾವದ ಅನಂತ್, ವೀಕೆಂಡ್ ಬಗ್ಗೆ ಮಾತ್ರ ಮೆಚ್ಚಿಕೊಂಡು ಭೇಷ್ ಅಂದಿದ್ದಾರೆಂದರೆ ಈ ಚಿತ್ರದ ಬಗ್ಗೆ ಯಾರಿಗಾದರೂ ಒಲವು ಮೂಡದಿರಲು ಸಾಧ್ಯವಿಲ್ಲ.

    ಆರಂಭದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪಡೆದು ಎರಡೆರಡು ಸಲ ಓದಿಕೊಂಡಿದ್ದ ಅನಂತ್ ನಾಗ್ ಖುಷಿಯಿಂದಲೇ ಡೇಟ್ಸ್ ಕೊಟ್ಟಿದ್ದರಂತೆ. ಜೊತೆಗೆ ಕಥೆ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ಬಳಿಕ ಹಿರಿಯರಾಗಿ ಚಿತ್ರತಂಡಕ್ಕೆ ಹುರುಪು ತುಂಬುತ್ತಲೇ ಚಿತ್ರೀಕರಣ ಮುಗಿಸಿಕೊಂಡ ಕ್ಷಣದಲ್ಲಿ ಸ್ಕ್ರಿಪ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಅನಂತ್ ನಾಗ್ ಅವರ ಮೆಚ್ಚುಗೆಯ ಮಾತುಗಳೇ ಈ ಚಿತ್ರದ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.

    ಹೀಗೆ ಆರಂಭಿಕವಾಗಿಯೇ ಅನಂತ್ ನಾಗ್ ಅವರಿಂದ ಮೆಚ್ಚಿಗೆ ಗಳಿಸಿಕೊಂಡಿದ್ದ ವೀಕೆಂಡ್ ಈ ವಾರ ಬಿಡುಗಡೆಗೊಳ್ಳುತ್ತಿದೆ. ಯುವ ಮನಸುಗಳ ವೀಕೆಂಡ್ ಎಂಬ ಆವೇಗದ ಸುತ್ತಾ ಹೊಸೆದಿರೋ ಚೆಂದದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಹಬ್ಬಿಕೊಂಡಿರೋ ಕುತೂಹಲಗಳಿಗೆಲ್ಲ ಈ ವಾರವೇ ಸ್ಪಷ್ಟ ಉತ್ತರ ಸಿಗಲಿದೆ.

  • ವೀಕೆಂಡ್: ಶೃಂಗೇರಿ ಸುರೇಶ್ ಮೂರು ದಶಕಗಳ ಅನುಭವಗಾಥೆ!

    ವೀಕೆಂಡ್: ಶೃಂಗೇರಿ ಸುರೇಶ್ ಮೂರು ದಶಕಗಳ ಅನುಭವಗಾಥೆ!

    ಬೆಂಗಳೂರು: ಇದೀಗ ತಾನೇ ಹೊಸತಾಗಿ ಎಂಟ್ರಿ ಕೊಟ್ಟವರ ಮೇಲೂ ಆಗಾಗ ಅಪ್ ಡೇಟ್ ಆಗಿಲ್ಲ ಎಂಬಂಥಾ ಆರೋಪಗಳು ಕೇಳಿ ಬರೋದಿದೆ. ಆದರೆ ಅದೆಷ್ಟೋ ದಶಕಗಳಿಂದ ಚಿತ್ರರಂಗದ ಭಾಗವಾಗಿದ್ದೂ, ಆಯಾ ಕಾಲಘಟ್ಟಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತಾ ಮುಂದುವರೆಯೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸಾಧ್ಯವಾಗಿಸಿಕೊಳ್ಳುವ ಕಸುವು ಕೆಲವೇ ಕೆಲ ಮಂದಿಗೆ ಮಾತ್ರವೇ ಸಿದ್ಧಿಸಿರುತ್ತೆ. ಸದ್ಯ ಭಾರೀ ನಿರೀಕ್ಷೆಗಳ ಜೊತೆಗೆ ಚಿತ್ರಮಂದಿರದತ್ತ ಪಯಣ ಬೆಳೆಸಿರುವ ವೀಕೆಂಡ್ ಚಿತ್ರದ ನಿರ್ದೇಶಕ ಶೃಂಗೇರಿ ಸುರೇಶ್ ಆ ವಿರಳರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುತ್ತಾರೆ. ಅಂಥಾ ಗುಣದಿಂದಲೇ ಅವರು ಈ ತಲೆಮಾರಿನ ನಿರ್ದೇಶಕರೂ ಬೆರಗಾಗುವಂಥಾ ವೀಕೆಂಡ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಿಂದಿದ್ದಾರೆ.

    ಸುರೇಶ್ ಶೃಂಗೇರಿ ಎಂಬುದು ಕನ್ನಡ ಚಿತ್ರರಂಗದ ಪಾಲಿಗೆ ಪರಿಚಿತ ಹೆಸರು. ತೀರಾ ಶಂಕರ್ ನಾಗ್ ಅವರ ಚಿತ್ರಗಳಿಂದ ಆರಂಭವಾಗಿ ಈವರೆಗೂ ಸಲೀಸಾಗಿ ಲೆಕ್ಕಕ್ಕೆ ಸಿಗದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್. ಆ ನಂತರ ಸ್ವತಂತ್ರ ನಿರ್ದೇಶಕರಾಗಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕೋಮಲ್ ಅಭಿನಯದ ಲೊಡ್ಡೆ ಸೇರಿದಂತೆ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರೋ ಸುರೇಶ್ ಅವರೀಗ ವೀಕೆಂಡ್ ಚಿತ್ರದ ಮೂಲಕ ಯೂಥ್ ಫುಲ್ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

    ಸುರೇಶ್ ಅವರ ಮೂಲವಿರೋದು ಶೃಂಗೇರಿಯಲ್ಲಿ. ಇಲ್ಲಿನ ಕೆರೆದಂಡೆ ಪ್ರದೇಶದಲ್ಲಿ ಇವತ್ತಿಗೂ ಇವರ ಸಂಬಂಧಿಕರಿದ್ದಾರೆ. ಆದರೆ ಸುರೇಶ್ ಅವರು ಬೆಳೆದದ್ದೆಲ್ಲ ಶಿವಮೊಗ್ಗದಲ್ಲಿ. ಅವರ ತಾಯಿ ಶಿಕ್ಷಕಿಯಾಗಿದ್ದವರು. ಈ ಕಾರಣದಿಂದಲೇ ಆರಂಭ ಕಾಲದಿಂದಲೂ ಓದು ಸೇರಿದಂತೆ ಎಲ್ಲ ಚಟುವಟಿಕೆಯಲ್ಲಿಯೂ ಮುಂದಿದ್ದ ಸುರೇಶ್ ಅವರು ಶಿವಮೊಗ್ಗದ ನ್ಯಾಷನಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಆ ಕಾಲದಿಂದಲೇ ಚಿತ್ರರಂಗದ ಕನಸು ಕಟ್ಟಿಕೊಂಡಿದ್ದ ಅವರು ಅದನ್ನು ನನಸು ಮಾಡಿಕೊಂಡು ಮೂವತ್ತು ವರ್ಷಗಳ ಕಾಲ ಯಾನ ಕೈಗೊಂಡಿದ್ದೇ ಒಂದು ಚೆಂದದ ಕಥೆ.

    ಅದು ಹೇಗೋ ಕಷ್ಟಪಟ್ಟು ಚಿತ್ರರಂಗಕ್ಕೆ ಅಡಿಯಿರಿಸಿದ್ದ ಅವರಿಗೆ ಭಕ್ತವತ್ಸಲಂ ಸಹಾಯ ಮಾಡಿದ್ದರು. ಅದಾದ ನಂತರದಲ್ಲಿ ಸಿಕ್ಕಿದ ಸಣ್ಣಪುಟ್ಟ ಅವಕಾಶಗಳನ್ನೂ ಬಳಸಿಕೊಂಡು ಹಂತ ಹಂತವಾಗಿ ಮೇಲೇರಿ ಬಂದ ಸುರೇಶ್ ಅವರ ಪಾಲಿಗೆ ಅತಿರಥ ಮಹಾರಥರ ಸಾಂಗತ್ಯವೂ ದೊರೆತಿತ್ತು. ರಮೇಶ್ ಭಟ್ ಅವರಂಥಾ ಸಂಪರ್ಕಕ್ಕೆ ಬಂದು ಬಿ ಸಿ ಗೌರಿಶಂಕರ್ ಅವರ ಬಳಿ ಎಂಟು ವರ್ಷಗಳ ಕಾಲ ಸುರೇಶ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಜೇಂದ್ರ ಬಾಬು ಗರಡಿಯಲ್ಲಿಯೂ ಪಳಗಿಕೊಂಡಿದ್ದರು. ಉಪೇಂದ್ರ ನಿರ್ದೇಶನದ ಮೊದಲ ಚಿತ್ರ ತರ್ಲೆ ನನ್ಮಗಕ್ಕೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಸುರೇಶ್ ಕಾರ್ಯ ನಿರ್ವಹಿಸಿದ್ದರು. ಕಿಚ್ಚ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರಕ್ಕೂ ಕೂಡಾ ಅವರು ಕಾರ್ಯ ನಿರ್ವಹಿಸಿದ್ದಾರೆ.

    ಹೀಗೆ ಸಾಗಿ ಬಂದಿರೋ ಅವರು ಎಲ್ಲ ಸಂದರ್ಭಗಳಲ್ಲಿಯೂ ಯುವ ಸಮೂಹದ ಸಂಪರ್ಕದಲ್ಲಿದ್ದದ್ದೇ ಹೆಚ್ಚು. ಆದ್ದರಿಂದಲೇ ಜನರೇಷನ್ ಗ್ಯಾಪ್ ನಂಥಾ ಸಮಸ್ಯೆ ಅವರನ್ನೆಂದೂ ಬಾಧಿಸಲೇ ಇಲ್ಲ. ಹೀಗೆ ಅವರು ಮೂರು ದಶಕಗಳ ಕಾಲ ಚಿತ್ರರಂಗದೊಂದಿಗೆ ಒಡನಾಡಿದ್ದಾರೆ. ಇಷ್ಟೊಂದು ಅನುಭವ ಹೊಂದಿದ್ದರೂ ಕೂಡಾ ನಿರ್ದೇಶಕನಾಗೋ ಕನಸು ಮೈ ತುಂಬಾ ಹೊದ್ದುಕೊಂಡಿದ್ದ ಕೆಲಸ ಕಾರ್ಯಗಳ ನಡುವೆ ನನಸಾಗಿರಲಿಲ್ಲ. ಒಂದರ ಹಿಂದೊಂದರಂತೆ ಚಿತ್ರಗಳು ಸಿಗುತ್ತಲೇ ಇದ್ದುದರಿಂದ ಸುರೇಶ್ ಅವರಿಗೆ ಅದೊಂದು ಕೊರಗಾಗಿಯೂ ಕಾಡಲಿಲ್ಲ. ಆದರೆ 2002ರಲ್ಲಿ ಅವರು ಪ್ರೇಮ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶಿವಧ್ವಜ್ ಮತ್ತು ಪ್ರೇಮ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ನಂತರ ಹೆಣ್ಣು ಭ್ರೂಣ ಹತ್ಯೆ ಕುರಿತಾದ ಸ್ತ್ರೀ ಶಕ್ತಿ ಎಂಬ ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು. ಅದರಲ್ಲಿ ಸೋನು ಗೌಡ ಮನೋಜ್ಞ ಪಾತ್ರದಲ್ಲಿ ನಟಿಸಿದ್ದರು.

    ಈ ರೀತಿಯಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಸುರೇಶ್ ಅವರೀಗ ವೀಕೆಂಡ್ ಎಂಬ ಯುವ ಆವೇಗದ ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಇದರ ನವೀನ ಆಲೋಚನಾ ಕ್ರಮವನ್ನು ಹಿರಿಯ ನಟ ಅನಂತ್ ನಾಗ್ ಅವರೇ ಮೆಚ್ಚಿಕೊಂಡಿದ್ದೂ ಆಗಿದೆ. ಅದುವೇ ವೀಕೆಂಡ್ ಕಥೆಯ ಕಸುವೆಂಥಾದ್ದೆಂಬುದಕ್ಕೆ ಉದಾಹರಣೆಯೂ ಹೌದು. ಇದೀಗ ಟ್ರೈಲರ್ ಮೂಲಕ ಎಲ್ಲರನ್ನು ಸೆಳೆದುಕೊಂಡಿರೋ ಈ ಚಿತ್ರ ಇಷ್ಟರಲ್ಲಿಯೇ ತೆರೆ ಕಾಣಲಿದೆ.