Tag: Srikantegowda

  • ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮಾಡುವ ಕುರಿತು ವರದಿ ನೀಡಲು ಮುಂಬರುವ ಬಜೆಟ್‍ನಲ್ಲಿ ಒಂದು ಸಮತಿ ನೇಮಕ ಮಾಡಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.

    ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವೇತನ ಜಾರಿಗೆ ಕ್ರಮವಹಿಸಬೇಕು. ನಮ್ಮ ರಾಜ್ಯದ ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ವೇತನದಲ್ಲಿ ತಾರತಮ್ಯ ಇದೆ. ಕೂಡಲೇ 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಒತ್ತಾಯ ಮಾಡಿದರು. 6 ನೇ ವೇತನ ಆಯೋಗ ವೇತನದಲ್ಲಿ ಇರೋ ತಾರತಮ್ಯ ಸರಿ ಮಾಡಿಬೇಕು. ರಾಜ್ಯದಲ್ಲಿ 2 ಲಕ್ಷ ಸರ್ಕಾರದಲ್ಲಿ ಹುದ್ದೆಗಳು ಖಾಲಿ ಇವೆ. ಕೂಡಲೇ ಇವುಗಳನ್ನು ಭರ್ತಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ಇದನ್ನೂ ಓದಿ: ಪ್ರತಿದಿನ ಗುರುಗ್ರಾಮ ನಿವಾಸಿಗಳನ್ನು ಭೇಟಿ ಮಾಡ್ತಾರೆ ಮೊದಲ ಮಹಿಳಾ ಕಮಿಷನರ್!

    ರೌಡಿಶೀಟರ್, MLC ಶ್ರೀಕಂಠೇಗೌಡ ಆದ ಸ್ಟೋರಿ: ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ! | Mandya jds mlc srikantegowda has rowdy sheeter history | TV9 Kannada

    ಇದಕ್ಕೆ ಉತ್ತರ ನೀಡಿದ ಬೊಮ್ಮಾಯಿ ಅವರು, ರಾಜ್ಯ ಮತ್ತು ಕೇಂದ್ರ ನೌಕರರ ನಡುವೆ ವೇತನ ತಾರತಮ್ಯ ಇದೆ. ರಾಜ್ಯದಲ್ಲಿ 2017-18 ರಲ್ಲಿ ವೇತನ ಪರಿಷ್ಕರಣೆ ಆಗಿತ್ತು. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ಕ್ರಮ ತಗೋತೀವಿ ಎಂದು ಭರವಸೆ ನೀಡಿದರು.

    ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ನಮ್ಮ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಮುಂದಿನ ಬಜೆಟ್ ನಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ವೇತನ ಪರಿಷ್ಕರಣೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

    2022-23ರ ಬಜೆಟ್‍ನಲ್ಲಿ ವೇತನ ಆಯೋಗ ರಚನೆ ಮಾಡೋ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದರು. ರಾಜ್ಯದಲ್ಲಿ 16 ಸಾವಿರ ಪೊಲೀಸ್ ಹುದ್ದೆ, 17 ಸಾವಿರ ಶಿಕ್ಷಕರ ಹುದ್ದೆ, 14 ಸಾವಿರ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಹುದ್ದೆ ತುಂಬಲು ಆದೇಶ ಹೊರಡಿಸಲಾಗಿದೆ. ಹಂತ-ಹಂತವಾಗಿ ಖಾಲಿ ಇರೋ ಹುದ್ದೆಗಳನ್ನ ತುಂಬುವ ಕೆಲಸ ಮಾಡುತ್ತೀವಿ ಎಂದು ವಿಶ್ವಾಸದ ಮಾತುಗಳನ್ನಾಡಿದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

  • ಶ್ರೀಕಂಠೇಗೌಡ ಮತ್ತೆ ಉದ್ಧಟತನ – ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು

    ಶ್ರೀಕಂಠೇಗೌಡ ಮತ್ತೆ ಉದ್ಧಟತನ – ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು

    ಮಂಡ್ಯ: ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಗೂಡಾಂಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ನಾಲ್ವರು ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ಬಂದು ಇಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು ಎಂದು ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀಕಂಠೇಗೌಡರಿಂದ ನಾಲ್ವರು ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.

    ಹಲ್ಲೆ ಮತ್ತು ತೇಜೋವಧೆ ಮಾಡಲು ಯತ್ನಿಸಿದರೆಂದು ಶ್ರೀಕಂಠೇಗೌಡರು ದೂರು ನೀಡಿದ್ದಾರೆ. ಪಶ್ಚಿಮ ಠಾಣೆಯಲ್ಲಿ ಎಂಎಲ್‍ಸಿ ಶ್ರೀಕಂಠೇಗೌಡ ದೂರು ಆಧರಿಸಿ ಪತ್ರಕರ್ತರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಸದ್ಯಕ್ಕೆ ಪತ್ರಕರ್ತರ ಸಂಘ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಸೆಕ್ಷನ್‍ಗಳ ಅಡಿ ದೂರು ದಾಖಲಿಸಿಕೊಳ್ಳಲು ಕೋರ್ಟಿಗೆ ಮನವಿ ಮಾಡಲಿದ್ದಾರೆ. ಮಂಡ್ಯ ಪತ್ರಕರ್ತರ ಸಂಘದಿಂದ ಖಾಸಗಿ ದೂರು ಸಲ್ಲಿಕೆಗೆ ಚಿಂತನೆ ಮಾಡಲಾಗಿದ್ದು, ಜಿಲ್ಲಾಡಳಿತದ ಮೌನ ನಡೆಯಿಂದ ಬೇಸತ್ತು ಪತ್ರಕರ್ತರು ಕೋರ್ಟ್ ಮೊರೆಹೋಗಲಿದ್ದಾರೆ.

    ಪೊಲೀಸರು ದೂರು ದಾಖಲಿಸಿಕೊಳ್ಳುವ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದರು. ಈ ಘಟನೆ ನಡೆದ ದಿನ ನಾಲ್ವರು ಪರ್ತಕರ್ತರ ದೂರು ನೀಡಿದ್ದರು. ಆದರೆ ಈ ಪೈಕಿ ಓರ್ವ ಪತ್ರಕರ್ತನ ದೂರು ಆಧರಿಸಿ ಎಂಎಲ್‍ಸಿ ಮತ್ತು ಅವರ ಪುತ್ರನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಎಫ್‍ಐಆರ್ ದಾಖಲಿಸಿದ್ದರು.

    ಕೊರೊನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ ಇದು ಗೊತ್ತಿದ್ದರೂ ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಗಲಾಟೆ ಮಾಡಿದ ದಿನವೇ ಶ್ರೀಕಂಠೇಗೌಡ ಮತ್ತು ಪುತ್ರ ಕೃಷಿಕ್ ಗೌಡನಿಗೆ ಜೆಎಂಎಫ್‍ಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

    ಆರೋಪಿಗಳು ಯಾರು?
    ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
    ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
    ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
    ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
    ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
    ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗ

    ಯಾವ್ಯಾವ ಸೆಕ್ಷನ್ ಮೇಲೆ ಕೇಸ್?
    * 143 – ಅಕ್ರಮವಾಗಿ ಗುಂಪು ಸೇರುವಿಕೆ
    * 149 – ಉದ್ದೇಶಪೂರ್ವಕವಾಗಿ ದೊಂಬಿ
    * 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
    * 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
    * 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
    * 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
    * 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
    * 504 – ಜೀವ ಬೆದರಿಕೆ
    * ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ

  • ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    ತಮ್ಮ ಪಕ್ಷದ ಎಂಎಲ್‍ಸಿಯನ್ನು ಸಮರ್ಥಿಸಿಕೊಂಡ ಮಾಜಿ ಎಂಪಿ ಶಿವರಾಮೇಗೌಡ

    – ವಸತಿ ಪ್ರದೇಶದಲ್ಲಿ ಟೆಸ್ಟ್ ಮಾಡುವುದು ತಪ್ಪು

    ಮಂಡ್ಯ: ವಸತಿ ಪ್ರದೇಶದಲ್ಲಿ ಕೊರೊನಾ ಟೆಸ್ಟ್ ಮಾಡುವುದು ತಪ್ಪು ಎಂದು ಹೇಳುವ ಮೂಲಕ ಮಾಜಿ ಸಂಸದ ಶಿವರಾಮೇಗೌಡ ತಮ್ಮ ಪಕ್ಷದ ಎಂಎಲ್‍ಸಿ ಶಿವರಾಮೇಗೌಡರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಮಂಡ್ಯದಲ್ಲಿ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಪತ್ರಕರ್ತರ ಮೇಲೆ ಮಾಡಿದ ಹಲ್ಲೆಯ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಶಿವರಾಮೇಗೌಡ, ಮಾಧ್ಯಮ ಮಿತ್ರರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ ವಸತಿ ಪ್ರದೇಶದ ಮಧ್ಯದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದು ಎಷ್ಟು ಸರಿ? ಅಂತಹ ಅಧಿಕಾರಿಗಳುನ್ನು ಅಮಾನತು ಮಾಡಬೇಕು ಎಂದರು.

    ಕೊರೊನಾ ವಾರಿಯರ್ಸ್‍ಗೆ ಪೊಲೀಸರಿಗೆ ಮತ್ತು ಪತ್ರಕರ್ತರಿಗೆ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಹೇಳಿಲ್ಲ. ಅವರ ಆರೋಗ್ಯ ತಪಾಸಣೆಯಾಗಬೇಕು. ಆದರೆ ಅದನ್ನು ವಸತಿ ಪ್ರದೇಶದ ಮಧ್ಯೆ ಇರುವ ಭವನದಲ್ಲಿ ಮಾಡಿದರೆ, ಜನರು ಸಾಮಾನ್ಯವಾಗಿಯೇ ಭಯಪಡುತ್ತಾರೆ. ಜೊತೆಗೆ ಶ್ರೀಕಂಠೇಗೌಡ ಅವರ ಮನೆಯೂ ಅದೇ ಪ್ರದೇಶದಲ್ಲಿ ಇರುವ ಕಾರಣ ಅವರು ಅದನ್ನು ಕೇಳಲು ಬಂದಿದ್ದಾರೆ ಅಷ್ಟೇ ಎಂದು ಶಿವರಾಮೇಗೌಡ ಹೇಳಿದ್ದಾರೆ.

    ನಾನು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಅಲ್ಲಿ ಕೊರೊನಾ ಪರೀಕ್ಷೆ ಮಾಡಲು ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಕೊರೊನಾ ಪರೀಕ್ಷೆಯನ್ನು ಊರಿನಿಂದ ಹೊರಗೆ ಹಲವಾರು ಕಟ್ಟಡಗಳು ಇವೆ ಅಲ್ಲಿ ಮಾಡಬೇಕು. ಅದನ್ನು ಬಿಟ್ಟು ಊರ ಒಳಗೆ ಯಾಕೆ ಮಾಡಬೇಕು. ಅಲ್ಲಿನ ಸ್ಥಳೀಯ ನಿವಾಸಿಗಳು ಹೆದರಿಕೊಂಡು ನನಗೆ 50 ಜನ ಕರೆ ಮಾಡಿದ್ದರು. ಕೆಲ ಸ್ಥಳೀಯ ಮಟ್ಟದ ಅಧಿಕಾರಿಗಳ ಮಾತನನ್ನು ಸರ್ಕಾರ ಕೇಳಬಾರದು ಎಂದು ಸಮರ್ಥನೆ ಮಾಡಿಕೊಂಡರು.

    ನಡೆದಿದ್ದೇನು?
    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್-19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದಾರೆ. ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ

    ಮಂಡ್ಯ: ಇಂದು ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡೆಸಿ, ಗಲಾಟೆ ಮಾಡಿದ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ, ಗಲಾಟೆ ಮಾಡೋರಿಗೆ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಎಸ್‍ಪಿ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡೆಸಿ, ರೌಡಿಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು. ಅವರು ನಿಯಮಗಳನ್ನು ಉಲ್ಲಂಘಿಸಿ ಕಾನೂನಿನ ವಿರುದ್ಧ ಹೋಗಿದ್ದಾರೆ. ಸರ್ಕಾರದ ಅನುಮತಿ ಪಡೆದು ಮಂಡ್ಯದಲ್ಲಿ ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಫೀಲ್ಡ್ ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸೋಂಕು ತಗುಲಿದರೆ ಅದು ಬೇರೆ ಅವರಿಗೆ ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗಿದೆ ಅದನ್ನು ಶ್ರೀಕಂಠೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.

    ಇಲ್ಲಿ ಪರೀಕ್ಷೆ ಮಾಡಬೇಡಿ, ನಮ್ಮ ಮನೆ ಇದೆ ಎಂದರೆ ಬೇರೆ ಕಡೆ ಪರೀಕ್ಷೆ ಮಾಡಿದರೂ ಮನೆಗಳು ಇರುತ್ತೆ ಅಲ್ವಾ? ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ? ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್‍ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು.

    ಕೊರೊನಾ ಪರೀಕ್ಷೆ ಮಾಡಿದರೆ ಸೋಂಕು ಹರಡುತ್ತೆ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಅತೀ ಹೆಚ್ಚು ಪರೀಕ್ಷೆ ಮಾಡಿ ಎಂದಿದ್ದಾರೆ. ಕೊರೊನಾ ಇರುವ ಅದೆಷ್ಟೋ ಮಂದಿಗೆ ಸೋಂಕಿನ ಲಕ್ಷಣಗಳು ಇರುವುದಿಲ್ಲ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಬೇರೆ ಸಮಯದಲ್ಲಿ ಮಾಡುವಂತೆ ಗೂಂಡಾಗಿರಿ, ಗಲಾಟೆ, ರಾಜಕಾರಣ ಮಾಡುವುದು ಸರಿಯಲ್ಲ. ಹೀಗೆ ಮಾಡಿ ಜನಪ್ರತಿನಿಧಿಯಾಗುವ ಅರ್ಹತೆಯನ್ನೇ ಇವರು ಕಳೆದುಕೊಂಡಿದ್ದಾರೆ ಎನ್ನಬಹುದು ಎಂದು ಕಿಡಿಕಾರಿದ್ದಾರೆ.

    ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರು ಎಫ್‍ಐಆರ್ ದಾಖಲಾದ ಮೇಲೆ ಅದರ ಕಾಫಿಯನ್ನ ಕಳುಹಿಸುವುದಾಗಿ ಹೇಳಿದ್ದಾರೆ. ಈ ರೀತಿ ತಪ್ಪು ಮಾಡಿದರೆ ಸಾಮಾನ್ಯ ವ್ಯಕ್ತಿ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಅದೇ ರೀತಿ ಕ್ರಮವನ್ನು ಎಂಎಲ್‍ಸಿ ಮೇಲೂ ತೆಗೆದುಕೊಳ್ಳಬೇಕು. ತಪ್ಪು ಯಾರೇ ಮಾಡಿದರು ತಪ್ಪು ತಪ್ಪೇ. ಎಂಎಲ್‍ಸಿ, ಎಂಪಿ, ಎಂಎಲ್‍ಎ ಯಾರೇ ಮಾಡಿದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಎಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಅಗತ್ಯ ಸೇವೆಗಳಲ್ಲಿ ಇರುವವರು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಇವರಿಗೆ ಅರ್ಥ ಆಗುತ್ತಿಲ್ಲ. ಇವರು ನಾವು ಮಾತ್ರ ಸುರಕ್ಷಿತವಾಗಿರಬೇಕು ಎನ್ನುವ ಉದ್ದೇಶದಲ್ಲಿ ಇದ್ದಾರೋ ಏನೋ ಗೊತ್ತಿಲ್ಲ. ಆದರೆ ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸುಮಲತಾ ಅವರು ಒತ್ತಾಯಿಸಿದ್ದಾರೆ.

  • ಸುಮಲತಾ ಗೆಲುವಿಗೆ ಕಾರಣರಾದ ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ – ಬ್ಯಾನರ್ ಹಾಕಿ ವ್ಯಂಗ್ಯ

    ಸುಮಲತಾ ಗೆಲುವಿಗೆ ಕಾರಣರಾದ ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ – ಬ್ಯಾನರ್ ಹಾಕಿ ವ್ಯಂಗ್ಯ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಇದೀಗ ಅವರ ಬೆಂಬಲಿಗರು ಮಂಡ್ಯ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.

    ಮಂಡ್ಯದ ನೂರು ಅಡಿ ರಸ್ತೆಯಲ್ಲಿ ಸುಮಲತಾ ಬೆಂಬಲಿಗರು ಬ್ಯಾನರ್ ಕಟ್ಟಿದ್ದಾರೆ. ಬ್ಯಾನರ್‌ನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಫೋಟೋ ಹಾಕಿದ್ದಾರೆ. ಅವರ ಫೋಟೋ ಕೆಳಗೆ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾದ ತ್ರಿಮೂರ್ತಿಗಳಿಗೆ ಅಭಿನಂದನೆಗಳು ಎಂದು ಬರೆದಿದ್ದು, ಈ ಮೂಲಕ ಸುಮಲತಾ ಬೆಂಬಲಿಗರು ವ್ಯಂಗ್ಯವಾಡಿದ್ದಾರೆ.

    ಲೋಕಸಭಾ ಚುನಾವಣೆಗೂ ಮುನ್ನಾ ಸುಮಲತಾ ವಿರುದ್ಧ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರು ಲಘು ಟೀಕೆ ಮಾಡಿದ್ದರು. ಇದರಿಂದ ಈ ಮೂವರು ಜೆಡಿಎಸ್ ನಾಯಕರು ಸುಮಲತಾ ಗೆಲುವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಬೆಂಬಲಿಗರು ಈ ರೀತಿ ಮಾಡಿದ್ದಾರೆ.

    ಸುಮಲತಾ ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡುತ್ತಿರಲಿಲ್ಲ ಎಂದು ತಮ್ಮಣ್ಣ ಟೀಕೆ ಮಾಡಿದ್ದರು. ಇನ್ನೂ ಶ್ರೀಕಂಠೇಗೌಡ, ಸುಮಲತಾ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಸುಮಲತಾ ಆಂಧ್ರ ನಾಯ್ಡು, ಸಿನಿಮಾದವರನ್ನು ನಂಬಬೇಡಿ ಎಂದು ಶಿವರಾಮೇಗೌಡ ವ್ಯಂಗ್ಯ ಮಾಡಿದ್ದಾರೆ. ಈ ಮೂವರ ಹೇಳಿಕೆಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಅವಹೇಳನಕಾರಿ ಹೇಳಿಕೆಗಳಿಂದ ಸುಮಲತಾ ಗೆಲುವಿಗೆ ಸಹಕಾರ ಆಯ್ತು ಎಂದು ಅಭಿನಂದನಾ ಬ್ಯಾನರ್ ಹಾಕುವ ಮೂಲಕ ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.