Tag: Srinagar

  • ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

    ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

    – ಪೋಷಕರನ್ನು ಕರೆತಂದ್ರೂ ಶರಣಾಗದ ಉಗ್ರರು

    ಶ್ರೀನಗರ: ಜಮ್ಮು-ಕಾಶ್ಮೀರದ ಖಾದಿಬಾಲ್ ಸೌರಾ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಖಾದಿಬಾಲ್ ಸೌರಾ ಪ್ರದೇಶದ ಮನೆಯೊಳಗೆ ಭಯೋತ್ಪಾದಕರು ಅವಿತು ಕುಳಿತಿದ್ದರು. ಆಗ ಭಾರತೀಯ ಸೇನೆ ಆ ಮನೆಯ ಬಳಿ ತೆರಳಿ ಶರಣಾಗುವಂತೆ ಹೇಳಿದರೂ ಭಯೋತ್ಪಾದಕರು ನಿರಾಕರಿಸಿದ್ದಾರೆ. ಇದರಿಂದ ಗುಂಡಿನ ಚಕಮಕಿ ಶುರುವಾಗಿ ಉಗ್ರರು ಹತರಾಗಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಅಧಿಕಾರಿಗಳು, 2019 ರಿಂದ ಈ ಮೂವರು ಭಯೋತ್ಪಾದಕರು ಉಗ್ರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಈ ಮೂವರಲ್ಲಿ ಒಬ್ಬರು ಕಳೆದ ತಿಂಗಳು ಇಬ್ಬರು ಬಿಎಸ್‍ಎಫ್ ಜವಾನರ ಮೇಲೆ ನಡೆದ ದಾಳಿಯಲ್ಲಿ ಭಾಗವಹಿಸಿದ್ದರು. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಬೆಳಗ್ಗೆಯಿಂದ ಉಗ್ರರನ್ನು ಹುಡುಕು ಕೆಲಸದಲ್ಲಿ ಸೇನೆ ತೊಡಗಿತ್ತು. ಈ ವೇಳೆ ಮನೆಯಲ್ಲಿ ಉಗ್ರರು ಅವಿತು ಕಳಿತಿದ್ದರು. ಆಗ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

    ಮನೆಯಲ್ಲಿ ಉಗ್ರರು ಇರುವುದನ್ನು ಮನಗಂಡ ಸೇನೆ ಅವರನ್ನು ಶರಣಾಗುವಂತೆ ಹೇಳಿತ್ತು. ಜೊತೆಗೆ ಸ್ಥಳಕ್ಕೆ ಉಗ್ರರ ಪೋಷಕರನ್ನು ಕರೆಸಿ ಶರಣಾಗಿ ಎಂದು ಸೇನೆ ಹೇಳಿತ್ತು. ಆದರೆ ಅವರು ಇದಕ್ಕೆ ಒಪ್ಪದೆ ಸೇನೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಸೇನೆ ಪ್ರತಿ ದಾಳಿ ಮಾಡಿದ್ದು, ಮನೆಯಲ್ಲಿದ್ದ ಮೂವರು ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.

  • 24 ಗಂಟೆಯಲ್ಲಿ 8 ಮಂದಿ ಭಯೋತ್ಪಾದಕರನ್ನ ಹೊಡೆದುರುಳಿಸಿದ ಭದ್ರತಾ ಪಡೆ

    24 ಗಂಟೆಯಲ್ಲಿ 8 ಮಂದಿ ಭಯೋತ್ಪಾದಕರನ್ನ ಹೊಡೆದುರುಳಿಸಿದ ಭದ್ರತಾ ಪಡೆ

    – ಮಸೀದಿಯಲ್ಲಿ ಅಡಗಿದ್ದ ಉಗ್ರರು

    ಶ್ರೀನಗರ: ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಎಂಟು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

    ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಮೂವರು ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ಐವರು ಭಯೋತ್ಪದಕರು ಸಾವನ್ನಪ್ಪಿದ್ದಾರೆ. ಅವಂತಿಪೋರಾ ಪ್ರದೇಶದ ಮೀನ್ ಗ್ರಾಮದಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದನು.

    ಇನ್ನಿಬ್ಬರು ಭಯೋತ್ಪದಕರು ಹತ್ತಿರದ ಮಸೀದಿಗೆ ಪ್ರವೇಶಿಸಿ ಅದರೊಳಗೆ ಆಶ್ರಯ ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಪೈಕಿ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ಮಸೀದಿಯಲ್ಲಿ ಅಡಗಿದ್ದ ಇಬ್ಬರನ್ನು ಉಗ್ರರನ್ನು ಹತ್ಯೆ ಮಾಡಿದೆ. ಧಾರ್ಮಿಕ ಸ್ಥಳವಾಗಿದ್ದರಿಂದ ಯಾವುದೇ ಗುಂಡಿನ ದಾಳಿ ಅಥವಾ ಐಇಡಿ (ಸ್ಫೋಟಕ ಸಾಧನ) ಬಳಸಲಾಗಿಲ್ಲ ಎಂದು ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಭದ್ರತಾ ಪಡೆ ತಾಳ್ಮೆ ಮತ್ತು ವೃತ್ತಿಪರತೆಯಿಂದ ಕೆಲಸ ಮಾಡಿದೆ. ಗುಂಡಿನ ದಾಳಿ ಮತ್ತು ಐಇಡಿ ಬಳಕೆ ಮಾಡಿಲ್ಲ. ಭಯೋತ್ಪಾದಕರು ಅನಿವಾರ್ಯವಾಗಿ ಮಸೀದಿಯಿಂದ ಹೊರಗೆ ಬರುವಂತೆ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಉಗ್ರರು ಹೊರಗೆ ಬರುತ್ತಿದ್ದಂತೆ ಭದ್ರತಾ ಪಡೆ ಹೊಡೆದುರುಳಿಸಿವೆ. ಈ ಮೂಲಕ ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಬ್ಬಾಗ್ ಸಿಂಗ್ ತಿಳಿಸಿದರು.

    ದಾಳಿ ನಡೆದ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಮಸೀದಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದರಿಂದ ಸ್ಥಳೀಯರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರು ಜೈಶ್-ಎ-ಮುಹಮ್ಮದ್ ಸಂಘಟನೆಗೆ ಸೇರಿದವರು ಎಂದು ಗುರುತಿಸಲಾಗಿದೆ.

  • ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಇಂದು ಬೆಳಗಿನಜಾವ ಜಮ್ಮು ಕಾಶ್ಮೀರದ ಶೋಪಿಯನ್‍ನಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಯೋಧರು ಮೂವರು ಉಗ್ರರನ್ನು ಸೆದೆ ಬಡಿದಿದ್ದಾರೆ.

    ಬೆಳಗಿನಜಾವ 5 ಗಂಟೆಗೆ ಶೋಪಿಯಾನ್‍ನ ಕುರ್ಕ್ವಾಂಗಮ್ ಪ್ರದೇಶದಲ್ಲಿ 44 ರಾಷ್ಟ್ರೀಯ ರೈಫಲ್ಸ್ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಉಗ್ರರರು ಹತರಾಗಿದ್ದಾರೆ.

    ರಾಷ್ಟ್ರೀಯ ರೈಫಲ್ಸ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಝೈನಾಪುರದ ವಿಶೇಷ ಕಾರ್ಯಾಚರಣೆ ಪಡೆ(ಎಸ್‍ಒಜಿ)ಯ ಹಾಗೂ ಸಿಆರ್ ಪಿಎಫ್‍ನ 178ನೇ ಬೆಟಾಲಿಯನ್ ಯೋಧರು ಸೇರಿಕೊಂಡಿದ್ದಾರೆ. ಬೆಳಗ್ಗೆ 6.30ರ ಹೊತ್ತಿಗೆ ಜಂಟಿ ಕಾರ್ಯಾಚರಣೆ ಪೂರ್ಣಗೊಂಡಿದೆ. ಹತ್ಯೆಯಾದ ಮೂವರು ಉಗ್ರರ ಗುರುತನ್ನು ಪತ್ತೆ ಹಚ್ಚಬೇಕಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಾರ್ಯಾಚರಣೆ ನಡೆದ ಸ್ಥಳದಿಂದ ಒಂದು ಐಎನ್‍ಎಸ್‍ಎಎಸ್ ಹಾಗೂ ಎರಡು ಎಕೆ-47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪತ್ತೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಶನಿವಾರವಷ್ಟೇ ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು.

  • ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್, ಜೈಶ್‍ನ ‘ಬಾಂಬ್ ಎಕ್ಸ್ ಪರ್ಟ್’ ಎನ್‍ಕೌಂಟರ್

    ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್, ಜೈಶ್‍ನ ‘ಬಾಂಬ್ ಎಕ್ಸ್ ಪರ್ಟ್’ ಎನ್‍ಕೌಂಟರ್

    – ಉಗ್ರ ರಿಯಾಜ್ ಹತ್ಯೆ ಬಳಿಕ ಮತ್ತೊಂದು ಯಶಸ್ವಿ ಕಾರ್ಯಾಚರಣೆ
    – ಕಾರ್ ಬಾಂಬ್ ಮಿಸ್ಸಿಂಗ್

    ಶ್ರೀನಗರ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಾಂಬ್ ತಯಾರಿಕ ಎಕ್ಸ್ ಪರ್ಟ್ ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಬಾಯ್ ಸೇರಿದಂತೆ ಮೂವರು ಉಗ್ರರು ಇಂದು ನಡೆದ ಎನ್‍ಕೌಂಟರಿನಲ್ಲಿ ಸಾವನ್ನಪ್ಪಿದ್ದಾರೆ. ಉಗ್ರ ರಿಯಾಜ್ ನೈಕೋ ಎನ್‍ಕೌಂಟರ್ ಬಳಿಕ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

    ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಹಳ್ಳಿಯೊಂದರಲ್ಲಿ ಭಾರತೀಯ ಸೇನೆ, ಕಾಶ್ಮೀರ ಪೊಲೀಸ್ ಹಾಗೂ ಸಿಆರ್ ಪಿಎಫ್ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರರನ್ನು ಎನ್‍ಕೌಂಟರ್ ಮಾಡಲಾಗಿದೆ. ಘಟನೆಯಲ್ಲಿ ಸೇನೆಯ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮೃತ ಫೌಜಿ ಬಾಯ್ ಪಾಕಿಸ್ತಾನಿ ಪ್ರಜೆಯಾಗಿದ್ದು, ದೇಶದಲ್ಲಿ ರಕ್ಷಣಾ ಪಡೆಗಳಿಗೆ ಬಹುದೊಡ್ಡ ಸಮಸ್ಯೆಯಾಗಿದ್ದ. ಐಇಡಿ ಬಾಂಬ್ ತಯಾರಿಕೆಯಲ್ಲಿ ಎಕ್ಸ್ ಪರ್ಟ್, ಜೆಇಎಂ ಉಗ್ರ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಎಂದು ಕಾಶ್ಮೀರಿ ರೇಂಜ್‍ನ ಐಜಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ. ಫೌಜಿ ಎನ್‍ಕೌಂಟರ್, ರಿಯಾಜ್ ನೈಕೋ ಸಾವಿನ ಬಳಿಕ ಭಾರತ ಸೇನೆಗೆ ಉಗ್ರರ ವಿರುದ್ಧ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.

    ಸೇನೆಗೆ ಸೋಮವಾರ ಬೆಳಗ್ಗೆ ಮೂವರು ಪಾಕಿಸ್ತಾನಿ ಶಸ್ತ್ರಸಜ್ಜಿತ ಉಗ್ರರು ಎನ್‍ಕೌಂಟರ್ ನಡೆದಿತ್ತು. ಕಳೆದ ತಿಂಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಾಹೀದ್ದಿನ್ ಮುಖ್ಯಸ್ಥ ರಿಯಾಜ್ ನೈಕೂನನ್ನು ಸೇನೆ ಹೊಡೆದುರುಳಿಸಿತ್ತು. ಇತ್ತೀಚೆಗೆ ಭದ್ರತಾ ಪಡೆಗಳು ಫೌಜಿ ಬಾಯ್ ತಯಾರಿಸಿದ್ದ ಮೂರು ಕಾರು ಬಾಂಬ್‍ಗಳಲ್ಲಿ ಒಂದನ್ನು ಪತ್ತೆ ಮಾಡಿ ಸ್ಫೋಟಿಸಿದ್ದರು. ಆದರೆ ಮತ್ತೆರಡು ಕಾರ್ ಬಾಂಬ್‍ಗಳು ಪತ್ತೆಯಾಗಬೇಕಿದೆ. ಬುಡ್ಗಾಮ್ ಮತ್ತು ಕುಲ್ಗಮ್ ಪ್ರದೇಶಗಳಲ್ಲಿ ಮತ್ತೆರಡು ಬಾಂಬ್ ಕಾರುಗಳು ಇರುವ ಬಗ್ಗೆ ಭದ್ರತಾ ಪಡೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಉಗ್ರ ಮಸೂದ್ ಅಜರ್‍ನ ಸಹೋದರ ಫೌಜಿ ಬಾಯ್ ಎಂಬ ಮಾಹಿತಿ ಲಭಿಸಿದೆ.

    ಮಸೂದ್ ಅಜರ್ ನನ್ನು 1991 ಭಾರತ ಸೇನೆ ಜಮ್ಮು ಕಾಶ್ಮೀರದಲ್ಲಿ ಬಂಧಿಸಿತ್ತು. ಆದರೆ 1999ರಲ್ಲಿ ವಿಮಾನ ಅಪಹರಿಸಿ ಅಜರ್ ಮಸೂದ್‍ನನ್ನು ಬಿಡುಗಡೆಗೊಳಿಸುವಲ್ಲಿ ಉಗ್ರರು ಯಶಸ್ವಿಯಾಗಿದ್ದರು. ಆ ಬಳಿಕ ಭಾರತದಲ್ಲಿ ನಡೆದಿದ್ದ ಪ್ರಮುಖ ದಾಳಿಗಳಲ್ಲಿ ಮಸೂದ್ ಕಾರಣನಾಗಿದ್ದ. ಇನ್ನು ಉಗ್ರ ಫೌಜಿ ಭಾಯ್‍ನನ್ನು ಲಂಬೂ, ಅದ್ನಾನ್ ಹಾಗೂ ಜಬ್ಬಾರ್ ಎಂದೂ ಕರೆಯಲಾಗುತ್ತದೆ. ಪುಲ್ವಾಮಾ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್‍ಗಳಲ್ಲಿ ಫೌಜಿ ಬಾಯ್ ಕೂಡ ಒಬ್ಬ.

  • ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಮೂವರು ಭಯೋತ್ಪಾದಕರು ಅರೆಸ್ಟ್

    ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಮೂವರು ಭಯೋತ್ಪಾದಕರು ಅರೆಸ್ಟ್

    ಶ್ರೀನಗರ: ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಬಂಧಿಸಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಂಧಿತ ಮೂವರಲ್ಲಿ ಇಬ್ಬರನ್ನು ಝಾಕಿರ್ ಅಹ್ಮದ್ ಭಟ್ ಮತ್ತು ಅಬಿದ್ ಹುಸೇನ್ ವಾನಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಕಾಶ್ಮೀರಾದ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ಈ ಕಾರ್ಯಾಚರಣೆ ಮಾಡಿದೆ. ಈ ಮೂವರು ಭಯೋತ್ಪಾದಕರು ಇತ್ತೀಚೆಗೆ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕ ಗುಂಪಿಗೆ ಸೇರಿದ್ದರು ಎಂಬ ಮಾಹಿತಿ ಲಭಿಸಿದೆ.

    ಪುಲ್ವಾಮ ಜಿಲ್ಲೆಯಲ್ಲಿ ಜಮ್ಮ ಕಾಶ್ಮೀರ ಪೊಲೀಸರು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ್ದ ಉಗ್ರ ಘಟಕವೊಂದನ್ನು ನಾಶ ಮಾಡಿದ್ದರು. ಜಮ್ಮು ಕಾಶ್ಮೀರಾದ ಅವಂತಿಪೋರಾ ವಿಭಾಗದ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಮಾಡಲಾಗಿತ್ತು. ಇದಾದ ನಂತರ ಈ ಮೂವರು ಉಗ್ರರನ್ನು ಸೆರೆಹಿಡಿಯಲಾಗಿದೆ. ಈ ಮೂವರು ಉಗ್ರರು ಪಾಕಿಸ್ತಾನಕ್ಕೆ ಸೇರಿದ್ದವರಾಗಿದ್ದು, ಉನ್ನತ ಮಟ್ಟದ ಟ್ರೈನಿಂಗ್ ಪಡೆಯಲು ಉಗ್ರ ಸಂಘಟನೆ ಸೇರಿದ್ದರು ಎನ್ನಲಾಗಿದೆ.

    ಜಮ್ಮು ಕಾಶ್ಮೀರಾದ ಬಾಥೆನ್ ಪ್ರದೇಶದಲ್ಲಿ ನಾವು ಮತ್ತು ಭಾರತೀಯ ಸೇನೆ ದಾಳಿ ಮಾಡಿ ಸ್ಫೋಟಕ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಕೃತ್ಯಕ್ಕೆ ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತ ಮೂವರು ಉಗ್ರರ ವಿರುದ್ಧ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

    ಕಳೆದ ಮಂಗಳವಾರ ಶ್ರೀನಗರದ ಪಾಂಡಚ್ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

  • ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ- ರೈಫಲ್ ದೋಚಿ ಉಗ್ರರು ಪರಾರಿ

    ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ- ರೈಫಲ್ ದೋಚಿ ಉಗ್ರರು ಪರಾರಿ

    ಶ್ರೀನಗರ: ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಪಾಂಡಚ್ ಪ್ರದೇಶದ ಬಳಿ ಬುಧವಾರ ಮಧ್ಯಾಹ್ನ ಅರೆಸೇನಾ ಪಡೆ 37ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಬಿಎಸ್‍ಎಫ್ ಯೋಧರು ಹುತಾತ್ಮರಾಗಿದ್ದಾರೆ. ದಾಳಿ ವೇಳೆ ಉಗ್ರರು ಯೋಧರ ರೈಫಲ್ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

    ಪಾಂಡಚ್ ಬಳಿಯ ಬಿಎಸ್‍ಎಫ್ ಪಡೆ ಮೇಲೆ ಉಗ್ರರು ನಿರಂತರವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಯೋಧರನ್ನು ಸಮೀಪದ ಸ್ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಯೋಧರು ಸಾವನ್ನಪ್ಪಿದ್ದರು ಎಂದು ವೈದ್ಯರು ಪ್ರಕಟಿಸಿದರು.

    ಘಟನೆಯ ಬೆನ್ನಲ್ಲೇ ಶ್ರೀನಗರ, ಪಾಂಡಚ್ ಜಿಲ್ಲೆಯ ಗಡಿ ಪ್ರದೇಶವನ್ನು ಬಿಎಸ್‍ಎಫ್ ಯೋಧರು ವಶಕ್ಕೆ ಪಡೆದಿದ್ದು, ಉಗ್ರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಂದ ಉಗ್ರ ಜಮ್ಮುವಿನಲ್ಲಿ ಅರೆಸ್ಟ್

    ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಂದ ಉಗ್ರ ಜಮ್ಮುವಿನಲ್ಲಿ ಅರೆಸ್ಟ್

    ಶ್ರೀನಗರ: ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಮತ್ತು ಆತನ ಸಹಚರನನ್ನು ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

    ಬಂಧಿತ ಉಗ್ರನನ್ನು ರುಸ್ತಮ್ ಅಲಿ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎನ್‍ಐಎ ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಂಗಳವಾರ ರಾತ್ರಿ ಉಗ್ರನನ್ನು ಕಿಶ್ತ್ವಾರ್ ಜಿಲ್ಲೆಯ ಹಂಜಲಾ ಪ್ರದೇಶದಿಂದ ಎನ್‍ಐಎ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ 23ರಂದು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಾದ ನಿಸ್ಸಾರ್ ಅಹ್ಮದ್ ಶೇಖ್, ನಿಷಾದ್ ಅಹ್ಮದ್ ಮತ್ತು ಆಜಾದ್ ಹುಸೇನ್ ನನ್ನು ಬಂಧಿಸಿದ್ದರು. ಈ ಮೂವರ ತನಿಖೆ ಮಾಡಿ ಇವರು ನೀಡಿದ ಮಾಹಿತಿ ಮೇರೆಗೆ ಈಗ ರುಸ್ತಮ್ ಅಲಿಯನ್ನು ಎನ್‍ಐಎ ಬಂಧಿಸಿದೆ.

    2018ರಲ್ಲಿ ಇದೇ ಕಿಶ್ತ್ವಾರ್ ಪ್ರದೇಶದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಅವರನ್ನು ಕೊಲೆ ಮಾಡಲಾಗಿತ್ತು. ನಂತರ 2019ರ ಏಪ್ರಿಲ್‍ನಲ್ಲಿ ಚಂದರ್ ಕಾಂತ್ ಶರ್ಮಾ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ವಿಚಾರವಾಗಿ ಕಿಶ್ತ್ವಾರ್ ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಎರಡು ಪ್ರಕರಣಗಳು ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸಿತ್ತು.

  • ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಇಬ್ಬರು ಉಗ್ರರು ಮಟಾಶ್

    ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಇಬ್ಬರು ಉಗ್ರರು ಮಟಾಶ್

    ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‍ನಲ್ಲಿ ಇಂದು ಮುಂಜಾನೆ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯ ಗುಂಡೇಟಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ.

    ಶೋಪಿಯಾನ್‍ನಲ್ಲಿ ಉಗ್ರರು ಅಡಗಿ ಕೂತಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಶೋಪಿಯಾನ್‍ನ ಪ್ರದೇಶದಲ್ಲಿ ಜಂಟಿ ಶೋಧಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡೆದಿದ್ದಾರೆ.

    ಭದ್ರತಾ ಪಡೆಗಳನ್ನು ಕಂಡ ತಕ್ಷಣ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಭದ್ರತಾ ಪಡೆಗಳು ಕೂಡ ಪ್ರತ್ಯುತ್ತರ ನೀಡಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

    ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಈ ಪ್ರದೇಶದ ಅಕ್ಕಪಕ್ಕದ ಗ್ರಾಮಗಳನ್ನು ಸುತ್ತುವರೆದು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 21 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಉಗ್ರರು ಸಾಕಷ್ಟು ಬಾರಿ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಹಲವು ಉಗ್ರರನ್ನು ಸೇನೆ ಸದೆಬಡೆದಿದೆ.

    ಅಲ್ಲದೇ ಕೆಲ ದಿನಗಳ ಹಿಂದೆ ಸೊಪೋರ್‍ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಸೇನೆಯ ಗುಂಡೇಟಿಗೆ ಹತನಾಗಿದ್ದಾನೆ. ಈತ 2018ರಿಂದ ಭಯೋತ್ಪಾದನೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಕುತಂತ್ರಿ ಪಾಕಿಗೆ ಭಾರತ ಸೇನೆಯ ಉತ್ತರ – 15 ಪಾಕ್ ಸೈನಿಕರು, 8 ಭಯೋತ್ಪಾದಕರು ಮಟಾಶ್

    ಕುತಂತ್ರಿ ಪಾಕಿಗೆ ಭಾರತ ಸೇನೆಯ ಉತ್ತರ – 15 ಪಾಕ್ ಸೈನಿಕರು, 8 ಭಯೋತ್ಪಾದಕರು ಮಟಾಶ್

    ಶ್ರೀನಗರ: ಪಾಕಿಸ್ತಾನ ಕೆಲವು ದಿನಗಳಿಂದ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿತ್ತು. ಇದಕ್ಕೆ ಭಾರತೀಯ ಸೇನಾ ಪಡೆ ಪ್ರತ್ಯುತ್ತರ ನೀಡಿದೆ. ಜಮ್ಮು-ಕಾಶ್ಮೀರದ ಕೇರನ್ ವಲಯದ ದುಧ್ನಿಯಲ್ ಪ್ರದೇಶದಲ್ಲಿ ಭಯೋತ್ಪಾದಕರ ಉಡಾವಣಾ ಪ್ಯಾಡ್‍ಗಳ ಮೇಲೆ ಭಾರತೀಯ ಸೇನೆ ಫಿರಂಗಿದಳದ ಮೂಲಕ ಏಪ್ರಿಲ್ 10 ರಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

    ದೇಶದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಅನೇಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಿಶನ್‍ಗಂಗಾ ನದಿಯ ದಡದಲ್ಲಿ ದುಧ್ನಿಯಲ್ ಪ್ರದೇಶವನ್ನು ಭಾರತೀಯ ಸೇನೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

    ಕೇರನ್ ವಲಯದಲ್ಲಿ ಏಪ್ರಿಲ್ 5 ರಂದು ಭಯೋತ್ಪಾದಕರು ಒಳನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆಯ ವಿಶೇಷ ಪಡೆಗಳು ಐದು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಇವರಲ್ಲಿ ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಜೈಶ್ ಎ ಮೊಹಮ್ಮದ್ (ಜೆಎಂ) ಅವರೊಂದಿಗೆ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

    ಶಾರ್ದಾ, ದುಧ್ನಿಯಲ್ ಮತ್ತು ಶಾಹಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ. ಆದರೆ ದಾಳಿಯಲ್ಲಿ 15 ವರ್ಷದ ಬಾಲಕಿ ಸೇರಿದಂತೆ ನಾಲ್ಕು ನಾಗರಿಕರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ಹೇಳಿಕೊಂಡಿತ್ತು.

    ಏಪ್ರಿಲ್ 10 ರಂದು ಸೈನ್ಯವು ಕೇರನ್ ವಲಯದಲ್ಲಿ ದಾಳಿ ಮಾಡಿ 8 ಭಯೋತ್ಪಾದಕರೊಂದಿಗೆ 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ ದುಧ್ನಿಯಲ್ ಪ್ರದೇಶದಲ್ಲಿ ಕೆಲ ಆಹಾರ ಮತ್ತು ಸರಕುಗಳನ್ನು ಸಂಗ್ರಹಿಸಿದ್ದ ಅಂಗಡಿಗಳಿಗೂ ಸಹ ಹಾನಿಯಾಗಿದೆ ಎಂದು ಗುಪ್ತಚರ ವರದಿ ತಿಳಿದಿದೆ.

    ಈ ವಲಯದಲ್ಲಿ ಪಾಕಿಸ್ತಾನದ ಲಾಚ್‍ಪ್ಯಾಡ್‍ಗಳಲ್ಲಿ ಲಷ್ಕರ್ ಎ ತೊಯ್ಬಾ, ಜೈಶ್ ಇ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‍ನ ಸುಮಾರು 160 ಭಯೋತ್ಪಾದಕರು ಭಾರತ ಪ್ರದೇಶ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಭಾರತೀಯ ಸೈನ್ಯಕ್ಕೆ ಉಡಾವಣಾ ಪ್ಯಾಡ್‍ಗಳನ್ನು ಗುರಿಯಾಗಿ ದಾಳಿ ಮಾಡುವುದು ಅನಿವಾರ್ಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 242 ಭಯೋತ್ಪಾದಕರು ಇದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ.

  • ಭಾರತೀಯ ಸೇನೆಯ ಭರ್ಜರಿ ಬೇಟೆ – 24 ಗಂಟೆಯಲ್ಲಿ 9 ಉಗ್ರರು ಮಟ್ಯಾಶ್

    ಭಾರತೀಯ ಸೇನೆಯ ಭರ್ಜರಿ ಬೇಟೆ – 24 ಗಂಟೆಯಲ್ಲಿ 9 ಉಗ್ರರು ಮಟ್ಯಾಶ್

    ಶ್ರೀನಗರ: ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳೆದ 24 ಗಂಟೆಯಲ್ಲಿ 9 ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿದೆ.

    ದಕ್ಷಿಣ ಕಾಶ್ಮೀರದ ಬಾಟ್ಪುರ್‍ದಲ್ಲಿ ಶನಿವಾರ 4 ಮಂದಿ ಉಗ್ರರನ್ನು ಸೇನೆ ಗುಂಡಿಕ್ಕಿ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಇಂದು ಎಲ್‍ಒಸಿಯ ಕೆರಾನ್ ಸೆಕ್ಟರ್ ನಲ್ಲಿ ಮತ್ತೆ 5 ಮಂದಿ ಉಗ್ರರನ್ನು ಭಾರತೀಯ ಯೋಧರು ಸೆದೆಬಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶನಿವಾರ ಬೆಳಗ್ಗಿನ ಜಾವ ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಾಮ್‍ನಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಸೇನೆ ಸೆದೆಬಡಿದಿತ್ತು.

    ಕುಲ್ಗಾಮ್‍ನ ಡಿಹೆಚ್ ಪೊರಾದಲ್ಲಿ ಉಗ್ರರು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ ಮತ್ತು ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಶನಿವಾರ ಬೆಳಗ್ಗಿನ ಜಾವ ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

    ಕಾರ್ಯಾಚರಣೆ ವೇಳೆ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಪೊಲೀಸರು ಹಾಗೂ ಸೇನೆಯ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಆಗ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಯ್ತು. ಈ ದಾಳಿಯಲ್ಲಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು.