Tag: sri rama

  • ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

    ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

    ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ.

    ನೀವು ಭಾರತದ ಯಾವುದೇ ಮೂಲೆಗೆ ಹೋದರೂ ರಾಮ ಎನ್ನುವ ಹೆಸರನ್ನು ಕೇಳಬಹುದು. ಯಾಕೆಂದರೆ ಆ ಹೆಸಡರಿನ ದೇವನಿಗೆ ಅಷ್ಟೊಂದು ಮಹತ್ವವಿದೆ ಮತ್ತು ಭಕ್ತರಿದ್ದಾರೆ. ಭಗವಾನ್ ರಾಮನು ವಿಷ್ಣುವಿನ 7ನೇ ಅವತಾರ ಎಂಬುದು ಪುರಾಣಗಳ ಉಲ್ಲೇಖ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಂದ ಪೂಜಿಸಲ್ಪಡುವ ದೇವ. ರಾಮನು ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿವಂತ ರಾಕ್ಷಸನಾದ ರಾವಣನನ್ನು ಸೋಲಿಸಿದನು ಮತ್ತು ಅವನ ದುಷ್ಟತನದಿಂದ ನಮ್ಮನ್ನು ರಕ್ಷಿಸಿದನು. ಆದ್ದರಿಂದಲೇ ರಾಮನು ಭಾರತದ ದಿವ್ಯ ಭೂಮಿಯ ಪ್ರತಿಯೊಬ್ಬರ ಹೃದಯದಲ್ಲೂ, ಪ್ರತಿಯೊಂದು ಮೂಲೆಯಲ್ಲೂ ನೆಲೆಸಿದ್ದಾನೆ. ಆದ್ದರಿಂದಲೇ ಭಾರತದ ಪ್ರತಿಯೊಂದು ಸ್ಥಳದಲ್ಲೂ ಒಂದಿಲ್ಲೊಂದು ರೂಪದಲ್ಲಿ ಶ್ರೀರಾಮನ ದೇವಾಲಯಗಳನ್ನು ಕಾಣುತ್ತೇವೆ. ಆಧ್ಯಾತ್ಮಿಕ ಅನುಭವ ಪಡೆಯಲು ಭಯಸುವವರು ಶ್ರೀರಾಮನವಮಿಯಂದು ರಾಮನ ದೇವಾಲಯಗಳಿಗೆ ಭೇಟಿ ನೀಡಿ ಸಂತೃಪ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಶ್ರೀರಾಮನ ಭಜನೆ, ಭಕ್ತಿ ಗೀತೆಗಳನ್ನು ಹಾಡಿ ತಮ್ಮ ಭಕ್ತಿಯನ್ನ ಸೂಚಿಸುತ್ತಾರೆ. ಹಾಗಾದ್ರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಆಧ್ಯಾತ್ಮಿಕ ಶಕ್ತಿಗೆ ಹೆಸರು ವಾಸಿಯಾಗಿರುವ ದೇವಾಲಯಗಳ ಬಗ್ಗೆ ತಿಳಿಯೋಣ..

    ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ
    ಅಯೋಧ್ಯೆಯಲ್ಲಿರುವ ರಾಮಮಂದಿರವು ಯಾವಾಗಲೂ ಹಿಂದೂಗಳಿಗೆ ಅತ್ಯಂತ ಶ್ರೇಷ್ಠವಾದ ಸ್ಥಳವಾಗಿದೆ. ಏಕೆಂದರೆ ಇದು ರಾಮನ ಜನ್ಮಸ್ಥಳವಾದ ʻರಾಮ ಜನ್ಮ ಭೂಮಿ’ ಎಂದು ಹೇಳಲಾಗುತ್ತದೆ. ಫೈಜಾಬಾದ್ ಜಿಲ್ಲೆಯ ಸರಯು ನದಿಯ ದಡದಲ್ಲಿರುವ ಈ ರಾಮಮಂದಿರವು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಆದರ್ಶ ರಾಜ ಶ್ರೀರಾಮ ಜನಿಸಿದ ಸ್ಥಳವನ್ನು ನೋಡಲು ಈ ದೈವಿಕ ಭೂಮಿಗೆ ಬರುತ್ತಾರೆ. ಅದರಲ್ಲೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಇಲ್ಲಿಗೆ ಭೇಟಿ ನೀಡುವ ಶ್ರೀರಾಮಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

    ​ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ​

    ​ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ​
    ತ್ರಿಪ್ರಯಾರ್ ಶ್ರೀರಾಮ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಈ ರಾಮ ಮಂದಿರವು ಇಲ್ಲಿ ಸ್ಥಾಪಿಸಲಾದ ವಿಗ್ರಹದ ಹಿಂದೆ ಬಹಳ ಆಕರ್ಷಕವಾದ ಕಥೆಯನ್ನು ಹೊಂದಿದೆ. ತ್ರಿಪ್ರಯಾರ್‌ನಲ್ಲಿ ಇರಿಸಲಾಗಿರುವ ವಿಗ್ರಹವನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಶ್ರೀಕೃಷ್ಣನು ಪೂಜಿಸಲು ಬಳಸುತ್ತಿದ್ದನೆಂದು ನಂಬಲಾಗಿದೆ. ಈ ವಿಗ್ರಹವು ಒಮ್ಮೆ ಸಮುದ್ರದ ಪಾಲಾಗಿತ್ತು. ಆದರೆ, ಕೇರಳದ ಮೀನುಗಾಗರರಿಗೆ ಸಿಕ್ಕಿ ಮತ್ತೆ ಇದನ್ನು ಮರು ಸ್ಥಾಪನೆ ಮಾಡಲಾಗಿದೆ. ಈ ಆಕರ್ಷಕವಾದ ದೇವಾಲಯದಲ್ಲಿ ನೀವು ಆಸಕ್ತಿದಾಯಕ ಶಿಲ್ಪಗಳು ಮತ್ತು ಮರದ ಕೆತ್ತನೆಗಳನ್ನು ಕಾಣಬಹುದು, ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಪ್ರಯಾರ್‌ಗೆ ಭೇಟಿ ನೀಡುವುದರಿಂದ ನಿಮ್ಮ ಸುತ್ತಮುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವ ನಂಬಿಕೆ ಈಗಲೂ ಜನರಿಗೆ ಇದೆ.

    ನಾಸಿಕ್‌ನ ​ಕಲಾರಾಮ ಮಂದಿರ

    ನಾಸಿಕ್‌ನ ​ಕಲಾರಾಮ ಮಂದಿರ
    ನಾಸಿಕ್‌ನ ಕಲಾರಾಮ ಮಂದಿರವು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತದ ಒಂದು ಅದ್ಭುತವಾದ ರಾಮಮಂದಿರವಾಗಿದೆ. ಕಲಾರಾಮ ಎಂದರೆ ‘ಕಪ್ಪು ರಾಮ’ ಎಂದರ್ಥ ಮತ್ತು ರಾಮನ 2 ಅಡಿ ಎತ್ತರದ ಕಪ್ಪು ಪ್ರತಿಮೆಯಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಸೀತಾದೇವಿ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಾಗ, ಹತ್ತನೇ ವರ್ಷದ ನಂತರ, ಅವನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಂಚವಟಿಯಲ್ಲಿ ಗೋದಾವರಿ ನದಿಯ ಪಕ್ಕದಲ್ಲಿ ವಾಸಿಸಲು ಬಂದಿದ್ದನು ಎಂದು ನಂಬಲಾಗಿದೆ. ಒಮ್ಮೆ ಕನಸಿನಲ್ಲಿ ಸರ್ದಾರ್‌ ರಂಗರೂ ಓಧೇಕರ್‌ ಗೋದಾವರಿ ನದಿಯಲ್ಲಿ ಕಪ್ಪು ಕಲ್ಲಿನ ದೃಶ್ಯವನ್ನು ನೋಡುತ್ತಾರೆ. ಮರುದಿನ ನದಿಯಿಂದ ಆ ಕಪ್ಪು ಕಲ್ಲನ್ನು ತೆಗೆದು ಕಲಾರಾಮ ರಾಮ ಮಂದಿರಲ್ಲಿ ನಿರ್ಮಿಸಿದರು.

    ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ

    ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
    ಸೀತಾ ರಾಮಚಂದ್ರಸ್ವಾಮಿ ದೇವಾಲಯವು ಭಾರತದ ಅತ್ಯಂತ ಪ್ರಸಿದ್ಧವಾದ ರಾಮಮಂದಿರಗಳಲ್ಲಿ ಒಂದಾಗಿದೆ. ಲಂಕೆಯಿಂದ ಸೀತೆಯನ್ನು ಮರಳಿ ಕರೆತರಲು ರಾಮನು ಗೋದಾವರಿ ನದಿಯನ್ನು ದಾಟಿದ ಮಹತ್ವಪೂರ್ಣ ಇತಿಹಾಸವನ್ನು ಹೊಂದಿದೆ. ದೇವಾಲಯದ ಒಳಗೆ ಪ್ರತಿಷ್ಠಾಪಿಸಲಾದ ವಿಗ್ರಹವು ತ್ರಿಭಂಗನ ಭಂಗಿಯಲ್ಲಿದೆ. ಭಗವಾನ್ ರಾಮನು ತನ್ನ ಕೈಯಲ್ಲಿ ಧನಸ್ಸು ಮತ್ತು ಬಾಣವನ್ನು ಹಿಡಿದಿದ್ದಾನೆ ಮತ್ತು ಸೀತಾ ದೇವಿಯು ಕೈಯಲ್ಲಿ ಕಮಲವನ್ನು ಹಿಡಿದು ಅವನ ಪಕ್ಕದಲ್ಲಿ ನಿಂತಿದ್ದಾಳೆ.

    ​ರಾಮರಾಜ ದೇವಾಲಯ, ಮಧ್ಯಪ್ರದೇಶ

    ​ರಾಮರಾಜ ದೇವಾಲಯ, ಮಧ್ಯಪ್ರದೇಶ
    ರಾಮರಾಜ ದೇವಾಲಯವು ಭಾರತದಲ್ಲಿ ರಾಮನನ್ನು ದೇವರಂತೆ ಅಲ್ಲ, ರಾಜನಾಗಿ ಪೂಜಿಸುವ ಏಕೈಕ ದೇವಾಲಯವಾಗಿದೆ. ಈ ರಾಮಮಂದಿರವನ್ನು ಭವ್ಯವಾದ ಕೋಟೆಯಾಗಿ ನಿರ್ಮಿಸಲಾಗಿದ್ದು, ಜೊತೆಗೆ ಪೊಲೀಸರು ದೇವಾಲಯದ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ರಾಜ ರಾಮನಿಗೆ ಆಯುಧ ನಮಸ್ಕಾರವನ್ನು ನೀಡಲಾಗುತ್ತದೆ. ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ.

    ಧರ್ಮಸ್ಥಳ ರಾಮ ಮಂದಿರ

    ಧರ್ಮಸ್ಥಳ ರಾಮ ಮಂದಿರ
    ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ಶ್ರೀಮಂತ ವಿನ್ಯಾಸ ಕಲಾತ್ಮಕ ಸೌಂದರ್ಯದಿಂದ ಸಮೃದ್ಧವಾಗಿರುವ ಈ ದೇವಾಲಯದಲ್ಲಿ ತಮಿಳುನಾಡಿನ ‘ವಾಸ್ತು’, ರಾಜಸ್ಥಾನದ ಶ್ರೀಮಂತ ಗ್ರಾನೈಟ್ ಕಲ್ಲುಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ರಾಜಸ್ಥಾನದ ಶಿಲ್ಪಿಗಳು ಕೆತ್ತಿದ ಸುಂದರ ವಿನ್ಯಾಸಗಳಿವೆ.

  • ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

    ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ!

    – 102 ಬಗೆಯ ವಿಶೇಷ ಆರತಿ, 1,08,000 ತುಳಸಿ ದಳ ರಸದಿಂದಲೂ ಅಭಿಷೇಕ

    ಮೈಸೂರು: ಶ್ರೀರಾಮನ ಮೂರ್ತಿಗೆ ಸಪ್ತ ನದಿಗಳ ನೀರಿನಿಂದ (River water) ಜಲಾಭೀಷೆಕ ನೇರವೇರಿಸಲು ಮೈಸೂರಿನಲ್ಲಿ (Mysuru) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಮೈಸೂರಿನ ವಾಸವಿ ಟ್ರಸ್ಟ್ ನವರು ಶ್ರೀರಾಮನ ಮೂರ್ತಿಯ ಅಭಿಷೇಕಕ್ಕೆ ಸಪ್ತ ನದಿಗಳ ನೀರನ್ನ ತರಿಸಿದ್ದಾರೆ. ಕಾವೇರಿ, ಕಪಿಲಾ, ನರ್ಮಾದಾ, ಸಿಂಧು, ಗಂಗಾ, ಸರಯೂ, ಯುಮುನಾ ನದಿ ನೀರನ್ನು ತಂದು ಜಲಾಭಿಷೇಕಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದೇ ಸಮಯಕ್ಕೆ ಮೈಸೂರಿನ ದೇವಾಲಯದಲ್ಲೂ ಪ್ರಭು ಶ್ರೀರಾಮನಿಗೆ ಜಲಾಭೀಷೇಕ ನೆರವೇರಿಸಲಾಗುತ್ತದೆ. ಜೊತೆಗೆ ಪಂಚಾಮೃತ ಅಭಿಷೇಕ, 1,08,000 ತುಳಸಿ ದಳದಿಂದ ತೆಗೆದಿರುವ ರಸದಿಂದ ವಿಶೇಷ ಅಭಿಷೇಕವನ್ನೂ ನೆರವೇರಿಸಲಾಗುತ್ತದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ

    ಮುಖ್ಯವಾಗಿ ಅಯೋಧ್ಯೆ (Ayodhya) ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನ ತರಿಸಲಾಗಿದೆ. ಈ ಆರತಿಯನ್ನ ದೇಶದಲ್ಲಿ ಎಲ್ಲಿಯೂ ಮಾಡುತ್ತಿಲ್ಲ. ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿವಿಧ ಬಗೆಯ ಪುಷ್ಪಗಳಿಂದ ರಾಮನ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುವಂತೆ ಇಲ್ಲಿಯೂ ನೆರವೇರಿಸಲಾಗುತ್ತದೆ ಎಂದು ವಾಸವಿ ಟ್ರಸ್ಟ್‌ ಸಿಬ್ಬಂದಿ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

  • ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ಈ ಸ್ಥಳದಲ್ಲಿದೆ ಶಬರಿ ಗುಹೆ, ರಾವಣನ ಸಂಹಾರಕ್ಕೆ ಸೈನ್ಯ ಸಜ್ಜಾಗಿದ್ದೂ ಇಲ್ಲಿಯೇ!

    ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ಈ ಸ್ಥಳದಲ್ಲಿದೆ ಶಬರಿ ಗುಹೆ, ರಾವಣನ ಸಂಹಾರಕ್ಕೆ ಸೈನ್ಯ ಸಜ್ಜಾಗಿದ್ದೂ ಇಲ್ಲಿಯೇ!

    ಕೊಪ್ಪಳ: ಕೋಟ್ಯಂತರ ರಾಮ ಭಕ್ತರ ಕನಸಿನ ಮಂದಿರ (Ram Mandir) ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲೂ ಸಾವಿರಾರು ಭಕ್ತರು ರಾಮನೂರಿಗೆ ತೆರಳಲು ಬರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮನ (Shri Rama) ನಂಟಿರುವ ಕರ್ನಾಟಕದ (Karnataka) ವಿವಿಧ ಸ್ಥಳಗಳ ಬಗ್ಗೆ ತಿಳಿಯುವುದೂ ಅಷ್ಟೇ ಅವಶ್ಯಕವಾಗಿದೆ.

    ಹೌದು. ಸೀತೆಯನ್ನ ಹುಡುಕುತ್ತಾ ಹೊರಟ ಶ್ರೀರಾಮನ ಹೆಜ್ಜೆ ಗುರುತುಗಳು ಕರುನಾಡಿನಲ್ಲೂ ಮೂಡಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಗೂ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ ಅನ್ನೋದಕ್ಕೆ ಅನೇಕ ನಿದರ್ಶನಗಳು ಇಲ್ಲಿವೆ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    ರಾವಣ ಸೀತೆಯನ್ನು ಅಪಹರಿಸಿದಾಗ ವನವಾಸದಲ್ಲಿದ್ದ ಶ್ರೀರಾಮ, ಸೀತೆಯನ್ನು ಹುಡುಕುತ್ತಾ ಹೊರಟಿದ್ದ. ಈ ವೇಳೆ ಶ್ರೀರಾಮನಿಗೆ ಶಕ್ತಿ ತುಂಬಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅದುವೆ ಕಿಷ್ಕಿಂದೆ ರಾಜ್ಯ. ವಾನರಸೇನೆ ಹಾಗೂ ಶ್ರೀರಾಮನ ಬಂಟ ಹನುಮ ಸಿಕ್ಕಿದ್ದು ಇದೇ ಕಿಷ್ಕಿಂದೆ ರಾಜ್ಯದಲ್ಲಿ ಅದು ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?

    ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಮೊದಲ ಬಾರಿಗೆ ಶ್ರೀರಾಮನನ್ನ ಆಂಜನೇಯ ಭೇಟಿಯಾಗುತ್ತಾನೆ. ಇದೇ ಸ್ಥಳದಲ್ಲಿ ವಾಲಿ ಸುಗ್ರೀವರ ಕಾಳಗ ಸಹ ನಡೆಯತ್ತೆ. ವಾಲಿ – ಸುಗ್ರೀವರ ಕಾಳಗದಲ್ಲಿ ಶ್ರೀರಾಮ ವಾಲಿವಧೆ ಮಾಡಿ ಸುಗ್ರೀವನಿಗೆ ಕಿಷ್ಕಿಂದೆಯ ಅಧಿಕಾರ ತಂದುಕೊಡುತ್ತಾನೆ. ಇದು ಒಂದು ಕಡೆಯಾದ್ರೆ, ಸೀತಾಮಾತೆಯನ್ನ ಹುಡುಕಿ ಹೊರಟ ಶ್ರೀ ರಾಮನಿಗೆ ಶಬರಿ ಕಾದು ಕುಳಿತಿದ್ದು ಕೂಡಾ ಇದೆ, ಪಂಪಾಸರೋವರದಲ್ಲಿ, ಈ ಪಂಪಾಸರೋವರದಲ್ಲಿ ಶಬರಿಯ ಗುಹೆ ಇಂದಿಗೂ ಇದೆ‌. ಈ ಗುಹೆಯಲ್ಲಿ ಪ್ರಭು ಶ್ರೀರಾಮನ ಪಾದುಕೆಗಳಿವೆ. ರಾಮ ಇಲ್ಲಿಂದ ತೆರಳಿದ ಬಳಿಕ ಶಬರಿ ಈ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಿದ್ದಳು ಅನ್ನೋ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೆಖವಿದೆ‌‌. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ರಾತ್ರಿಯ ವಿಹಂಗಮ ನೋಟವನ್ನು ಚಿತ್ರಗಳಲ್ಲಿ ನೋಡಿ

    14 ವರ್ಷಗಳ ವನವಾಸದಲ್ಲಿದ್ದ ಶ್ರೀರಾಮ ಸೀತೆಯನ್ನ ಹುಡುಕಿ ಹೊರಟಾಗ ಆತನ ಬಳಿ ಯಾವುದೇ ಸೈನ್ಯವಾಗಲಿ, ಯುದ್ಧ ಸಲಕರಣೆಗಳಾಗಲಿ ಇರಲಿಲ್ಲ. ಅಲ್ಲದೇ ಸಮುದ್ರವನ್ನ ದಾಟಿ ಲಂಕೆಗೆ ಹೋಗಲು ಮುಂದಾಗಿದ್ದಾಗ ಹನುಮ ಹಾಗೂ ಕಿಷ್ಕಿಂದೆಯ ರಾಜ್ಯದ ವಾನರ ಸೇನೆ ರಾಮನನ್ನ ಸೇರಿದ್ದು ಇದೇ ಕಿಷ್ಕಿಂದೆಯಲ್ಲಿ. ಕೊಪ್ಪಳ ಜಿಲ್ಲೆಯ ಸುತ್ತ ಮುತ್ತಲಿನ, ಹೊಸಪೇಟೆ, ಬಳ್ಳಾರಿ ಭಾಗದ ಕಬ್ಬಿಣ ಅಧಿರಿನಿಂದಲೇ ಅಂದು ಯುದ್ಧಕ್ಕೆ ಬೇಕಾದ ಆಯುಧಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿಯೇ ಸೇನೆಯನ್ನು ಸಿದ್ಧಪಡಿಸಿಕೊಂಡಿದ್ದ ಬಗ್ಗೆಯೂ ಇತಿಹಾಸವಿದೆ.

    ನಂತರ ವಾನರ ಸೇನೆಯ ಸಹಾಯದಿಂದಲೇ ಲಂಕೆಗೆ ಸೇತುವೆ ನಿರ್ಮಿಸಿ ಆಂಜನೇಯನ ಸಹಾಯದಿಂದ ಲಂಕಾ ಪ್ರವೇಶಿಸಿ ರಾವಣನ ಸಂಹಾರ ಮಾಡಲಾಯಿತು. ನಂತರ ಸೀತಾ ಮಾತೆಯನ್ನ ಅಯೋಧ್ಯೆಗೆ ಕರೆತರಲಾಯಿತು. ಈ ಎಲ್ಲ ಮಹತ್ಕಾರ್ಯಕ್ಕೆ ಸಹಾಯಕವಾಗಿದ್ದು ಅಂದಿನ ಕಿಷ್ಕಿಂದೆ ರಾಜ್ಯದ ವಾನರ ಸೇನೆ. ಅದು ಇಂದಿನ ಅಂಜನಾದ್ರಿಯ ಆನೆಗೊಂದಿ ಭಾಗ. ಇದಕ್ಕೆ ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಹಲವು ಸಾಕ್ಷಿಗಳು ದೊರೆತಿವೆ‌. ಇದರಿಂದ ರಾಮಾಯಣಕ್ಕೂ ಕೊಪ್ಪಳ ಜಿಲ್ಲೆಯಗೂ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಇತಿಹಾಸ ತಜ್ಞರು. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ – 96 ವರ್ಷದ ಕರಸೇವಕಿಗೆ ವಿಶೇಷ ಆಹ್ವಾನ – ಈಕೆ ಯಾರು ಗೊತ್ತಾ?

  • ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು

    ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು

    – ಕೇಶವ್ ಜೊತೆಗೆ ಕೆ.ಎಲ್ ರಾಹುಲ್ ಸಂಭಾಷಣೆ ವೈರಲ್
    – ಅಪ್ಪಟ ರಾಮ-ಹನುಮನ ಭಕ್ತ ಕೇಶವ್ ಮಹಾರಾಜ್

    ಪರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಹರಿಣರ ತಂಡದ ಕೇಶವ್ ಮಹಾರಾಜ್ (Keshav Maharaj) ಕ್ರೀಸ್‌ಗೆ ಬಂದ ವೇಳೆ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ನಡೆಸಿದ ಸಣ್ಣ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಕೇಶವ್ ಮಹಾರಾಜ್ ಕ್ರೀಸ್‌ಗೆ ಬಂದಕೂಡಲೇ `ರಾಮ್ ಸಿಯಾ ರಾಮ್ (Ram Siya Ram), ಜೈ ಜೈ ರಾಮ್, ಸೀತಾರಾಮ್’ ಗೀತೆಯನ್ನು ನುಡಿಸಲಾಗಿತ್ತು. ಇದನ್ನೂ ಓದಿ: ಸಂಜು ಸ್ಯಾಮ್ಸನ್ ಚೊಚ್ಚಲ ಶತಕ – ಸಂಭ್ರಮದಲ್ಲಿ ತೋಳ್ಬಲ ಪ್ರದರ್ಶನ!

    ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ಚೇಸಿಂಗ್ ವೇಳೆ, 33.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದ್ದಾಗ ಆಲ್‌ರೌಂಡರ್ ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರು. ಕೇಶವ್ ಬರುತ್ತಿದ್ದಂತೆ ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಸ್ಪೀಕರ್‌ಗಳಲ್ಲಿ `ರಾಮ್ ಸಿಯಾ ರಾಮ್’ ಹಾಡು ಮೊಳಗಿತು. ಭಾರತ ಮೂಲದವರೇ ಆದ ಕೇಶವ್ ಮಹಾರಾಜ್ ದೈವಭಕ್ತ ಎಂಬುದು ಹೊಸ ವಿಷಯವೇನಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಅವರಿಗೊಪ್ಪುವ ಹಾಡನ್ನೇ ಅವರ ಎಂಟ್ರಿ ವೇಳೆ ಪ್ರಸಾರ ಮಾಡಲಾಗಿತ್ತು.

    ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್, ಈ ಹಾಡನ್ನು ಆಲಿಸಿ ವಿಷಯವೊಂದನ್ನು ಗಮನಿಸಿದ್ದಾರೆ. ಕೇಶವ್ ಮಹಾರಾಜ್ ಪ್ರತಿ ಬಾರಿ ಬ್ಯಾಟಿಂಗ್‌ಗೆ ಕಾಲಿಟ್ಟಾಗಲೆಲ್ಲಾ ಈ ಹಾಡನ್ನೇ ನುಡಿಸುತ್ತಾರೆ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ರಾಹುಲ್ ಮುಗುಳ್ನಗುವಿನೊಂದಿಗೆ ಕೇಶವ್ ಮಹಾರಾಜ್ ಬಳಿಯೇ ಈ ಪ್ರಶ್ನೆ ಕೇಳಿದ್ದಾರೆ. ಕೇಶವ್ ಕೂಡ ನಗುತ್ತಲೇ ಹೌದು. ಪ್ರತಿಬಾರಿ ಕ್ರೀಸ್‌ಗೆ ಬರುವಾಗ ಈ ಗೀತೆಯನ್ನ ಪ್ರಸಾರ ಮಾಡಲಾಗುತ್ತೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಸದ್ಯ ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    2023ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 1 ವಿಕೆಟ್ ಜಯ ಸಾಧಿಸಲು ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾಗೆ ನೆರವಾಗಿದ್ದರು. ಆಗಲೂ ಆ ಗೆಲುವನ್ನ ರಾಮನ ಭಕ್ತ ಹನುಮಾನ್‌ಗೆ ಅರ್ಪಿಸಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗೆಲುವಿನ ಕ್ಷಣಗಳ ಫೋಟೋ ಹಂಚಿಕೊಂಡು `ಜೈ ಶ್ರೀ ಹನುಮಾನ್’ ಅಂತಲೂ ಬರೆದುಕೊಂಡಿದ್ದರು.

    ಭಾರತೀಯ ಮೂಲದ ಕೇಶವ ಮಹರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಆಂಜನೇಯ ಸ್ವಾಮಿ ಹೆಚ್ಚು ಪೂಜಿಸುವ ಮಹಾರಾಜ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲೂ `ಜೈ ಶ್ರೀರಾಮ್, ಜೈ ಶ್ರೀ ಹನುಮಾನ್’ ಎಂದು ಬರೆದುಕೊಂಡಿರುವುದು ವಿಶೇಷ. ಇದನ್ನೂ ಓದಿ: ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ

    ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯವು ಹಲವು ವಿಶೇಷ ಬೆಳವಣಿಗೆ ಮತ್ತು ದಾಖಲೆಗೆ ಸಾಕ್ಷಿಯಾಯಿತು. ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. 2-1 ಅಂತರದಲ್ಲಿ ಸರಣಿ ಗೆಲ್ಲುವ ಮೂಲಕ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಬಳಿಕ ಸರಣಿ ಗೆದ್ದ 2ನೇ ನಾಯಕ ಎಂಬ ಖ್ಯಾತಿ ವಿಶೇಷ ಸಾಧನೆ ಮಾಡಿದರು. ವೇಗಿ ಅರ್ಷ್ದೀಪ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ ಸೈನ್ಯ ಸಂಜು ಸ್ಯಾಮ್ಸನ್ ಶತಕ, ತಿಲಕ್ ವರ್ಮಾ ಅರ್ಧಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತ್ತು. 297 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಹರಿಣರ ಬಳಗ 218 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಹರಿಣರ ಬೇಟೆಯಾಡಿ ಸರಣಿ ಗೆದ್ದ ಭಾರತ – ಧೋನಿ ಟ್ರೆಂಡ್‌ ಮುಂದುವರಿಸಿದ ಕೆ.ಎಲ್‌ ರಾಹುಲ್‌

  • ರಾಮನಗರದಲ್ಲಿ ಶ್ರೀರಾಮನ ಉತ್ಸವ ನಡೆಸಲು ಶಾಸಕ ಇಕ್ಬಾಲ್ ಹುಸೇನ್ ಪ್ಲ್ಯಾನ್‌

    ರಾಮನಗರದಲ್ಲಿ ಶ್ರೀರಾಮನ ಉತ್ಸವ ನಡೆಸಲು ಶಾಸಕ ಇಕ್ಬಾಲ್ ಹುಸೇನ್ ಪ್ಲ್ಯಾನ್‌

    ರಾಮಮನಗರ: ಬಿಜೆಪಿ (BJP) ಬಳಿಕ ಇದೀಗ ಕಾಂಗ್ರೆಸ್‌ನ ಕೆಲ ನಾಯಕರು ರಾಮನ ಜಪಕ್ಕೆ ಮುಂದಾಗುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ರಾಮನಗರದಲ್ಲಿ ರಾಮೋತ್ಸವಕ್ಕೆ (Sri Rama Utsava) ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

    ಮೂರು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಾಂಗ್ರೆಸ್ (Congress) ಶಾಸಕ ಇಕ್ಬಾಲ್ ಹುಸೇನ್ (Iqbal Hussain) ನೇತೃತ್ವದಲ್ಲಿ ಶ್ರೀರಾಮನ ಉತ್ಸವ ನಡೆಸುವ ಕಾರ್ಯಕ್ರಮ ರೂಪಿಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    ಗುರುವಾರ ನಡೆದ ಯುವ ಉತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಈ ಬಗ್ಗೆ ಮಾತನಾಡಿದ್ದು, ಶೀಘ್ರದಲ್ಲೇ ರಾಮೋತ್ಸವ ಕಾರ್ಯಕ್ರಮ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಸ್‌ನಲ್ಲಿ ಸೀಟ್ ವಿಚಾರಕ್ಕೆ ವೃದ್ಧ ಪ್ರಯಾಣಿಕನ ಮೇಲೆ ನಾಲ್ವರು ಮಹಿಳೆಯರಿಂದ ಹಲ್ಲೆ

    ಇದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಿಂದೂ ಮತಗಳ ಓಲೈಕೆಗೆ ಕಾಂಗ್ರೆಸ್ ಮುಂದಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ರಾಮಮಂದಿರ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿತ್ತು. ಅದೇ ರಾಮಬಾಣ ಪ್ರಯೋಗಿಸಿರುವ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಶ್ರೀರಾಮನ ಉತ್ಸವಕ್ಕೆ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಸುಗಳ ಮಾಂಸ ಬಳಕೆ ಆರೋಪ- ಸಾಕುಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ: ಅಶ್ವಥ್ ನಾರಾಯಣ

    ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ: ಅಶ್ವಥ್ ನಾರಾಯಣ

    ರಾಮನಗರ: ರಾಮದೇವರ ಬೆಟ್ಟವು (RamaDevra Betta)  ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಜೀರ್ಣೋದ್ಧಾರ ಅಭಿವೃದ್ಧಿಗೆ ಡಿಪಿಆರ್ ಸಿದ್ಧ ಪಡಿಸಲಾಗುತ್ತಿದೆ. ಈ ಯೋಜನೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಎಂದು ರಾಮನಗರದಲ್ಲಿ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ (Dr. Ashwathnarayan) ತಿಳಿಸಿದ್ದಾರೆ.

    ರಾಮದೇವರ ಬೆಟ್ಟ ಅಭಿವೃದ್ಧಿ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ. ರಾಮನಗರದಲ್ಲಿ ಈವರೆಗೂ ರಾಮದೇವರ ಬೆಟ್ಟ ಅಭಿವೃದ್ಧಿ ಆಗಿಲ್ಲ. ಕೆಲವರು ಅಸಹಾಯಕರಾಗಿದ್ದಾರೆ. ಬೇರೆ ಪಕ್ಷದ ಯಾರೊಬ್ಬರು ಬೆಟ್ಟ ನೋಡಿಲ್ಲ. ರಾಮಜನ್ಮ ಭೂಮಿ ಬಿಟ್ಟರೆ, ರಾಮನಗರದ ರಾಮದೇವರ ಬೆಟ್ಟ ಮತ್ತೊಂದು ಪವಿತ್ರ ಕ್ಷೇತ್ರವಾಗಲಿದೆ. ಎಲ್ಲಾ ಸೂಕ್ಷ್ಮತೆಗಳನ್ನು ಗಮನಿಸಿ ಕಾನೂನಿನ ಚೌಕಟ್ಟಿನ ಪರಿದಿಯೊಳಗೆ ರಾಮದೇವರ ಬೆಟ್ಟ ಅಭಿವೃದ್ಧಿ ಮಾಡಿಯೇ ತಿರುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಹೇಳೋದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಬಿಕೆ ಹರಿಪ್ರಸಾದ್ ಕಿಡಿ

    ಡಿ.ಕೆ.ಶಿವಕುಮಾರ್ (D.K Shivakumar)  ಸಿಡಿ ಮಾಡಿಸಿದ್ದರು ಎಂದು ರಮೇಶ್ ಜಾರಕಿಹೊಳಿ (Ramesh Jarkiholi)  ಹೇಳಿಕೆ ಬಗ್ಗೆ ಮಾತನಾಡಿದ ಸಚಿವರು, ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಷಡ್ಯಂತ್ರ ಮಾಡುವವರು, ಬ್ಲಾಕ್ ಮೇಲರ್‌ಗಳಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕು. ಈ ಬಗ್ಗೆ ಜಾರಕಿಹೊಳಿ ಸಹ ತನಿಖೆ ನಡೆಸಿ ಎಂದಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಪದೇ ಪದೇ ರಾಜ್ಯಕ್ಕೆ ಬರುವುದರಿಂದ JDS, ಕಾಂಗ್ರೆಸ್‍ಗೆ ಭಯ ಶುರುವಾಗಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

    ಸಚಿವ ಸುಧಾಕರ್ ಆರೋಗ್ಯ ಇಲಾಖೆಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ (Siddaramaiah)  ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಚರ್ಚೆ ಮಾಡಲು ಸದನ ಇದೆ. ಕಮಿಟಿ ಇದೆ. ಅಲ್ಲಿ ಆರೋಗ್ಯ ಇಲಾಖೆ ಬಗ್ಗೆ ಮಾತನಾಡಬೇಕಿತ್ತು. ಅದನ್ನು ಬಿಟ್ಟು ನಿರಾಧಾರವಾಗಿ ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಹೇಳಿಕೆ ನೀಡುವುದು ಸರಿ ಅಲ್ಲ. ಮೈ ಪರಚಿಕೊಂಡು ಅಪದಾನೆ ಮಾಡಿದ್ರೆ ಸುಳ್ಳು ಸತ್ಯವಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನಿಂದ ಕಲ್ಲು ಬಂಡೆಗೆ ಬಾಣ, ಕಾಣಿಸಿಕೊಂಡಿತು ನೀರು – ‘ನಾಮದ ಚಿಲುಮೆ’ ಸ್ಥಳವೊಂದು, ವಿಶೇಷತೆ ಹಲವು!

    ರಾಮನಿಂದ ಕಲ್ಲು ಬಂಡೆಗೆ ಬಾಣ, ಕಾಣಿಸಿಕೊಂಡಿತು ನೀರು – ‘ನಾಮದ ಚಿಲುಮೆ’ ಸ್ಥಳವೊಂದು, ವಿಶೇಷತೆ ಹಲವು!

    ಯ್ಯೋ ಸಾಕಪ್ಪ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗೋಣ, ಎಲ್ಲಾದ್ರೂ ಕೂಲ್ ಆಗಿರೋ ಜಾಗಕ್ಕೆ, ಒಳ್ಳೆಯ ಗಾಳಿ ಸಿಗೋ ಜಾಗಕ್ಕೆ ಹೋಗೋಣ ಅಂತಾ ಬೆಂಗಳೂರಿನಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರಿಗೆ ಗ್ಯಾರೆಂಟಿ ಅನ್ನಿಸಿರುತ್ತೆ. ವೀಕೆಂಡ್ ಬಂದ್ರೆ ಸಾಕು, ಈ ವಿಚಾರ ಒಂದ್ಸಲ್ ತಲೇಲಿ ಸುಯ್ ಅಂತಾ ಹಾದು ಹೋಗಿರುತ್ತೆ. ಆದ್ರೆ, ಕೆಲವು ಟೈಂ ಅಯ್ಯೋ ನೂರಾರು ಕಿಮೀ ಎಲ್ಲಿ ಹೋಗೋದು ಬೀಡು ಅಂದುಕೊಂಡು ಸುಮ್ಮನಾಗಿರ್ತಾರೆ. ಅಂಥವರಿಗೆ ತುಮಕೂರು ಬಳಿ ಉತ್ತಮ ಸ್ಥಳವಿದೆ.

    ಬಹಳ ದೂರ ಇಲ್ಲ, ಬೆಂಗಳೂರಿನಿಂದ ಜಸ್ಟ್ 70 ಕಿಮೀ, ತುಮಕೂರಿನಿಂದ 15 ಕಿಮೀ ದೂರ. ಇಲ್ಲಿ ನಿಮಗೆ ಶುದ್ಧ ಗಾಳಿ, ರಿಲ್ಯಾಕ್ಸ್ ಮಾಡುವ ವೆದರ್, ದಟ್ಟ ಕಾನನದ ನಡುವಿನ ನಿಶ್ಯಬ್ಧ ವಾತಾವರಣ, ಜಿಂಕೆ, ಕಡವೆ, ವಿವಿಧ ಜಾತಿಯ ಪಕ್ಷಿಗಳು, ಶುದ್ಧ ನೀರು, ಶುದ್ಧ ಜೇನುತುಪ್ಪ, ಧ್ಯಾನ ಕೇಂದ್ರ, ಪಕ್ಷಿ ಪ್ರೀಯ ಸಲೀಂ ಅಲಿಯ ಅಚ್ಚುಮೆಚ್ಚಿನ ತಾಣ, ಹೀಗೆ ಹತ್ತು ಹಲವು ವಿಶೇಷತೆಗಳು ನಿಮಗೆ ಸಿಗಬೇಕು ಅಂದ್ರೆ ನೀವು ನಾಮದ ಚಿಲುಮೆಗೆ ಹೋಗಲೇಬೇಕು.

     

    ಪೌರಾಣಿಕ ಹಿನ್ನೆಲೆ ಏನು?
    ಈಡೀ ವಾರ ದಣಿದ ದೆಹಕ್ಕೆ ರಿಲ್ಯಾಕ್ಸ್ ಕೊಡೋ ಈ ಜಾಗಕ್ಕೆ ಒಂದು ಪೌರಾಣಿಕ ಕಥೆ ಇದೆ. ರಾಮ ತನ್ನ ವನವಾಸದ ಸಂದರ್ಭದಲ್ಲಿ ಈ ಜಾಗದಲ್ಲಿ ಕೆಲವು ದಿನ ಉಳಿದುಕೊಂಡಿದ್ದನಂತೆ. ಈ ಸಂದರ್ಭದಲ್ಲಿ ಹಣೆಗೆ ನಾಮವನ್ನಿಟ್ಟುಕೊಳ್ಳಲು ನೀರನ್ನು ಹುಡುಕಿದನಂತೆ. ಎಲ್ಲೆಡೆ ಬರೀ ಕಲ್ಲು ಬಂಡೆಗಳೆ ಇದ್ದಿದ್ದರಿಂದ ಎಲ್ಲೂ ನೀರು ಸಿಗಲಿಲ್ಲವಂತೆ. ಆಗ ಈ ಕಲ್ಲುಬಂಡೆಗೆ ತನ್ನ ಬಾಣ ಬಿಟ್ಟಾಗ ನೀರಿನ ಚಿಲುಮೆ ಕಾಣಿಸಿಕೊಂಡಿದೆ. ಹಾಗಾಗಿ ಇದಕ್ಕೆ ನಾಮದ ಚಿಲುಮೆ ಅಂತಾನೆ ಕರೆಯುತ್ತಾರೆ. ಇದರ ವಿಶೇಷತೆ ಏನೂ ಅಂದ್ರೆ, ಈ ಚಿಲುಮೆ ಯಾವತ್ತು ಬತ್ತಿಲ್ಲ. ಬೇಸಿಗೆಯಲ್ಲೂ ಸದಾ ನೀರು ಇದ್ದೆ ಇರುತ್ತೆ.

    ಜಿಂಕೆ ವನವಿದೆ:
    ಮಕ್ಕಳನ್ನ ಕರೆದುಕೊಂಡು ಹೋದ್ರಂತೂ ಮಕ್ಕಳು ಸಖತ್ ಆಗಿ ಎಂಜಾಯ್ ಮಾಡ್ತಾರೆ. ಕಾರಣ ಇಲ್ಲಿರೋ ಜಿಂಕೆಗಳು, ಕಡವೆಗಳು ನಿಮ್ಮನ್ನ ಆಕರ್ಷಿಸುತ್ವೆ. ಅವುಗಳಿಗೆ ತಿನ್ನಲು ಹುಲ್ಲನ್ನ ಸಹ ನೀವು ಕೊಡಬಹುದು. ಇಲ್ಲಿರೋ ಜಿಂಕೆಗಳಿಗೆ, ಕಡವೆಗಳಿಗೆ ಭಯ ಇಲ್ಲ. ನಿಮ್ಮ ಹತ್ತಿರ ಬರುತ್ವೆ. ಅವುಗಳಿಗೆ ಹುಲ್ಲನ್ನ ಕೊಟ್ಟು ನೀವು ಮುಟ್ಟಬಹುದು. ಈ ಜಿಂಕೆಗಳೊಂದಿಗೆ ಸ್ವಲ್ಪ ಟೈಂ ಸ್ಪೆಂಡ್ ಮಾಡಿದ್ರೆ ನಿಮ್ಮ ಮನಸ್ಸು ಹಗುರವಾಗೋದಂತೂ ಗ್ಯಾರಂಟಿ, ಟೆನ್ಷನ್ ಎಲ್ಲ ಮಂಗಮಾಯವಾಗೋಗುತ್ತೆ.

    ಸಲೀಂ ಅಲಿ ಅಚ್ಚುಮೆಚ್ಚಿನ ಜಾಗ:
    ಈ ಜಾಗ ಪಕ್ಷಿ ಪ್ರೇಮಿ ಸಲೀಂ ಅಲಿ ಅವರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ಒಮ್ಮೆ ಈ ಜಾಗಕ್ಕೆ ಬಂದಾಗ ಇಲ್ಲಿನ ಪಕ್ಷಿಗಳನ್ನ, ಇಲ್ಲಿರುವ ಸಸ್ಯಸಂಕುಲಗಳನ್ನ ನೋಡಿ ಕಾಡಿನಲ್ಲೇ ಮೂರು ದಿನ ಉಳಿದುಕೊಂಡಿದ್ದರಂತೆ. ಇದಾದ ಬಳಿ ಮೂರು ಬಾರಿ ಇಲ್ಲಿಗೆ ಬಂದು ಹೋಗಿದ್ದರಂತೆ. ಅವರು ಉಳಿದುಕೊಳ್ತಿದ್ದ ಚಿಕ್ಕ ಕೊಠಡಿ ಕೂಡ ಇಲ್ಲೇ ಇದೆ. ಆದ್ರೆ ಸದ್ಯ ಅದು ಪಾಳು ಬಿದ್ದಿದೆ.

    ರಾಮನ ಬಂಟನ ತುಂಟಾಟ.
    ಈ ಜಾಗದಲ್ಲಿ ಸ್ವಲ್ಪ ಮಂಗಗಳಿಂದ ಎಚ್ಚರವಾಗಿರಿ. ನೀವೇನಾದ್ರು ಸೌತೆಕಾಯಿ, ಬ್ಯಾಗ್, ತಿಂಡಿ ಒಯ್ಯೋದಾದ್ರೆ, ಹೆಗಲಿಗೆ ಹಾಕಿಕೊಳ್ಳೊ ಬ್ಯಾಗ್‍ನಲ್ಲಿಟ್ಟುಕೊಂಡು ಹೋಗಿ. ಕೈಯಲ್ಲಿ ಹಿಡಿದುಕೊಂಡು ಹೋದ್ರೆ, ಅಷ್ಟೇ ಕಥೆ. ಎಗರಿಸಿಕೊಂಡು ಹೋಗೋದು ಪಕ್ಕ. ಸೋ ಮಂಗಗಳಿಂದ ನಿಮ್ಮ ಬ್ಯಾಗ್‍ಗಳ ಬಗ್ಗೆ ಎಚ್ಚರ.

    ಶುದ್ಧ ಕಾಡು ಜೇನುತುಪ್ಪ.
    ಇಲ್ಲಿ ನಿಮಗೆ ಶುದ್ಧವಾದ ಕಾಡುಜೇನುತುಪ್ಪ ಸಿಗುತ್ತೆ. ಜೇನುತುಪ್ಪ ಇಷ್ಟಪಡೋರು ಮಿಸ್ ಮಾಡ್ದೆ ತಗೊಳ್ಳಿ. ನಾಮದ ಚಿಲುಮೆಯ ಎದುರುಗಡೆ ಸಿದ್ಧ ಸಜೀವಿನಿ ಔಷಧಿ ಸಸ್ಯ ವನವಿದೆ. ಇಲ್ಲಿ ನಿಮಗೆ ಈ ಜೇನುತುಪ್ಪ ಲಭ್ಯವಿರುತ್ತೆ. ಅಷ್ಟೇ ಅಲ್ಲ ಇಲ್ಲಿ ಕಾಡಿನಲ್ಲಿ ಸಿಗುವ ನೈಸರ್ಗಿಕ ಔಷಧಿಗಳು ಲಭ್ಯವಿದೆ. ಇದಲ್ಲದೆ, ಇಲ್ಲೊಂದು ಪಿರಾಮಿಡ್ ಧ್ಯಾನಮಂದಿರ ಕೂಡ ಇದೆ. ಆದ್ರೆ, ಸದ್ಯ ಇದರ ಬಳಕೆ ಯಾರು ಮಾಡದೇ ಇರೋದ್ರಿಂದ, ಅದಕ್ಕೆ ಬೀಗ ಹಾಕಿರುತ್ತಾರೆ.

    ದೇವರಾಯನದುರ್ಗ:
    ನಾಮದ ಚಿಲುಮೆ ಬರೋದೆ ಈ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ. ನಾಮದ ಚಿಲುಮೆಯಿಂದ 3 ಕಿಮೀ ದೂರದಲ್ಲಿ ಈ ದೇವರಾಯನದುರ್ಗ ಬರುತ್ತೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ ಸಾಕು ದೇವರಾಯನದುರ್ಗ ಅರಣ್ಯಪ್ರದೇಶ ಆರಂಭವಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸ್ಥಳ ಇದಾಗಿದೆ. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಸಮೀಪದಲ್ಲಿ ‘ನಾಯಕನ ಕೆರೆ’ ಎಂಬ ಮನೋಹರವಾದ ಕೆರೆ ಇದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ, ಹಳೆಯ ಕೋಟೆ, ಸೂರ್ಯಾಸ್ತ ನೋಡಲು ಅತ್ಯಂತ ಸುಂದರಾವಾದ ಜಾಗ ಇದು.

    ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ. ಉಳಿದುಕೊಳ್ಳೋಕೆ ಸರ್ಕಾರಿ ಗೆಸ್ಟ್ ಹೌಸ್ ಬಿಟ್ಟರೇ ಬೇರೆ ಹೋಟೆಲ್‍ಗಳಿಲ್ಲ. ಹಾಗಾಗಿ ಏನಾದ್ರು ತಿನ್ನಲು, ಕುಡಿಯಲು ನೀರನ್ನ ತುಮಕೂರಿನಿಂದಲೇ ತೆಗೆದುಕೊಂಡು ಹೋದರೆ ಒಳ್ಳೆಯದು.
    – ಅರುಣ್ ಬಡಿಗೇರ್

  • ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಧಾರವಾಡ: ಇಬ್ಬರು ಮಹಿಳೆಯರಿಗೆ ಭದ್ರತೆ ನೀಡಿ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಸಹಾಯ ಮಾಡಿದ್ದಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಕೇರಳ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರ್ಕಾರ ನಡೆದುಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಹೀಗಾಗಿ ಕೇರಳ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಅಲ್ಲಿನ ಸರ್ಕಾರ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ ಸಲ್ಲಿಸಿದಂತಾಗುತ್ತದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು. ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು ಮೂಢನಂಬಿಕೆ, ಕೋಮುವಾದ ಆಧುನಿಕ ಮೌಲ್ಯಗಳಲ್ಲ ಅಂತ ಅವರು ಹೇಳಿದ್ರು.

    ಇದೇ ವೇಳೆ ಪ್ರೋ. ಭಗವಾನ್ ಪುಸ್ತಕದಲ್ಲಿ ಶ್ರೀರಾಮನಿಗೆ ಅವಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧವಾಗಿದೆ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು. ರಾಮಮಂದಿರ ಏಕೆ ಬೇಡ? ಹಳೆಯ ಪುಸ್ತಕವಾಗಿದೆ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ಈಗ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ‘ಬೇಡ’ ಅನ್ನೋ ಪುಸ್ತಕ ಬರೆಯಲಾಗಿದೆ. ಅದನ್ನು ಎದುರಿಸಲು ‘ಏಕೆ ಬೇಕು?’ ಅನ್ನೋದನ್ನು ಬರೆಯಬೇಕು ಅಂದ್ರು. ಇದನ್ನೂ ಓದಿ: ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ‘ಏಕೆ ಬೇಕು?’ ಅನ್ನೋ ಪುಸ್ತಕ ಬರೆದು ಎದುರಿಸಲಿ. ಆಗ ಅದು ಪ್ರಜಾಪ್ರಭುತ್ವದ ಗುಣವೆನ್ನಿಸಿಕೊಳ್ಳುತ್ತದೆ. ನಾನು ಮೂಲತಃ ನಾಸ್ತಿಕ. ಹೀಗಾಗಿ ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ. ನನ್ನ ಪಾಲಿಗೆ ಅದೊಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದಾಗಿದೆ. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ. ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು 300 ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಅಂತ ಅವರು ತಿಳಿಸಿದ್ರು.

    ರಾಮಮಂದಿರ ನಿರ್ಮಾಣ ವಿಚಾರದ ಕುರಿತು ಮಾತನಾಡಿದ ಸಾಹಿತಿ, ಮೋದಿಯವರು ಕೋರ್ಟ್ ಆದೇಶ ಬಂದ ಮೇಲೆ ನೋಡೋಣ ಅಂದಿದ್ದಾರೆ. ಹೀಗಾಗಿ ಪ್ರಧಾನಿ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv