Tag: Srinagar

  • ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಕಸಿದು ಉಗ್ರರು ಪರಾರಿ

    ಶ್ರೀನಗರ: ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಬಳಿ ಶಸ್ತ್ರಾಸ್ತ್ರ ಕಸಿದ ಉಗ್ರರು ಪರಾರಿಯಾದ ಹಿನ್ನೆಲೆಯಲ್ಲಿ ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಬ್ಬಂದಿಯ ಬಳಿ ಉಗ್ರರು ಶಸ್ತ್ರಸ್ತ್ರ ಕಸಿದುಕೊಂಡು ಪರಾರಿಯಾಗಿದ್ದಾರೆ. ಮುಖಂಡನ ಬೆಂಬಲಿಗರ ಗುಂಪಿನಲ್ಲಿ ಸೇರಿಕೊಂಡಿದ್ದ ಶಂಕಿತ ಉಗ್ರರು ಕರ್ತವ್ಯ ನಿರತ ಸಿಬ್ಬಂದಿಯ ಬಂದೂಕು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದೀಗ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮೂಲಗಳು ಪ್ರಕಾರ, ಭದ್ರತಾ ಸಿಬ್ಬಂದಿಯ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದುಕೊಂಡು ಓಡಿಹೋಗಿದ್ದಾರೆ. ಬಂದೂಕು ಕಸಿದ ಉಗ್ರರನ್ನು ಸೆರೆಹಿಡಿಯಲು ಭಾರತೀಯ ಸೇನೆ ತೀವ್ರ ಶೋಧ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ಸೈನಿಕರ ಜೊತೆ ಸ್ಥಳೀಯ ಪೊಲೀಸರು ಕೂಡ ಶೋಧಕಾರ್ಯಕ್ಕೆ ಸಾಥ್ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದೆ.

    ಈ ವರ್ಷದಲ್ಲಿ ಹೀಗೆ ಉಗ್ರರು ಭದ್ರತಾ ಸಿಬ್ಬಂದಿಯ ಬಂದೂಕು ಕಸಿದು ಪರಾರಿಯಾಗಿರುವುದು ಇದು 2ನೇ ಪ್ರಕರಣವಾಗಿದೆ. ಈ ಹಿಂದೆ ಮಾರ್ಚ್ 8ರಂದು ಮುಸುಕುಧಾರಿ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್‍ಒ ದುಲೀಪ್ ಕುಮಾರ್ ಅವರ ಮನೆಗೆ ನುಗ್ಗಿ, ಅವರ ಬಳಿಯಿದ್ದ ಒಂದು ಎಕೆ 47 ಬಂದೂಕನ್ನು ಕಸಿದಿದ್ದರು. ಅದರ ಜೊತೆಗೆ ಉಗ್ರರು 90 ಬುಲೆಟ್‍ಗಳನ್ನೂ ಕೂಡ ತೆಗೆದುಕೊಂಡು ಓಡಿಹೋಗಿದ್ದರು.

    ಈ ಬಗ್ಗೆ ಕಿಶ್ತ್ವಾರ್ ಡಿಸಿ ಎ.ಎಸ್ ರಾಣಾ ಅವರು ಮಾತನಾಡಿ, ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತರಾಗಿರುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

  • ಪ್ರಮುಖ ಎಲ್‍ಇಟಿ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಪ್ರಮುಖ ಎಲ್‍ಇಟಿ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಶ್ರೀನಗರ: ಪಾಕಿಸ್ತಾನ ಲಷ್ಕರ್-ಇ-ತೊಯ್ಬಾ(ಎಲ್‍ಇಟಿ) ಉಗ್ರ ಸಂಘಟನೆಯ ಪ್ರಮುಖ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ಮಾಡಿ ಹೊಡೆದುರುಳಿಸಿದೆ.

    ಮೃತ ಉಗ್ರನನ್ನು ಎಲ್‍ಇಟಿ ಉಗ್ರ ಸಂಘಟನೆಯ ಆಸಿಫ್ ಮಕ್ಬುಲ್ ಭಟ್ ಎಂದು ಗುರುತಿಸಲಾಗಿದ್ದು, ಸೊಪೋರ್‌ನಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರ ಕುಟುಂಬದ ಮೂವರು ಸದಸ್ಯರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಗಾಯಗೊಂಡವರಲ್ಲಿ ಅಸ್ಮಾ ಜನ್ ಎಂಬ ಯುವತಿಯೂ ಸೇರಿದ್ದಾಳೆ. ಸೊಪೋರ್‌ನ ವಲಸೆ ಕಾರ್ಮಿಕ ಶಫಿ ಆಲಂ ಮೇಲೆ ಗುಂಡು ಹಾರಿಸಲು ಆಸಿಫ್ ಕೂಡ ಪ್ರಮುಖ ಕಾರಣ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಈ ಪ್ರದೇಶದಲ್ಲಿ ಆಸಿಫ್ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಕೆಲ ಕಾರ್ಮಿಕರನ್ನು ಬಳಸಿಕೊಂಡು ಅವರಿಂದ ಸಾರ್ವಜನಿಕರನ್ನು ಹೆದರಿಸಲು ಪೋಸ್ಟರ್‌ಗಳನ್ನು ಆತ ಪ್ರಿಂಟ್ ಮಾಡಿಸುತ್ತಿದ್ದನು. ಅಲ್ಲದೆ ವ್ಯಾಪಾರಿಗಳನ್ನು ಹೆದರಿಸಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚುವಂತೆ ಮಾಡುತ್ತಿದ್ದ, ಜೊತೆಗೆ ಇಲ್ಲಿನ ನಿವಾಸಿಗಳಿಗೆ ದಿನನಿತ್ಯದ ಚಟುವಟಿಕೆಗಳನ್ನು ಕೂಡ ಮಾಡಲು ಬಿಡುತ್ತಿರಲಿಲ್ಲ. ಪ್ರತಿನಿತ್ಯ ಸ್ಥಳೀಯರಿಗೆ ಹಿಂಸೆ ನೀಡುತ್ತಿದ್ದ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‍ಬಗ್ ಸಿಂಗ್ ತಿಳಿಸಿದರು.

    ಅಲ್ಲದೆ ಸದ್ಯ ಕಣಿವೆ ರಾಜ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಶಾಲಾ, ಕಾಲೇಜುಗಳು ಆರಂಭವಾಗಿದೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಕಾರ್ಗಿಲ್‍ನಲ್ಲೂ ಎಲ್ಲವೂ ಸರಿಯಾಗಿದೆ, ಯಾವುದೇ ತೊಂದರೆಯಿಲ್ಲ. ಕಣಿವೆ ರಾಜ್ಯದ ಶೇಕಡ 90 ಪ್ರದೇಶಗಳು ನಿರ್ಬಂಧಗಳಿಂದ ಮುಕ್ತವಾಗಿದೆ. 100% ಫೋನ್, ಇಂಟರ್‌ನೆಟ್ ಸೇವೆಗಳು ಚಾಲ್ತಿಯಲ್ಲಿದೆ ಎಂದು ಡಿಜಿಪಿ ಹೇಳಿದರು.

    ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಮೂಲಗಳ ಪ್ರಕಾರ, ಆಸಿಫ್ ಕಾರಿನಲ್ಲಿ ತೆರೆಳುತ್ತಿದ್ದ ವೇಳೆ ಕ್ರಾಸಿಂಗ್‍ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಆತನನ್ನು ತಡೆದಿದ್ದರು. ಆಗ ಆತ ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದನು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಸೇನೆ ಆತನನ್ನು ಎನ್‍ಕೌಂಟರ್ ಮಾಡಿ ಹತ್ಯೆಮಾಡಿದೆ.

    ಸೋಮವಾರದಂದು ಜಮ್ಮು ಕಾಶ್ಮೀರ ಪೊಲೀಸರು 8 ಮಂದಿ ಉಗ್ರರನ್ನು ಸೊಪೋರ್‌ನಲ್ಲಿ ಸೆರೆಹಿಡಿದಿದ್ದರು. ಬಂಧಿತ ಉಗ್ರರು ಸೊಪೋರ್ ಪ್ರದೇಶದಲ್ಲಿ ಶಾಂತಿ ಕದಡಲು ಪ್ರಚೋಧನಕಾರಿ ಪೋಸ್ಟರ್‌ಗಳು, ಉಗ್ರರನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಪ್ರಿಂಟ್ ಮಾಡಿ ಎಲ್ಲೆಡೆ ಹಂಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು.

  • 24 ಗಂಟೆಗಳಲ್ಲಿ 5 ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

    24 ಗಂಟೆಗಳಲ್ಲಿ 5 ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಮತ್ತು ಸುಂದರ್‍ಬಾನಿ ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ, ಕಳೆದ 24 ಗಂಟೆಗಳಲ್ಲಿ ಪಾಕ್ 5 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ದುಸ್ಸಾಹಸ ಮೆರೆದಿದೆ.

    ಪಾಕ್ ಮಾಡಿದ ದುಸ್ಸಾಹಸಕ್ಕೆ ಭಾರತೀಯ ಸೇನೆಯು ಕೂಡ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ಪಡೆಗಳು ಬೆಳಗ್ಗೆ 10:00 ರಿಂದ ನಿಯಂತ್ರಣ ರೇಖೆ(ಎಲ್‍ಒಸಿ) ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತ ಸೇನೆ ಕೂಡ ಗುಂಡಿನ ದಾಳಿ ಮೂಲಕವೇ ಪ್ರತ್ಯುತ್ತರ ನೀಡಿದೆ.

    ಸೆಪ್ಟೆಂಬರ್ 2ರ ನಂತರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಕಣಿವೆಯಲ್ಲಿ ಶಾಂತಿಯನ್ನು ಕದಡುವ ಪಾಕಿಸ್ತಾನದ ದುಷ್ಕೃತ್ಯಕ್ಕೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದರು. ರಾಜಸ್ಥಾನದ ಅಲ್ವಾರ್‍ನ ರೂಪಂಗಢ ತಹ್ಸೀಲ್‍ನ ಭಡೂನ್ ಗ್ರಾಮದ ನಿವಾಸಿ ಗ್ರೆನೇಡಿಯರ್ ಹೆಮರಾಜ್ ಜಾಟ್(23) ಹುತಾತ್ಮರಾದ ಯೋಧರು. ಇವರು ಮಾರ್ಚ್ 2017 ರಂದು ಭಾರತೀಯ ಸೈನ್ಯಕ್ಕೆ ನೇಮಕವಾಗಿದ್ದರು.

    ಶನಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತನಾಡಿ, ಗಡಿಯಲ್ಲಿ 20 ಕಿ.ಮೀ ದೂರದಲ್ಲಿ ಪಾಕಿಸ್ತಾನಿ ಸಂವಹನ ಗೋಪುರಗಳಿವೆ, ಅವರು ಅಲ್ಲಿಂದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಜೊತೆಗೆ ಪಾಕಿಸ್ತಾನ ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಿದರೆ, ಅದರ ವಿರುದ್ಧ ಹೋರಾಡಲು ಭಾರತೀಯ ಸೈನ್ಯ ಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧ 370ನೇ ವಿಧಿಯನ್ನು ರದ್ದುಗೊಳಿದ ಕೇಂದ್ರ ಸರ್ಕಾರದ ಕ್ರಮವನ್ನು ಬಹುತೇಕ ಕಾಶ್ಮೀರಿಗಳು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದರು.

    ಆಗಸ್ಟ್ 30ರಂದು ಸರ್ಕಾರ ಕದನ ವಿರಾಮ ಉಲ್ಲಂಘನೆ ಕುರಿತು ವರದಿ ಬಿಡುಗಡೆ ಮಾಡಿತ್ತು. ವರದಿ ಪ್ರಕಾರ, ಭಾರತ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನ ಸೇನೆ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅಲ್ಲದೆ 2019ರ ಆಗಸ್ಟ್ 30ರವರೆಗೆ ಬರೋಬ್ಬರಿ 1,900 ಬಾರಿ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವರದಿಯಾಗಿದೆ.

  • ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    -ಜೈಲಾಗಿ ಬದಲಾದ ಸೆಂಟೌರ್ ಹೋಟೆಲ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 50ಕ್ಕೂ ಅಧಿಕ ರಾಜಕೀಯ ಮುಖಂಡರನ್ನು ಶ್ರೀನಗರದ ಹೊರವಲಯದಲ್ಲಿರುವ ಸೆಂಟೌರ್ ಹೋಟೆಲ್ ನಲ್ಲಿ ಇರಿಸಲಾಗಿದೆ. ಹೋಟೆಲ್ ಜೈಲಾಗಿ ಬದಲಾಗಿದೆ ಎಂದು ವರದಿಯಾಗಿದೆ. ಹೋಟೆಲ್ ಬಂಧನದಲ್ಲಿರುವ ಎಲ್ಲ ನಾಯಕರಿಗೆ ಸೋಮವಾರ ತಮ್ಮ ಸಂಬಂಧಿ ಮತ್ತು ಆಪ್ತರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು.

    ಬಟ್ಟೆ, ಹಣ್ಣು, ಆಹಾರ ಇತರೆ ಅಗತ್ಯ ವಸ್ತುಗಳೊಂದಿಗೆ ರಾಜಕೀಯ ನೇತಾರರ ಸಂಬಂಧಿಗಳು ಹೋಟೆಲ್ ಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು. ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಅನುಚ್ಛೇಧ 370 ರದ್ದುಗೊಳಿಸಲಾಗಿತ್ತು. ಆಗಸ್ಟ್ 5ರಿಂದ 50ಕ್ಕೂ ಅಧಿಕ ಸ್ಥಳೀಯ ಮುಖಂಡರನ್ನು ಹೋಟೆಲ್ ನಲ್ಲಿ ಇರಿಸಲಾಗಿದೆ.

    ಸೆಂಟೌರ್ ಹೋಟೆಲ್ ನಲ್ಲಿ ಸಜ್ಜಾದ್ ಲೋನ್, ಇಮ್ರಾನ್ ಅನ್ಸಾರಿ, ಯಾಸಿರ್ ರೆಸಿ, ಇಶ್ಫಾಕ್ ಜಬ್ಬಾರ್, ಅಶ್ರಫ್ ಮೀರ್, ಸಲ್ಮಾನ್ ಸಾಗರ್, ಮುಬಾರಕ್ ಗುಲ್, ನಯೀಂ ಅಖ್ತರ್, ಖುರ್ಷಿದ್ ಅಲಂ, ವಾಹಿದ್ ಪಾರಾ, ಶೇಖ್ ಇಮ್ರಾನ್ ಆದಿ ಸೇರಿದಂತೆ 50ಕ್ಕೂ ಅಧಿಕ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಾಯಕರನ್ನು ಭೇಟಿಯಾದ ಓರ್ವ ವೃದ್ಧ, ಹೋಟೆಲ್ ಜೈಲಿನಂತೆಯೇ ಇದೆ. ಆದ್ರೆ ನನ್ನ ಮಗ ಆರೋಗ್ಯವಾಗಿದ್ದಾನೆ ಎಂಬುವುದೇ ನನಗೆ ಖುಷಿ ಎಂದಿದ್ದಾರೆ.

    ಹೋಟೆಲ್ ಮುಂಭಾಗದ ಗ್ಯಾಲರಿಯಲ್ಲಿ ಮಗನನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಮುಖಂಡರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಹೊರಗಡೆ ಏನಾಗ್ತಿದೆ ಎಂಬುದರ ಮಾಹಿತಿ ನೀಡುತ್ತಿಲ್ಲ. ಭೇಟಿಯಾಗಲು ಬರುತ್ತಿರುವ ಸಂಬಂಧಿ ಮತ್ತು ಆಪ್ತರಿಂದಲೇ ರಾಜಕೀಯ ನಾಯಕರು ಕೆಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೋಟೆಲ್ ನಲ್ಲಿ ಪಿಡಿಪಿ, ನ್ಯಾಶನಲ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವರಿಷ್ಠ ನಾಯಕರಿದ್ದಾರೆ ಎಂದು ಹೋಟೆಲ್ ಒಳಗೆ ಹೋಗಿ ಬಂದ ವೃದ್ಧರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಅನುಸರಿಸುವ ಕ್ರಮಗಳನ್ನು ಇಲ್ಲಿಯೂ ಪಾಲನೆ ಮಾಡಲಾಗುತ್ತಿದೆ. ಆಪ್ತರಿಗೆ ಸಿಗರೇಟ್ ಸೇರಿದಂತೆ ಯಾವುದೇ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಸಂಬಂಧಿಗಳಿಗೆ ಬಿಡುತ್ತಿಲ್ಲ. ಇನ್ನು ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳನ್ನು ಬಂದ್ ಮಾಡಲಾಗಿದೆ. ಕೇವಲ ದಿನಪತ್ರಿಕೆಗಳ ಮೂಲಕವೇ ರಾಜಕೀಯ ನೇತಾರರು ಹೊರಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಓರ್ವ ಭದ್ರತಾ ಸಿಬ್ಬಂದಿ, ಎಲ್ಲ ಮುಖಂಡರನ್ನು ಜೈಲಿನಲ್ಲಿರುವ ಕೈದಿಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳು ಬಂದ್ ಆಗಿದ್ದು, ದಿನಪತ್ರಿಕೆ ಮತ್ತು ಕೆಲ ಪುಸ್ತಕಗಳನ್ನು ಓದಿ ನಾಯಕರು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ನಾನು ಭಾನುವಾರ ಸಂಜೆ 6ಗಂಟೆಗೆ ಹೋಟೆಲ್ ಬಳಿ ಬಂದೆ. ಅಧಿಕಾರಿಗಳು ಪತಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಭೇಟಿಯ ಸಮಯ ನಿಗದಿಯಾಗಿದೆ ಎಂದು ಹೇಳುತ್ತಾರೆ. ನನ್ನ ಪತಿ ಎಂದೂ ಕಾನೂನಿನ ಉಲ್ಲಂಘನೆ ಮಾಡಿಲ್ಲ. ಆದ್ರೂ ಅವರನ್ನು ಬಂಧಿಸಲಾಗಿದೆ ಎಂದು ಪಿಡಿಪಿ ಶಾಸಕರೊಬ್ಬರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶ್ರೀನಗರದಿಂದ ರಾಹುಲ್ ಗಾಂಧಿ, ವಿಪಕ್ಷ ನಾಯಕರು ವಾಪಸ್

    ಶ್ರೀನಗರದಿಂದ ರಾಹುಲ್ ಗಾಂಧಿ, ವಿಪಕ್ಷ ನಾಯಕರು ವಾಪಸ್

    ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ 11 ಜನ ವಿಪಕ್ಷ ನಾಯಕರನ್ನು ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

    ಜಮ್ಮು-ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್‍ನ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟು 11 ಜನ ವಿಪಕ್ಷ ಮುಖಂಡರು ಕಾಶ್ಮೀರಕ್ಕೆ ಆಗಮಿಸಿದ್ದರು. ಈ ನಿಯೋಗದಲ್ಲಿ ಗುಲಾಮ್ ನಬಿ ಆಝಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಸಿಪಿಐ(ಎಂ)ನ ಸೀತಾರಾಮ್ ಯಚೂರಿ, ಡಿಎಂಕೆಯ ತಿರುಚಿ ಶಿವಾ, ಆರ್‍ಜೆಡಿಯ ಮನೀಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಎನ್‍ಸಿಪಿಯ ಮಜೀದ್ ಮೆನನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಇದ್ದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ. ದಯವಿಟ್ಟು ಇಲ್ಲಿಂದ ವಾಪಸ್ ಹೋಗಿ ಎಂದು ಮನವಿ ಮಾಡಿಕೊಂಡಿದ್ದರು.

    ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಇತರ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಜೀವನ ಕ್ರಮೇಣ ಪುನಃಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು. ಒಂದು ವೇಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಲ್ಲಿ ಅದು ನಿರ್ಬಂಧಗಳನ್ನು ಉಲ್ಲಂಘಿಸಿದಂತೆ. ಅಲ್ಲದೆ ಜನರನ್ನು ಅನಾನುಕೂಲತೆಗೆ ತಳ್ಳಿದಂತೆ ಎಂದು ಜಮ್ಮು ಕಾಶ್ಮೀರ ಸರ್ಕಾರ ಟ್ವೀಟ್ ಮಾಡಿತ್ತು.

    ನೀವು ಭೇಟಿ ನೀಡುವ ಮೂಲಕ ಜನಸಾಮಾನ್ಯರನ್ನು ಅನಾನುಕೂಲತೆಗೆ ದೂಡುತ್ತೀರಿ. ಹೀಗಾಗಿ ರಾಜಕೀಯ ಮುಖಂಡರು ಸಹಕಾರ ನೀಡಬೇಕು. ಶ್ರೀನಗರಕ್ಕೆ ಭೇಟಿ ನೀಡಬಾರದು. ನೀವು ಭೇಟಿ ನೀಡುತ್ತಿರುವ ಅನೇಕ ಸ್ಥಳಗಳಲ್ಲಿ ನಿರ್ಬಂಧ ಹೇರಲಾಗಿದೆ. ಹೀಗಾಗಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಸಾವು ನೋವು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಜಮ್ಮು ಕಾಶ್ಮೀರ ಸರ್ಕಾರ ತಿಳಿಸಿದೆ.

    ಭೇಟಿಯ ಹಿನ್ನೆಲೆ:
    ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಹುಲ್ ಗಾಂಧಿ ಅವರು ಇತ್ತೀಚೆಗೆ ಟೀಕಿಸಿದ್ದರು. ಇದಕ್ಕೆ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರಿಗೆ ವಿಮಾನದ ವ್ಯವಸ್ಥೆ ಮಾಡುತ್ತೇನೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ಇಲ್ಲಿನ ಸ್ಥತಿಗತಿ ಅರಿತು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿ, ಭೇಟಿ ನೀಡಲು ವಿಮಾನ ವ್ಯವಸ್ಥೆ ಅಗತ್ಯವಿಲ್ಲ ನಾವು ಭೇಟಿ ನೀಡಲು ಸೂಕ್ತ ವಾತಾವರಣ ಕಲ್ಪಿಸಿಕೊಟ್ಟರೆ ಅಷ್ಟೇ ಸಾಕು ಎಂದು ಹೇಳಿದ್ದರು. ಹೀಗಾಗಿ ರಾಜ್ಯಪಾಲರು ಹಾಗೂ ರಾಹುಲ್ ಗಾಂಧಿ ಮಧ್ಯೆ ವಾಗ್ವಾದ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ಬಾರಿ ಗುಲಾಮ್ ನಬಿ ಆಝಾದ್ ಅವರು ಭೇಟಿ ನೀಡಲು ಯತ್ನಿಸಿದಾಗ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆದು ಮರಳಿ ದೆಹಲಿಗೆ ಕಳುಹಿಸಲಾಗಿತ್ತು.

  • ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ಜೀವ ಉಳಿಸಿದ ವಾಯು ಸೇನೆ- ವಿಡಿಯೋ ವೈರಲ್

    ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ಜೀವ ಉಳಿಸಿದ ವಾಯು ಸೇನೆ- ವಿಡಿಯೋ ವೈರಲ್

    ಶ್ರೀನಗರ: ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿಸಿದ ಪರಿಣಾಮ ಇಲ್ಲಿನ ಸೇತುವೆ ಬಳಿ ಕುಳಿತಿದ್ದ ನಾಲ್ಕು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಭಾರತೀಯ ವಾಯು ಸೇನೆಗೆ ಮಾಹಿತಿ ತಿಳಿದು ಸಂತ್ರಸ್ತರನ್ನು ಯೋಧರು ಕೂಡಲೇ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಿದ್ದಾರೆ.

    ವಾಯು ಸೇನೆಯ ಈ ಸಾಹಸದ ವಿಡಿಯೋ ಇದೀಗ ವೈರಲ್ ಆಗಿದ್ದು, ಯೋಧರ ಕಾರ್ಯವನ್ನು ಎಲ್ಲರು ಹಾಡಿ ಹೊಗಳಿದ್ದಾರೆ. ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿದು ಬಂದಿದೆ. ಈ ಹಿನ್ನೆಲೆ ತಾವಿ ನದಿಯ ಸೇತುವೆ ಬಳಿ ಕುಳಿತಿದ್ದ ಹಲವರು ಅಪಾಯಕ್ಕೆ ಸಿಲುಕಿದ್ದರು. ಆಗ ಅಲ್ಲಿ ಕರ್ತವ್ಯನಿರತರಾಗಿದ್ದ ಭಾರತೀಯ ಸೇನೆಯ ಯೋಧರು ಕೂಡಲೇ ವಿಚಾರವನ್ನು ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ವಾಯು ಸೇನೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ರವಾನಿಸಿ ಸಂತ್ರಸ್ತರ ರಕ್ಷಿಸಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ತಂಡ ಹೆಲಿಕಾಪ್ಟರ್‍ನಲ್ಲಿದ್ದ ಹಗ್ಗದ ಮೂಲಕ ಓರ್ವ ಯೋಧ ಕೆಳಗಡೆ ಇಳಿದು ಅಪಾಯಕ್ಕೆ ಸಿಲುಕಿದ್ದವರಿಗೆ ಹಗ್ಗ ಕಟ್ಟಿ ಅದರ ಮೂಲಕ ಮೇಲಕ್ಕೆ ಕರೆದುಕೊಂಡಿದ್ದಾರೆ.

    ಹೀಗೆ ಸೇತುವೆ ಬಳಿ ಇದ್ದ ಎಲ್ಲರನ್ನೂ ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ವೇಳೆ ಸೇನೆಯ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸುವ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಲಡಾಖ್‍ನಲ್ಲಿ ಎಂಎಸ್ ಧೋನಿ ಧ್ವಜಾರೋಹಣ

    ಲಡಾಖ್‍ನಲ್ಲಿ ಎಂಎಸ್ ಧೋನಿ ಧ್ವಜಾರೋಹಣ

    ಶ್ರೀನಗರ: ಆಗಸ್ಟ್ 15 ರಂದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಲಡಾಖ್‍ನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಜುಲೈ 31 ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿಯೇ ಕರ್ನಲ್ ಸೇವೆ ಮಾಡುತ್ತಿರುವ ಧೋನಿ ಆಗಸ್ಟ್ 15 ರವರೆಗೆ ತಮ್ಮ ಕರ್ತವ್ಯ ಮುಂದುವರಿಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೊಷಣೆ ಮಾಡಿತ್ತು.

    ಸದ್ಯ ಲಡಾಖ್ ಕೇಂದ್ರಾಡಳಿತ ಪ್ರದೇಶ ಆಗಿರುವುದರಿಂದ ಆಗಸ್ಟ್ 15 ರಂದು ಧೋನಿ ಅವರು ಧ್ವಜಾರೋಣ ಮಾಡಲಿದ್ದಾರೆ. ಆ ಮೂಲಕ ವಿಶೇಷ ಸಂದೇಶ ರವಾನೆ ಮಾಡಲು ಸಿದ್ಧತೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಈ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು. ಧೋನಿ 2020 ರ ಫೆಬ್ರವರಿಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆ ಮುಂದಿನ ವರ್ಷದ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ ಎಂದು ಹೇಳಲಾಗಿದೆ.

  • ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕನ ಹ್ಯಾಂಡ್‍ಶೇಕ್ – ವೈರಲ್ ಫೋಟೋ

    ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕನ ಹ್ಯಾಂಡ್‍ಶೇಕ್ – ವೈರಲ್ ಫೋಟೋ

    ಶ್ರೀನಗರ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಭೀಗಿ ಭದ್ರತೆಯನ್ನು ಹೊಂದಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಭದ್ರತೆಯಲ್ಲಿ ತೊಡಗಿದ್ದ ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗೆ ಕಾಶ್ಮೀರದ ಬಾಲಕ ಹ್ಯಾಂಡ್ ಶೇಕ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಪ್ರಸಾರ ಭಾರತಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಟ್ವೀಟ್ ಮಾಡಲಿದ್ದು, ಫೋಟೋ ನೋಡಿದ ಹಲವು ಮಂದಿ ಯೋಧರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸಿಆರ್‌ಪಿಎಫ್‌ ಯೋಧರು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ನಿಮ್ಮ ಕಾರ್ಯಕ್ಕೆ ಧನ್ಯವಾದ ಎಂದು ಹಲವರು ಮರು ಟ್ವೀಟ್ ಮಾಡುತ್ತಿದ್ದಾರೆ.

    ಇತ್ತ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಸಹಿ ಹಾಕಿದ್ದಾರೆ. ಅಕ್ಟೋಬರ್ 31 ರಿಂದ ಜಾರಿ ಆಗುವಂತೆ ಜಮ್ಮು ಕಾಶ್ಮೀರ, ಲಡಾಖ್ 2 ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿದೆ. ಲಡಾಖ್ ಚಂಡೀಗಢದಂತೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾದರೆ, ಜಮ್ಮು ಕಾಶ್ಮೀರ ಶಾಸನೆ ಸಭೆಯನ್ನು ಹೊಂದಿರಲಿದೆ.

  • ಕಾಶ್ಮೀರಿ ವಲಸೆ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಬಕ್ರೀದ್ ಗಿಫ್ಟ್

    ಕಾಶ್ಮೀರಿ ವಲಸೆ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಬಕ್ರೀದ್ ಗಿಫ್ಟ್

    ಶ್ರೀನಗರ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಲಸೆ ಕಾಶ್ಮೀರದ ವಿದ್ಯಾರ್ಥಿಗಳಿಗೆ ಬಕ್ರೀದ್ ಹಬ್ಬಕ್ಕೆ ಉಡುಗೊರೆ ನೀಡಿದ್ದು, ಭದ್ರತೆಯ ಮಧ್ಯೆ ಬಕ್ರೀದ್ ಆಚರಿಸಲು ಮನೆಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಬ್ಬ ಆಯೋಜಿಸಲು ತಲಾ 1 ಲಕ್ಷ ರೂ.ಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

    ಶ್ರೀನಗರದ ರಾಜಭವನದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮತ್ತು ಬಕ್ರೀದ್ ಆಚರಣೆ ಮಾಡಲು ಜನರಿಗೆ ಬೇಕಾದ ಅಗತ್ಯ ಮೂಲಭೂತ ಸೇವೆ ಹಾಗೂ ಅಗತ್ಯ ಸರಕುಗಳನ್ನು ನೀಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡುವ ಮಾಹಿತಿ ನೀಡಿ, ಅಧಿಕಾರಿಗಳನ್ನು ಸಂಪರ್ಕ ಮಾಡಲು ಸೂಚನೆ ನೀಡಿದರು.

    ಬಕ್ರೀದ್ ಸಂದರ್ಭದಲ್ಲಿ ಜನರು ಪ್ರಾಣಿಗಳನ್ನು ಖರೀದಿಸಲು ಅನುಕೂಲವಾಗುವಂತೆ ಕಣಿವೆಯ ವಿವಿಧ ಸ್ಥಳಗಳಲ್ಲಿ ಪಡಿತರ ಅಂಗಡಿಗಳು ಮುಕ್ತವಾಗಿರಲು ಅವಶ್ಯಕ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವ ವರದಿಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು.

  • ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭ – 1 ಸಾವು, 6 ಮಂದಿಯ ಮೇಲೆ ಗುಂಡೇಟು

    ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭ – 1 ಸಾವು, 6 ಮಂದಿಯ ಮೇಲೆ ಗುಂಡೇಟು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಆರಂಭಗೊಂಡಿದ್ದು, ಸಾರ್ವಜನಿಕರು ಎಂದಿನ ಕಾರ್ಯಕ್ಕೆ ತೆರಳುತ್ತಿದ್ದಾರೆ.

    ಈ ವೇಳೆ ನಿಷೇಧಾಜ್ಞೆ ಇದ್ದರೂ ಶ್ರೀನಗರದಲ್ಲಿ ಪ್ರತಿಭಟನೆಗೆ ಇಳಿದ 100 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಓಡಿ ಹೋಗುತ್ತಿದ್ದ ಓರ್ವ ಪ್ರತಿಭಟನಾಕಾರನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಈ ವೇಳೆ ಆತ ಝೆಲಂ ನದಿಗೆ ಕಟ್ಟಲಾಗಿದ್ದ ಸೇತುವೆಯಿಂದ ಹಾರಿ ಮೃತಪಟ್ಟಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

    ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಗೆ 6 ಮಂದಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಾಶ್ಮೀರದಲ್ಲಿ ಕೇಬಲ್ ಸೇವೆ ಎಲ್ಲ ಸ್ಥಗಿತಗೊಂಡಿದ್ದು ಡಿಶ್ ಟಿವಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇಂಟರ್ ನೆಟ್, ಮೊಬೈಲ್, ದೂರವಾಣಿ ಸಂಪರ್ಕ ಎಲ್ಲವೂ ಕಡಿತಗೊಂಡಿದೆ. ಸಂವಹನಕ್ಕಾಗಿ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್ ನೀಡಲಾಗಿದೆ.