ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೊಚ್ಚಿಗೆದ್ದ ಜನ ದಂಗೆ ಎದ್ದಿದ್ದು, ಉದ್ರಿಕ್ತ ಗುಂಪೊಂದು ಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ ಹಚ್ಚಿ ವಾಹನಗಳನ್ನು ಜಖಂಗೊಳಿಸಿದೆ. ಈ ನಡುವೆ ರನೀಲ್ ವಿಕ್ರಮಸಿಂಘೆ ಹೊಸ ಸರ್ಕಾರ ರಚನೆಯಾಗುವುದರವರೆಗೂ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.

ನಿನ್ನೆ ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಜನ ದಾಂಧಲೆ ನಡೆಸಿದ್ದರು. ಇದರ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಕೊಲಂಬೋದಲ್ಲಿರುವ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಿದ್ದು, ಪ್ರಧಾನಿಗೆ ಸೇರಿದ ವಾಹನಗಳನ್ನು ಪುಡಿಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

ಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಸರ್ವ ಪಕ್ಷ ಸರ್ಕಾರಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದ ವಿಕ್ರಮಸಂಘೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದರೆ ಹೊಸ ಸರ್ಕಾರ ರಚನೆಯಾಗುವುದರವರೆಗೂ ವಿಕ್ರಮಸಿಂಘೆ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಬುಧವಾರ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ರಾಜೀನಾಮೆ
https://twitter.com/SLukako/status/1545831647597166593
ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಜನತೆ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದು, ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ದ್ವೀಪ ರಾಷ್ಟ್ರ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ಗೆ ಇಳಿದು ಈಜಾಡಿ, ಸೋಫಾ, ಬೆಡ್‍ಗಳ ಮೇಲೆ ಕುಣಿದಾಡಿದ್ದರು. ಇದರ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿ ಅಧಿಕೃತ ನಿವಾಸದಿಂದ ಸ್ಥಳಾಂತರಗೊಂಡಿದ್ದರು.
ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗಿದೆ. ದೇಶದ ಜನತೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪರಿಣಾಮವಾಗಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ರನಿಲ್ ವಿಕ್ರಮಸಿಂಘೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿರುವ ದೇಶಕ್ಕೆ ಅನೇಕ ಕಡೆಯಿಂದ ಸಾಲ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ರನಿಲ್ ಪ್ರಯತ್ನಿಸಿದರು.



