Tag: Sri Ram Sena

  • ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಬೆಳಗಾವಿ: ರಾಮ ಮಂದಿರ ನಿರ್ಮಾಣ ಸುಗ್ರೀವಾಜ್ಞೆ ಕುರಿತು ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದು, ಚುನಾವಣೆ ದಿನಾಂಕ ಘೋಷನೆಗೂ ಮುನ್ನ ಸುಗ್ರೀವಾಜ್ಞೆ ಜಾರಿ ಮಾಡದಿದ್ದರೆ ಪತ್ರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುತಾಲಿಕ್, ಅಯೋಧ್ಯೆ ರಾಮಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ ಎಂಬ ಪ್ರಧಾನಿಗಳ ಹೇಳಿಕೆಯನ್ನು ನಾನು ಒಪ್ಪೋದಿಲ್ಲ. ಶ್ರೀ ರಾಮ ಸೇನೆ ಈ ಹೇಳಿಕೆಯನ್ನ ವಿರೋಧಿಸುತ್ತದೆ. ಶ್ರೀ ರಾಮ ಜನ್ಮ ಸ್ಥಳದಲ್ಲಿ ಮೋದಿ ಮಂದಿರ ನಿರ್ಮಾಣ ಮಾಡುತ್ತಾರೆ ಎನ್ನುವುದು ಹಿಂದೂಗಳ ಇಚ್ಛೆ ಆಗಿತ್ತು. ಆದರೆ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಮಾಡುವುದಿಲ್ಲ ಎನ್ನುವ ಮೋದಿ ಅವರ ಹೇಳಿಕೆ ಸರಿಯಲ್ಲ ಎಂದರು.

    ಸುಪ್ರೀಂ ಕೋರ್ಟ್ ಈ ಬಗ್ಗೆ ಹೇಳುವುದಾದರೆ ಆಂದೋಲನ ಏಕೆ ಮಾಡಬೇಕಿತ್ತು. ರಾಮಮಂದಿರ ಆಂದೋಲನದಿಂದ ಬಿಜೆಪಿ ಪಕ್ಷ ಹಾಗೂ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂಬುವುದನ್ನು ಮರೆತಂತೆ ಇದೆ. ಅಧಿಕಾರಕ್ಕೆ ಬಂದ ಬಳಿಕ ರಾಮ ಮಂದಿರ ನಿರ್ಮಾಣ ಮಾಡುವ ವಿಶ್ವಾಸ ಇತ್ತು. ಆದರೆ ಅವರ ಈ ನಿರ್ಧಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ತಿಳಿಸಿದರು.

    2019ರ ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಬಿಜೆಪಿ ಪಕ್ಷಕ್ಕೆ ಬಹಳ ಹೊಡೆತ ಬೀಳಲಿದೆ ಎಂದು ಭವಿಷ್ಯ ನುಡಿದ ಮುತಾಲಿಕ್, ರಾಮ ಮಂದಿರ ನಿರ್ಮಾಣ ವಿಳಂಬಕ್ಕೆ ಕಾಂಗ್ರೆಸ್ ಪಕ್ಷದ ವಕೀಲರು ಕಾರಣ ಎಂಬ ಸಬೂಬು ಹೇಳುವುದು ಬೇಡ. ಬೇರೆ ಅವರ ಮೇಲೆ ಆಪಾದನೆ ಮಾಡಿ ಮೋದಿ ಅವರು ತಪ್ಪಿಸಿಕೊಳ್ಳಬಾರದು. ಲೋಕಸಭಾ ಚುನಾವಣೆಗೆ ದಿನಾಂಕ ಸೂಚಿಸಿವ ಮುನ್ನ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ತಂದು ಮಂದಿರ ನಿರ್ಮಾಣ ಮಾಡುವಂತೆ ಆಗ್ರಹ ಮಾಡುತ್ತೇವೆ. ಇಲ್ಲವಾದಲ್ಲಿ ಮೋದಿ ಅವರ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪತ್ರ ಚಳುವಳಿ ಆರಂಭಿಸುತ್ತೇವೆ. ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಪ್ರಧಾನಿ ಮೋದಿ ಅವರ ಮನೆ ಬಾಗಿಲಿಗೆ ಬೀಳುವಂತೆ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುತಾಲಿಕ್ ರಾಜಕೀಯ ಮುಖಂಡರ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.

    ದತ್ತಪೀಠ ವಿವಾದವನ್ನು ಶಾಂತಿಯಿಂದಲೇ ಬಗೆಹರಿಸಬಹುದು. ಆದರೆ ವಿವಾದವನ್ನು ಜೀವಂತವಾಗಿರುವಂತೆ ರಾಜಕಾರಣಿಗಳು, ಬುದ್ಧಿಜೀವಿಗಳು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು. ಇಂದು ದೇವೇಗೌಡ ಅವರ ಪುತ್ರರಾದ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ತಂದೆಯಂತೆ ಇಂದು ದತ್ತಪೀಠ ವಿವಾದವನ್ನ ಬಗೆಹರಿಸಿ ಹಿಂದೂಗಳಿಗೆ ನೀಡಬೇಕೆಂದು ಎಂದು ಮನವಿ ಮಾಡಿದರು.

    ದತ್ತಪೀಠದ ಪ್ರದೇಶದಲ್ಲಿರುವ ನಾಗೇನಹಳ್ಳಿ ಬಳಿರುವ ಬಾಬಾಬುಡನ್ ದರ್ಗಾವನ್ನು ಮುಸ್ಲಿಮರಿಗೆ ಒಪ್ಪಿಸಿ, ಈಗ ಇರುವ ಶ್ರೀ ಗುರು ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ನೀಡುವ ಮೂಲಕ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬಹುದು. ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳಿಗೆ ದತ್ತಪೀಠದ ವಿವಾದ ಜೀವಂತವಾಗಿರಬೇಕಿದೆ. ಬುದ್ಧಿ ಜೀವಿಗಳ ಕಿತಾಪತಿ ಇರುವವರೆಗೂ ನೀತಿ ನಿಯಮಗಳು, ಬಂಧನಗಳು ಸಾಕಷ್ಟು ಇರುತ್ತದೆ. ಇವುಗಳೆಲ್ಲ ಇದ್ದರು ಕೂಡ ಭಕ್ತರು ಯಾವುದಕ್ಕೂ ಹೆದರದೆ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ದತ್ತಪೀಠ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ನಿರಂತರ ಎಂದು ಖಡಕ್ ಆಗಿ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೇಡಿ ರೌಡಿಶೀಟರ್ ಶ್ರೀರಾಮಸೇನೆಯ ಮಹಿಳಾ ಘಟಕದ ಅಧ್ಯಕ್ಷೆ!

    ಲೇಡಿ ರೌಡಿಶೀಟರ್ ಶ್ರೀರಾಮಸೇನೆಯ ಮಹಿಳಾ ಘಟಕದ ಅಧ್ಯಕ್ಷೆ!

    ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ರೌಡಿಶೀಟರೊಬ್ಬರನ್ನು ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

    ಶಿಸ್ತು ಸಂಸ್ಕೃತಿ ಎನ್ನುವ ಶ್ರೀರಾಮಸೇನೆ, ಇದೀಗ ಬೆಂಗಳೂರು ಮಹಿಳಾ ಅಧ್ಯಕ್ಷೆಯಾಗಿ ರೌಡಿ ಶೀಟರ್ ಹೊಂದಿರುವ ಯಶಸ್ವಿನಿ ಗೌಡ ಅವರನ್ನು ನೇಮಕ ಮಾಡಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಾಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.

    ಈ ಕುರಿತು ಪಬ್ಲಿಕ್ ಟಿವಿ, ಮುತಾಲಿಕ್ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಯಶಸ್ವಿನಿ ಗೌಡ ಅವರ ವಿರುದ್ಧ ರೌಡಿಶೀಟರ್ ಇರುವ ಕುರಿತು ತಮಗೇ ಮಾಹಿತಿ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ.

    ಅಂದಹಾಗೇ ಸದ್ಯ ಶ್ರೀರಾಮ ಸೇನೆಯ ಬೆಂಗಳೂರು ನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದರು ಎಂಬ ಮಾಹಿತಿ ಕೂಡ ಲಭಿಸಿದೆ. ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ.

    ಶ್ರೀರಾಮಸೇನೆ ಬೆಂಗಳೂರು ಘಟಕದ ಮಹಿಳಾ ಅಧಕ್ಷ ಸ್ಥಾನ ರೌಡಿ ಶೀಟರ್ ಗೆ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೌಡಿಶೀಟರ್ ಹೊಂದಿರುವ ಮಹಿಳೆಯೊಬ್ಬರು ಯಾವ ರೀತಿಯ ಸಮಾಜಸೇವೆ ಮಾಡುತ್ತಾರೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv