Tag: Sri Lanka

  • 6 ಬಾಲ್ 6-ಸಿಕ್ಸ್ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಪೋಲಾರ್ಡ್

    6 ಬಾಲ್ 6-ಸಿಕ್ಸ್ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಪೋಲಾರ್ಡ್

    ಆ್ಯಂಟಿಗಾ: ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೋಲಾರ್ಡ್ ಶ್ರೀಲಂಕಾದ ಬೌಲರ್ ಅಖಿಲ ಧನಂಜಯ್ ಬೌಲಿಂಗ್ ನಲ್ಲಿ 6 ಬಾಲ್ ಗೆ 6 ಸಿಕ್ಸರ್ ಸಿಡಿಸುವ ಮೂಲಕ, ಅಂತರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್ ನಂತರ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    2007 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್ ನ ಬಾಲರ್ ಫ್ಲಿಂಟಾಪ್ ಅವರ 6 ಎಸೆತವನ್ನು ಸಿಕ್ಸರ್ ಗಟ್ಟಿ  ದಾಖಲೆ ನಿರ್ಮಿಸಿದ್ದರು, ಆ ಬಳಿಕ ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ಧ 6 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು.

    ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಪೋಲಾರ್ಡ್ ಮೊದಲು ಫಿಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡರು. ಅವರ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳು ಶ್ರೀಲಂಕಾವನ್ನು 131 ರನ್ ಗಳಿಗೆ ಕಟ್ಟಿಹಾಕಿತು.

    132 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ 3,1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ಗಳಿಸಿತ್ತು ಈ ಹಂತದಲ್ಲಿ ದಾಳಿಗಿಳಿದ ಅಖಿಲ ಧನಂಜಯ ಲೂಯಿಸ್, ಗೇಲ್ ಮತ್ತು ಪೂರನ್ ಅವರ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ನಂತರ ಬ್ಯಾಟಿಂಗ್ ಇಳಿದ ಟಿ-20 ಸ್ಪೇಷಲಿಷ್ಟ್ ಬ್ಯಾಟ್ಸ್‍ಮ್ಯಾನ್ ಕೀರಾನ್ ಪೊಲಾರ್ಡ್ ಅಖಿಲ ಧನಂಜಯ ಅವರ ಆರನೇ ಓವರ್ ನ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್‍ ಗಟ್ಟಿ ಅಬ್ಬರಿಸಿದರು. ಪೊಲಾರ್ಡ್ 38 ರನ್ (11 ಎಸೆತ, 6 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 13.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳನ್ನು ಚೆಸ್ ಮಾಡಿ ಪಂದ್ಯವನ್ನು ಗೆದ್ದುಕೊಂಡಿದೆ.

  • ಕಾಶ್ಮೀರದ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ: ಇಮ್ರಾನ್ ಖಾನ್

    ಕಾಶ್ಮೀರದ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ: ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನಕ್ಕೆ ಕಾಶ್ಮೀರದ ಬಿಕ್ಕಟ್ಟು ಮಾತ್ರ ಇದೆ. ಇದನ್ನು ಭಾರತದೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಚ್ಚರಿ ಮೂಡಿಸಿದ್ದಾರೆ.

    ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ನೇತೃತ್ವದಲ್ಲಿ ನಡೆದ ಶ್ರೀಲಂಕಾ-ಪಾಕಿಸ್ತಾನ ಟ್ರೇಡ್ ಆ್ಯಂಡ್ ಇನ್ವೆಸ್ಟ್‍ಮೆಂಟ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ನಮ್ಮದು ಕಾಶ್ಮೀರ ವಿವಾದ ಮಾತ್ರ ಇರುವುದು. ಮಾತುಕತೆ ಮೂಲಕ ಮಾತ್ರ ಇದನ್ನು ಬಗೆಹರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

    ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳೋಣ ಎಂದು ಕೇಳಿಕೊಂಡಿದ್ದೆ ಎಂದು ಇಮ್ರಾನ್ ಖಾನ್ ಇದೇ ವೇಳೆ ಹೇಳಿದ್ದಾರೆ.

    ನಾನು ಯಶಸ್ವಿಯಾಗಿಲ್ಲ, ಆದರೆ ಅಂತಿಮವಾಗಿ ಪ್ರಜ್ಞೆಯು ಮೇಲುಗೈ ಸಾಧಿಸಲಿದೆ ಎಂಬ ಆಶಾವಾದವನ್ನು ಹೊಂದಿದ್ದೇನೆ. ವ್ಯಾಪಾರ ಸಂಬಂಧಗಳನ್ನು ಸುಧಾರಿಸುವ ಮೂಲಕ ಬಡತನವನ್ನು ನಿಭಾಯಿಸಬಹುದಾಗಿದೆ ಎಂದು ಅವರು ತಿಳಿಸಿದರು.

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬಳಿಕ ಶ್ರೀಲಂಕಾದ ವಿದೇಶಾಂಗ ಸಚಿವಾಲಯ(ಎಂಇಎ) ಪ್ರತಿಕ್ರಿಯಿಸಿ, ಭಯೋತ್ಪಾದನೆ ಹಾಗೂ ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ನಮ್ಮ ಸ್ಥಾನ ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆ, ಹಗೆತನ ಹಾಗೂ ಹಿಂಸಾಚಾರವಿಲ್ಲದ ವಾತಾವರಣದಲ್ಲಿ ಪಾಕಿಸ್ತಾನದೊಂದಿಗಿನ ಸಾಮಾನ್ಯ ನೆರೆಯ ಸಂಬಂಧವನ್ನು ಭಾರತ ಬಯಸುತ್ತದೆ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದರು.

    ಅಚ್ಚರಿಯ ಸಂಗತಿ ಎಂದರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಮಾನ ಭಾರತದ ವಾಯುಪ್ರದೇಶದ ಮೂಲಕ ಶ್ರೀಲಂಕಾಗೆ ಹಾರಲು ಭಾರತ ಸರ್ಕಾರ ಅನುಮತಿ ನೀಡಿದೆ. ಕೊರೊನಾ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದಾರೆ.

  • ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆ – ಇಮ್ರಾನ್‌ ಖಾನ್‌ ಶ್ರೀಲಂಕಾ ಸಂಸತ್‌ ಭಾಷಣ ರದ್ದು

    ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆ – ಇಮ್ರಾನ್‌ ಖಾನ್‌ ಶ್ರೀಲಂಕಾ ಸಂಸತ್‌ ಭಾಷಣ ರದ್ದು

    ಕೊಲಂಬೋ: ಶ್ರೀಲಂಕಾದ ಸಂಸತ್ತಿನಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಭಾಷಣವನ್ನು ರದ್ದು ಮಾಡಲಾಗಿದೆ.

    ಇಮ್ರಾನ್‌ ಖಾನ್‌ಗೆ ಭಾಷಣಕ್ಕೆ ಅನುಮತಿ ನೀಡಿದರೆ ಭಾರತದ ಜೊತೆಗಿನ ಉತ್ತಮ ಸಂಬಂಧ ಹಾಳಾಗಬಹುದು ಎಂಬ ಕಾರಣಕ್ಕೆ ಶ್ರೀಲಂಕಾ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಎಂದು ಶ್ರೀಲಂಕಾದ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈಗಾಗಲೇ ಶ್ರೀಲಂಕಾ ಚೀನಾದ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಭಾರತ ಶ್ರೀಲಂಕಾಗೆ 5 ಲಕ್ಷ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಿದೆ.

    ಅವಕಾಶ ನೀಡಿಲ್ಲ ಯಾಕೆ?
    ಇಮ್ರಾನ್‌ ಈಗಾಗಲೇ ವಿಶ್ವದ ವೇದಿಕೆಯಲ್ಲಿ ಭಾರತ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಬಂದಿದ್ದಾರೆ. ಈ ನಡುವೆ ಶ್ರೀಲಂಕಾದಲ್ಲಿ ಭಾಷಣಕ್ಕೆ ಅನುಮತಿ ನೀಡಿದರೆ ಇಲ್ಲೂ ಭಾರತದ ವಿರುದ್ದ ಆರೋಪ ಮಾಡಿದರೆ ಭಾರತದ ಜೊತೆಗಿನ ಸಂಬಂಧ ಹಾಳಾಗಬಹುದು ಎಂಬ ಮಾತು ಕೇಳಿ ಬಂದಿತ್ತು.

    ಈ ಕಾರಣದ ಜೊತೆ ಶ್ರೀಲಂಕಾದಲ್ಲಿ ಬೌದ್ಧರು ಮತ್ತು ಮುಸ್ಲಿಮರ ನಡುವೆ ಈಗ ಘರ್ಷಣೆಗಳು ನಡೆಯುತ್ತಿದೆ. ಭಾಷಣಕ್ಕೆ ಅವಕಾಶ ನೀಡಿದರೆ ಬೌದ್ಧ ಧರ್ಮದವರು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

  • ಜೈಲಿನಲ್ಲಿ ಗಲಾಟೆ- 8 ಕೈದಿಗಳು ಸಾವು, 37 ಜನರಿಗೆ ಗಾಯ

    ಜೈಲಿನಲ್ಲಿ ಗಲಾಟೆ- 8 ಕೈದಿಗಳು ಸಾವು, 37 ಜನರಿಗೆ ಗಾಯ

    ಕೊಲಂಬೊ: ಶ್ರೀಲಂಕಾ ಜೈಲಿನಲ್ಲಿ ನಡೆದ ಗಲಾಟೆಯ ಪರಿಣಾಮ 8 ಕೈದಿಗಳು ಸಾವನ್ನಪ್ಪಿದ್ದು, 37 ಜನರಿಗೆ ಗಾಯವಾಗಿರುವ ಘಟನೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದಿದೆ.

    ಕೊಲಂಬೋದ ಹೊರವಲಯದಲ್ಲಿರುವ ಜೈಲಿನಲ್ಲಿ ಭಾನುವಾರ ರಾತ್ರಿ ಗಲಾಟೆ ಆಗಿದೆ. ಈ ವೇಳೆ ಕೆಲವು ಕೈದಿಗಳು ಬಲವಂತವಾಗಿ ಬಾಗಿಲು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಗಲಭೆಯ ನಡುವೆ ಎಂಟು ಮಂದಿ ಕೈದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 37 ಜನಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲಂಬೋದಿಂದ 15 ಕಿ.ಮೀ ದೂರದಲ್ಲಿರುವ ಮಹರಾ ಜೈಲಿನಲ್ಲಿ 10,000 ಜನ ಕೈದಿಗಳಿರುವ ಸೌಲಭ್ಯವಿದೆ. ಆದರೆ 26,000ಕ್ಕೂ ಮೀರಿದ ಕೈದಿಗಳನ್ನು ಇರಿಸಲಾಗಿದೆ. ಕೋವಿಡ್ ಕಾರಣ ಕೆಲವರು ಅಸ್ವಸ್ಥರಾಗಿದ್ದರು. ಈ ಜೈಲಿನಲ್ಲಿದ್ದ 175ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಕೆಲವರು ಪ್ರಾಣ ಕಳೆದುಕೊಂಡಿದ್ದರು. ಪ್ರಾಣಭೀತಿಯಿಂದಾಗಿ ಆಕ್ರೋಶಗೊಂಡು ಗಲಾಟೆ ನಡೆದಿತ್ತು ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನ್ ಹೇಳಿದ್ದಾರೆ.

    ಇದೇ ವೇಳೆ ಅನೇಕರು ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಆ ಸಮಯದಲ್ಲಿ ಅವರನ್ನು ತಡೆಯಲು ಹೋದ ಇತರರು ಸೇರಿ ಒಟ್ಟು 37 ಜನರು ಗಾಯಗೊಂಡಿದ್ದಾರೆ. ಕೈದಿಗಳು ಅಡುಗೆ ಕೋಣೆ ಮತ್ತು ದಾಖಲೆ ಪತ್ರಗಳಿರುವ ಕೋಣೆಗೆ ಬೆಂಕಿ ಹಚ್ಚಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರನ್ನು ಸ್ಥಳೀಯ ರಾಗಮಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

    ಕೊರೊನಾವೈರಸ್ ಹರಡುವುದನ್ನು ತಡೆಯಲು ಶ್ರೀಲಂಕಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಾಂಕ್ರಾಮಿಕ ವೈರಸ್‍ನಿಂದ 22,988 ಪ್ರಕರಣಗಳು ಮತ್ತು 109 ಸಾವುಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

  • ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ: ಜೆಡಿಎಸ್ ಶಾಸಕ ಸುರೇಶ್ ಗೌಡ

    ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ: ಜೆಡಿಎಸ್ ಶಾಸಕ ಸುರೇಶ್ ಗೌಡ

    – ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗ್ತಿದೆ

    ಮಂಡ್ಯ: ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿ ಎಂದು ಸರ್ಕಾರ ಸಲಹೆ ಕೊಡಬೇಕೆಂದಿದ್ದೇನೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ಹೇಳಿದ್ದಾರೆ.

    ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದರೋ ಅವರೆಲ್ಲ ಅಲ್ಲಿ ದುಡ್ಡು ಕಳೆಯುತ್ತಿದ್ದಾರೆ. ಕರ್ನಾಟಕದ ದುಡ್ಡೆಲ್ಲ ಶ್ರೀಲಂಕಾ ಕ್ಯಾಸಿನೋಗೆ ಹೋಗುತ್ತಿದೆ. ಕ್ಯಾಸಿನೋವನ್ನು ಕರ್ನಾಟಕದಲ್ಲೇ ಓಪನ್ ಮಾಡಿ ನಮ್ಮ ದುಡ್ಡು ನಮ್ಮಲ್ಲೆ ಉಳಿಸಿ ಎಂದು ಸರ್ಕಾರ ಸಲಹೆ ಕೊಡಬೇಕೆಂದಿದ್ದೇನೆ ಎಂದರು.

    ಜಮೀರಣ್ಣ ಒಬ್ಬರೇ ಅಲ್ಲ ಕ್ಯಾಸಿನೋಗೆ ಒಂದು ಟೀಂ ಹೋಗುತ್ತೆ. ಎಲ್ಲರ ಪಾಸ್‍ಪೋರ್ಟ್ ತೆಗೆದುನೋಡಿದರೆ ಎಲ್ಲ ಮಾಹಿತಿ ಸಿಕ್ಕಿಬಿಡುತ್ತೆ. ದುಡ್ಡು ಇದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲ ವಸ್ತುಗಳು ಕ್ಯಾಸಿನೋದಲ್ಲಿ ಸಿಗುತ್ತೆ. ರಾಜಕಾರಣಿಗಳು ಡ್ರಗ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ನಾವು ಜಮೀರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ನಾವು ಕಾಂಗ್ರೆಸ್ ಪರ ಇದ್ದು ಸರ್ಕಾರ ಮಾಡಿದ್ದವರು. ನಾವು ಯಾಕೆ ಅವರನ್ನು ಟಾರ್ಗೆಟ್ ಮಾಡ್ತೀವಿ ಇದೆಲ್ಲವೂ ಊಹಾಪೋಹಗಳು ಎಂದು ತಿಳಿಸಿದ್ದಾರೆ.

    ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೆಜಿ ಹಳ್ಳಿ, ಡಿಜೆ ಹಳ್ಳಿ ಅಂತ ಶುರು ಮಾಡಿತ್ತು. ಈಗ ಅದು ಮುಗಿದ ಬಳಿಕ ಡ್ರಗ್ ವಿಚಾರ ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ ಆದರೆ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ. ಈ ಹಿಂದೆ ಡ್ರಗ್ ದಂಧೆ ಇರುವುದು ಪೋಲಿಸರಿಗೆ ಗೊತ್ತಿರಲಿಲ್ವಾ? ಆಗ ಏಕೆ ಸುಮ್ಮನಿದ್ದರು ಎಂದು ಸುರೇಶ್ ಗೌಡ ಪ್ರಶ್ನೆ ಮಾಡಿದ್ದಾರೆ.

  • ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ: ರೇವಣ್ಣ

    ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ: ರೇವಣ್ಣ

    – ಜನ ಸಾಯುತ್ತಿದ್ದಾರೆ ಕೊರೊನಾ ಬಗ್ಗೆ ತೋರಿಸಿ
    – ಮಾಧ್ಯಮಗಳ ವಿರುದ್ಧ ಹೆಚ್‍ಡಿಆರ್ ಬೇಸರ

    ಹಾಸನ: ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ. ದಯಮಾಡಿ ದಿನ ಬರುತ್ತಿರುವುದನ್ನು ನಿಲ್ಲಿಸಿ ಎಂದು ಮಾಧ್ಯಮಗಳ ವಿರುದ್ಧ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳಲ್ಲಿ ಬರುತಿರುವ ಡ್ರಗ್ಸ್ ದಂಧೆ ಬಗ್ಗೆ ತೋರಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಅದರ ಬಗ್ಗೆ ಒಂದು ವಾರ ತೋರಿಸಿದ್ದೀರಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ನಿಜ. ಹಾಗಾದರೆ ಈ ರಾಜ್ಯದಲ್ಲಿ ಬೇರೆ ಏನೂ ಇಲ್ಲವೇ? ಕೊರೊನಾದಿಂದ ದಿನ ಜನರು ಸಾಯುತ್ತಿದ್ದಾರೆ. ಹಲವು ಸಮಸ್ಯೆಗಳಿವೆ. ಅದರ ಬಗ್ಗೆ ತೋರಿಸಿ ಎಂದರು.

    ರಾಜ್ಯದ ಎಲೆಕ್ಟ್ರಾನಿಕ್ ಮೀಡಿಯಾಗೆ ಒಳ್ಳೇ ಹೆಸರಿದೆ. ಮಾಧ್ಯಮದವರು ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಬೇಕು. ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಪ್ಪು ಮಾಡಿದಾಗ ಮಾಧ್ಯಮ ಎಚ್ಚರಿಸಬೇಕು. ಜೊತೆಗ ಹಾಸನ ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಸರ್ಕಾರಕ್ಕೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ರೇವಣ್ಣ ಕಿಡಿಕಾರಿದ್ದಾರೆ.

    ಇದೇ ವೇಳೆ ಜಮೀರ್ ಅಹಮದ್ ಜೊತೆ ಜೆಡಿಎಸ್ ಶಾಸಕರು ಶ್ರೀಲಂಕಾಕ್ಕೆ ಹೋಗಿ ಬಂದ ವಿಚಾರದ ಬಗ್ಗೆ ಮಾತನಾಡುತ್ತ, ನನಗೆ ಹಾಸನ, ಹೊಳೆನರಸೀಪುರ, ಬೆಂಗಳೂರು ಯಾವುದಾದರೂ ಮೀಟಿಂಗ್ ಇದ್ದಾಗ ಹೋಗುತ್ತೇನೆ. ಆದರೆ ಶ್ರೀಲಂಕಾ ಕ್ಯಾಸಿನೋ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಸಿನೋ ನಡೆಸುವವರೇ ಸರ್ಕಾರ ಉರುಳಿಸಿದ್ದು ಮುಗಿದು ಹೋದ ವಿಚಾರ ಎಂದು ಹೇಳಿದ್ದಾರೆ.

  • ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದರೆ, ಸಂಜನಾ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆಯ ಗೆಳೆಯ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಪ್ರಕಟವಾಗುತ್ತಿದೆ.

    ಬೆಂಗಳೂರಿನಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಎನ್‍ಸಿಬಿ ಪೊಲೀಸರ ಬಂಧಿಸಿದ್ದರು. ಇವರ ಕೊಟ್ಟ ಮಾಹಿತಿ ಮೇರೆಗೆ ಈಗ ನಟಿ ಸಂಜನಾಗೆ ಅಪ್ತನಾಗಿದ್ದ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಓರ್ವ ಡ್ರಗ್ ಡೀಲರ್ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ರಾಹುಲ್ ಬೆಂಗಳೂರಿನ ಬನಶಂಕರಿ ನಗರದ ನಿವಾಸಿಯಾಗಿದ್ದಾನೆ. ಈತ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಈ ಕ್ಯಾಸಿನೋಗೆ ಗ್ರಾಹಕರನ್ನು ಪ್ಯಾಕೇಜ್‍ನಲ್ಲಿ ಕಳಿಸಿಕೊಡುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಜೊತೆಗೆ ಈತ ಪಾರ್ಟಿಗಳನ್ನು ಆಯೋಜನೆ ಮಾಡೋದರಲ್ಲಿ ಪಂಟರ್ ಆಗಿದ್ದ, ಹೀಗೆ ಒಂದು ಪಾರ್ಟಿಯಲ್ಲೇ ಸಂಜನಾಗೆ ಪರಿಚಯವಾಗಿದ್ದ. ಅಂದಿನಿಂದ ಯಾವುದೇ ಪಾರ್ಟಿಯಿದ್ದರೂ ಸಂಜನಾಗೆ ಆಹ್ವಾನ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.

    ಶ್ರೀಲಂಕಾದಲ್ಲಿ ನಡೆದಿದ್ದ ಕ್ಯಾಸಿನೋ ಪಾರ್ಟಿಗೆ ಸಂಜನಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ನಟಿಯರನ್ನು ರಾಹುಲ್ ಕರೆಸಿದ್ದ. ಸದ್ಯ ರಾಹುಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.

    ಈತನ ಬಗ್ಗೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ್ದ ಸಂಜನಾ, ಆತ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ತುಂಬ ಒಳ್ಳೆಯವನು ಮತ್ತು ಜ್ಯಾಲಿ ಮನುಷ್ಯ. ರಾಹುಲ್ ಆ ತರದ ಹುಡುಗ ಅಲ್ಲ. ನನಗೆ ಸಹೋದರಿಲ್ಲ, ಪ್ರತಿ ವರ್ಷ ನಾನು ಆತನಿಗೆ ರಾಖಿ ಕಟ್ಟುತ್ತೇನೆ. ಆತನನ್ನು ಪೊಲೀಸರು ಏಕೆ ಕರೆದುಕೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅಸಲಿಗೆ ಸ್ಟಾರ್ ನಟ ನಟಿಯರಲ್ಲದೆ ರಾಜಕಾರಣಿಗಳ ಮಕ್ಕಳೂ ಕೂಡ ರಾಹುಲ್‌ಗೆ ಆಪ್ತರು. ರಾಹುಲ್ ಗೆ ಶ್ರೀಲಂಕದಾ ಕ್ಯಾಸಿನೋ ಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗ ಕುಸಲ್ ಮೆಂಡಿಸ್ ಅರೆಸ್ಟ್

    ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗ ಕುಸಲ್ ಮೆಂಡಿಸ್ ಅರೆಸ್ಟ್

    ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಶ್ರೀಲಂಕಾ ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ.

    ಶ್ರೀಲಂಕಾದ ರಾಜಧಾನಿ ಕೊಲಂಬೊದ ಹೊರ ಭಾಗದಲ್ಲಿ ಸೈಕಲ್ ಸವಾರನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದ ಅಪಘಾತ ಪ್ರಕರಣದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕುಸಲ್ ಮೆಂಡಿಸ್ ಶ್ರೀಲಂಕಾದ ಪುನದುರಾ ಪ್ರದೇಶದಲ್ಲಿ ತನ್ನ ಎಸ್‍ಯುವಿ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿ ಸೈಕಲ್ ಓಡಿಸುತ್ತಿದ್ದ ಓರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕುಸಲ್ ಮಂಡಿಸ್ ಅವರನ್ನು ಬಂಧಿಸಿದ್ದು, ಅವರ ಕಾರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಮಾರ್ಚ್‍ನಲ್ಲಿ ಶ್ರೀಲಂಕಾದಲ್ಲಿಯೇ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದ 16 ಜನರಲ್ಲಿ ಮೆಂಡಿಸ್ ಕೂಡ ಇದ್ದರು. ಆದರೆ ಕೊರೊನ ವೈರಸ್ ಭೀತಿಯಿಂದ ಈ ಸರಣಿಯನ್ನು ರದ್ದುಮಾಡಲಾಗಿತ್ತು. ಜೊತೆಗೆ ಶ್ರೀಲಂಕಾದಲ್ಲಿ ವರ್ಷಕ್ಕೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಎಂದು ವರದಿ ಪ್ರಕಟಿಸಿದೆ.

    ಈ ಹಿಂದೆ 2003ರಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಕೌಶಲ್ ಲೋಕುರಾಚಿ ಅವರು ಕೂಡ ಮಹಿಳಾ ಪಾದಚಾರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು. ಆಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಕೌಶಲ್ ಅವರನ್ನು ನಾಲ್ಕು ವರ್ಷ ಕ್ರಿಕೆಟಿನಿಂದ ಅಮಾನತು ಮಾಡಿ ಜೈಲಿಗೆ ಕೂಡ ಕಳುಹಿಸಲಾಗಿತ್ತು.

  • 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    – ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು

    ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

    ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.

    ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.

    ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.

    ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.

  • ಬ್ರಾಡ್ಮನ್ ಬಿಟ್ರೆ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಬಹುದು- ಸಂಗಕ್ಕಾರ

    ಬ್ರಾಡ್ಮನ್ ಬಿಟ್ರೆ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಬಹುದು- ಸಂಗಕ್ಕಾರ

    ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ಅವರು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ.

    ಸಂಗಕ್ಕಾರ ‘ಆರ್‍ಕೆ ಶೋ’ನಲ್ಲಿ ಮಾತನಾಡುತ್ತಾ, “ಕ್ರಿಕೆಟ್ ದಂತಕಥೆ, ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ ಬಿಟ್ಟರೆ ವಿರಾಟ್ ಕೊಹ್ಲಿ ಎರಡನೇ ಶ್ರೇಷ್ಠ ಕ್ರಿಕೆಟರ್ ಆಗಬಹುದು. ಆ ಹಂತವನ್ನು ತಲುಪುವ ಸಂಪೂರ್ಣ ಸಾಮರ್ಥ್ಯ ಹಾಗೂ ಪರಿಶ್ರಮವನ್ನು ಅವರು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

    ಕೊಹ್ಲಿಯ ಫಿಟ್‍ನೆಸ್ ಬಗ್ಗೆ ಪ್ರತಿಕ್ರಿಯಿಸಿದ ಸಂಗಕ್ಕಾರ, ನಾನು ಆಟದ ಬಗ್ಗೆ ವಿರಾಟ್ ಉತ್ಸಾಹವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಇನ್ನೂ ಮೈದಾನದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬಹುದು. ಕೊಹ್ಲಿ ದೈಹಿಕವಾಗಿ, ಮಾನಸಿಕವಾಗಿ ತುಂಬಾ ಪ್ರಬಲರಾಗಿದ್ದಾರೆ. ಹೀಗಾಗಿ ಡಾನ್ ಬ್ರಾಡ್ಮನ್ ನಂತರ ಎರಡನೇ ಶ್ರೇಷ್ಠ ಆಟಗಾರನಾಗಲು ಅವರಿಗೆ ಅವಕಾಶವಿದೆ ಎಂದಿದ್ದಾರೆ.

    ಪ್ರಸ್ತುತ ಕ್ರಿಕೆಟ್‍ನಲ್ಲಿ ಅವರಂತಹ ಆಟಗಾರರು ಬಹಳ ಕಡಿಮೆ ಇದ್ದಾರೆ. ನನ್ನ ವೃತ್ತಿಜೀವನದಲ್ಲಿ ನಾನು ನೋಡಿದ ಎಲ್ಲ ಆಟಗಾರರಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ. ಅವರಲ್ಲಿ ನಾನು ಹೆಚ್ಚು ಇಷ್ಟಪಡುವ ವಿಷಯವೆಂದರೆ ಕ್ರೀಡೆಗಳ ಬಗ್ಗೆ ಅವರ ಉತ್ಸಾಹ. ವಿರಾಟ್ ನಾಯಕನಾಗಿರಲಿ ಅಥವಾ ಆಟಗಾರನಾಗಿರಲಿ ತಂಡವನ್ನು ಗೆಲ್ಲಿಸುವ ಹೋರಾಟದ ವೇಳೆ ಭಾವನೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಬ್ಯಾಟಿಂಗ್ ಸಮಯದಲ್ಲಿ ಹೆಚ್ಚು ಅಪಾಯಕಾರಿ ಹೊಡೆತಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗಿದ್ದರೂ ಅದು ಪರಿಣಾಮಕಾರಿಯಾಗಿ ಕಾಣುತ್ತದೆ ಎಂದು ಸಂಗಾಕ್ಕರ ಹೊಗಳಿದ್ದಾರೆ.

    ಸಂಗಕ್ಕಾರ ಅವರಿಗೂ ಮುನ್ನ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ ಅವರು ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ವಿರಾಟ್ ವಿರುದ್ಧ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಭೇಟಿಯಾಗುವುದು ಹಾಗೂ ಕ್ರಿಕೆಟ್ ಜರ್ನಿಯನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಅದ್ಭುತವಾಗಿದೆ” ಎಂದಿದ್ದರು.

    ಡಾನ್ ಬ್ರಾಡ್ಮನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಆದಾಗ್ಯೂ ಅವರು ಟೆಸ್ಟ್ ಕ್ರಿಕೆಟ್ ಮಾತ್ರ ಆಡಿದ್ದಾರೆ. ಅದರಲ್ಲೂ ಅವರ ಸರಾಸರಿ 99.94 ಆಗಿದೆ. ಇದನ್ನು ಸಾಧಿಸುವುದು ತುಂಬಾ ಕಷ್ಟ. ಆದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ರನ್‍ಗಳ ವಿಷಯದಲ್ಲಿ ಕೊಹ್ಲಿ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ.

    ವಿರಾಟ್ ಟೆಸ್ಟ್ ನಲ್ಲಿ 27 ಶತಕಗಳನ್ನು ಗಳಿಸಿದ್ದಾರೆ. ಇತ್ತ ಡಾನ್ ಬ್ರಾಡ್ಮನ್ 52 ಟೆಸ್ಟ್ ಗಳಲ್ಲಿ 99.94 ಸರಾಸರಿಯಲ್ಲಿ 6,996 ರನ್ ಗಳಿಸಿದ್ದಾರೆ. ಕೊಹ್ಲಿ ಎಲ್ಲಾ ಮೂರು ಮಾದರಿಯಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ 20) ಸರಾಸರಿ 50ಕ್ಕಿಂತ ಹೆಚ್ಚು ಹೊಂದಿದ್ದಾರೆ. ಜೊತೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಒಟ್ಟುಗೂಡಿಸಿ 70 ಶತಕಗಳನ್ನು ಗಳಿಸಿದ್ದಾರೆ.