Tag: Srinagar

  • ಮಾಜಿ ಸಿಎಂ ಮನೆಗೆ ಕಾರು ನುಗ್ಗಿಸಿದವನ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ

    ಮಾಜಿ ಸಿಎಂ ಮನೆಗೆ ಕಾರು ನುಗ್ಗಿಸಿದವನ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸಕ್ಕೆ ಅನುಮಾನಾಸ್ಪದವಾಗಿ ಕಾರು ನುಗ್ಗಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.

    ಅಪರಿಚಿತ ವ್ಯಕ್ತಿಯೋರ್ವ ನಿರಾಯುಧನಾಗಿ ತನ್ನ ಮಹೀಂದ್ರ ಎಕ್ಸ್ ಯುವಿ 500 ವಾಹನದೊಂದಿಗೆ ಏಕಾಏಕಿ ಫಾರೂಕ್ ಅಬ್ದುಲ್ಲಾ ಮನೆಯ ಗೇಟಿನಲ್ಲಿ ನುಗ್ಗಿಸಿದ್ದಾನೆ. ಬಳಿಕ ಮನೆಯ ಒಳಗೆ ಹೋಗಿ ಗಾಜಿನ ಮೇಜನ್ನು ಒಡೆದು ಹಾಕಿದ್ದಾನೆ. ಅಲ್ಲದೇ ವ್ಯಕ್ತಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯ ಮೇಲೂ ಸಹ ಹಲ್ಲೆ ನಡೆಸಿದ್ದ ಈ ವೇಳೆ ಭದ್ರತೆಯ ದೃಷ್ಟಿಯಿಂದ ಸಿಬ್ಬಂದಿ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯಾದ ವಿವೇಕ್ ಗುಪ್ತ ತಿಳಿಸಿದ್ದಾರೆ.

    ಅಪರಿಚಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯು ಮನೆಯ ಕೋಣೆಯ ಬಳಿ ಹೊಡೆದು ಹಾಕಿದೆ. ಮೃತ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಈತ ಜಮ್ಮು ಕಾಶ್ಮೀರದ ಫೂಂಚ್ ಜಿಲ್ಲೆಯವನಾಗಿದ್ದಾನೆ. ಘಟನೆಯಲ್ಲಿ ಶಂಕಿತ ವ್ಯಕ್ತಿಯನ್ನು ತಡೆಯಲು ಯತ್ನಿಸಿದ ಭದ್ರತಾ ಸಿಬ್ಬಂದಿಯೂ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿರುವ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಘಟನೆ ನಡೆದ ಸಂದರ್ಭ ಫಾರೂಕ್ ಅಬ್ದುಲ್ಲಾರವರು ಮನೆಯಲ್ಲಿ ಇಲ್ಲವಾದ್ದರಿಂದ ಆಗಬಹುದಾಗಿದ್ದ ಅವಘಡ ತಪ್ಪಿದೆ. ಹಾಲಿ ಶ್ರೀನಗರದ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾರವರಿಗೆ ಕೇಂದ್ರ ಸರ್ಕಾರ ಜೆಡ್ ಫ್ಲಸ್ ಭದ್ರತೆಯನ್ನು ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಎನ್‍ಕೌಂಟರ್

    ಜಮ್ಮು ಕಾಶ್ಮೀರ: ಇಬ್ಬರು ಉಗ್ರರ ಎನ್‍ಕೌಂಟರ್

    ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರಗಾಮಿಗಳು ಎನ್‍ಕೌಂಟರ್‍ಗೆ ಬಲಿಯಾಗಿದ್ದಾರೆ.

    ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸುವ ವೇಳೆ ರಕ್ಷಣಾ ಪಡೆಯ ವಿರುದ್ಧ ದಾಳಿ ನಡೆಸಿದ್ದಾರೆ. ಪ್ರತಿಯಾಗಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಡಿಎಸ್‍ಪಿ ಶೇಷ ಪೌಲ್ ವೈದ್, ಇಬ್ಬರು ಉಗ್ರರು ಮೃತರಾಗಿರುವುದು ಖಚಿತವಾಗಿದೆ. ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದು, ಹತ್ಯೆಯಾದ ಉಗ್ರರ ಹೆಸರ ದೇಹವನ್ನು ತೆರವು ಮಾಡಿದ ವೇಳೆ ಉಗ್ರರ ಖಚಿತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಕಳೆದ ಜುಲೈ 15 ರಂದು ನಡೆದ ಜಮ್ಮುವಿನ ಟ್ರಾಲ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲೂ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಬಳಿಕ ಜೂನ್ 22 ರಂದು ನಡೆದ ಎನ್‍ಕೌಂಟರ್ ನಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಪೇದೆಯನ್ನು ಅಪಹರಿಸಿ ಕೊಲೆ ಮಾಡಿದ್ದ 3 ಉಗ್ರರನ್ನು ಎನ್‍ಕೌಂಟರ್ ಮಾಡಲಾಗಿತ್ತು.

  • 25 ವರ್ಷದ ಮಹಿಳೆಯನ್ನು ಮದ್ವೆಯಾದ 70ರ ವೃದ್ಧ- ಒಂದೇ ದಿನದಲ್ಲಿ ದೂರ.. ದೂರ..!

    25 ವರ್ಷದ ಮಹಿಳೆಯನ್ನು ಮದ್ವೆಯಾದ 70ರ ವೃದ್ಧ- ಒಂದೇ ದಿನದಲ್ಲಿ ದೂರ.. ದೂರ..!

    ಶ್ರೀನಗರ: 70 ವರ್ಷದ ವೃದ್ಧನೋರ್ವ 25 ವರ್ಷದ ಮಹಿಳೆಯನ್ನು ಮದುವೆಯಾಗಿ ಒಂದೇ ದಿನದಲ್ಲಿ ವಿಚ್ಛೇದನೆ ಪಡೆದ ಘಟನೆ ಜಮ್ಮು-ಕಾಶ್ಮೀರದ ಸುಂದರ್ ಬನಿಯ ಯೋಗಿನಾಲಾದಲ್ಲಿ ನಡೆದಿದೆ.

    ಮೋರ್ ಸಿಂಗ್(70) 25 ವರ್ಷದ ಮಹಿಳೆಯನ್ನು ಮದುವೆಯಾದ ವೃದ್ಧ. ಮೋರ್ ಸಿಂಗ್ ಅವರ ಪತ್ನಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಆಗ ಮೋರ್ ಸಿಂಗ್ ರಿಯಾಸಿ ಗ್ರಾಮದ 25 ವರ್ಷದ ವಿಧವೆಗೆ ಮದುವೆ ಪ್ರಸ್ತಾವನೆ ನೀಡಿದ್ದರು.

    ಆಗ ಮಹಿಳೆ ಮೋರ್ ಸಿಂಗ್‍ರನ್ನು ಮದುವೆಯಾಗೋಕ್ಕೆ ಒಪ್ಪಿಕೊಂಡರು. ನಂತರ ಶಾಸ್ತ್ರ ಸಂಪ್ರದಾಯದಂತೆ ಇವರಿಬ್ಬರ ಮದುವೆ ಜರುಗಿದೆ. ಮದುವೆಯಲ್ಲಿ ಕೂಡ ಯಾವುದೇ ಸಮಸ್ಯೆ ಆಗದೇ ಶಾಂತಿಯಿಂದ ನಡೆದಿತ್ತು. ಆದರೆ ಮದುವೆ ನಡೆದ ಮರುದಿನ ಅಂದರೆ ಬುಧವಾರ ಪತಿ- ಪತ್ನಿ ನಡುವೆ ಜಗಳ ಶುರುವಾಯಿತು.

    ಮದುವೆಯಲ್ಲಿ ವರಮಾಲೆ ಹಾಕುವ ಸಮಯದಲ್ಲಿ ಮೋರ್ ಸಿಂಗ್ ವೇದಿಕೆ ಮೇಲೆ ನಿಂತು ಭಾಷಣವನ್ನು ಮಾಡಿದ್ದರು. ಆಗ ಚುನಾವಣೆಯಲ್ಲಿ ತಾವು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ಅಲ್ಲದೇ ಚುನಾವಣೆಯಲ್ಲಿ ಗೆದ್ದು ಜನರ ಸಮಸ್ಯೆಯನ್ನು ದೂರ ಮಾಡುವುದಾಗಿ ಹೇಳಿಕೊಂಡರು.

    ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಮೋರ್ ಸಿಂಗ್ ಭಾಷಣ ಮಾಡುವಾಗ ಅದನ್ನು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರು. ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆ ವಿಡಿಯೋ ಕೆಲವೇ ಗಂಟೆಗಳಲ್ಲಿ ಸ್ಥಳೀಯಮಟ್ಟದಲ್ಲಿ ವೈರಲ್ ಆಗಿತ್ತು.

    ಈ ಭಾಷಣದ ವಿಡಿಯೋದಿಂದ ಪತಿ-ಪತ್ನಿ ನಡುವೆ ಜಗಳ ನಡೆದಿದೆಯಂತೆ. ನಂತರ ಅವರಿಬ್ಬರು ವಿಚ್ಛೇದನೆ ಪಡೆಯಲು ನಿರ್ಧರಿಸಿದ್ದರು. ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಕುಟುಂಬದವರಿಗೆ ಜಗಳವಾಗಿ ಪರಸ್ಪರ ಹೊಡೆದಾಡಿಕೊಂಡರು.

    ಜಗಳವಾದ ಬಳಿಕ ಮಹಿಳೆಯ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವ ವೇಳೆ ಪಂಚಾಯ್ತಿ ಪೊಲೀಸರು ಕರೆಸಿ ಮಾಹಿತಿ ನೀಡಿದ್ದರು. ಪಂಚಾಯ್ತಿಯಿಂದ ಮಾಹಿತಿ ಪಡೆದ ಬಳಿಕ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದಿದ್ದಾರೆ.

  • ಭಾರತದ ಗಡಿ ಪ್ರವೇಶಿಸಿದ್ದ 11ರ ಪೋರ ಸಿಹಿಯೊಂದಿಗೆ ಪಾಕಿಸ್ತಾನಕ್ಕೆ ಮರಳಿದ!

    ಭಾರತದ ಗಡಿ ಪ್ರವೇಶಿಸಿದ್ದ 11ರ ಪೋರ ಸಿಹಿಯೊಂದಿಗೆ ಪಾಕಿಸ್ತಾನಕ್ಕೆ ಮರಳಿದ!

    ಶ್ರೀನಗರ: ಕಳೆದ ನಾಲ್ಕು ದಿನಗಳ ಹಿಂದೆ ದಾರಿ ತಪ್ಪಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ ಬಾಲಕನನ್ನು ಭಾರತೀಯ ಸೇನಾ ಅಧಿಕಾರಿಗಳು ಪಾಕಿಸ್ತಾನದ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

    ಕಳೆದ ನಾಲ್ಕು ದಿನಗಳ ಹಿಂದೆ ಪಾಕಿಸ್ತಾನದ 11 ವರ್ಷದ ಬಾಲಕ ಮೊಹಮ್ಮದ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ದಾರಿತಪ್ಪಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ.

    ಬಾಲಕ ಮೊಹಮ್ಮದ್ ಅಬ್ದುಲ್ಲಾ ನನ್ನು ಕಂಡ ಭಾರತೀಯ ಸೇನಾ ಅಧಿಕಾರಿಗಳು ಆತನನ್ನು ಜೂನ್ 24 ರಂದು ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅದಕ್ಕೆ ಕೂಡಲೇ ಬಾಲಕನನ್ನು ವಾಪಸ್ ಕಳಿಸಲು ಬೇಕಾದ ಅಗತ್ಯ ವಿಧಿ ವಿಧಾನಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಪೂರೈಸಿದರು. ಬಾಲಕ ಗಡಿ ಪ್ರವೇಶಿಸಿದ ನಾಲ್ಕು ದಿನಗಳೊಳಗೆ ಆತನನ್ನು ಹೊಸ ಬಟ್ಟೆ ತೊಡಿಸಿ ಸಿಹಿ ತಿಂಡಿಗಳೊಂದಿಗೆ ಮರಳಿ ಇಂದು ಪಾಕಿಸ್ತಾನಕ್ಕೆ ಕಳುಹಿಸಲಾಯಿತು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸೇನಾ ವಕ್ತಾರರು ಅಬ್ದುಲ್ಲಾ ಚಿಕ್ಕ ವಯಸ್ಸಿನವರಾಗಿರುವುದರಿಂದ ಅವನನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ಘಟನೆ ಭಾರತ ಹಾಗೂ ಪಾಕಿಸ್ತಾನ್ ನಡುವೆ ವಿಶ್ವಾಸವನ್ನು ಬೆಳೆಸುತ್ತದೆ ಎಂದರು.

    ಭಾರತೀಯ ಸೇನೆಯು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಶಕ್ತಿಯಾಗಿದೆ. ಅದು ಮುಗ್ಧ ನಾಗರಿಕರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆಯಿಂದ ವರ್ತಿಸುತ್ತದೆ ಎಂದು ಸೇನಾ ವಕ್ತಾರರು ಹೇಳಿದರು.

  • ಅಮರನಾಥ ಯಾತ್ರಿಗಳನ್ನು ಸ್ವಾಗತಿಸಿದ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ!

    ಅಮರನಾಥ ಯಾತ್ರಿಗಳನ್ನು ಸ್ವಾಗತಿಸಿದ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ!

    ಶ್ರೀನಗರ: ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವ ಯಾವುದೇ ಯೋಜನೆ ಇಲ್ಲ ಯಾತ್ರಾರ್ಥಿಗಳು ನಮ್ಮ ಅತಿಥಿಗಳು ಎಂದು ಉಗ್ರ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ಅಹಮದ್ ನಾಯ್ಕೊ ತಿಳಿಸಿದ್ದಾನೆ.

    ಕೆಲ ಸೋಶಿಯಲ್ ಮಿಡಿಯಾಗಳಲ್ಲಿ ಈ ಕುರಿತು 15 ನಿಮಿಷದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಆಡಿಯೋದಲ್ಲಿ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವುದಿಲ್ಲವೆಂದು ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ರಿಯಾಜ್ ಅಹಮದ್ ನಾಯ್ಕೊ ತಿಳಿಸಿದ್ದು, ಧ್ವನಿ ಕಮಾಂಡರ್‍ದೆ ಎಂದು ಗುರುತಿಸಲಾಗಿದೆ.

    ಏನಿದೆ ಆಡಿಯೋದಲ್ಲಿ?
    ಅಮರನಾಥ ಯಾತ್ರಾರ್ಥಿಗಳು ಯಾವುದೇ ಭದ್ರತೆ ಇಲ್ಲದೆ ಯಾತ್ರೆ ಪೂರೈಸಬಹುದು. ನೀವು ನಮ್ಮ ಅತಿಥಿಗಳಾಗಿದ್ದು, ನಾವು ಯಾವತ್ತಿಗೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿಲ್ಲ, ಮುಂದೆಯೂ ದಾಳಿ ನಡೆಸುವುದಿಲ್ಲ. ಧಾರ್ಮಿಕ ಇಷ್ಟಾರ್ಥದ ಪೂರೈಕೆಗೆ ಬರುವ ಯಾತ್ರಿಗಳ ವಿರುದ್ಧ ನಮ್ಮ ಹೋರಾಟ ಅಲ್ಲ ಎಂದು ತಿಳಿಸಿದ್ದಾನೆ.

    ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಆದ ರಿಯಾಜ್ ಅಹಮದ್ ನಾಯ್ಕೊ, ನಟೋರಿಯಸ್ ಉಗ್ರನಾಗಿದ್ದು, ಇವನು ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಯ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಾನೆ. ಇದನ್ನೂ ಓದಿ: ಉಗ್ರರ ದಾಳಿ ಭೀತಿ: ಅಮರನಾಥ ಯಾತ್ರೆಗೆ ಹೆಚ್ಚಿದ ಭದ್ರತೆ!

    ಕಳೆದ ವರ್ಷ ಅನಂತ್‍ನಾಗ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ದಾಳಿ ನಡೆಸಿ 8 ಮಂದಿ ಭಕ್ತರು ಸಾವಿಗೀಡಾಗಿದ್ದರು. ಈ ಬಾರಿಯೂ ಅಮರನಾಥ ಯಾತ್ರೆಗೆ ಉಗ್ರರ ಕರಿನೆರಳು ಬೀರಿದ ಹಿನ್ನೆಲೆಯಲ್ಲಿ ಸರ್ಕಾರ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಅಮರನಾಥ ಯಾತ್ರೆಗೆ ಈವರೆಗೂ ದೇಶಾದ್ಯಂತ ಒಟ್ಟು 2 ಲಕ್ಷ ಯಾತ್ರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇಂದು ಮೊದಲನೇ ಹಂತದಲ್ಲಿ ಸೇನೆಯ ಭದ್ರತೆಯೊಂದಿಗೆ 3,000 ಯಾತ್ರಾರ್ಥಿಗಳು ಅಮರನಾಥಾಗೆ ಪ್ರಯಾಣ ಬೆಳೆಸಿದ್ದಾರೆ.

    https://www.youtube.com/watch?v=REGmxw63OZ4

  • ವರದಿಗಾರಿಕೆ ಶೈಲಿಯನ್ನು ಬದಲಿಸಿಕೊಳ್ಳಿ, ಇಲ್ಲವೇ ನಿಮಗೆ ಸಾವೇ ಗತಿ- ಬಿಜೆಪಿ ಶಾಸಕ ಲಾಲ್ ಸಿಂಗ್ ಆವಾಜ್

    ವರದಿಗಾರಿಕೆ ಶೈಲಿಯನ್ನು ಬದಲಿಸಿಕೊಳ್ಳಿ, ಇಲ್ಲವೇ ನಿಮಗೆ ಸಾವೇ ಗತಿ- ಬಿಜೆಪಿ ಶಾಸಕ ಲಾಲ್ ಸಿಂಗ್ ಆವಾಜ್

    ಶ್ರೀನಗರ: ವರದಿಗಾರಿಕೆ ಶೈಲಿಯನ್ನು ಬದಲಿಸಿಕೊಳ್ಳಿ ಇಲ್ಲವಾದರೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಸುಜಾತ್ ಬುಖಾರಿಗೆ ಆದ ಗತಿಯೇ ನಿಮಗೂ ಆಗುತ್ತೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ಮಾಜಿ ಸಚಿವ, ಬಿಜೆಪಿ ಶಾಸಕ ಚೌಧರಿ ಲಾಲ್ ಸಿಂಗ್‍ಗೆ ಪತ್ರಕರ್ತರಿಗೆ ಆವಾಜ್ ಹಾಕಿದ್ದಾರೆ.

    ಶನಿವಾರದಂದು ಜಮ್ಮುವಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಿಮ್ಮ ಬದುಕು ಹಾಗೂ ಬರವಣಿಗೆಯ ನಡುವೆ ನಿರ್ದಿಷ್ಟವಾದ ಗೆರೆಯನ್ನು ಎಳೆದುಕೊಳ್ಳಿ. ನಿಮ್ಮ ಬರವಣಿಗೆ ಶೈಲಿಯನ್ನು ಬದಲಿಸಿಕೊಳ್ಳಿ. ಪತ್ರಕರ್ತ ಸುಜಾತ್ ಬುಖಾರಿ ಸ್ಥಿತಿ ತಂದುಕೊಳ್ಳಬೇಡಿ ಎಂದು ಪತ್ರಕರ್ತರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.

    ಈ ಹಿಂದೆ ಜಮ್ಮು ಕಾಶ್ಮೀರದ ಕಠುವಾದಲ್ಲಿ ಕುರಿ ಕಾಯುವ 8ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಅದನ್ನು ಮಾಧ್ಯಮಗಳು ಕಟುವಾಗಿ ಟೀಕಿಸಿ ವರದಿ ಮಾಡಿದ್ದವು. ಈ ಸಂದರ್ಭದಲ್ಲಿ ಆರೋಪಿಗಳ ಪರವಾಗಿ ಮಾತನಾಡಿದ್ದಕ್ಕೆ ಅವರನ್ನು ಸಂಪುಟದಿಂದ ಕಿತ್ತು ಹಾಕಲಾಗಿತ್ತು.

    ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಪರವಾಗಿ, ಅವರನ್ನು ಬಿಡುಗಡೆ ಮಾಡುವಂತೆ ಪಿಡಿಪಿ ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್ ಮಾತನಾಡಿದ್ದರು. ಅಲ್ಲದೇ ಆರೋಪಿಗಳ ಬಿಡುಗಡೆ ಮಾಡುವಂತೆ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಇದನ್ನು ಗಂಭೀವಾಗಿ ಪರಿಗಣಿಸಿ ಸರಕಾರ ಅವರನ್ನು ಸಂಪುಟದಿಂದ ವಜಾಗೊಳಿಸಿತ್ತು.

    ಇನ್ನು ಈ ಘಟನೆಯನ್ನು ಕುರಿತಂತೆ ಪ್ರತಿಕ್ರಿಯೆಸಿರುವ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಸುಜಾತ್ ಹತ್ಯೆಯು ಪತ್ರಕರ್ತರನ್ನು ಬೆದರಿಸುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ವಿಷಾದನೀಯ ಎಂದು ಟ್ವೀಟ್ ಮಾಡಿದ್ದಾರೆ.

  • ರಾಜ್ಯಪಾಲ ಆಡಳಿತದಿಂದ ಉಗ್ರ ನಿಗ್ರಹ ಸುಲಭ: ಜಮ್ಮು ಕಾಶ್ಮೀರ ಡಿಐಜಿ

    ರಾಜ್ಯಪಾಲ ಆಡಳಿತದಿಂದ ಉಗ್ರ ನಿಗ್ರಹ ಸುಲಭ: ಜಮ್ಮು ಕಾಶ್ಮೀರ ಡಿಐಜಿ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಯಿಂದಾಗಿ ಉಗ್ರ ನಿಗ್ರಹ ಸುಲಭ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್ ಪಿ ವೈದ್ ರವರು ತಿಳಿಸಿದ್ದಾರೆ.

    ರಾಜ್ಯಪಾಲರ ಆಡಳಿತ ಜಾರಿಯಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಆಳ್ವಿಕೆ ಹಿನ್ನೆಲೆ ಇನ್ನು ಯಾವುದೇ ಕಾರಣಕ್ಕೂ ಉಗ್ರರ ವಿರುದ್ಧ ಕಾರ್ಯಾಚರಣೆ ನಿಲ್ಲದು. ಪೊಲೀಸರು ಹಾಗೂ ಸೇನೆಯು ನಿರಾಂತಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

    ರಂಜಾನ್ ನಿಮಿತ್ತ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಅಲ್ಲದೇ ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳದಂತೆ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಗ್ರರ ದಾಳಿ ತೀವ್ರಗೊಂಡ ಪರಿಣಾಮ ಅನೇಕ ಮಂದಿಯ ಸಾವಿಗೆ ಕಾರಣವಾಯಿತು ಎಂದು ಹೇಳಿದರು.

    ರಂಜಾನ್ ಮುಗಿದಿದ್ದು, ರಾಜ್ಯಪಾಲರ ಆಳ್ವಿಕೆಯಿಂದ ಪೊಲೀಸರು ಹಾಗೂ ಸೇನೆಗೆ ಬಲ ಬಂದಿದೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯೇ ನಮ್ಮ ಗುರಿ ಎಂದು ತಿಳಿಸಿದರು.

    ರಾಜ್ಯಪಾಲರ ಆಡಳಿತ ಕಣಿವೆ ರಾಜ್ಯದಲ್ಲಿ ಪರಿಣಾಮ ಬೀರಲಿದೆ. ಪೊಲೀಸರು ಮತ್ತು ಸೇನೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಣೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಿಡಿಪಿ ಮೈತ್ರಿಯಿಂದ ಬಿಜೆಪಿ ಹಿಂದೆ ಸರಿದ ಪರಿಣಾಮ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಮುರಿದು ಬಿದ್ದಿತ್ತು. ಪರಿಣಾಮವಾಗಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿದ ಜಾರಿಗೆ ಬಂದಿದೆ.

  • ಭಾರತದೊಳಗೆ ನುಸುಳುತ್ತಿದ್ದ ಆರು ಉಗ್ರರನ್ನು ಸೆದೆಬಡಿದ ಭಾರತೀಯ ಸೇನೆ

    ಭಾರತದೊಳಗೆ ನುಸುಳುತ್ತಿದ್ದ ಆರು ಉಗ್ರರನ್ನು ಸೆದೆಬಡಿದ ಭಾರತೀಯ ಸೇನೆ

    ಶ್ರೀನಗರ: ಭಾತರದೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಆರು ಜನ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

    ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೆರನ್ ಸೆಕ್ಟರ್ ನಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಆರು ಜನ ಭಯೋತ್ಪಾದಕರನ್ನು ಭಾರತೀಯ ಸೇನೆ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಶ್ರೀನಗರದಿಂದ 94 ಕಿಮೀ ದೂರದಲ್ಲಿರುವ ಕೆರನ್ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದರು. ಸ್ಥಳದಲ್ಲಿ ಸೈನಿಕರು ಪಹರೆ ನಡೆಸುತ್ತಿದ್ದ ವೇಳೆ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರು ಯೋಧರ ಗುಂಡಿಗೆ ಬಲಿಯಾಗಿದ್ದಾರೆ.

    ಸೇನಾ ಪಡೆಗಳು ಇನ್ನೂ ಸ್ಥಳದಲ್ಲಿಯೇ ಪಹರೆ ಕಾಯುತ್ತಿದ್ದು, ಅಡಗಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ನಡೆಸುತ್ತಿದ್ದಾರೆ. ಕಳೆದ ಎರಡು ವಾರಗಳಲ್ಲಿ ಇಂದು ಹತರಾದ 6 ಜನ ಭಯೋತ್ಪಾದಕರನ್ನು ಒಳಗೊಂಡಂತೆ ಒಟ್ಟು 21 ಉಗ್ರರು ಹತರಾಗಿದ್ದಾರೆ.

    ಕಳೆದರೆಡು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಸೇರಿದಂತೆ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹಾಗೂ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಮಂತ್ರಿ ಜಿತೇಂದ್ರ ಸಿಂಗ್ ಕುಪ್ವಾರಾ ಜಿಲ್ಲೆಗೆ ಭೇಟಿ ನೀಡಿ ಗಡಿ ಪ್ರದೇಶದ ಜನರನ್ನು ಭೇಟಿಯಾಗಿದ್ದರು.

    ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ರಂಜಾನ್ ಒಪ್ಪಂದ ಮಾಡಿಕೊಂಡರು ಭಯೋತ್ಪಾದಕರ ದಾಳಿಗಳು ಇನ್ನೂ ನಿಂತಿಲ್ಲ. ಹಾಗಾಗಿ ರಂಜಾನ್ ಸಂದರ್ಭದಲ್ಲಿ ಈ ದಾಳಿಗಳು ನಡೆದಲ್ಲಿ ಸೇನೆ ಸಮರ್ಥವಾಗಿ ಮುಕ್ತವಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಿ ಎಂದು ರಾಜನಾಥ್ ಸಿಂಗ್ ಆದೇಶಿಸಿದ್ದಾರೆ.

  • ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

    ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

    ನವದೆಹಲಿ: ಭಾನುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಬಿರುಗಾಳಿ ಜೊತೆಗೆ ಮಳೆಯಿಂದ ದೆಹಲಿ ತತ್ತರಿಸಿದೆ.

    ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಸಂಜೆ 4:30 ನಂತರ ಮೋಡ ಕವಿದು ಮಳೆ ಸುರಿದಿದೆ. ಇದರಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಶ್ರೀನಗರದಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಮಾರ್ಗ ಮಧ್ಯೆ ಅಮೃತ್‍ಸರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದೇ ರೀತಿ 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

    ಮೆಟ್ರೊ ಸೇವೆಯಲ್ಲಿ 30 ನಿಮಿಷಗಳ ಕಾಲ ವ್ಯತ್ಯಯವಾಗಿದೆ. ಭಾರತೀಯ ಹವಾಮಾನ ಇಲಾಖೆಯು ಉತ್ತರಾಖಂಡ್, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಚಂಡಮಾರುತದ ಮುನ್ಸೂಚನೆ ನೀಡಿತ್ತು. ಬೆಟ್ಟ ರಾಜ್ಯಗಳ ಮೇಲಿನ ಚಂಡಮಾರತದಿಂದಾಗಿ ಉತ್ತರ ಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು.

  • ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 20ಕ್ಕೂ ಅಧಿಕ ಮಂದಿ ಗಂಭೀರ

    ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 20ಕ್ಕೂ ಅಧಿಕ ಮಂದಿ ಗಂಭೀರ

    ಶ್ರೀನಗರ: ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

    ಈ ಘಟನೆ ಬರಾಮುಲ್ಲಾದ ಉರಿಯಲ್ಲಿರುವ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದೆ. ಎಸ್‍ಆರ್ ಟಿಸಿ ಬಸ್ ಇಂದು ಸಲಾಮಾಬಾದ್ ನಿಂದ ಉರಿಗೆ ಹೋಗುತ್ತಿತ್ತು. ಈ ವೇಳೆ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ರಸ್ತೆಯ ಕಬ್ಬಿಣದ ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾಗಿದೆ.

    ಬಸ್ ಪಲ್ಟಿಯಾದ ಪರಿಣಾಮ 20 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣೆಯ ಕಾರ್ಯಚರಣೆ ನಡೆಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ.

    https://www.youtube.com/watch?v=vpN34QEcYSs