ಕೊಲಂಬೋ: ಪಾಕಿಸ್ತಾನದ ವಿರುದ್ಧ ನಿಗದಿಯಾಗಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ನಿರಾಕರಿಸಿದ್ದಾರೆ ಎಂದು ಸೋಮವಾರ ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆಗೆ ಕಾರಣ ಭಾರತವೇ ಎಂದು ಪಾಕಿಸ್ತಾನದ ಸಚಿವ ಫವಾದ್ ಹುಸೇನ್ ದೂರಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಏಕದಿನ ತಂಡದ ನಾಯಕ ದಿಮುತ ಕರುಣಾರತ್ನೆ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿ ಭದ್ರತಾ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಆಟಗಾರರ ಈ ತೀರ್ಮಾನದಿಂದ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿತ್ತು. ಆದರೆ ಆಟಗಾರರ ಸ್ಪಷ್ಟನೆಯ ನಡುವೆಯೂ ಪಾಕ್ ತನ್ನ ರಾಜಕೀಯ ಕುತಂತ್ರಿ ಬುದ್ಧಿಯನ್ನು ಪ್ರದರ್ಶಸಿದ್ದು, ಆಟಗಾರರಿಗೆ ಭಾರತ ಬ್ಲ್ಯಾಕ್‍ಮೇಲ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಟೂರ್ನಿಯಲ್ಲಿ ಭಾಗವಹಿಸುವ ತೀರ್ಮಾನವನ್ನು ಕೈಗೊಳ್ಳುವ ಕುರಿತು ಆಟಗಾರರ ನಿರ್ಧಾರವೇ ಅಂತಿಮ ಎಂದು ಹೇಳಿತ್ತು. ಆದರೆ ಶ್ರೀಲಂಕಾ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಭಾರತ ಕಾರಣ ಎಂದಿರುವ ಪಾಕ್ ಸಚಿವ ಫವಾದ್ ಹುಸೇನ್, ಶ್ರೀಲಂಕಾ ಕ್ರಿಕೆಟ್ ಆಟಗಾರರಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದು, ಪಾಕ್ ಟೂರ್ನಿಯಿಂದ ಹೊರ ನಡೆಯದಿದ್ದರೆ ಮುಂದಿನ ಐಪಿಎಲ್ ಟೂರ್ನಿಯಿಂದ ಹೊರಗೆ ಹಾಖುವುದಾಗಿ ಬೆದರಿಕೆ ಹಾಕಿದೆ. ಇದು ಭಾರತ ಕ್ರೀಡಾ ಸಚಿವಾಲಯದ ಅತ್ಯಂತ ನೀಚ ಕೃತ್ಯ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
2017 ರಲ್ಲಿ ತಿಸಾರಾ ಪರೇರಾ ನಾಯಕತ್ವ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆ ಬಳಿಕ ಶ್ರೀಲಂಕಾದೊಂದಿಗೆ ಉತ್ತಮ ಕ್ರಿಕೆಟ್ ಸಂಬಂಧ ಸುಧಾರಿಸುವ ನಿರೀಕ್ಷೆಯಲ್ಲಿತ್ತು. ಮುಂದಿನ ನಿಗದಿತ ಕ್ರಿಕೆಟ್ ಟೂರ್ನಿ ಸೆ.27 ರಿಂದ ಆರಂಭವಾಗಲಿದ್ದು, ತಲಾ 3 ಪಂದ್ಯಗಳ ಟಿ2 ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳು ಕರಾಚಿ ಹಾಗೂ ಲಾಹೋರಿನಲ್ಲಿ ನಡೆಯಲಿದೆ. ಉಳಿದಂತೆ 2 ಟೆಸ್ಟ್ ಪಂದ್ಯಗಳ ಅವಧಿ ನಿಗದಿಯಾಗಬೇಕಿದೆ.
ಯಾರೂ ಬರುತ್ತಿಲ್ಲ: ಮಾರ್ಚ್ 03, 2009 ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಭಯೋತ್ಪಾದಕ ಪಡೆ ದಾಳಿ ನಡೆಸಿತ್ತು. ಇದಾಗಿ 10 ವರ್ಷಗಳು ಕಳೆದರೂ ಕೂಡ ಪಾಕಿಸ್ತಾನದಲ್ಲಿ ಮತ್ತೆ ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳನ್ನು ಆರಂಭಿಸಲು ಹರಸಾಹಸ ಪಡುತ್ತಿದೆ.
ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರಿನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.

ಇದಾದ ಬಳಿಕ 2015ರ ವರೆಗೂ ಮತ್ತೆ ಲಾಹೋರ್ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಆದರೆ 2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಉಗ್ರರ ತವರು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.
2011ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಇದುವರೆಗೂ 12 ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯಗಳು ಮಾತ್ರ ನಡೆಸಿದ್ದು, ಇದರಲ್ಲಿ 9 ಸಮಿತಿ ಪಂದ್ಯಗಳಾಗಿವೆ. ಪ್ರಮುಖವಾಗಿ ಜಿಂಬಾಬ್ವೆ 5 ಪಂದ್ಯ, ವೆಸ್ಟ್ ಇಂಡೀಸ್/ ವರ್ಲ್ಡ್ ಇಲೆವೆನ್ ಮತ್ತು ಶ್ರೀಲಂಕಾ 1 ಪಂದ್ಯದಲ್ಲಿ ಮಾತ್ರ ಆಡಿದೆ.
ಕೊನೆಯದಾಗಿ ಒತ್ತಡದ ಮೇಲೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಪಾಕ್‍ನ ಕರಾಚಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ 3 ಟಿ20 ಪಂದ್ಯಗಳನ್ನು ಆಡಿದೆ. ಆದರೆ ಇದರ ಬೆನ್ನಲ್ಲೇ ನಡೆಯಬೇಕಿದ್ದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಸರಣಿಯನ್ನು ಆಡಲು ಎರಡು ರಾಷ್ಟ್ರ ನಿರಾಕರಿಸಿತ್ತು.