Tag: Sri Shivakumar Swamiji

  • ದೇವರಿದ್ದಾಗ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ: ನಟ ಉಪೇಂದ್ರ

    ದೇವರಿದ್ದಾಗ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ: ನಟ ಉಪೇಂದ್ರ

    ತುಮಕೂರು: ನಟ ಉಪೇಂದ್ರ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದು, ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಹೋಗಿ ದರ್ಶನ ಪಡೆದಿದ್ದಾರೆ.

    ನಟ ಉಪೇಂದ್ರ ಅವರು ಮೊದಲಿಗೆ ಗದ್ದುಗೆಗೆ ಹೋಗಿ ಅಲ್ಲಿ ಶ್ರೀಗಳಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ. ಬಳಿಕ ಕೆಲ ಕಾಲ ಸಿದ್ದಲಿಂಗಸ್ವಾಮಿಗಳ ಜೊತೆ ಕುಳಿತು ಉಭಯಕುಶಲೋಪರಿ ನಡೆಸಿದ್ದಾರೆ. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ಅವರು, ಇಂದು ಹುಬ್ಬಳ್ಳಿಯಲ್ಲಿ ಒಂದು ಪ್ರೆಸ್ ಮೀಟ್ ಇದೆ, ಅದಕ್ಕೆ ಹೊರಟ್ಟಿದ್ದೆ. ಈ ಕಡೆಯಿಂದ ಹೋಗಬೇಕಾದರೆ ಇಲ್ಲಿಗೆ ಬಂದು ಭೇಟಿ ಕೊಟ್ಟು ಹೋಗುವುದು ಒಂದು ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ.

    ಈ ಹಿಂದೆ ದೇವರಿದ್ದಾಗ ಮಠಕ್ಕೆ ಬಂದಿದ್ದೆ, ಈಗ ಅವರ ಆತ್ಮವಿದ್ದಾಗ ಬಂದಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಸಂತೋಷವಾಗುತ್ತದೆ. ಯಾಕೆಂದರೆ ಆನಂದ, ಅನುಭೂತಿ ದೊರೆಯುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

    ಪ್ರಜಾಕೀಯದ ಕಾನ್ಫರೆನ್ಸ್ ಗಾಗಿ ಹೋಗುತ್ತಿದ್ದೇನೆ. ಎಂಪಿ ಚುನಾವಣೆಗೆ 28 ಕ್ಷೇತ್ರದಿಂದ ನಿಲ್ಲಿಸಬೇಕು ಅಂದುಕೊಂಡಿದ್ದೇನೆ. ಹಾಗಾಗಿ ಹುಬ್ಬಳ್ಳಿ, ದಾವಣಗೆರೆಯಲ್ಲಿ ಪ್ರೆಸ್ ಮೀಟ್ ಇದೆ ಹೋಗುತ್ತಿದ್ದೇನೆ. ನಿಮಗೆ ಸರಿ ಅನ್ನಿಸಿದರೆ ಬೆಂಬಲ ಕೊಡಿ. ಸ್ವಾಮೀಜಿ ಬಳಿ ಕೂಡ ಮಾತನಾಡಿದೆ, ಅವರು ಇಂದು ತುಂಬಾ ಜನರಿದ್ದಾರೆ ಇನ್ನೊಂದು ದಿನ ಬನ್ನಿ ಮಾತನಾಡೋಣ ಅಂತ ಹೇಳಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಅಭಿಮಾನಿಗಳು ನಟ ಉಪೇಂದ್ರ ಅವರ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ- ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

    ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ- ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

    -ಫಳ ಫಳ ಅಂತಿದೆ 300 ಕೆ.ಜಿ ತೂಕದ ಕಂಚಿನ ವಿಗ್ರಹ

    ತುಮಕೂರು: ನಡೆದಾಡುವ ದೇವರು, ಕೋಟಿ ಕೋಟಿ ಭಕ್ತರ ಪ್ರತ್ಯಕ್ಷ ದೇವರಾಗಿದ್ದ, ಲಕ್ಷ ಲಕ್ಷ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಇಂದಿಗೆ 11 ದಿನವಾಗಿದೆ. ಹೀಗಾಗಿ ಇಂದು ಶ್ರೀಗಳ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

    ತಳಿರು ತೋರಣ, ಬಣ್ಣ ಬಣ್ಣದ ಹೂಗಳಿಂದ ಪರಮಪೂಜ್ಯರ ಮಠ ಅಲಂಕೃತಗೊಂಡಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಬರೋಬ್ಬರಿ 5 ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ದೇಶದ ಮೂಲೆ ಮೂಲೆಗಳಿಂದ ಶ್ರೀಗಳ ಭಕ್ತರು ಶ್ರೀ ಮಠಕ್ಕೆ ಆಗಮಿಸ್ತಿದ್ದಾರೆ. ಕಳೆದ ರಾತ್ರಿಯೇ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ಕೆಲವರು ರಾತ್ರಿಯಿಡಿ ಭಜನೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಆವರಣದಲ್ಲೇ ನಿದ್ದೆಗೆ ಜಾರಿದ್ದರು.

    ಸ್ವಾಮೀಜಿಯವರ 11ನೇ ದಿನದ ವಿಧಿವಿಧಾನಗಳು ಗದ್ದುಗೆಯಲ್ಲಿ ಇಂದು ನಸುಕಿನ ಜಾವದಿಂದಲೇ ನೆರವೇರುತ್ತಿವೆ. ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರುತ್ತಿವೆ. ಶ್ರೀಗಳ ಕ್ರಿಯಾ ಸಮಾಧಿ ನಡೆದ ಗದ್ದುಗೆಯನ್ನು ಈಗಾಗಲೇ ಬಣ್ಣ-ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಭಕ್ತರು ನಿರಂತರವಾಗಿ ಆಗಮಿಸಿ, ಗದ್ದುಗೆಗೆ ಪೂಜೆ ಸಲ್ಲಿಸುತ್ತಾ ಇದ್ದಾರೆ. ಶ್ರೀಗಳ ಭಾವಚಿತ್ರವನ್ನು ಮಠದಲ್ಲಿ ಮೆರವಣಿಗೆ ಮಾಡಲಿದ್ದು, ಇದಕ್ಕಾಗಿ ಬೆಳ್ಳಿರಥವನ್ನು ಶುಚಿಗೊಳಿಸಲಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

    ಪುಣ್ಯಾರಾಧನೆಗೆ ಆಗಮಿಸುವ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಅವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇತಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ.

    ಕಾರ್ಯಕ್ರಮ:
    ತ್ರಿವಿಧ ದಾಸೋಹಿಯ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಬೆಳಗ್ಗೆ 10.30ಕ್ಕೆ ಚಾಲನೆ ಸಿಗಲಿದ್ದು, ಶ್ರೀಗಳ ಲಿಂಗ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಯೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಸುತ್ತೂರು ಶ್ರೀಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ವೇದಿಕೆ ಮುಂಭಾಗ ಸುಮಾರು 10 ಸಾವಿರ ಭಕ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ಭಾವಚಿತ್ರವಿರುವ ಟಿ ಶರ್ಟ್ ಹಾಗೂ ಪಂಚೆ ನೀಡಲಾಗಿದೆ.

    ಶ್ರೀಗಳ ಪ್ರತಿಮೆ:
    ಶ್ರೀಗಳ ಕಂಚಿಮೆ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಮೊನ್ನೆಯವರೆಗೂ ಗೊಂದಲ ಇತ್ತು. ಆದರೆ ಬುಧವಾರ ಎಲ್ಲಾ ಗೊಂದಲ ಪರಿಹಾರವಾಗಿದೆ. ಶ್ರೀ ಮಠದ ಪಾರ್ಕ್ ನಲ್ಲಿ ಆಳೇತ್ತರದಲ್ಲಿ ಶ್ರೀಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿರ್ಧಾರ ಮಾಡಲಾಗಿದೆ. 10 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಬರೋಬ್ಬರಿ 300 ಕೆಜಿ ತೂಕದ, 5.6 ಅಡಿ ಎತ್ತರ ಶ್ರೀಗಳ ಕಂಚಿನ ಪ್ರತಿಮೆಯನ್ನು ಇದೀಗ ಗೋಸಲ ಸಿದ್ದೇಶ್ವರ ವೇದಿಕೆಗೆ ತಂದು ಇರಿಸಲಾಗಿದ್ದು, ಪುಣ್ಯಾರಾಧನೆ ವೇಳೆ ಇಂದು ಲೋಕಾರ್ಪಣೆಗೊಳ್ಳಲಿದೆ. ಪಾರ್ಕ್ ನ ಮಂಟಪದಲ್ಲಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದ ಹಾಗೇ, ಇದನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಈ ಕಂಚಿನ ಪ್ರತಿಮೆಯನ್ನು 10 ವರ್ಷಗಳ ಹಿಂದೆಯೇ ರೆಡಿ ಮಾಡಿಸಿದ್ದರು. ಆದರೆ ಪ್ರತಿಮೆ ಸ್ಥಾಪಿಸಲು ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದ ಕಾರಣದಿಂದ ಅದನ್ನು ಎಸ್‍ಐಟಿ ಕಾಲೇಜಿನ ಗೋಡಾನ್‍ನಲ್ಲಿ ಇರಿಸಲಾಗಿತ್ತು. ಇದೀಗ ಅದನ್ನು ಮಠಕ್ಕೆ ತರಲಾಗಿದೆ.

    ಭದ್ರತೆ:
    ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬುಧವಾರವೇ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ. ಎನ್‍ಹೆಚ್ 4ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ.

    ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಕ್ಕಳಿಗೆ ನೀಡಿದ ಊಟ, ವಿದ್ಯೆಯಲ್ಲಿ ಶ್ರೀಗಳು ಇದ್ದಾರೆ: ಶಿವಣ್ಣ

    ಮಕ್ಕಳಿಗೆ ನೀಡಿದ ಊಟ, ವಿದ್ಯೆಯಲ್ಲಿ ಶ್ರೀಗಳು ಇದ್ದಾರೆ: ಶಿವಣ್ಣ

    ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಕ್ಕಳಿಗೆ ಕೊಟ್ಟಿರುವ ವಿದ್ಯೆ ಮತ್ತು ಊಟದಲ್ಲಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಶ್ರೀಗಳ ಅಗಲಿಕೆಯ ಸುದ್ದಿ ತಿಳಿದು ಬೇಸರ ವ್ಯಕ್ತಪಡಿಸಿದ ನಟ ಶಿವಣ್ಣ, ಕಾರಣಾಂತರದಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಶ್ರೀಗಳ ಅಗಲಿಕೆ ಸಂತಾಪ ಸೂಚಿಸಿದ್ದಾರೆ.

    “ಶ್ರೀಗಳು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳುವುದಕ್ಕೆ ನಾನು ಇಷ್ಟ ಪಡುವುದಿಲ್ಲ. ಅವರ ನೆನಪು ನಮ್ಮಲ್ಲಿದೆ. ಅವರು ಇಲ್ಲ ಎಂದು ಊಹಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಇವತ್ತು ನಮ್ಮನ್ನು ಬಿಟ್ಟು ಶ್ರೀಗಳು ಶಿವನ ಪಾದ ಸೇರಿದ್ದಾರೆ. ಇದರಿಂದ ಎಲ್ಲರಿಗೂ ನೋವಾಗಿದೆ. ಆದರೆ ಶ್ರೀಗಳು ಅಲ್ಲಿಂದ ನಮಗೆ ಆಶೀರ್ವಾದ ಮಾಡುತ್ತಿರುತ್ತಾರೆ. ಜೊತೆಗೆ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.

    ತುಮಕೂರಿನಲ್ಲಿ ಮಠ ನಿರ್ಮಾಣ ಮಾಡಿ ಅಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯ ಕೊಟ್ಟಿದ್ದಾರೆ. ಆಶ್ರಯದ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯೆ, ಊಟ ಕೊಟ್ಟಿದ್ದಾರೆ. ಆ ವಿದ್ಯೆ ಮತ್ತು ಊಟದಲ್ಲಿ ಶ್ರೀಗಳು ಇದ್ದಾರೆ. ಅಷ್ಟೇ ಅಲ್ಲದೇ ಇಡೀ ಕರ್ನಾಟಕದ ಜನತೆಯ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

    ಶ್ರೀಗಳ  ಸಾವಿನಿಂದ ನನಗೆ ತುಂಬಾ ನೋವಾಗಿದೆ. ಆದರೆ ಅಮೆರಿಕದ ಕಾರ್ಯಕ್ರಮವೊಂದರಲ್ಲಿ ಇದ್ದೇನೆ. ಆದ್ದರಿಂದ ನಾನು ಬರುವುದಕ್ಕೆ ಆಗುತ್ತಿಲ್ಲ. ಶ್ರೀಗಳ ಸಾವಿನ ಸುದ್ದಿ ಕೇಳಿದ ತಕ್ಷಣ ಬೇಸರವಾಯಿತು. ಅವರು ಮಾತನಾಡುವ ರೀತಿ ತುಂಬಾ ಇಷ್ಟವಾಗಿತ್ತು. ಇಂದಿಗೂ ಅವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಶ್ರೀಗಳು ನಮ್ಮನ್ನು ಬಿಟ್ಟು ಹೋಗಿಲ್ಲ, ಸದಾ ನಮ್ಮ ಮನದಲ್ಲಿ ಇರುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.

    https://www.youtube.com/watch?v=zUXukC5M7Fc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯಗೊಂಡ ಹಿನ್ನೆಲೆಯಲ್ಲಿ ಕ್ಯಾತಸಂದ್ರ ರೈಲ್ವೆ ನಿಲ್ದಾಣದ ಬಳಿ ಪ್ರತಿಯೊಂದು ರೈಲುಗಳು ಸ್ಟಾಪ್ ನೀಡುತ್ತಿವೆ.

    ಮಠದ ಸಮೀಪವೇ ಕ್ಯಾತಸಂದ್ರ ರೈಲ್ವೆ ನಿಲ್ದಾಣ ಇದೆ. ಈ ಹಿಂದೆ ಪ್ಯಾಸೆಂಜರ್ ರೈಲು ಮಾತ್ರ ಕ್ಯಾತಸಂದ್ರ ರೈಲು ನಿಲ್ದಾಣದಲ್ಲಿ ನಿಂತು ಮುಂದೆ ಸಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಭಕ್ತರು ರೈಲಿನಲ್ಲಿ ಶ್ರೀಗಳ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕೆ ಕ್ಯಾತಸಂದ್ರದ ಬಳಿ ಸ್ಟಾಪ್ ನೀಡಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ.

    ಅಷ್ಟೇ ಅಲ್ಲದೇ ಮಠದ ಬಳಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಮಾತ್ರ ರೈಲು ಸಂಚಾರ ಮಾಡುತ್ತಿದೆ. ಲಕ್ಷಾಂತರ ಭಕ್ತರು ರೈಲ್ವೆ ಹಳಿ ಕ್ರಾಸ್ ಮಾಡುತ್ತಿರುವ ಕಾರಣ ಮಠದ ಬಳಿ ರೈಲು ನಿಧಾನವಾಗಿ ಚಲಿಸುತ್ತಿದೆ. ಭಕ್ತರು ರೈಲ್ವೆ ಹಳಿ ದಾಟುವ ಜಾಗದಲ್ಲೂ ರೈಲ್ವೆ ಪೊಲೀಸರು ಭದ್ರತೆ ನಿಯೋಜನೆ ಮಾಡಿದ್ದಾರೆ.

    ಸುಮಾರು 60 ಜನ ರೈಲ್ವೆ ರಕ್ಷಣಾ ಸಿಬ್ಬಂದಿಯಿಂದ ಮಠದ ಬಳಿಯಿರುವ ರೈಲ್ವೆ ಹಳಿ ಬಳಿ ಭದ್ರತೆ ನೀಡುತ್ತಿದ್ದು, ರೈಲು ಬರುವಾಗ ಯಾರಾದರೂ ಹಳಿ ದಾಟುವಾಗ ಅವಸರ ಮಾಡಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹಳಿ ಪಕ್ಕದಲ್ಲೇ ರೈಲ್ವೆ ಪೊಲೀಸರು ರಕ್ಷಣೆಗೆ ನಿಂತಿದ್ದಾರೆ.

    https://www.youtube.com/watch?v=N87G5rvOTYs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ತುಮಕೂರು: ಸಿದ್ದಗಂಗಾ ಶ್ರೀಗಳು ವಿಮಾನ ಪ್ರಯಾಣಕ್ಕೆ ಒಲ್ಲೆ ಎಂದು ಹೇಳುತ್ತಿದ್ದರು. ಹೀಗಾಗಿ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯೂ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ.

    ಶ್ರೀಗಳು ಸನ್ಯಾಸ ದೀಕ್ಷೆ ಪಡೆದು ಸುಮಾರು 89 ವರ್ಷಗಳ ಕಾಲ ಕಳೆದಿದ್ದಾರೆ. ಶ್ರೀಗಳು ಎಷ್ಟು ಸರಳವಾಗಿದ್ದರು ಎಂದರೆ ತಮಗೆ ಗ್ರಾಮೀಣ ಜನರ ಒಡನಾಟವೇ ಸಾಕೆಂದು ಮಠ, ಹಳ್ಳಿ ಕಡೆ ಹೆಚ್ಚಾಗಿ ಪ್ರಯಾಣಿಸುತ್ತಿದ್ದರು. ವಿದೇಶದಲ್ಲಿದ್ದ ಭಕ್ತರು ಎಷ್ಟೇ ಕರೆದರೂ ಶ್ರೀಗಳು ವಿಮಾನ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದರು.

    ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ನಗರಗಳಿಗೆ ಹೋಗಿದ್ದಾರೆ. ಆದರೆ ವಿದೇಶ ಪ್ರಯಾಣ ಎಂದೂ ಮಾಡಲಿಲ್ಲ. ಅವರು 20ನೇ ಶತಮಾನದ ಆರಂಭದಲ್ಲಿ ಎತ್ತಿನಗಾಡಿ, ಕುದುರೆದಾರೋಟು, ರೈಲಿನಲಷ್ಟೇ ಪ್ರಯಾಣಿಸುತ್ತಿದ್ದರು. 70ರ ದಶಕದ ನಂತರ ಶ್ರೀಗಳು ಕಾರು, ವಿಮಾನ, ಹೆಲಿಕಾಪ್ಟರ್ ನನ್ನು ಹತ್ತಿದ್ದರು.

    ಐದು ಬಾರಿ ಮಾತ್ರ ವಿಮಾನ ಪ್ರಯಾಣ!
    ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಕೇವಲ ಐದಾರು ಬಾರಿ ಮಾತ್ರ ವಾಯು ಮಾರ್ಗದಲ್ಲಿ ಸಂಚರಿಸಿದ್ದರು. ಒಮ್ಮೆ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರು. ಬಳಿಕ ದಾವಣಗೆರೆಗೆ ಹೋಗಿದ್ದರು. ನವದೆಹಲಿಯ ಸುತ್ತೂರು ಮಠದ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನದಲ್ಲಿ ಹೋಗಿದ್ದರು. ಕೊನೆಯದಾಗಿ ಶ್ರೀಗಳು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ನಲ್ಲಿ ಚೆನ್ನೈಗೆ ಹೋಗಿ ಬಂದಿದ್ದರು. ಇದು ಬಿಟ್ಟು ಬೇರೆ ಎಲ್ಲೂ ಶ್ರೀಗಳು ವಿಮಾನ ಪ್ರಯಾಣ ಮಾಡಲಿಲ್ಲ.

    ದೂರದ ಬೀದರ್ ಗೆ ಹೋಗಬೇಕಾದರೂ ಅವರು ಕಾರಿನಲ್ಲಿ ಹೋಗುತ್ತಿದ್ದರು. ಅಷ್ಟು ಸರಳ ಜೀವನವನ್ನು ಶ್ರೀಗಳು ನಡೆಸುತ್ತಿದ್ದರು. ಶ್ರೀಗಳು ಕಾರಿನಲ್ಲೂ ಯಾವುದೇ ಬೆಂಗಾವಲು ಪಡೆಯಿಲ್ಲದೆ, ಕಾರಿಗೆ ನಾಮಫಲಕವನ್ನು ಹಾಕಿಕೊಳ್ಳದೇ ಸಂಚರಿಸುತ್ತಿದ್ದರು. ಶ್ರೀಗಳು ಮಠ ತೊರೆದು ಬೇರೆ ಕಡೆಗೆ ತೆರಳಿದರೂ ನಿತ್ಯದ ಇಷ್ಟಲಿಂಗ ಪೂಜೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು.

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಶ್ರೀಗಳು ಕಾಯಕ ಯೋಗಿ. ಪೂಜ್ಯ ಶ್ರೀಗಳ ಮಠದಲ್ಲಿ ಕಲಿಯುವ ಅಷ್ಟು ವಿದ್ಯಾರ್ಥಿಗಳಿಗೆ ಮಣ್ಣಿನೊಂದಿಗೆ ಬೆರೆತು ಕೆಲಸ ಮಾಡುವುದು ಗೊತ್ತಿದೆ. ಗದ್ದೆಯ ಕೆಲಸವೂ ಗೊತ್ತಿದೆ.

    ಇಲ್ಲಿನ ಶಿಕ್ಷಣ ಕ್ಷೇತ್ರ ಕೇವಲ ಪಠ್ಯವಿಷಯಗಳಿಗಷ್ಟೇ ಸೀಮಿತವಾಗಿಲ್ಲ. ಸಮರ್ಥ ವ್ಯಕ್ತಿನಿರ್ಮಾಣದ ಕೆಲ್ಸವಾಗತ್ತದೆ. ಪ್ರತಿನಿತ್ಯವೂ ಮಠದ ಆವರಣದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಮಾಡುವ ಆ ಒಂದು ದೃಶ್ಯ. ಇದೆಯಲ್ಲ ಅದು ಶ್ರೀಗಳ ಧೀ ಶಕ್ತಿಗೆ ಸಾಕ್ಷಿ.

    ಮುಂಜಾನೆಯ ಬೆಳಕಲ್ಲಿ, ಸಂಜೆಯ ಹೊಂಬೆಳಕಲ್ಲಿ ಪ್ರಶಾಂತ ಬಯಲು ಪ್ರಾರ್ಥನೆಯ ಆಲಯವಾಗಿ ಬಿಡುತ್ತದೆ. ಇಲ್ಲಿಯ ಮಕ್ಕಳು ಗದ್ದೆ ಕೆಲ್ಸಕ್ಕೆ ಸೈ. ಮಠದಲ್ಲಿ ನಡೆಯುವ ಶ್ರಮದಾನದ ಕೆಲ್ಸದಲ್ಲಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುತ್ತಾರೆ.

    ಅಂಧರಿಗೂ ಇಲ್ಲಿದೆ ಶಾಲೆ:
    ಸಿದ್ದಗಂಗಾ ಮಠ ತಮ್ಮ ಪಾಲಿಗೆ ಲೋಕವೇ ಕತ್ತಲೆಯೆನಿಸಿದ ನೂರಾರು ಅಂಧಮಕ್ಕಳ ಪಾಲಿಗೆ ಬೆಳಕಿನ ಸೆಲೆಯಾಗಿದೆ. ಮಠದ ಮಾನವೀಯ ಸೇವೆಗೆ ಸಾಕ್ಷಿಯಾಗಿ ಅಂಧರ ಶಾಲೆಯೂ ಇದೆ. ಅಂಧಮಕ್ಕಳಿಗೆ ಉಚಿತ ಊಟ ವಸತಿ ಪಾಠ ಪ್ರವಚನಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಷ್ಟೆ ಅಲ್ಲ ಪೂಜ್ಯರಿಗೆ ಈ ಅಂಧ ಮಕ್ಕಳ ಮೇಲೆ ವಿಶೇಷ ಪ್ರೀತಿ ಗುರುಗಳು ಹೆಸರಿಡಿದು ಮಕ್ಕಳನ್ನು ಕರೆಯುತ್ತಿದ್ರೆ ಕತ್ತಲೆಯ ಲೋಕದ ಈ ಕಂದಮ್ಮಗಳಿಗೆ ಬೆಳಕೊಂದು ಮೂಡಿ ಬಂದ ಅನುಭವವಾಗುತಿತ್ತು.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ತುಮಕೂರು: ಕೋಟಿ ಕೋಟಿ ಭಕ್ತರನ್ನು ಹೊಂದಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಇಂದು ಶಿವೈಕ್ಯರಾಗಿದ್ದಾರೆ. ಇದೀಗ ನಡೆದಾಡುವ ದೇವರ ಅಗಲಿಕೆಯನ್ನು ಸಹಿಸಿಕೊಳ್ಳಲಾಗದೇ ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದಾರೆ.

    ಇಂದು ಬೆಳಗ್ಗೆ 11.44ರ ಸುಮಾರಿಗೆ ಶ್ರೀಗಳು ಶಿವೈಕ್ಯವಾಗಿದ್ದರು. ಆದರೆ ಅವರು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು.

    ಹೀಗಾಗಿ ಇಂದು ಶ್ರೀಗಳು ಬೆಳಗ್ಗೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದಾರೆ. ಆದರೆ ಇಷ್ಟು ದಿನ ತಂದೆ, ತಾಯಿ, ಗುರು ಮತ್ತು ದೇವರಾಗಿದ್ದ ಶ್ರೀಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

    ಇತ್ತ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದು, ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡು ಕಣ್ಣೀರಿಡುತ್ತಿದ್ದಾರೆ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಬೆಂಗಳೂರು: ತುಮಕೂರಿನ ಸಿದ್ದಗಂಗಾ ಕ್ಷೇತ್ರ ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಅನೇಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಆಯ್ದ ಗಣ್ಯರ ಅನಿಸಿಕೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

    ಎಸ್ ನಿಜಲಿಂಗಪ್ಪ: ನಿಷ್ಠೆ, ಸೇವಾಕಾಂಕ್ಷೆ, ದೃಢ ನಿಶ್ಚಯ, ಅಡಚಣೆಗಳನ್ನು ಎದುರಿಸುವ ಧೈರ್ಯ, ಪವಿತ್ರತೆ, ವಿಶಾಲ ದೃಷ್ಟಿ, ಸತ್ಯ ಪ್ರೇಮ, ಮೇಲ್ಮಟ್ಟದ ಧ್ಯೇಯ ಇವೆಲ್ಲ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮಿಗಳಲ್ಲಿ ಕೇಂದ್ರೀಕೃತವಾಗಿವೆ. ಇದು ಸಮಾಜದ ರಾಷ್ಟ್ರದ ಸುದೈವ ಎಂದು ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು 1966ರ ಫೆಬ್ರವರಿ 27ರಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

    ಡಿ. ದೇವರಾಜ ಅರಸು: ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದೀನದಲಿತರ ಉದ್ಧಾರಕ್ಕಾಗಿ ನಾಡಿನ ಬಡತನ ನಿವಾರಣೆಗಾಗಿ ಲಕ್ಷಾಂತರ ಬಡ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಮಾಶಾಲಿಗಳು ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಬಣ್ಣಿಸಿದ್ದರು.

    ಡಾ.ಕೆ.ಶಿವರಾಮ ಕಾರಂತ: ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನವನ್ನೂ ದಾನ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರ ಇಹದ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲದೇ ಅವರ ‘ಪರ’ವನ್ನು ಸಹ ಈ ತಾಯಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮ ಭೂಮಿ ಇದಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಶಿವರಾಮ ಕಾರಂತರು ಬಣ್ಣಿಸಿದ್ದರು.

    ಜೆ.ಎಚ್ ಪಟೇಲ್: ಅನ್ನದಾನ ವಿದ್ಯಾದಾನಗಳನ್ನು ಮಠ ಮಾನ್ಯಗಳು ನಿರತಂತರವಾಗಿ ನಡೆಸಿಕೊಂಡು ಬಂದಿರುವುದರಿಂದಲೇ ಸಮಾಜವಿನ್ನೂ ಅಧೋಗತಿಯತ್ತ ತಲುಪಿಲ್ಲ. ಇದಕ್ಕೆ ಉದಾಹರಣೆ ಶ್ರೀ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾಮಾಜಿಕ ಸೇವೆಗೆ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡಿರುವ ಮಹಾ ದಾಸೋಹಿಗಳು. ಇಂತಹ ಕಾಯಕ ಯೋಗಿಗಳೂ ನಮ್ಮ ಕಣ್ಣ ಮುಂದೆ ಇರುವುದರಿಂದಲೇ ಸಮಾಜದಲ್ಲಿ ಮೌಲ್ಯಗಳು ಇನ್ನೂ ಜೀವಂತವಾಗಿಯೇ ಉಳಿದುಕೊಂಡಿವೆ. ಇದನ್ನು ಸರ್ವರೂ ಸ್ವಾಗತಿಸಿ ಬೆಂಬಲಿಸಿದಾಗ ಮಾತ್ರ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ 1997ರ ಮೇ ತಿಂಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ವೀರೇಂದ್ರ ಹೆಗ್ಗಡೆ: ಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಅಪರೂಪದ, ತ್ಯಾಗದ ಪ್ರತೀಕವಾದ ಒಂದು ಶಕ್ತಿಯಾಗಿದ್ದಾರೆ. ನಮ್ಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮ ಸಮಾಜಕ್ಕೆ ಆದರ್ಶವಾಗಿದ್ದಾರೆ. ಏಕೆಂದರೆ ಅವರು ತಮ್ಮ ದೇಹವನ್ನು ಶ್ರೀಗಂಧದ ಹಾಗೆ ಸವೆಸುತ್ತಾ ಬಂದಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅನಿಸಿಕೆ ವ್ಯಕ್ತಪಡಿಸಿದ್ದರು.

    ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಶ್ರೀ ಶಿವಕುಮಾರ ಸ್ವಾಮಿಗಳು ಉನ್ನತ ತರದ ಸನ್ಯಾಸಿಗಳು. ತಮ್ಮ ಸೇವೆಯಿಂದ ಇವರು ಸನ್ಯಾಸಿಗಳ ಸಮುದಾಯಕ್ಕೆ ಒಂದು ಆದರ್ಶವಾಗಿದ್ದಾರೆ. ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಕವಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಭಿಪ್ರಾಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv