Tag: Sri Channabasaveshwara Swamy Fair

  • ಶ್ರೀಪುರದ ಮಠ ಜಾತ್ರೆಯಲ್ಲಿ ಮುದ್ದೆ ದಾಸೋಹಕ್ಕೆ ಭಾರೀ ಮಹತ್ವ

    ಶ್ರೀಪುರದ ಮಠ ಜಾತ್ರೆಯಲ್ಲಿ ಮುದ್ದೆ ದಾಸೋಹಕ್ಕೆ ಭಾರೀ ಮಹತ್ವ

    ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಶ್ರೀಪುರದ ಮಠ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಮುದ್ದೆ ದಾಸೋಹ ಭಾರೀ ಮಹತ್ವ ಪಡೆದುಕೊಂಡಿದೆ.

    ಚನ್ನಬಸವೇಶ್ವರ ದೇವರಿಗೆ ಮುದ್ದೆ ನೈವೇದ್ಯ ಎಂದರೆ ಬಲು ಇಷ್ಟ ಎಂದು ಭಕ್ತರು ನಂಬಿದ್ದಾರೆ. ಆದ್ದರಿಂದ ಭಕ್ತರು ದೇವರಿಗೆ ರಾಗಿ ಮುದ್ದೆಯ ನೈವೇದ್ಯ ಮಾಡಿಸುತ್ತಾರೆ. ಇಂದು ನಡೆದ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ಮುದ್ದೆ ನೈವೇದ್ಯ ಮಾಡಿ ಭಕ್ತರು ಕೃತಾರ್ಥರಾದರು. ಪ್ರತಿವರ್ಷ ಕಾರ್ತಿಕ ಮಾಸದ ಅಂತ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಚನ್ನಬಸವೇಶ್ವರ ದೇವರಿಗೆ ಮುದ್ದೆ ನೈವೇದ್ಯ ಮಾಡಲಾಗುತ್ತದೆ. ಇದರ ಜೊತೆಗೆ ನೆರೆದಂತಹ ಸಾವಿರಾರು ಭಕ್ತರಿಗೂ ವಿಶೇಷವಾಗಿ ಮುದ್ದೆ ಊಟ ಬಡಿಸಲಾಗುತ್ತದೆ.

    ಸುತ್ತಮುತ್ತಲ ಗ್ರಾಮಸ್ಥರು ತಾವು ಬೆಳೆದ ಧಾನ್ಯಗಳನ್ನು ದಾನದ ರೂಪದಲ್ಲಿ ಜಾತ್ರಾ ಮಹೋತ್ಸವದ ವೇಳೆ ನೀಡುತ್ತಾರೆ. ಎಲ್ಲಾ ತರಹದ ಕಾಳಿನಿಂದ ಸಾಂಬಾರ್ ತಯಾರಿಸಿ ರಾಗಿ ಮುದ್ದೆಯೊಂದಿಗೆ ಭಕ್ತರಿಗೆ ಉಣಬಡಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈ ಬಾರಿ ಜಾತ್ರೆಯಲ್ಲಿ ಪಾಲ್ಗೊಂಡ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಮುದ್ದೆ ದಾಸೋಹದ ಪ್ರಸಾದ ಸೇವಿಸಿ ದೇವರ ಕೃಪೆಗೆ ಪಾತ್ರರಾದರು.