Tag: Sreesanth

  • ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

    ಗಂಭೀರ್ ವಿರುದ್ಧ ಆರೋಪ – ಶ್ರೀಶಾಂತ್‍ಗೆ ಲೀಗಲ್ ನೋಟಿಸ್ ಜಾರಿ

    ಸೂರತ್: ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವೇಗದ ಬೌಲರ್ ಶ್ರೀಶಾಂತ್ (Sreesanth) ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ.

    ಗೌತಮ್ ಗಂಭೀರ್ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು. ಈಗ ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ. ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಆಟಗಾರನನ್ನು ಟೀಕಿಸುವ ವೀಡಿಯೊಗಳನ್ನು ತೆಗೆದುಹಾಕಿದರೆ ಮಾತ್ರ ಅವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಹೇಳಲಾಗಿದೆ. ಇದನ್ನೂ ಓದಿ: KSCA ಟೂರ್ನಿಗಳಲ್ಲಿ 1,400 ರನ್‌ – ಟೀಂ ಇಂಡಿಯಾ ಸೇರಲು ಕನಸು ಕಾಣುತ್ತಿದ್ದಾನೆ ಬೆಂಗಳೂರಿನ ಬಾಲಕ

    ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ. ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಇಬ್ಬರ ಜಗಳ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇಬ್ಬರು ಆಟಗಾರರ ಗಲಾಟೆ ವಿಚಾರವಾಗಿ ಶ್ರೀಶಾಂತ್ ಅವರ ಪತ್ನಿ ಸಹ ಸಾಮಾಜಿಕ ಜಾಲತಾಣದಲ್ಲಿ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್‌

  • ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಮುಂಬೈ: ಐಪಿಎಲ್ 2008ರ ಆವೃತ್ತಿಯ ಪಂದ್ಯವೊಂದರಲ್ಲಿ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್‍ಗೆ 14 ವರ್ಷಗಳ ನಂತರ ಕ್ಷಮೆಯಾಚಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಲೈವ್ ವೀಡಿಯೋ ಚಾಟ್‍ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿ, 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು. ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜೊತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ಅದು ಆಗಬಾರದಿತ್ತು ಅಂತಾ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರು, ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅವರ ಆಕ್ರಮಣಕಾರಿ ನಡುವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್ ಅವರ ಕೆನ್ನೆಗೆ ಹರ್ಭಜನ್ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 66 ರನ್‍ಗಳ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್ ಅವರನ್ನು ನೋಡಿ ಹಲವರು ಮರುಗಿದ್ದರು. ಹರ್ಭಜನ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು. ಆ ಬಳಿಕ ಇವರಿಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದರು.

  • ಐಪಿಎಲ್ ಹರಾಜು ಪಟ್ಟಿಯಿಂದ ಶ್ರೀಶಾಂತ್ ಔಟ್

    ಐಪಿಎಲ್ ಹರಾಜು ಪಟ್ಟಿಯಿಂದ ಶ್ರೀಶಾಂತ್ ಔಟ್

    ಚೆನ್ನೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಅಡುವ ಕನಸು ಕಂಡಿದ್ದ ಶ್ರೀಶಾಂತ್‍ಗೆ ನಿರಾಸೆಯಾಗಿದ್ದು, ಐಪಿಎಲ್ ಹರಾಜು ಪಟ್ಟಿಯಿಂದ ಔಟ್ ಆಗಿದ್ದಾರೆ.

    ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯುವ ಹರಾಜು ಪ್ರಕ್ರಿಯೆಗೆ 292 ಕ್ರಿಕೆಟಿಗರ ಹೆಸರು ಅಂತಿಮವಾಗಿ ಆಯ್ಕೆಗೊಂಡಿದೆ. ಈ ಪಟ್ಟಿಯಲ್ಲಿ 164 ಭಾರತೀಯ ಆಟಗಾರರಿದ್ದರೆ ಇನ್ನೂಳಿದ 128 ಜನ ವಿದೇಶಿ ಕ್ರಿಕೆಟಿಗರಿದ್ದಾರೆ. ಆದರೆ 164 ಭಾರತೀಯ ಪಟ್ಟಿಯಲ್ಲಿ ಶ್ರೀ ಶಾಂತ್ ಹೆಸರು ಕಾಣಿಸುತ್ತಿಲ್ಲ ಇದರೊಂದಿಗೆ 14ನೇ ಆವೃತ್ತಿ ಐಪಿಎಲ್ ಕನಸು ಭಗ್ನಗೊಂಡಿದೆ.

    2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಮೂಲಕ ಮತ್ತೆ ಟೀಮ್ ಇಂಡಿಯಾಗೆ ಮರಳುವ ಹುಮ್ಮಸ್ಸಿನಲ್ಲಿದ್ದ ಶ್ರೀಗೆ ಶಾಕ್ ಎಂಬಂತೆ ಹರಾಜಿನ ಅಂತಿಮ ಪಟ್ಟಿಯಿಂದ ಹೊರಬಿಳುವ ಮೂಲಕ ನಿರಾಸೆ ಆಗಿದೆ. ಶ್ರೀ 75 ಲಕ್ಷ ರೂ. ಮೂಲಬೆಲೆಗೆ ತಮ್ಮ ಹೆಸರನ್ನು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಆದರೆ ಫ್ರಾಂಚೈಸಿ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಇರಾದೆ ತೋರದೆ ಇದ್ದ ಹಿನ್ನಲೆ ಅಂತಿಮ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿದೆ.

    ಈ ಮೊದಲು ಒಟ್ಟು 1,114 ಆಟಗಾರರ ಪಟ್ಟಿ ಸಿದ್ಧವಾಗಿತ್ತು ಈ ಪಟ್ಟಿಯಿಂದ 8 ಫ್ರಾಂಚೈಸಿಗಳ ಆಸಕ್ತಿಯ ಆಟಗಾರರನ್ನು ಗಮನಿಸಿ ಉಳಿದ ಆಟಗಾರರನ್ನು ಕೈ ಬಿಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 10 ಆಟಗಾರರಿಗೆ 2 ಕೋಟಿ ರೂ. ಮೂಲಬೆಲೆ ನಿಗದಿಯಾಗಿದ್ದು, ಈ ಪಟ್ಟಿಯಲ್ಲಿ ಭಾರತೀಯ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್ ಕಾಣಿಸಿಕೊಂಡರೆ ಇನ್ನೂಳಿದ ಆಟಗಾರರಾದ ಸ್ವೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‍ವೆಲ್, ಇಂಗ್ಲೆಂಡ್‍ನ ಜೇಸನ್ ರಾಯ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ, ಶಕೀಬ್ ಅಲ್ ಹಸನ್ ವಿದೇಶಿ ಆಟಗಾರರಾಗಿದ್ದಾರೆ.

    ಶ್ರೀಶಾಂತ್‍ರಂತೆ ಅಂತಿಮ ಪಟ್ಟಿಯಲ್ಲಿ ಹೊರಬಿದ್ದ ಇನ್ನೊಬ್ಬ ಆಟಗಾರರಾಗಿ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕಾಣಿಸಿಕೊಂಡಿದ್ದಾರೆ. ಪೂಜಾರ 50 ಲಕ್ಷ ಮುಖಬೆಲೆ ಹೊಂದಿದ್ದರು. 12 ಆಟಗಾರರೂ 1.5 ಕೋಟಿ ರೂ ಮೂಲಬೆಲೆ ಪಟ್ಟಿಯಲ್ಲಿ ಕಾಣಿಸಿಕೊಂಡರೆ 11 ಜನ ತಲಾ 1 ಕೋಟಿ ರೂ ಮೂಲಬೆಲೆಯೊಂದಿಗೆ ಅಂತಿಮ ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 18 ನಡೆಯುವ ಹರಾಜಿನಲ್ಲಿ 8 ತಂಡಗಳು 22 ವಿದೇಶಿ ಆಟಗಾರರು ಸಹಿತ ಗರಿಷ್ಠ 61 ಆಟಗಾರರನ್ನು ಖರೀದಿಸಲು ಅವಕಾಶವಿದ್ದು ಯಾರು ಯಾವ ತಂಡದ ಪಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

  • 7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    ಮುಂಬೈ: 7 ವರ್ಷದ ಬಳಿಕ ಕ್ರಿಕೆಟ್‌ಗೆ ಮರಳಿದ ಬೌಲರ್‌ ಶ್ರೀಶಾಂತ್‌ ತಾನು ಆಡಿದ ಮೊದಲ ಪಂದ್ಯದಲ್ಲಿ ವಿಕೆಟ್‌ ಕಿತ್ತಿದ್ದಾರೆ. ಎದುರಾಳಿ ತಂಡದ ಆಟಗಾರನನ್ನು ಶ್ರೀಶಾಂತ್‌ ಬೌಲ್ಡ್‌ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಸೈಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಕೇರಳ ಪರ ಆಡಿದ ಶ್ರೀಶಾಂತ್‌ 4 ಓವರ್‌ ಎಸೆದು 29 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ವಿಕೆಟ್‌ ಪಡೆದ ಶ್ರೀಶಾಂತ್‌ ಪಿಚ್‌ಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದ್ದಾರೆ.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಪುದುಚೇರಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು. ಕೇರಳ 18.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

    2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್‌ಗೆ ಅಂತ್ಯವಾಗಿತ್ತು. ನಿಷೇಧ ಮುಗಿದ ಬಳಿಕ ಕೇರಳ ಪರ ಈಗ ಶ್ರೀಶಾಂತ್‌ ಆಡುತ್ತಿದ್ದಾರೆ.

    ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

    ಈಗಾಗಲೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

  • 7 ವರ್ಷದ ಬಳಿಕ ಕ್ರಿಕೆಟ್‍ಗೆ ಮರಳಿದ ಶ್ರೀಶಾಂತ್ 

    7 ವರ್ಷದ ಬಳಿಕ ಕ್ರಿಕೆಟ್‍ಗೆ ಮರಳಿದ ಶ್ರೀಶಾಂತ್ 

    ತಿರುವನಂತಪುರಂ: 7 ವರ್ಷದ ಬಳಿಕ ಕ್ರಿಕೆಟ್‍ಗೆ ಶ್ರೀಶಾಂತ್ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಾವಳಿಗಾಗಿ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಿರುವನಂತಪುರ ಎಕ್ಸ್‌ಪ್ರೆಸ್‌ ಖ್ಯಾತಿಯ ಶ್ರೀಶಾಂತ್ ಸ್ಥಾನ ಪಡೆದುಕೊಂಡಿದ್ದಾರೆ.

    ಶ್ರೀಶಾಂತ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ  ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಏಳು ವರ್ಷಗಳ ನಿಷೇಧ ಮುಗಿಸಿ ಬಂದಿದ್ದರು. ಸ್ಥಾನ ಪಡೆದ ಬಳಿಕ ಕೇರಳ ರಾಜ್ಯ ತಂಡದ ಸಹ ಆಟಗಾರರು ಮತ್ತು ನಿರ್ವಾಹಕರೊಂದಿಗೆ ತಮ್ಮ ರಾಜ್ಯದ ಕ್ಯಾಪ್‍ನ್ನು ಸ್ವೀಕರಿಸುವ ವಿಡಿಯೋ ಒಂದನ್ನು ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    ವಿಡಿಯೋದ ಜೊತೆ ಒಂದು ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿರುವ ಶ್ರೀಶಾಂತ್ ಮುರಿದ ಬಿದ್ದ ಮನುಷ್ಯ ತನ್ನನ್ನು ತಾನೇ ಮರುನಿರ್ಮಾಣ ಮಾಡಿಕೊಳ್ಳುವ ಬಲದ ಮುಂದೆ ಉಳಿದೆಲ್ಲವು ಶೂನ್ಯ ಎಂದು ಟ್ವೀಟ್ ಮಾಡಿದ್ದಾರೆ.

    ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿರುವ ಪಂದ್ಯಾವಳಿಯಲ್ಲಿ ಕೇರಳ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಟೂರ್ನಿಗಾಗಿ ಉತ್ತರ ಪ್ರದೇಶಕ್ಕೆ ತೆರಳಲಿರುವ ಶ್ರೀಶಾಂತ್ ಅವರಿಗೆ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಆಲ್ ದಿ ಬೆಸ್ಟ್ ಗೆಳೆಯ ಶೀಘ್ರದಲ್ಲೇ ಭೇಟಿಯಾಗೋಣ ಎಂದು ಶುಭಹಾರೈಸಿದ್ದಾರೆ.

    37ರ ಹರೆಯದ ಶ್ರೀಶಾಂತ್ ಕೊನೆಯ ಬಾರಿ 2011ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲೂ ಕಣಕ್ಕೆ ಇಳಿದಿದ್ದರು. ನಂತರ ಸ್ಪಾಟ್ ಫಿಕ್ಸಿಂಗ್‍ನಿಂದಾಗಿ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಮತ್ತೆ ಭಾರತ ತಂಡಕ್ಕೆ ಪುನಾರಾಗಮನದ ನಿರೀಕ್ಷೆಯಲ್ಲಿದ್ದಾರೆ. ಸಚಿನ್ ಬೇಬಿ, ಜಲಾಜ್ ಸಕ್ಸೇನಾ ಮತ್ತು ರಾಬಿನ್ ಉತ್ತಪ್ಪ ಕೂಡ ಕೇರಳ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  • ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    – ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್ ಲೀಡ್ ಮಾಡಬೇಕು

    ನವದೆಹಲಿ: ದಿನೇಶ್ ಕಾರ್ತಿಕ್ ಬದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇಯಾನ್ ಮಾರ್ಗನ್ ಅವರು ಮುನ್ನೆಡಸಬೇಕು ಎಂದು ಭಾರತ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ಹೇಳಿದ್ದಾರೆ.

    ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ ಭರ್ಜರಿ 228 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಲ್ಲಿ ಒಳ್ಳೆಯ ಆರಂಭ ಕಂಡರೂ ಪಂದ್ಯದ ಮಧ್ಯೆಯಲ್ಲಿ ಕುಸಿದಿತು. ಕೊನೆಯಲ್ಲಿ ಮಾರ್ಗನ್ ತ್ರಿಪಾಠಿಯವರು ಉತ್ತಮವಾಗಿ ಆಡಿದರು. ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು.

    ಈ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಶ್ರೀಶಾಂತ್ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಯಾನ್ ಮಾರ್ಗನ್ ಅವರು ಕೆಕೆಆರ್ ತಂಡವನ್ನು ಮುನ್ನೆಡಸಬೇಕು. ದಿನೇಶ್ ಕಾರ್ತಿಕ್ ಅಲ್ಲ. ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್‍ನಲ್ಲಿ ತಂಡವನ್ನು ಮುನ್ನಡೆಸಬೇಕು. ಕೆಕೆಆರ್ ತಂಡ ಇದರ ಬಗ್ಗೆ ಯೋಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ, ಧೋನಿ ಮತ್ತು ರೋಹಿತ್ ರೀತಿಯಲ್ಲಿ ಮುಂದೆ ನಿಂತು ತಂಡವನ್ನು ನಡೆಸುವವರು ಕ್ಯಾಪ್ಟನ್ ಆಗಬೇಕು ಎಂದು ತಿಳಿಸಿದ್ದಾರೆ.

    ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 4 ಪಂದ್ಯದಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಇದರ ಜೊತೆಗೆ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಫಾರ್ಮ್‍ನಲ್ಲಿ ಇಲ್ಲ. ತಂಡಕ್ಕೆ ಬೇಕಾದಾಗ ರನ್ ಸಿಡಿಸುವಲ್ಲಿ ಕಾರ್ತಿಕ್ ವಿಫಲವಾಗಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡ ತಂಡ ಸಂಕಷ್ಟದಲ್ಲಿ ಇದ್ದಾಗ ಕ್ರೀಸಿಗೆ ಬಂದ ಕಾರ್ತಿಕ್ 8 ಬಾಲ್ ಆಡಿ ಕೇವಲ 6 ರನ್ ಸಿಡಿಸಿ ಔಟ್ ಆಗಿದ್ದರು. ಇದು ಕೆಕೆಆರ್ ಅಭಿಮಾನಿಗಳಿಗೂ ಬೇಸರ ತರಿಸಿತ್ತು.

    ಆದರೆ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಮಾರ್ಗನ್ ಅವರು, ತಂಡಕ್ಕೆ ಅಗತ್ಯವಿದ್ದಾಗ ಬಂದು ಚಾಂಪಿಯನ್ ಇನ್ನಿಂಗ್ಸ್ ಆಡಿದ್ದರು. ಕೊನೆಯಲ್ಲಿ ಸಿಕ್ಸ್‍ಗಳ ಸುರಿಮಳೆಗೈದ ಮಾರ್ಗನ್ ಅವರು, ಭರ್ಜರಿ ಐದು ಸಿಕ್ಸ್ ಮತ್ತು ಒಂದು ಫೋರ್ ಸಮೇತ ಕೇವಲ 18 ಬಾಲಿನಲ್ಲೇ ಸ್ಫೋಟಕ 44 ರನ್ ಸಿಡಿಸಿದರು. ಈ ಮೂಲಕ ಭಾರಿ ರನ್ ಅಂತರದಿಂದ ಸೋಲುತ್ತಿದ್ದ ತಂಡವನ್ನು ಕೇವಲ 18 ರನ್ ಅಂತರದಲ್ಲಿ ಸೋಲುವಂತೆ ಮಾಡಿದ್ದರು.

  • ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    ಸಚಿನ್‍ರಂತೆ ಎಂಎಸ್‍ಡಿಯನ್ನು ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು: ಶ್ರೀಶಾಂತ್

    – ಧೋನಿ ಟಿ-20 ವಿಶ್ವಕಪ್ ಆಡಬೇಕು

    ನವದೆಹಲಿ: ಭಾರತ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಮತ್ತು ಅವರನ್ನು ಕೂಡ ಸಚಿನ್ ಅವರಂತೆ ಹೆಗಲ ಮೇಲೆ ಹೊತ್ತು ಬೀಳ್ಕೊಡಬೇಕು ಎಂದು ಭಾರತದ ವೇಗದ ಬೌಲರ್ ಶ್ರೀಶಾಂತ್ ಹೇಳಿದ್ದಾರೆ.

    ಕೊನೆಯ ಬಾರಿಗೆ 2019ರ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದ್ದ ಧೋನಿ, ಆ ನಂತರ ಕ್ರಿಕೆಟ್‍ಯಿಂದ ದೂರ ಉಳಿದಿದ್ದರು. ಈ ನಡುವೆ ಐಪಿಎಲ್ ಆಡಲು ಧೋನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದೂ ಸಾಧ್ಯವಾಗಿಲ್ಲ. ಈ ಎಲ್ಲದರ ನಡುವೆ ಧೋನಿ ಮತ್ತೆ ಕಮ್‍ಬ್ಯಾಕ್ ಮಾಡ್ತಾರಾ? ಇಲ್ಲ ನಿವೃತ್ತಿ ಪಡೆಯುತ್ತಾರಾ ಎಂಬ ಚರ್ಚೆಗಳು ಜೋರಾಗಿ ನಡೆದಿವೆ. ಈಗ ಶ್ರೀಶಾಂತ್ ಅವರು ಧೋನಿ ಮತ್ತೆ ಕ್ರಿಕೆಟ್ ಆಡಬೇಕು ಎಂದು ಹೇಳಿದ್ದಾರೆ.

    ಖಾಸಗಿ ಕ್ರಿಕೆಟ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರೀಶಾಂತ್ ಅವರು, ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ಅವರ ಕೊಡುಗೆ ಅಪಾರ. ನಾಯಕನಾಗಿ ಅವರು ಮಾಡಿರುವ ಸಾಧನೆಗೆ ಸಾಟಿಯೇ ಇಲ್ಲ. ಈಗ ಧೋನಿ ಅವರನ್ನು ಟೀಕೆ ಮಾಡುತ್ತಿರುವವರಿಗೆ ಅವರು ಮುಂದೆ ಬ್ಯಾಟ್ ಮೂಲಕ ಉತ್ತರ ಕೊಡಲಿದ್ದಾರೆ. ಅವರು ಖಂಡಿತವಾಗಿಯೂ ಈ ಬಾರಿಯ ಟಿ-20 ವಿಶ್ವಕಪ್ ಆಡಬೇಕು ಎಂದು ತಿಳಿಸಿದ್ದಾರೆ.

    ನನಗೆ ವಿಶ್ವಪಕ್ ಮುಂಚೆಯೇ ಐಪಿಎಲ್ ನಡೆಯುತ್ತದೆ ಎಂದು ಭರವಸೆ ಇದೆ. ಈ ಐಪಿಎಲ್‍ನಲ್ಲಿ ಧೋನಿ ಭಾಯ್, ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರೆ. ಅವರು ಈಗ ಮೌನವಾಗಿ ಇರಬಹುದು. ಆದರೆ ಅವರಿಗೆ ಗೊತ್ತು ಏನೂ ಮಾಡಬೇಕು ಎಂದು. ಅವರು ದೇಶಕ್ಕಾಗಿ ಆಡಿದ್ದಾರೆ. ದೇಶಕ್ಕಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲ ಅವರು ದೇಶಕ್ಕಾಗಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಕೆಲವರು ಯೋಚಿಸಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ.

    ಅವರ ನಿವೃತ್ತಿಯನ್ನು ಧೋನಿ ಅವರೇ ನಿರ್ಧಾರ ಮಾಡಲಿ. ಅವರು ಅಭಿಮಾನಿಗಳಿಗಾಗಿ ಅವರು ಮುಂದಿನ ಟಿ-20 ವಿಶ್ವಕಪ್ ಆಡಲಿ. 2011ರ ವಿಶ್ವಕಪ್‍ನಲ್ಲಿ ಸಚಿನ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಹಾಗೇ ಯಾರದಾರೂ ಮೈದಾನದಲ್ಲಿ ಧೋನಿ ಅವರನ್ನು ಹೊತ್ತು ಓಡಾಡಬೇಕು ಎಂಬುದು ನನ್ನ ಆಸೆ. ಅವರು ಅದಕ್ಕೆ ಅರ್ಹರಾಗಿದ್ದಾರೆ ಎಂದು ಶ್ರೀಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ ಶ್ರೀಶಾಂತ್ ಅವರನ್ನು ಕ್ರಿಕೆಟ್‍ನಿಂದ ನಿಷೇಧ ಮಾಡಿತ್ತು. ಈ ಅವಧಿ ಇದೇ ವರ್ಷದ ಸೆಪ್ಟಂಬರ್ ಗೆ ಮುಗಿಯಲಿದೆ. ಈಗಾಗಲೇ ಶ್ರೀಶಾಂತ್ ಕೇರಳದ ಪರವಾಗಿ ರಣಜಿ ಪಂದ್ಯವಾಡಲು ಸಿದ್ಧವಾಗಿದ್ದಾರೆ. ಜೊತೆಗೆ 2023ರಲ್ಲಿ ನಡೆಯುವ ವಿಶ್ವಕಪ್ ಆಡುವುದೇ ನನ್ನ ಗುರಿ ಎಂದು ಕೂಡ ಹೇಳಿಕೊಂಡಿದ್ದಾರೆ.

  • ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ಕೇರಳ ರಣಜಿ ಕ್ರಿಕೆಟ್ ತಂಡದಲ್ಲಿ ಶ್ರೀಶಾಂತ್‍ಗೆ ಸ್ಥಾನ!

    ತಿರುವನಂತಪುರಂ: ಟೀಂ ಇಂಡಿಯಾ ವಿಶ್ವಕಪ್ ಗೆದ್ದ ತಂಡದ ಬೌಲರ್ ಎಸ್.ಶ್ರೀಶಾಂತ್ ಕ್ರಿಕೆಟ್‍ಗೆ ಮತ್ತೆ ಕಮ್‍ಬ್ಯಾಕ್ ಮಾಡುವ ಮಾರ್ಗ ತೆರೆದುಕೊಂಡಿದೆ. ಫಿಕ್ಸಿಂಗ್ ಆರೋಪದ ಕಾರಣ 37 ವರ್ಷದ ಕ್ರಿಕೆಟಿಗ ಶ್ರೀಶಾಂತ್ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಸದ್ಯ ಬಿಸಿಸಿಐ ವಿಧಿಸಿದ್ದ ನಿಷೇಧದ ಶಿಕ್ಷೆ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ಇತ್ತ ನಿಷೇಧದ ಅವಧಿ ಮುಕ್ತಾಯವಾಗುತ್ತಿದಂತೆ ಮತ್ತೆ ಶ್ರೀಶಾಂತ್ ಅವರನ್ನು ತಂಡಕ್ಕೆ ಪರಿಗಣಿಸಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

    ರಣಜಿ ಟ್ರೋಪಿಗಾಗಿ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಪ್ರಕಟಿಸಿರುವ ಸಂಭವನೀಯ ರಣಜಿ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರನ್ನು ಸೇರಿಸಿದೆ. ಆದರೆ ಶ್ರೀಶಾಂತ್ ಕಮ್‍ಬ್ಯಾಕ್ ಆತನ ಫಿಟ್ನೆಸ್ ಮೇಲೆ ನಿರ್ಧಾರವಾಗಲಿದೆ. ಸಂಸ್ಥೆ ನಿರ್ವಹಿಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಶ್ರೀಶಾಂತ್ ಉರ್ತೀರ್ಣರಾದರೆ ಮತ್ತೆ ಕ್ರೀಡಾಂಗಣದಲ್ಲಿ ಮಿಂಚುವ ಅವಕಾಶ ಲಭಿಸಲಿದೆ.

    ಇತ್ತ ಕೆಸಿಎ ನಿರ್ಣಯದ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಶಾಂತ್, ಕೆಸಿಎಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ದೊರೆತಿರುವ ಅವಕಾಶದಿಂದ ನನ್ನ ಉತ್ಸಾಹ ಹೆಚ್ಚಾಗಿದೆ. ರಣಜಿ ಆಡುವ ಅವಕಾಶ ಕೊಟ್ಟ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಫಿಟ್ನೆಸ್ ಸಾಬೀತು ಪಡಿಸಿ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತೇನೆ. ಎಲ್ಲಾ ವಿವಾದಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಕೆಸಿಎ ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ಬೌಲರ್ ಟಿನು ಯೊಹಾನನ್ ಅವರನ್ನು ತಂಡದ ಕೋಚ್ ಆಗಿ ನೇಮಿಸಿತ್ತು. ಈ ವೇಳೆ ಶ್ರೀಶಾಂತ್ ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, ಶ್ರೀಶಾಂತ್ ಕಮ್‍ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲವನ್ನು ನೀಡಲಿದೆ. ಆದರೆ ಆತನ ಫಿಟ್ನೆಸ್ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಶ್ರೀ ತಂಡಕ್ಕೆ ಬಂದರೇ ಆತನ ಅನುಭವ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

     

    View this post on Instagram

     

    #nevergiveup #cricket #love #india #kerala #PRIDE “personal responsibility in delivering excellence “

    A post shared by Sree Santh (@sreesanthnair36) on

  • ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ‘ನನ್ನ ಮಗುವಿನ ಮೇಲಾಣೆ ತಪ್ಪು ಮಾಡಿಲ್ಲ’: ಶ್ರೀಶಾಂತ್

    ನವದೆಹಲಿ: ಕಳೆದ ತಿಂಗಳು ಭಾತದ ವೇಗಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಕಡಿಮೆ ಮಾಡಿ ಬಿಸಿಸಿಐ ಸಮಿತಿ ನಿರ್ಣಯ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಕುರಿತು ಇತ್ತೀಚೆಗೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ‘ನನ್ನ ಮಗುವಿನ ಮೇಲಾಣೆ ನಾನು ಆ ತಪ್ಪು ಮಾಡಿಲ್ಲ’ ಎಂದು ಭಾವುಕರಾಗಿದ್ದಾರೆ.

    ನನ್ನ ತಂದೆ, ಮಗುವಿನ ಮೇಲಾಣೆ, ನಾನು ಯಾವುದೇ ರೀತಿಯ ಫಿಕ್ಸಿಂಗ್ ಮಾಡಿಲ್ಲ. ಅಂತಹ ಯೋಚನೆಯೇ ನನಗೆ ಬಂದಿಲ್ಲ. ಇಂದು ನನ್ನ ತಂದೆ, ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದು, ಇಂದು ನಾನು ಆಡುವ ಪಂದ್ಯವನ್ನು ಅವರು ನೋಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. 100 ಕೋಟಿ ರೂ. ಕೊಟ್ಟರೂ ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮುಂದಿನ ವರ್ಷದ ಆಗಸ್ಟ್ ವೇಳೆಗೆ ಶ್ರೀಶಾಂತ್ ಮೇಲಿನ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, 7 ವರ್ಷದ ನಿಷೇಧದ ಅವಧಿ ಅಂತ್ಯವಾಗಲಿದೆ. ನಿಷೇಧ ತೆರವಾದ ಬಳಿಕ ಮತ್ತೆ ತಾವು ಕ್ರಿಕೆಟ್ ಆಡಬೇಕು ಎಂದು ಶ್ರೀಶಾಂತ್ ಹೇಳಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ಹಲವು ಲೀಗ್ ಆಡುತ್ತಿದ್ದಾರೆ. ನನ್ನ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಲು ನಾನು ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಬೇಕಿದೆ ಎಂದು ಹೇಳಿದ್ದಾರೆ.

  • ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ

    ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ

    ತಿರುವನಂತಪುರಂ: ಭಾರತದ ತಂಡದ ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್ ಮನೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.

    ಶ್ರೀಶಾಂತ್ ಅವರ ಕೇರಳದ ಕೊಚ್ಚಿಯ ಎಡಪಲ್ಲಿ ಪ್ರದೇಶದಲ್ಲಿರುವ ಮನೆಗೆ ಇಂದು ಮುಂಜಾನೆ 2 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ.

    ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ಮನೆಯ ಗಾಜಿನ ವೆಂಟಿಲೇಟರ್ ಒಡೆದು ಮನೆಯಲ್ಲಿ ಇದ್ದವರನ್ನು ಸ್ಥಳಾಂತರ ಮಾಡಿದ್ದಾರೆ.

    ಈ ಘಟನೆಯ ಬಗ್ಗೆ ಮಾತನಾಡಿರುವ ಶ್ರೀಶಾಂತ್, ನನ್ನ ಪತ್ನಿ ಮತ್ತು ಮಕ್ಕಳು ಮೊದಲನೇ ಮಹಡಿಯಲ್ಲಿ ಇದ್ದರು. ಅ ಸಮಯದಲ್ಲಿ ನೆಲಮಹಡಿಯಲ್ಲಿ ಇರುವ ಡ್ರಾಯಿಂಗ್ ರೂಮ್‍ನಲ್ಲಿ ಸೀಲಿಂಗ್ ಫ್ಯಾನ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ನಾನು ಅ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಶೂಟಿಂಗ್ ಇದ್ದ ಕಾರಣ ಮುಂಬೈಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

    ಭಾರತದ ಪರ ಶ್ರೀಶಾಂತ್ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡಿ ಟೆಸ್ಟ್ ನಲ್ಲಿ 87 ಹಾಗೂ ಏಕದಿನದಲ್ಲಿ 75 ವಿಕೆಟ್ ಪಡೆದಿದ್ದಾರೆ. ಎರಡು ವಿಶ್ವಕಪ್ ವಿಜೇತ ಭಾರತ ತಂಡಗಳ ಭಾಗವಾಗಿರುವ ಶ್ರೀಶಾಂತ್ ಅವರನ್ನು 2013 ರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೀವಾವಧಿ ನಿಷೇಧ ಮಾಡಿತ್ತು.

    ಈ ವಾರದ ಆರಂಭದಲ್ಲಿ, ಬಿಸಿಸಿಐ ನ್ಯಾಯಮೂರ್ತಿ (ನಿವೃತ್ತ) ಡಿಕೆ ಜೈನ್ ಅವರು ಶ್ರೀಶಾಂತ್ ಅವರ ಜೀವಾವಧಿ ನಿಷೇಧವನ್ನು ಕಡಿಮೆ ಮಾಡಿ 7 ವರ್ಷಕ್ಕೆ ಇಳಿಸಿದರು. ಈ ಮೂಲಕ ಸೆಪ್ಟೆಂಬರ್ 12, 2020 ರಂದು ಶ್ರೀಶಾಂತ್ ಅವರ ಅಮಾನತು ಕೊನೆಗೊಳ್ಳಲಿದೆ.