Tag: Srinagar

  • ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!

    ಶ್ರೀನಗರ: ಬರೆಯುತ್ತಿದ್ದಂತೆಯೇ ಪದಗಳನ್ನು ಲೆಕ್ಕ ಹಾಕುವಂತಹ ಅಪರೂಪದ ಪೆನ್ ಒಂದನ್ನು 9 ವರ್ಷದ ಬಾಲಕನೊಬ್ಬ ಕಂಡುಹುಡುಕಿದ್ದಾನೆ.

    ಉತ್ತರ ಕಾಶ್ಮೀರದ ಗುರೇಜ್ ವ್ಯಾಲಿಯ ಪ್ರೊಡಿಗಿ ನಿವಾಸಿ ಮೂರನೇ ತರಗತಿಯಲ್ಲಿ ಓದುತ್ತಿರುವ ಮುಜಾಫರ್ ಅಹಮ್ಮದ್ ಖಾನ್ “ಕೌಂಟಿಂಗ್ ಪೆನ್” ಕಂಡುಹಿಡಿದಿದ್ದಾನೆ.

    ಈ ಪೆನ್ ನ ಹಿಂಭಾಗದಲ್ಲಿ ಕವಚವೊಂದಿದೆ. ಅಲ್ಲದೇ ಸಣ್ಣದಾದ ಎಲ್‍ಸಿಡಿ ಮಾನಿಟರ್ ನ್ನು ಕೂಡ ಪೆನ್ ಗೆ ಅಳವಡಿಸಲಾಗಿದೆ. ಹೀಗಾಗಿ ನಾವು ಬರೆಯುತ್ತಿದ್ದಂತೆಯೇ ಅದು ಅಕ್ಷರಗಳನ್ನು ಲೆಕ್ಕ ಮಾಡುತ್ತದೆ. ಅಲ್ಲದೇ ಇದರ ಇನ್ನೊಂದು ವಿಶೇಷತೆ ಏನೆಂದರೆ ನೀವು ಎಷ್ಟು ಅಕ್ಷರಗಳನ್ನು ಬರೆದಿದ್ದೀರಿ ಅನ್ನೋ ಮೆಸೇಜ್ ನಿಮ್ಮ ಮೊಬೈಲ್ ಗೂ ಬರುತ್ತದೆ ಅಂತ ಬಾಲಕ ತಿಳಿಸಿದ್ದಾನೆ.

    ಪೆನ್ ಕಂಡುಹಿಡಿದಿದ್ದು ಯಾಕೆ?
    ಕಳೆದ ಬಾರಿ ಪರೀಕ್ಷೆಯನ್ನು ನಾನು ಕಡಿಮೆ ಪದಗಳನ್ನು ಬರೆದಿದ್ದರಿಂದ ನನಗೆ ಕಡಿಮೆ ಅಂಕಗಳು ಬಂದಿತ್ತು. ಇದರಿಂದ ನಾವು ಯೋಚನೆ ಮಾಡಲು ಆರಂಭಿಸಿದೆ. ಆ ಕ್ಷಣದಿಂದಲೇ ನನ್ನ ಸಮಯ ಉಳಿಸಿಕೊಳ್ಳಲು ಏನಾದ್ರೂ ಕಂಡುಹಿಡಿಯಬೇಕು ಅನ್ನೋದನ್ನು ಚಿಂತಿಸಿದೆ. ಹೀಗಾಗಿ ಕೊನೆಗೆ ಕೌಂಟಿಂಗ್ ಪೆನ್ ಕಂಡುಹಿಡಿದೆ ಅಂತ ಬಾಲಕ ವಿವರಿಸಿದ್ದಾನೆ.

    ರಾಷ್ಟ್ರಪತಿ ಮೆಚ್ಚುಗೆ:
    ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಯೋಜಿಸಿದ್ದ ಆವಿಷ್ಕಾರ ಮತ್ತು ವಾಣಿಜ್ಯೋದ್ಯಮ ಉತ್ಸವದಲ್ಲಿ ಮುಜಾಫ್ಫರ್ ತನ್ನ ‘ಕೌಂಟಿಂಗ್ ಪೆನ್’ ಪ್ರದರ್ಶಿಸಿದ್ದ. ಮುಜಾಫ್ಫರ್ ಆವಿಷ್ಕರಿಸಿರುವ ಅಪರೂಪ ‘ಕೌಂಟಿಂಗ್ ಪೆನ್’ ಉತ್ಸವದಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಕೂಡ ಪುಟ್ಟ ಬಾಲಕನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ.

    ಉಗ್ರರಲ್ಲಿ ಇಬ್ಬರನ್ನ ಗುರುತಿಸಲಾಗಿದ್ದು, ಶ್ರೀನಗರದ ಸೌರಾದ ಈಸಾ ಫಜಿಲಿ ಹಾಗೂ ದಕ್ಷಿಣ ಕಾಶ್ಮೀರದ ಕೊಕೆರ್ನಾಗ್‍ನ ಸೈಯದ್ ಓವೈಸ್ ಹತ್ಯೆಯಾಗಿದ್ದಾರೆ. ಮತ್ತೋರ್ವ ಉಗ್ರನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರ ಪ್ರಕಾರ ಉಗ್ರರಲ್ಲಿ ಒಬ್ಬ ಇತ್ತೀಚೆಗೆ ಸೌರಾದಲ್ಲಿ ಪೊಲೀಸ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಪೇದೆಯೊಬ್ಬರು ಹುತಾತ್ಮರಾಗಿದ್ದರು.

    ಅನಂತ್‍ನಾಗ್‍ನ ಹಕೂರಾ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಉಗ್ರರು ತಪ್ಪಿಸಿಕೊಳ್ಳಲು ನಾವು ಅವಕಾಶ ನೀಡಲಿಲ್ಲ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆ ಅಧಿಕಾರಿಗಳು ಎನ್‍ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಪೊಲೀಸರು ಎಕೆ47 ರೈಫಲ್‍ಗಳು, ಪಿಸ್ತೂಲ್‍ಗಳು ಹಾಗೂ ಗ್ರೆನೇಡ್‍ಗಳನ್ನ ವಶಪಡಿಸಿಕೊಂಡಿದ್ದಾರೆ.

  • ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    ಶ್ರೀನಗರ: ಕಾಶ್ಮೀರಿ ವ್ಯಕ್ತಿಯೊಬ್ಬ ರೈಲ್ವೇ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋ ಮಂಗಳವಾರ ಸಂಜೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಫಿರನ್ ಹೊದಿಕೆಯ (ಸಾಂಪ್ರದಾಯಿಕ ಕಾಶ್ಮೀರಿ ಉಡುಗೆ) ವ್ಯಕ್ತಿಯೊಬ್ಬ ರೈಲ್ವೇ ಟ್ರ್ಯಾಕ್‍ನ ಮಧ್ಯದಲ್ಲಿ ರೈಲಿಗೆ ಮುಖವನ್ನು ಕೆಳಗೆ ಮಾಡಿ ಮಲಗಿರುವುದನ್ನು ನೋಡಬಹುದು.

    ರೈಲು ವೇಗವಾಗಿ ಬಂದು ಆತನ ಮೇಲೆ ಹೋಗುತ್ತದೆ. ನಂತರ ವ್ಯಕ್ತಿ ಎದ್ದು ಬಂದು ತಾನು ಮಾಡಿದ ಸ್ಟಂಟ್ ಗೆದ್ದೆ ಎಂದು ಸಂಭ್ರಮಿಸುತ್ತಿದ್ದು, ಈ ಎಲ್ಲಾ ದೃಶ್ಯವನ್ನು ಆತನ ಸ್ನೇಹಿತ ರೆಕಾರ್ಡ್ ಮಾಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಈ ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಆ ವ್ಯಕ್ತಿ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಈ ವ್ಯಕ್ತಿಯ ಮಾಡಿರುವ ಕೆಲಸವನ್ನು ಮೂರ್ಖತನ ಎಂದು ಹೇಳಿದ್ದಾರೆ.

    ಇಂತಹ ಸಾಹಸ ಮಾಡುವುದು ತುಂಬಾ ತಪ್ಪಾಗಿದೆ. ಈ ಮೂರ್ಖತನವನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಹಾಕಿ ಟ್ವೀಟ್ ಮಾಡಿದ್ದಾರೆ. ಮೂರ್ಖತನ ಸಾಹಸ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಫೇಸ್‍ಬುಕ್ ಬಳಕೆದಾರರು ಬರೆದು ಪೋಸ್ಟ್ ಮಾಡಿದ್ದಾರೆ.

    ಹಲವು ವಾಟ್ಸಪ್ ಗುಂಪಿನ ಸದಸ್ಯರು ಈ ವಿಡಿಯೋವನ್ನು ಹಂಚಿಕೆ ಮಾಡಬೇಡಿ. ಇದರಿಂದ ಕೆಲವು ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

     

  • CRPF ಕೇಂದ್ರದ ಮೇಲೆ ದಾಳಿ ಮಾಡಿದ ಉಗ್ರರಲ್ಲಿ 10ನೇ ತರಗತಿ ಬಾಲಕನೂ ಒಬ್ಬ

    CRPF ಕೇಂದ್ರದ ಮೇಲೆ ದಾಳಿ ಮಾಡಿದ ಉಗ್ರರಲ್ಲಿ 10ನೇ ತರಗತಿ ಬಾಲಕನೂ ಒಬ್ಬ

    ಶ್ರೀನಗರ: ಸಿಆರ್ ಪಿಎಫ್ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿ, ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಉಗ್ರರ ಪೈಕಿ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯ ಮಗ ಕೂಡ ಭಾಗಿಯಾಗಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

    ಪಾಕ್ ಮೂಲದ ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಉಗ್ರರ ದಾಳಿಗೆ ಪ್ರತೀಕಾರವಾಗಿ ಸೇನೆ ತಕ್ಷಣವೇ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆಗಿಳಿದು, ದಾಳಿಕೋರ ಮೂವರು ಉಗ್ರರನ್ನು ಸದೆಬಡಿದಿತ್ತು. ಇದೀಗ ಹತರಾದ ಇಬ್ಬರು ಉಗ್ರರ ಗುರುತನ್ನು ಯೋಧರು ಪತ್ತೆ ಹಚ್ಚಿದ್ದಾರೆ.

    ಪುಲ್ವಾಮಾದ ಸ್ಥಳೀಯ ನಿವಾಸಿಗಳಾದ ಫರ್ದೀನ್ ಅಹ್ಮದ್ ಖಾಂಡ್ಯಾ (17), ಮಂಜೂರ್ ಬಾಬಾ (22) ಎನ್ನುವವರು ಸೇನಾ ಕಾರ್ಯಾಚರಣೆ ವೇಳೆ ಹತರಾದ ಉಗ್ರರಾಗಿದ್ದಾರೆ. ಇವರಲ್ಲಿ ಫರ್ದೀನ್ ಅಹ್ಮದ್ ಖಾಂಡ್ಯಾ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇವನು ಕಾಶ್ಮೀರ ಪೊಲೀಸ್ ಪೇದೆಯೊಬ್ಬರ ಮಗ ಎಂದು ತಿಳಿದುಬಂದಿದೆ. ಇನ್ನು ಅಹ್ಮದ್ ಖಾಂಡ್ಯಾ ಟ್ರಾಲ್ ಪ್ರದೇಶ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿದೆ.

    ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಉಗ್ರರು ಪುಲ್ವಾಮ ಜಿಲ್ಲೆಯ ಅವಂತಿಪೋರ್‍ನ ಸಿಆರ್ ಪಿಎಫ್ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದರು. ಇದರಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಹಲವು ಯೋಧರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    4 ದಿನಗಳ ಹಿಂದೆ ಇದೇ ಜಿಲ್ಲೆಯಲ್ಲಿ ಜೈಷ್ ಉಗ್ರ ನೂರ್ ಮಹಮ್ಮದ್ ತಂತ್ರೇನನ್ನು ಎನ್‍ಕೌಂಟರ್ ಮಾಡಲಾಗಿತ್ತು. ನವೆಂಬರ್ ನಲ್ಲಿ ಇದೇ ತಂಡದ ಮೂವರು ಉಗ್ರರನನ್ನು ಹತ್ಯೆ ಮಾಡಲಾಗಿತ್ತು. ಅವರಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಸಝರ್ ನ ಸಂಬಂಧಿಯೂ ಒಬ್ಬನಾಗಿದ್ದ.

    ಸಿಆರ್ ಪಿಎಫ್ ತರಬೇತಿ ಕೇಂದ್ರದ 185ನೇ ಬೆಟಾಲಿಯನ್‍ನ ಆವರಣದೊಳಗೆ ನುಗ್ಗುವ ಮುನ್ನ ಗ್ರೆನೇಡ್ ಎಸೆದು ಗುಂಡಿನ ದಾಳಿ ಆರಂಭಿಸಿದ್ದ ಉಗ್ರರ ಬಳಿ ಅಪಾರ ಪ್ರಮಾಣದ ಆಧುನಿಕ ಆಯುಧಗಳಿದ್ದವು ಎಂದು ತಿಳಿದು ಬಂದಿದೆ. ಇನ್ನು ಭಾರತೀಯ ಯೋಧರ ಶೂಟೌಟ್‍ನ ಆರಂಭಿಕ ಗಂಟೆಗಳಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಶರೀಫ್ ಉದ್ ದಿನ್ ಗನಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ಎನ್‍ಕೌಂಟರ್ ನಲ್ಲಿ ಯೋಧರಾದ ರಾಜೇಂದ್ರ ನೇನ್, ಪಿಕೆ ಪಾಂಡಾ ಬಲಿಯಾಗಿದ್ದರು. ಕಟ್ಟಡದೊಳಗೆ ಸಿಲುಕಿದ್ದ ಅಧಿಕಾರಿ ಕುಲ್‍ದೀಪ್ ರೈ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

    ಉಗ್ರರು ಸಿಆರ್ ಪಿಎಫ್ ಕೇಂದ್ರವನ್ನು ಟಾರ್ಗೆಟ್ ಮಾಡಿದ್ದಾರೆಂಬ ಎಚ್ಚರಿಕೆಯ ಮಧ್ಯೆಯೂ ಈ ದಾಳಿ ನಡೆಸಿದೆ. ದಾಳಿ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

  • ಅಮ್ಮನ ಕಣ್ಣೀರಿಗೆ ಮಣಿದು ಭಯೋತ್ಪಾದನೆ ಹಾದಿ ಬಿಟ್ಟು ಬಂದ ಯುವಕ

    ಅಮ್ಮನ ಕಣ್ಣೀರಿಗೆ ಮಣಿದು ಭಯೋತ್ಪಾದನೆ ಹಾದಿ ಬಿಟ್ಟು ಬಂದ ಯುವಕ

    ಶ್ರೀನಗರ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ (ಎಲ್‍ಇಟಿ) ಸೇರಿದ್ದ ಕಾಶ್ಮೀರದ 20 ವರ್ಷದ ಫುಟ್ಬಾಲ್ ಆಟಗಾರನೊಬ್ಬ ತಾಯಿಯ ಪ್ರೀತಿಯ ಕಣ್ಣೀರಿಗೆ ಮಣಿದು ಉಗ್ರ ಹಾದಿಯನ್ನು ಬಿಟ್ಟು ಪೊಲೀಸರಿಗೆ ಶರಣಾಗಿದ್ದಾನೆ.

    ಮೂಲತಃ ದಕ್ಷಿಣ ಕಾಶ್ಮೀರದ ಅನಂತನಾಗ್ ನಿವಾಸಿಯಾಗಿದ್ದ ಮಜೀದ್ ಖಾನ್ ಭಯೋತ್ಪಾದನೆಗೆ ಸೇರುವ ಮೊದಲು ಉತ್ತಮ ಫುಟ್ಬಾಲ್ ಗೋಲ್‍ಕೀಪರ್ ಆಗಿದ್ದ. ಆದರೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ನಂತರ ಇತ್ತೇಚೆಗೆ ಎಲ್‍ಇಟಿಯಿಂದ ಬಿಡುಗಡೆಯಾಗಿದ್ದ ಭಾವಚಿತ್ರದ ಮೂಲಕ ಯುವಕ ಉಗ್ರರ ಗುಂಪಿನಲ್ಲಿ ಸೇರಿರುವುದು ತಿಳಿದುಬಂದಿತ್ತು.

    ಯುವಕನ ತಾಯಿ  ಉಗ್ರರ ಗುಂಪಲ್ಲಿ ಮಗನ ಫೋಟೋವನ್ನು ನೋಡಿ ತಕ್ಷಣ ಆಘಾತವಾಗಿ ಕುಸಿದು ಬಿದ್ದಿದ್ದರು. ನಂತರ ಕಣ್ಣೀರು ಹಾಕಿಕೊಂಡು ವಾಪಸ್ ಬಂದು ನನ್ನ ಮತ್ತು ನಿನ್ನ ತಂದೆಯನ್ನು ಕೊಂದು ಹೋಗು ಎಂದು ಕೋಪದಿಂದ ಹೇಳಿದ್ದರು. ಬಳಿಕ ನಾನು ಅವನಿಗಾಗಿ ಕಾಯುತ್ತಿರುತ್ತೇನೆ. ಮತ್ತೆ ನನ್ನ ಮಗ ಹಿಂದಿರುಗಿ ಬರುತ್ತಾನೆ. ಖಾನ್ ಬಂದು ಮತ್ತೆ ಫುಟ್ಬಾಲ್ ಆಡುವುದನ್ನು ನೋಡಬೇಕು,” ಎಂದು ದುಃಖದಿಂದ ಹೇಳಿದ್ದರು. ಅವರ ಕಣ್ಣೀರಿನ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು.

    ಅಮ್ಮನ ಪ್ರೀತಿಯ ಕೂಗನ್ನು ವಿಡಿಯೋದಲ್ಲಿ ಆಲಿಸಿಕೊಂಡು ಖಾನ್ ವಾಪಸ್ ಬರಲು ನಿರ್ಧಾರ ಮಾಡಿದ್ದ. ಈ ಸಂತಸದ ವಿಚಾರವನ್ನು ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್ ನಲ್ಲಿ ತಿಳಿಸಿದ್ದರು.

    ಶುಕ್ರವಾರ ಖಾನ್ ಅವಂತಿಪೋರಾದಲ್ಲಿರುವ ಸೈನ್ಯದ ಪ್ರಧಾನ ಕಚೇರಿಗೆ ಬಂದು ಶರಣಾಗಿದ್ದು, ಆ ಫೋಟೋವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕಪ್ಪು ಬಣ್ಣದ ಕೋಟ್ ಮತ್ತು ತಲೆಗೆ ಕಪ್ಪು ಬಣ್ಣದ ಕ್ಯಾಪ್ ಧರಿಸಿರುವ ಯುವಕನೇ ಮಜೀದ್ ಖಾನ್.

    ಜನರಲ್ ಕಮಾಂಡಿಂಗ್ ಆಫಿಸರ್ ಮೇಜರ್ ಜನರಲ್ ಬಿಎಸ್ ರಾಜು ಅವರು ಶರಣಾದ ಮಜೀದ್ ಇರ್ಶಾದ್ ಖಾನ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಮಜೀದ್ ತಾಯಿ ಮೇಲಿನ ಪ್ರೀತಿ ಹಾಗೂ ಸೇನೆ ಮೇಲೆ ನಂಬಿಕೆ ಇಟ್ಟು ಶರಣಾಗಿದ್ದಾರೆ. ಅವರ ರಕ್ಷಣೆ ನಮಗೆ ಮುಖ್ಯ. ಕಾಶ್ಮೀರದಲ್ಲಿ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಗ್ರರ ಮೋಸಕ್ಕೆ ಬಲಿಯಾಗಿರುವ ಸಾಕಷ್ಟು ಯುವಕರು ಉಗ್ರತ್ವವನ್ನು ಬಿಟ್ಟು ಹಿಂದಿರುಗಬೇಕು ಎಂದು ಹೇಳಿದ್ದಾರೆ.

    ಖಾನ್‍ಗೆ ಇಬ್ಬರು ಸಹೋದರಿಯರು ಇದ್ದು, ಇಬ್ಬರಿಗೂ ಮದುವೆಯಾಗಿದೆ. ತಂದೆ ಒಬ್ಬ ಸರ್ಕಾರಿ ನೌಕರರಾಗಿದ್ದು, ತಮ್ಮ 10ನೇ ತರಗತಿಯಲ್ಲಿ ಫುಟ್‍ಬಾಲ್ ಆಟಕ್ಕೆ ಸೇರಿದ್ದರು. ತಂದೆಯೂ ಕೂಡ ಒಬ್ಬನೇ ಮಗನಾದ ಖಾನ್‍ಗೆ ನಾನು ಸಹಾಯ ಮಾಡುತ್ತೇನೆ, ಹಿಂದಿರುಗಿ ಬಾ ಎಂದು ಹೇಳಿಕೊಂಡಿದ್ದರು.

    ಸೇನಾಧಿಕಾರಿಗಳ ಗುಂಡಿಗೆ ಬಲಿಯಾದ ತನ್ನ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಮಜೀದ್ ಖಾನ್ ಭಯೋತ್ಪಾದನೆಗೆ ಸೇರುವ ನಿರ್ಧಾರ ಮಾಡಿದ್ದ. ಈಗ ತಾಯಿಯ ವಿಡಿಯೋ ನೋಡಿದ ನಂತರ ಖಾನ್ ಅಮ್ಮನ ಪ್ರೀತಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾಗಿದ್ದಾನೆ.

    https://www.youtube.com/watch?v=bF_25LEZp-c

  • ವೈಷ್ಣೋ ದೇವಿ ದರ್ಶನ: ಪ್ರತಿದಿನ ಗರಿಷ್ಠ 50 ಸಾವಿರ ಭಕ್ತರು ಮಾತ್ರ ಅವಕಾಶ

    ವೈಷ್ಣೋ ದೇವಿ ದರ್ಶನ: ಪ್ರತಿದಿನ ಗರಿಷ್ಠ 50 ಸಾವಿರ ಭಕ್ತರು ಮಾತ್ರ ಅವಕಾಶ

    ನವದೆಹಲಿ: ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದ ಜಮ್ಮು-ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದ ದರ್ಶನ ಪಡೆಯುವ ಭಕ್ತರ ಸಂಖ್ಯೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು (ಎನ್‍ಜಿಟಿ) ಮಿತಿ ವಿಧಿಸಿದ್ದು, ಪ್ರತಿದಿನ ಗರಿಷ್ಟ 50 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಬೇಕೆಂದು ಆದೇಶಿಸಿದೆ.

    ವೈಷ್ಣೋ ದೇವಾಲಯಕ್ಕೆ ತೆರಳಲು ಕತ್ತೆ ಹಾಗೂ ಇತರೇ ಪ್ರಾಣಿಗಳನ್ನು ಬಳಕೆ ಮಾಡುವ ಕುರಿತು ಪ್ರಶ್ನಿಸಿ ಎನ್‍ಜಿಟಿಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಸ್ವತಂತ್ರ ಕುಮಾರ್ ಅವರ ನ್ಯಾಯಪೀಠವು ದೇವಾಲಯದಲ್ಲಿ ದಿನ 50 ಸಾವಿರ ಭಕ್ತರು ಮಾತ್ರ ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿತು.

    ದೇವಿಯ ದರ್ಶನಕ್ಕೆ ತೆರಳುವ ವೇಳೆ ಉಂಟಾಗುವ ಅಹಿತಕರ ಘಟನೆಗಳನ್ನು ತಪ್ಪಿಸಲು ಈ ಕ್ರಮಕೈಗೊಂಡಿದ್ದು, ಸಂಖ್ಯೆಗಿಂತ ಜಾಸ್ತಿ ಭಕ್ತರು ಆಗಮಿಸಿದ್ದಲ್ಲಿ ಜಮ್ಮು ಕಾಶ್ಮೀರದ ಕತ್ರಾ ಅಥವಾ ಅರ್ಧಕುಮಾರಿಯಲ್ಲಿ ನೆಲೆ ಕಲ್ಪಿಸಬೇಕೆಂದು ಸೂಚಿಸಿದೆ.

    ಅಲ್ಲದೇ ದೇವಾಲಯಕ್ಕೆ ಭೇಟಿ ನೀಡಲು ನಿರ್ಮಾಣ ಮಾಡಲಾಗಿರುವ ಹೊಸ ಮಾರ್ಗದಲ್ಲಿ ಪ್ರಾಣಿಗಳನ್ನು ಬಳಕೆ ಮಾಡದಂತೆ ಎನ್‍ಜಿಟಿ ಸೂಚಿಸಿದೆ. ಹೊಸ ಮಾರ್ಗವು ನವೆಂಬರ್ 24 ರಿಂದ ಬಳಕೆಗೆ ಮುಕ್ತವಾಗಲಿದ್ದು, ಬ್ಯಾಟರಿ ಚಾಲಿತ ಕಾರು ಹಾಗೂ ಪಾದಚಾರಿಗಳು ಮಾತ್ರ ಈ ಮಾರ್ಗವನ್ನು ಬಳಸಬೇಕು, ಈ ನಿಯಮವನ್ನು ಉಲ್ಲಂಘಿಸಿದರೆ 2 ಸಾವಿರ ರೂ. ದಂಡವನ್ನು ವಿಧಿಸಲು ನಿರ್ದೇಶನ ನೀಡಿದೆ.


    ಇನ್ನು ದೇವಾಲಯಕ್ಕೆ ಹಳೆ ಮಾರ್ಗವಾಗಿ ಪ್ರಾಣಿಗಳ ಮೇಲೆ ಸಂಚಾರ ಮಾಡುವುದನ್ನು ಕ್ರಮೇಣ ಕಡಿಮೆ ಮಾಡಲಾಗುತ್ತದೆ. ಯಾತ್ರೆಯಲ್ಲಿ ಸಂಪೂರ್ಣವಾಗಿ ಪ್ರಾಣಿಗಳ ಮೇಲಿನ ಸಂಚಾರವನ್ನು ನಿಷೇಧಿಸುವ ಕುರಿತು ಸರ್ಕಾರದ ಅಭಿಪ್ರಾಯ ನೀಡುವಂತೆ ಸೂಚಿಸಿದೆ.

    ಕತ್ರಾ ಪಟ್ಟಣದಿಂದ ಸುಮಾರು 46 ಕಿ.ಮೀ ದೂರದಲ್ಲಿ ದೇವಾಲಯವಿದೆ. ಪ್ರತಿವರ್ಷ ಸುಮಾರು 80 ಲಕ್ಷ ಜನರು ದೇವಿಯ ದರ್ಶನವನ್ನು ಪಡೆಯುತ್ತಾರೆ.

     

     

  • ರೈಲ್ವೆ ಸ್ಟೇಷನ್‍ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್

    ರೈಲ್ವೆ ಸ್ಟೇಷನ್‍ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್

    ಶ್ರೀನಗರ: ಸುಮಾರು 15 ಅಡಿ ಉದ್ದದ ಹೆಬ್ಬಾವೊಂದು ಜಮ್ಮುವಿನ ಕಾತ್ರ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಇದನ್ನು ವೈಷ್ಣೋ ದೇವಿಯ ಭಕ್ತರು ನೋಡಿ ಭಯಭೀತರಾಗಿದ್ದರು. ಈ ಘಟನೆ ಸುಮಾರು 2 ವಾರಗಳ ಹಿಂದೆಯೇ ನಡೆದಿದ್ದು, ಅದರ ವಿಡಿಯೋ ಇಂದಿಗೂ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ವಿಡಿಯೋದ ಪ್ರಕಾರ, ಈ ಘಟನೆ ದೀಪಾವಳಿ ಹಬ್ಬದ ಮುಂಚೆಯೇ ಅಂದರೆ ಅಕ್ಟೋಬರ್ 18 ರಂದು ನಡೆದಿದೆ. ಜನಸಂದಣಿ ಇದ್ದ ರೈಲ್ವೇ ನಿಲ್ದಾಣದ ಒಂದು ಕಂಬಕ್ಕೆ ಬೃಹದಾಕಾರದ ಹೆಬ್ಬಾವು ಸುತ್ತಿಕೊಂಡಿರುವುದು ಸೆರೆಯಾಗಿದೆ.

    ಸ್ಟೇಷನ್ ಕಂಬದಲ್ಲಿ ಸುತ್ತಿಕೊಂಡಿರುವ ಹೆಬ್ಬಾವನ್ನು ನೋಡಲು ಸುತ್ತಲು ಜನರ ದೊಡ್ಡ ಗುಂಪೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನಂತರ ಪ್ರತ್ಯಕ್ಷದರ್ಶಿಗಳು ಯಾವುದೇ ಅಪಾಯಕಾರಿ ಘಟನೆ ನಡೆಯಬಾರದು ಎಂದು ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗೆ ಹೆಬ್ಬಾವನ್ನು ಸೆರೆ ಹಿಡಿಯಲು ಸಮೀಪದಲ್ಲಿದ್ದ ಸ್ಥಳೀಯರು ಸಹಾಯ ಮಾಡಿದ್ದಾರೆ. ನಂತರ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ನಂತರ ಕೆಲವರು ಇದು ಮುಂಬೈನ ಬಾದರ್ ರೈಲ್ವೇ ನಿಲ್ದಾಣದಲ್ಲಿ ರೆಕಾರ್ಡ್ ಮಾಡಲಾಗಿದೆ. ಇದು ಹೆಬ್ಬಾವಲ್ಲ ಅನಕೊಂಡ ಎಂದು ಸುಳ್ಳು ವದಂತಿ ಹಬ್ಬಿಸಿದ್ದರು. ಆದರೆ ಅನಕೊಂಡ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತದೆ. ಇದು ಹೆಬ್ಬಾವಾಗಿದ್ದು, ಈ ವಿಡಿಯೋವನ್ನು ಜಮ್ಮುವಿನ ಬಾಂಗಾಂಗ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.

    https://www.youtube.com/watch?v=lNalB63wh20

  • ಜಿಲ್ಲಾಸ್ಪತ್ರೆಯಲ್ಲಿ  ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಧಮ್‍ಪುರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಟರ್ ಕೂಲರ್ ನಿಂದ ಬಾಟಲ್ ಗೆ ನೀರು ತುಂಬಿಕೊಳ್ಳುವಾಗ ನೀರಿನೊಂದಿಗೆ ಹಾವಿನ ಮರಿಯೊಂದು ಬಂದಿದೆ.

    ಉಧಮ್‍ಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ತಂದೆಯೊಬ್ಬರು ಮಗನಿಗಾಗಿ ವಾಟರ್ ಕೂಲರ್ ನಿಂದ ನೀರು ತುಂಬಿಕೊಳ್ಳುವಾಗ ಕೂಲರ್ ನಿಂದ ಹಾವಿನ ಮರಿಯೊಂದು ಹೊರ ಬಂದಿದೆ.

    ನಾನು ನನ್ನ ಮಗನಿಗೆ ಕುಡಿಯಲು ನೀರು ತುಂಬಿಕೊಂಡು ಬಂದೆ. ನನ್ನ ಮಗ ನೀರು ಕುಡಿಯುವಾಗ ಬಾಟಲ್ ನಲ್ಲಿ ಹಾವಿನ ಮರಿಯೊಂದು ನೋಡಿದೆ. ಕೂಡಲೇ ಅವನಿಂದ ಬಾಟಲ್ ಕಸಿದುಕೊಂಡೆ ಎಂದು ರೋಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇದು ಆಸ್ಪತ್ರೆಯ ಸಿಬ್ಬಂದಿಗೆ ಬೇಜವಬ್ದಾರಿಯನ್ನು ತೋರಿಸುತ್ತದೆ. ಜನರು ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದರೆ ಇಂತಹ ನೀರನ್ನು ಕುಡಿದರೆ ಮತ್ತಷ್ಟು ಆರೋಗ್ಯ ಕೆಡುತ್ತದೆ ಎಂದು ರೋಗಿಯ ತಂದೆ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯ್, ಅಂಡರ್ ಗ್ರೌಂಡ್ ಪೈಪ್ ನ್ನು ಕೂಲರ್ ಗೆ ಅಳವಡಿಸಿರಬಹುದು. ಹೀಗಾಗಿ ಆ ಪೈಪ್ ಮೂಲಕವೇ ಹಾವಿನ ಮರಿ ಹೊಂದಿರಬಹುದು ಅಥವಾ ಕೂಲರ್ ಗೆ ಅಳವಡಿಸಿರುವ ಪೈಪ್ ಎಲ್ಲಾದರೂ ಒಡೆದಿರುವ ಸಾಧ್ಯತೆಗಳಿವೆ. ಈ ಕುರಿತು ಜಲ ನೈರ್ಮಲ್ಯ ಇಲಾಖೆಗೆ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ.

  • ಜಮ್ಮುವಿನ ಪುಲ್ವಾಮಾ ವಲಯದಲ್ಲಿ ಇಬ್ಬರು ಉಗ್ರರ ಎನ್‍ಕೌಂಟರ್

    ಜಮ್ಮುವಿನ ಪುಲ್ವಾಮಾ ವಲಯದಲ್ಲಿ ಇಬ್ಬರು ಉಗ್ರರ ಎನ್‍ಕೌಂಟರ್

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ವಲಯದಲ್ಲಿ ಉಗ್ರರ ಹಾಗೂ ಸೈನಿಕರ ನಡುವಿನ ಸಂಘರ್ಷ ಮುಂದುವರೆದಿದ್ದು, ಶುಕ್ರವಾರ ಇಬ್ಬರು ಉಗ್ರರರನ್ನು ಎನ್‍ಕೌಂಟರ್ ಮಾಡಲಾಗಿದೆ.

    ಪುಲ್ವಾಮಾ ವಲಯದ ಲಿಟ್ಟರ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಪಡೆದ ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

    ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಸೈನಿಕ ವಿರುದ್ಧ ಮರುದಾಳಿಯನ್ನು ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈನಿಕರ ಗುಂಡಿಗೆ ವಾಸಿಂ ಷಾ ಮತ್ತು ಹಫಿಜ್ ನಿಸಾರ್ ಎಂಬ ಇಬ್ಬರು ಉಗ್ರರು ಹತರಾಗಿದ್ದು, ಈ ಇಬ್ಬರು ಲಷ್ಕರ್-ಇ-ತೊಯ್ಬಾ ಉಗ್ರಗಾಮಿಗಳಾಗಿದ್ದರು. ಹಲವು ಭಯೋತ್ಪಾದನ ಕೃತ್ಯಗಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಕಾರ್ಯಾಚರಣೆಯನ್ನು ಮುಂದುವರೆದಿರುವುದಾಗಿ ಮಾಹಿತಿ ಲಭಿಸಿದೆ.

    ಈ ಹಿಂದೆ ಆಗಸ್ಟ್ 28 ರಂದು ಪುಲ್ವಾಮಾ ಪ್ರದೇಶದಲ್ಲಿ ಇದೇ ರೀತಿಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು, ಈ ಸಮಯದಲ್ಲಿ ಮನೆಯಲ್ಲಿ ಅಡಗಿ ಕುಳಿತ ಉಗ್ರರನ್ನು ಎನ್‍ಕೌಂಟರ್ ಮಾಡಲು ನಡೆದ ಕಾರ್ಯಾಚರಣೆಯಲ್ಲಿ 3 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ಭಾರತದ 8 ರಕ್ಷಣಾ ಪೊಲೀಸರು ದಾಳಿಯಲ್ಲಿ ಹುತಾತ್ಮರಾಗಿದ್ದರು.

    ಭಾರತದ ಸೈನಿಕರು ಹೆಚ್ಚು ಪ್ರಮಾಣದಲ್ಲಿ ಹುತಾತ್ಮರಾಗಲು ಪ್ರಮುಖ ಕಾರಣವೇನೆಂದರೆ, ಉಗ್ರರು ಅಡಗಿ ಕುಳಿತ ಕಟ್ಟಡದಲ್ಲಿ ನಾಗರೀಕರು ವಾಸಿಸುತ್ತಿದ್ದರು. ಹೀಗಾಗಿ ಅವರನ್ನು ಕಾರ್ಯಾಚರಣೆಯ ವೇಳೆ ಸ್ಥಳದಿಂದ ಹೊರತರುವ ಸಂದರ್ಭದಲ್ಲಿ ಉಗ್ರರು ದಾಳಿಯನ್ನು ಮಾಡಿದ್ದರು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಧೀಕ್ಷಕ ವೈದ್ ತಿಳಿಸಿದ್ದರು.

     

  • ಉಗ್ರರಿಗೆ ಮದ್ದುಗುಂಡು ತಲುಪಿಸ್ತಿದ್ದ ಇಬ್ಬರು ಪೇದೆಗಳು ಅರೆಸ್ಟ್

    ಉಗ್ರರಿಗೆ ಮದ್ದುಗುಂಡು ತಲುಪಿಸ್ತಿದ್ದ ಇಬ್ಬರು ಪೇದೆಗಳು ಅರೆಸ್ಟ್

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಮದ್ದು ಗುಂಡುಗಳನ್ನು ಸರಬರಾಜು ಮಾಡುತ್ತಿದ್ದ ಇಬ್ಬರು ಪೋಲೀಸ್ ಪೇದೆಗಳನ್ನು ಬಂಧಿಸಲಾಗಿದೆ.

    ಶೋಪಿಯಾನ್ ಪ್ರದೇಶದಲ್ಲಿ ಹಿಜ್‍ಬುಲ್ ಮುಜಾಹಿದ್ದೀನ್ ಭಯೋತ್ಪಾದನಾ ಗುಂಪಿಗೆ ಸರ್ಕಾರ ನೀಡಿದ ಮದ್ದುಗುಂಡುಗಳನ್ನು ಇವರು ತಲುಪಿಸಲು ಮುಂದಾಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಇಬ್ಬರು ಪೇದೆಗಳಿಂದ ಎಕೆ-47 ರೈಫಲ್ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರಿಗೆ ಇದೂವರೆಗೆ ಎಷ್ಟು ಪ್ರಮಾಣದ ಮುದ್ದುಗುಂಡುಗಳನ್ನು ಸರಬರಾಜು ಮಾಡಿದ್ದಾರೆ ಎನ್ನುವ ಬಗ್ಗೆ ಈಗ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.