Tag: SR Patil

  • ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಸಿದ ಎಸ್.ಆರ್ ಪಾಟೀಲ್

    ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಸಿದ ಎಸ್.ಆರ್ ಪಾಟೀಲ್

    ಬಾಗಲಕೋಟೆ: ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟಿಲ್ ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಕೆ ಮಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮಂಗಗಳು ಮರದಿಂದ ಮರಕ್ಕೆ ಹಾರುತ್ತವೆ. ಅದೇ ರೀತಿ ಪಕ್ಷಾಂತರ ಮಾಡಿದ ಅನರ್ಹರು ಮಂಗನಂತೆ ಆಡಿದ್ದಾರೆ. ಇವರನ್ನು ಮತದಾರರು ಧೂಳಿಪಟ ಮಾಡಿ ಮನೆಗೆ ಕಳಿಸುತ್ತಾರೆ ಎಂದರು.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರೋದು ಖಚಿತ. ಮಹಾರಾಷ್ಟ್ರ ಮಾದರಿ ನಮ್ಮ ಕಣ್ಣೆದುರಿಗಿದೆ. ಅದೇ ಮಾದರಿಯಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ. ಯಾರು ನಾಯಕ, ಯಾರು ಸಿಎಂ ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಇದೇ ವೇಳೆ ಉಪಚುನಾವಣೆ ಬಳಿಕ ಯಡಿಯೂರಪ್ಪ ಖುರ್ಚಿಗೆ ಕಂಟಕವಿದೆ ಅಂತ ಭವಿಷ್ಯ ನುಡಿದರು.

    ಉಪ ಚುನಾವಣೆಯಲ್ಲಿ ಕಾಂಗ್ರೆಸ್ 11 ರಿಂದ 12 ಸ್ಥಾನ ಗೆಲ್ಲಲಿದೆ. ರಾಜಕಾರಣದಲ್ಲಿ ಏನಾಗುತ್ತೆ, ಹೆಂಗಾಗುತ್ತೆ ಹೇಳೋಕ್ಕಾಗಲ್ಲ. ಡಿಸೆಂಬರ್ 9ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನ ಆಗೋದು ಪಕ್ಕಾ ಎಂದು ಪುನರುಚ್ಚರಿಸಿದರು.

    ಡಿಕೆಶಿಗೆ ಇಡಿ ನೊಟೀಸ್ ವಿಚಾರವಾಗಿ ಮಾತನಾಡಿ, ಇಡಿ ಅಧಿಕಾರಿಗಳು ವಿಚಾರಣೆ ಹಿನ್ನೆಲೆಯಲ್ಲಿ ನೊಟೀಸ್ ಕೊಡೋದು ಸಾಮಾನ್ಯ. ಅದರಲ್ಲೇನು ವಿಶೇಷ ಇಲ್ಲವೆಂದು ತಿಳಿಸಿದ್ರು.

  • ಪ್ರಳಯ ಆದ್ರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲ್ಲ- ಎಸ್.ಆರ್.ಪಾಟೀಲ್

    ಪ್ರಳಯ ಆದ್ರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲ್ಲ- ಎಸ್.ಆರ್.ಪಾಟೀಲ್

    ಬಾಗಲಕೋಟೆ: ಅನರ್ಹ ಶಾಸಕರನ್ನು ಮರಳಿ ಕಾಂಗ್ರೆಸ್ಸಿಗೆ ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನ ವೈಯಕ್ತಿಕ, ಪಕ್ಷದ ನಾಯಕರ ಅಭಿಪ್ರಾಯವೂ ಇದೇ ಆಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತು ಪ್ರಳಯ ಆದರೂ ಅನರ್ಹ ಶಾಸಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ಅಭಿಪ್ರಾಯವಾಗಿದೆ. ಜೊತೆಗೆ ನನ್ನ ವೈಯಕ್ತಿಕ ಅಭಿಪ್ರಾಯವೂ ಸಹ ಅಂತಹವರನ್ನು ಪಕ್ಷಕ್ಕೆ ಕರೆ ತರುವುದು ಸೂಕ್ತವಲ್ಲ. ಇದು ನನ್ನ ಖಡಾಖಂಡಿತ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

    ರಾಜ್ಯದ ಉಪ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಹೆಚ್ಚು ಸ್ಥಾನ ಗೆಲ್ಲಲು ಸಾಮೂಹಿಕ ನಾಯಕತ್ವ ಅಗತ್ಯ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರಿಗೂ ಇದನ್ನೇ ಹೇಳಿದ್ದೇವೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಸಂಬಂಧವೂ ಚೆನ್ನಾಗಿದೆ. ಪಕ್ಷ ಶಕ್ತಿಶಾಲಿ ಆಗಲು ಐಕ್ಯತೆಯಿಂದ ಒಂದು ಮನಸ್ಸಿನಿಂದ ಕೆಲಸ ಮಾಡಬೇಕು. ಎತ್ತು ಏರಿಗೆ, ಕೋಣ ಕೆರೆಗೆ ಎಳೆದರೆ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ವಿಚಾರ ಭಿನ್ನ ಇರಬಹುದು. ಆದರೆ ಹೈಕಮಾಂಡ್ ತೀರ್ಮಾನದಂತೆ ಎಲ್ಲರೂ ನಡೆಯುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆ. ಪಕ್ಷಕ್ಕೆ ಮಾರಕವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸ್ಪೀಕರ್ ನೀಡಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದೆ ಅಷ್ಟೇ. ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡಿದೆ. ಸಾಯುವವರೆಗೂ ಜೈಲಿನಲ್ಲಿ ಇರುವ ಬದಲಿಗೆ ಅವಧಿ ಕಡಿಮೆ ಮಾಡಿದೆ. ಆದರೆ ಒಂದು ದಿನ ಜೈಲಿನಲ್ಲಿ ಇದ್ದರೂ ಅದು ಶಿಕ್ಷೆಯೇ, ಅನರ್ಹ ಶಾಸಕರಾಗಿಯೇ ಅವರು ಜನತಾ ನ್ಯಾಯಾಲಯದ ಮುಂದೆ ಹೋಗಬೇಕು ಎಂದರು.

    ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್‍ಗೆ ಎಷ್ಟು ದ್ರೋಹ ಮಾಡಿದ್ದಾರೋ ಅದಕ್ಕಿಂತ ಹೆಚ್ಚು ಬಿಜೆಪಿಗೆ ದ್ರೋಹ ಮಾಡುತ್ತಾರೆ. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ. ಅಲ್ಲಿ ಸಲ್ಲದವರು ಕಾಂಗ್ರೆಸಿನಲ್ಲಿ ಸಲ್ಲಬಹುದು. ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸಿಗೆ ಬಂದರೆ ಸ್ವಾಗತ. ಅವರ ಸಿಟ್ಟು ಇಮ್ಮಡಿ ಆಗಿದೆ. ಅದರಿಂದಲೆ ಅನರ್ಹ ಶಾಸಕರು ಸೋಲುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬಿಎಸ್‍ವೈಯನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲದ್ದಕ್ಕೆ ಸಿಎಂ ಹುದ್ದೆ – ಎಸ್.ಆರ್.ಪಾಟೀಲ್

    ಬಿಎಸ್‍ವೈಯನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲದ್ದಕ್ಕೆ ಸಿಎಂ ಹುದ್ದೆ – ಎಸ್.ಆರ್.ಪಾಟೀಲ್

    ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಅಂಕುಶ ಹಾಕುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈಗೆ ತೊಂದರೆ ಕೊಡುತ್ತಿರುವುದು ರಾಜ್ಯದ ದೊಡ್ಡ ಸಂಖ್ಯೆಯ ಲಿಂಗಾಯತ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಆಕ್ರೋಶ ಪ್ರಾರಂಭವಾಗಿದೆ. ಇದಕ್ಕೆ ಬಿಜೆಪಿಗೆ ಶಾಸ್ತಿ ಮಾಡುವ ಕಾಲ ಬರುತ್ತಿದೆ. ಬಿಜೆಪಿಯಲ್ಲಿ ಈಗ ಮುಸುಕಿನ ಕಾಳಗ ನಡೆಯುತ್ತಿದೆ. ಬಿಎಸ್‍ವೈ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಿಎಂ ಮಾಡಿದ್ದಾರೆಯೇ ಹೊರತು ಅವರ ಮೇಲಿನ ನಂಬಿಕೆಯಿಂದಲ್ಲ ಎಂದು ಆರೋಪಿಸಿದರು.

    ಬಿಜೆಪಿಯಲ್ಲಿನ ಗುಂಪು ಘರ್ಷಣೆ ಮುಂದೆ ಬಯಲಿಗೆ ಬರಲಿದೆ. ಡಿಸೆಂಬರ್ ಯಾವಾಗ ಮುಗಿಯುತ್ತದೆ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಸರ್ಕಾರದ ಅವಧಿ ದೀರ್ಘ ಇಲ್ಲ ಎಂದು ರಾಜಕೀಯ ಪಂಡಿತರಲ್ಲ, ಜನಸಾಮಾನ್ಯರು ಹೇಳುತ್ತಿದ್ದಾರೆ ಎಂದರು.

    ಉಪ ಚುನಾವಣೆ, ಪ್ರಮುಖ ಚುನಾವಣೆ ಸಂದರ್ಭಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಾಮೂಹಿಕ ನಾಯಕತ್ವ ಅಗತ್ಯವಿದೆ. ಇದನ್ನು ನಾನು ಪದೇ ಪದೆ ಹೇಳುತ್ತಿದ್ದೇನೆ. ಸಾಮೂಹಿಕ ನಾಯಕತ್ವ ಬೇಡ ಎಂದು ಸಿದ್ದರಾಮಯ್ಯ ಹೇಗೆ ಹೇಳುತ್ತಾರೆ. ಕಾಂಗ್ರೆಸ್‍ನಲ್ಲಿ ವಿವಿಧ ಸಮಾಜದ ಪ್ರಮುಖ ನಾಯಕರಿದ್ದಾರೆ. ನಾವೆಲ್ಲರೂ ಕೂಡಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೆ ಜಯ ಕಟ್ಟಿಟ್ಟ ಬುತ್ತಿ. ಸಾಮೂಹಿಕ ನಾಯಕತ್ವ ಇದ್ದರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೇರುವುದು ಶತಃಸಿದ್ಧ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದ್ದು ಎಂದು ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದರು.

    ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಉಮೇಶ್ ಕತ್ತಿ ಹೇಳಿಕೆ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯ ಈಗಾಗಲೇ ಆಗಿದೆ. ನೆರೆ ಹಾವಳಿಯಲ್ಲಿ ಉತ್ತರ ಕರ್ನಾಟಕದ 13 ರಲ್ಲಿ 12 ಜಿಲ್ಲೆ ಹಾನಿಗೀಡಾಗಿವೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ಉತ್ತರಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ. ಪಕ್ಷಾತೀತ ಹೋರಾಟ ಮಾಡಿ, ಸೌಕರ್ಯ ತರುತ್ತೇವೆ. ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾರಣಕ್ಕೆ ಒಡಕಿನ ಧ್ವನಿ ಬೇಡ. ಅಖಂಡ ಕರ್ನಾಟಕ ಇರಬೇಕು. ಪ್ರತ್ಯೇಕ ರಾಜ್ಯ ಮಾಡಿ ಸುಧಾರಣೆ ಎನ್ನುವುದಕ್ಕಿಂತ ಉತ್ತರದ ಎಲ್ಲ ನಾಯಕರು ಪಕ್ಷಾತೀತವಾಗಿ ಮುಂಚೂಣಿಯಲ್ಲಿ ನಿಂತು ಅಭಿವೃದ್ಧಿ ಮಾಡಿಸಬೇಕು. ಪ್ರತ್ಯೇಕ ರಾಜ್ಯದ ಧ್ವನಿ ಬೇಡ ಎಂದರು.

  • ನಮ್ಮ ಮನೆ ಮೇಲೆ ತಕ್ಷಣ ಐಟಿ ದಾಳಿ ಮಾಡ್ಲಿ- ಎಸ್.ಆರ್ ಪಾಟೀಲ್

    ನಮ್ಮ ಮನೆ ಮೇಲೆ ತಕ್ಷಣ ಐಟಿ ದಾಳಿ ಮಾಡ್ಲಿ- ಎಸ್.ಆರ್ ಪಾಟೀಲ್

    ಬಾಗಲಕೋಟೆ: ನಮ್ಮ ಮನೆ ಮೇಲೆ ಐಟಿ ಅಧಿಕಾರಿಗಳು ತಕ್ಷಣ ದಾಳಿ ಮಾಡಲಿ ಎಂದು ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟೀಲ್ ಸವಾಲು ಹಾಕಿದ್ದಾರೆ.

    ಐಟಿ ದಾಳಿ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಏನಿದೆ, ನಮ್ಮ ಮೇಲೆ ರೇಡ್ ಮಾಡಿದರೆ ಅವರೇ ನಮಗೆ ದುಡ್ಡು ಕೊಟ್ಟು ಹೋಗಬೇಕು. ಆ ರೀತಿಯ ಪರಿಸ್ಥಿತಿ ನಮ್ಮದು. ಹೀಗಾಗಿ ನಾಳೆಯೇ ನಮ್ಮ ಮನೆ ಮೇಲೆ ಐಟಿಯವರು ದಾಳಿ ಮಾಡಲಿ ಎಂದರು.

    ಯಾವ ರೀತಿಯ ಕಾನೂನು ಬಾಹಿರವಾಗಿ ಹಣ ಬಂದಿದೆ ಎಂದು ಪರಿಶೀಲಿಸಿ ಐಟಿ ಅಧಿಕಾರಿಗಳು ದಾಳಿ ಮಾಡಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಅವರ ನೈತಿಕ ಸ್ಥೈರ್ಯ ಕುಗ್ಗಿಸಬೇಕು ಎಂದು ದಾಳಿ ಮಾಡುತ್ತಾರೆ. ಆದರೆ ಇದು ಸಫಲವಾಗುತ್ತದೆ ಎಂಬುದು ಅವರ ತಿರುಕನ ಕನಸು ಎಂದು ಕಿಡಿಕಾರಿದರು.

    ಇದೇ ವೇಳೆ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಹಾಗೂ ಅವರ ಪಿ.ಎ ರಮೇಶ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತವಾದ ದಾಳಿ. ದುರದ್ದೇಶದಿಂದ ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸಬೇಕೆಂದು ದಾಳಿ ಮಾಡಲಾಗಿದೆ. ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಬಿಜೆಪಿ ನಾಯಕರು ಹೇಗಿದ್ದಾರೆಂದು ದೇಶದ 130 ಕೋಟಿ ಜನರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಮೇಶ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ಆದರೆ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯಾಗಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ಮಾಡಿದ್ದರೆ ಅದು ಸಹ ತಪ್ಪು. ಐಟಿ ಅಧಿಕಾರಿಗಳ ಕಿರುಕುಳ, ಕಾನೂನು ಬಾಹಿರವಾಗಿ ಬೆದರಿಕೆ ಹಾಕಿದ್ದರೆ, ಅದು ಅಪರಾಧವಾಗುತ್ತದೆ. ಅದಕ್ಕೆ ಐಟಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪರ್ಯಟನೆ ಮಾಡಿದ್ದಾರೆ. ಮಂಗಳಲೋಕ, ಚಂದ್ರಲೋಕ ಎರಡೇ ಉಳಿದಿವೆ. ಅನೇಕ ರಾಷ್ಟ್ರಗಳಿಗೆ ಭೇಟಿ ನೀಡುವ ಪ್ರಧಾನಿ ಮೋದಿ, ಚಂದ್ರಯಾನ ವೀಕ್ಷಣೆಗಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಾಜ್ಯದಲ್ಲಿ ನೆರೆ ಬಂದು ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಪರಿತಪಿಸುತ್ತಿದ್ದರು. ಆದರೂ ಮೋದಿಯವರು ಮಾತ್ರ ನೀವು ಇದ್ದೀರೋ ಸತ್ತಿದ್ದೀರೋ, ನೀರಲ್ಲಿ ಮುಳುಗಿದವರು ಹೊರಗಡೆ ಬಂದಿದ್ದೀರಾ ಎಂದೂ ಕೇಳಿಲ್ಲ. ರಾಜ್ಯ ರಾಜಧಾನಿಗೆ ಬಂದು ರಾಜ್ಯ ನಾಯಕರನ್ನು ಕರೆಸಿ ವಿಚಾರಿಸಿಲ್ಲ. ಕನಿಷ್ಟ ಪಕ್ಷ ಮುಖ್ಯಮಂತ್ರಿಯನ್ನು ಕರೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆರೆಯಿಂದ 38 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ವರದಿ ಕೊಟ್ಟರೆ ಕೇವಲ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. 100 ರೂ.ಗೆ ಮೂರು ರೂಪಾಯಿ ಕೊಟ್ಟಿದ್ದಾರೆ. ಸಿಎಂಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ಇಲ್ಲದಿದ್ದಲ್ಲಿ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನೆರೆ ಪರಿಹಾರ ವಿಚಾರದಲ್ಲಿ ಕಣ್ಣು ಇಲ್ಲ, ಮೂಗಿಲ್ಲ, ಬಾಯಿ ಇಲ್ಲ, ಕಿವಿ ಇಲ್ಲ, ತ್ವಚೆ ಹೀಗೆ ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ ಇದಾಗಿದೆ. ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ಈ ರೀತಿಯ ಸರ್ಕಾರವನ್ನ ನಾನು ಎಂದೂ ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಬಿಜೆಪಿ ಶಾಸಕರೇ ನೆರೆ ಪರಿಹಾರದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜನಪರವಾಗಿ ಮಾತನಾಡಿದರು. ಪಕ್ಷ ಅವರಿಗೆ ನೋಟಿಸ್ ಕೊಟ್ಟಿದೆ. ನೆರೆ ಪರಿಹಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರೆ ಅವರನ್ನೂ ದೇಶದ್ರೋಹಿ ಅಂದ ಸರ್ಕಾರ ಇದು. ಈ ಭಂಡ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. 15 ಸ್ಥಾನದಲ್ಲಿ ನಾವು ಕನಿಷ್ಟ ಹತ್ತು ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು 8 ಸ್ಥಾನಗಳನ್ನು ಗೆಲ್ಲಲೇಬೇಕು. ಅವರ ಸಂಖ್ಯೆ 113 ಆಗದಿದ್ರೆ ಏನಾಗುತ್ತೆ ನೋಡಿ, ಇದು ಅಂಕಿಗಳ ಆಟ ಎಂದು ಮಾರ್ಮಿಕವಾಗಿ ನುಡಿದರು.

    ಕಲಾಪಕ್ಕೆ ಮಾಧ್ಯಮದವರ ನಿರ್ಬಂಧದ ಕುರಿತು ಮಾತನಾಡಿದ ಅವರು, ಮಾಧ್ಯಮದವರ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವನ್ನೇ ವಿಧಾಸಭೆ ಕಲಾಪದಿಂದ ಹೊರಗಿಟ್ಟಿದ್ದಾರೆ. ವಿಧಾನಸಭೆ ಕಲಾಪದ ದೃಶ್ಯ ಸೆರೆ ಹಿಡಿಯಬಾರದೆಂದು ಮಾಧ್ಯಮದವನ್ನು ಹೊರಹಾಕಿದ್ದಾರೆ. ಸಂವಿಧಾನದ ಮೂಲವೇ ಫ್ರೀಡಂ ಆಫ್ ಸ್ಪೀಚ್, ಅದನ್ನೇ ಹತ್ತಿಕ್ಕುವಂತಹ ಕೆಲಸ ಮಾಡಿದ್ದಾರೆ. ಇದು ನಾಚಿಗೇಡಿನ ಸರ್ಕಾರ ಎಂದು ಕಿಡಿಕಾರಿದರು.

  • ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    – ಹೈ ಕಮಾಂಡ್ ಸಿಎಂ ನಿಯಂತ್ರಿಸುತ್ತಿದೆ

    ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ನಡುವೆ ಮುಸುಕಿನ ಕಾಳಗ ಇದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಬೆಂಬಲ ಇದೆ. ಆದರೆ ಯಡಿಯೂರಪ್ಪ ಅವರಿಗೆ ಫ್ರಿ ಹ್ಯಾಂಡ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹರಿಹಾಯ್ದಿದ್ದಾರೆ.

    ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಸಿಎಂ ಬಿಎಸ್‍ವೈ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಕೆಲಸ ಕಾರ್ಯದಲ್ಲಿ ವರಿಷ್ಠರು ಅಡೆತಡೆ ಉಂಟು ಮಾಡುತ್ತಿರಬಹುದು. ಸಿಎಂಗೆ ವರಿಷ್ಠರಿಂದ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಆದರೆ ಹೈ ಕಮಾಂಡ್ ಹಿಡಿತ ಸಾಧಿಸುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಪಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ನಿಶ್ಚಿತವಾಗಿಯೂ ತೊಂದರೆ ಇದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅನರ್ಹ ಶಾಸಕರು ಸ್ಪರ್ಧೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 15 ಸ್ಥಾನದಲ್ಲಿ ಕನಿಷ್ಟ 12 ಜನ ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗುತ್ತಾರೆ. ಬಿಜೆಪಿ ಮೇಲೆ ಇದು ಪರಿಣಾಮ ಬೀರುತ್ತದೆ. ಉಪಚುನಾವಣೆ ಬಳಿಕ ಬಿಎಸ್‍ವೈ ಸರ್ಕಾರಕ್ಕೆ ತೊಂದರೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಉಮೇಶ್ ಕತ್ತಿ ಅನರ್ಹರಿಗೆ ಟಿಕೆಟ್ ಕೊಟ್ಟರೆ ಹುಷಾರ್ ಅಂತ ಹೇಳುತ್ತಾರೆ. ಇತ್ತ ಸಿಎಂ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಾರೆ. ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮುಸುಕಿನ ಗುದ್ದಾಟಗಳು ನಡೆದಿವೆ. ಇವರ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿ ಕಾರಿದರು.

    ಕೋರ್ಟ್ ಆದೇಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅನರ್ಹರನ್ನು ಯಾರೂ ಕ್ಷಮಿಸುವುದಿಲ್ಲ, ಕ್ಷೇತ್ರದ ಜನರು ಸಹ ಅವರನ್ನು ಕ್ಷಮಿಸುವುದಿಲ್ಲ. ಅವರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಹೆಚ್.ಮುನಿಯಪ್ಪ ವಾಕ್ಸಮರದ ಕುರಿತು ಮಾತನಾಡಿದ ಅವರು, ನಾನು ಕೆ.ಎಚ್.ಮುನಿಯಪ್ಪ ಸ್ನೇಹಿತರು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಪಕ್ಷದ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಜಾಯಿಷಿ ನೀಡಿದ್ದಾರೆ. ಚರ್ಚೆ ಮಾಡಿದ್ದನ್ನೇ ಭಿನ್ನಾಭಿಪ್ರಾಯ ಎಂದು ತೋರಿಸಬಾರದು. ಇದು ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು.

  • ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬೆಂಗಳೂರು: ಬಿಜೆಪಿ ಇಂತಹ ದೊಡ್ಡ ಸಾಹಸಕ್ಕೆ ಇಳಿಯಬಾರದಿತ್ತು, ಅವರು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತಯಾಚನೆಗೂ ಮುನ್ನವೇ ಬಿಜೆಪಿಯವರ ಕೋಟು, ಸೂಟು ರೆಡಿಯಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರಮಾಣವಚನ ಸ್ವೀಕರಿಸಲು ಸಹ ಕಾತರದಿಂದ ಕಾಯುತ್ತಿದ್ದರು. ಆದರೆ ಈವರೆಗೂ ಸರ್ಕಾರವೇ ರಚನೆಯಾಗಿಲ್ಲ ಎಂದು ವ್ಯಂಗ್ಯವಾಡಿದರು.

    ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ರಾಜಕಾರಣವನ್ನು ನೋಡಿಲ್ಲ. ಬಿಜೆಪಿಯವರು ಮಂಗನಾಟದಂತೆ ಆಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇದರಿಂದ ಬಿಜೆಪಿಯವರ ಪರಿಸ್ಥಿತಿ ನೆಟ್ಟಗಾಗುವುದಿಲ್ಲ ಎಂದು ಕಿಡಿ ಕಾರಿದರು.

    ಅತೃಪ್ತ ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದ್ದು, ಸ್ಪೀಕರ್ ತೀರ್ಮಾನವೇ ಅಂತಿಮ. ಬಿಜೆಪಿಯವರ ಸರ್ಕಾರ ರಚನೆಯ ಕಾತರಕ್ಕೆ ಹೈ ಕಮಾಂಡ್ ಬ್ರೇಕ್ ಹಾಕಿದ್ದು, ಅವರ ಪರಿಸ್ಥಿತಿ ನೆನಸಿಕೊಂಡರೆ ಮರುಕವಾಗುತ್ತದೆ. ಬಿಜೆಪಿಯಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಇಲ್ಲ, ಅವರಿಂದ ರಾಜ್ಯದ ಅಭಿವೃದ್ಧಿ ಕನಸಿನ ಮಾತು ಎಂದು ಎಸ್.ಆರ್.ಪಾಟೀಲ್ ಟೀಕಿಸಿದರು.

  • ಉತ್ತರ ಕರ್ನಾಟಕಕ್ಕೆ ಅನ್ಯಾಯ – ಸಭಾಪತಿ ಆಯ್ಕೆ ವಿಚಾರದಲ್ಲಿ ಎಂ.ಬಿ.ಪಾಟೀಲ್ ಅಸಮಾಧಾನ

    ಉತ್ತರ ಕರ್ನಾಟಕಕ್ಕೆ ಅನ್ಯಾಯ – ಸಭಾಪತಿ ಆಯ್ಕೆ ವಿಚಾರದಲ್ಲಿ ಎಂ.ಬಿ.ಪಾಟೀಲ್ ಅಸಮಾಧಾನ

    ಬೆಂಗಳೂರು: ಸಭಾಪತಿ ಆಯ್ಕೆ ವಿಚಾರದಲ್ಲಿ ಎಸ್.ಆರ್.ಪಾಟೀಲರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತೆಂದು ಶಾಸಕ ಎಂ.ಬಿ.ಪಾಟೀಲ್ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಸಭಾಪತಿ ಆಯ್ಕೆ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಎಸ್.ಆರ್. ಪಾಟೀಲರು ಹಿರಿಯರು ಹಾಗೂ ಬಹಳಷ್ಟು ಆಸೆಯನ್ನು ಹೊಂದಿದ್ದರು. ಆದರೆ ಪಕ್ಷದ ಕೆಲ ಮಾನದಂಡಗಳಿಂದ ಅವರಿಗೆ ಅವಕಾಶ ಕೈ ತಪ್ಪಿದೆ. ಅವರಿಗೆ ಅವಕಾಶ ಕೈ ತಪ್ಪಿದ್ದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರಿಗೂ ನೋವಾಗಿದೆ ಎಂದು ಹೇಳಿದ್ದಾರೆ.

    ಈ ಹಿಂದೆ ನಮ್ಮ ಪಕ್ಷದ ನಾಯಕರಲ್ಲಿ ವಿನಂತಿ ಮಾಡಿಕೊಂಡಿದ್ದೆವು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳನ್ನು ಬೇರೆ ಬೇರೆಯಾಗಿ ಕಾಣಬಾರದು. ರಾಜ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಕಾಂಗ್ರೆಸ್ಸಿನ ಅತಿ ಹೆಚ್ಚು ಶಾಸಕರು ಉತ್ತರ ಕರ್ನಾಟಕದಿಂದಲೇ ಆಯ್ಕೆಯಾಗಿದ್ದಾರೆ. ಆದರೆ ಉತ್ತರಕರ್ನಾಟಕದ 41 ಜನ ಶಾಸಕರಲ್ಲಿ 5 ಜನ ಸಚಿವರಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ 36 ಶಾಸಕರಲ್ಲಿ 9 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದಲೇ ಕಾಣುತ್ತದೆ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿರುವುದು ಎಂದು ಬೇಸರ ವ್ಯಕ್ತಪಡಿಸಿದರು.

    ಮೊದಲು ಈ ತಾರತಮ್ಯವನ್ನು ಹೋಗಲಾಡಿಸಬೇಕು. ಪಕ್ಷದ ಪ್ರಮುಖ ಹುದ್ದೆಗಳು ಹಾಗೂ ಸರ್ಕಾರದ ಹುದ್ದೆಗಳೂ ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸಿಕ್ಕಿದೆ. ಹೀಗಾಗಿ ಇದನ್ನು ಸರಿಪಡಿಸಿ, ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕಕ್ಕೆ ಮಹತ್ವ ನೀಡಬೇಕು. ಉತ್ತರ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಅಲ್ಲದೇ ಎಸ್.ಆರ್. ಪಾಟೀಲರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸುತ್ತೇನೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸ್ಥಾನ ಆಯ್ಕೆ ಮಾನದಂಡ – `ಕೈ’ ನಾಯಕರ ವಿರುದ್ಧ ಎಸ್ ಆರ್ ಪಾಟೀಲ್ ಗರಂ

    ಸಚಿವ ಸ್ಥಾನ ಆಯ್ಕೆ ಮಾನದಂಡ – `ಕೈ’ ನಾಯಕರ ವಿರುದ್ಧ ಎಸ್ ಆರ್ ಪಾಟೀಲ್ ಗರಂ

    ಪಬ್ಲಿಕ್ ಟಿವಿ
    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಚಿವ ಖಾತೆಯ ಪಟ್ಟಿ ಅಂತಿಮವಾಗುತ್ತಿದಂತೆ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಎಸ್ ಆರ್ ಪಾಟೀಲ್ ಸಹ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಎಸ್ ಆರ್ ಪಾಟೀಲ್, ಇದೇ ವೇಳೆ ಜಾತ್ಯಾತೀತ ತತ್ವವನ್ನು ಹೊಂದಿರುವ ದೇಶದಲ್ಲಿ ಸಚಿವ ಖಾತೆಗಳನ್ನು ಜಾತಿ ಆಧಾರದ ಮೇಲೆ ಹಂಚಿಕೆ ಮಾಡುತ್ತಿರುವುದು ಉತ್ತಮವಲ್ಲ. ಆದರೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಖಾತೆ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಉತ್ತಮ ನಾಯಕರನ್ನು ಆಯ್ಕೆ ಮಾಡಿರುತ್ತಾರೆ. ಅದ್ದರಿಂದ ಯಾವುದೇ ಜವಾಬ್ದಾರಿ ನೀಡಿದರೂ ಮಾಡಬೇಕು ಎಂಬ ಅಭಿಪ್ರಾಯಪಟ್ಟರು.

    ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷ ವಿಫಲವಾಗಿದೆ. ಹೆಚ್ಚು ಸ್ಥಾನ ಪಡೆದಿದ್ದರೆ ನಮ್ಮ ಪಕ್ಷವೇ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತಿತ್ತು. ಆದರೆ ಇದು ಸಾಧ್ಯವಾಗಿಲ್ಲ. ಅದ್ದರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷ ಮುಂದಾಳತ್ವ ವಹಿಸಿದ್ದ ನಾನು ನೈತಿಕ ಹೊಣೆ ಹಾಗೂ ಜವಾಬ್ದಾರಿ ಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

    ಇಂಧನ ಖಾತೆ ಹಗ್ಗ ಜಗ್ಗಾಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಪ್ರಮುಖ ನಾಯಕರೇ ಏಕೆ ಖಾತೆಗಾಗಿ ಕಿತ್ತಾಟ ನಡೆಸಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಜನರ ಸೇವೆ ಮಾಡಲು ಸಚಿವ ಸ್ಥಾನವೇ ಅಗತ್ಯವಿಲ್ಲ. ಯಾವುದೇ ಸ್ಥಾನ ಪಡೆದರು ಸೇವೆ ಮಾಡಬಹುದು. ಮಂತ್ರಿ ಆಗದೇ ಇದ್ದರೆ ಏಕೆ ನಿರಾಸೆಯಾಗಬೇಕು ಎಂದು ಪ್ರಶ್ನಿಸಿದರು.

    ಕ್ಷೇತ್ರದ ಜನರು ನಾಲ್ಕು ಬಾರಿ ನನ್ನನು ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯ. ಇದಕ್ಕಾಗಿ ಮಂತ್ರಿ ಸ್ಥಾನದ ಅಗತ್ಯವಿಲ್ಲ. ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭಕ್ಕೆ ತಮಗೂ ಆಹ್ವಾನ ನೀಡಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ನಾನು ಹೋಗುತ್ತೇನೆ ಎಂದು ತಿಳಿಸಿದರು.

  • ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಎಸ್.ಆರ್ ಪಾಟೀಲ್

    ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಎಸ್.ಆರ್ ಪಾಟೀಲ್

    – ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ

    ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿ ಬಳಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಶಾಲಾ ಮಕ್ಕಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ಭೇಟಿ ನೀಡಿ ಆರೋಗ್ಯಸ್ಥಿತಿ ವಿಚಾರಿಸಿದ್ದಾರೆ.

    ಮಕ್ಕಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ಅಪಘಾತದಲ್ಲಿ ಗಾಯಗೊಂಡ ಮಕ್ಕಳು ಶೀಘ್ರ ಗುಣಮುಖರಾಗ್ಲೀ ಎಂದು ದೇವರಲ್ಲಿ ಪಾರ್ಥಿಸಿದ್ರು. ಇದೇ ವೇಳೆ ಎಸ್.ಆರ್. ಪಾಟೀಲ್ ಮಕ್ಕಳ ವೈದ್ಯಕೀಯ ಖರ್ಚಿಗಾಗಿ ವೈಯಕ್ತಿಕವಾಗಿ 2 ಲಕ್ಷ ರೂ ಸಹಾಯಧನ ನೀಡಿದ್ರು. 6 ಜನ ಮಕ್ಕಳ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲು ಸಿಎಂಗೆ ಮನವಿ ಮಾಡೋದಾಗಿ ಭರವಸೆ ನೀಡಿದ್ರು. ಇದನ್ನೂ ಓದಿ: ಟಂಟಂ ಹಿಂಬದಿಗೆ ಬೊಲೆರೊ ಡಿಕ್ಕಿ – ವಿದ್ಯಾರ್ಥಿಯ ಕೈ ಕಟ್, 6 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಇಂತಹ ಅಪಘಾತ ನಡೆಯದಂತೆ ಪೋಷಕರು ಹಾಗೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಅಲ್ಲದೇ ಕರ್ತವ್ಯ ಪ್ರಜ್ಞೆ ಮರೆತು ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

    ವಿದ್ಯಾಗಿರಿ ಬಳಿ ಟಂಟಂ ಹಾಗೂ ಬೊಲೆರೋ ವಾಹನದ ಮಧ್ಯೆ ಮಂಗಳವಾರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ನೈತಿಕ ಜವಾಬ್ದಾರಿಯಿಂದ ರಾಜೀನಾಮೆ ಕೊಟ್ಟಿದ್ದೇನೆ: ಎಸ್.ಆರ್. ಪಾಟೀಲ್ ಸ್ಪಷ್ಟನೆ

    ನೈತಿಕ ಜವಾಬ್ದಾರಿಯಿಂದ ರಾಜೀನಾಮೆ ಕೊಟ್ಟಿದ್ದೇನೆ: ಎಸ್.ಆರ್. ಪಾಟೀಲ್ ಸ್ಪಷ್ಟನೆ

    ಬೆಂಗಳೂರು: ನಾನು ನನ್ನದೇ ಆದ ತತ್ವ ಸಿದ್ದಾಂತವನ್ನು ಹೊಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದ ಸ್ಥಾನವನ್ನು ಗಳಿಸಿಲ್ಲ ಆದ್ದರಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಎಸ್.ಆರ್. ಪಾಟೀಲ್ ಹೇಳಿದ್ದಾರೆ.

    ರಾಜೀನಾಮೆ ನೀಡಿದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ 10 ಸ್ಥಾನ ಬಂದ್ರೂ, ನಮ್ಮ ಪಕ್ಷ ನಿಶ್ಚಿತವಾಗಿ ಕಾರ್ಯ ಮಾಡುತ್ತಿತ್ತು. ನಾನು ಉತ್ತರ ಕರ್ನಾಟಕದ ಜವಬ್ದಾರಿ ಹೊತ್ತಿದ್ದೇನೆ. ಅಂದಿನ ಸೋನಿಯ ಗಾಂಧಿಯವರು ನನ್ನನ್ನು ಕರ್ನಾಟಕದ ಕಾರ್ಯಧ್ಯಕ್ಷರಾಗಿ ಅಧಿಕಾರ ಕೊಟ್ಟಿದ್ದರು ಎಂದರು.

    ಉತ್ತರ ಕರ್ನಾಟಕದಲ್ಲಿ ನೀರಿಕ್ಷಿತ ಸ್ಥಾನವನ್ನು ಪಡೆಯದೆ ಇದ್ದುದ್ದರಿಂದ ನನಗೆ ನೋವಾಗಿದೆ. ನಾನು ನೈತಿಕ ಜವಬ್ದಾರಿಯಿಂದ ನಾನು ರಾಜೀನಾಮೆ ಕೊಟ್ಟಿದ್ದೇನೆ. ಬೇರೆ ಯಾವುದೇ ಕಾರಣವಿಲ್ಲ. ಯಾರ ವಿರುದ್ಧವೂ ಗರಂ ಆಗಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದ ಸ್ಥಾನವನ್ನು ಗಳಿಸಿಲ್ಲ ಈ ಕಾರಣದಿಂದಲೇ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

    ಯಾರು ನನಗೆ ಒತ್ತಡ ಹಾಕಿಲ್ಲ. ಕಾಂಗ್ರೆಸ್ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ನನ್ನ ಒಪ್ಪಿಗೆ ಇದೆ. ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ಅಪಾರ ನಂಬಿಕೆ ಇದೆ. ನಾನು ಯಾವುದೇ ಅಸಮಾಧಾನ ಹೊಂದಿಲ್ಲ. ನೈತಿಕಗಿರಿಯಿಂದ ಈ ರಾಜೀನಾಮೆ ಕೊಟ್ಟಿದ್ದೇನೆ. ರಾಹುಲ್ ಗಾಂಧಿ ಏನು ತಿರ್ಮಾನ ಮಾಡುತ್ತಾರೆ ಕಾದು ನೋಡುತ್ತೇನೆ. ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆಯನ್ನು ಹೊಂದಿಲ್ಲ. ನಾನು ಸಾಯುವವರೆಗೂ ಕಾಂಗ್ರೆಸ್ಸಿನಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.