Tag: Sri Ishpriya Tirtha Swamiji

  • ಮಾದಕ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು 12 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಈಶಪ್ರಿಯತೀರ್ಥ ಸ್ವಾಮೀಜಿ

    ಮಾದಕ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು 12 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಈಶಪ್ರಿಯತೀರ್ಥ ಸ್ವಾಮೀಜಿ

    ಉಡುಪಿ: ಯುವ ಜನಾಂಗ ಮಾದಕ ವ್ಯಸನದಿಂದ ದೂರವಾಗಬೇಕು ಎಂಬ ಉದ್ದೇಶದಿಂದ ಉಡುಪಿಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತಾಚರಣೆಯ ನಡುವೆ 12 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ.

    ಉಡುಪಿಯಿಂದ ಮಣಿಪಾಲ- ಮಣಿಪಾಲದಿಂದ ಉಡುಪಿಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಯುವಜನರಲ್ಲಿ `ಸೇ ನೋ ಟು ಡ್ರಗ್ಸ್’ ಅನ್ನುವ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ನೇತೃತ್ವದಲ್ಲಿ ಎರಡು ತಿಂಗಳ ಕಾಲ ಮಾದಕ ವ್ಯಸನ ವಿರೋಧಿ ಮಾಸಾಚರಣೆಯಲ್ಲಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ದೇಹದ ಪಂಚೇಂದ್ರಿಯಗಳು ಕುದುರೆಯಂತೆ. ಮನಸ್ಸು ಕುದುರೆಯ ಮೇಲೆ ಸವಾರಿ ಮಾಡುತ್ತಿರುತ್ತದೆ. ಇಂದ್ರಿಯಗಳು ಮನಸ್ಸಿನ ಹಿಡಿತದಲ್ಲಿ ಇರುವುದರಿಂದ ಅವುಗಳು ಸ್ವಲ್ಪ ಎಚ್ಚರ ತಪ್ಪಿದರೂ ಜೀವನ ಹಾಳಾಗುತ್ತದೆ. ಕ್ಷಣಿಕ ಸುಖಕ್ಕೆ ಆಸಕ್ತಿ ವಹಿಸಿದರೆ ಇಡೀ ಜೀವನ, ಕುಟುಂಬ ಬಲಿಯಾಗುತ್ತದೆ ಎಂದು ಎಚ್ಚರಿಕೆಯ ಆಶೀರ್ವಚನ ನೀಡಿದರು.

    ಮಣಿಪಾಲದ ಕೆನರಾ ಮಾಲ್ ನಲ್ಲಿ `ಸೆಲ್ಫಿ ವಿಥ್ ಸೈನ್’ ಸಂಗ್ರಹ ಅಭಿಯಾನ ಆಯೋಜಿಸಿದ್ದು ಅದರಲ್ಲೂ ಪಾಲ್ಗೊಂಡ ಸ್ವಾಮೀಜಿ ಒಟ್ಟು ಮೂರುವರೆ ಗಂಟೆಗೂ ಹೆಚ್ಚು ಕಾಲ ಪಾದಯಾತ್ರೆ ಮಾಡಿ ಮಾದಕ ವ್ಯಸನಗಳಿಂದ ದೂರವಾಗುವಂತೆ ಯುವಕರಿಗೆ ಕರೆ ನೀಡಿದರು. ಸ್ವಾಮೀಜಿಗಳ ಜೊತೆ ಪಿಪಿಸಿ ಸಂಸ್ಥೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

    `ಸೆಲ್ಫಿ ವಿಥ್ ಸೈನ್’ ಅಭಿಯಾನದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ, ಮಲ್ಪೆ ಜಾಮೀಯಾ ಮಸೀದಿ ಮೌಲಾನಾ ಸಯ್ಯಾದಿನಾ ಅಬೂಬ್ಕರ್ ಸಿದ್ದಿಕಿ, ಉಡುಪಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಪಾಲ್ಗೊಂಡಿದ್ದರು. ಈ ಅಭಿಯಾನ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿ ಎಲ್ಲಾ ಗಣ್ಯರು ಸಹಿ ಹಾಕಿ, ಬಣ್ಣದಲ್ಲಿ ಹಸ್ತ ಅದ್ದಿ ಪ್ರತಿಜ್ಞೆ ಮಾಡಿದರು. ಸೆಲ್ಫಿ ತೆಗೆದು ದಾಖಲು ಮಾಡಿಕೊಂಡರು. ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ದಿನಪೂರ್ತಿ ಈ ಅಭಿಯಾನ ನಡೆದಿದ್ದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv