Tag: Sreesanth

  • ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

    ಬೆಂಗಳೂರು: ಪ್ರತಿಭಾವಂತ ನಟ ಕೋಮಲ್ ಎಲ್ಲಿ ಹೋದರು ಎಂಬ ಪ್ರಶ್ನೆಯೊಂದು ವರ್ಷಾಂತರಗಳಿಂದ ಅವರನ್ನು ಅಭಿಮಾನಿಸುವ, ಮೆಚ್ಚಿಕೊಳ್ಳುವವರನ್ನೆಲ್ಲ ಕಾಡುತ್ತಲೇ ಇದೆ. ಕೆಂಪೇಗೌಡ 2 ಚಿತ್ರದ ಮೂಲಕ ಭಿನ್ನ ಗೆಟಪ್ಪಿನಲ್ಲಿ ಕೋಮಲ್ ಮತ್ತೆ ಮರಳೋ ಸೂಚನೆ ನೀಡಿದಾಗ ಎಲ್ಲರೂ ಖುಷಿಗೊಂಡಿದ್ದರು. ಆದರೆ ಅದಾದ ನಂತರವೂ ಒಂದು ದೊಡ್ಡ ಗ್ಯಾಪಿನ ನಂತರ ಕೋಮಲ್ ಕೆಂಪೇಗೌಡನಾಗಿ ಅಬ್ಬರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಈ ಸಿನಿಮಾ ಟ್ರೈಲರ್ ಈಗ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ವಿರಾಟ್ ರೂಪ ಪ್ರದರ್ಶಿಸಿದೆ.

    ಕೆಂಪೇಗೌಡ2 ಚಿತ್ರದ ಟ್ರೈಲರ್ ಗೆ ಈ ಪಾಟಿ ಜನಬೆಂಬಲ ಸಿಕ್ಕಿರೋದರಿಂದ ಕೋಮಲ್ ಕೂಡಾ ಖುಷಿಗೊಂಡಿದ್ದಾರೆ. ಹೊಸಾ ಗೆಟಪ್ಪಿನಲ್ಲಿ ಮರಳಿದಾಗ ಈ ಥರದ ಸ್ವಾಗತ ಸಿಕ್ಕರೆ ಯಾವ ನಟನಿಗೇ ಆದರೂ ಅದಕ್ಕಿಂತಲೂ ಖುಷಿಯ ಸಂಗತಿ ಬೇರೊಂದಿರಲು ಸಾಧ್ಯವಿಲ್ಲ. ಹೀಗೆ ತಮ್ಮನ ಚಿತ್ರ ಗೆಲ್ಲುವ ಸ್ಪಷ್ಟ ಸೂಚನೆ ಸಿಕ್ಕಿರುವಾಗ ಅಣ್ಣ ಜಗ್ಗೇಶ್ ಅವರಿಗೆ ಖುಷಿಯಾಗದಿರಲು ಸಾಧ್ಯವೇ?

    ಆರಂಭದಿಂದ ಇಲ್ಲಿಯವರೆಗೂ ಸಹೋದರ ಕೋಮಲ್ ಅವರಿಗೆ ಬೆನ್ನೆಲುಬಾಗಿ ಸಾಥ್ ನೀಡುತ್ತಾ ಬಂದಿರುವವರು ಜಗ್ಗೇಶ್. ಅವರೀಗ ಕೆಂಪೇಗೌಡ 2 ಚಿತ್ರದ ಟ್ರೈಲರಿಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲದಿಂದ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಇದಕ್ಕೆ ಕಾರಣರಾದ ಕನ್ನಡ ಕುಲಕೋಟಿಗೆ ಧನ್ಯವಾದ ಸಮರ್ಪಿಸಿದ್ದಾರೆ. `ಕೆಂಪೇಗೌಡ2 ಚಿತ್ರಕ್ಕೆ ಒಂದು ಮಿಲಿಯನ್ ವೀಕ್ಷಣೆ ಸಿಗುವಂತೆ ಮಾಡಿದ ಕನ್ನಡ ಕುಲಕೋಟಿಗೆ ಧನ್ಯವಾದಗಳು. ಇದೀಗ ಈ ಸಿನಿಮಾಗೆ ಡಿಐ ನಡೆಯುತ್ತಿದೆ. ಈ ರಾ ಸಿನಿಮಾ ನೋಡಿಯೇ ನನಗೆ ರೋಮಾಂಚನವಾಗಿದೆ. ಬೆಸ್ಟ್ ಕಮರ್ಶಿಯಲ್ ಮೂವಿಗಳ ಸಾಲಿಗೆ ಈ ಚಿತ್ರ ಸೇರಲಿದೆ ಎಂದು ಮನ ಹೇಳಿತು. ಅಣ್ಣನಾಗಿ ಹೆಮ್ಮೆಯಾಯಿತು’ ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.

    ಶಂಕರ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಈವರೆಗಿನ ಇಮೇಜನ್ನೇ ಬದಲಾಯಿಸಿಕೊಳ್ಳುವಂಥಾ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಕ್ರಿಕೆಟರ್ ಶ್ರೀಶಾಂತ್ ಖಳ ನಟನಾಗಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಕೂಡಾ ಸ್ಪೆಷಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋಮಲ್ ಪಾಲಿಗೆ ಮರುಹುಟ್ಟಿನಂಥಾ ರೀ ಎಂಟ್ರಿ. ಈ ಸಾಸದಲ್ಲಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಸೂಚನೆ ಟ್ರೈಲರಿಗೆ ಸಿಗುತ್ತಿರೋ ಬೆಂಬಲದ ಮೂಲಕವೇ ಸ್ಪಷ್ಟವಾಗುತ್ತದೆ.

  • ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹಾಗೂ ತಮ್ಮನ್ನು ಸಾರ್ವಜನಿಕವಾಗಿ ಶ್ರೀಶಾಂತ್ ನಿಂದಿಸಿದ್ದರು ಎಂದು 2013ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ಪ್ಯಾಡಿ ಅಪ್ಟನ್ ಬಹಿರಂಗ ಪಡಿಸಿದ್ದಾರೆ.

    ಇತ್ತೀಚೆಗೆ ಕೋಚ್ ಪ್ಯಾಡಿ ಅಪ್ಟನ್ ಅವರ ‘ದ ಬೇರ್ ಫೋಟ್ ಕೋಚ್’ ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ಶ್ರೀಶಾಂತ್ ನಡವಳಿಕೆ ಕುರಿತು ಬರೆದುಕೊಂಡಿದ್ದಾರೆ.

    2013 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಹುಲ್ ದ್ರಾವಿಡ್ ನಾಯಕರಾಗಿ ಮುನ್ನಡೆಸುತ್ತಿದ್ದರು. ಪ್ಯಾಡಿ ಅಪ್ಟನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಶ್ರೀತಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಅವರ ಬಂಧನ ಆಗುವ ಮುನ್ನ ನಡೆದ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ಇದರಿಂದ ಕೋಪಗೊಂಡ ಶ್ರೀಶಾಂತ್ ತಂಡದ ನಾಯಕರಾಗಿದ್ದ ದ್ರಾವಿಡ್ ಹಾಗೂ ತಮ್ಮನ್ನು ನಿಂದಿಸಿದ್ದರು ಎಂದು ವಿವರಿಸಿದ್ದಾರೆ.

    ಸ್ಪಾಟ್ ಫಿಕ್ಸಿಂಗ್ ಆರೋಪದ ಅಡಿಯಲ್ಲಿ 2013ರ ಮೇ 16 ರಂದು ಶ್ರೀಶಾಂತ್ ಬಂಧನವಾಗಿತ್ತು. ಅದಕ್ಕೂ ಮುನ್ನ ಶ್ರೀಶಾಂತ್ ಅಸಭ್ಯ ವರ್ತನೆ ತೋರಿದ್ದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪರಿಣಾಮ ಅವರಿಗೆ ತಂಡದಿಂದ ಕೈಬಿಟ್ಟಿರುವ ವಿಚಾರ ಶ್ರೀಶಾಂತ್‍ಗೆ ತಿಳಿಸಲಾಗಿತ್ತು. ಈ ವಿಚಾರಕ್ಕೆ ಅವರಿಗೆ ಕೋಪ ಬಂದಿತ್ತು. ತಂಡದ ಸಹ ಆಟಗಾರರ ಎದುರೇ ಅವಾಚ್ಯ ಪದ ಪ್ರಯೋಗ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಕೋಚ್ ಪ್ಯಾಡಿ ಅವರ ಬರಹದ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪ್ಯಾಡಿ ಒಬ್ಬ ಸುಳ್ಳುಗಾರ, ನಾನು ಎಂದು ಸಹ ಆಟಗಾರರೊಂದಿಗೆ ಈ ರೀತಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.

  • ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‍ಗೆ  ಸುಪ್ರೀಂನಿಂದ ಬಿಗ್ ರಿಲೀಫ್

    ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಶ್ರೀಶಾಂತ್‍ಗೆ ಸುಪ್ರೀಂನಿಂದ ಬಿಗ್ ರಿಲೀಫ್

    ನವದೆಹಲಿ: 2013ರಲ್ಲಿ ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ಶಿಸ್ತು ಸಮಿತಿ ವಿಧಿಸಿದ್ದ ಅಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ನಿಷೇಧದ ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿದೆ.

    ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಕೆಎಂ ಜೋಸೆಫ್ ದ್ವಿಸದಸ್ಯ ಪೀಠ ಶ್ರೀಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಬಿಸಿಸಿಐ ಶ್ರೀಶಾಂತ್ ಮೇಲೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಿ ಮೂರು ತಿಂಗಳ ಒಳಗಾಗಿ ಮರುವಿಚಾರಣೆ ನಡೆಸಿ ಉತ್ತರಿಸುವಂತೆ ಸೂಚಿಸಿದೆ.

    ಶ್ರೀಶಾಂತ್ ಪರ ವಕೀಲರಾದ ಸಲ್ಮಾನ್ ಖುರ್ಷಿದ್ ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ಖಚಿತವಾದ ಆಧಾರಗಳಿಲ್ಲದೇ ಅಜೀವ ನಿಷೇಧ ಶಿಕ್ಷೆ ಬಹಳ ಕಠಿಣ ನಿರ್ಣಯ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ನಿರ್ಧಾರ ಶ್ರೀಶಾಂತ್ ವಿರುದ್ಧದ ಕ್ರಿಮಿನಲ್ ಪ್ರಕರಣ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    2013ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಶ್ರೀಶಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ವೇಳೆ ಓವರಿನಲ್ಲಿ 14 ರನ್ ನೀಡಲು ಶ್ರೀಶಾಂತ್ ಫಿಕ್ಸಿಂಗ್ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಆ ಓವರಿನಲ್ಲಿ 13 ರನ್ ಮಾತ್ರ ಬಂದಿದೆ. ಶ್ರೀಶಾಂತ್ ಯಾವುದೇ ಫಿಕ್ಸಿಂಗ್ ಮಾಡಿಕೊಂಡಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಕೇವಲ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ಕ್ರಮಕೈಗೊಳ್ಳಲಾಗಿತ್ತು ಎಂಬುದನ್ನು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೇ ಬಿಸಿಸಿಐ ನಿಷೇಧವನ್ನು ತೆರವುಗೊಳಿಸಿದರೆ ಮತ್ತೆ ಕ್ರಿಕೆಟ್ ಆಡಲು ಶ್ರೀಶಾಂತ್ ಸಿದ್ಧರಿದ್ದಾರೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

    2018 ರಲ್ಲಿ ಕೇರಳ ಹೈಕೋರ್ಟ್ ಏಕ ಸದಸ್ಯ ಪೀಠ ಬಿಸಿಸಿಐ ಆದೇಶವನ್ನು ರದ್ದುಗೊಳಿಸಿತ್ತು. ಬಿಸಿಸಿಐ ಈ ತೀರ್ಪಿನ ಬಗ್ಗೆ ಮರುಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಿಷೇಧವನ್ನು ತೆರವುಗೊಳಿಸಲು ತಡೆ ನೀಡಿತ್ತು. ಪರಿಣಾಮ ಶ್ರೀಶಾಂತ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

    ಶ್ರೀಶಾಂತ್ ಮಾತ್ರವಲ್ಲದೇ ಮತ್ತಿಬ್ಬರು ಆಟಗಾರರ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಬರೋಬ್ಬರಿ 10 ವರ್ಷಗಳ ಬಳಿಕ ಶ್ರೀಶಾಂತ್ ಜೊತೆ ಕ್ಷಮೆ ಕೇಳಿದ ಹರ್ಭಜನ್

    ಮುಂಬೈ: ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್) ನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ‘ಕಪಾಳ ಮೋಕ್ಷ’ ಮಾಡಿದ ಘಟನೆ ಬಗ್ಗೆ ಟೀಂ ಇಂಡಿಯಾ ಬೌಲರ್ ಹರ್ಭಜನ್ ಸಿಂಗ್ ಕ್ಷಮೆ ಕೋರಿದ್ದಾರೆ.

    ಘಟನೆ ನಡೆದ ಬರೋಬ್ಬರಿ 10 ವರ್ಷಗಳ ಬಳಿಕ ಹರ್ಭಜನ್ ಈ ಕುರಿತು ಮಾತನಾಡಿದ್ದು, ನಾನು ಶ್ರೀಶಾಂತ್ ಮೇಲೆ ಕೈ ಮಾಡಬಾರದಿತ್ತು. ಅದರಲ್ಲೂ ರಾಷ್ಟ್ರೀಯ ತಂಡದಲ್ಲಿ ಜೊತೆಗೆ ಆಡಿದ್ದ ಶ್ರೀಶಾಂತ್ ಒಬ್ಬ ಉತ್ತಮ ಆಟಗಾರನಾಗಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಶುಭಕೋರುತ್ತೇನೆ. ಜನರು ಈ ಬಗ್ಗೆ ಎಷ್ಟೇ ಮಾತನಾಡಿದ್ರು, ಇಂದಿಗೂ ಶ್ರೀಶಾಂತ್ ನನ್ನ ಸಹೋದರ ಎಂದು ಹೇಳಿದ್ದಾರೆ.

    2008ರ ಐಪಿಎಲ್ ಆವೃತ್ತಿ ವೇಳೆ ಮುಂಬೈ ತಂಡ ಹಾಗೂ ಪಂಜಾಬ್ ತಂಡದಲ್ಲಿ ಇದ್ದ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಕಪಾಳ ಮೋಕ್ಷ ಘಟನೆ ನಡೆದಿತ್ತು. ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಪಡೆದ ವೇಳೆ ಘಟನೆ ನಡೆದಿತ್ತು. ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಶಾಕ್‍ಗೆ ಗುರಿ ಮಾಡಿತ್ತು. ಶ್ರೀಶಾಂತ್ ಪಂದ್ಯದಲ್ಲಿ ಗೆದ್ದ ವೇಳೆ ಅನುಚಿತವಾಗಿ ಸಂಭ್ರಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಹರ್ಭಜನ್ ಸಿಂಗ್ ಕೋಪದಿಂದ ಶ್ರೀಶಾಂತ್ ಮೇಲೆ ಕೈ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ.

    ಈ ಹಿಂದೆಯೂ ಕೂಡ ಹರ್ಭಜನ್ ಘಟನೆ ಬಗ್ಗೆ ಮಾತನಾಡಿ ತಮ್ಮ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಬಿಗ್ ಬಾಸ್‍ನಲ್ಲಿ ಭಾಗವಹಿಸಿರುವ ಶ್ರೀಶಾಂತ್ ಗೆ ಕ್ಷಮೆ ಕೋರಿದ್ದಾರೆ. ಘಟನೆ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಶಾಂತ್, ಅಂದು ಹರ್ಭಜನ್ ಕೇವಲ ನನಗೆ ಕಪಾಳ ಮೋಕ್ಷ ಮಾತ್ರವಷ್ಟೇ ಮಾಡಿರಲಿಲ್ಲ, ಬಲವಾಗಿ ಹೊಡೆದಿದ್ದರು ಎಂದು ನೆನಪಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಶಾಂತ್ ಮೇಲೆ ಅಜೀವ ನಿಷೇಧ-ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್ ಜಾರಿ

    ಶ್ರೀಶಾಂತ್ ಮೇಲೆ ಅಜೀವ ನಿಷೇಧ-ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್ ಜಾರಿ

    ನವದೆಹಲಿ: ಶ್ರೀಶಾಂತ್ ಮೇಲೆ ಅಜೀವ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿದೆ.

    ಬಿಸಿಸಿಐ ಅಜೀವ ನಿಷೇಧ ವಿಧಿಸಿದ್ದನ್ನು ಪ್ರಶ್ನಿಸಿ ಶ್ರೀಶಾಂತ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ.ದೀಪಕ್ ಮಿಶ್ರಾ, ನ್ಯಾ.ಎಎಂ ಖಾನ್ವಿಲ್ಕರ್ ಮತ್ತು ನ್ಯಾ.ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

    ವಿಚಾರಣೆ ವೇಳೆ ಪೀಠ ನಿಷೇಧ ಸಂಬಂಧ ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿತು. ಬಿಸಿಸಿಐ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಉತ್ತರಿಸುವಂತೆ ಶ್ರೀಶಾಂತ್ ಅವರಿಗೂ ಕೋರ್ಟ್ ನಾಲ್ಕು ವಾರಗಳ ಕಾಲ ಸಮಯಾವಕಾಶ ನೀಡಿತು.

    ಬಿಸಿಸಿಐ ಪರ ಹಿರಿಯ ವಕೀಲ ಪ್ರರಾಗ್ ತ್ರಿಪಾಠಿ ನ್ಯಾಯಾಲಯ ನೋಟಿಸ್ ಸ್ವೀಕರಿಸಿದರು. ಶ್ರೀಶಾಂತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ಕೇರಳ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಆದರೂ ಅವರ ಮೇಲೆ ಅಜೀವ ನಿಷೇಧ ಹೇರಿದ ಕ್ರಮ ಸರಿಯಲ್ಲ ಎಂದು ವಾದಿಸಿದರು.

    ಏನಿದು ಪ್ರಕರಣ?
    2013 ರ ಐಪಿಎಲ್ ವೇಳೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ಅಜೀವ ನಿಷೇಧ ವಿಧಿಸಿತ್ತು. ಅಜೀವ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ 2017ರ ಆಗಸ್ಟ್ ನಲ್ಲಿ ಸಾಕ್ಷ್ಯಧಾರಗಳ ಕೊರತೆಯಿಂದಾಗಿ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐಗೆ ಆದೇಶಿಸಿತ್ತು.

    ಈ ಆದೇಶದ ಬಳಿಕ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂದು ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ನ ದ್ವಿಸದಸ್ಯ ಪೀಠ ಎತ್ತಿ ಹಿಡಿದಿತ್ತು. ವಿಭಾಗಿಯ ಪೀಠದ ಆದೇಶವನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

    2013 ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಜೊತೆಗೆ ರಾಜಸ್ಥಾನ ರಾಯಲ್ಸ್ ತಂಡದ ಅಜಿತ್ ಚಾಂಡೀಲ, ಅಂಕಿತ್ ಚೌಹಣ್, ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡಗಳನ್ನು ಬಿಸಿಸಿಐ ಎರಡು ವರ್ಷಗಳ ಕಾಲ ನಿಷೇಧಿಸಿತ್ತು. ಆದರೆ ಕೋರ್ಟ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ ನಂತರವು ಬಿಸಿಸಿಐ ಶ್ರೀಶಾಂತ್ ಮೇಲಿನ ಅಜೀವ ನಿಷೇಧವನ್ನು ಹಿಂಪಡೆಯಲು ನಿರಾಕರಿಸಿತ್ತು.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.