Tag: Sri Lanka

  • ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ

    ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ

    ಕೊಲಂಬೋ: ಸಾಲದ ಸುಳಿಗೆ ಸಿಲುಕಿ ನಲುಗಿರುವ ಶ್ರೀಲಂಕಾ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿದೆ. ಈ ಯೋಜನೆಯ ಭಾಗವಾಗಿ ದ್ವೀಪ ರಾಷ್ಟ್ರ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ.

    ಶ್ರೀಲಂಕಾದ ಹೊಸದಾಗಿ ನೇಮಕಗೊಂಡ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದಾರೆ. ಈ ಮೂಲಕ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್

    1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ‍್ಯ ಪಡೆದ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಷ್ಟದಲ್ಲಿರುವ ಶ್ರೀಲಂಕಾದ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ವಿಕ್ರಮಸಿಂಘೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದರು.

    ಶ್ರೀಲಂಕನ್ ಏರ್‌ಲೈನ್ಸ್‌ನ ವ್ಯವಸ್ಥಾಪಕ ಷೇರುದಾರ ಸ್ಥಾನದಿಂದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಯನ್ನು ತೆಗೆದುಹಾಕಿದ ಬಳಿಕ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿತು. 2021 ಮಾರ್ಚ್ ಹೊತ್ತಿಗೆ ಅದರ ಒಟ್ಟು ನಷ್ಟ 372 ಶತಕೋಟಿ ರೂ. ಆಗಿತ್ತು ಎಂದು ಶ್ರೀಲಂಕಾ ಪ್ರಧಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    SRILANKA

    ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಿದರೂ ನಾವು ನಷ್ಟವನ್ನು ಭರಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಷ್ಟವನ್ನು ವಿಮಾನದಲ್ಲಿ ಇಲ್ಲಿವರೆಗೆ ಕಾಲಿಡದ, ಕಡು ಬಡತನದಲ್ಲಿ ಹುಟ್ಟಿರುವವರೂ ಭರಿಸಬೇಕಾಗುತ್ತದೆ ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.

  • ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಮಾಯಣ ಖ್ಯಾತಿಯ ಹಿಂದೂ ದೇವಾಲಯ!

    ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅದರ ಪರಿಣಾಮ ಅಲ್ಲಿನ ಹಿಂದೂ ದೇವಾಲಯದ ಮೇಲೂ ಬೀರಿದೆ. ದ್ವೀಪ ರಾಷ್ಟ್ರದ ನುವಾರಾ ಎಲಿಯಾದಲ್ಲಿರುವ ರಾಮಾಯಣ ಖ್ಯಾತಿಯ ಅಶೋಕ್ ವಾಟಿಯಾ ದೇವಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

    ಇದನ್ನು ಸೇತಾ ಅಮ್ಮನ್ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ದೇವಾಲಯದ ಆಡಳಿತವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಈ ಕುರಿತು ದೇವಾಲಯದ ಅಧ್ಯಕ್ಷ ಮತ್ತು ನುವಾರಾ ಎಲಿಯಾ ಕ್ಷೇತ್ರದ ಸಂಸದ ವಿ.ರಾಧಾಕೃಷ್ಣನ್ ಮಾತನಾಡಿದ್ದು, ಸೀತಾ ಮಾತಾ ದೇವಾಲಯವನ್ನು ನಡೆಸಲು ದೇವಾಲಯ ಮತ್ತು ಅದರ ಸಿಬ್ಬಂದಿಗೆ ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ರಾಮಾಯಣದಲ್ಲಿ ಅಶೋಕ್ ವಾಟಿಕಾ (ಅಶೋಕ ವನ) ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಿಂದ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಈಗ ಯಾರೂ ಬರುತ್ತಿಲ್ಲ. ದೇವಾಲಯದ ಅಭಿವೃದ್ಧಿ ಭಕ್ತರು ಮತ್ತು ಪ್ರವಾಸಿಗರ ಮೇಲೆ ಅವಲಂಬಿತವಾಗಿರುವಾಗ, ದೇವಸ್ಥಾನವನ್ನು ನಡೆಸುವುದು ಕಷ್ಟಕರವಾಗಿದೆ. ಸಿಬ್ಬಂದಿ ಸಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯರು ಈಗಿನ ಪರಿಸ್ಥಿತಿಯಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಲು ಭಯಪಡುತ್ತಾರೆ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

    ನಾನು ಈ ಹಿಂದೆ ಸೀತಾ ದೇವಸ್ಥಾನವನ್ನು ಖಾಲಿಯಾಗಿ ನೋಡಿಲ್ಲ. ಜನರು ಸದಾ ಕಾಲ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಈಗ ಭಕ್ತರು ಯಾರೂ ಬರುವುದಿಲ್ಲ. ಶ್ರೀಲಂಕಾದಲ್ಲಿ ವಿದ್ಯುತ್ ಕಡಿತದಿಂದ ಜನರು ಬರಲು ಹೆದರುತ್ತಾರೆ. ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಅಭಾವ ಕೂಡ ಎದುರಾಗಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ರಾಮಾಯಣದಲ್ಲಿ ಭಾರತ ಮತ್ತು ಶ್ರೀಲಂಕಾ ದೇಶಗಳ ಸಂಸ್ಕೃತಿ, ಜನಜೀವನದ ಬಗ್ಗೆ ತಿಳಿಸಲಾಗಿದೆ. ರಾಮಾಯಣದಲ್ಲಿ ರಾವಣನು ಸೀತೆಯನ್ನು ಹೇಗೆ ತಂದು ಅಶೋಕ ವಾಟಿಕಾದಲ್ಲಿ ಇರಿಸಿದನು ಎಂದು ಉಲ್ಲೇಖಿಸಲಾಗಿದೆ.

    ಶ್ರೀಲಂಕಾದಲ್ಲಿ ಔಷಧಿಗಳು, ಅಡುಗೆ ಅನಿಲ, ಇಂಧನ ಮತ್ತು ಆಹಾರ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಕೊರತೆಯೊಂದಿಗೆ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಅಗತ್ಯ ವಸ್ತುಗಳ ಆಮದಿಗೆ ಬೇಕಾದ ವಿದೇಶಿ ಕರೆನ್ಸಿ ಕೊರತೆಯೂ ಈ ಬಿಕ್ಕಟ್ಟಿಗೆ ಕಾರಣವಾಗಿದೆ.

  • ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತದಿಂದ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದ್ದು, ಸದ್ಯ ಲಂಕಾ ಬಿಕ್ಕಟ್ಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ

    ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ ಎಂದು ಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದರು. ಇದನ್ನೂ ಓದಿ: ದಂಪತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಮಾಂಗಲ್ಯ, ಹಣ ಸುಲಿಗೆ ಮಾಡಿ ಪರಾರಿ

    ಇದೀಗ ಭಾರತದಿಂದ 2 ಹಂತಗಳಲ್ಲಿ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ವಿಕ್ರಮ ಸಿಂಘೆ, ದೇಶದಲ್ಲಿ ಕೇವಲ ಒಂದು ದಿನದ ಪೆಟ್ರೋಲ್ ಸ್ಟಾಕ್ ಮಾತ್ರ ಉಳಿದಿತ್ತು. ಆದರೆ, ಭಾರತೀಯ ಕ್ರೆಡಿಟ್ ಲೈನ್ ಅಡಿಯಲ್ಲಿ ಮೇ 18 ಮತ್ತು 29 ರಂದು ಬರಲಿದೆ. ಜೂನ್ 1 ರಂದು 2ನೇ ಹಂತವಾಗಿ 2 ಶಿಪ್‌ಮೆಂಟ್ ಪೆಟ್ರೋಲ್ ರಫ್ತಾಗಲಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

    ದೇಶದ ಪರಿಸ್ಥಿತಿ ಸರಿದೂಗಿಸಲು ಸುಮಾರು 75 ಮಿಲಿಯನ್ ಯುಎಸ್ ಡಾಲರ್ ಅವಶ್ಯವಿದೆ. ಹಾಗಾಗಿ ನಾವು ಮುಕ್ತ ಮಾರುಕಟ್ಟೆಯ ಡಾಲರ್‌ಗಳನ್ನು ಪಡೆಯಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಹಿನ್ನೆಲೆ ಏನು? – ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಅಗತ್ಯ ವಸ್ತುಗಳ ಆಮದಿಗೆ ನಮ್ಮಲ್ಲಿ ಡಾಲರ್ ಕೊರತೆಯಿದೆ ಎಂದು ರಾನಿಲ್ ವಿಕ್ರಮಸಿಂಘೆ ನಿನ್ನೆ ತಿಳಿಸಿದ್ದರು.

    ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಎಂದೂ ಎಚ್ಚರಿಕೆ ನೀಡಿದ್ದರು.

  • ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ಕೊಲಂಬೋ: ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಅಗತ್ಯ ವಸ್ತುಗಳ ಆಮದಿಗೆ ನಮ್ಮಲ್ಲಿ ಡಾಲರ್ ಕೊರತೆಯಿದೆ ಎಂದು ಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸೋಮವಾರ ತಿಳಿಸಿದ್ದಾರೆ.

    ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳುಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಲಂಕಾ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್‌ನನ್ನು ಬಂಧಿಸಿದ್ರೆ ಪಾಕಿಸ್ತಾನ ಶ್ರೀಲಂಕಾವಾಗುತ್ತದೆ: ಪಾಕ್ ಮಾಜಿ ಸಚಿವ

    ನಮ್ಮಲ್ಲಿ ಈಗಾಗಲೇ 3 ಸೆಟ್ ಕಚ್ಚಾತೈಲ ಸಾಗಿಸುವ ಹಡಗುಗಳು ಕೊಲಂಬೋ ಬಂದರಿನ ಹೊರಗೆ ಪಾವತಿಗಾಗಿ ಕಾಯುತ್ತಿವೆ. ಆದರೆ ಪಾವತಿಗೆ ನಮ್ಮ ಸರ್ಕಾರದಿಂದ ಡಾಲರ್ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಕ್ರಮಸಿಂಘೆ ದೇಶದ ಆರ್ಥಿಕ ಸಂಕಷ್ಟವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನೇಪಾಳ ಪ್ರವಾಸ – ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ, ಬುದ್ಧನಿಗೆ ಭಕ್ತಿಭಾವದ ನಮನ

    ದ್ವೀಪ ರಾಷ್ಟ್ರ ತನ್ನ ಸ್ವಾತಂತ್ರ್ಯದ ಬಳಿಕ ಎಂದೂ ಸಂಭವಿಸದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ 2 ಕೋಟಿಗೂ ಅಧಿಕ ಜನರು ಆಹಾರ, ಇಂಧನ ಹಾಗೂ ಔಷಧಕ್ಕಾಗಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶ ಭಾರೀ ಹಣದುಬ್ಬರ ಹಾಗೂ ಸುದೀರ್ಘ ವಿದ್ಯುತ್ ಕಡಿತವನ್ನೂ ಎದುರಿಸುತ್ತಿದೆ.

  • ಇಮ್ರಾನ್ ಖಾನ್‌ನನ್ನು ಬಂಧಿಸಿದ್ರೆ ಪಾಕಿಸ್ತಾನ ಶ್ರೀಲಂಕಾವಾಗುತ್ತದೆ: ಪಾಕ್ ಮಾಜಿ ಸಚಿವ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುತ್ತದೆ. ಇದಕ್ಕೆ ಹೊಸ ಸರ್ಕಾರವೇ ಹೊಣೆಯಾಗಲಿದೆ ಎಂದು ಪಾಕ್ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ಎಚ್ಚರಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಶೀದ್, ಪ್ರಸ್ತುತ ಪಾಕಿಸ್ತಾನದ ಸಮ್ಮಿಶ್ರ ಸರ್ಕಾರ ದಿಕ್ಕಿಲ್ಲದ ಸ್ಥಿತಿಯಲ್ಲಿದೆ. ಅವರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮೇ 18ಕ್ಕೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ

    ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಅದರ ಪರಿಸ್ಥಿತಿಯನ್ನು ಎದುರಿಸಲು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದೆ. ಒಂದು ವೇಳೆ ಅವರನ್ನು ಬಂಧಿಸಿದ್ದೇ ಆದಲ್ಲಿ, ಪಾಕಿಸ್ತಾನ ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಯನ್ನೇ ಎದುರಿಸಲಿದೆ. ಇದಕ್ಕೆ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವೇ ಹೊಣೆಯಾಗಲಿದೆ ಎಂದು ರಶೀದ್ ಹೇಳಿಕೆ ನೀಡಿದ್ದಾರೆ.

    ಶ್ರೀಲಂಕಾ 1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕದ ಇತಿಹಾಸದಲ್ಲಿ ಎಂದೂ ಕಂಡಿರದ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುವುದನ್ನು ನಾನು ಬಯಸುವುದಿಲ್ಲ ಎಂದು ರಶೀದ್ ತಿಳಿಸಿದ್ದಾರೆ. ಇದನ್ನೂ ಓದಿ: ಎರಡಂಕಿಗೆ ಇಳಿಕೆ ಕಂಡ ಕೊರೊನಾ – ನಿನ್ನೆಗಿಂತ ಇಂದು 28 ಕೇಸ್ ಇಳಿಮುಖ

    Shehbaz Sharif

    ಇತ್ತೀಚೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಕಳೆದ ತಿಂಗಳ ಅಂತ್ಯದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸೌದಿ ಅರೇಬಿಯಾದ ಮದೀನಾಗೆ ಭೇಟಿ ನೀಡಿದ್ದಾಗ, ಅವರ ವಿರುದ್ಧ ಯಾತ್ರಾರ್ಥಿಗಳು ಘೋಷಣೆ ಕೂಗಿದ್ದರು. ಇದರ ಹಿಂದೆ ಇಮ್ರಾನ್ ಖಾನ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

  • ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

    ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್

    ಕೊಲಂಬೊ: ಈಗಾಗಲೇ ಆರ್ಥಿಕ ಬಿಕ್ಕಟ್ಟು, ಇಂಧನ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಾಗರಿಕರು ದಂಗೆ ಎದ್ದಿದ್ದಾರೆ. ಈ ನಡುವೆಯೂ ಶ್ರೀಲಂಕಾದಲ್ಲಿ LTTE ಭಯೋತ್ಪಾದಕ ಸಂಘಟನೆ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಜನರ ನಿದ್ದೆಗೆಡಿಸಿದೆ.

    sri lanka

    3 ದಶಕಗಳ ಕಾಲ ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ನಡೆಸಿ, 2009ರಲ್ಲಿ ನಿಷ್ಕ್ರಿಯಗೊಂಡ ಎಲ್‌ಟಿಟಿಇ ಮೇ 18ರಂದು ನಡೆಯುವ ಮುಲ್ಲಿವೈಕಲ್ ದಿನಾಚರಣೆ ವೇಳೆ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಈ ಹಿಂದೆ ಎಲ್‌ಟಿಟಿಇಯನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ಧ ಸೇಡಿಗೆ ಎಲ್‌ಟಿಟಿಇ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ, ಭಾರತದ ಗುಪ್ತಚರ ಸಂಸ್ಥೆಗಳ ಬಳಿ ಹೆಚ್ಚಿನ ಮಾಹಿತಿ ಕೇಳಿದೆ. ಜೊತೆಗೆ ಭದ್ರತೆ ಬಿಗಿಗೊಳಿಸಿ ಎಲ್‌ಟಿಟಿಇ ಚಟುವಟಿಕೆಗಳು ಪುನಾರಂಭಗೊಂಡಿವೆಯೇ ಎಂದು ತನಿಖೆ ಆರಂಭಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಮುಂದುವರಿದ ನೆರವಿನ ಹಸ್ತ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಂಘರ್ಷ ಪೀಡಿತವಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತದಿಂದ ನೆರವಿನ ಹಸ್ತ ಮುಂದುವರೆದಿದ್ದು, ಮತ್ತೆ 4 ಲಕ್ಷ ಮೆಟ್ರಿಕ್ ಟನ್ ಇಂಧನವನ್ನು ರವಾನೆ ಮಾಡಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಈ ಕುರಿತು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಶ್ರೀಲಂಕಾಕ್ಕೆ ಇತ್ತೀಚಿನ ಕೊಡುಗೆಯಾಗಿ 4 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಭಾರತವು ಕಳುಹಿಸಿಕೊಟ್ಟಿದೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್ ಖಾತರಿ ನೀಡಿರುವ (ಲೈನ್ ಆಫ್ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಇಂಧನ ಕಳುಹಿಸಿಕೊಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

    srilanka

    ಅಂತೆಯೇ ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ದ್ವೀಪ ರಾಷ್ಟ್ರದ ಜನರಿಗೆ ಭಾರತದ ಕಾಳಜಿ ಮತ್ತು ಬದ್ಧತೆ ಮುಂದುವರಿಯುತ್ತದೆ ಎಂದು ಹೇಳಿದೆ.

  • ಶ್ರೀಲಂಕಾದ ನೂತನ ಪ್ರಧಾನಿಯಾಗಿ ರಾನಿಲ್‌ ವಿಕ್ರಮಸಿಂಘೆ ಪ್ರಮಾಣ ವಚನ

    ಶ್ರೀಲಂಕಾದ ನೂತನ ಪ್ರಧಾನಿಯಾಗಿ ರಾನಿಲ್‌ ವಿಕ್ರಮಸಿಂಘೆ ಪ್ರಮಾಣ ವಚನ

    ಕೊಲಂಬೊ: ಹಿಂಸಾತ್ಮಕ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಕಂಡ ದ್ವೀಪರಾಷ್ಟ್ರ ಎದುರಿಸುತ್ತಿರುವ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ) ನಾಯಕ ರಾನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ನೂತನ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಐದು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ವಿಕ್ರಮಸಿಂಘೆ ಅವರಿಗೆ ಅಧ್ಯಕ್ಷ ಗೊಟಬಯ ರಾಜಪಕ್ಸ ಪ್ರಮಾಣ ವಚನ ಬೋಧಿಸಿದ್ದಾರೆ. ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಸಂಸದರ ಬೆಂಬಲವನ್ನು ಪಡೆದುಕೊಂಡ ನಂತರ ವಿಕ್ರಮಸಿಂಘೆ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ) ನಾಯಕ ರಾನಿಲ್ ವಿಕ್ರಮಸಿಂಘೆ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರೆ ನಮ್ಮ ಪಕ್ಷವು ಕಾರ್ಯತಂತ್ರ ರೂಪಿಸುವುದಾಗಿ ತಿಳಿಸಿದ್ದರು.

    ಸಜಿತ್ ಅವರು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಪತ್ರ ಬರೆದಿರುವುದಾಗಿ ಸಜಿತ್‌ ಹೇಳಿಕೊಂಡಿದ್ದರು. ಅದರಲ್ಲಿ ತಮ್ಮ ಪಕ್ಷವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಿದರೆ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ವಿಕ್ರಮಸಿಂಘೆ ಕುರಿತು ಕೇಳಿದ್ದ ಪ್ರಶ್ನೆಗೆ ಈ ಮೊದಲು ಪ್ರತಿಕ್ರಿಯಿಸಿದ್ದ ಸಜಿತ್‌, ಊಹಾಪೋಹಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅದು ಸಾಧ್ಯವಾದರೆ, ನಾವು ಶೀಘ್ರದಲ್ಲೇ ನಮ್ಮ ಕಾರ್ಯತಂತ್ರ ಪ್ರಾರಂಭಿಸುತ್ತೇವೆ. ನಾವು ದೇಶದ ಅತಿದೊಡ್ಡ ವಿರೋಧ ಪಕ್ಷವಾಗಿದ್ದು, ದೇಶದ ರಾಜಕೀಯ ವ್ಯವಸ್ಥೆ ನಮಗೆ ತಿಳಿದಿದೆ ಎಂದು ಹೇಳಿದ್ದರು.

    ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಹೋರಾಟ ತೀವ್ರಗೊಂಡಿದೆ. ಸರ್ಕಾರಿ ಬೆಂಬಲಿತರನ್ನು ಗುರಿಯಾಗಿಸಿ ಪ್ರತಿಭಟನಾಕಾರರು ಹಿಂಸಾಚಾರ ತೀವ್ರಗೊಳಿಸಿದ್ದರು. ಇದರಿಂದ ಎಚ್ಚೆತ್ತ ಮಹಿಂದಾ ರಾಜಪಕ್ಸ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಕೊಲಂಬೊ: ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಶ್ರೀಲಂಕಾದ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುವ ಅಧ್ಯಕ್ಷ ಗೊಟಾಬಯ ರಾಜಪಕ್ಸ ಅವರ ಪ್ರಸ್ತಾಪಕ್ಕೆ ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಒಪ್ಪಿಗೆ ನೀಡಿದ್ದಾರೆ.

    ಶ್ರೀಲಂಕಾ ಅಧ್ಯಕ್ಷರಿಗೆ ಸಜಿತ್ ಪ್ರೇಮದಾಸ ಪತ್ರ ಬರೆದಿದ್ದು, ನಿಗದಿತ ಸಮಯದೊಳಗೆ ಗೊಟಬಯ ರಾಜಪಕ್ಸ ಅವರು ಅಧಿಕಾರವನ್ನು ತೊರೆಯಲು ಒಪ್ಪಿಗೆ ನೀಡಿದರೆ, ಹೊಸ ಸರ್ಕಾರ ರಚಿಸಲು ಅಧ್ಯಕ್ಷರ ಆಹ್ವಾನವನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    sri lanka

    ಈ ಹಿಂದೆ, ಬಿಕ್ಕಟ್ಟಿನಲ್ಲಿರುವ ದೇಶದ ಪ್ರಧಾನಿ ಹುದ್ದೆಯನ್ನು ಸಜಿತ್ ತಿರಸ್ಕರಿಸಿದ್ದರು. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಈ ವಾರದೊಳಗೆ ಹೊಸ ಪ್ರಧಾನಿಯನ್ನು ನೇಮಿಸುವುದಾಗಿ ಬುಧವಾರ ಹೇಳಿದ ಒಂದು ದಿನದ ನಂತರ ಅಜಿತ್‌ ಒಪ್ಪಿಗೆ ಸೂಚಿಸಿದ್ದಾರೆ. ಬಹುಪಾಲು ಸಂಸದರು ಮತ್ತು ಜನರ ವಿಶ್ವಾಸ ಹೊಂದಿರುವ ವ್ಯಕ್ತಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗುವುದು ಎಂದು ಗೊಟಬಯ ದೂರದರ್ಶನದ ಭಾಷಣದಲ್ಲಿ ಹೇಳಿದ್ದರು.

    19 ನೇ ತಿದ್ದುಪಡಿಯ ನಿಬಂಧನೆಗಳಿಗೆ ಅಧಿಕಾರ ನೀಡುವ ಹೊಸ ಸಾಂವಿಧಾನಿಕ ತಿದ್ದುಪಡಿಯನ್ನು ತರಲಾಗುವುದು. ಹೊಸ ಪ್ರಧಾನಿ ಮತ್ತು ಕ್ಯಾಬಿನೆಟ್ ದೇಶವನ್ನು ಸ್ಥಿರಗೊಳಿಸಲು ಯೋಜನೆಯನ್ನು ಪ್ರಸ್ತುತಪಡಿಸಬಹುದು ಎಂದು ತಿಳಿಸಿದ್ದರು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಕೆಲವರು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸುವಂತೆ ಕೇಳಿದ್ದಾರೆ. ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ನಾನು ಅದಕ್ಕೆ ಅವಕಾಶ ನೀಡುತ್ತೇನೆ. ದೇಶವು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯ ಯಂತ್ರವನ್ನು ಮುಂದುವರಿಸಲು ನಿಮ್ಮ ಬೆಂಬಲವನ್ನು ನಾನು ಕೋರುತ್ತೇನೆ ಎಂದು ರಾಜಪಕ್ಸ ಮನವಿ ಮಾಡಿದ್ದಾರೆ.ಒಂಬತ್ತು ಮಂದಿ ಮೃತಪಟ್ಟು ಸುಮಾರು 300 ಮಂದಿ ಗಾಯಗೊಂಡಿರುವ ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

    ಸರ್ಕಾರದ ಪರ ಗುಂಪುಗಳು ಸರ್ಕಾರದ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ನಂತರ ಹಿಂಸಾತ್ಮಕ ಘಟನೆಗಳು ವರದಿಯಾದವು. ಬುಧವಾರದವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಮಿಲಿಟರಿಯನ್ನು ನಿಯೋಜಿಸಲಾಗಿದೆ.

  • ರಾಜಪಕ್ಸೆ ಕುಟುಂಬ ಭಾರತಕ್ಕೆ ಪಲಾಯನ ಮಾಡಿದ ವಿಚಾರವನ್ನು ತಿರಸ್ಕರಿಸಿದ ರಾಯಭಾರಿ ಕಚೇರಿ

    ರಾಜಪಕ್ಸೆ ಕುಟುಂಬ ಭಾರತಕ್ಕೆ ಪಲಾಯನ ಮಾಡಿದ ವಿಚಾರವನ್ನು ತಿರಸ್ಕರಿಸಿದ ರಾಯಭಾರಿ ಕಚೇರಿ

    ನವದೆಹಲಿ: ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹವನ್ನು ಭಾರತೀಯ ರಾಯಭಾರಿ ಕಚೇರಿ ಸಂಪೂರ್ಣವಾಗಿ ತಳ್ಳಿ ಹಾಕಿದೆ.

    ಈ ಬಗ್ಗೆ ಮಾತನಾಡಿ, ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ. ಆದರೆ ಸೈನ್ಯವನ್ನು ನವದೆಹಲಿಯಿಂದ ಕೊಲಂಬೊಗೆ ಕಳುಹಿಸಿಲ್ಲ. ಈ ಎಲ್ಲಾ ಊಹಾಪೋಹಗಳು ಸುಳ್ಳು ಮತ್ತು ನಕಲಿಯದ್ದಾಗಿದೆ ಎಂದರು.

    sri lanka

    ಸೋಮವಾರ ರಾಜೀನಾಮೆ ನೀಡಿದ ನಂತರ ಮಹಿಂದಾ ರಾಜಪಕ್ಸೆ ಎಲ್ಲಿದ್ದಾರೆ ಎಂದು ಪ್ರಶ್ನೆ ಕಾಡಿತ್ತು. ಮಹಿಂದ ಅವರು ತಮ್ಮ ಕಚೇರಿ ಹಾಗೂ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ತೊರೆದಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಈ ಹಿನ್ನೆಲೆಯಲ್ಲಿ ಭಾರತವು ತನ್ನ ಸೈನ್ಯವನ್ನು ಶ್ರೀಲಂಕಾಕ್ಕೆ ಕಳುಹಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹದ ವರದಿಗಳು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಈ ವರದಿಗಳು ಮತ್ತು ಅಂತಹ ಅಭಿಪ್ರಾಯಗಳು ಭಾರತ ಸರ್ಕಾರದ ಸ್ಥಾನಕ್ಕೆ ಅನುಗುಣವಾಗಿಲ್ಲ ಭಾರತೀಯ ಮಿಷನ್ ಟ್ವೀಟ್‍ನಲ್ಲಿ ಹೇಳಿದೆ.

    ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ನಿನ್ನೆ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

  • ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    ಕೊಲಂಬೊ: ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುವ ಅಥವಾ ಇತರರಿಗೆ ಹಾನಿ ಮಾಡುವವರ ಮೇಲೆ ಗುಂಡು ಹಾರಿಸಲು ಶ್ರೀಲಂಕಾ ರಕ್ಷಣಾ ಸಚಿವಾಲಯವು ಸೇನಾಪಡೆಗಳಿಗೆ ಆದೇಶಿಸಿದೆ ಎಂದು ಸೇನಾ ವಕ್ತಾರರು ಡೈಲಿ ಮಿರರ್‌ಗೆ ತಿಳಿಸಿದ್ದಾರೆ.

    ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುವುದು ಅಥವಾ ಇತರರಿಗೆ ಹಾನಿ ಮಾಡುವುದು ಕಂಡುಬಂದರೆ ಅಂತಹವರನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ರಕ್ಷಣಾ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಪರಿಸ್ಥಿತಿ ಉದ್ವಿಗ್ನ – ಸರ್ಕಾರ ಬೆಂಬಲಿಗನನ್ನು ಬಸ್‌ನಿಂದ ಕೆಳಗಿಳಿಸಿ ಕಸದ ಗಾಡಿಗೆ ಎಸೆದ ಪ್ರತಿಭಟನಾಕಾರರು

    ಆಡಳಿತ ಪಕ್ಷದ ರಾಜಕಾರಣಿಗಳ ಒಡೆತನದ ಹಲವಾರು ಮನೆಗಳನ್ನು ಹಾನಿಗೊಳಿಸಲಾಗಿದೆ. ಬೆಂಕಿ ಹಚ್ಚಿ ನಾಶಗೊಳಿಸಲಾಗಿದೆ. ಸರ್ಕಾರದ ಬೆಂಬಲಿಗರ ಮೇಲೆ ಕಳೆದ ಎರಡು ದಿನಗಳಿಂದ ದಾಳಿ ಮಾಡಲಾಗಿದೆ.

    ಶ್ರೀಲಂಕಾದಲ್ಲಿನ ಜನರ ಕುಂದುಕೊರತೆಗಳನ್ನು ಪರಿಹರಿಸಲು ಸಂಯಮ ಮತ್ತು ಅರ್ಥಪೂರ್ಣ ಮಾತುಕತೆಗೆ ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ರೊಚ್ಚಿಗೆದ್ದ ಜನ – ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ

    ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಜನರು ರೋಷಾವೇಷಕ್ಕೆ ಬೆಚ್ಚಿದ ಮಹಿಂದಾ ರಾಜಪಕ್ಸ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.