Tag: Sri Lanka

  • ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ನವದೆಹಲಿ: ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಆಟಗಾರರು ಮಾಲಿನ್ಯ ಕಾರಣ ನೀಡಿ ಆಟಕ್ಕೆ ತಡೆ ಮಾಡಿರುವುದು ಅಂತರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಂದ್ಯದ ವೇಳೆ ಲಂಕಾ ಆಟಗಾರರು ತೋರಿದ ವರ್ತನೆಗೆ ಟೀಂ ಇಂಡಿಯಾ ನಾಯಕ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ವಿಡಿಯೋ ವೈರಲ್ ಆಗಿದೆ.

    ಪಂದ್ಯದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನದ ವಿರಾಮದ ವೇಳೆ ಮಾಸ್ಕ್ ಧರಿಸಿ ಮೈದಾನಕ್ಕೆ ಬಂದ ಲಂಕಾ ಆಟಗಾರರು ವಾತಾವರಣದಲ್ಲಿ ಹೆಚ್ಚಿನ ವಾಯಮಾಲಿನ್ಯ ಇದ್ದು, ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈರ್ ಗೆ ಮನವಿ ಮಾಡಿದ್ದರು. ಈ ವೇಳೆ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದ ಕೊಹ್ಲಿ ಲಂಕಾ ಆಟಗಾರರ ವರ್ತನೆ ಬೇಸರಗೊಂಡರು.

    ಅಂಪೈರ್ ಗಳ ನಿರ್ಧಾರದಂತೆ ಪಂದ್ಯ ಮುಂದುವರಿಸಿದರೂ ಪಂದ್ಯದ 123ನೇ ಹಾಗೂ 127ನೇ ಓವರ್‍ನಲ್ಲಿ ಬೌಲಿಂಗ್ ಮಾಡುತ್ತಿದ್ದ ಲಂಕಾ ವೇಗಿಗಳಾದ ಲಹಿರು ಗಮನೆ ಹಾಗೂ ಲಕ್ಮಲ್ ಮೈದಾನದಿಂದ ಹೊರ ನಡೆದರು. ಇದರಿಂದಾಗಿ ಲಂಕಾ ತಂಡದಲ್ಲಿ ಓರ್ವ ಆಟಗಾರನ ಕೊರತೆ ಎದುರಾಯಿತು. ಈ ವೇಳೆ ಪದೇ ಪದೇ ಅಂಪೈರ್ ಬಳಿ ತೆರಳಿದ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಂದ್ಯಕ್ಕೆ ಅಡ್ಡಿ ಪಡಿಸಿ ಚರ್ಚೆ ನಡೆಸಿದರು. ಅಲ್ಲದೇ ಎರಡು ತಂಡದ ಕೋಚ್ ಗಳು ಆನ್ ಫೀಲ್ಡ್‍ನಲ್ಲಿದ್ದ ಆಂಪೈರ್ ಗಳಾದ ನಿಗೆಲ್ ಲಾಂಗ್ ಮತ್ತು ಜೋಯಲ್ ವಿಲ್ಸನ್ಸ್ ಅವರ ಬಳಿ ಬಂದು ಸಮಾಲೋಚನೆ ನಡೆಸಿದರು. ನಂತರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮೈದಾನದಿಂದ ಹೋರ ನಡೆಯುತ್ತಿದಂತೆ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಇದನ್ನೂ ಓದಿ:  ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ನಿರ್ಧಾರ ಪ್ರಕಟಿಸಿದ ನಂತರ ಮೈದಾನಕ್ಕೆ ಇಳಿದ ಕೊಹ್ಲಿ ಬಾಯ್ಸ್ ಮಾಸ್ಕ್ ಧರಿಸದೇ ಬೌಲಿಂಗ್ ಮಾಡಿ ಆಟ ಮುಂದುವರೆಸಿದರು. 140 ವರ್ಷಗಳ ಕ್ರೀಡಾ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಲಂಕಾ ಆಟಗಾರರ ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಪೆವಿಲಿಯನ್ ಹೋಗುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು “ಲೂಸರ್ಸ್, ಲೂಸರ್ಸ್” ಎಂದು ಕರೆದು ಚೇಡಿಸುತ್ತಿದ್ದರು.

    ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ರೋಚಕ ಡ್ರಾ ಗೊಂಡರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಗಳಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೇ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ.

    https://twitter.com/Im_Virat_Kohli/status/937233820205461504

  • ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದ ಲಂಕಾ ಆಟಗಾರರು!

    ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದ ಲಂಕಾ ಆಟಗಾರರು!

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಮಯದಲ್ಲಿ ವಾತಾವರಣದಲ್ಲಿನ ದಟ್ಟ ಮಂಜು, ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳಿಂದ ಲಂಕಾದ ಆಟಗಾರರು ಹೈರಾಣಗಿದ್ದಾರೆ.

    ಭಾನುವಾರ ಪಂದ್ಯದ ವೇಳೆ ಕೆಲ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಅಂಪೈರ್ ಗಳಿಗೆ ವಾತಾವರಣ ಕುರಿತು ದೂರು ನೀಡಿದರು. ಇದರಿಂದ 17 ನಿಮಿಷಗಳ ಕಾಲ ಆಟ ನಿಲ್ಲಿಸಲಾಗಿತ್ತು. ಆದರೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಲಂಕಾ ಆಟಗಾರರ ಮನವೊಲಿಸಿ ಆಟ ಮುಂದುವರೆಸಲು ಯಶಸ್ವಿಯಾದರು.

    ಮತ್ತೆ ಬೌಲಿಂಗ್ ಆರಂಭಿಸಿದ ಶ್ರೀಲಂಕಾದ ಬೌಲರ್ ಲಕ್ಮಲ್ ಪಂದ್ಯದ 123 ನೇ ಓವರ್ ನಲ್ಲಿ ಉಸಿರಾಟ ಸಮಸ್ಯೆ ಎದುರಿಸಿ ಮೈದಾನದಿಂದ ಹೊರ ನಡೆದರು. ಈ ವೇಳೆ ಎರಡನೇ ಬಾರಿ ಆಟ ಸ್ಥಗಿತಗೊಂಡಿತು. (ಇದನ್ನೂ ಓದಿ: ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ! )

    ಈ ಪಂದ್ಯದಲ್ಲಿ 243 ರನ್ ಗಳಿಸಿ ಪೆವಿಲಿಯನ್ ಸೇರಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಪ್ರಕಟಿಸಿದರು. ದಿನದ ಆಟದ ಅಂತ್ಯಕ್ಕೆ ಲಂಕಾ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಫೀಲ್ಡಿಂಗ್ ವೇಳೆ ಟೀಂ ಇಂಡಿಯಾದ ಎಲ್ಲ ಆಟಗಾರು ಮಾಸ್ಕ್ ಧರಿಸದೇ ಎಂದಿನಂತೆ ಅಂಗಳಕ್ಕೆ ಇಳಿದಿದ್ದರು.

  • ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ರನ್ ಮೆಷಿನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಈ ಹಿಂದೆ ನಾಯಕನಾಗಿದ್ದುಕೊಂಡು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ 5 ದ್ವಿಶತಕ ಹೊಡೆದಿದ್ದರು. ಕಳೆದ ಪಂದ್ಯದಲ್ಲಿ ಈ ದಾಖಲೆಯನ್ನು ಸರಿದೂಗಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.

    ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಾಯಕನಾಗಿದ್ದುಕೊಂಡು 4 ದ್ವಿಶತಕ ಸಿಡಿಸಿದ್ದಾರೆ. ಪಂದ್ಯದ ಎರಡನೇ ದಿನವಾದ ಇಂದು ಕೊಹ್ಲಿ 238 ಎಸೆತಗಳಲ್ಲಿ 20 ಬೌಂಡರಿ ಸಿಡಿಸಿ 200 ರನ್ ಹೊಡೆದರು. ಕೊಹ್ಲಿ ಅಂತಿಮವಾಗಿ 243 ರನ್(287 ಎಸೆತ, 25 ಬೌಂಡರಿ) ಗಳಿಸಿದ್ದಾಗ ಎಲ್‍ಬಿಯಾಗಿ 7ನೇಯವರಾಗಿ ಔಟಾದರು.

    ಟೆಸ್ಟ್ ಕ್ರಿಕೆಟ್ ನಲ್ಲಿ ನಲ್ಲಿ ಅತಿ ಹೆಚ್ಚು ದ್ವಿಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆ ಕೊಹ್ಲಿ ಈಗ ಸ್ಥಾನ ಪಡೆದಿದ್ದಾರೆ. ರಾಹುಲ್ ದ್ರಾವಿಡ್ 5 ದ್ವಿಶತಕ, ಸುನಿಲ್ ಗವಾಸ್ಕರ್ 4 ದ್ವಿಶತಕ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಹೊಡೆದ ವಿಶ್ವದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 12 ದ್ವಿಶತಕ ಹೊಡೆದಿದ್ದಾರೆ.

    ಕೊಹ್ಲಿ 2011 ರಿಂದ 2015ರವರೆಗೆ 41 ಟೆಸ್ಟ್ ಪಂದ್ಯಗಳ 72 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ದ್ವಿಶತಕ ಸಿಡಿಸಿರಲಿಲ್ಲ. ಆದರೆ 2016ರ ನಂತರ 22 ಟೆಸ್ಟ್, 33 ಇನ್ನಿಂಗ್ಸ್ ನಲ್ಲಿ 6 ದ್ವಿಶತಕ ಸಿಡಿಸಿರುವುದು ವಿಶೇಷ. ಇನ್ನೊಂದು ವಿಶೇಷ ಏನೆಂದರೆ 2016 ರ ಜುಲೈನಿಂದ ವಿಶ್ವದ ಯಾವೊಬ್ಬ ನಾಯಕ ದ್ವಿಶತಕ ಹೊಡೆದಿಲ್ಲ. ಹೀಗಾಗಿ ಈಗ ಕೊಹ್ಲಿ ಏಕದಿನದಲ್ಲಿ ಸಂಚುರಿ ಮೆಷಿನ್ ಆದಂತೆ ಟೆಸ್ಟ್ ನಲ್ಲೂ ಈಗ ಡಬಲ್ ಸೆಂಚುರಿ ಮೆಷಿನ್ ಆಗುತ್ತಿದ್ದಾರೆ.

    ಕೊಹ್ಲಿಯ ದ್ವಿಶತಕಗಳು: 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 200 ರನ್ ಗಳಿಸುವ ಮೂಲಕ ಮೊದಲ ದ್ವಿಶತಕ ದಾಖಲಿಸಿದ್ದರು. ನಂತರ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 211 ರನ್, ಮುಂಬೈ  ವಾಂಖೆಡೆಯಲ್ಲಿ  ಇಂಗ್ಲೆಂಡ್ ವಿರುದ್ಧ ಅತ್ಯಧಿಕ 235 ರನ್ ಹಾಗೂ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಹೊಡೆದಿದ್ದರು. ಲಂಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 213 ರನ್ ಸಿಡಿಸಿದ್ದರು.

    ಅಮೋಘ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 39 ರನ್ ಗಳಿಸಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಕೇವಲ 350 ಇನ್ನಿಂಗ್ಸ್ ನಲ್ಲಿ ವೇಗವಾಗಿ 16 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 363 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 374 ಎಸೆತದಲ್ಲಿ ಈ ಸಾಧನೆ ಮಾಡಿದ್ದರು.

    ಕೊಹ್ಲಿ 123 ರನ್ ಗಳಿಸಿದ್ದಾಗ ಟೆಸ್ಟ್ ವೃತ್ತಿಜೀವನದ 105ನೇ ಇನಿಂಗ್ಸ್ ನಲ್ಲಿ  5000 ರನ್‍ಗಳ ಗಡಿ ಮುಟ್ಟಿದ್ದಾರೆ. ಟೆಸ್ಟ್ ನಲ್ಲಿ  5000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ 11ನೇ ಆಟಗಾರನೆಂಬ ಹಿರಿಮೆಗೆ ಕೊಹ್ಲಿ ಈಗ ಪಾತ್ರರಾಗಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ಅಬ್ಬರ ಹೀಗಿತ್ತು
    50 ರನ್ – 52 ಎಸೆತ, 4 ಬೌಂಡರಿ
    100 ರನ್ – 110 ಎಸೆತ, 14 ಬೌಂಡರಿ
    150 ರನ್ – 178 ಎಸೆತ, 16 ಬೌಂಡರಿ
    200 ರನ್ – 238 ಎಸೆತ, 20 ಬೌಂಡರಿ
    243 ರನ್ – 287 ಎಸೆತ, 25 ಬೌಂಡರಿ

     

  • ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ  4 ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಕಿತ್ತ ಬೌಲರ್ ಎನ್ನುವ ಹೆಗ್ಗಳಿಕೆಗೆ ಆರ್ ಅಶ್ವಿನ್ ಈಗ ಪಾತ್ರವಾಗಿದ್ದಾರೆ. ಅಶ್ವಿನ್ 54 ಪಂದ್ಯಗಳ 101 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಈ ಹಿಂದೆ ಆಸ್ಟ್ರೇಲಿಯಾ ಡೆನ್ನಿಸ್ ಲಿಲ್ಲಿ 56 ಪಂದ್ಯ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 58 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡಿನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್ ನ ಮ್ಯಾಲ್ಕಂ ಮಾರ್ಶಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ನೀಡಿ 4 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು.

    54 ಪಂದ್ಯಗಳಲ್ಲಿ ಅಶ್ವಿನ್ ಇದೂವರೆಗೆ 15,636 ಎಸೆತಗಳನ್ನು ಹಾಕಿ 7520 ರನ್ ನೀಡಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದ್ದು, ಎರಡು ಇನ್ನಿಂಗ್ಸ್ ನಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಅಶ್ವಿನ್ ಶ್ರೇಷ್ಠ ಸಾಧನೆಯಾಗಿದೆ.

     

  • ಬೌಲರ್ ಗಳ  ಮುಂದೆ ಪಲ್ಟಿ ಹೊಡೆದ ಲಂಕಾ: ಇನ್ನಿಂಗ್ಸ್, 239 ರನ್ ಗಳಿಂದ ಗೆದ್ದ ಭಾರತ

    ಬೌಲರ್ ಗಳ ಮುಂದೆ ಪಲ್ಟಿ ಹೊಡೆದ ಲಂಕಾ: ಇನ್ನಿಂಗ್ಸ್, 239 ರನ್ ಗಳಿಂದ ಗೆದ್ದ ಭಾರತ

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ.

    ಟೀಂ ಇಂಡಿಯಾ ಬೌಲರ್ ಗಳು ಮುಂದೆ ಪಲ್ಟಿ ಹೊಡೆದ ಲಂಕಾ ಎರಡನೇ ಇನ್ನಿಂಗ್ಸ್ ನಲ್ಲಿ 49.3 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟ್ ಆಯ್ತು.

    ನಾಯಕ ಚಾಂಡಿಮಲ್ 61 ರನ್ ಗಳಿಸಿ ಔಟಾದರೆ ಬೌಲರ್ ಲಕ್ಮಲ್ ಔಟಾಗದೇ 31 ರನ್ ಗಳಿಸಿದರು. ಆರ್ ಅಶ್ವಿನ್ 63 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಇಶಾಂತ್ ಶರ್ಮಾ ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

    ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ ಕಂಡಿತ್ತು. ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡಿಸೆಂಬರ್ 2 ರಿಂದ ಆರಂಭವಾಗಲಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ 213 ರನ್(267 ಎಸೆತ, 17 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತದ ಬೃಹತ್ ಮೊತ್ತ ಏರಿಸಲು ಕಾರಣವಾಗಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ:ದ್ವಿಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ಬರೆದ ಕೊಹ್ಲಿ

    ಸಂಕ್ಷಿಪ್ತ ಸ್ಕೋರ್
    ಶ್ರೀಲಂಕಾ ಮೊದಲ ಇನ್ನಿಂಗ್ಸ್ 205/10
    ಭಾರತ ಮೊದಲ ಇನ್ನಿಂಗ್ಸ್ 610/6 ಡಿಕ್ಲೇರ್
    ಶ್ರೀಲಂಕಾ ಎರಡನೇ ಇನ್ನಿಂಗ್ಸ್ 166/10

     

     

     

     

     

  • ಲಂಕಾ ಟೆಸ್ಟ್ ನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ಚೇತೇಶ್ವರ ಪೂಜಾರಾ

    ಲಂಕಾ ಟೆಸ್ಟ್ ನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ಚೇತೇಶ್ವರ ಪೂಜಾರಾ

    ಕೋಲ್ಕತ್ತಾ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಎಲ್ಲ 5 ದಿನವೂ ಬ್ಯಾಟಿಂಗ್ ನಡೆಸಿ ವಿಶೇಷ ಸಾಧನೆ ಮಾಡಿದ್ದಾರೆ.

    ಈ ಮೂಲಕ ಎಲ್ಲ 5 ದಿನಗಳ ಬ್ಯಾಟಿಂಗ್ ನಡೆಸಿದ ಮೂರನೇ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಪರವಾಗಿ ಜಯಸಿಂಹ ಮತ್ತು ಪ್ರಸ್ತುತ ಕೋಚ್ ಆಗಿರುವ ರವಿಶಾಸ್ತ್ರಿ  5 ದಿನ ಬ್ಯಾಟಿಂಗ್ ನಡೆಸಿದ್ದರು.

    ಜಯಸಿಂಹ ಅವರು 1960 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧನೆ ನಿರ್ಮಿಸಿದ್ದರೆ, ರವಿಶಾಸ್ತ್ರಿ 1984 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಮೂರು ಬ್ಯಾಟ್ಸ್ ಮನ್ ಗಳ ಸಾಧನೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲೇ ನಡೆದಿದೆ ಎನ್ನುವುದು ವಿಶೇಷ.

    5 ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಆಟಗಾರರು:
    ಎಂಎಲ್ ಜಯಸಿಂಹ(ಭಾರತ), ಕಿಮ್ ಹಗ್ಸ್(ಆಸ್ಟ್ರೇಲಿಯಾ), ಅಲನ್ ಲಾಂಬ್( ಇಂಗ್ಲೆಂಡ್), ರವಿಶಾಸ್ತ್ರಿ, ಆಡ್ರಿಯನ್ ಗ್ರಿಫಿತ್(ವೆಸ್ಟ್ ಇಂಡೀಸ್), ಆಂಡ್ರ್ಯೂ ಫ್ಲಿಂಟಾಫ್(ಇಂಗ್ಲೆಂಡ್), ಚೇತೇಶ್ವರ ಪೂಜಾರ

    ಮೊದಲ ದಿನ ಮಳೆ ಬಂದಿದ್ದ ಕಾರಣ ಮಧ್ಯಾಹ್ನ ಟೆಸ್ಟ್ ಆರಂಭವಾಗಿತ್ತು. ಹೀಗಾಗಿ 18 ರನ್ ಗಳಿಸಿದ್ದ ಪೂಜಾರಾ ಎರಡನೇ ದಿನ 47 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು. ಮೂರನೇ ದಿನ 52 ರನ್ ಗಳಿಸಿ ಪೂಜಾರಾ ಔಟಾದರು. ನಾಲ್ಕನೇಯ ದಿನ ಲಂಕಾ 294 ರನ್ ಗಳಿಗೆ ಅಲೌಟ್ ಆಗಿದ್ದರಿಂದ ಭಾನುವಾರ ಪೂಜಾರಾ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಹೀಗಾಗಿ 2 ರನ್ ಗಳಿಸಿದ್ದ ಪೂಜಾರ 5ನೇ ದಿನ 22 ರನ್ ಗಳಿಸಿ ಔಟಾದರು.

    ಇದನ್ನೂ ಓದಿ: ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ

  • ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ

    ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ

    ಕೋಲ್ಕತ್ತಾ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಗಳು 34 ವರ್ಷದ ಬಳಿಕ ಇನ್ನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 4 ವಿಕೆಟ್ ಕಿತ್ತರೆ, ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತು ಈ ವಿಶೇಷ ಸಾಧನೆಯನ್ನು ನಿರ್ಮಿಸಿದ್ದಾರೆ.

    ಈ ಹಿಂದೆ 1981ರಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ನಲ್ಲಿ ವೇಗದ ಬೌಲರ್ ಎಲ್ಲ 10 ವಿಕೆಟ್ ಕಿತ್ತಿದ್ದರೆ ಬಳಿಕ 1983ರಲ್ಲಿ ಅಹಮದಾಬಾದ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಲ್ಲಿ ಮತ್ತೊಮ್ಮೆ ಈ ಸಾಧನೆಯನ್ನು ಪುನರಾವರ್ತಿಸಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ ಭುವನೇಶ್ವರ್ ಕುಮಾರ್ 27 ಓವರ್ ಎಸೆದು 5 ಮೇಡನ್ ಮಾಡಿ 88 ರನ್ ನೀಡಿ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 26.3 ಓವರ್ ಎಸೆದು 5 ಮೇಡನ್ ಮಾಡಿ 100 ರನ್ ನೀಡಿ 4 ವಿಕೆಟ್ ಪಡೆದರು. ಉಮೇಶ್ ಯಾದವ್ 20 ಓವರ್, 1 ಮೇಡನ್ ಮಾಡಿ 2 ವಿಕೆಟ್ ಕಿತ್ತು 79 ರನ್ ನೀಡಿದರು.

    ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ 83.4 ಓವರ್ ಗಳಲ್ಲಿ 294 ರನ್ ಗಳಿಗೆ ಸರ್ವಪತನ ಕಂಡಿತು.  ಲಂಕಾ ಪರ ರಂಗನಾ ಹೇರತ್ 67 ರನ್ ಹೊಡೆದರೆ ಡಿಕ್‍ವಾಲಾ 35 ರನ್ ಹೊಡೆದು ಔಟಾದರು.

    ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 39.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಶಿಖರ್ ಧವನ್ 94 ರನ್(116 ಎಸೆತ, 11 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೆಎಲ್ ರಾಹುಲ್ 73 ರನ್(113 ಎಸೆತ, 8 ಬೌಂಡರಿ), ಚೇತೇಶ್ವರ ಪೂಜಾರಾ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದು ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

    ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳಿಸಿ ಆಲೌಟ್ ಆಗಿದ್ದ ಭಾರತ ಈಗ 49 ರನ್ ಗಳ ಮುನ್ನಡೆ ಸಾಧಿಸಿದೆ. ಸೋಮವಾರ ಕೊನೆಯ ದಿನವಾಗಿದ್ದು ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಾಗಿದೆ.

     

  • ಸೊನ್ನೆ ಸುತ್ತಿ ಕಪಿಲ್ ದಾಖಲೆ ಸರಿಗಟ್ಟಿದ ರನ್ ಮೆಷಿನ್!

    ಸೊನ್ನೆ ಸುತ್ತಿ ಕಪಿಲ್ ದಾಖಲೆ ಸರಿಗಟ್ಟಿದ ರನ್ ಮೆಷಿನ್!

    ಕೋಲ್ಕತ್ತಾ: ರನ್ ಮೆಷಿನ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಕೊಹ್ಲಿ 11 ಎಸೆತಗಳನ್ನು ಎದುರಿಸಿ ಸುರಂಗ ಲಕ್ಮಲ್ ಎಸೆತದಲ್ಲಿ ಎಲ್‍ಬಿಗೆ ಬಲಿಯಾದರು. ಈ ಮೂಲಕ ವರ್ಷವೊಂದರಲ್ಲೇ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದ ಕಪಿಲ್ ದೇವ್ ದಾಖಲೆಯನ್ನು ಸರಿದೂಗಿಸಿದ್ದಾರೆ.

    ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್‍ದೇವ್ 1983ರಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಕೊಹ್ಲಿ ಎರಡು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟ್ವೆಂಟಿ-20 ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಪಂದ್ಯಗಳಲ್ಲೇ ಕೊಹ್ಲಿ ಸೊನ್ನೆ ಸುತ್ತಿದ್ದು ವಿಶೇಷ.

    1976ರಲ್ಲಿ ಬಿಷನ್ ಸಿಂಗ್ ಬೇಡಿ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಹ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದರು.

    ಕೊಹ್ಲಿ ಸೊನ್ನೆ ಸುತ್ತಿದ ಪಂದ್ಯಗಳು
    ಫೆ.23, ಟೆಸ್ಟ್, ಆಸ್ಟ್ರೇಲಿಯಾ ವಿರುದ್ಧ, ಪುಣೆ
    ಜೂ.8, ಏಕದಿನ, ಶ್ರೀಲಂಕಾ ವಿರುದ್ಧ, ಓವಲ್
    ಸೆ.17, ಏಕದಿನ, ಆಸ್ಟ್ರೇಲಿಯಾ ವಿರುದ್ದ, ಚೆನ್ನೈ
    ಅ.10, ಟಿ-20, ಆಸ್ಟ್ರೇಲಿಯಾ ವಿರುದ್ಧ, ಗುವಾಹಟಿ
    ನ.16, ಟೆಸ್ಟ್, ಶ್ರೀಲಂಕಾ ವಿರುದ್ಧ, ಕೋಲ್ಕತ್ತಾ

    ಮಳೆಯಿಂದಾಗಿ ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 11.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ. ಕೆಎಲ್ ರಾಹುಲ್ 0, ಶಿಖರ್ ಧವನ್ 8, ಚೇತೇಶ್ವರ ಪೂಜಾರ ಔಟಾಗದೇ 8, ಕೊಹ್ಲಿ 0, ಅಜಿಂಕ್ಯಾ ರೆಹಾನೆ ಔಟಾಗದೇ 0 ರನ್ ಗಳಿಸಿದ್ದಾರೆ.

     

  • ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಶ್ರೀಲಂಕಾ ಟೆಸ್ಟ್ ವೇಳೆ ಹೊಸ ಇನ್ನಿಂಗ್ಸ್ ಆರಂಭಿಸಿದ ನೆಹ್ರಾ

    ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ 20 ಪಂದ್ಯವನ್ನು ಆಡಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ನೆಹ್ರಾ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಗ್ಗೆ ಮಾಜಿ ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ನೆಹ್ರಾ ಅವರನ್ನು ಸ್ವಾಗತಿಸಿದ್ದಾರೆ.

    ಕ್ರಿಕೆಟ್ ನಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ನೆಹ್ರಾ ಇನ್ನು ಮುಂದೆ ಮೈಕ್ ಮುಂದೆ ಮನರಂಜನೆ ನೀಡಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

    1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

    2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.

    17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.

    ಇದನ್ನೂ ಓದಿ: ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

  • ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ಪಡೆದ ಪಾಂಡ್ಯ ಕ್ಷಮೆ ಕೇಳಿದ್ದು ಯಾಕೆ?

    ಶ್ರೀಲಂಕಾ ಸರಣಿಯಿಂದ ವಿಶ್ರಾಂತಿ ಪಡೆದ ಪಾಂಡ್ಯ ಕ್ಷಮೆ ಕೇಳಿದ್ದು ಯಾಕೆ?

    ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಯುವ ಆಟಗಾರ ಹಾರ್ದಿಕ್ ಪಾಂಡ್ಯ (24) ಸಂದರ್ಶನವೊಂದರಲ್ಲಿ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ್ದಾರೆ.

    ವಿಶ್ರಾಂತಿ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವತಃ ನಾನೇ ಬಿಸಿಸಿಐಗೆ ಶ್ರೀಲಂಕಾ ವಿರುದ್ಧ ಸರಣಿಯಿಂದ ವಿಶ್ರಾಂತಿಯನ್ನು ನೀಡುವಂತೆ ಮನವಿ ಮಾಡಿದ್ದೆ. ಕಳೆದ ಒಂದು ವರ್ಷದಿಂದ ನಿರಂತರ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿರುವುದರಿಂದ ಈ ವಿರಾಮವನ್ನು ಬಯಸಿದ್ದೇನೆ. ನಾನು ಸಂಪೂರ್ಣವಾಗಿ ಫಿಟ್ ಆಗಿರುವಾಗ ಮಾತ್ರ ಆಡಲು ಬಯಸುತ್ತೇನೆ. ವಿರಾಮದ ಅವಧಿಯಲ್ಲಿ ಜಿಮ್ ನಲ್ಲಿ ಮತ್ತಷ್ಟು ಬೆವರಿಳಿಸಿ ಫಿಟ್‍ನೆಸ್ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.

    ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯು ನನಗೆ ಅತ್ಯಂತ ಮಹತ್ವದಾಗಿದ್ದು, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿರಾಮ ಸಮಯವನ್ನು ಉಪಯೋಗಿಸಿಕೊಳ್ಳುತ್ತೇನೆ. ಕಳೆದ ಒಂದು ವರ್ಷದ ಅವಧಿಯಲ್ಲಿ 30 ಏಕದಿನ ಪಂದ್ಯಗಳು, 25 ಟಿ-20 ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಈ ಅವಧಿಯಲ್ಲಿ ನಾನು ಕಡಿಮೆ ಪಂದ್ಯವನ್ನು ಆಡಿದ್ದೇನೆ ಎಂದು ಹೇಳಿದ್ದರೆ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂಬುದಾಗಿ ಹೇಳುತ್ತೇನೆ. ಆಲ್ ರೌಂಡರ್ ಆಟಗಾರನಾಗಿ ಇದು ಅತ್ಯಂತ ಕಠಿಣ ಎಂದು ತಿಳಿಸಿದರು.

    ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

    ಜೂನ್ ತಿಂಗಳಿನಿಂದ ನಡೆದ ಚಾಪಿಂಯನ್ಸ್ ಟ್ರೋಫಿ ಸರಣಿಯಿಂದಲೂ ಪಾಂಡ್ಯ ನಿರಂತರವಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 6 ವಿಕೆಟ್ ಮತ್ತು 222 ರನ್ ಸಿಡಿಸುವ ಮೂಲಕ `ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನು ಪಡೆದಿದ್ದರು.