Tag: Sreeramulu

  • ಶ್ರೀರಾಮುಲು ಪಾದಯಾತ್ರೆಗೆ ಮತ್ತೊಬ್ಬ ಆಕಾಂಕ್ಷಿ ಟಕ್ಕರ್- ಸೂರ್ಯ ಪಾಪಣ್ಣ ಪಾದಯಾತ್ರೆ

    ಶ್ರೀರಾಮುಲು ಪಾದಯಾತ್ರೆಗೆ ಮತ್ತೊಬ್ಬ ಆಕಾಂಕ್ಷಿ ಟಕ್ಕರ್- ಸೂರ್ಯ ಪಾಪಣ್ಣ ಪಾದಯಾತ್ರೆ

    – ಪಾದಾಯಾತ್ರೆಗೆ ಎಸ್ಟಿ ಮೋರ್ಚಾ ರಾಜಾಧ್ಯಕ್ಷ ಬಂಗಾರು ಹನುಮಂತು ಸಾಥ್

    ಬಳ್ಳಾರಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. 150 ಸ್ಥಾನ ಗೆಲ್ಲಿಸುತ್ತೇನೆ ಎಂದು ಪಾದಯಾತ್ರೆ ಕೈಗೊಂಡಿರುವ ಮಾಜಿ ಸಚಿವ ಶ್ರೀರಾಮುಲು (Sreeramulu) ಅವರಿಗೆ ಮುಂದಿನ ಚುನಾವಣೆಯ ಆಕಾಂಕ್ಷಿ ಸೂರ್ಯಪಾಪಣ್ಣ (Surya Papanna) ನೇತೃತ್ವದಲ್ಲಿ ಮತ್ತೊಂದು ಬಿಜೆಪಿ ತಂಡ ಪ್ರತ್ಯೇಕ ಪಾದಯಾತ್ರೆ ಮಾಡುವ ಮೂಲಕ ಟಕ್ಕರ್ ನೀಡಿದೆ.

    ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತು ಕಂಗೆಟ್ಟಿರುವ ಮಾಜಿ ಸಚಿವ ಶ್ರೀರಾಮುಲು ಇದೀಗ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಸ್ವತಃ ತಾವೇ ಕ್ಷೇತ್ರವನ್ನ ಸ್ವಯಂ ಘೋಷಿಸಿಕೊಂಡು, ಕೂಡ್ಲಿಗಿ ಕ್ಷೇತ್ರದಾದ್ಯಂತ ಓಡಾಡ್ತಿದ್ದಾರೆ. ಶ್ರೀರಾಮುಲು ನಡೆಗೆ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಮುಲು ಕೂಡ್ಲಿಗಿಗೆ ಬರುವುದು ಬೇಡ ಎಂದು ಕಡ್ಡಿ ತುಂಡಾಗುವಂತೆ ಹೇಳುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಅನ್ನೋದು ಪ್ರಚೋದನೆನಾ? – ಪ್ರತಾಪ್‌ ಸಿಂಹ

    2028ರ ಚುನಾವಣೆಗೆ ಮೂರು ವರ್ಷ ಬಾಕಿಯಿರುವಾಗಲೇ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದು ಶ್ರೀರಾಮುಲು ಸ್ವತಃ ತಾವೇ ಘೋಷಿಸಿಕೊಂಡಿದ್ದಾರೆ.

    ಶ್ರೀರಾಮುಲು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಟ್ಟೂರು ಬಸವೇಶ್ವರ ಜಾತ್ರೆಗೆ ಕೂಡ್ಲಿಗಿಯಿಂದ ಕೊಟ್ಟೂರಿಗೆ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ವೇಳೆ ಮಾತನಾಡಿದ್ದ ಅವರು, ಬೇರೆ ಬೇರೆ ರೀತಿಯ ಪಾದಯಾತ್ರೆಗಳನ್ನ ಮಾಡಿದ್ದೇವೆ. ಧಾರ್ಮಿಕವಾಗಿ ಇದೇ ಪ್ರಥಮ ಬಾರಿಗೆ ನಾನು ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಬೇಕು. ಕೂಡ್ಲಿಗಿ ಸೇರಿದಂತೆ ರಾಜ್ಯದ 160 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. 160 ಕ್ಷೇತ್ರಗಳಲ್ಲಿ ಗೆಲ್ಲಬೇಕು ಅಂತಾ ದೃಢ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದು ಹೇಳಿರುವುದು ಕೂಡ್ಲಿಗಿ ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರನ್ನ ಭೇಟಿಯಾದ ಪ್ರತಾಪ್‌ ಸಿಂಹ – ಕುತೂಹಲ ಮೂಡಿಸಿದ ವಿಜಯೇಂದ್ರ ಭೇಟಿ

    ಶ್ರೀರಾಮುಲು ನೇತೃತ್ವದಲ್ಲಿ ಒಂದು ಗುಂಪು ಪಾದಯಾತ್ರೆ ಮಾಡಿದರೆ, ಸೂರ್ಯಪಾಪಣ್ಣ ನೇತೃತ್ವದಲ್ಲಿ ಮತ್ತೊಂದು ಬಿಜೆಪಿ ತಂಡ ಪ್ರತ್ಯೇಕ ಪಾದಯಾತ್ರೆ ಮಾಡಿದೆ. ಈ ಪಾದಾಯಾತ್ರೆಗೆ ಎಸ್ಟಿ ಮೋರ್ಚಾ ರಾಜಾಧ್ಯಕ್ಷ ಬಂಗಾರು ಹನುಮಂತು ಸಾಥ್ ನೀಡಿದರು. ಇದನ್ನೂ ಓದಿ: ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    ಲೋಕಸಭಾ ಚುನಾವಣೆಯ ವೇಳೆ ಶ್ರೀರಾಮುಲು ಅವರು ಸ್ಥಳೀಯರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಈಗ ತಾವೇ ಅಭ್ಯರ್ಥಿ ಎಂದು ಹೇಳಿಕೊಂಡಿರುವ ಶ್ರೀರಾಮುಲು ನಡೆಗೆ ಕೂಡ್ಲಿಗಿ ಬಿಜೆಪಿ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಮುಲು ಅವರ ಈ ದಂಧ್ವ ನಡೆಯ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

  • ತೇಜಸ್ವಿನಿ ಅನಂತಕುಮಾರ್ ಅವರು ಬಾಯಿ ಬಿಟ್ಟರೆ ಬಿಜೆಪಿಗರ ಬಣ್ಣ ಬಯಲಾಗುತ್ತೆ – ಸಿದ್ದರಾಮಯ್ಯ

    ತೇಜಸ್ವಿನಿ ಅನಂತಕುಮಾರ್ ಅವರು ಬಾಯಿ ಬಿಟ್ಟರೆ ಬಿಜೆಪಿಗರ ಬಣ್ಣ ಬಯಲಾಗುತ್ತೆ – ಸಿದ್ದರಾಮಯ್ಯ

    ಬೆಂಗಳೂರು: ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯವರು ಬಾಯಿ ಬಿಟ್ಟರೆ ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ದಿ.ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದ ಸಂಸದ ಶ್ರೀರಾಮುಲು ಅವರ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಸಿ.ಎಸ್ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರದ ಕಿರುಕುಳವೇ ಕಾರಣ ಎಂದು ನಾಲಿಗೆ ಹರಿಬಿಟ್ಟಿರುವ ಬಿಜೆಪಿ ನಾಯಕರೇ, ದಿ.ಅನಂತಕುಮಾರ್ ಅವರ ಪತ್ನಿಗೆ ನೀಡಿರುವ ಕಿರುಕುಳವನ್ನು ನೆನಪು ಮಾಡಿಕೊಳ್ಳಿ. ಎಲ್ಲವನ್ನೂ ಸಹಿಸಿಕೊಂಡಿರುವ ಧೈರ್ಯವಂತ ಹೆಣ್ಣು ತೇಜಸ್ವಿನಿಯವರು ಬಾಯಿ ಬಿಟ್ಟರೆ ನಿಮ್ಮ ಬಣ್ಣ ಬಯಲಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಶ್ರೀರಾಮುಲು ಹೇಳಿದ್ದೇನು?
    ಹುಬ್ಬಳ್ಳಿಯ ಬೆಟದೂರು ಗ್ರಾಮದಲ್ಲಿ ಮಾತನಾಡಿದ್ದ ಶ್ರೀರಾಮುಲು ಅವರು, ಸಚಿವ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂದು ಹೇಳಿದ್ದರು. ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವೇ ಕಾರಣವಾಗಿದೆ. ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಸಚಿವರು ಮೃತಪಟ್ಟಿದ್ದಾರೆ. ಆದರೆ ಕುಂದಗೋಳದ ಜನರಿಗೆ ಸೇಡು ತಿರಿಸಿಕೊಳ್ಳುವ ಸಮಯ ಈಗ ಬಂದಿದೆ ಎಂದು ಹೇಳಿದ್ದರು.

  • ಬಳ್ಳಾರಿ ರಣಕಣ ಗೆಲ್ಲಲು `ಕೈ’ ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್

    ಬಳ್ಳಾರಿ ರಣಕಣ ಗೆಲ್ಲಲು `ಕೈ’ ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್

    -ಸಚಿವ ಡಿಕೆಶಿ ಅಸ್ತ್ರದ ವಿರುದ್ಧ ರೆಡ್ಡಿ ಬಳಿ ಇದೆಯಂತೆ ಬ್ರಹ್ಮಾಸ್ತ್ರ!

    ಬಳ್ಳಾರಿ: ತೀವ್ರ ಪೈಪೋಟಿಯಿಂದ ಕೂಡಿರುವ ಬಳ್ಳಾರಿ ಉಪಚುನಾವಣೆಯ ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಬಿಜೆಪಿ ಶಾಸಕ ಶ್ರೀರಾಮಲು ಹಾಗೂ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲೇ ಹಿನ್ನೆಡೆ ಉಂಟಾಗುವಂತೆ ಮಾಡಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದರ ಭಾಗವಾಗಿ ಸಚಿವ ಡಿಕೆಶಿ ಇಂದು ಸುದ್ದಿಗೋಷ್ಠಿ ಕರೆದಿದ್ದು, ಮಹತ್ವ ಅಂಶಗಳನ್ನು ತಿಳಿಸುತ್ತಾರೆ ಎನ್ನಲಾಗಿದೆ.

    ಕಳೆದ 2 ದಿನಗಳಿಂದ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಂದ ಕೆಲ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದು, ಉಪಚುನಾವಣೆಯ ಪ್ರಚಾರದ ಕೊನೆ ಹಂತದ ಈ ಸಮಯದಲ್ಲಿ ಅವುಗಳನ್ನು ಬಿಡುಗಡೆ ಮಾಡಿ ಬಿಜೆಪಿ ಅಭ್ಯರ್ಥಿ ಶಾಂತಾ ಅವರಿಗೆ ಹಿನ್ನಡೆ ಉಂಟು ಮಾಡುವ ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಮಾಡಿದ್ದಾರೆ ಎನ್ನಲಾದ ಭೂ ಅಕ್ರಮ ವಿವರಗಳನ್ನು ಬಹಿರಂಗ ಪಡಿಸುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಹೆಚ್ಚಿನ ಮತ ಸೆಳೆಯುವ ಉದ್ದೇಶ ಹೊಂದಿದ್ದಾರೆ. ಅಲ್ಲದೇ ಡಿಕೆಶಿ ಅವರು ಬಿಡುಗಡೆ ಮಾಡುವ ಪ್ರಮುಖ ದಾಖಲೆಗಳಲ್ಲಿ ಸಿಡಿಯೂ ಇದೆ ಎನ್ನಲಾಗಿದ್ದು, ಇದರಲ್ಲಿ ಯಾವೆಲ್ಲಾ ಮಾಹಿತಿ ಇರಲಿದೆ ಎಂಬುದು ಚರ್ಚೆಗೆ ಕಾರಣವಾಗಿದೆ.

    ಇತ್ತ ಡಿಕೆ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಕರೆದ ಬೆನ್ನಲ್ಲೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೂಡ ಒಂದು ಆಡಿಯೋ ಬಿಡುಗಡೆ ಮಾಡುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಅವರ ಬಳಿ ಇರುವ ಆಡಿಯೋ ಸಚಿವ ಡಿಕೆಶಿವಕುಮಾರ್ ಅವರಿಗೆ ಹಿನ್ನೆಡೆ ಉಂಟು ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಸಚಿವ ಡಿಕೆ ಶಿವಕುಮಾರ್, ಜನಾರ್ದನ ರೆಡ್ಡಿ, ಶ್ರೀರಾಮುಲುರ ವಿರುದ್ಧ ಯಾವ ಅಸ್ತ್ರ ಪ್ರಯೋಗ ಮಾಡುತ್ತಾರೆ ಎನ್ನುವುದರ ಮೇಲೆ ಜನಾರ್ದನ ರೆಡ್ಡಿ ಅವರ ನಡೆ ಮೇಲೆ ನಿಂತಿದೆ. ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಕಣ ಗೆಲ್ಲಲು ತಂತ್ರ ರೂಪಿಸಿದ್ದರೆ, ಜನಾರ್ದನ ರೆಡ್ಡಿ ಸಹ ಪ್ರತಿತಂತ್ರ ಹೂಡಿರುವುದು ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿಯಲ್ಲಿ ಶ್ರೀರಾಮಲು ಕಟ್ಟಿಹಾಕಲು ಸರ್ಕಾರದಿಂದ ಮಾಸ್ಟರ್ ಪ್ಲಾನ್..!

    ಬಳ್ಳಾರಿಯಲ್ಲಿ ಶ್ರೀರಾಮಲು ಕಟ್ಟಿಹಾಕಲು ಸರ್ಕಾರದಿಂದ ಮಾಸ್ಟರ್ ಪ್ಲಾನ್..!

    ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆ ಗೆಲ್ಲಲು ದೋಸ್ತಿಗಳ ಮಾಸ್ಟರ್ ಪ್ಲಾನ್ ನಡೆಯುತ್ತಿದ್ದು, ಬಳ್ಳಾರಿಯಲ್ಲಿ ಬಿಜೆಪಿಗಿಂತ ಶ್ರೀರಾಮಲು ಟಾರ್ಗೆಟ್ ಮಾಡಲು ತಂತ್ರ ರೂಪಿಸಲಾಗುತ್ತಿದೆ. ಈ ಮೂಲಕ ಸರ್ಕಾರ ಮೊಳಕಾಲ್ಮೂರು ಶಾಸಕ ಶ್ರೀರಾಮಲು ಅವರನ್ನು ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.

    ಸಮ್ಮಿಶ್ರ ಸರ್ಕಾರದ ಆ ಮಾಸ್ಟರ್ ಪ್ಲಾನ್ ಏನು..?
    ಶ್ರೀರಾಮುಲು ಅವರ ಹಳೆಯ ಪ್ರಕರಣಕ್ಕೆ ಮರು ಜೀವ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಬಳ್ಳಾರಿಯ ಕೌಲಬಜಾರಿನಲ್ಲಿರೂ 57.30 ಗುಂಟೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ.

    ಲೋಕಾಯುಕ್ತ ವಿಚಾರಣಾ ವರದಿಯಲ್ಲಿ ಶ್ರೀರಾಮಲು ಅಕ್ರಮ ಎಸಗಿರುವುದು ಸಾಬೀತಾಗಿದ್ದು, ಶ್ರೀರಾಮಲು ವಿಚಾರಣೆಗೆ ಅನುಮತಿ ಕೇಳಿ ಲೋಕಾಯುಕ್ತ ಪತ್ರ ಬರೆದಿತ್ತು. ಆದ್ರೆ 4 ವರ್ಷಗಳಿಂದ ಹಲವು ಪತ್ರ ಬರೆದರೂ ಶ್ರೀರಾಮುಲು ಮಾತ್ರ ಲೋಕಾಯುಕ್ತಕ್ಕೆ ಉತ್ತರಿಸಲಿಲ್ಲ. ಈಗ ವಿಚಾರಣೆಗೆ ಅನುಮತಿ ಕುರಿತು ಅಭಿಪ್ರಾಯ ನೀಡುವಂತೆ ಸರ್ಕಾರದಿಂದ ಎಜಿಗೆ ಪತ್ರ ಬರೆಯಲಾಗಿದೆ. ಎಜಿ ಅನುಮತಿ ನೀಡಿದ್ರೆ ಶ್ರೀರಾಮಲು ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತದೆ. ಈ ಮೂಲಕ ರಾಮುಲು ಬಳ್ಳಾರಿಯಲ್ಲಿ ಓಡಾಡದಂತೆ ಕಟ್ಟಿ ಹಾಕೋ ಪ್ರಯತ್ನ ಮಾಡಲಾಗುತ್ತದೆ.

    ಜಮೀನು ಕಬಳಿಕೆ ಪ್ರಕರಣ ಸಂಬಂಧ ಜಿ ಕೃಷ್ಣಮೂರ್ತಿ ಎಂಬವರು 2013 ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದಕ್ಕೆ ಮರುಜೀವ ನೀಡಲು ಕಾಂಗ್ರೆಸ್ ಸಜ್ಜಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • SUPER EXCLUSIVE 5

    SUPER EXCLUSIVE 5

    https://www.youtube.com/watch?v=SeeAPEhcKiY

  • ಡಿಕೆಶಿಗಿಂತ ನಾವೇ ಪವರ್‌‌‌‌ಫುಲ್‌‌‌‌: ಶ್ರೀರಾಮುಲು

    ಡಿಕೆಶಿಗಿಂತ ನಾವೇ ಪವರ್‌‌‌‌ಫುಲ್‌‌‌‌: ಶ್ರೀರಾಮುಲು

    ಬಳ್ಳಾರಿ: ಡಿಕೆಶಿ ಪ್ರಭಾವಿ ಸಚಿವರಾಗಿರಬಹುದು, ಅವರ ಬಳಿ ಸರ್ಕಾರವೇ ಇರಬಹುದು. ಆದರೆ ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಟ್ಟಿಯಲ್ಲಿ ಹಿರಿಯ ನಾಯಕರಾಗಿರಬಹುದು. ಅವರ ಹತ್ತಿರ ಸರ್ಕಾರ ಇರಬಹುದು. ಅಷ್ಟೇ ಅಲ್ಲದೇ ಅಧಿಕಾರ, ಹಣದ ಬಲ ಎಲ್ಲಾ ಇರಬಹುದು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ನಾಯಕರು ಬೂತ್ ಬಳಿಯೇ ಬಂದು ಕುಳಿತರೂ ಸಹ ನಮ್ಮ ಕಾರ್ಯಕರ್ತರ ಬಳಿ ನಮ್ಮದೇ ಆದ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಬಳ್ಳಾರಿಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಳ್ಳಾರಿ ನಾಲ್ಕು ದಶಕಗಳ ಕಾಲ ಬಿಜೆಪಿಯ ಭದ್ರ ಕೋಟೆಯಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಾವು ಪ್ರಚಾರ ಮಾಡುತ್ತೇವೆ. ಲೋಕಸಭಾ ಉಪಚುನಾವಣೆಗೆ 7-8 ಜನ ಆಕಾಂಕ್ಷಿಗಳಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ ಅವರ ಮಗ ಎನ್ ವೈ ಸುಜಯ್‍ಕುಮಾರ್ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಆಕಾಂಕ್ಷಿಗಳ ಹೆಸರನ್ನ ರಾಜ್ಯಾಧ್ಯಕ್ಷರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಡಿಕೆಶಿ ವರ್ಸಸ್ ಶ್ರೀರಾಮುಲು ಅಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆ ಎದುರಿಸುತ್ತೇವೆ ಎಂದರು. ಇದನ್ನು ಓದಿ: ರಾಜಕೀಯ ಗುರುವಿನ ಪುತ್ರನನ್ನ ಕಣಕ್ಕೆ ಇಳಿಸಲು ಸಜ್ಜಾದ ರೆಡ್ಡಿ-ರಾಮುಲು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀರಾಮುಲು ಫೋಟೋಗೆ ಹಾಲು, ಕುಂಕುಮ, ಅರಿಶಿಣ ಅಭಿಷೇಕ – ಇನ್ನೊಂದಕ್ಕೆ ಸಗಣಿ, ಪೊರಕೆ ಸೇವೆ

    ಶ್ರೀರಾಮುಲು ಫೋಟೋಗೆ ಹಾಲು, ಕುಂಕುಮ, ಅರಿಶಿಣ ಅಭಿಷೇಕ – ಇನ್ನೊಂದಕ್ಕೆ ಸಗಣಿ, ಪೊರಕೆ ಸೇವೆ

    ರಾಮನಗರ: ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಶಾಸಕ ಶ್ರೀರಾಮುಲು ವಿರುದ್ಧ ಚನ್ನಪಟ್ಟಣದಲ್ಲಿ ಇಂದು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

    ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಚರ್ಚ್ ರಸ್ತೆಯಲ್ಲಿ ಶಾಸಕ ಶ್ರೀರಾಮುಲು ಅವರ ಎರಡು ಭಾವಚಿತ್ರಗಳನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ.

    ಒಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ, ಕುಂಕುಮ ಮತ್ತು ಅರಿಶಿಣ ಅಭಿಷೇಕ ಮಾಡಿ ಜೈಕಾರ ಹಾಕಿದ್ದಾರೆ. ನಂತರ ಮತ್ತೊಂದು ಭಾವಚಿತ್ರಕ್ಕೆ ಸಗಣಿ ನೀರು ಸುರಿದು ಪೊರಕೆ ಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಖಂಡ ಕರ್ನಾಟಕಕ್ಕೆ ಒತ್ತು ನೀಡಿ ರಾಜ್ಯವನ್ನ ಇಬ್ಬಾಗ ಮಾಡದಿದ್ದರೆ ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕುತ್ತೇವೆ. ರಾಜ್ಯವನ್ನ ಇಬ್ಬಾಗ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ನೇರವಾಗಿಯೇ ಸಗಣಿ ನೀರನ್ನ ಹಾಕಿ ಪೊರಕೆ ಸೇವೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಯಾವುದೇ ಕಾರಣಕ್ಕೂ ಅಖಂಡ ಕರ್ನಾಟಕ ವಿಭಜನೆಯಾಗ್ಬಾರದು- ಉಲ್ಟಾ ಹೊಡೆದ ಶ್ರೀರಾಮುಲು

    ಯಾವುದೇ ಕಾರಣಕ್ಕೂ ಅಖಂಡ ಕರ್ನಾಟಕ ವಿಭಜನೆಯಾಗ್ಬಾರದು- ಉಲ್ಟಾ ಹೊಡೆದ ಶ್ರೀರಾಮುಲು

    ಬೆಂಗಳೂರು: ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದ್ರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸುತ್ತೇನೆ ಅಂತ ಹೇಳಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಇದೀಗ ಉಲ್ಟಾ ಹೊಡೆದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಅವರು, ಅಖಂಡ ಕರ್ನಾಟಕವು ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು ಎನ್ನುವುದು ನನ್ನ ಸ್ಪಷ್ಟ ನಿಲುವು. ರಾಜ್ಯ ಒಡೆಯಲು ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.

    ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನೀನು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದಾಗ ಹೈದ್ರಾಬಾದ್ ಕರ್ನಾಟಕಕ್ಕೇ ಏನು ಮಾಡಿದ್ದೀಯಾ? ಉತ್ತರ ಕರ್ನಾಟಕವನ್ನು ನೀನು ನಿರ್ಲಕ್ಷಿಸಿದ್ದೀಯಾ ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಈಗಾಗಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಇದೇ ರೀತಿ ತಾರತಮ್ಯ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತೆ. ನನಗೆ ಅಖಂಡ ಕರ್ನಾಟಕ ಬೇಕಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದ್ರೆ ನಾನೇ ಪ್ರತ್ಯೇಕ ರಾಜ್ಯದ ಮುಂದಾಳತ್ವ ವಹಿಸುತ್ತೇವೆ ಎಂದು ಎಚ್ಚರಿಸಿದ್ದರು.

    ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ವಿಧಾನಸಭಾ ಕಲಾಪದಲ್ಲಿ ಹಾಗೂ ಇತ್ತೀಚೆಗೆ ಮಾಧ್ಯಮಗಳ ಮುಂದೆ ಪ್ರತ್ಯೇಕ ರಾಜ್ಯದ ಕುರಿತಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಶ್ರೀರಾಮುಲು ಪರ ಹಾಗೂ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಕನ್ನಡವನ್ನೇ ಸರಿಯಾಗಿ ಮಾತನಾಡಲು ಬಾರದ, ಆಂಧ್ರ ಪ್ರದೇಶದಿಂದ ಈ ವ್ಯಕ್ತಿ ಕರ್ನಾಟಕ ಎರಡು ಭಾಗವಾಗಬೇಕು ಎಂದಿದ್ದಾರೆ. ಎಂತಹ ಸುವರ್ಣ ಕಾಲ ಬಂದು ನೋಡಿ ಕನ್ನಡಿಗರಿಗೆ ಎಂದು ಶ್ರೀರಾಮುಲು ಚಿತ್ರ ಬಳಕೆ ಮಾಡಿ, ಬರೆದು ಅಮರನಾಥ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.

    ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಶಾಸಕ ಬಿ.ಶ್ರೀರಾಮುಲು ಅವರು ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಅಂತ ಹೇಳಿದ್ದರು.

    ಚರ್ಚೆ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡಿದ್ದರು.

  • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಬಳ್ಳಾರಿ: ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳುವ ಶಾಸಕರು, ಹೋರಾಟಗಾರು ಕಮಂಗಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಆಯೋಜಿಸಿದ್ದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 78 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತ್ಯೇಕ ರಾಜ್ಯ ಕೇಳುವುದು ಹೇಗಿದೆ ಎಂದರೆ ಪತಿಗೆ ಹೆದರಿಸುವುದಕ್ಕೆ ಪತ್ನಿ ಪದೇ ಪದೇ ಬಾವಿಗೆ ಬೀಳುತ್ತೇನೆ ನೋಡು ಎನ್ನುವಂತಿದೆ ಎಂದು ಹೇಳಿ ಪರೋಕ್ಷವಾಗಿ ಶಾಸಕ ಶ್ರೀರಾಮುಲು, ಉಮೇಶ ಕತ್ತಿ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಕರ್ನಾಟಕ ಏಕೀಕರಣವಾಗಿ 70 ವರ್ಷಗಳು ಕಳೆದಿವೆ. ಈಗ ಮತ್ತೇ ಪ್ರತ್ಯೇಕ ಮಾಡುವುದು ಹುಡುಗಾಟಿಕೆ ಅಲ್ಲ. ಒಂದು ವೇಳೆ ಕರ್ನಾಟಕ ಒಡೆಯುವ ಕೆಲಸಕ್ಕೆ ಮುಂದಾದರೆ ಅದು ಮಹಾ ಪಾಪದ ಕೆಲಸವಾಗುತ್ತದೆ. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ, ಹೋರಾಟ ಮಾಡಿ. ಆದರೆ ಅದೂ ಬಿಟ್ಟು ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳಲು ಮುಂದಾಗುವ ರಾಜಕಾರಣಿಗಳು ಕಮಂಗಿಗಳು ಎಂದು ಹೇಳಿದರು.