Tag: Srinagar

  • ಹಿಮಪಾತದ ಮಧ್ಯೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೊಂದು ಸಲಾಂ

    ಹಿಮಪಾತದ ಮಧ್ಯೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೊಂದು ಸಲಾಂ

    ಶ್ರೀನಗರ: ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ.

    ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಕಶ್ಯಪ್ ಕಡಗತ್ತೂರ್ ಅವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಫೋಟೋದಲ್ಲಿ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್ ಅವರು ತಮ್ಮ ಸೇನೆಯ ಸಮವಸ್ತ್ರದ ಮೇಲೆ ಹಳದಿ ಬಣ್ಣ ಕೋಟ್ ಹಾಕಿ ನಿಂತಿದ್ದಾರೆ. ಅವರ ಸುತ್ತ ಭಾರೀ ಪ್ರಮಾಣದಲ್ಲಿ ಹಿಮ ಬಿದ್ದಿರುವುದನ್ನು ಕೂಡ ಫೋಟೋದಲ್ಲಿ ಕಾಣಬಹುದಾಗಿದೆ.

    ಇವರು ಬ್ಯಾಟ್‍ಮ್ಯಾನ್ ಅಲ್ಲ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್. ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದರೂ ಧೈರ್ಯದಿಂದ ಕರ್ತವ್ಯ ಸಲ್ಲಿಸುತ್ತಿರುವ ಯೋಧ. ವೃತ್ತಿಪರತೆಗೆ ಮತ್ತೊಂದು ಹೆಸರೇ ಸಿಆರ್‌ಪಿಎಫ್ ಎಂದು ಬರೆದು ಹೆಮ್ಮೆಯಿಂದ ಯೋಧನ ಫೋಟೋವನ್ನು ಕಶ್ಯಪ್ ಕಡಗತ್ತೂರ್ ಶೇರ್ ಮಾಡಿಕೊಂಡಿದ್ದಾರೆ.

    ಈ ಫೋಟೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಯೋಧನ ಕಾರ್ಯಕ್ಕೆ ಸಲಾಂ ಎಂದಿದ್ದಾರೆ. ಕೆಲವರು ಬ್ಯಾಟ್‍ಮ್ಯಾನ್ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಮ್ಮ ಯೋಧರೆ ಸೂಪರ್‍ಹೀರೋ. ಕಷ್ಟಕರ ಪ್ರದೇಶದಲ್ಲಿ ಶಿಸ್ತಿನಿಂದ ನಮ್ಮ ಸಿಆರ್‌ಪಿಎಫ್ ಯೋಧರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರಿಗೊಂದು ಸಲಾಂ ಎಂದು ಟ್ವೀಟ್ ಮಾಡಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

  • ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಭಾನುವಾರದಿಂದ ಜಮ್ಮು-ಕಾಶ್ಮೀರದ ಬಂಡಿಪೊರಾದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಒಟ್ಟು ಇಬ್ಬರು ಉಗ್ರರು ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ.

    ಭಾನುವಾರ ಲಾದಾರ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಹಾಗೆಯೇ ಇಂದು ಬೆಳಗ್ಗೆ ಇನ್ನೋರ್ವ ಉಗ್ರ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉಗ್ರರು ಕಾಶ್ಮೀರದಲ್ಲಿ ಅಡಗಿ ಕುಳಿತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರತಾ ಪಡೆ ಸಿಬ್ಬಂದಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಕಾಳಗ ಶುರುವಾಯ್ತು.

    ಈ ಸಂಬಂಧ ಚೀನಾರ್ ಕಾಪ್ಸ್- ಇಂಡಿಯನ್ ಆರ್ಮಿ ಟ್ವೀಟ್ ಮಾಡಿ, ಹತ್ಯೆಗೈದ ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧಕ್ಕೆ ಬಳಸುವ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

    ನ. 7ರಂದು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ್(22) ಯೋಧ ಜಮ್ಮುವಿನ ಪುಂಚ್ ಪ್ರದೇಶದಲ್ಲಿ ರಾತ್ರಿ ಉಗ್ರರ ಜೊತೆಗೆ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ್ದರು. ಗುರುವಾರ ರಾತ್ರಿ ಜಮ್ಮುವಿನ ಪೂಂಚ್ ವಲಯದಲ್ಲಿ ನಡೆದ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ರಾಹುಲ್ ಅವರು ಭಾಗಿಯಾಗಿದ್ದರು. ಈ ವೇಳೆ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿತ್ತು. ದಾಳಿ ಪ್ರತಿದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ರಾಹುಲ್ ಅವರು ವೀರ ಮರಣವನ್ನಪ್ಪಿದ್ದರು. ಶನಿವಾರ ಸಕಲ ಸರ್ಕಾರಿ, ಸೇನಾ ಗೌರವದೊಂದಿಗೆ ರಾಹುಲ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.

  • CRPF ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ

    CRPF ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ ಮತ್ತೆ ಉಗ್ರರ ದಾಳಿ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ.

    ಪುಲ್ವಾಮಾದ ಡ್ರಾಬ್‍ಗ್ರಮ್ ಪ್ರದೆಶದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಉಗ್ರರರು ದಾಳಿ ನಡೆಸಿದ್ದಾರೆ. ಪರೀಕ್ಷೆಗೆ ತೊಂದರೆಯಾಗದಂತೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

    ಉಗ್ರರ ನಡುವಿನ ಈ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದ್ದು, ಉಗ್ರ ದಾಳಿಗೆ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸುಮಾರು 6 ರಿಂದ 7 ಸುತ್ತು ಗುಂಡು ಹರಿಸಿದ್ದರು ಎಂಬ ಮಾಹಿತಿ ಲಭಿಸಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸೇನೆಯನ್ನು ಕರೆಯಿಸಿಕೊಂಡಿರುವ ಪೊಲೀಸರು, ಪ್ರದೇಶವನ್ನು ಸುತ್ತುವರೆದು ಸರ್ಚ್ ಆಪರೇಷನ್ ನಡೆಸಿದ್ದಾರೆ. ಕಾರ್ಯಾಚರಣೆ ಮುಂದುವರಿಸಿದಿದೆ.

    ಯೂರೋಪ್‍ನ ಯೂನಿಯನ್ ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಮಯದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ. ಆರ್ಟಿಕಲ್ 370 ರದ್ದು ಬಳಿಕ ಕಣಿವೆಯ ಪ್ರದೇಶದ ಸ್ಥಿತಿಗತಿ ಬಗ್ಗೆ ತಿಳಿಯಲು ಯುರೋಪಿಯನ್ ಯೂನಿಯನ್ ಸಂಸದರು ಭೇಟಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಸೆಪೋರ್ ಬಸ್ ನಿಲ್ದಾಣದಲ್ಲಿ ಸೋಮವಾರ ಗ್ರೇನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮತ್ತೋರ್ವ ಟ್ರಕ್ ಚಾಲಕ ಬಲಿ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮತ್ತೋರ್ವ ಟ್ರಕ್ ಚಾಲಕ ಬಲಿ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲಿದೆ. ಉಗ್ರರ ದಾಳಿಗೆ ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾದಲ್ಲಿ ಮತ್ತೋರ್ವ ಟ್ರಕ್ ಚಾಲಕ ಬಲಿಯಾಗಿದ್ದಾನೆ.

    ಉಧಮ್‍ಪುರ ಜಿಲ್ಲೆಯ ಕಾತ್ರಾ ಪ್ರದೇಶದ ಚಾಲಕ ನಾರಾಯಣ್ ದತ್ ಮೃತ ದುರ್ದೈವಿ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ಟ್ರಕ್ ಚಾಲಕನನ್ನು ಉಗ್ರರು ಗುಂಡಿಕ್ಕಿ ಅಮಾನುಷವಾಗಿ ಕೊಲೆಗೈದಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿದ್ದ ಬೇರೆ ರಾಜ್ಯದ ಇನ್ನಿಬ್ಬರು ಟ್ರಕ್ ಚಾಲಕರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಳೆದು 2 ವಾರಗಳಿಂದ ಕಾಶ್ಮೀರದಲ್ಲಿ ಹೊರ ರಾಜ್ಯದಿಂದ ಬಂದ ಟ್ರಕ್ ಚಾಲಕರನ್ನೇ ಉಗ್ರರು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರದ ವಸ್ತುಗಳು ಇಲ್ಲಿನ ಗಡಿದಾಟಿ ಹೋಗಬಾರದು, ಹೊರ ರಾಜ್ಯದಿಂದ ಕಾಶ್ಮೀರಕ್ಕೆ ಬರುವವರಲ್ಲಿ ಭಯ ಹುಟ್ಟಿಸಬೇಕೆಂದು ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದ ಈ ದಾಳಿಯನ್ನು ಸೇರಿ 6 ಮಂದಿ ಟ್ರಕ್ ಚಾಲಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಅದರಲ್ಲೂ ಉಗ್ರರು ಗುಂಡಿಕ್ಕಿ ಕೊಂದ ಚಾಲಕರೆಲ್ಲರೂ ಬೇರೆ ರಾಜ್ಯಗಳಿಂದ ಕಾಶ್ಮೀರಕ್ಕೆ ಬಂದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಭಾನುವಾರ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳುಹಿಸಲು ಮುಂದಾಗಿದ್ದರು. ಇದೇ ಬೆನ್ನಲ್ಲೆ ಈಗ ಮತ್ತೆ ಉಗ್ರರು ಓರ್ವ ಚಾಲಕನನ್ನು ಕೊಲೆ ಮಾಡಿರುವುದು ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.

  • ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    – ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ

    ಶ್ರೀನಗರ: ಕಣಿವೆ ರಾಜ್ಯ ಸದ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎರಡು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ವಿಕೃತಿ ಮೆರೆದ ಪರಿಣಾಮ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಿಷೇಧ ಹೇರಲಾಗಿದೆ.

    ಗುರುವಾರ ರಾತ್ರಿ ದುಷ್ಕರ್ಮಿಗಳು ಎರಡು ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಚವಾಲ್ಗಾಮ್ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಂಕಿ ಹಚ್ಚಿ, ಬಳಿಕ ಅದೇ ರೀತಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶುಕ್ರವಾರ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಈ ವೇಳೆ ಈ ನಿರ್ಧಾರವನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಅವರ ವಾಹನಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

    ಈ ಹಿಂದೆ ಗುರುವಾರ ಸಂಜೆ ಕಾಶ್ಮೀರದಲ್ಲಿ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದರು. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರ ಸಂಜೆ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದಾರೆ. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕರು ನಿರ್ಜನ ಪ್ರದೇಶಕ್ಕೆ ತೆರಳುತ್ತಿರುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಭದ್ರತಾ ಪಡೆಗೆ ತಿಳಿಸದೆ ಚಾಲಕರು ಟ್ರಕ್‍ಗಳನ್ನು ಕೊಂಡೊಯ್ದಿದ್ದರು ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ಕಳೆದ 3 ದಿನಗಳಲ್ಲಿ ಇದು ಟ್ರಕ್ ಚಾಲಕರನ್ನು ಉಗ್ರರು ಕೊಂದ ಮೂರನೇ ಪ್ರಕರಣವಾಗಿದೆ.

    ಈಗಾಗಲೇ ಘಟನಾ ಸ್ಥಳದಿಂದ ಚಾಲಕರ ಮೃತದೇಹವನ್ನು ತರಲಾಗಿದೆ. ಇತ್ತ ಗಾಯಗೊಂಡ ಚಾಲಕನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದು, ಆದಷ್ಟು ಬೇಗ ಉಗ್ರರನ್ನು ಬಂಧಿಸುವ ಪ್ರಯತ್ನದಲ್ಲಿದ್ದೇವೆ ಎಂದು ಭದ್ರತಾ ಪಡೆ ತಿಳಿಸಿದೆ.

    ಆಗಸ್ಟ್ 5ರಿಂದ ಕಾಶ್ಮಿರದಲ್ಲಿ ಪೋಸ್ಟ್ ಪೇಡ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸತತ 70 ದಿನಗಳ ಬಳಿಕ ಮತ್ತೆ ಪೋಸ್ಟ್ ಪೇಡ್ ಮೊಬೈಲ್ ಸೇವೆ ಆರಂಭಗೊಳಿಸಲಾಗಿದೆ. ಹೀಗಾಗಿ ಮತ್ತೆ ಕಣಿವೆ ರಾಜ್ಯದಲ್ಲಿ ವ್ಯಾಪಾರ, ವ್ಯಹಿವಾಟು ಎಂದಿನಂತೆ ಆರಂಭಗೊಂಡಿದೆ. ಆದರೆ ಉಗ್ರರು ವಲಸಿಗ ವ್ಯಾಪಾರಿಗಳು ಹಾಗೂ ಟ್ರಕ್ ಚಾಲಕರಲ್ಲಿ ಭಯಹುಟ್ಟಿಸಲು ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ ಎಂದು ಬಿಂಬಿಸಲು ಈ ರೀತಿ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ.

  • ಜೀವಂತವಾಗಿದ್ದೇನೆ ಎಂದು ತಿಳಿಸಲು ಯೋಧನಿಂದ ದಿನಾ ಎಟಿಎಂನಿಂದ ಹಣ ಡ್ರಾ

    ಜೀವಂತವಾಗಿದ್ದೇನೆ ಎಂದು ತಿಳಿಸಲು ಯೋಧನಿಂದ ದಿನಾ ಎಟಿಎಂನಿಂದ ಹಣ ಡ್ರಾ

    ಶ್ರೀನಗರ: ತನ್ನ ಕುಟುಂಬದವರಿಗೆ ಜೀವಂತವಾಗಿದ್ದೇನೆ ಎಂದು ತಿಳಿಸಲು ಯೋಧ ಪ್ರತಿದಿನ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದಾರೆ ಎಂಬ ಭಾವನಾತ್ಮಕ ಫೇಸ್‍ಬುಕ್ ಪೋಸ್ಟೊಂದು ವೈರಲ್ ಆಗುತ್ತಿದೆ.

    ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಜನರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ ನಂತರ ಈ ಪ್ರದೇಶದಲ್ಲಿ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಿರುವಾಗ ಕಾಶ್ಮೀರದಲ್ಲಿರುವ ಸೈನಿಕರು ಹಾಗೂ ಸಾಮಾನ್ಯ ಜನರು ತಮ್ಮ ಕುಟುಂಬದ ಜೊತೆ ಮಾತನಾಡಲು ಆಗುತ್ತಿಲ್ಲ. ಅಲ್ಲದೆ ತಮ್ಮ ಕುಟುಂಬಸ್ಥರ ಜೊತೆ ಮಾತನಾಡಲು ಸೈನಿಕರು ಸೇರಿದಂತೆ ಅಲ್ಲಿನ ಜನರು ಟೆಲಿಫೋನ್ ಬೂತ್‍ನಲ್ಲಿ ಸಾಲಾಗಿ ನಿಲ್ಲುತ್ತಿದ್ದಾರೆ. ಹೀಗಿರುವಾಗ ಸೈನಿಕರೊಬ್ಬರು ಪ್ರತಿದಿನ ಸಾಲಿನಲ್ಲಿ ನಿಂತು ಎಟಿಎಂನಿಂದ 100 ರೂ. ಹಣ ಡ್ರಾ ಮಾಡುತ್ತಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಸೈನ್ಯದ ಯೋಧರೊಬ್ಬರನ್ನು ಕಾಶ್ಮೀರದ ಬಾರಾಮುಲ್ಲಾದಲ್ಲಿ ನೇಮಕ ಮಾಡಲಾಗಿದೆ. ಖವಾಜಾ ಬಾಗ್‍ನ ಎಟಿಎಂನಲ್ಲಿ ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿದ್ದರು. ಬಳಿಕ ಆ 100ರೂ. ಅನ್ನು ತನ್ನ ಪರ್ಸ್ ನಲ್ಲಿಟ್ಟು ಅಲ್ಲಿಂದ ಹೊರಟು ಹೋಗುತ್ತಿದ್ದರು. ಮಾರನೇ ದಿನ ಮತ್ತೆ ಎಟಿಎಂನ ಹೊರಗೆ ಸಾಲಿನಲ್ಲಿ ನಿಂತು 100 ರೂ. ಡ್ರಾ ಮಾಡಿದ್ದರು. ಯೋಧ ಪ್ರತಿದಿನ 100 ರೂ. ಡ್ರಾ ಮಾಡುತ್ತಿರುವುದನ್ನು ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾನೆ. ಅಲ್ಲದೆ ಈ ಬಗ್ಗೆ ಯೋಧನ ಬಳಿ “ಸರ್ ನೀವು ಪ್ರತಿದಿನ 100 ರೂ. ಏಕೆ ಡ್ರಾ ಮಾಡುತ್ತೀರಾ? ನೀವು ಪ್ರತಿದಿನ ಇಲ್ಲಿಗೆ ಬರಲು ಏಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತೀರಾ. ನೀವು ಒಂದು ವಾರದ ಮಟ್ಟಿಗೆ ಆಗುವ ಹಣವನ್ನು ಡ್ರಾ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ನನ್ನ ಬ್ಯಾಂಕ್ ಖಾತೆ ನನ್ನ ಪತ್ನಿಯ ಫೋನ್ ನಂಬರ್ ಗೆ ಲಿಂಕ್ ಆಗಿದೆ. ನನ್ನ ಪತ್ನಿ ಮನೆಯಲ್ಲಿ ಇದ್ದಾರೆ. ನಾನು ಎಟಿಎಂನಿಂದ ಹಣ ಡ್ರಾ ಮಾಡಿದಾಗ ಆಕೆಗೆ ಮೆಸೇಜ್ ಹೋಗುತ್ತದೆ. ಈ ಮೂಲಕ ನಾನು ಇನ್ನೂ ಬದುಕಿದ್ದೇನೆ ಎಂದು ಆಕೆ ತಿಳಿದುಕೊಳ್ಳುತ್ತಾಳೆ ಎಂದು ಯೋಧ, ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ ಉತ್ತರಿಸಿದ್ದಾರೆ. ಯೋಧನ ಈ ಉತ್ತರ ಕೇಳಿ ಅಲ್ಲಿಯೇ ಇದ್ದ ಸಾಮಾನ್ಯ ಜನರು ಕೂಡ ಭಾವುಕರಾಗಿದ್ದಾರೆ.

    ವೈರಲ್ ಆಗಿರುವ ಈ ಪೋಸ್ಟ್ ನಿಜವೋ ಅಥವಾ ಸುಳ್ಳೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ. ಇಂಡಿಯನ್ ಆರ್ಮಿ ಫ್ಯಾನ್ ಫೇಸ್‍ಬುಕ್ ಪೇಜ್ ಅಕ್ಟೋಬರ್ 1ರಂದು ಇದನ್ನು ಪೋಸ್ಟ್ ಮಾಡಿಕೊಂಡಿದೆ. ಈ ಪೋಸ್ಟ್ ನಲ್ಲಿ ಇರುವ ಯೋಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಪೋಸ್ಟ್ ಗೆ ಇದುವರೆಗೂ 24 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 6 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಮತ್ತೊಂದು ವಿಷಯ ಏನೆಂದರೆ ಈ ಪೋಸ್ಟ್ ಜೊತೆ ಬೇರೆ ಸೈನಿಕರ ಫೋಟೋ ಕೂಡ ವೈರಲ್ ಆಗುತ್ತಿದೆ.

  • ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ ತಪ್ಪಿದ ಭಾರೀ ಅನಾಹುತ – 6 ಜನರಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್‍ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು 6 ಜನ ಗಂಭೀರ ಗಾಯಗೊಂಡಿದ್ದಾರೆ.

    ಶ್ರೀನಗರದಿಂದ 55 ಕಿ.ಮೀ. ದೂರದಲ್ಲಿರುವ ಅನಂತ್‍ನಾಗ್ ಪಟ್ಟಣದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಆದರೆ ಗುರಿ ತಪ್ಪಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. 6 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ 6 ಜನ ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟ ಸಂಭವಿಸುತ್ತಿದ್ದಂತೆ ಅಲ್ಲಿನ ಭದ್ರತಾ ಪಡೆ ಸುತ್ತುವರಿದಿದ್ದು, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಬಂಧಿಸಲು ಬೇಟೆ ಪ್ರಾರಂಭಿಸಿದ್ದಾರೆ. ಈವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದ ಕಣಿವೆಯಲ್ಲಿ ಉಗ್ರರು ಭದ್ರತಾ ಪಡೆ ಮೇಲೆ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.

    ಸೆಪ್ಟೆಂಬರ್ 28ರಂದು ಶ್ರೀನಗರದ ಡೌನ್ ಟೌನ್‍ನಲ್ಲಿ ಉಗ್ರರು ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ಗ್ರೆನೇಡ್ ಎಸೆದಿದ್ದರು. ಅದೂ ಸಹ ಗುರಿ ತಪ್ಪಿತ್ತು, ಈ ಮೂಲಕ ಆಗಲೂ ಭಾರೀ ಅನಾಹುತ ತಪ್ಪಿದಂತಾಗಿತ್ತು. ಸಿಆರ್ ಪಿಎಫ್‍ನ 38 ಬೆಟಾಲಿಯನ್ ಸಿಬ್ಬಂದಿ ನವಾ ಕಡಲ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ನಿಯೋಜಿಸಿದ್ದಾಗ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು.

  • ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಹಾರಿಸಿದ್ದ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ಭಾರತೀಯ ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ.

    ಪಾಕಿಸ್ತಾನ ಸೇನೆಯು ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಸಾರ್ವಜನಿಕರನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದೆ. ಆದ್ದರಿಂದ ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಫಾರ್ವರ್ಡ್ ಪೋಸ್ಟ್‌ಗಳ ಬಳಿ ಸಣ್ಣ ಶಸ್ತ್ರಾಸ್ತ್ರ ಮತ್ತು ಮಾರ್ಟರ್ ಶೆಲ್‍ಗಳನ್ನು ಪಾಕ್ ಹಾರಿಸಿತ್ತು. ಇದನ್ನೂ ಓದಿ:ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

    ಬುಧವಾರ ಮೆಂಧರ್ ವಲಯದ ಬಾಲಕೋಟೆ, ಸ್ಯಾಂಡೋಟೆ ಮತ್ತು ಬಾಸೋನಿ ಪ್ರದೇಶಗಳಲ್ಲಿ 120 ಎಂಎಂ ಮತ್ತು 81 ಎಂಎಂನ 9 ಮಾರ್ಟರ್ ಶೆಲ್‍ಗಳನ್ನು ಭದ್ರತಾ ಪಡೆ ಯೋಧರು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಈ ಕೆಲವು ಮಾರ್ಟರ್ ಶೆಲ್‍ಗಳು ವಲಯದ ಗ್ರಾಮ ಪ್ರದೇಶಗಳಲ್ಲಿ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಈ ಹಿಂದೆ ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದರು.

  • ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಗಡಿ ನಿಯಂತ್ರಣ ರೇಖೆ ಬಳಿ ಬಿದ್ದಿದ್ದ ಪಾಕಿಸ್ತಾನ ಸೇನೆಯ ಸ್ಫೋಟಕವನ್ನು ಭಾರತೀಯ ಯೋಧರು ನಾಶಗೊಳಿಸಿರುವ ವಿಡಿಯೋ ವೈರಲ್ ಆಗಿದೆ.

    ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದಾರೆ.

    ಇಬ್ಬರು ಸೈನಿಕರು ಸ್ಫೋಟಕವನ್ನು ನಾಶ ಮಾಡಿದ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು ಯೋಧರ ಧೈರ್ಯ, ಶೌರ್ಯಕ್ಕೆ ಭಾರತೀಯರು ಸಲಂ ಹೊಡೆದಿದ್ದಾರೆ.

    ಪಾಕಿಸ್ತಾನ ಪಡೆಗಳು ಶನಿವಾರ ಬಾಲಕೋಟ್ ಸೇರಿ ವಿವಿಧ ಕಡೆಗಳಲ್ಲಿ ಗ್ರಾಮಗಳನ್ನು ಗುರಿಯಾಗಿಸಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡಾ ಪ್ರತಿದಾಳಿ ನಡೆಸಿದೆ. ಆ ಬಳಿಕ ಭಾರತೀಯ ಶಿಬಿರವನ್ನು ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಸೇನೆ ಭಾನುವಾರ ರಾತ್ರಿ 10:30ರ ಹೊತ್ತಿಗೆ ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಭದ್ರತಾ ಪಡೆಗಳೂ ಕೂಡ ತಕ್ಕ ಪ್ರತ್ಯುತ್ತರ ಕೊಟ್ಟಿದೆ.

    ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ಈ ವರ್ಷ ಪಾಕಿಸ್ತಾನ 2,050 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದಾರೆ. ಈ ದಾಳಿಗಳಲ್ಲಿ 21 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

    2003 ರ ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರಲು ಮತ್ತು ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಕರೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಹೀಗೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಉದ್ಧಟತನ ಪ್ರದರ್ಶಿಸಿದರೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ತಯಾರಾಗಿದೆ ಎಂದು ಎಚ್ಚರಿಸಿದ್ದಾರೆ.