Tag: Sri Lanka

  • ಲಂಕಾದಲ್ಲಿ ಸರಣಿ ಸ್ಫೋಟ ಪ್ರಕರಣ- ಬೆಂಗ್ಳೂರಿಗೆ ನಾಗರಾಜ ರೆಡ್ಡಿ ಮೃತದೇಹ

    ಲಂಕಾದಲ್ಲಿ ಸರಣಿ ಸ್ಫೋಟ ಪ್ರಕರಣ- ಬೆಂಗ್ಳೂರಿಗೆ ನಾಗರಾಜ ರೆಡ್ಡಿ ಮೃತದೇಹ

    – ಮುಗಿಲುಮುಟ್ಟಿದ ಬಂಧುಬಾಂಧವರ ಆಕ್ರಂದನ

    ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ್ದ ನಗರದ ಬಿಟಿಎಂ ಲೇಔಟ್‍ನ ನಾಗರಾಜರೆಡ್ಡಿ ಮೃತದೇಹ ಬೆಂಗಳೂರಿಗೆ ತರಲಾಗಿದೆ.

    ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಶಾಸಕ ಎಸ್‍ಆರ್ ವಿಶ್ವನಾಥ್ ನೇತೃತ್ವದಲ್ಲಿ ಮೃತದೇಹ ತರಲಾಯಿತು. ವಿಮಾನ ನಿಲ್ದಾಣದಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತರಲಾಗುತ್ತಿದ್ದು, ಕೆಲ ಪ್ರಕ್ರಿಯೆ ಬಳಿಕ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಟಿಎಂ ಲೇಔಟ್ ನಿವಾಸಕ್ಕೆ ರವಾನಿಸಲಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆ ಬಳಿಕ ನಾಗರಾಜರೆಡ್ಡಿ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದ್ದು,  ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಕೊಲಂಬೋದಲ್ಲಿ ಒಟ್ಟಾರೆ ಸಾವನ್ನಪ್ಪಿದ ಕನ್ನಡಿಗರ ಸಂಖ್ಯೆ 8ಕ್ಕೆ ಏರಿಕೆ ಆಗಿದ್ದು, ಮಾರೇಗೌಡ, ಪುಟ್ಟರಾಜು ಅವರ ಮೃತದೇಹ ಪತ್ತೆಯಾಗಿದೆ. ಸದ್ಯ ನಾಗರಾಜರೆಡ್ಡಿ ಅವರ ಮೃತ ದೇಹ ಬೆಂಗಳೂರಿಗೆ ತಲುಪಿದ್ದು, ಇಂದು ಮಧ್ಯರಾತ್ರಿ 4 ಮೃತದೇಹಗಳು ಹಾಗೂ ಉಳಿದ ಮೃತದೇಹಗಳು ಬುಧವಾರ ಬೆಳಗ್ಗೆ ತರಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

    ಸ್ಫೋಟ ಪ್ರಕರಣದಲ್ಲಿ ಕೋರಮಂಗಲದ ಪುರುಷೋತ್ತಮ ರೆಡ್ಡಿ ಅವರಿಗೆ ತೀವ್ರವಾಗಿ ಗಾಯವಾಗಿದ್ದು, ಕೊಲಂಬೋದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಾಳೆ ಕೊಲಂಬೋದಿಂದ ಏರ್ ಲಿಫ್ಟ್ ಮಾಡಿ ಕರೆತರಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಪುರುಷೋತ್ತಮ ರೆಡ್ಡಿ ಅವರು ಯಲಹಂಕ ಶಾಸಕ ಎಸ್ ವಿಶ್ವನಾಥ್ ಸಂಬಂಧಿಯಾಗಿದ್ದು, ಪ್ರವಾಸಕ್ಕೆ ತೆರಳಿ ಶಾಂಗ್ರಿಲಾ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು.

  • ಇಂದು ರಾತ್ರಿ ಕನ್ನಡಿಗರ ಮೃತದೇಹ ಬೆಂಗಳೂರಿಗೆ – ಕನ್ನಡಿಗರ ಗುರುತು ಹಚ್ಚಿದ್ದ ಯುವಕರು ವಾಪಸ್

    ಇಂದು ರಾತ್ರಿ ಕನ್ನಡಿಗರ ಮೃತದೇಹ ಬೆಂಗಳೂರಿಗೆ – ಕನ್ನಡಿಗರ ಗುರುತು ಹಚ್ಚಿದ್ದ ಯುವಕರು ವಾಪಸ್

    ಬೆಂಗಳೂರು: ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ 7 ಕನ್ನಡಿಗರ ಮೃತದೇಹ ಇಂದು ಮಧ್ಯರಾತ್ರಿ ಬೆಂಗಳೂರಿಗೆ ರವಾನೆಯಾಗುವ ಸಂಭವವಿದ್ದು, ವಿಶೇಷ ವಿಮಾನದಲ್ಲಿ ಕೊಲಂಬೋದಿಂದ ಮೃತದೇಹಗಳನ್ನು ತರಲಾಗುತ್ತಿದೆ. ಈ ಬಗ್ಗೆ ಕೊಲಂಬೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

    ಇತ್ತ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಕಂಗಾಲಾಗಿದ್ದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡಿನತ್ತ ಆಗಮಿಸುತ್ತಿದ್ದಾರೆ. ಶ್ರೀಲಂಕಾ ಬಾಂಬ್ ಬ್ಲಾಸ್ಟ್ ನಂತರ ಘಟನೆಯಲ್ಲಿ ಮೃತರಾಗಿದ್ದ ಕನ್ನಡಿಗರ ಮೃತದೇಹದ ಗುರುತು ಹಚ್ಚಲು ಬೆಂಗಳೂರಿನ ಯುವಕರು ನೆರವಾಗಿದ್ದರು. ಇಂಡಿಗೋ ವಿಮಾನದಲ್ಲಿ ಕೊಲಂಬೋದಿಂದ ಸುಮಾರು 15 ಕ್ಕೂ ಹೆಚ್ಚು ಮಂದಿ ಕನ್ನಡಿಗರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

    ಬೆಂಗಳೂರಿನ ಬಗಲಗುಂಟೆ ನಿವಾಸಿಗಳಾದ ನವೀನ್, ಪ್ರವೀಣ್, ಕಿಟ್ಟಿ ಸೇರಿ ಮೂವರು ಸ್ನೇಹಿತರು ಕೂಡ ರಾಜ್ಯಕ್ಕೆ ವಾಪಸ್ಸಾಗಿದ್ದು, ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಶಾಂಗ್ರಿಲಾ ಹೋಟೆಲ್ ಪಕ್ಕದಲ್ಲೇ ಉಳಿದುಕೊಂಡಿದ್ದ ಇವರು ಸ್ಫೋಟಕ್ಕೆ 20 ನಿಮಿಷ ಮೊದಲು ಹೊರಗೆ ತಿರುಗಾಡಲು ತೆರಳಿದ್ದರಂತೆ. ತುಸು ದೂರ ಸಾಗುತ್ತಿದ್ದಂತೆ ಡ್ರೈವರ್ ಗೆ ಕರೆ ಬಂದು ಮಾಹಿತಿ ಸಿಕ್ಕಿದ್ದು ಹಿಂದಿರುಗಿ ಬರುವಷ್ಟರಲ್ಲಿ ಎಲ್ಲೆಡೆ ಸ್ಫೋಟದ ದೃಶ್ಯ ಕಂಡು ಆತಂಕ ಮನೆ ಮಾಡಿತ್ತು ಎಂದು ಕರಾಳ ನೆನಪನ್ನು ಹಂಚಿಕೊಂಡಿದ್ದಾರೆ.

    ಭಾರತ ರಾಯಭಾರ ಕಚೇರಿಯ ಸಹಾಯದೊಂದಿಗೆ ಮರಳಿ ಹೋಟೆಲ್ ಗೆ ಬಂದಿದ್ದು, ಘಟನೆ ಬಳಿಕ ಸಾಕಷ್ಟು ಭಯವಾಗಿತ್ತು. ಭಾರತಕ್ಕೆ ಮರಳಿದರೆ ಸಾಕು ಎನ್ನುವಂತೆ ಆಗಿತ್ತು. ಮನೆಯವರೂ ಸಾಕಷ್ಟು ಭಯಗೊಂಡಿದ್ದರು ಎಂದು ಸ್ಫೋಟದ ತೀವ್ರತೆಯ ಬಗ್ಗೆ ಮಾಹಿತಿ ನೀಡಿದರು.

  • ಕನ್ನಡಿಗರು ಸೇರಿ 321 ಮಂದಿಯನ್ನು ಹತ್ಯೆಗೈದಿದ್ದು ನಾವೇ ಎಂದ ಐಸಿಸ್

    ಕನ್ನಡಿಗರು ಸೇರಿ 321 ಮಂದಿಯನ್ನು ಹತ್ಯೆಗೈದಿದ್ದು ನಾವೇ ಎಂದ ಐಸಿಸ್

    – ಆತ್ಮಾಹುತಿ ದಾಳಿ ನಡೆಸಿದ್ದು ಶ್ರೀಮಂತ ಉದ್ಯಮಿಯ ಪುತ್ರರು

    ಕೊಲಂಬೋ: ಶ್ರೀಲಂಕಾದಲ್ಲಿ 321 ಮಂದಿ ಸಾವನ್ನಪ್ಪಿ, 500 ಮಂದಿ ಗಾಯಗೊಂಡಿರುವ ಸರಣಿ ಬಾಂಬ್ ಸ್ಫೋಟವನ್ನು ನಾವೇ ನಡೆಸಿದ್ದೇವೆ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ.

    ಘಟನೆ ನಡೆದ 2 ದಿನಗಳ ನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ಶ್ರೀಲಂಕಾ ಕ್ರಿಶ್ಚಿಯನ್ ಹಾಗೂ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ತಿಳಿಸಿದೆ. ತನ್ನ ‘ಅಮಾಕ್’ ನ್ಯೂಸ್ ಮೂಲಕ ಐಸಿಸ್ ಈ ವಿಚಾರವನ್ನು ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ ಈ ಬಗ್ಗೆ ಸಂಘಟನೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಒಟ್ಟಿನಲ್ಲಿ ಈಗ ಇರಾಕ್, ಸಿರಿಯಾ ಬಳಿಕ ಶ್ರೀಲಂಕಾದಲ್ಲೂ ಐಸಿಸ್ ತನ್ನ ಜಾಲವನ್ನು ಹಬ್ಬಿಸಿರುವುದು ದೃಢಪಟ್ಟಿದೆ.

    ಇದಕ್ಕೂ ಮೊದಲು ಈಸ್ಟರ್ ಬಾಂಬ್ ದಾಳಿ ನ್ಯೂಜಿಲೆಂಡ್ ನಲ್ಲಿ ನಡೆದ ಮಸೀದಿಗಳ ಮೇಲಿನ ದಾಳಿಗೆ ಪ್ರತಿಯಾಗಿ ನಡೆಸಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ಶಂಕಿಸಿದ್ದರು.

    ಇತ್ತ ಇಬ್ಬರು ಪಾತಕಿಗಳು ಚರ್ಚ್ ಹಾಗೂ ಹೋಟೆಲ್ ದಾಳಿ ನಡೆಸಿದ ವಿಡಿಯೋ ಲಭ್ಯವಾಗಿದ್ದು, ಕೊಲಂಬೋದ ಶ್ರೀಮಂತ ವ್ಯಾಪಾರಿಯ ಪುತ್ರರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರು ಆತ್ಮಾಹುತಿ ದಾಳಿಕೋರರು ಕೂಡ ಸಹೋದರರೇ ಆಗಿದ್ದು, ಕೊಲಂಬೋದ ಮಸಾಲೆ ಮಾರಾಟ ಉದ್ಯಮಿಯ ಪುತ್ರರು ಎಂದು ವರದಿಯಾಗಿದೆ.

    ಘಟನೆ ಸಂಬಂಧ ಶ್ರೀಲಂಕಾ ಪೊಲೀಸ್ ತನಿಖೆ ನಡೆಸಿ ವಶಕ್ಕೆ ಪಡೆದಿರುವ 40ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ. ಅಲ್ಲದೇ ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಸಿರಿಯಾ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕೊಲಂಬೋದಲ್ಲಿ ನಡೆದ ದಾಳಿಯಲ್ಲಿ ಮೊದಲ 6 ದಾಳಿಗಳಲ್ಲಿ ಮೂರು ಚರ್ಚ್‍ನಲ್ಲಿ ಹಾಗೂ 3 ಹೋಟೆಲ್ ಗಳಲ್ಲಿ ನಡೆಸಲಾಗಿತ್ತು. ಕೇವಲ 20 ನಿಮಿಷಗಳ ಅವಧಿಯಲ್ಲಿ ಈ ದಾಳಿ ನಡೆಸಲಾಗಿತ್ತು. ಆ ಬಳಿಕ ಮತ್ತೆರಡು ಬಾಂಬ್ ಸ್ಫೋಟಗಳು ನಡೆದಿತ್ತು. ಘಟನೆಯಲ್ಲಿ 38 ವಿದೇಶಿಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ಇದರಲ್ಲಿ ಭಾರತ ಸೇರಿದಂತೆ ಇಂಗ್ಲೆಂಡ್, ಯುಎಸ್, ಆಸ್ಟ್ರೇಲಿಯಾ, ತುರ್ಕಿಷ್, ಚೀನಾ, ಡ್ಯಾನಿಷ್, ಡಚ್ ಮತ್ತು ಪೋರ್ಚುಗಿಸ್ ಪ್ರಜೆಗಳು ಸೇರಿದ್ದಾರೆ.

  • ಆಯುರ್ವೇದಿಕ್ ಚಿಕಿತ್ಸೆ ಅರ್ಧಕ್ಕೆ ಮೊಟಕು – ಬೆಂಗಳೂರಿನತ್ತ ಸಿಎಂ

    ಆಯುರ್ವೇದಿಕ್ ಚಿಕಿತ್ಸೆ ಅರ್ಧಕ್ಕೆ ಮೊಟಕು – ಬೆಂಗಳೂರಿನತ್ತ ಸಿಎಂ

    ಉಡುಪಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡೇ ದಿನಕ್ಕೆ ಆಯುರ್ವೇದಿಕ್ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಟಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಆರೋಗ್ಯ ಸುಧಾರಿಸಲು ನಾನು ಉಡುಪಿಗೆ ಬಂದಿದ್ದೆ. ಆದರೆ ಶ್ರೀಲಂಕಾದ ಸ್ಫೋಟ ಪ್ರಕರಣ ನನ್ನನ್ನು ಘಾಸಿಗೊಳಿಸಿದೆ. ಸೋಮವಾರದಿಂದ ನನಗೆ ಇದೇ ತಲೆಯಲ್ಲಿ ಕಾಡುತ್ತಿದೆ. ಬಾಂಬ್ ಪ್ರಕರಣದಲ್ಲಿ ನನ್ನ ಆತ್ಮೀಯರು ಮರಣ ಹೊಂದಿದ್ದಾರೆ. ಮೂರು ನಾಲ್ಕು ದಿನ ಕಾಪುವಿನಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆಂದು ಉಳಿದುಕೊಳ್ಳಬೇಕೆಂದಿದ್ದೆ. ಆದರೆ ನಿನ್ನೆಯಿಂದ ನನಗೆ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ. ಅವರು 27 ರ ನಂತರ ಮತ್ತೆ ಉಡುಪಿಗೆ ಬರಲು ಸೂಚಿಸಿದ್ದಾರೆ. ಚಿಕಿತ್ಸೆ ಮುಂದೂಡಿ ಕರ್ತವ್ಯ ಮಾಡಲು ಹೊರಟಿದ್ದೇನೆ ಎಂದು ಹೇಳಿದರು.

    ಅತ್ಯಂತ ಮೃಗೀಯ ಘಟನೆ
    ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ಸ್ಫೋಟ ಅತ್ಯಂತ ಮೃಗೀಯವಾದ ಘಟನೆಯಾಗಿದೆ. ಈ ಘಟನೆಯಲ್ಲಿ ಅಲ್ಲಿನ ಜನರು ಮತ್ತು ಪ್ರವಾಸಿಗರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ರಾಜ್ಯದಿಂದ ಅನೇಕರು ಶ್ರೀಲಂಕಾಗೆ ಪ್ರವಾಸಹೋಗಿದ್ದರು. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೊದಲು ನಾನು ನೊಂದ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

    ಅದರಲ್ಲೂ ನನ್ನ ಪಕ್ಷದ ಐದು ಜನ ನಾಯಕರು ಮೃತಪಟ್ಟಿದ್ದಾರೆ. ಅವರು ಪಕ್ಷದ ಆಧಾರ ಸ್ತಂಭಗಳಾಗಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದೆ. ಈ ರೀತಿ ನನ್ನ ಪಕ್ಷದ ನಾಯಕರು ಮೃತಪಡುತ್ತಾರೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ಈ ಐವರು ನಮ್ಮ ಪಕ್ಷದ ಶಕ್ತಿಯಾಗಿದ್ದು, ಅವರ ಅಗಲಿಕೆಯಿಂದ ನೆಲಮಂಗಲದಲ್ಲಿ 50% ಶಕ್ತಿ ಕುಸಿತವಾಗಿದೆ. ಪ್ರಾಮಾಣಿಕ, ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ ಎಂದು ದುಃಖದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.

    ಸದ್ಯಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಶ್ರೀಲಂಕಾ ಸಚಿವಾಲಯ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಏಳು ಪಾರ್ಥಿವ ಶರೀರವನ್ನು ಗುರುತಿಸಲಾಗಿದೆ. ಅಧಿಕಾರಿ ಮಂಜುನಾಥ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಗಾಗ ಕರೆ ಮಾಡಿ ನಾನು ಮಾತನಾಡುತ್ತಿದ್ದೇನೆ. ಮರಣೋತ್ತರ ಪ್ರಕ್ರಿಯೆ ಶೀಘ್ರವಾಗಿ ಮುಗಿಸಲು ಮನವಿ ಮಾಡಲಾಗಿದ್ದು, 24 ಗಂಟೆಯೊಳಗೆ ಪಾರ್ಥೀವ ಶರೀರ ಕಳುಹಿಸಲು ಪ್ರಯತ್ನಿಸುತ್ತೇವೆ. ಕೃಷ್ಣಪ್ಪ ಮತ್ತು ಶ್ರೀನಿವಾಸ ಮೂರ್ತಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಜೊತೆಗೆ ಖಾಸಗಿ ಏರ್ ಕಾರ್ ಕಾರ್ಗೋಗೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಬೆಳಗ್ಗೆಯೊಳಗೆ ಮೃತದೇಹ ಕರ್ನಾಟಕಕ್ಕೆ ಬರಬೇಕು. ಈ ಬಗ್ಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

    https://www.youtube.com/watch?v=iukluBDu-WA

  • ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ಕೊಲಂಬೋ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆಸಿದ್ದು ನ್ಯಾಷನಲ್ ತೌಹೀತ್ ಜಮಾತ್(ಜೆಎನ್‍ಟಿ) ಸಂಘಟನೆಯ ಸದಸ್ಯರು ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

    ಭಾನುವಾರ ಸ್ಫೋಟ ನಡೆದ ಬಳಿಕ ಯಾವೊಂದು ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಈಗ ಶ್ರೀಲಂಕಾದ ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರರಾದ ರಜಿತಾ ಸೆನೆರತ್ನೆ ಈ ಕೃತ್ಯವನ್ನು ಜೆಎನ್‍ಟಿ ಸಂಘಟನೆ ನಡೆಸಿದೆ. ಶ್ರೀಲಂಕಾದ ಪ್ರಜೆಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಘಟನೆಗೆ ಅಂತರಾಷ್ಟ್ರೀಯ ಸಂಬಂಧ ಇರುವ ಸಾಧ್ಯತೆ ಇರಬಹುದು ಎಂದು ಶಂಕಿಸಿದ್ದಾರೆ. 8 ಬಾಂಬ್ ಸ್ಫೋಟದ ಸಂಬಂಧ ಇಲ್ಲಿಯವರೆಗೂ 24 ಮಂದಿಯನ್ನು ಬಂಧಿಸಲಾಗಿದೆ.

    ಶ್ರೀಲಂಕಾದಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರದಲ್ಲಿ ಇರುವಂತೆ ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಏನಿದು ಎನ್‍ಟಿಜೆ?
    2014ರಲ್ಲಿ ಶ್ರೀಲಂಕಾದಲ್ಲಿ ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಸ್ಥಾಪನೆಯಾಗಿದೆ. ಮುಸ್ಲಿಮರು ಹೆಚ್ಚಾಗಿ ನೆಲೆಸಿರುವ ಪೂರ್ವ ಭಾಗದ ಕಟ್ಟನ್‍ಕುಡಿಯಲ್ಲಿ ಈ ಸಂಘಟನೆ ತಲೆ ಎತ್ತಿದೆ. ಈ ಸಂಘಟನೆ ಕ್ರಾಂತಿಕಾರವಾಗಿ ಷರಿಯಾ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಮಹಿಳೆಯರು ಬುರ್ಕಾವನ್ನು ಮಾತ್ರ ಧರಿಸಬೇಕು ಎಂದು ಬೋಧಿಸುತ್ತಿದೆ.

    ಕ್ರಾಂತಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದ ಈ ಸಂಘಟನೆ ಕೆಲಸಗಳು ಬೆಳಕಿಗೆ ಬಂದಿರಲಿಲ್ಲ. ಕಳೆದ ವರ್ಷ ಶ್ರೀಲಂಕಾದಲ್ಲಿ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಸಂಘಟನೆಯ ಹೆಸರು ಪ್ರಚಲಿತಕ್ಕೆ ಬಂತು. ಈ ಸಂಘಟನೆಯ ಕೃತ್ಯದಿಂದಾಗಿ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಗಲಾಟೆ ನಡೆಯಲು ಆರಂಭಗೊಂಡಿತ್ತು.

    2017ರಲ್ಲಿ ಎನ್‍ಟಿಜೆ ಸಂಘಟನೆ ಬುದ್ಧನ ಬಗ್ಗೆ ದ್ವೇಷ ಕಾರುವ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋದಿಂದಾಗಿ ಲಂಕಾದಲ್ಲಿ ಸಿಂಹಳಿಯರಿಗೆ ಮತ್ತು ಬೌದ್ಧರ ಭಾವನೆಗಳಿಗೆ ಧಕ್ಕೆಯಾಗಿತ್ತು.

    ಬಾಂಬ್ ಸ್ಫೋಟಕ್ಕೆ ಸಂಬಂಧ ಏನು?
    ಭಾನುವಾರ ಶಾಂಗ್ರಿಲಾ ಹೋಟೆಲ್‍ನಲ್ಲಿ ಆತ್ಮಹುತಿ ಬಾಂಬ್ ದಾಳಿ ನಡೆಸಿದ ವ್ಯಕ್ತಿಯನ್ನು ಮೌಲ್ವಿ ಝರಂ ಹಶೀಂ ಎಂದು ಗುರುತಿಸಲಾಗಿದೆ. ಈತ ಎಲ್ಲ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದು, ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆಯಲ್ಲಿ ಉಪನ್ಯಾಸಕನಾಗಿದ್ದ.

    ನಾವು ಕೃತ್ಯ ಎಸಗಿಲ್ಲ:
    ಶ್ರೀಲಂಕಾ ಸರ್ಕಾರ ಈ ಕೃತ್ಯವನ್ನು ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಎಸಗಿದೆ ಎಂದು ದೃಢಪಡಿಸಿದರೂ ಈ ಸಂಘಟನೆ ಕೃತ್ಯವನ್ನು ಖಂಡಿಸಿದೆ. ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ದೇಶಕ್ಕೆ ಸಹಾಯ ಮಾಡಲು ನಮ್ಮ ಸಂಘಟನೆ ಸಿದ್ಧವಿದೆ ಎಂದು ತಿಳಿಸಿದೆ. ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಭಾನುವಾರ ಕ್ಯಾಂಡಿಯಲ್ಲಿ ತಾನು ಆಯೋಜಿಸಿದ್ದ ರಕ್ತದಾನ ಶಿಬಿರದ ಫೋಟೋವನ್ನು ಹಂಚಿಕೊಂಡಿದೆ.

    10 ದಿನದ ಮೊದಲೇ ಮಾಹಿತಿ ಸಿಕ್ಕಿತ್ತು:
    ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.

    ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. “ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿತ್ತು.

  • ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

    ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

    ಚಿಕ್ಕಬಳ್ಳಾಪುರ: ಶ್ರೀಲಂಕಾದಲ್ಲಿ ಉಗ್ರರು ನಡೆಸಿರುವ ಬಾಂಬ್ ಸ್ಫೋಟದಿಂದ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 6 ಮಂದಿ ಮೃತಪಟ್ಟಿದ್ದು, ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ. ಇದೇ ವೇಳೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಬೆಂಗಳೂರಿನ 20ಕ್ಕೂ ಹೆಚ್ಚು ಮಂದಿ ಇಂದು ಸಂಜೆ ಕೊಲಂಬೋದಿಂದ ವಾಪಸ್ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅಗಮಿಸಿದ್ದಾರೆ.

    ಬೆಂಗಳೂರಿನ ವಿಜಯನಗರ, ಜಯನಗರ ಸೇರಿದಂತೆ ವಿವಿಧ ಕಡೆಯಿಂದ ಶ್ರೀಲಂಕಾದ ವಿವಿಧ ಭಾಗಗಳಿಗೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಬೆಂಗಳೂರಿಗೆ ವಾಪಸ್ಸಾಗಿದ್ದು ಕುಟುಂಬಸ್ಥರು ಸೇರಿದಂತೆ ಆತ್ಮೀಯರು ನಿಟ್ಟುಸಿರು ಬಿಟ್ಟಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರವಾಸಿಗರು ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದೊಂದು ಘೋರ ದುರಂತ, ಇಂತಹ ಕೃತ್ಯಗಳು ನಡೆಯಬಾರದಿತ್ತು ಎಂದು ಪ್ರವಾಸಿಗರು ದಾಳಿಯನ್ನ ಖಂಡಿಸಿದರು.

    ನಾವು ಇದ್ದ ಸ್ವಲ್ಪ ದೂರದಲ್ಲೇ ಬ್ಲಾಸ್ಟ್ ಆಗಿತ್ತು, ಘಟನೆ ಬಳಿಕ ಶ್ರೀಲಂಕಾ ಸರ್ಕಾರ ನಿಷೇಧಾಜ್ಞೆ ಘೋಷಣೆ ಮಾಡಿತ್ತು. ಹೀಗಾಗಿ ವಿಮಾನದಲ್ಲಿ ಹೆಚ್ಚು ಭದ್ರತೆ ಕೈಗೊಂಡಿದ್ದ ಪರಿಣಾಮ ಎಲ್ಲವನ್ನೂ ಎದುರಿಸಿ ಬರಬೇಕಾಯಿತು. ನಮ್ಮ ಭಾರತದ ನೆಲಕ್ಕೆ ಬಂದಿಳಿದ ಮೇಲೆ ನಮಗೆ ಸಮಾಧಾನವಾಯಿತು ಎಂದು ಪ್ರವಾಸಿಗರು ತಿಳಿಸಿದ್ದಾರೆ.

  • ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಶ್ರೀಲಂಕಾ ಸ್ಫೋಟ: ಡಿಎನ್‍ಎ ಪರೀಕ್ಷೆ ಹೇಗೆ? ಯಾಕೆ ಮಾಡುತ್ತಾರೆ?

    ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯಲ್ಲಿ ಕರ್ನಾಟಕ ಇಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ದೇಹಗಳು ಸಿಕ್ಕಿದ್ದು ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದು, ಸಾವನ್ನಪ್ಪಿದ್ದ ಬಗ್ಗೆ ಮಾಹಿತಿ ಪಡೆಯಲು ತಜ್ಞರು ಡಿಎನ್‍ಎ ಪರೀಕ್ಷೆ ಮೊರೆ ಹೋಗುವ ಸಾಧ್ಯತೆ ಇದೆ.

    ವ್ಯಕ್ತಿಯೊಬ್ಬರು ಸಾವನ್ನಪ್ಪಿ ಆತನ ಗುರುತು ಲಭ್ಯವಾಗದ ಸಂದರ್ಭದಲ್ಲಿ ಈ ವಿಧಾನವನ್ನು ತಜ್ಞರು ಬಳಕೆ ಮಾಡುತ್ತಾರೆ. ಅದರಲ್ಲೂ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿದ ಪರಿಣಾಮ ಸದ್ಯ ಪ್ರಕ್ರಿಯೆ ತಡವಾಗಬಹುದು ಎಂದು ಬೆಂಗಳೂರಿನ ಸಂಶೋಧಕ, ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಡಿಎನ್‍ಎ ಪರೀಕ್ಷೆ ಹೇಗೆ?
    ವೈದಕೀಯ ಪರೀಕ್ಷೆಯಲ್ಲಿ ಡಿಎನ್‍ಎ ಪ್ರಕ್ರಿಯೆಯನ್ನು ಪ್ರೊಫೈಲಿಂಗ್ ಎಂದು ಕರೆಯುತ್ತಾರೆ. ಈ ವೇಳೆ ಟಿಶ್ಯೂ ಸ್ಯಾಂಪಲಿಂಗ್ ಮೂಲಕ ದೇಹದ ಗುರುತು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನೇ ಬಳಸುತ್ತಾರೆ. ವಿಶೇಷ ಸಂದರ್ಭದಲ್ಲಿ ಡಿಎನ್‍ಎ ಪರೀಕ್ಷೆ ಮಾಡಲು ಕೂದಲು, ಉಗುರು, ಚರ್ಮವನ್ನು ಪಡೆಯಲಾಗುತ್ತದೆ.

    ಯಾರ ಡಿಎನ್‍ಎ ಪಡೆಯುತ್ತಾರೆ?
    ಈ ಪರೀಕ್ಷೆಯನ್ನು ನಡೆಸಲು ಮೃತ ವ್ಯಕ್ತಿಯ ವ್ಯಕ್ತಿಯ ಮಗ, ಸಹೋದರರು, ತಂದೆ, ತಾಯಿ ಹಾಗೂ ರಕ್ತ ಸಂಬಂಧಿಕರ ಮಾದರಿಯನ್ನು ಪಡೆಯುತ್ತಾರೆ. ಆದರೆ ಪತ್ನಿ, ಪತಿಯ ಡಿಎನ್‍ಎ ನಿಂದ ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗುತ್ತದೆ. ಸಂಬಂಧಿಕರ ಬಳಿ ಪಡೆದ ಮಾದರಿಯನ್ನು ಮೃತ ವ್ಯಕ್ತಿಯ ದೇಹದ ಡಿಎನ್‍ಎಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ವಿಶೇಷವೆಂದರೆ ಡಿಎನ್‍ಎ ಪರೀಕ್ಷೆಯಲ್ಲೂ ಶೇ.100ಕ್ಕೆ 100 ರಷ್ಟು ಹೊಂದಾಣಿಕೆ ಆಗುವುದಿಲ್ಲ. ಕೇವಲ ಶೇ.60 ರಿಂದ 70 ರಷ್ಟು ಹೊಂದಾಣಿಕೆಯಾಗುತ್ತದೆ. ಈ ಫಲಿತಾಂಶದ ಆಧಾರದಲ್ಲಿ ಮೃತ ದೇಹವನ್ನು ಗುರುತಿಸಲಾಗುತ್ತದೆ.

    ಡಿಎನ್‍ಎ ಪರೀಕ್ಷೆ ಏಕೆ?
    ಸಾಮಾನ್ಯ ಪ್ರಕರಣದಲ್ಲಿ ಡಿಎನ್‍ಎ ಪರೀಕ್ಷೆಯನ್ನು ವ್ಯಕ್ತಿಯ ಗುರುತು ಪತ್ತೆ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇಂತಹ ಘೋರ ದಾಳಿ ಸಂದರ್ಭದಲ್ಲಿ ಮೃತ ವ್ಯಕ್ತಿಯ ದೇಹದ ಭಾಗಗಳು ಛಿದ್ರ ಛಿದ್ರವಾಗಿರುವ ಕಾರಣ ಪರೀಕ್ಷೆ ನಡೆಸುವುದು ಕಡ್ಡಾಯವಾಗುತ್ತದೆ. ಏಕೆಂದರೆ ಆತ್ಮಾಹುತಿ ದಾಳಿ ನಡೆಸಿದ ವ್ಯಕ್ತಿಯ ದೇಹದ ಭಾಗಗಳು ಇಲ್ಲಿ ಲಭ್ಯವಾಗುವುದರಿಂದ ಪೊಲೀಸ್ ತನಿಖೆ ನಡೆಸಲು ಪ್ರಮುಖ ಸಾಕ್ಷಿಯಾಗಿ ಲಭ್ಯವಾಗಲಿದೆ. ಇವುಗಳ ಆಧಾರ ಮೇಲೆಯೇ ಮುಂದಿನ ತನಿಖೆ ಬಹುಬೇಗ ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ ದಾಳಿ ಹಿಂದಿನ ಆರೋಪಿಗಳ ಪತ್ತೆಗೂ ಇವು ನೆರವು ನೀಡಲಿದೆ.

    ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗಿದ್ದು, ಡಿಎನ್‍ಎ ಪರೀಕ್ಷೆ ಸೇರಿದಂತೆ ಇತರೇ ಪರೀಕ್ಷೆಗಳನ್ನು ನಡೆಸಲು ಕಾಲಾವಕಾಶದ ಅಗತ್ಯವಿರುತ್ತದೆ. ವಿದೇಶಾಂಗ ಇಲಾಖೆ ಎಷ್ಟೇ ನಿರಂತರವಾಗಿ ಸಂಪರ್ಕ ಸಾಧಿಸಿ ನಮ್ಮವರ ಬಗ್ಗೆ ಮಾಹಿತಿ ಲಭಿಸಲು ಸಮಯ ಬೇಕಾಗುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

  • ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು

    ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು

    ಕೊಲಂಬೋ: ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.

    ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು ಎಂಬುದಾಗಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    “ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿದೆ.

    ಎನ್‍ಟಿಜೆ ಸಂಘಟನೆ ಮೂಲಭೂತವಾದಿ ಮುಸ್ಲಿಂ ಸಂಘಟನೆಯಯಾಗಿದ್ದು, ಕಳೆದ ವರ್ಷ ಈ ಸಂಘಟನೆ ದೇಶದಲ್ಲಿ ಕಾರ್ಯಪ್ರವೃತ್ತಿ ಆಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸಂಘಟನೆ ಹೆಸರು ಬೆಳಕಿಗೆ ಬಂದಿತ್ತು.

    ಇಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕನಿಷ್ಟ 160 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕೊಲಂಬೋದ ಪ್ರಮುಖ ಚರ್ಚ್ ಮೂರು ಚರ್ಚ್ ಹಾಗೂ 2 ಹೋಟೆಲ್ ಗಳ ಮೇಲೆ ನಡೆದ ದಾಳಿ ಇದಾಗಿದೆ. ಹಲವು ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ನಡೆದ ಭೀಕರ ದಾಳಿ ಇದಾಗಿದ್ದು, ಸ್ಫೋಟದ ಬಗ್ಗೆ ಯಾವುದೇ ಸಂಸ್ಥೆ ಹೊಣೆ ಹೊತ್ತುಕೊಂಡಿಲ್ಲ.

    ಇತ್ತ ದಾಳಿಯಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ಸಹಾಯಕ್ಕಾಗಿ ಭಾರತ ರಾಯಭಾರ ಕಚೇರಿ ಸಹಾಯವಾಣಿಯನ್ನು ಆರಂಭಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಸಹಾಯವಾಣಿ ಸಂಖ್ಯೆ: +94777 903082, +94112 422789

  • ಭಯೋತ್ಪಾದಕರ ತವರು – ದಶಕದ ಬಳಿಕವೂ ಕ್ರಿಕೆಟ್ ಆರಂಭಿಸಲು ಪರದಾಟುತ್ತಿದೆ ಪಾಕ್

    ಭಯೋತ್ಪಾದಕರ ತವರು – ದಶಕದ ಬಳಿಕವೂ ಕ್ರಿಕೆಟ್ ಆರಂಭಿಸಲು ಪರದಾಟುತ್ತಿದೆ ಪಾಕ್

    ಇಸ್ಲಾಮಾಬಾದ್: ಮಾರ್ಚ್ 03, 2009 ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಭಯೋತ್ಪಾದಕ ಪಡೆ ದಾಳಿ ನಡೆಸಿತ್ತು. ಇದಾಗಿ ಇಂದಿಗೆ 10 ವರ್ಷಗಳು ಕಳೆದರು ಕೂಡ ಪಾಕಿಸ್ತಾನದಲ್ಲಿ ಮತ್ತೆ ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳನ್ನು ಆರಂಭಿಸಲು ಹರಸಾಹಸ ಪಡುತ್ತಿದೆ.

    ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರ್‍ನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.

    ಇದಾದ ಬಳಿಕ 2015ರ ವರೆಗೂ ಮತ್ತೆ ಆ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಆದರೆ 2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಪಾಕ್ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.

    2011ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಇದುವರೆಗೂ 12 ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳು ಮಾತ್ರ ನಡೆಸಿದ್ದು, ಇದರಲ್ಲಿ 9 ಸಮಿತಿ ಪಂದ್ಯಗಳಾಗಿವೆ. ಪ್ರಮುಖವಾಗಿ ಜಿಂಬಾಬ್ವೆ 5 ಪಂದ್ಯ, ವೆಸ್ಟ್ ಇಂಡೀಸ್/ ವಲ್ರ್ಡ್ ಇಲೆವೆನ್ ಮತ್ತು ಶ್ರೀಲಂಕಾ 1 ಪಂದ್ಯದಲ್ಲಿ ಮಾತ್ರ ಆಡಿದೆ.

    ಕೊನೆಯದಾಗಿ ಒತ್ತಡದ ಮೇಲೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಪಾಕ್‍ನ ಕರಾಚಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 3 ಟಿ20 ಪಂದ್ಯಗಳನ್ನು ಆಡಿದೆ. ಆದರೆ ಇದರ ಬೆನ್ನಲ್ಲೇ ನಡೆಯಬೇಕಿದ್ದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಸರಣಿಯನ್ನು ಆಡಲು ಎರಡು ರಾಷ್ಟ್ರ ನಿರಾಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ಟ್ವೀಟ್‍ನಿಂದ ಪ್ರೀತಿ ಶುರು – ಭಾರತೀಯ ವರನನ್ನು ವರಿಸಿದ ಶ್ರೀಲಂಕಾ ವಧು

    ಪ್ರಧಾನಿ ಮೋದಿ ಟ್ವೀಟ್‍ನಿಂದ ಪ್ರೀತಿ ಶುರು – ಭಾರತೀಯ ವರನನ್ನು ವರಿಸಿದ ಶ್ರೀಲಂಕಾ ವಧು

    ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ನಿಂದಾಗಿ ಪ್ರೇಮಾಂಕರುವಾಗಿ ಭಾರತ ಮತ್ತು ಶ್ರೀಲಂಕಾದ ಜೋಡಿಯೊಂದು ಸಪ್ತಪದಿ ತುಳಿದಿದೆ.

    ಶ್ರೀಲಂಕಾ ಯುವತಿ ಹಂಸಿನಿ ಎದಿರೀಸಿಂಘೆ(25) ಪಂಜಾಬ್ ನ ಕುಚೋರ್ದ್ ಗ್ರಾಮದ ನಿವಾಸಿ ಗೋವಿಂದ್ ಮಹೇಶ್ವರಿ(26) ಫೆಬ್ರವರಿ 10 ರಂದು ಮದುವೆಯಾಗಿದ್ದಾರೆ. ಮಧ್ಯ ಪ್ರದೇಶದ ಮಂದಸೋರ್ ನಲ್ಲಿ ಈ ವಿಶೇಷ ಮದುವೆ ನಡೆದಿದೆ.

    ಪ್ರೀತಿ ಹುಟ್ಟಿದ್ದು ಹೇಗೆ?
    ಪ್ರಧಾನಿ ಮೋದಿ ಅವರು 2015ರಲ್ಲಿ ಒಂದು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್ ಅನ್ನು ಹಂಸಿನಿ ಸಹ ಲೈಕ್ ಮಾಡಿದ್ದಾರೆ. ಬಳಿಕ ಗೋವಿಂದ್ ಹಂಸಿನಿಯನ್ನು ಟ್ವೀಟ್ ಮೂಲಕ ಹಿಂಬಾಲಿಸಿದ್ದು, ಅಂದಿನಿಂದಲೂ ಅವರಿಬ್ಬರು ಸ್ನೇಹಿತರಾದರು. ದಿನಕಳೆದಂತೆ ಪರಸ್ಪರ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಕಾಲ ಮೆಸೇಜ್ ಮತ್ತು ವಿಡಿಯೋ ಮೂಲಕ ಇಬ್ಬರು ಸಂವಹನ ಮಾಡುತ್ತಿದ್ದರು. ಕೊನೆಗೆ ಈ ಜೋಡಿ 2017ರಲ್ಲಿ ಪರಸ್ಪರ ಭೇಟಿಯಾಗಿದ್ದರು.

    ಹಂಸಿನಿ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಯಲು ಫಿಸಿಯೋಥೆರಪಿ ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದರು. ಇತ್ತ ಗೋವಿಂದ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. ಇಬ್ಬರು ತಮ್ಮ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರವನ್ನು ತಿಳಿಸಿದ್ದರು. ಕುಟುಂಬದವರು ಸಮ್ಮತಿ ಸೂಚಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    “ನನ್ನ ಮಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದಿದ್ದಳು. ಬಳಿಕ ಭಾರತೀಯ ಹುಡುಗನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ಇಬ್ಬರನ್ನು ಶ್ರೀಲಂಕಾಕ್ಕೆ ಕರೆದುಕೊಂಡು ಬಂದೆವು. ಹುಡುಗ ಕೆಲವು ತಿಂಗಳು ಕಾಲ ನಮ್ಮ ಜೊತೆಯೇ ಇದ್ದರು. ದಿನಕಳೆದಂತೆ ಅವರನ್ನು ಇಷ್ಟಪಡಲು ಆರಂಭಿಸಿದ್ದೆವು. ನಂತರ ಅವರಿಬ್ಬರ ಪ್ರೀತಿಗೆ ಒಪ್ಪಿಗೆ ನೀಡಿದೆವು. ಭಾರತೀಯ ಹುಡುಗನನ್ನು ನಮ್ಮ ಮಗಳು ಆಯ್ಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಹಂಸಿನಿ ಅವರ ತಂದೆ ಹೇಳಿದ್ದಾರೆ.

    “ನಾವಿಬ್ಬರು ವಿಭಿನ್ನ ಸಂಸ್ಕೃತಿಗಳಿಗೆ ಸೇರಿದವರಾಗಿದ್ದೆವು. ಆದರೆ ನಾವು ಪರಸ್ಪರ ಪ್ರೀತಿಸುತ್ತೇವೆ. ಹೀಗಾಗಿ ನಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದೇವೆ ಎಂದು ಹಂಸಿನಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv