Tag: Sri Lanka

  • ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ; ಮಾರ್ಕ್ಸ್‌ವಾದಿ ನಾಯಕ ಅನುರಾ ಕುಮಾರ ದಿಸ್ಸಾನಾಯಕೆಗೆ ಗೆಲುವು

    ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ; ಮಾರ್ಕ್ಸ್‌ವಾದಿ ನಾಯಕ ಅನುರಾ ಕುಮಾರ ದಿಸ್ಸಾನಾಯಕೆಗೆ ಗೆಲುವು

    – ಹಾಲಿ ಅಧ್ಯಕ್ಷ ರನಿಲಾ ವಿಕ್ರಮಸಿಂಘೆಗೆ ಸೋಲು

    ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಶಾಸಕ ಅನುರಾ ಕುಮಾರ ದಿಸ್ಸಾನಾಯಕೆ (Anura Kumara Dissanayake) ಗೆಲುವು ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ರನಿಲಾ ವಿಕ್ಸಮಸಿಂಘೆ (Ranil Wickremesinghe) ಸೋಲನುಭವಿಸಿದ್ದಾರೆ.

    ದಿಸ್ಸಾನಾಯಕೆ ಅವರು 42.31 ಶೇಕಡಾ ಮತಗಳನ್ನು ಗಳಿಸಿದ್ದಾರೆ. ಎಡಪಂಥೀಯ ಒಕ್ಕೂಟವಾದ ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಯ ನಾಯಕ ದಿಸ್ಸಾನಾಯಕೆ ಗೆಲುವು ದಾಖಲಿಸಿದ್ದಾರೆ. ಅಧಿಕೃತ ಫಲಿತಾಂಶ ಪ್ರಕಟವಾಗಬೇಕಿದೆ. ಇದನ್ನೂ ಓದಿ: Quad Summit | ಮೋದಿ ದ್ವಿಪಕ್ಷೀಯ ಮಾತುಕತೆ – MQ-9B ಡ್ರೋನ್ ಖರೀದಿ, ರಕ್ಷಣಾತ್ಮಕ ವಿಚಾರಗಳ ಕುರಿತು ಚರ್ಚೆ

    ಕೊಲಂಬೊದ ವಸಾಹತುಶಾಹಿ ಯುಗದ ಅಧ್ಯಕ್ಷೀಯ ಕಾರ್ಯದರ್ಶಿ ಕಚೇರಿಯಲ್ಲಿ ಸೋಮವಾರ ದಿಸ್ಸಾನಾಯಕೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಅವರ ಗೆಲುವು, ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆಯ ನಿರಾಕರಣೆಯನ್ನು ಸೂಚಿಸುತ್ತದೆ. 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಜೆವಿಪಿಗೆ ಈ ಗೆಲುವು ಪ್ರಮುಖ ರಾಜಕೀಯ ತಿರುವನ್ನು ನೀಡಿದೆ.

    ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾದ ಜನರು ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ಮತ ಚಲಾಯಿಸಿದ್ದರು. ಶೇ.76 ರಷ್ಟು ಮತದಾನವಾಗಿತ್ತು. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!

    ಎರಡು ವರ್ಷಗಳ ಹಿಂದೆ ಗೊಟಬಯ ರಾಜಪಕ್ಸ ಆಡಳಿತದ ವಿರುದ್ಧ ಜನರು ದಂಗೆಯೆದ್ದಿದ್ದರು. ಪರಿಣಾಮವಾಗಿ ರಾಜಪಕ್ಸ ಪಲಾಯನಗೈದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು.

  • ತಮಿಳುನಾಡಿನ ಮೀನುಗಾರಿಕಾ ಬೋಟ್‍ಗೆ ಲಂಕಾ ನೌಕಾಪಡೆಯ ಹಡಗು ಡಿಕ್ಕಿ – ನಾಲ್ವರಿಗೆ ಗಾಯ

    ತಮಿಳುನಾಡಿನ ಮೀನುಗಾರಿಕಾ ಬೋಟ್‍ಗೆ ಲಂಕಾ ನೌಕಾಪಡೆಯ ಹಡಗು ಡಿಕ್ಕಿ – ನಾಲ್ವರಿಗೆ ಗಾಯ

    – ಗಾಯಗೊಂಡ ಮೀನುಗಾರರನ್ನು 6 ಗಂಟೆ ವಿಚಾರಣೆ ನಡೆಸಿದ ಲಂಕಾ ಸೇನೆ

    ಚೆನ್ನೈ: ಶ್ರೀಲಂಕಾ ನೌಕಾಪಡೆಯ (Sri Lanka Navy) ಹಡಗು ತಮಿಳುನಾಡಿನ (Tamil Nadu) ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೀನುಗಾರರು ಗಾಯಗೊಂಡಿದ್ದಾರೆ.

    ಗಾಯಗೊಂಡ ಮೀನುಗಾರರನ್ನು ಶಕ್ತಿವೇಲ್, ದೇವರಾಜ್, ಕಾರ್ತಿಕೇಯನ್ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಅವರನ್ನು ನಾಗಪಟ್ಟಣಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾಲ್ವರು ಮೀನುಗಾರರು ಎರಡು ದಿನಗಳ ಹಿಂದೆ ಸಮುದ್ರಕ್ಕೆ ಇಳಿದಿದ್ದರು. ಮಂಗಳವಾರ ರಾತ್ರಿ ಅವರು ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಗೆ ಶ್ರೀಲಂಕಾ ನೌಕಾಪಡೆಯ ನೌಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅದು ಮಗುಚಿ ಬಿದ್ದಿದೆ ಎಂದು ಗಾಯಗೊಂಡ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.

    ಈ ವೇಳೆ ಅವರು ಗಾಯಗೊಂಡಿದ್ದರೂ ಸಹ, ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ಅವರನ್ನು ಸುಮಾರು 6 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಶ್ರೀಲಂಕಾ ನೌಕಾಪಡೆ ಗಾಯಗೊಂಡ ಮೀನುಗಾರರನ್ನು ಸ್ಥಳಕ್ಕೆ ಆಗಮಿಸಿದ ತಮಿಳುನಾಡಿನ ಇತರ ಮೀನುಗಾರರಿಗೆ ಹಸ್ತಾಂತರಿಸಿದೆ. ಬಳಿಕ ಸಮುದ್ರದ ಮಧ್ಯದಲ್ಲಿ ಮುಳುಗಿದ ದೋಣಿಯನ್ನು ಹೊರತೆಗೆದು ಇತರರ ಸಹಾಯದಿಂದ ಮೀನುಗಾರರನ್ನು ದಡಕ್ಕೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಂತ್ರಸ್ತ ಮೀನುಗಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅದರ ಆಧಾರದ ಮೇಲೆ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  • ಅಫ್ಘಾನ್‌, ಪಾಕ್‌, ಶ್ರೀಲಂಕಾ ಆಯ್ತು.. ಈಗ ಬಾಂಗ್ಲಾ; ಭಾರತದ ಸುತ್ತ ಏನಾಗ್ತಿದೆ?

    ಅಫ್ಘಾನ್‌, ಪಾಕ್‌, ಶ್ರೀಲಂಕಾ ಆಯ್ತು.. ಈಗ ಬಾಂಗ್ಲಾ; ಭಾರತದ ಸುತ್ತ ಏನಾಗ್ತಿದೆ?

    – ಭಾರತದ ನೆರೆ ರಾಷ್ಟ್ರಗಳಲ್ಲಿ ಆಗಿದ್ದೇನು?.. ಒಂದು ಹಿನ್ನೋಟ!

    ಳೆದ ಮೂರು ವರ್ಷಗಳಿಂದ ದಕ್ಷಿಣ ಏಷ್ಯಾದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಭಾರತದ ನೆರೆಹೊರೆ ರಾಷ್ಟ್ರಗಳಲ್ಲಿ ಅಧಿಕಾರದ ನಿರ್ವಾತ, ರಾಜಕೀಯ ಕ್ರಾಂತಿಗಳು, ಸಾಮೂಹಿಕ ಪ್ರತಿಭಟನೆಗಳಿಂದ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಇದರಿಂದ ಆಡಳಿತ ಬದಲಾವಣೆಗೆ ಸಾಕ್ಷಿಯಾಗಿವೆ. ಅಫ್ಘಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಬಿಕ್ಕಟ್ಟು ಎದುರಾಗಿತ್ತು. ಈಗ ಬಾಂಗ್ಲಾದೇಶದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

    2021 ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಶಪಡಿಸಿಕೊಂಡಾಗಿನಿಂದ, 2022 ರ ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದವರೆಗೆ.. ಶ್ರೀಲಂಕಾದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ 2022 ರ ಜುಲೈನಲ್ಲಿ ಗೋತಬಯ ರಾಜಪಕ್ಸೆ ದೇಶದಿಂದ ಪಲಾಯನದಿಂದ, ಬಾಂಗ್ಲಾದೇಶದಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ (ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ) ಪ್ರಕ್ಷುಬ್ಧತೆವರೆಗೆ.. ಏನೇನಾಯಿತು ಎಂಬುದು ನಿಜಕ್ಕೂ ಕುತೂಹಲಕಾರಿ. ದಕ್ಷಿಣ ಏಷ್ಯಾದ ರಾಜಕೀಯ ಡೈನಾಮಿಕ್ಸ್ ಕೇವಲ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ತಲೆಕೆಳಗಾಗಿದೆ.

    ಅತ್ತ ಭಾರತ ಸೂಪರ್ ಪವರ್ ಆಗುತ್ತಿದ್ದರೆ, ಇತ್ತ ನೆರೆಹೊರೆ ರಾಷ್ಟ್ರಗಳ ಪರಿಸ್ಥಿತಿ ಢೋಲಾಯಮಾನವಾಗುತ್ತಿದೆ. ಅಷ್ಟಕ್ಕೂ ಭಾರತದ ಸುತ್ತಾ ಏನಾಗ್ತಿದೆ? ನೆರೆಹೊರೆ ದೇಶಗಳಲ್ಲಿ ಏನೇನಾಯಿತು? ಕಾರಣವೇನು? ಇದರಿಂದಾಗಬಹುದಾದ ಪರಿಣಾಮಗಳೇನು? ಬನ್ನಿ ತಿಳಿಯೋಣ.

    ಅಫ್ಘಾನಿಸ್ತಾನದಿಂದ ಯುಎಸ್ ಔಟ್.. ತಾಲಿಬಾನ್ ಇನ್
    ಆಗ ತಾನೇ ಅಮೆರಿಕದಲ್ಲಿ ಜೋ ಬೈಡೆನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಾಗಲೇ ಬೈಡೆನ್ ತನ್ನ ದೇಶದ ಆರ್ಥಿಕ, ಸೇನಾ ಹಿತದೃಷ್ಟಿಯಿಂದ ಒಂದು ಘೋಷಣೆಯನ್ನು ಮಾಡಿಯೇಬಿಟ್ಟರು. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದರು. ನುಡಿದಂತೆ ಸೇನೆ ವಾಪಸ್ ಕರೆಸಿಕೊಂಡರು. ಅಫ್ಘಾನಿಸ್ತಾನದಲ್ಲಿನ ರಾಜಕೀಯ ಕ್ರಾಂತಿಯು 2021 ರಲ್ಲಿ ತಾಲಿಬಾನ್‌ನ ಮಿಲಿಟರಿ ಆಕ್ರಮಣದೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಆಗಸ್ಟ್ 15 ರಂದು ಅವರು ಕಾಬೂಲ್ ಅನ್ನು ವಶಪಡಿಸಿಕೊಂಡರು. ಇದು 2001 ರಲ್ಲಿ ಯುಎಸ್ ಆಕ್ರಮಣದ ನಂತರ ಜಾರಿಯಲ್ಲಿದ್ದ ಯುಎಸ್ ಬೆಂಬಲಿತ ಆಫ್ಘನ್ ಸರ್ಕಾರದ ಅಂತ್ಯಕ್ಕೆ ಕಾರಣವಾಯಿತು.

    2021ರ ಮೇ 1 ರಂದು ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ, ಇತ್ತ ತಾಲಿಬಾನ್ ಆಕ್ರಮಣ ನಡೆಸಿತು. ತಾಲಿಬಾನ್ ದೇಶಾದ್ಯಂತ ಪ್ರಮುಖ ಪ್ರಾಂತೀಯ ರಾಜಧಾನಿಗಳು ಮತ್ತು ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಬಂತು. ಇದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಯಿತು. ಒಂದಷ್ಟು ಪ್ರತಿರೋಧದೊಂದಿಗೆ ಕಾಬೂಲ್ ಪತನವೂ ಆಯಿತು. ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಹೆಲಿಕಾಪ್ಟರ್‌ ತುಂಬಾ ಹಣ ತುಂಬಿಕೊಂಡು ಪರಾರಿಯಾದರು. ಇದು ಮತ್ತೊಮ್ಮೆ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸ್ಥಾಪನೆಗೆ ಕಾರಣವಾಯಿತು. ದೇಶವನ್ನು ತಾಲಿಬಾನ್ ವಶಪಡಿಸಿಕೊಂಡ ಪರಿಯನ್ನು ಕಂಡು ಅಮೆರಿಕ ಗುಪ್ತಚರ ಮತ್ತು ರಕ್ಷಣಾ ಏಜೆನ್ಸಿ ಕೂಡ ಅಚ್ಚರಿಗೊಂಡಿತ್ತು.

    ತಾಲಿಬಾನ್‌ ಅಫ್ಘಾನ್‌ ಪ್ರವೇಶಿಸುತ್ತಿದ್ದಂತೆ ಹುಚ್ಚಾಟ ಮೆರೆಯಿತು. ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ತಾಲಿಬಾನಿಗಳು ಧ್ವಂಸಗೊಳಿಸಿದರು. ಮಹಿಳೆಯರ ವಸ್ತ್ರದ ಅಂಗಡಿಗಳು, ಮೇಕಪ್‌ ಶಾಪ್‌ಗಳನ್ನು ಪುಡಿಗಟ್ಟಿದರು. ಸಿನಿಮಾ ನಟಿಯರು, ಮಾಡೆಲ್‌ಗಳ ಫ್ಲೆಕ್ಸ್‌ಗಳನ್ನು ಹರಿದುಹಾಕಿದರು. ಅಂಗಡಿಗಳಲ್ಲಿನ ಆಹಾರ ಪದಾರ್ಥಗಳನ್ನು ಸೇವಿಸಿದರು. ಆಡಳಿತ ಕಚೇರಿಗಳನ್ನು ವಶಕ್ಕೆ ಪಡೆದರು. ಯುಎಸ್‌ ಸೇನೆ ಬಿಟ್ಟು ಹೋಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡರು. ತಾಲಿಬಾನ್‌ಗಳ ಆಕ್ರಮಣಕಾರಿ ಪ್ರವೇಶದಿಂದ ಭಯಭೀತರಾದ ಜನರು ದೇಶ ತೊರೆಯಲು ಮುಂದಾದರು. ಸಾವಿರಾರು ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣಕ್ಕೆ ಧಾವಿಸಿದರು. ವಿಮಾನ ತುಂಬಿದ್ದರೂ ಜನ ಬಿಡಲಿಲ್ಲ. ಟೇಕಾಪ್‌ ಆಗಿದ್ದ ವಿಮಾನದಿಂದ ಬಿದ್ದು ಕೆಲವರು ಸಾವನ್ನಪ್ಪಿದ ಘಟನೆ ಕೂಡ ನಡೆಯಿತು. ಅಫ್ಘಾನ್‌ ಅನ್ನು ತಾಲಿಬಾನಿಗಳು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡರು.

    ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಭೀಕರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಯೋತ್ಪಾದಕ-ಸಂಬಂಧಿತ ಘಟನೆಗಳ ವಿಚಾರವಾಗಿ ಪಾಕಿಸ್ತಾನದೊಂದಿಗೂ ಸಂಬಂಧ ಹದಗೆಟ್ಟಿದೆ. ಕಾಬೂಲ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಪದೇ ಪದೇ ದೂಷಿಸಿದೆ. ಇದು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಭಾರೀ ಮತ್ತು ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದೆ.

    ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ದೇಶದ ಆರ್ಥಿಕತೆ ಅಂದಾಜು 30% ಕುಸಿತ ಕಂಡಿದ್ದು, ಗಣನೀಯವಾಗಿ ಸಂಕುಚಿತಗೊಂಡಿದೆ. 28 ಮಿಲಿಯನ್‌ಗಿಂತಲೂ (2.8 ಕೋಟಿ) ಹೆಚ್ಚು ಜನರಿಗೆ ಅಥವಾ ಜನಸಂಖ್ಯೆಯ ಮೂರನೇ ಎರಡರಷ್ಟು ಜನರಿಗೆ ತುರ್ತು ಮಾನವೀಯ ನೆರವು ಬೇಕಾಗಿದೆ. 17 ಮಿಲಿಯನ್ (1.2 ಕೋಟಿ) ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ತಾಲಿಬಾನ್‌ನ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವು ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿಷೇಧಗಳನ್ನು ಒಳಗೊಂಡಂತೆ ಮಹಿಳೆಯರ ಹಕ್ಕುಗಳ ಮೇಲೆ ತೀವ್ರವಾದ ನಿರ್ಬಂಧಗಳಿಗೆ ಕಾರಣವಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

    ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯು ಬಹುಮಟ್ಟಿಗೆ ವಿಮರ್ಶಾತ್ಮಕವಾಗಿದೆ. ಅನೇಕ ದೇಶಗಳು ನಿರ್ಬಂಧಗಳನ್ನು ವಿಧಿಸುತ್ತವೆ ಮತ್ತು ತಾಲಿಬಾನ್ ಸರ್ಕಾರದ ಮಾನ್ಯತೆಯನ್ನು ತಡೆಹಿಡಿಯುತ್ತವೆ. ತಾಲಿಬಾನ್ ಆಡಳಿತವನ್ನು ಅಧಿಕೃತ ಅಫ್ಘಾನಿಸ್ತಾನ ಸರ್ಕಾರವೆಂದು ಭಾರತ ಸರ್ಕಾರ ಇನ್ನೂ ಅಧಿಕೃತವಾಗಿ ಗುರುತಿಸದಿದ್ದರೂ, ವ್ಯಾಪಾರ ಸಂಬಂಧಗಳು ಸ್ಥಿರವಾಗಿ ಮುಂದುವರೆದಿದೆ.

    ಪಾಕ್‌ನಲ್ಲಿ ಇಮ್ರಾನ್ ಖಾನ್ ಪದಚ್ಯುತಿ
    2022 ರ ಏಪ್ರಿಲ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವುದರೊಂದಿಗೆ ಪಾಕಿಸ್ತಾನದ ರಾಜಕೀಯದಲ್ಲಿ ಬದಲಾವಣೆಯಾಯಿತು. 2018 ರಲ್ಲಿ ಅಧಿಕಾರಕ್ಕೆ ಬಂದ ಖಾನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದ ಮೂಲಕ ತೆಗೆದುಹಾಕಲಾಯಿತು. ಇದು ಮಿಲಿಟರಿ ಮತ್ತು ವಿರೋಧ ಪಕ್ಷಗಳನ್ನು ಒಳಗೊಂಡ ರಾಜಕೀಯ ತಂತ್ರಗಾರಿಕೆಯಾಗಿತ್ತು. ಸೇನಾ ನೇಮಕಾತಿಗಳು ಮತ್ತು ವಿದೇಶಾಂಗ ನೀತಿ ನಿರ್ಧಾರಗಳ ವಿಚಾರವಾಗಿ ಖಾನ್ ಅವರ ಮಿಲಿಟರಿಯೊಂದಿಗಿನ ಸಂಬಂಧವು ಹದಗೆಟ್ಟಿತು.

    ಈ ಕಾರಣದಿಂದ ಮಿಲಿಟರಿಯ ಬೆಂಬಲ ಹಿಂತೆಗೆದುಕೊಂಡಿದ್ದು, ಅವರ ರಾಜಕೀಯ ಅವನತಿಗೆ ಕಾರಣವಾಯಿತು. ಅವರ ಉಚ್ಚಾಟನೆಯ ನಂತರ ಹಲವಾರು ಕಾನೂನು ಸವಾಲುಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತಿದ್ದಂತೆ ಖಾನ್ ಅವರ ರಾಜಕೀಯ ಹೋರಾಟಗಳು ತೀವ್ರಗೊಂಡವು. ಭ್ರಷ್ಟಾಚಾರ ಮತ್ತು ಮಿಲಿಟರಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಆರೋಪದ ಮೇಲೆ ಇಮ್ರಾನ್ ಖಾನ್‌ರನ್ನು 2023 ರ ಆಗಸ್ಟ್‌ನಲ್ಲಿ ಬಂಧಿಸಲಾಯಿತು. ಇದು ಅವರ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು.

    ದೇಶದಲ್ಲಿ ರಾಜಕೀಯ ಉದ್ವಿಗ್ನತೆ ನಡುವೆ. ಆರ್ಥಿಕತೆಯ ಅನಿಶ್ಚಿತತೆ ತಲೆದೋರಿತು. ಹಣದುಬ್ಬರ, ಕರೆನ್ಸಿ ಮೌಲ್ಯ ಕುಸಿತ, ವಿವಿಧ ಯೋಜನೆಗಳಿಗೆ ಚೀನಾದಿಂದ ಪಡೆದಿರುವ ಬೃಹತ್ ಸಾಲದಿಂದಾಗಿ ದೇಶ ಬಿಕ್ಕಟ್ಟಿಗೆ ಸಿಲುಕಿತು. ರಾಜಕೀಯ ಅಸ್ಥಿರತೆಯು ಆರ್ಥಿಕ ಚೇತರಿಕೆಯ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ದೇಶದಲ್ಲಿ ಆಹಾರ ಅಭದ್ರತೆ ಕಾಡಿತು. ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳ ಬೆಲೆ ಗಗನಕ್ಕೇರಿತು. ಆಹಾರ ಪದಾರ್ಥಕ್ಕಾಗಿ ಜನ ಮುಗಿಬೀಳುವ ಪರಿಸ್ಥಿತಿ ಎದುರಾಯಿತು. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ, ಗೋದಿ ಹಿಟ್ಟಿನ ಮೂಟೆಗಳಿಗಾಗಿ ಜನ ಮುಗಿಬೀಳುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

    ಶ್ರೀಲಂಕಾ ಉದ್ವಿಗ್ನತೆ; ಅಧ್ಯಕ್ಷ ರಾಜಪಕ್ಸೆ ಪಲಾಯನ
    2022ರ ಜುಲೈನಲ್ಲಿ ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಜನರೇ ಧಂಗೆಯೆದ್ದ ಘಟನೆ ನಡೆಯಿತು. ದೇಶಾದ್ಯಂತ ನಡೆದ ಸಾಮೂಹಿಕ ಪ್ರತಿಭಟನೆ ಪರಿಣಾಮದಿಂದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು. ಕೋವಿಡ್-19 ಸಾಂಕ್ರಾಮಿಕ ರೋಗ, ಹೆಚ್ಚುತ್ತಿರುವ ಜಾಗತಿಕ ಇಂಧನ ಬೆಲೆಗಳು, ಚೀನಾಕ್ಕೆ ಹೆಚ್ಚುತ್ತಿರುವ ಸಾಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಸಮರ್ಪಕ ನಿರ್ವಹಣೆಯಿಂದ ದೇಶ ಬಿಕ್ಕಟ್ಟಿಗೆ ಸಿಲುಕಿತು. ಇದು ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಆಹಾರ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಹಣದುಬ್ಬರವು ಹೆಚ್ಚಾಗಿ ಸರ್ಕಾರವು ವಿದ್ಯುತ್ ಕಡಿತ ಮತ್ತು ಸೀಮಿತವಾಗಿ ಇಂಧನ ಮಾರಾಟದಂತಹ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದು ಜನರನ್ನು ಮತ್ತಷ್ಟು ಕೆರಳಿಸಿತು.

    ಪ್ರತಿಭಟನೆಗಳು ಶಾಂತಿಯುತವಾಗಿ ಪ್ರಾರಂಭವಾದವು. ನಂತರ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಚಳವಳಿಯಾಗಿ ರೂಪುಗೊಂಡಿತು. ಕೆರಳಿದ ಜನ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದರು. ಮಿಲಿಟರಿಯ ಯಾವುದೇ ಪ್ರತಿರೋಧಗಳಿಗೂ ಜಗ್ಗಲಿಲ್ಲ. ಪ್ರಧಾನಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು. ಅಲ್ಲಿ ಸಿಕ್ಕಸಿಕ್ಕ ವಸ್ತುಗಳು, ಹಣವನ್ನು ಲೂಟಿ ಮಾಡಿದರು. ಆಟವಾಡಿದರು, ಸೋಫಾ ಮೇಲೆ ಹೊರಳಾಡಿದರು. ನಿವಾಸದಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದು ಹುಚ್ಚಾಟ ಮೆರೆದರು. ರಾಜಪಕ್ಸೆ ಅವರ ನಿರ್ಗಮನದ ನಂತರ, ರನಿಲ್ ವಿಕ್ರಮಸಿಂಘೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತು. ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಕೋರಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸಲು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

    ಬಾಂಗ್ಲಾ ಬಿಕ್ಕಟ್ಟು; ಪ್ರಧಾನಿ ರಾಜೀನಾಮೆ – ಭಾರತಕ್ಕೆ ಪಲಾಯನ
    ಬಾಂಗ್ಲಾದಲ್ಲೂ ಬಿಕ್ಕಟ್ಟು ಎದುರಾಗಿದೆ. 2024ರ ಆಗಸ್ಟ್ 5 ರಿಂದ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ತೀವ್ರ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದೇ ವೇಳೆ ಹಿಂದೂಗಳನ್ನು ಗುರಿಯಾಗಿ ಹಲವೆಡೆ ಹಿಂಸಾಚಾರ ನಡೆದಿದೆ.

    ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.30 ಮೀಸಲಾತಿ ಕಲ್ಪಿಸುವ ನಿರ್ಧಾರವು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಯಿತು. ಸಾವಿರಾರು ಸಂಖ್ಯೆಯಲ್ಲಿ ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತು, ಬಾಂಗ್ಲಾದ ಸುಪ್ರೀಂ ಕೋರ್ಟ್ ಶೇ.30 ರಿಂದ ಶೇ.5ಕ್ಕೆ ಮೀಸಲಾತಿ ಪ್ರಮಾಣ ಇಳಿಸಿತು. ಆದರೆ ಬಾಂಗ್ಲಾ ಪ್ರಧಾನಿ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರ ನಡೆಸಿದರು. ಪರಿಣಾಮವಾಗಿ ಹಸೀನಾರು ರಾಜೀನಾಮೆ ನೀಡಿ ಪಲಾಯನ ಮಾಡಿದರು.

    ದೊಣ್ಣೆಗಳನ್ನು ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು ಸಿಕ್ಕಸಿಕ್ಕದ್ದನ್ನೆಲ್ಲ ಧ್ವಂಸ ಮಾಡಿದರು. ಪ್ರತಿಮೆಗಳನ್ನು ನೆಲಕ್ಕುರುಳಿಸಿದರು. ಬೋಟ್‌ಗಳಲ್ಲಿ ವಿಹಾರ ಮಾಡಿ ಮೋಜು-ಮಸ್ತಿ ಮಾಡಿದರು. ಅಂಗಡಿ, ಶಾಪ್‌ಗಳ ಮೇಲೆ ದಾಳಿ ನಡೆಸಿದರು. ವಸ್ತುಗಳನ್ನೆಲ್ಲ ಲೂಟಿ ಮಾಡಿದರು. ಪ್ರಧಾನಿ ಅಧಿಕೃತ ನಿವಾಸಕ್ಕೆ ನುಗ್ಗಿ ವಸ್ತುಗಳನ್ನು ದೋಚಿದರು. ಮಾಡಿದ್ದ ಅಡುಗೆಯನ್ನೆಲ್ಲ ಭಕ್ಷಿಸಿದರು. ಸೋಫಾ ಮೇಲೆ ಬಿದ್ದು ಹೊರಳಾಡಿದರು. ಈ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ದೇಶದಲ್ಲಿ ಸೇನಾಡಳಿತ ಜಾರಿಗೊಳಿಸಲಾಗಿತ್ತು. ನಂತರ ಮಧ್ಯಂತರ ಸರ್ಕಾರ ರಚನೆಯಾಯಿತು.

    ಬಾಂಗ್ಲಾದಲ್ಲಿ ಕ್ಷಿಪ್ರ ಕಾಂತಿ ಹಿನ್ನೋಟ
    1975: ಸೇನಾ ಕ್ರಾಂತಿಯಲ್ಲಿ ದೇಶದ ಮೊದಲ ಪ್ರಧಾನಿ ಶೇಖ್ ಮುಜೀಬುರ್ ರಹಮಾನ್ (ಶೇಖ್ ಹಸೀನಾ ತಂದೆ) ಮತ್ತು ಕುಟುಂಬ ಸದಸ್ಯರ ಹತ್ಯೆಯಾಗಿತ್ತು. ಸೇನಾ ಆಡಳಿತ ಜಾರಿಗೆ ಬಂದಿತ್ತು. ನಂತರ ಜನರಲ್ ಜಿಯಾಉರ್ ರೆಹಮಾನ್ ಅಧಿಕಾರಕ್ಕೆ.

    1981: ಚಿತ್ತಗಾಂಗ್ ನಗರಲ್ಲಿನ ಸರ್ಕಾರಿ ಅತಿಥಿಗೃಹಕ್ಕೆ ನುಗ್ಗಿದ ಬಂಡುಕೋರರಿಂದ ಜಿಯಾಉರ್ ರೆಹಮಾನ್ ಹತ್ಯೆ ಮಾಡಲಾಯಿತು.

    1982: ರೆಹಮಾನ್ ಉತ್ತರಾಧಿಕಾರಿ ಅಬ್ದುಸ್ ಸತ್ತಾರ್ ಅವರನ್ನು ಹುನೇಸ್ ಮುಹಮ್ಮದ್ ಇರ್ಷಾದ್ ನೇತೃತ್ವದ ತಂಡ ರಕ್ತರಹಿತ ಕ್ರಾಂತಿ ಮೂಲಕ ಪದಚ್ಯುತಿಗೊಳಿಸಿತು. ಮುಖ್ಯ ಸೇನಾ ಆಡಳಿತಾಧಿಕಾರಿಯಾಗಿ ಸತ್ತಾರ್ ಅಧಿಕಾರ ವಹಿಸಿಕೊಂಡರು.

    2007: ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ಸೇನಾ ಕ್ರಾಂತಿ ನಡೆಯಿತು. ಹಂಗಾಮಿ ಸರ್ಕಾರಕ್ಕೆ ಸೇನೆ ಬೆಂಬಲ ನೀಡಿತು.

    2009: ಶೇಖ್ ಹಸೀನಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ವೇತನ ಮತ್ತು ಸೌಲಭ್ಯಗಳ ಬಗ್ಗೆ ಅಸಮಾಧಾನಗೊಂಡಿದ್ದ ಅರೆಸೇನಾ ಪಡೆಯ ಸಿಬ್ಬಂದಿ ಬಂಡಾಯವೆದ್ದು, ಢಾಕಾದಲ್ಲಿ 70 ಜನರ ಹತ್ಯೆಯಾಗಿತ್ತು. ಮೃತಪಟ್ಟವರಲ್ಲಿ ಬಹುತೇಕ ಮಂದಿ ಸೇನಾಧಿಕಾರಿಗಳಾಗಿದ್ದರು. 10ಕ್ಕೂ ಹೆಚ್ಚು ನಗರಗಳಿಗೆ ದಂಗೆ ಹಬ್ಬಿತ್ತು. 6 ದಿನಗಳಲ್ಲಿ ಈ ದಂಗೆಯನ್ನು ನಿಯಂತ್ರಣಕ್ಕೆ ತರಲಾಯಿತು.

    2012: ನಿವೃತ್ತ ಮತ್ತು ಸೇವೆಯಲ್ಲಿದ್ದ ಅಧಿಕಾರಿಗಳು ಮಾಡಿದ ದಂಗೆ ಇದು. ದೇಶಾದ್ಯಂತ ಷರಿಯಾ ಕಾನೂನು ಜಾರಿಗೆ ತರಬೇಕು ಎಂಬ ಅಭಿಯಾನದ ಭಾಗವಾಗಿ ದಂಗೆ ಎದ್ದಿತ್ತು. ಈ ಯತ್ನವನ್ನು ವಿಫಲಗೊಳಿಸಿದ್ದಾಗಿ ಬಾಂಗ್ಲಾ ಸೇನೆ ಹೇಳಿಕೆ.

  • ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

    ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

    ಕೊಲಂಬೊ: ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಬೌಂಡರಿಯೊಂದಿಗೆ ಲಂಕಾ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿತು. ಅಲ್ಲದೇ ಲಂಕಾ ತವರಿನಲ್ಲೇ ಕ್ಲೀನ್‌ ಸ್ವೀಪ್‌ನೊಂದಿಗೆ ಸರಣಿ ಗೆದ್ದುಕೊಂಡಿತು.

    ಗೆಲುವಿಗೆ 138 ರನ್‌ ಗುರಿ ಪಡೆದಿದ್ದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಕೆ 137 ರನ್‌ ಗಳಿಸಿ ಮ್ಯಾಚ್‌ ಟೈನಲ್ಲಿ ನಿಂತಿತು. ಇದರಿಂದ ಮ್ಯಾಚ್‌ ಸೂಪರ್‌ ಓವರ್‌ನತ್ತ ತಿರುಗಿತು. ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ ತಂಡ 2 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿತು. ಆದ್ರೆ ಟೀಂ ಇಂಡಿಯಾ ಪರ ಕಣಕ್ಕಿಳಿದ ನಾಯಕ ಸೂರ್ಯಕುಮಾರ್‌, ಮಹೀಶ್‌ ತೀಕ್ಷಣ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಚಚ್ಚಿ ನೀರು ಕುಡಿದಂತೆ ಮ್ಯಾಚ್‌ ಗೆಲ್ಲಿಸಿದರು.

    ಕೊನೇ 2 ಓವರ್‌ ಥ್ರಿಲ್ಲಿಂಗ್‌:
    138 ರನ್‌ ಗುರಿ ಬೆನ್ನಟ್ಟಿದ್ದ ಲಂಕಾ ತಂಡಕ್ಕೆ ಕೊನೇ 2 ಓವರ್‌ಗಳಲ್ಲಿ ಗೆಲುವಿಗೆ 9 ರನ್‌ ಬೇಕಿತ್ತು. ಆದ್ರೆ 19ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ರಿಂಕು ಸಿಂಗ್‌ 2 ಪ್ರಮುಖ ವಿಕೆಟ್‌ ಕಿತ್ತು, ಕೇವಲ 3 ರನ್‌ ಬಿಟ್ಟುಕೊಟ್ಟರು. ಕೊನೇ ಓವರ್‌ನಲ್ಲಿ 6 ರನ್‌ ಬೇಕಿದ್ದಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಅವರೇ ಖುದ್ದು ಬೌಲಿಂಗ್‌ಗೆ ಇಳಿದರು. ಮೊದಲ ಎಸೆತದಲ್ಲಿ ರನ್‌ ಬಿಟ್ಟುಕೊಡದ ಸೂರ್ಯ 2-3ನೇ ಎಸೆತಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಿತ್ತರು. 4ನೇ ಎಸೆತದಲ್ಲಿ 1 ರನ್‌ ಬಿಟ್ಟುಕೊಟ್ಟರು. 5ನೇ ಎಸೆತದಲ್ಲಿ ರನೌಟ್‌ಗೆ ಸುಲಭ ಸಾಧ್ಯತೆ ಇದ್ದರೂ ಕೊಂಚ ಗಲಿಬಿಲಿಯಿಂದ ಸೂರ್ಯ 2 ರನ್‌ ಕೈಚೆಲ್ಲಿದರು. ಕೊನೇ ಎಸೆತದಲ್ಲಿ ಲಂಕಾ ಬ್ಯಾಟರ್‌ಗಳು 2 ರನ್‌ ಕದಿಯುವಲ್ಲಿ ಯಶಸ್ವಿಯಾದ ಪರಿಣಾಮ ಮ್ಯಾಚ್‌ ಸೂಪರ್‌ ಓವರ್‌ನತ್ತ ತಿರುಗಿತು.

    ಸೂಪರ್ ಓವರ್ ನಿಯಮವೇನು?:
    * ಪ್ರತಿ ತಂಡವು 3 ಬ್ಯಾಟ್ಸ್ ಮೆನ್ ಹಾಗೂ ಓರ್ವ ಬೌಲರನ್ನು ಆಯ್ಕೆ ಮಾಡಬೇಕು.
    * ಇಬ್ಬರು ಆಟಗಾರರು ಔಟ್ ಆದರೆ ತಂಡ ಆಲೌಟ್ ಆದಂತೆ ಲೆಕ್ಕ.
    * ಸೂಪರ್ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿದ ತಂಡ ವಿಜೇತ ಎಂದು ಘೋಷಣೆ
    * ಪ್ರತಿ ತಂಡಕ್ಕೆ 1 ಓವರ್ ಆಡುವ ಅವಕಾಶ

    ಚೇಸಿಂಗ್‌ ಮಾಡಿದ ಲಂಕಾ ಪರ ಆರಂಭಿಕರಾದ ಪಥುಮ್‌ ನಿಸ್ಸಾಂಕ 26ರನ್‌, ಕುಸಲ್‌ ಮೆಂಡಿಸ್‌ 43 ರನ್‌, ಕುಸಲ್‌ ಪೆರೆರಾ 46 ರನ್‌ ಬಾರಿಸಿದರು. ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ರಿಂಕು ಸಿಂಗ್‌, ಸೂರ್ಯಕುಮಾರ್‌ ಯಾದವ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಜೈಸ್ವಾಲ್‌ 10 ರನ್‌, ಶುಭಮನ್‌ ಗಿಲ್‌ 39 ರನ್‌, ಶಿವಂ ದುಬೆ 13 ರನ್‌, ಸೂರ್ಯ 8 ರನ್‌, ರಿಂಕು ಸಿಂಗ್‌ 1 ರನ್‌, ರಿಯಾನ್‌ ಪರಾಗ್‌ 26 ರನ್‌, ವಾಷಿಂಗ್ಟನ್‌ ಸುಂದರ್‌ 25 ರನ್‌ ಹಾಗೂ ರವಿ ಬಿಷ್ಣೋಯಿ 8 ರನ್‌ ಗಳಿಸಿದ್ರೆ ಸಿರಾಜ್‌, ಸಂಜು ಸ್ಯಾಮ್ಸನ್‌ ಶೂನ್ಯ ಸುತ್ತಿದರು.

  • ಟೀಂ ಇಂಡಿಯಾ ಆರ್ಭಟಕ್ಕೆ ಲಂಕಾ ಭಸ್ಮ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ, ಸರಣಿ ಕೈವಶ

    ಟೀಂ ಇಂಡಿಯಾ ಆರ್ಭಟಕ್ಕೆ ಲಂಕಾ ಭಸ್ಮ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ, ಸರಣಿ ಕೈವಶ

    ಕೊಲಂಬೊ: ಸಂಘಟಿತ ಬೌಲಿಂಗ್‌ ಪ್ರದರ್ಶನ, ಯಶಸ್ವಿ, ಸೂರ್ಯ, ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು 2-0 ರಲ್ಲಿ ಗೆದ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.

    ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 161 ರನ್‌ ಬಾರಿಸಿತ್ತು. 162 ರನ್‌ಗಳ ಗುರಿ ಬೆನ್ನತ್ತಿದ ಭಾರತ ಮೊದಲ ಮೂರು ಎಸೆತಗಳಲ್ಲಿ 6 ರನ್‌ ಗಳಿಸುತ್ತಿದ್ದಂತೆ ಮಳೆಯ ಆರ್ಭಟ ಶುರುವಾಯಿತು. ಸುಮಾರು 1 ಗಂಟೆಗಳ ಕಾಲ ಮಳೆಯಾದ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ ಟೀಂ ಇಂಡಿಯಾಕ್ಕೆ 8 ಓವರ್‌ಗಳಲ್ಲಿ 78 ರನ್‌ ಗುರಿ ನೀಡಲಾಯಿತು. ಸ್ಪರ್ಧಾತ್ಮಕ ಗುರಿ ಪಡೆದ ಭಾರತ ಕೇವಲ 6.3 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 81 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

    ಚೇಸಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್‌ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರೆ ಸಂಜು ಸ್ಯಾಮ್ಸನ್‌ ಮೊದಲ ಎಸೆತದಲ್ಲೇ ಗೋಲ್ಡನ್‌ ಡಕ್‌ ಆಗುವ ಮೂಲಕ ಆಘಾತ ನೀಡಿದರು. ನಂತರ ಕ್ರೀಸ್‌ಗಿಳಿದ ಸೂರ್ಯಕುಮಾರ್‌ ಯಾದವ್‌, ಜೈಸ್ವಾಲ್‌ ಜೊತೆಗೂಡಿ ಲಂಕಾ ಬೌಲರ್‌ಗಳಲ್ಲ ಬೆಂಡೆತ್ತಿದರು. 216.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ 12 ಎಸೆತಗಳಲ್ಲಿ ಸ್ಫೋಟಕ 26 ರನ್‌ ಚಚ್ಚಿ ಔಟಾದರು. ಈ ಬೆನ್ನಲ್ಲೇ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಸ್‌ ಬೀಸಿದ ಯಶಸ್ಬಿ ಜೈಸ್ವಾಲ್‌ 15 ಎಸೆತಗಳಲ್ಲಿ 30 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಅಷ್ಟೊತ್ತಿಗಾಗಲೇ ಭಾರತದ ಗೆಲುವಿನ ಹಾದಿ ಸುಗಮನವಾಗಿತ್ತು.

    ನಂತರ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್‌ ಪಾಂಡ್ಯ 9 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿಯೊಂದಿಗೆ ಸ್ಫೋಟಕ 22 ರನ್‌ ಬಾರಿಸಿ ಗೆಲುವು ತಂದುಕೊಟ್ಟರು. ರಿಷಭ್‌ ಪಂತ್‌ 2 ರನ್‌ ಗಳಿಸಿ ಅಜೇಯರಾಗುಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸಿದರು. ಪಥುಮ್‌ ನಿಸ್ಸಾಂಕ 32 ರನ್‌, ಕುಸಲ್‌ ಪೆರೆರಾ ಅಮೋಘ 53 ರನ್‌ (34 ಎಸೆತ, 2 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಮಿಂಚಿದರು. ಇದರೊಂದಿಗೆ ಕುಸಲ್‌ ಮೆಂಡಿಸ್‌ 10 ರನ್‌, ಕಮಿಂಡು ಮೆಂಡಿಸ್‌ 26 ರನ್‌, ಚರಿತ್‌ ಹಸಲಂಕ 14 ರನ್‌, ರಮೇಶ್‌ ಮೆಂಡಿಸ್‌ 12 ರನ್‌ಗಳ ಕೊಡುಗೆ ನೀಡಿದರು.

    ಭಾರತದ ಪರ ರವಿ ಬಿಷ್ಣೋಯಿ 3 ವಿಕೆಟ್‌ ಕಿತ್ತರೆ, ಅರ್ಷ್‌ ದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌, ಹಾರ್ದಿಕ್‌ ಪಾಂಡ್ಯ ತಲಾ 2 ವಿಕೆಟ್‌ ಪಡೆದು ಮಿಂಚಿದರು.

  • ಸೂರ್ಯನ ಆರ್ಭಟಕ್ಕೆ ಲಂಕಾ ದಹನ – ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು; 1-0ರಲ್ಲಿ ಸರಣಿ ಮುನ್ನಡೆ

    ಸೂರ್ಯನ ಆರ್ಭಟಕ್ಕೆ ಲಂಕಾ ದಹನ – ಭಾರತಕ್ಕೆ 43 ರನ್‌ಗಳ ಭರ್ಜರಿ ಗೆಲುವು; 1-0ರಲ್ಲಿ ಸರಣಿ ಮುನ್ನಡೆ

    ಕೊಲಂಬೊ: ಜಿದ್ದಾ-ಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ (Sri Lanka) ವಿರುದ್ಧ 43 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶದೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ (Team India) 1-0 ಮುನ್ನಡೆ ಕಾಯ್ದುಕೊಂಡಿದೆ.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಅಬ್ಬರಿಸುತ್ತಿದ್ದ ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕುವುದು ಭಾರತ ತಂಡಕ್ಕೆ ಸವಾಲಾಗಿತು. ಲಂಕಾ 14 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 140 ರನ್‌ ಬಾರಿಸಿತ್ತು. 15ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್‌ ಪಟೇಲ್‌ 9 ರನ್‌ ಬಿಟ್ಟುಕೊಟ್ಟರೂ ಪ್ರಮುಖ 2 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಇಲ್ಲಿಂದ ಲಂಕಾ ತಂಡದ ಪಥನ ಶುರುವಾಯಿತು.

    ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 213 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿ ಅಬ್ಬರಿಸಿದರೂ 170 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಶ್ರೀಲಂಕಾ ತಂಡ ಉತ್ತಮ ಜೊತೆಯಾಟ ನೀಡುವಲ್ಲಿ ಯಶಸ್ವಿಯಾಗಿತ್ತು. ಮೊದಲ ವಿಕೆಟ್‌ಗೆ ಕುಸಲ್‌ ಮೆಂಡಿಸ್‌ ಹಾಗೂ ಪಥುಮ್‌ ನಿಸ್ಸಾಂಕ ಜೋಡಿ 52 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಕುಸಾಲ್ ಮೆಂಡಿಸ್ 27 ಎಸೆತಗಳಲ್ಲಿ 45 ರನ್‌ ಸಿಡಿಸಿದ್ದರು. ಈ ವೇಳೆ ಅರ್ಷ್‌ದೀಪ್‌ ಸಿಂಗ್‌ ಮೆಂಡಿಸ್‌ ಆಟಕ್ಕೆ ಬ್ರೇಕ್‌ ಹಾಕಿ ಪೆವಿಲಿಯನ್‌ ದಾರಿ ತೋರಿದರು.

    ಇನ್ನೂ 2ನೇ ವಿಕೆಟ್‌ಗೆ ಜೊತೆಯಾಗಿದ್ದ ಕುಸಲ್‌ ಪೆರೇರಾ ಹಾಗೂ ನಿಸ್ಸಾಂಕ ಜೋಡಿ ಸಹ 33 ಎಸೆತಗಳಲ್ಲಿ 56 ರನ್‌ ಬಾರಿಸಿತ್ತು. ಒಂದಂಥದಲ್ಲಿ ಭಾರತ ಸೋತೇಬಿಡುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ ಸಂಘಟಿತ ಪ್ರದರ್ಶನ ನೀಡಿದ ಭಾರತದ ಬೌಲರ್‌ಗಳು ಲಂಕಾ ಬ್ಯಾಟರ್‌ಗಳ ಆರ್ಭಟವನ್ನು ಅಡಗಿಸಿದರು. ನಿಸ್ಸಾಂಕ, ಪೆರೇರಾ ಜೋಡಿ ವಿಕೆಟ್‌ ಪತನದೊಂದಿಗೆ ಲಂಕಾ ಅವನತಿ ಶುರುವಾಯಿತು. ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿ ಪೆವಿಲಿಯನ್‌ ಪೆರೇಡ್‌ ನಡೆಸಲು ಲಂಕನ್ನರು ಶುರು ಮಾಡಿದರು. ಅಂತಿಮವಾಗಿ ಲಂಕಾ 170 ರನ್‌ಗಳಿಗೆ ಆಲೌಟ್‌ ಆಯಿತು.

    ಶ್ರೀಲಂಕಾ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಪಥುಮ್‌ ನಿಸ್ಸಾಂಕ 79 ರನ್‌ (48 ಎಸೆತ, 4 ಸಿಕ್ಸರ್‌, 7 ಬೌಂಡರಿ), ಮೆಂಡಿಸ್‌ 45 ರನ್‌ (27 ಎಸೆತ, 1 ಸಿಕ್ಸರ್‌, 7 ಬೌಂಡರಿ), ಕುಸಾಲ್‌ ಪೆರೇರಾ 20 ರನ್‌ ಹಾಗೂ ಕುಮುಂಡು ಮೆಂಡಿಸ್‌ 12 ರನ್‌ ಕೊಡುಗೆ ನೀಡಿದರು.

    ಟೀಂ ಇಂಡಿಯಾ ಪರ 1.5 ಓವರ್‌ಗಳಲ್ಲಿ ಕೇವಲ 5 ರನ್‌ ಬಿಟ್ಟುಕೊಟ್ಟ ರಿಯಾನ್‌ ಪರಾಗ್‌ 3 ವಿಕೆಟ್‌ ಕಿತ್ತರೆ, ಅರ್ಷ್‌ದೀಪ್‌ ಸಿಂಗ್‌, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಬ್ಯಾಟರ್‌ಗಳು ಅಬ್ಬರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಜೋಡಿ ಮೊದಲ ವಿಕೆಟ್​ಗೆ 36 ಎಸೆತಗಳಲ್ಲಿ ಸ್ಫೋಟಕ 76 ರನ್‌ ಬಾರಿಸಿತ್ತು. ಶುಭಮನ್‌ ಗಿಲ್‌ 16 ಎಸೆತಗಳಲ್ಲಿ 34 ರನ್‌ ಚಚ್ಚಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 20 ಎಸೆತಗಳಲ್ಲಿ 40 ರನ್‌ ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಲಂಕನ್ನರನ್ನು ಚೆಂಡಾಡಿದ ಸೂರ್ಯಕುಮಾರ್‌ ಯಾದವ್‌ ಹಾಗೂ ರಿಷಭ್‌ ಪಂತ್‌ ಜೋಡಿ 3ನೇ ವಿಕೆಟ್‌ಗೆ 43 ಎಸೆತಗಳಲ್ಲಿ 76 ರನ್‌ ಪೇರಿಸಿತ್ತು. ಪರಿಣಾಮ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಟೀಂ ಇಂಡಿಯಾ ಪರ ನಾಯಕ ಸೂರ್ಯಕುಮಾರ್‌ ಯಾದವ್‌ 58 ರನ್‌ (26 ಎಸೆತ, 2 ಸಿಕ್ಸರ್‌, 8 ಬೌಂಡರಿ), ರಿಷಭ್‌ ಪಂತ್‌ 49 ರನ್‌ (33 ಎಸೆತ, 1 ಸಿಕ್ಸರ್‌, 6 ಬೌಂಡರಿ), ಯಶಸ್ವಿ ಜೈಸ್ವಾಲ್‌ 40 ರನ್‌ ಹಾಗೂ ಶುಭಮನ್‌ ಗಿಲ್‌ 34 ರನ್‌ ಬಾರಿಸಿದರು.

  • ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಎಡಗೈಗೆ ಗಾಯ – ಮಹಿಳಾ ಏಷ್ಯಾಕಪ್‌ನಿಂದ ಔಟ್‌

    ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಎಡಗೈಗೆ ಗಾಯ – ಮಹಿಳಾ ಏಷ್ಯಾಕಪ್‌ನಿಂದ ಔಟ್‌

    ಕೊಲೊಂಬೊ: ಟೀಂ ಇಂಡಿಯಾ (Team India) ಮಹಿಳಾ ತಂಡದ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ (Shreyanka Patil) ಎಡಗೈಗೆ ಗಾಯವಾಗಿದ್ದು, ಮಹಿಳಾ ಏಷ್ಯಾ ಕಪ್ 2024 ನಿಂದ ಹೊರಗುಳಿದಿದ್ದಾರೆ.

    ಶ್ರೀಲಂಕಾದ (Sri Lanka) ಡಂಬುಲ್ಲಾದಲ್ಲಿರುವ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮಹಿಳಾ ಏಷ್ಯಾ ಕಪ್ 2024 ರ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು, ಯುಎಇ ತಂಡದೊಂದಿಗೆ ಸೆಣಸಲಿದ್ದಾರೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್‌? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್‌ ಪಂತ್‌?

    ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ, ಶ್ರೇಯಾಂಕಾ ಎಡಗೈಯ ನಾಲ್ಕನೇ ಬೆರಳಿಗೆ ಗಾಯವಾಗಿದೆ ಎಂದು ತಿಳಿಸಿದೆ. ಶ್ರೇಯಾಂಕಾ ಬದಲಿಗೆ ವುಮೆನ್ ಇನ್ ಬ್ಲೂ ತಂಡದಲ್ಲಿ ತನುಜಾ ಕನ್ವರ್ (21) ಆಡಲಿದ್ದಾರೆ.

    ದಂಬುಲ್ಲಾದಲ್ಲಿ ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಯುವ ಆಟಗಾರ್ತಿ ತನ್ನ 3.2 ಓವರ್‌ಗಳಲ್ಲಿ 14 ರನ್‌ಗಳನ್ನು ಬಿಟ್ಟು ಎರಡು ವಿಕೆಟ್ ಕಿತ್ತಿದ್ದರು. ಇದನ್ನೂ ಓದಿ: Women’s Asia Cup 2024: ಸಿಂಹಿಣಿಯರ ಅಬ್ಬರಕ್ಕೆ ಪಾಕ್ ಧೂಳಿಪಟ – ಭಾರತಕ್ಕೆ ಗೆಲುವಿನ ಶುಭಾರಂಭ!

  • ಲಂಕಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ – ಸೂರ್ಯನಿಗೆ T20 ನಾಯಕನ ಪಟ್ಟ!

    ಲಂಕಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ – ಸೂರ್ಯನಿಗೆ T20 ನಾಯಕನ ಪಟ್ಟ!

    – ಟೀಂ ಇಂಡಿಯಾ ಏಕದಿನ ತಂಡಕ್ಕೆ ಕನ್ನಡಿಗ ಕೆ.ಎಲ್‌ ರಾಹುಲ್‌ ಕಂಬ್ಯಾಕ್‌
    – 2024ರ ಟಿ20 ವಿಶ್ವಕಪ್‌ ವಿಜೇತ ತಂಡದ ಉಪನಾಯಕ ಪಾಂಡ್ಯಗಿಲ್ಲ ಪಟ್ಟ!

    ಮುಂಬೈ: ಇದೇ ಜುಲೈ 27ರಿಂದ ಶ್ರೀಲಂಕಾ (Sri Lanka) ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸವು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯೂ ಆಯೋಜನೆಗೊಂಡಿದೆ.

    ಟಿ20 ತಂಡಕ್ಕೆ ಸೂರ್ಯಕುಮಾರ್​ ಯಾದವ್​​, ಏಕದಿನ ಪಂದ್ಯಕ್ಕೆ ರೋಹಿತ್‌ ಶರ್ಮಾ ನಾಯಕನಾಗಿ ಮುಂದುವರಿಸಿದ್ದಾರೆ. ಟಿ20 ವಿಶ್ವಕಪ್‌ ವಿಜೇತ ತಂಡದಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ಸೂರ್ಯಕುಮಾರ್ ಯಾದವ್​ಗೆ ಬಿಸಿಸಿಐ ಪಟ್ಟಕಟ್ಟಿದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಮುಂಬರುವ ಪ್ರವಾಸವು ನೂತನ ಮುಖ್ಯಕೋಚ್‌ ಕೋಚ್​ ಗೌತಮ್ ಗಂಭೀರ್ ಅವರಿಗೆ ಮೊದಲ ಸವಾಲಾಗಿದೆ. ಈ ಸರಣಿಯೊಂದಿಗೆ ತಮ್ಮ ತರಬೇತಿಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಟಿ20 ತಂಡಕ್ಕೆ ಶುಭಮನ್‌ ಗಿಲ್ ಉಪನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಸರಣಿಗೆ ಲಭ್ಯರಾಗಿದ್ದಾರೆ. ಇದರೊಂದಿಗೆ ವಾಷಿಂಗ್ಟನ್ ಸುಂದರ್​, ಖಲೀಲ್​ ಅಹ್ಮದ್‌ ಸೇರಿದಂತೆ ಅನೇಕ ಯುವ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ ಕೆ.ಎಲ್‌ ರಾಹುಲ್‌ ಸೇರಿದಂತೆ ರಿಷಭ್ ಪಂತ್ ಜೊತೆಗೆ ಸಂಜು ಸ್ಯಾಮ್ಸನ್ ವಿಕೆಟ್​ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

    ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಮರಳಿದ್ದಾರೆ. ಕೆ.ಎಲ್ ರಾಹುಲ್ ಇಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್​, ಖಲೀಲ್ ಅಹಮದ್​​ , ಹರ್ಷಿತ್​ ರಾಣಾ ಬೌಲಿಂಗ್​​ನಲ್ಲಿ ಅವಕಾಶ ಪಡೆದಿದ್ದಾರೆ. ರಿಯಾನ್ ಪರಾಗ್​ ಏಕದಿನ ಮಾದರಿಯಲ್ಲಿ ತಂಡ ಸೇರಿದ್ದಾರೆ. ಎರಡೂ ತಂಡಗಳಿಗೆ ಜಸ್‌ಪ್ರೀತ್‌ ಬುಮ್ರಾ ಅಲಭ್ಯರಾಗಿದ್ದಾರೆ. ಇದನ್ನೂ ಓದಿ: Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

    ಭಾರತ ಟಿ20 ತಂಡ:
    ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅರ್ಷ್‌ದೀಪ್‌ ಸಿಂಗ್‌, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ. ಸಿರಾಜ್.

    ಏಕದಿನ ತಂಡ:
    ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್‌ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

  • ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    – ಯಾರಾಗ್ತಾರೆ ಭಾರತ ಟಿ20 ತಂಡದ ನಾಯಕ?

    ಕೊಲಂಬೊ: ಭಾರತ ಕ್ರಿಕೆಟ್‌ ತಂಡವು ಶ್ರೀಲಂಕಾ ಪ್ರವಾಸದ (India Tour Sri Lanka) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಇತ್ತೀಚೆಗೆ ನೂತನ ಮುಖ್ಯಕೋಚ್‌ ನೇಮಕಗೊಂಡ ಗೌತಮ್‌ ಗಂಭೀರ್‌ (Gautam Gambhir) ಅವರ ನೇತೃತ್ವದಲ್ಲಿ ಭಾರತ ಮೊದಲ ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಈ ಸರಣಿಯೊಂದಿಗೆ ಗಂಭೀರ್‌ ತಮ್ಮ ಮುಖ್ಯಕೋಚ್‌ ಕೋಚ್‌ ಅಭಿಯಾನವನ್ನು ಶುರುಮಾಡಲಿದ್ದಾರೆ.

    ಪಂದ್ಯ ಎಲ್ಲಿ ಯಾವಾಗ?
    ಇದೇ ಜುಲೈ 26ರಿಂದ ಆಗಸ್ಟ್‌ 7ರ ವರೆಗೆ ಭಾರತ, ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಉಭಯ ತಂಡಗಳು ಮೂರು ಟಿ20 ಪಂದ್ಯಗಳು ಹಾಗೂ 3 ಏಕದಿನ ಪಂದ್ಯಗಳನ್ನಾಡಲಿವೆ. ಟಿ20 ಪಂದ್ಯಗಳು ಶ್ರೀಲಂಕಾದ ಪಲ್ಲೆಕೆಲೆ ಹಾಗೂ ಏಕದಿನ ಪಂದ್ಯಗಳು ರಾಜಧಾನಿ ಕೊಲಂಬೊ ಮೈದಾನದಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2:30ರಿಂದ ಆರಂಭವಾಗಲಿದೆ.

    ಯಾವ ದಿನ ಪಂದ್ಯ?
    ಟಿ20 ಪಂದ್ಯಗಳು:
    ಮೊದಲ ಪಂದ್ಯ – ಜುಲೈ 26
    2ನೇ ಪಂದ್ಯ – ಜುಲೈ 27
    3ನೇ ಪಂದ್ಯ – ಜುಲೈ 29
    ಸ್ಥಳ: ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪಲ್ಲೆಕೆಲೆ

    ಏಕದಿನ ಪಂದ್ಯಗಳು
    ಮೊದಲ ಪಂದ್ಯ – ಆಗಸ್ಟ್‌ 1
    2ನೇ ಪಂದ್ಯ – ಆಗಸ್ಟ್‌ 4
    3ನೇ ಪಂದ್ಯ – ಆಗಸ್ಟ್‌ 7
    ಸ್ಥಳ: ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕೊಲಂಬೊ

    ಯಾರಾಗ್ತಾರೆ ಟಿ20 ತಂಡ ನಾಯಕ?
    2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಟಿ20 ಕ್ರಿಕೆಟ್‌ಗೆ ದಿಗ್ಗಜ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಗುಡ್‌ಬೈ ಹೇಳಿದ್ದಾರೆ. ಹಾಗಾಗಿ ಮುಂದೆ ಟಿ20 ತಂಡಕ್ಕೆ ನಾಯಕ ಯಾರಾಗ್ತಾರೆ ಅನ್ನೋ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕೆಲವರು ಹಾರ್ದಿಕ್‌ ನಾಯಕನಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕೆಂದರೆ 2023ರ ವರ್ಷಾರಂಭದಲ್ಲಿ ಪಾಂಡ್ಯ ನಾಯಕತ್ವದಲ್ಲೇ ಟೀಂ ಇಂಡಿಯಾ ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿತ್ತು. ಹಾಗಾಗಿ ಟಿ20 ತಂಡದ ನಾಯಕನಾಗಿ ಪಾಂಡ್ಯ ಅವರೇ ಮುಂದುವರಿಯುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

  • ಆನ್‍ಲೈನ್ ವಂಚನೆ ಪ್ರಕರಣ – ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ

    ಆನ್‍ಲೈನ್ ವಂಚನೆ ಪ್ರಕರಣ – ಶ್ರೀಲಂಕಾದಲ್ಲಿ 60 ಭಾರತೀಯರ ಬಂಧನ

    ಕೊಲಂಬೊ: ಆನ್‍ಲೈನ್‍ನಲ್ಲಿ ಹಣಕಾಸು ವಂಚನೆಯಲ್ಲಿ (Cyber Crime) ತೊಡಗಿದ್ದ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾ (Sri Lanka) ಪೊಲೀಸರು ಬಂಧಿಸಿದ್ದಾರೆ. ಕೊಲಂಬೊ ಸುತ್ತಮುತ್ತಲಿನ ಮಡಿವೇಲಾ, ಬಟ್ಟರಮುಲ್ಲಾ ಮತ್ತು ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

    ಈ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಂಧಿತ ಆರೋಪಿಗಳಿಂದ 135 ಮೊಬೈಲ್ ಫೋನ್‍ಗಳು ಮತ್ತು 57 ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯೊಬ್ಬರ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರ ಎಸ್‍ಎಸ್‍ಪಿ ನಿಹಾಲ್ ತಾಲ್ದುವ ತಿಳಿಸಿದ್ದಾರೆ. ಇದನ್ನೂ ಓದಿ: ಪವಿತ್ರಾಗೆ 5 ತಿಂಗಳಿಂದ ಮೆಸೇಜ್- ರೇಣುಕಾಸ್ವಾಮಿ ಚಾಟ್ ರಹಸ್ಯ ಬಯಲು

    ಬಂಧಿತರು ವಾಟ್ಸಾಪ್ ಮೂಲಕ ಜನರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡುತ್ತಿದ್ದರು. ಬಳಿಕ ಠೇವಣಿ ಇಡುವಂತೆ ಸೂಚಿಸಿ ಒತ್ತಡ ಹಾಕಿ ವಂಚಿಸುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಇಬ್ಬರೂ ವಂಚಕರಿಗೆ ನೆರವು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಂಧಿತರು ಹಣಕಾಸಿನ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಜೂಜು ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇವರಿಂದ ವಂಚನೆಗೊಳಗಾದವರಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 50 ನಿಮಿಷ ಶೆಡ್‍ನಲ್ಲಿ ರೇಣುಕಾಸ್ವಾಮಿ ಮೇಲೆ ‘ಪೊರ್ಕಿ’ ಕ್ರೌರ್ಯ!