Tag: Srinagar

  • ಕುಲ್ಗಾಮ್‍ನಲ್ಲಿ ನಾಲ್ವರು ಉಗ್ರರನ್ನು ಸೆದೆಬಡಿದ ಭಾರತೀಯ ಸೇನೆ

    ಕುಲ್ಗಾಮ್‍ನಲ್ಲಿ ನಾಲ್ವರು ಉಗ್ರರನ್ನು ಸೆದೆಬಡಿದ ಭಾರತೀಯ ಸೇನೆ

    ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಾಮ್‍ನಲ್ಲಿ ಇಂದು ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಸೇನೆ ಸೆದೆಬಡಿದಿದೆ.

    ಕುಲ್ಗಾಮ್‍ನ ಡಿಹೆಚ್ ಪೊರಾದಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಇಂದು ಬೆಳಗ್ಗಿನ ಜಾವ ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕಾರ್ಯಾಚರಣೆ ವೇಳೆ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಪೊಲೀಸರು ಹಾಗೂ ಸೇನೆಯ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಆಗ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಯ್ತು.

    ಈ ದಾಳಿಯಲ್ಲಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಈ ಪ್ರದೇಶವನ್ನು ಸುತ್ತುವರಿದಿವೆ.

  • ಮನೆಗೆ ಹೋಗಲು ಸತ್ತಂತೆ ನಟಿಸಿ ಪಯಣ – ಗ್ರಾಮಕ್ಕೆ ಕೆಲ ಕಿ.ಮೀ ದೂರವಿದ್ದಾಗ್ಲೇ ಸಿಕ್ಕಿಬಿದ್ರು

    ಮನೆಗೆ ಹೋಗಲು ಸತ್ತಂತೆ ನಟಿಸಿ ಪಯಣ – ಗ್ರಾಮಕ್ಕೆ ಕೆಲ ಕಿ.ಮೀ ದೂರವಿದ್ದಾಗ್ಲೇ ಸಿಕ್ಕಿಬಿದ್ರು

    – ಅಂಬುಲೆನ್ಸ್‌ನಲ್ಲಿ ಮೃತದೇಹವೇ ಇರಲಿಲ್ಲ

    ಶ್ರೀನಗರ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾವುದೇ ವಾಹನ ಓಡಾಡುತ್ತಿಲ್ಲ. ಈ ನಡುವೆ ವ್ಯಕ್ತಿಯೊಬ್ಬ ತಾನೇ ಮೃತಪಟ್ಟಂತೆ ನಟಿಸಿ ಮನೆಗೆ ಹೋಗಲು ಯತ್ನಿಸಿರುವ ವಿಚಿತ್ರ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

    ಪೂಂಚ್ ಜಿಲ್ಲೆಯ 60 ವರ್ಷದ ಹಕಮ್ ದಿನ್ ಸತ್ತಂತೆ ನಟಿಸಿ ಅಂಬುಲೆನ್ಸ್ ಮೂಲಕ ತನ್ನ ಮನೆಗೆ ತಲುಪಲು ಯತ್ನಿಸಿದ್ದಾನೆ. ಹಕಮ್ ದಿನ್ ಮಾರ್ಚ್ 27 ರಂದು ಗಾಯಗೊಂಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದನು. ಸೋಮವಾರ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ.

    ಈ ವೇಳೆ ಹಕಮ್ ತನ್ನ ಆಪ್ತರ ನೆರವಿನಿಂದ ಮನೆಗೆ ತೆರಳಲು ಸುಳ್ಳು ಮರಣ ಪ್ರಮಾಣ ಪತ್ರವನ್ನು ಮಾಡಿಸಿಕೊಂಡಿದ್ದಾನೆ. ನಂತರ ಖಾಸಗಿ ಅಂಬುಲೆನ್ಸ್ ಮೂಲಕ ಮನೆಗೆ ಹೊರಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಶರ್ಮಾ ತಿಳಿಸಿದ್ದಾರೆ.

    ಸ್ನೇಹಿತ ಮೊಹಮ್ಮದ್ ಆಶ್ರಫ್ ಆಸ್ಪತ್ರೆಯಲ್ಲಿ ಹಕಮ್ ದಿನ್‍ನನ್ನು ಭೇಟಿ ಮಾಡಿದ್ದನು. ನಂತರ ಪ್ರಮಾಣ ಪತ್ರದಲ್ಲಿ ಅಂಬುಲೆನ್ಸ್ ಚಾಲಕನ ಹೆಸರನ್ನು ಅಬಿದ್ ಹುಸೇನ್ ಎಂದು ಉಲ್ಲೇಖಿಸಲಾಗಿತ್ತು. ಕೊನೆಗೆ ಜಮ್ಮುವಿನಿಂದ ಮೃತದೇಹವನ್ನು ರವಾನಿಸಲಾಗುತ್ತಿದೆ ಎಂದು ಹೇಳುವ ಮೂಲಕ ಎಲ್ಲಾ ಪೊಲೀಸ್ ನಾಕಾಬಂದಿಯನ್ನು ದಾಟಲು ಯಶಸ್ವಿಯಾದರು.

    ಅವರ ಗ್ರಾಮಕ್ಕೆ ಇನ್ನೂ ಕೆಲವು ಕಿ.ಮೀ ದೂರದಲ್ಲಿದ್ದಾಗ ಪೊಲೀಸರು ಬುಫ್ಲಿಯಾಜ್‍ನಲ್ಲಿ ಅಂಬುಲೆನ್ಸ್ ತಡೆದು ಪರಿಶೀಲಿಸಿದ್ದಾರೆ. ಅದರೊಳಗೆ ಯಾವುದೇ ಮೃತದೇಹವಿರಲಿಲ್ಲ. ತಕ್ಷಣ ನಾಲ್ವರನ್ನು ಬಂಧಿಸಿ ಅಂಬುಲೆನ್ಸ್ ವಶಪಡಿಸಿಕೊಂಡಿದ್ದಾರೆ. ನಂತರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲರನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರಿಸಿದ್ದಾರೆ.

  • ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಹಜ್ ಯಾತ್ರೆಗೆ ಕೂಡಿಟ್ಟಿದ್ದ 5 ಲಕ್ಷ ರೂ. ದೇಣಿಗೆ ನೀಡಿದ ಅಜ್ಜಿ

    ಶ್ರೀನಗರ: ಕೊರೊನಾ ವೈರಸ್‍ನಿಂದ ಜಗತ್ತಿನಾದ್ಯಂತ ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಅನೇಕರು ಹಣದ ಸಹಾಯ ಮಾಡುತ್ತಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

    ಖಲೀದಾ ಬೇಗಂ (87) ಹಜ್ ತೀರ್ಥಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂ. ಹಣವನ್ನು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ‘ಸೇವಾ ಭಾರತಿ’ಗೆ ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿರುವ ಕಾರಣ ಹಜ್ ತೀರ್ಥಯಾತ್ರೆಯನ್ನು ಮುಂದಾಡಲಾಗಿದೆ. ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ತೀರ್ಥಯಾತ್ರೆ ನಡೆಯುತ್ತದೆ.

    ಕೊರೊನಾ ವೈರಸ್‍ನಿಂದ ಅನೇಕ ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಗಾರರು ಮಾಡಲು ಊಟವಿಲ್ಲದೆ ಪರದಾಡುತ್ತಿದ್ದರು. ಇಂತಹ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವಾ ಭಾರತಿ ಕಾರ್ಮಿಕರ ನೆರವಿಗೆ ಧಾವಿಸಿದೆ. ಅವರಿಗೆ ಊಟ, ನೀರು, ಆಶ್ರಯ ನೀಡಿದೆ. ಇದನ್ನು ನೋಡಿದ ಖಲೀದಾ ಬೇಗಂ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಸಂಸ್ಥೆಗೆ 5 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಿದ್ದರು ಎಂದು RSS ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್ ಆನಂದ್ ಹೇಳಿದರು.

    ಈ ಹಣವನ್ನು ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ ಬಡವರಿಗೆ ಮತ್ತು ನಿರ್ಗತಿಕರಿಗಾಗಿ ಬಳಸಬೇಕೆಂದು ಖಲೀದಾ ಬೇಗಂ ಜೀ ಬಯಸಿದ್ದಾರೆ. ಹಜ್ ಯಾತ್ರೆಗಾಗಿ ಈ ಹಣವನ್ನು ಉಳಿಸಿಕೊಂಡಿದ್ದರು. ಆದರೆ ಪ್ರಸ್ತುತ ಕೊರೊನಾ ಸೋಂಕಿನ ಪರಿಸ್ಥಿತಿಯಿಂದಾಗಿ ಯಾತ್ರೆ ಮುಂದೂಡಲಾಗಿದೆ ಎಂದು ಅರುಣ್ ಆನಂದ್ ಹೇಳಿದರು.

    ಖಲೀದಾ ಬೇಗಂ ಜೀ ಜಮ್ಮು ಮತ್ತು ಕಾಶ್ಮೀರದ ಇಂಗ್ಲಿಷ್ ಮಾಧ್ಯಮದಲ್ಲಿ ಕಾನ್ವೆಂಟ್ ಶಿಕ್ಷಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಜನ ಸಂಘದ ಅಧ್ಯಕ್ಷರಾಗಿದ್ದ ಕರ್ನಲ್ ಪೀರ್ ಮೊಹಮ್ಮದ್ ಖಾನ್ ಅವರ ಸೊಸೆಯಾಗಿದ್ದಾರೆ. ಇವರ ಮಗ ನಿವೃತ್ತ ಐಪಿಎಸ್ ಅಧಿಕಾರಿ ಫಾರೂಕ್ ಖಾನ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೂಡ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರ ಸುಧಾರಣೆ, ದೀನ ದಲಿತರಿಗೆ ಕಲ್ಯಾಣ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದರು ಎಂದು ಅರುಣ್ ಆನಂದ್ ತಿಳಿಸಿದರು.

    ಕೊರೊನಾದಿಂದ ಲಾಕ್‍ಡೌನ್ ಘೋಷಿಸಿದಾಗಿನಿಂದ ದೇಶಾದ್ಯಂತ ಸೇವಾ ಭಾರತಿ ಸ್ವಯಂಸೇವಕರು ಅಗತ್ಯವಿರುವವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ.

  • ಕೊರೊನಾಗೆ ಗುಜರಾತ್, ಶ್ರೀನಗರದಲ್ಲಿ ಸಾವು- ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    ಕೊರೊನಾಗೆ ಗುಜರಾತ್, ಶ್ರೀನಗರದಲ್ಲಿ ಸಾವು- ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    – ಭಾರತದಲ್ಲಿ 1,024 ಪ್ರಕರಣಗಳು ಪತ್ತೆ

    ನವದೆಹಲಿ: ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಇಂದು ಕೊರೊನಾ ಸೋಂಕಿತರು ಮೃತಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ.

    ಗುಜರಾತ್‍ನ ಅಹಮದಾಬಾದ್‍ನಲ್ಲಿ 45 ವರ್ಷದ ಕೊರೊನಾ ಸೋಂಕಿತ ಮೃತಪಟ್ಟಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದರು. ಈ ಮೂಲಕ ಗುಜರಾತ್‍ನಿಂದ ಒಟ್ಟು ಐದು ಸಾವುಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

    ಶ್ರೀನಗರ ಸರ್ಕಾರಿ ಆಸ್ಪತ್ರೆಯಲ್ಲಿ 52 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ.

    ದೇಶಾದ್ಯಂತ ಘೋಷಣೆಯಾದ ಲಾಕ್‍ಡೌನ್ 5ಕ್ಕೆ ಕಾಲಿಟ್ಟಿದೆ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಾರ, ಭಾನುವಾರ ಬೆಳಗ್ಗೆ 10 ಗಂಟೆ ವೇಳೆ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 979ಕ್ಕೆ ಏರಿದೆ. ಈ ಪೈಕಿ 86 ಜನರು ಗುಣಮುಖರಾಗಿದ್ದರೆ, 25 ಮಂದಿ ಪ್ರಾಣಬಿಟ್ಟಿದ್ದಾರೆ. ಆದರೆ ಇದೇ ಸಮಯದಲ್ಲಿ ಕೋವಿದ್-19 ಇಂಡಿಯಾ ವೆಬ್‍ಸೈಟ್ ಪ್ರಕಾರ, ದೇಶದಲ್ಲಿ 1,024 ಜನ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 915 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 85 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 24 ಜನರು ಮೃತಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನದಲ್ಲಿ 7 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮುಂಬೈನಲ್ಲಿ 4, ಪುಣೆ, ಸಾಂಗ್ಲಿ, ನಾಗ್ಪುರದಲ್ಲಿ ತಲಾ 1 ಒಂದು ಪ್ರಕರಣಗಳು ಪತ್ತೆಯಾಗಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 193ಕ್ಕೆ ಏರಿಕೆ ಕಂಡಿದೆ.

  • ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಶ್ರೀನಗರ: ಮಹಾಮಾರಿ ಕೊರೊನಾ ವೈರಸ್‍ಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ಸಿಂಗಪುರ್‌ನ ಹೈದರ್‌ಪೊರಾದಿಂದ ಬಂದಿದ್ದ 65 ವರ್ಷದ ಕೊರೊನಾ ಸೋಂಕಿತ ವೃದ್ಧ ಇಂದು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಜೊತೆಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ತಮಿಳುನಾಡಿ ರಾಜ್ಯದ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತ ರೋಗಿ ಬುಧವಾರ ನಿಧನರಾಗಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಸಿ.ವಿಜಯಬಾಸ್ಕರ್, ಮೃತ ವ್ಯಕ್ತಿಯು ಶ್ವಾಸಕೋಶ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದಾಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದ್ದಾರೆ. ಹೀಗಾಗಿ ಕೊರೊನಾ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಭಾರತ ಲಾಕ್‍ಡೌನ್ ಮೊದಲ ದಿನವೇ 70 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಗುರುವಾರ ಬೆಳಗ್ಗೆ 9:30 ಗಂಟೆಯ ಮಾಹಿತಿ ಪ್ರಕಾರ ದೇಶದಲ್ಲಿ 664 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 12 ಜನರ ಮೃತಪಟ್ಟಿದ್ದಾರೆ. ಉಳಿದಂತೆ 609 ಜನ ಜನ ಚಿಕಿತ್ಸೆ ಪಡೆಯುತ್ತಿದ್ದು, 43 ಮಂದಿ ಗುಣಮುಖರಾಗಿದ್ದಾರೆ.

  • ಜಮ್ಮು, ಕಾಶ್ಮೀರದಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು – ಇಬ್ಬರು ಉಗ್ರರನ್ನು ಸದೆಬಡಿದ ಸೇನೆ

    ಜಮ್ಮು, ಕಾಶ್ಮೀರದಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು – ಇಬ್ಬರು ಉಗ್ರರನ್ನು ಸದೆಬಡಿದ ಸೇನೆ

    ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸಂಗಮ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಸೇನೆ ಸದೆಬಡಿದಿದೆ.

    ಮೃತಪಟ್ಟ ಇಬ್ಬರೂ ಉಗ್ರರು ಲಷ್ಕರ್-ಇ-ತೊಯ್ಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ್ದು, ಕಳೆದ ರಾತ್ರಿ ಸಂಗಮ್ ಪ್ರದೇಶದ ಬಿಜ್ಬೆಹಾರಾದಲ್ಲಿ ಭದ್ರತಾ ಪಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಭದ್ರತಾ ಪಡೆ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಭದ್ರತಾ ಪಡೆ ಯೋಧರು ಮತ್ತು ಉಗ್ರಗಾಮಿಗಳ ನಡುವೆ ಆರಂಭವಾದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

    ಪೊಲೀಸರು, ಸಿಆರ್‍ಪಿಎಫ್ ಯೋಧರು ಮತ್ತು ಭಾರತೀಯ ಸೇನಾ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೇ ಘಟನಾ ಸ್ಥಳದಲ್ಲಿ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಸೆದೆಬಡಿದ ಸೇನೆ

    ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಸೆದೆಬಡಿದ ಸೇನೆ

    ಶ್ರೀನಗರ: ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕಳೆದ ವರ್ಷ ಫೆಬ್ರವರಿ 14ರಂದು 40 ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಜಿಲ್ಲೆಯಲ್ಲಿಯೇ ಮೂವರು ಉಗ್ರರನ್ನು ಭಾರತೀಯ ಸೇನೆ ಎನ್‍ಕೌಂಟರ್ ಮಾಡಿದೆ.

    ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇಂದು ನಸುಕಿನ ಜಾವ ಈ ಎನ್‍ಕೌಂಟರ್ ನಡೆದಿದೆ. ಭಾರತೀಯ ಸೇನಾಪಡೆ, ಸಿಆರ್‌ಪಿಎಫ್‌ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜೊತೆಗೂಡಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳವಾರ ಟ್ರಾಲ್ ಪ್ರದೇಶದಲ್ಲಿ ಉಗ್ರರು ಅಡುಗಿ ಕುಳಿತಿರುವ ಬಗ್ಗೆ ಸೇನೆಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಭಾರತೀಯ ಸೇನಾಪಡೆ, ಸಿಆರ್‌ಪಿಎಫ್‌ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜೊತೆಗೂಡಿ ಮಂಗಳವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದರು.

    ಈ ಮೂವರು ಉಗ್ರರು ‘ಅನ್ಸರ್ ಘಾಜ್ವಾ ಉಲ್ ಹಿಂದ್’ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದು, ಉಗ್ರರನ್ನು ಜಂಗೀರ್ ರಫೀಖ್ ವಾನಿ, ರಾಜಾ ಉಮರ್ ಮಖ್ಬೂಲ್ ಭಟ್ ಮತ್ತು ಉಜೈರ್ ಅಮಿನ್ ಭಟ್ ಎಂದು ಗುರುತಿಸಲಾಗಿದೆ ಅಂತ ಭಾರತೀಯ ಸೇನೆ ತಿಳಿಸಿದೆ.

  • ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ 100 ಯೋಧರು: ವಿಡಿಯೋ

    ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ 100 ಯೋಧರು: ವಿಡಿಯೋ

    ಶ್ರೀನಗರ: ಭಾರತೀಯ ಸೇನೆ ಇಂದು 72ನೇ ಸೇನಾ ದಿನವನ್ನು ಆಚರಿಸುತ್ತಿದೆ. ಈ ನಡುವೆ ಜಮ್ಮು- ಕಾಶ್ಮೀರದಲ್ಲಿ ನಡೆದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ 100 ಯೋಧರು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಹಿಮದಲ್ಲಿ 4 ಗಂಟೆ ನಡೆದಿದ್ದಾರೆ.

    ಮಂಗಳವಾರ ಭಾರೀ ಹಿಮಪಾತ ಆಗುತ್ತಿದ್ದ ಕಾರಣ ಗರ್ಭಿಣಿ ಶಮೀಮಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಸೊಂಟದ ಮಟ್ಟದವರೆಗೆ ಹಿಮವಿದ್ದ ಕಾರಣ ಶಮೀಮಾ ಆಸ್ಪತ್ರೆಗೆ ಹೋಗುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು. ಶಮೀಮಾ ಅವರು ಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ 100 ಮಂದಿ ಯೋಧರು ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಗಳ ಪ್ರಕಾರ ತಾಯಿ-ಮಗು ಆರೋಗ್ಯವಾಗಿದ್ದಾರೆ. ಸದ್ಯ ಸೈನಿಕರು ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಗರ್ಭಿಣಿ ಶಮೀಮಾ ಹಾಗೂ ಅವರ ಮಗುವಿಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

    ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಿಮ ಬೀಳುತ್ತಿರುವ ಕಾರಣ ರಸ್ತೆ ಹಾಗೂ ಹೈವೇಗಳು ಸಂಪೂರ್ಣವಾಗಿ ಬಂದ್ ಆಗಿದೆ.

  • ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ – ಮೂವರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ – ಮೂವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದಲ್ಲಿ ಭಾರೀ ಹಿಮಪಾತವಾಗಿದ್ದು, ಕರ್ತವ್ಯ ನಿರತ ಮೂವರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ನಾಪತ್ತೆಯಾಗಿದ್ದಾರೆ.

    ಜಮ್ಮು-ಕಾಶ್ಮೀರದ ಕುಪ್ವಾರ, ಬಾರಾಮುಲ್ಲಾ, ಗಂದರ್ಬಲ್, ಮಚಿಲ್ ಸೆಕ್ಟರ್ ನಲ್ಲಿ ಭಾರೀ ಹಿಮಪಾತವಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 48 ಗಂಟೆಗಳಿಂದ ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದೆ. ಈ ವೇಳೆ ಹಿಮದಡಿಗೆ ಸಿಲುಕಿಕೊಂಡಿದ್ದ ಅನೇಕ ಯೋಧರನ್ನು ರಕ್ಷಿಸಲಾಗಿದೆ.

    ಆದರೆ ದುರಾದೃಷ್ಟವಶಾತ್ ಮೂವರು ಯೋಧರು ಹಿಮದಡಿಗೆ ಸಿಲುಕಿ ಹುತಾತ್ಮರಾಗಿದ್ದು, ಓರ್ವ ಯೋಧ ನಾಪತ್ತೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿ ಆಗುತ್ತಿರುವ ಭಾರೀ ಹಿಮಪಾತದಿಂದ ಕರ್ತವ್ಯ ನಿರತ ಯೋಧರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯ(ಎಲ್‍ಒಸಿ) ಬಳಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಎಲ್‍ಒಸಿ ಉದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಹಳ್ಳಿಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿದೆ.

    ಇಂದು ಬೆಳಗ್ಗೆ 11:30ರ ವೇಳೆಗೆ ರಜೌರಿ ಜಿಲ್ಲೆಯ ಸುಂದರ್‍ಬಾನಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಸುಂದರ್‌ಬಾನಿ ವಲಯದಲ್ಲಿ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ಮಾಡಲು ಪಾಕ್ ಆರಂಭಿಸಿತು. ಇದಕ್ಕೆ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡಿದೆ. ಆದರೆ ಈ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ನ. 17ರಂದು ಅಖ್ನೂರ್ ಸೆಕ್ಟರ್ ಬಳಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ವೇಳೆ ಅಲ್ಲಿ ಟ್ರಕ್‍ನಲ್ಲಿ ತೆರೆಳುತ್ತಿದ್ದ ಓರ್ವ ಯೋಧ ಹುತಾತ್ಮರಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು. ಅವರನ್ನು ಉಧಂಪುರ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಹಾಗೆಯೇ ನ.16ರಂದು ಪಾಕಿಸ್ತಾನವು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಪಡೆಗಳು ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದವು.