Tag: SR Viswanath

  • ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ಕೆರೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧ: ವಿಶ್ವನಾಥ್ ಭರವಸೆ

    ನೆಲಮಂಗಲ: ಬೆಂಗಳೂರಿನ ಕೊಳಚೆ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿದು ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ದಾಸನಪುರ ಹೋಬಳಿಯ ಕಾಚೋಹಳ್ಳಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲುಷಿತ ನೀರು ಸೇರದಂತೆ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ. ನಗರದಿಂದ ಯಥೇಚ್ಛವಾಗಿ ಕೊಳಚೆ ನೀರು ಹರಿದು ಬರುತ್ತಿರುವ ಪರಿಣಾಮ ಯಲಹಂಕ ಕ್ಷೇತ್ರ ವ್ಯಾಪ್ತಿಯ ಕಾಚೋಹಳ್ಳಿ, ಮಾಚೋಹಳ್ಳಿ ಹಾಗೂ ಗಂಗೊಂಡನಹಳ್ಳಿ ಕೆರೆಗಳು ಮಲಿನಗೊಂಡಿದ್ದು ಪುನರುಜ್ಜೀವನಗೊಳಿಸಲು ಪ್ರತಿ ಕೆರೆಯ ಅಭಿವೃದ್ಧಿಗೆ ತಲಾ ಎರಡು ಕಾಲು ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

    ಜಲಮೂಲಗಳ ರಕ್ಷಣೆಗೆ ಬಿಜೆಪಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಹರಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಇದೇ ವೇಳೆ ದಾಸನಪುರ ಹೋಬಳಿ ಸೇರಿದಂತೆ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಚೋಹಳ್ಳಿ ಹಾಗೂ ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಶುದ್ಧ ನೀರಿನ ಘಟಕ, ಅಂಗನವಾಡಿ ನಿರ್ಮಾಣ ಸೇರಿದಂತೆ ಇಪ್ಪತ್ತೈದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ರಾಮಲಿಂಗಾ ರೆಡ್ಡಿ ರಾಜೀನಾಮೆ ಹಿಂದೆ ಎಸ್.ಆರ್ ವಿಶ್ವನಾಥ್?

    ರಾಮಲಿಂಗಾ ರೆಡ್ಡಿ ರಾಜೀನಾಮೆ ಹಿಂದೆ ಎಸ್.ಆರ್ ವಿಶ್ವನಾಥ್?

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ಕಾಂಗ್ರೆಸ್‍ಗೆ ದೊಡ್ಡ ಆಘಾತವನ್ನೇ ನೀಡಿತ್ತು. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಹಿಂದೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಇದ್ದರಾ ಎಂಬ ಅನುಮಾನವೊಂದು ಹುಟ್ಟುಕೊಂಡಿದೆ.

    ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಬಿಜೆಪಿ ಯಲಹಂಕ ಫೇಸ್ ಬುಕ್ ಅಕೌಂಟ್‍ನಲ್ಲಿ ಎಸ್.ಆರ್ ವಿಶ್ವನಾಥ್ ಅವರಿಗೆ ಕಾರ್ಯಕರ್ತರಿಂದ ಅಭಿನಂದನೆ ಸ್ಟೇಟಸ್ ಹಾಕಲಾಗಿದೆ. ಈ ಪೋಸ್ಟ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅರವಿಂದ ಲಿಂಬಾವಳಿ ಸೂಚನೆ ಮೆರೆಗೆ ರಾಮಲಿಂಗರೆಡ್ಡಿಯವರಿಂದ ರಾಜೀನಾಮೆ ಕೊಡಿಸಲು ಯಶಸ್ವಿಯಾದ ಶಾಸಕ ಎಸ್.ಆರ್ ವಿಶ್ವನಾಥ್‍ಗೆ ಅಭಿನಂದನೆ ಎಂದು ಬರೆಯಲಾಗಿದೆ.

    ಇತ್ತ ಮುಂದಿನ ದಿನಗಳಲ್ಲಿ ಎಸ್.ಆರ್.ವಿಶ್ವನಾಥ್ ಅವರ ಮೂಲಕವೇ ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ಕೇವಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

  • ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪ್ರತಿನಿಧಿಸುವ ಬೆಂಗಳೂರಿನ ಯಲಹಂಕದಲ್ಲಿ ಫುಟ್‍ ಪಾತ್‍ ನಲ್ಲೇ ಅಂಗಡಿಗಳು ಉದ್ಭವವಾಗಿದೆ.

    ಡೈರಿ ಸರ್ಕಲ್ ಬಳಿಯಿರುವ ಪಾದಾಚಾರಿ ಮಾರ್ಗದಲ್ಲಿ ಶಾಸಕರ ಪಿಎ ಮಲ್ಲಿಕಾರ್ಜುನ್ ನಂದಿನಿ ಮಿಲ್ಕ್ ಪಾರ್ಲರ್ ತೆರೆದಿದ್ದಾರೆ. ಅದೇ ಫುಟ್ ಪಾತ್‍ನಲ್ಲಿ ಶುದ್ಧ ನೀರಿನ ಘಟಕ ಕೂಡ ಸ್ಥಾಪಿಸಿದ್ದಾರೆ. ನಿಯಮಗಳಿಗೆ ವಿರುದ್ಧವಾಗಿಯೇ ಸ್ವತಃ ಶಾಸಕರು ಮತ್ತು ಅಟ್ಟೂರು ವಾರ್ಡ್‍ನ ಕಾರ್ಪೋರೇಟರ್ ನೇತ್ರಾ ಪಲ್ಲವಿ ಅನುಮತಿ ದಯಪಾಲಿಸಿದ್ದಾರೆ.

    ಇವರ ಈ ಆಟದಿಂದಾಗಿ ರಸ್ತೆಯ ಪಕ್ಕದಲ್ಲಿ ಹೋಗೋಕೆ ಜಾಗವಿಲ್ಲದೇ ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಆದರೆ ಘನವೆತ್ತ ಬಿಜೆಪಿ ಕಾರ್ಪೊರೇಟರ್ ಯಾಕ್ ಮೇಡಂ ಈ ರೀತಿ ಅಂದರೆ ಉತ್ತರಿಸೋಕೆ ಸಿದ್ಧರಿಲ್ಲ. ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.