ಚಿಕ್ಕಮಗಳೂರು: ಕಾಶ್ಮೀರದ ಪೆಹಲ್ಗಾಮ್ ಬಳಿ (Pahalgam Attack) ನಡೆದ ಭಯೋತ್ಪಾದಕ ದಾಳಿಯನ್ನ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ (Sringeri Sharada Mutt) ಕಿರಿಯ ಶ್ರೀ ವಿಧುಶೇಖರ ಶ್ರೀಗಳು (Sri Vidhushekhara Bharati Swamiji) ಖಂಡಿಸಿದ್ದು, ಮೃತಪಟ್ಟಿರುವ 26 ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಅಕ್ಷಯ ತೃತೀಯದ ಸಂದರ್ಭದಲ್ಲಿ ಮಾತನಾಡಿದ ಅವರು, ಉಗ್ರರ ದಾಳಿಗೆ ತಮ್ಮ ಮನೆಯವರನ್ನು ಕಳೆದುಕೊಂಡ ನೋವಿನಲ್ಲಿ 26 ಕುಟುಂಬಸ್ಥರು ಇದ್ದಾರೆ. ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು. ಹಾಗಾಗಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಣವನ್ನು ಪ್ರಸಾದದ ರೂಪದಲ್ಲಿ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ
ದುಃಖದಲ್ಲಿರುವ ಕುಟುಂಬದಲ್ಲಿ ಸಂತೋಷ, ಶ್ರೇಯಸ್ಸು ವೃದ್ಧಿಸಲಿ ಎಂದು ಶ್ರೀಗಳು ತಿಳಿಸಿದ್ದಾರೆ. ಈಗಾಗಲೇ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ನಾಗರೀಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ಮಠದ ವತಿಯಿಂದಲೂ 26 ಕುಟುಂಬಗಳಿಗೆ ತಲಾ 2 ಲಕ್ಷ ರೂ.ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು. ಮಠದ ಆಡಳಿತಾಧಿಕಾರಿ ಅದನ್ನ ನೋಡಿಕೊಂಡು ಆ ಕುಟುಂಬಗಳಿಗೆ ತಲುಪಿಸುತ್ತಾರೆ ಎಂದು ತಿಳಿಸಿದರು.
ನವದೆಹಲಿ: ಜಮ್ಮು-ಕಾಶ್ಮೀರ (Jammu Kashmir) ದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಿದರು. 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಆರ್ಟಿಕಲ್ 370 ರದ್ದತಿ ನಂತರ ಪುನರ್ ನಿರ್ಮಾಣಗೊಳಿಸಿ ಯುಗಾದಿಯ ಶುಭ ದಿನದಂದು ಲೋಕಾರ್ಪಣೆಗೊಳಿಸಿದ್ದು, ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಬಿಡದಿಯ ಗ್ರಾನೈಟ್ ಬಳಕೆಯಿಂದ ನಿರ್ಮಿತವಾಗಿರುವ ಮಂದಿರದಲ್ಲಿ, ಶೃಂಗೇರಿ ಶಾರದ ಮಠದಿಂದ (Sringeri Sharada Mutt) ಪಂಚಲೋಹದ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ಗಮನಾರ್ಹ. ಜನವರಿ 24 ರಿಂದ ದೇಶಾದ್ಯಂತ ಸಂಚರಿಸಿ ತೀತ್ವಾಲ್ ತಲುಪಿರುವ ಮೂರ್ತಿಯು ಇಂದು ಸ್ಥಾಪನೆಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಇಂದು ಪುನರ್ನಿರ್ಮಾಣಗೊಂಡಿರುವ ಶಾರದಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದುದರಿಂದ ಮಹಾಶಕ್ತಿ ಪೀಠವೆಂದು ಕೂಡ ಕರೆಯಲ್ಪಡುತ್ತದೆ. ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದು ಕೂಡ ಉಲ್ಲೇಖನೀಯ. ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿರುವುದು ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುತ್ತಿರುವುದು ಗಮನಾರ್ಹ. ಶಾರದಾ ಮಂದಿರಕ್ಕೆ ಆದಿ ಶಂಕರರ ಕಾಲದಲ್ಲಿದ್ದ ಭವ್ಯತೆಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಖರ್ಗೆ ತವರು ಜಿಲ್ಲೆಯಲ್ಲಿ ಆಪರೇಷನ್ ಹಸ್ತ- ಹಾಲಿ ಬಿಜೆಪಿ ಶಾಸಕರಿಗೆ ಗಾಳ
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಜಮ್ಮು-ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಇಂದು ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಭಾರತದ ನಮ್ಮ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. 1 ಸಾವಿರ ವರ್ಷದ ಹಿಂದೆ ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಶಾರದಾ ಪೀಠ ಸ್ಥಾಪನೆ ಮಾಡಿ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬುನಾದಿ ಹಾಕಿದ್ದು, ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡದ ವರೆಗೆ ಮತ್ತೊಮ್ಮೆ ತಾಯಿ ಶಾರದಾಂಬೆಯ ಪುನರುಜ್ಜೀವನ, ಪುನರುತ್ಥಾನ ಕಾರ್ಯ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ (Narendra Modi) & ಗೃಹ ಸಚಿವ ಅಮಿತ್ ಶಾ ರವರ ದಿಟ್ಟ ನಿರ್ಧಾರದಿಂದ ಕಾಶ್ಮೀರದಲ್ಲಿ ವಿಧಿ 370 ರದ್ದುಗೊಂಡ ನಂತರ ಅಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ದೇಶವಾಸಿಗಳಲ್ಲಿ ಸಂಪೂರ್ಣ ಸುರಕ್ಷತೆಯ ಭಾವ ಮೂಡಿದೆ. ಇಂತಹ ಶ್ಲಾಘನೀಯ, ಪುನರುತ್ಥಾನ ಕಾರ್ಯಗಳಿಗೆ ಇಂದು ಮತ್ತೆ ಬಲ ಬಂದಿದ್ದು, ಇದರಿಂದ ಪ್ರವಾಸೋದ್ಯಮ, ತೀರ್ಥಯಾತ್ರೆಯ ಕಾರಣಗಳಿಗಾಗಿ ಹೆಚ್ಚಿನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ಈ ಅಭಿನಂದನಾರ್ಹ ಕಾರ್ಯಕ್ಕೆ ನಾನು ಸಮಸ್ತ ಕನ್ನಡಿಗರ ಪರವಾಗಿ ನರೇಂದ್ರ ಮೋದಿ, ಅಮಿತ್ ಶಾಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ನಾನ್ ಕನಾ ಸಾಹಿಬ್ ಭೇಟಿಗೆ ಕರ್ತಾರ್ಪುರ ಕಾರಿಡಾರ್ ಆರಂಭಿಸಿದಂತೆ, ಗಡಿಯಾಚೆಗಿನ ಶಾರದಾ ಪೀಠಕ್ಕೆ ಕೂಡ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಸಚಿವ ಅಮಿತ್ ಶಾ ತಿಳಿಸಿದ್ದು ಗಮನಾರ್ಹ. ಈ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರವೀಂದ್ರ ರೈನಾ (ಅಧ್ಯಕ್ಷರು, ಜಮ್ಮು ಕಾಶ್ಮೀರ ಬಿಜೆಪಿ ಘಟಕ) ಮತ್ತು Sಚಿve Shಚಿಡಿಚಿಜಚಿ ಕಮಿಟಿ ಸದಸ್ಯರು ಭಾಗವಹಿಸಿದ್ದರು.
ಚಿಕ್ಕಮಗಳೂರು: ದೇಶಕ್ಕೆ ಮಾರಕವಾಗಿರೋ ಕೊರೊನಾ ವೈರಸ್‍ನಿಂದ ಬಂದಿರುವ ಸಂಕಷ್ಟ ನಿವಾರಣೆಗಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ಶೃಂಗೇರಿ ಮಠದ ಸಿಬ್ಬಂದಿ ವರ್ಗ 10 ಲಕ್ಷ ರೂಪಾಯಿಯನ್ನ ದೇಣಿಗೆಯಾಗಿ ನೀಡಿದೆ.
ಎಲ್ಲಾ ಸಿಬ್ಬಂದಿ ತಮ್ಮ ಮಾಸಿಕ ವೇತನದಲ್ಲಿ ಈ ಹಣ ನೀಡಿದ್ದಾರೆ. ಅಷ್ಟೇ ಅಲ್ಲದೇ ದೇಶವೇ ಲಾಕ್‍ಡೌನ್ ಆಗಿ ಕೆಲಸ ಕಾರ್ಯಗಳೆಲ್ಲಾ ನಿಂತಿರುವುದರಿಂದ ನಿರ್ಗತಿಕರು, ನಿರಾಶ್ರಿತರು ಹಾಗೂ ತಾಲೂಕಿನಾದ್ಯಂತ ಅವಶ್ಯಕತೆ ಇರುವ ಜನರಿಗೆ ಮಠದ ವತಿಯಿಂದ ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡುತ್ತಿದೆ. ಇದನ್ನೂ ಓದಿ: ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ
ಮಠದ ವಾಹನಗಳಲ್ಲಿ ಊಟ-ತಿಂಡಿಯನ್ನು ಜನರು ಇರುವಲ್ಲಿಗೆ ಹೋಗಿ ಮೂರು ಹೊತ್ತು ಕೂಡ ಆಹಾರ ತಲುಪಿಸಲಾಗುತ್ತಿದೆ. ಜನಸಾಮಾನ್ಯರು ಕೂಡ ಅಗತ್ಯವಿರುವವರಿಗೆ ಸಹಕಾರ ನೀಡಬೇಕೆಂದು ಮಠದ ಆಡಳಿತಾಧಿಕಾರಿ ಗೌರಿಶಂಕರ್ ಮನವಿ ಮಾಡಿದ್ದಾರೆ.
ಜೊತೆಗೆ ಜನಸಾಮಾನ್ಯರು ಕೂಡ ತಮ್ಮ ಕೈಲಾದಷ್ಟು ಮಟ್ಟಿಗೆ ಪ್ರಧಾನಿ ನಿಧಿಗೆ ಸಹಕರಿಸುವಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು: ತನ್ನ ನೋವನ್ನ ಮರೆಯೋಕೆ ಮಹಿಳೆಯೊಬ್ಬರು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿ ಶಾರದಾಂಬೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.
ಕಳೆದ ವರ್ಷ ತಮಿಳುನಾಡು ಮೂಲದ ಪದ್ಮ ಮಂಜುನಾಥ್ ಅವರ ಮಗ ಮೃತಪಟ್ಟಿದ್ದರು. ಆ ನೋವನ್ನ ಮರೆಯೋಕೆ ಪದ್ಮ ಮಂಜುನಾಥ್ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರೆ.
ಒಂಭತ್ತು ಗಜ (15 ಅಡಿ ಉದ್ದ) ಉದ್ದದ ಕಂಚಿ ರೇಷ್ಮೆ ಸೀರೆಯ ಮೇಲೆ ಹಳದಿ ದಾರದಲ್ಲಿ ಸಣ್ಣ ಸೂಜಿಯಿಂದ ಲಲಿತ ಸಹಸ್ರ ನಾಮ ಸೋತ್ರವನ್ನ ಸೀರೆಯ ಮೇಲೆ ಹೆಣೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪವಿತ್ರ ಸ್ತೋತ್ರವನ್ನು ಪಠಿಸುತ್ತಾ ಸೀರೆಯ ಮೇಲೆ ಹೆಣೆದು ದಾಖಲಿಸಿದ್ದಾರೆ.
ಈ ಸೀರೆಯನ್ನ ಮನೋಹರ ಹಾಗೂ ವೈಭವಯುತವಾಗಿ ಮುತ್ತು, ಹವಳ, ನವರತ್ನಗಳಿಂದ ಅಲಂಕರಿಸಿದ್ದಾರೆ. ಈ ಸೀರೆಯನ್ನ ಪದ್ಮ ಮಂಜುನಾಥ್ ಕಳೆದ ವರ್ಷ ಶೃಂಗೇರಿ ಮಠಕ್ಕೆ ಆಗಮಿಸಿ ಸೀರೆಯನ್ನ ಉಭಯ ಶ್ರೀಗಳ ಮುಂದೆ ತೋರಿಸಿ ಈಗ ಶೃಂಗೇರಿಯ ಶಾರದಾ ದೇವಿಗೆ ಅರ್ಪಣೆ ಮಾಡಿದ್ದಾರೆ.
ಚಿಕ್ಕಮಗಳೂರು: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.
ಚಿಕ್ಕಮಗಳೂರಿನ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಅವರು ಮಠದ ಭಾರತೀತೀರ್ಥ ಸ್ವಾಮೀಜಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಸ್ವಾಮೀಜಿ ಅವರನ್ನು ಭೇಟಿ ಮಡುವ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್ ನಾಯಕರನ್ನು ಹೊರಗೆ ಕಳುಹಿಸಿದ್ದು, ಈ ವೇಳೆ ರಾಹುಲ್ ಗೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.
ಇದೇ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭೇಟಿಯ ಬಗ್ಗೆ ಶ್ರೀಗಳು ಮೆಲುಕು ಹಾಕಿದ್ರು. 1975ರಲ್ಲಿ ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿದ್ದರ ಬಗ್ಗೆ ಶ್ರೀಗಳು ರಾಹುಲ್‍ಗೆ ಮಾಹಿತಿ ನೀಡಿದ್ರು. ಅಲ್ಲದೇ ಇಂದಿರಾ ಗಾಂಧಿ ತಮ್ಮ ಭೇಟಿ ವೇಳೆ ಆಡಿದ್ದ ಮಾತುಗಳ ಬಗ್ಗೆ ಉಲ್ಲೇಖಿಸಿದರು ಎನ್ನಲಾಗಿದೆ.
ಬಳಿಕ ಯಾವುದರ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಶ್ರೀಗಳು ಧರ್ಮಬೋಧನೆ ಮಾಡಿದ್ರು. ನಿಮಗೆ ಉಜ್ವಲ ಭವಿಷ್ಯ ಇದೆ. ಆದರೆ ಅದಕ್ಕೆ ಇನ್ನಷ್ಟು ಕಷ್ಟಪಡಬೇಕು. ಹಿಂದೂ ಧರ್ಮದ ರಕ್ಷಣೆಗೆ ಸದಾ ಕಟಿಬದ್ಧರಾಗಿರಿ. ಯಾವುದೇ ರೀತಿಯಲ್ಲೂ ಧರ್ಮ ವಿರೋಧಿ ಕೆಲಸಕ್ಕೆ ಅವಕಾಶ ನೀಡಬೇಡಿ. ನಿಮಗೆ ಒಳ್ಳೆದಾಗಲಿ, ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಸಲಿ ಅಂತ ರಾಹುಲ್ ಗಾಂಧಿ ಶಿರದ ಮೇಲೆ ಕೈ ಇಟ್ಟು ಭಾರತೀತೀರ್ಥ ಸ್ವಾಮೀಜಿ ಹರಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ನಂತರ ಸ್ವಾಮೀಜಿಯವರು ರಾಹುಲ್ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ಕೊಟ್ಟು ಆಶೀರ್ವಾದ ನೀಡಿದ್ದಾರೆ.