Tag: sports

  • ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು – ಸೂಪರ್ 8ಕ್ಕೆ ಲಗ್ಗೆ

    ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು – ಸೂಪರ್ 8ಕ್ಕೆ ಲಗ್ಗೆ

    ನ್ಯೂಯಾರ್ಕ್‌: ಅಮೆರಿಕ (USA) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ (India) ಟಿ20 ವಿಶ್ವಕಪ್‌ (T20 World Cup Cricket) ಕ್ರಿಕೆಟ್‌ನ ಸೂಪರ್‌-8 ಹಂತಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ.

    ನಿಧಾನಗತಿಯ ಪಿಚ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅಮೆರಿಕ 8 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ ಅವರ ಆಟದ ನೆರವಿನಿಂದ  18.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 111 ರನ್‌ ಹೊಡೆಯುವ ಮೂಲಕ 7 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: ಭಾರತಕ್ಕೆ ಮೋಸ – ಚೀಟಿಂಗ್‌ ಕತಾರ್‌ ವಿರುದ್ಧ ಅಭಿಮಾನಿಗಳು ಕೆಂಡ

    ಎ ಗುಂಪಿನಿಂದ ಸೂಪರ್-8‌ ಪ್ರವೇಶಿಸಿದ ಮೊದಲ ತಂಡ ಭಾರತವಾಗಿದೆ. ಈ ಸೋಲಿನ ಹೊರತಾಗಿಯೂ ಅಮೆರಿಕ ಸೂಪರ್-8 ಪ್ರವೇಶಿಸುವ ರೇಸ್‌ನಲ್ಲಿ ಉಳಿದುಕೊಂಡಿದೆ.

    ವಿರಾಟ್‌ ಕೊಹ್ಲಿ 0, ರೋಹಿತ್‌ ಶರ್ಮಾ 3 ರನ್‌ಗೆ ಔಟಾದಾಗ ಜಯ ಸಾಧಿಸುವುದು ಕಷ್ಟ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರಿಷಭ್‌ ಪಂತ್‌ 18 ರನ್‌(20 ಎಸೆತ, 1 ಬೌಂಡರಿ, 1 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ ಔಟಾಗದೇ 50 ರನ್‌ (49 ಎಸೆತ, 2 ಬೌಂಡರಿ, 2 ಸಿಕ್ಸರ್)‌ ಶಿವಂ ದುಬೆ ಔಟಾಗದೇ 31 ರನ್‌ (35 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದರು. ಮುರಿಯದ 4ನೇ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ ಮತ್ತು ಶಿವಂ ದುಬೆ 65 ಎಸೆತಗಳಲ್ಲಿ 67 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

    ಮೊದಲು ಬ್ಯಾಟ್‌ ಮಾಡಿದ ಅಮೆರಿಕ ಪರ ಸ್ಟೀವನ್‌ ಟೇಲರ್‌ 24 ರನ್‌ (30 ಎಸೆತ) ನಿತೀಶ್‌ ಕುಮಾರ್‌ 27 ರನ್‌ (23 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು.

    9 ರನ್‌ ನೀಡಿ 4 ವಿಕೆಟ್‌ ಕಿತ್ತ ಅರ್ಶ್‌ದೀಪ್‌ ಸಿಂಗ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವವನ್ನು ಪಡೆದರು. ಹಾರ್ದಿಕ್‌ ಪಾಂಡ್ಯ 2 ವಿಕೆಟ್‌, ಅಕ್ಷರ್‌ ಪಟೇಲ್‌ 1 ವಿಕೆಟ್‌ ಕಿತ್ತರು.

  • ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    – ಪಾಕ್‌ ವಿರುದ್ಧ ಮಿಂಚಿದ ನಾಸ್ತುಷ್ ಕೆಂಜಿಗೆ

    ಚಿಕ್ಕಮಗಳೂರು: ಪಾಕಿಸ್ತಾನದ (Pakistan) ವಿರುದ್ಧ ಯಾವುದೇ ತಂಡ ಕ್ರಿಕೆಟ್ ಆಡಿದರೂ ಆ ತಂಡಕ್ಕೆ ಭಾರತೀಯರ ಬೆಂಬಲ ಇದ್ದೇ ಇರುತ್ತೆ. ಹೀಗಿರುವಾಗ ಮೊನ್ನೆ ಟಿ20 ವಿಶ್ವಕಪ್ (T20 World Cup) ನಲ್ಲಿ ಅದೇ ಪಾಕಿಸ್ತಾನಕ್ಕೆ ಕ್ರಿಕೆಟ್ ಶಿಶು ಅಮೆರಿಕ (USA) ಮಣ್ಣು ಮುಕ್ಕಿಸಿದ್ದು ಈಗ ಇತಿಹಾಸ. ಆದರೆ ಅಮೆರಿಕ ತಂಡದ ಎಡಗೈ ಆಫ್ ಸ್ಪಿನ್ನರ್ ಕಾಫಿನಾಡ ಮನೆಮಗ ನಾಸ್ತುಷ್ ಕೆಂಜಿಗೆ (Nosthush Kenjige) ಆಟಕ್ಕೆ ಕಾಫಿನಾಡು ಫುಲ್ ಫಿದಾ ಆಗಿದ್ದಾರೆ. ಪಾಕ್ ವಿರುದ್ಧ ಗೆದ್ದಿದ್ದು ಅಮೆರಿಕವಾದರೂ ಸಂಭ್ರಮಿಸಿದ್ದು ಮಾತ್ರ ಭಾರತ.

    ಟಿ20 ಮಾದರಿಯ ಬೆಸ್ಟ್ ಟೀಂ ಪಾಕಿಸ್ತಾನವನ್ನ ಕ್ರಿಕೆಟ್ ಶಿಶುಗಳಾದ ಅಮೆರಿಕ ಸೋಲಿಸುತ್ತೆ ಅಂತ ಯಾರೂ ಊಹಿಸರಲಿಲ್ಲ. 159 ರನ್ ಚೇಸ್ ಮಾಡಲಾಗದ ಪಾಕಿಸ್ತಾನ ಮ್ಯಾಚ್ ಟೈ ಮಾಡ್ಕೊಂಡು ಸೂಪರ್ ಓವರ್ ನಲ್ಲಿ ಅಮೆರಿಕದೆದುರು ಮಂಡಿಯೂರಿತ್ತು. ಆ ಮ್ಯಾಚಿನಲ್ಲಿ ಕಾಫಿನಾಡು ಚಿಕ್ಕಮಗಳೂರು ಹುಡುಗನ ಸಾಧನೆ ಅಮೋಘವಾಗಿತ್ತು.

    ಆ ಪಂದ್ಯದಲ್ಲಿ ಫಸ್ಟ್ ಓವರ್ ಸ್ಪಿನ್‌ ಮಾಡಿದ ನಾಸ್ತುಷ್ ಚಿಕ್ಕಮಗಳೂರು (Chikkamagluru) ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರು. ಪೂರ್ಣಚಂದ್ರ ತೇಜಸ್ವಿ ಅವರ ಸ್ನೇಹಿತ ಪ್ರದೀಪ್‌ ಕೆಂಜಿಗೆ ಅವರ ಮಗನಾಗಿರುವ ನಾಸ್ತುಷ್ ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ಹೋಗಿ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಅಮೆರಿಕದ ಜೊತೆ ಭಾರತದ ಹೆಸರನ್ನೂ ಬೆಳೆಸುತ್ತಿದ್ದಾರೆ. ಇದನ್ನೂ ಓದಿ: T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    ನಾಸ್ತುಷ್ ಕೆಂಜಿಗೆ ಹುಟ್ಟಿದ್ದು ಅಮೇರಿಕಾದಲ್ಲೇ. ಆದರೆ ಬೆಳೆದಿದ್ದು ಮಾತ್ರ ಚಿಕ್ಕಮಗಳೂರು, ಬೆಂಗಳೂರಿನಲ್ಲಿ. ಬೆಂಗಳೂರಿನ ದಯಾನಂದ ವಿದ್ಯಾಸಾಗರ ಕಾಲೇಜಿನಲ್ಲಿ ಎಂ.ಟಿಕ್ (ಬಯೋ ಮೆಡಿಕಲ್) ಓದಿದ ಅವರು ಅವರು ಕರ್ನಾಟಕದಲ್ಲಿ ಕ್ರಿಕೆಟಿಗನಾಗಿ ಬೆಳೆದಿದ್ದರು.

    ಬೆಂಗಳೂರು, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸದ ಜೊತೆ ಕ್ರಿಕೆಟ್ ಕೋಚ್ ಪಡೆದಿದ್ದಾರೆ. 2022ರ ಕೊರೊನಾ ಅವಧಿಯಲ್ಲಿ ನಾಸ್ತುಷ್ ಕೆಂಜಿಗೆ ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಅಭ್ಯಾಸ ಮಾಡಿದ್ದರು. ಇಲ್ಲಿರುವ ಕ್ರೀಡಾ ಪಟುಗಳ ಜೊತೆ ನಿತ್ಯ ಪ್ರಾಕ್ಟಿಸ್ ಮಾಡುತ್ತಿದ್ದರು. ಹುಡುಗರಿಗೆ ಕ್ರಿಕೆಟ್‌ ಹೇಗೆ ಆಡಬೇಕು? ಬ್ಯಾಟಿಂಗ್-ಬೌಲಿಂಗ್ ಬಗ್ಗೆಯೂ ತರಬೇತಿ ನೀಡಿದ್ದರು.

     

  • 4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    ಅಹಮದಾಬಾದ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ8  ವಿಕೆಟ್‌ಗಳ ಭರ್ಜರಿ ಜಯಗಳಿಸಿ ನಾಲ್ಕನೇ ಬಾರಿ ಐಪಿಎಲ್ ಫೈನಲ್‌ (IPL Final) ಪ್ರವೇಶಿಸಿದೆ.

    ಗೆಲ್ಲಲು 160 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯುವ ಮೂಲಕ ಜಯಗಳಿಸಿತು.‌ ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

    ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಟಗಾರರು ಆರಂಭದಿಂದಲೇ ಆಕ್ರಮಣಕ್ಕೆ ಇಳಿದಿದ್ದರು. ಮೊದಲ ವಿಕೆಟಿಗೆ 20 ಎಸೆತಗಳಲ್ಲಿ 44 ರನ್‌ ಬಂದಿತ್ತು. ರಹಮಾನುಲ್ಲಾ ಗುರ್ಬಾಜ್ 23 ರನ್‌ (14 ಎಸೆತ, 2 ಬೌಂಡರಿ, 2 ಸಿಕ್ಸರ್)‌, ಸುನಿಲ್‌ ನರೈನ್‌ 21 ರನ್‌ (16 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ನಂತರ ಜೊತೆಯಾದ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಮುರಿಯದ 3ನೇ ವಿಕೆಟಿಗೆ 44 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ 58 ರನ್‌ (24 ಎಸೆತ, 5 ಬೌಂಡರಿ, 4 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ 51 ರನ್‌(28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿದರು.

    ಹೈದರಾಬಾದ್‌ ಬೌಲಿಂಗ್‌ ಕಳಪೆಯಾಗಿತ್ತು. ಉತ್ತಮ ಬೌಲಿಂಗ್‌ ಮಾಡುತ್ತಿದ್ದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 3 ಓವರ್‌ ಎಸೆದು 38 ರನ್‌ ನೀಡಿದ್ದರು. ಅಷ್ಟೇ ಅಲ್ಲದೇ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಹೈದರಾಬಾದ್‌ ಸೋಲನ್ನು ಅನುಭವಿಸಿತು.

    ಕಳಪೆ ಬ್ಯಾಟಿಂಗ್‌: ಟಾಸ್‌ ಗೆದ್ದ ಕೋಲ್ಕತ್ತಾ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಫೀಲ್ಡಿಂಗ್‌ ಆಯ್ಕೆ ಮಾಡಿದರು. ಈ ನಿರ್ಧಾರ ಮೊದಲ ಓವರ್‌ನಲ್ಲಿ ಫಲ ನೀಡಿತು. ಲೀಗ್‌ನಲ್ಲಿ ಅಬ್ಬರಿಸಿದ್ದ ಟ್ರಾವಿಸ್‌ ಹೆಡ್‌ ಅವರನ್ನು ಮಿಚೆಲ್‌ ಸ್ಟಾರ್ಕ್‌ ಶೂನ್ಯಕ್ಕೆ ಬೌಲ್ಡ್‌ ಮಾಡಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಓವರ್‌ನಲ್ಲಿ ಸಿಕ್ಸರ್‌ ವೀರ ಅಭಿಷೇಕ್‌ ಶರ್ಮಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. 39 ರನ್‌ಗಳಿಸುವಷ್ಟರಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಸಹ ಔಟಾದರು.

    ಈ ಹಂತದಲ್ಲಿ ಜೊತೆಯಾದ ರಾಹುಲ್‌ ತ್ರಿಪಾಠಿ ಮತ್ತು ಕ್ಲಾಸೆನ್‌ 37 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು.

     

    ಸಿಕ್ಸ್‌ ಸಿಡಿಸಲು ಹೋಗಿ ಕ್ಲಾಸೆನ್‌ 32 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌), ರಾಹುಲ್‌ ತ್ರಿಪಾಠಿ 55 ರನ್‌ (35 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ರನೌಟ್‌ಗೆ ಬಲಿಯಾರು.

    ನಾಯಕ ಪ್ಯಾಟ್‌ ಕಮ್ಮಿನ್ಸ್‌ 30 ರನ್‌ (24 ಎಸೆತ, 2 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ನಡೆಯದ ಕಾರಣ ಅಂತಿಮವಾಗಿ 19.3 ಓವರ್‌ಗಳಲ್ಲಿ 159 ರನ್‌ಗಳಿಗೆ ಹೈದರಾಬಾದ್‌ ಆಲೌಟ್‌ ಆಯ್ತು. ಹೈದರಾಬಾದ್‌ 8 ಆಟಗಾರರು ಎರಡಂಕಿಯನ್ನು ದಾಟಲಿಲ್ಲ.  4 ಆಟಗಾರರು ಶೂನ್ಯಕ್ಕೆ ಔಟಾಗಿದ್ದರು.

  • ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!

    ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!

    – ಕೂಲಿ ಕಾರ್ಮಿಕನ ಮಗಳ ಚಿನ್ನದಂಥ ಸಾಧನೆ

    ಟೋಕಿಯೊ: ಜಪಾನ್‌ನ ಕೊಬೆಯಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Para Championships) ಮಹಿಳೆಯರ 400 ಮೀಟರ್ ಟಿ20 ವಿಭಾಗದ ಓಟದಲ್ಲಿ ಭಾರತದ ದೀಪ್ತಿ ಜೀವನಜಿ (Deepthi Jeevanji) ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

    21 ವರ್ಷದ ಓಟಗಾರ್ತಿ ದೀಪ್ತಿ 55.07 ಸೆಕೆಂಡುಗಳಲ್ಲಿ ಗುರಿ ಸಾಧಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇನ್ನೂ ಟರ್ಕಿಯ ಐಸೆಲ್ ಒಂಡರ್ 55.19 ಸೆಕೆಂಡುಗಳಲ್ಲಿ ಓಟ ಪೂರೈಸಿ ಬೆಳ್ಳಿ ಗೆದ್ದರೆ, ಈಕ್ವೆಡಾರ್‌ನ ಲಿಜಾನ್‌ಶೆಲಾ ಅಂಗುಲೋ 56.68 ಸೆಕೆಂಡುಗಳಲ್ಲಿ ಓಡಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

    ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಅಮೆರಿಕದ ಬ್ರೆನ್ನಾ ಕ್ಲಾರ್ಕ್ 55.12 ಸೆಕೆಂಡುಗಳಲ್ಲಿ ʻಚಿನ್ನʼ ಓಟ ಪೂರೈಸಿದ್ದು ಈವರೆಗಿನ ದಾಖಲೆಯಾಗಿತ್ತು.

    ಯಾರಿದು ದೀಪ್ತಿ?
    ತೆಲಂಗಾಣದ ವಾರಂಗಲ್‌ನ ಜಿಲ್ಲೆಯ ಕಲ್ಲಡಾ ಗ್ರಾಮದ ದೀಪ್ತಿ ಜೀವನಜಿ ಮೂಲತಃ ಕೂಲಿ ಕಾರ್ಮಿಕ ಕುಟುಂಬದಿಂದ ಬಂದವರು. ಕಳೆದ ವರ್ಷ ಏಷ್ಯನ್‌ ಪ್ಯಾರಾ ಕ್ರೀಡಾಕೂಟದ ಟಿ20 400 ಮೀಟರ್‌ ಓಟ ವಿಭಾಗದಲ್ಲಿ 52.69 ಸೆಕೆಂಡುಗಳಲ್ಲೇ ತಮ್ಮ ಓಟ ಪೂರೈಸಿ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.

    ಅಷ್ಟೇ ಅಲ್ಲ ದೀಪ್ತಿ, ಎಬಲ್ಡ್ ಬಾಡಿಡ್ ಅಸ್ಟ್ರೀಟ್‌ಗಳೊಂದಿಗೆ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸಿ, ಹಲವು ಪದಕಗಳನ್ನು ಗೆದ್ದಿದ್ದಾರೆ. ಸದ್ಯ ಭಾರತ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಬಾಚಿಕೊಂಡಿದೆ. ಟಿ20 ರಿಲೇ ವಿಭಾಗವು ಬೌದ್ಧಿಕವಾಗಿ ದುರ್ಬಲವಾಗಿರುವ ಕ್ರೀಡಾಪಟುಗಳಿಗೆ ಮೀಸಲಾಗಿದೆ.

  • ಯಾದಗಿರಿ ಜಿಲ್ಲಾ ಕ್ರೀಡಾ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರ್

    ಯಾದಗಿರಿ ಜಿಲ್ಲಾ ಕ್ರೀಡಾ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರ್

    ಯಾದಗಿರಿ: ಜಿಲ್ಲಾ ಕ್ರೀಡಾ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ (Street Dogs) ದರ್ಬಾರ್ ಎನ್ನುವಂತಾಗಿದೆ.

    ಯುವ ಜನ ಮತ್ತು ಕ್ರೀಡಾ ಕಚೇರಿ ಕೊಠಡಿಯಲ್ಲೇ ಬೀದಿ ನಾಯಿಗಳು ಗಡದ್ದಾಗಿ ನಿದ್ದೆ ಮಾಡುತ್ತಿವೆ. ಕ್ರೀಡಾಧಿಕಾರಿ ಕೊಠಡಿಯ ಪ್ರಾಂಗಣದಲ್ಲೇ ಬೀದಿ ನಾಯಿಗಳ ಆಟಾಟೋಪ ಜೋರಾಗಿದೆ. ಕ್ರೀಡಾ ಕಚೇರಿಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಇದ್ರೂ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.

    ಜಿಲ್ಲಾ ಕ್ರೀಡಾಂಗಣದಲ್ಲಿಯೇ ಕ್ರೀಡಾ ಕಚೇರಿ ಇದೆ. ಕ್ರೀಡಾ ಕಚೇರಿಯಲ್ಲಿ ನಾಯಿಗಳು ವಾಸವಿದ್ರೂ ನಾಯಿ ಓಡಿಸದೇ ನಿರ್ಲಕ್ಷ್ಯ ಮಾಡ್ತಿರೋದ್ರಿಂದ, ಕ್ರೀಡಾ ಕಚೇರಿಗೆ ಬರುವ ಕ್ರೀಡಾಪಟುಗಳಿಗೆ ಬೀದಿ ನಾಯಿಗಳ ಭಯ ಶುರುವಾಗಿದೆ. ಇದನ್ನೂ ಓದಿ: ಸಂಪುಟ ಪುನಾರಚನೆ ಇಲ್ಲ, ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ: ಸಿಎಂ

  • ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ಫುಟ್‌ಬಾಲ್‌ಗೆ ವಿದಾಯ ಹೇಳಿದ ಸುನಿಲ್ ಛೆಟ್ರಿ

    ನವದೆಹಲಿ: ಟೀಂ ಇಂಡಿಯಾದ ಖ್ಯಾತ ಆಟಗಾರ ಸುನಿಲ್‌ ಛೆಟ್ರಿ (Sunil Chhetri) ಅಂತಾರಾಷ್ಟ್ರೀಯ ಪುಟ್‌ಬಾಲ್‌ಗೆ (International Football) ವಿದಾಯ ಹೇಳಿದ್ದಾರೆ. ಜೂನ್‌ 6 ರಂದು ಕುವೈತ್‌ (Kuwait) ವಿರುದ್ಧ ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ ತನ್ನ ಕೊನೆಯ ಪಂದ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್‌ ಮೂಲಕ 39 ವರ್ಷದ ಛೆಟ್ರಿ ವಿದಾಯದ ನಿರ್ಧಾರವನ್ನುತಿಳಿಸಿದರು.

    ಛೆಟ್ರಿ ಮಾರ್ಚ್‌ನಲ್ಲಿ ಭಾರತಕ್ಕಾಗಿ (India) ತಮ್ಮ 150 ನೇ ಪಂದ್ಯ ಆಡಿದ್ದರು. ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಆದರೆ ಆ ಪಂದ್ಯವನ್ನು ಭಾರತ 1-2 ಅಂತರದಲ್ಲಿ ಸೋಲನುಭವಿಸಿತ್ತು.

    ನಾನು ವೈಯಕ್ತಿಕವಾಗಿ ಆಡಿಲ್ಲ. ದೇಶಕ್ಕಾಗಿ ಆಡಿದ್ದೇನೆ. ನಾನು ರಾಷ್ಟ್ರೀಯ ತಂಡದೊಂದಿಗಿನ ಪ್ರತಿಯೊಂದು ತರಬೇತಿಯನ್ನು ನಾನು ಆನಂದಿಸಲು ಬಯಸುತ್ತೇನೆ. ಕುವೈತ್ ವಿರುದ್ಧದ ಪಂದ್ಯಕ್ಕೆ ಒತ್ತಡವಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ ಎಂದು ಛೆಟ್ರಿ ಹೇಳಿದರು.

     

  • ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಹೈದರಾಬಾದ್‌: ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಮತ್ತು ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅವರ ಮ್ಯಾಜಿಕ್‌ ಬೌಲಿಂಗ್‌ನಿಂದಾಗಿ  ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 1 ರನ್‌ಗಳ ರೋಚಕ ಜಯ ದಾಖಲಿಸಿದೆ.

    ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 3 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಕೊನೆಯವರೆಗೆ ಹೋರಾಡಿತ್ತು. ಅಂತಿಮವಾಗಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿ ಸೋತಿತು.

    ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್‌ ಗೆಲ್ಲಲು 45 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 3 ರನ್‌, 17 ನೇ ಓವರ್‌ನಲ್ಲಿ 15 ರನ್‌, 18ನೇ ಓವರ್‌ನಲ್ಲಿ 7 ರನ್‌ ಬಂತು. 19ನೇ ಓವರ್‌ ಎಸೆದ ಕಮ್ಮಿನ್ಸ್‌ ಕೇವಲ 7 ರನ್‌ ನೀಡಿ ನಿಯಂತ್ರಿಸಿದರು.

    ಭುವನೇಶ್ವರ್‌ ಎಸೆದ ಕೊನೆಯ ಓವರ್‌ನಲ್ಲಿ ಒಂದು ಬೌಂಡರಿ ಸೇರಿದಂತೆ 11 ರನ್‌ ಬಂತು. ಕೊನೆಯ ಎಸೆತದಲ್ಲಿ ಎರಡು ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಬಾಲ್‌ ಬ್ಯಾಟ್‌ಗೆ ತಾಗದೇ ಪೊವೆಲ್‌ ಪ್ಯಾಡ್‌ಗೆ ತಾಗಿ ಎಲ್‌ಬಿ ಔಟಾದ ಪರಿಣಾಮ ರಾಜಸ್ಥಾನ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.

    ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್‌ 67 ರನ್‌ (40 ಎಸೆತ, 7 ಬೌಂಡರಿ, 2 ಸಿಕ್ಸರ್‌) ರಿಯಾನ್‌ ಪರಾಗ್‌ 77 ರನ್‌ ( 49 ಎಸೆತ,8 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು. ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಪಡೆದರೆ, ಪ್ಯಾಟ್‌ ಕಮ್ಮಿನ್ಸ್‌ ಮತ್ತು ನಟರಾಜನ್‌ ತಲಾ 2 ವಿಕೆಟ್‌ ಪಡೆದರು.

    ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 58 ರನ್‌ (44 ಎಸೆತ, 6 ಬೌಂಡರಿ, 3 ಸಿಕ್ಸರ್‌), ನಿತೀಶ್‌ ಕುಮಾರ್‌ ರೆಡ್ಡಿ ಔಟಾಗದೇ 76 ರನ್(42‌ ಎಸೆತ, 3 ಬೌಂಡರಿ, 8 ಸಿಕ್ಸರ್‌), ಕ್ಲಾಸನ್‌ ಔಟಾಗದೇ 42 ರನ್‌ (19 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದರು.

  • Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    – ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೂರಾರು ವಿಶೇಷ

    ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ (Olympics 2024) ಈ ಬಾರಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ (Paris) ನಡೆಯಲಿದೆ. ಮುಂದಿನ ಜುಲೈ 26 ರಂದು ಕ್ರೀಡಾ ಜಾತ್ರೆ ಉದ್ಘಾಟನೆಯಾಗಲಿದ್ದು, ಆಗಸ್ಟ್‌ 11ರಂದು ತೆರೆ ಬೀಳಲಿದೆ.

    ಈ ಬಾರಿಯಂತು ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ವಿಭಿನ್ನವಾಗಿರಲಿದೆ. ಪ್ರತಿ ವರ್ಷ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ದೇಶಗಳ ಅಥ್ಲೀಟ್‌ಗಳು ಕ್ರೀಡಾಂಗಣದಲ್ಲಿ ಪಥಸಂಚಲನದ ಮೂಲಕ ಸಾಗಿ ಸಮಾವೇಶಗೊಳ್ಳುವುದು ಸಂಪ್ರದಾಯ. ಆದ್ರೆ ಈ ಬಾರಿ ಸಾವಿರಾರು ಅಥ್ಲೀಟ್‌ಗಳು ಸೇನ್‌ ನದಿಯಲ್ಲಿ (Seine River) ದೋಣಿಗಳ ಮುಖಾಂತರ ಐಫೆಲ್‌ ಟವರ್‌ ದಿಕ್ಕಿನತ್ತ ಕೆಲವು ಮೈಲುಗಳ ದೂರ ಕ್ರಮಿಸಲಿದ್ದಾರೆ. 206 ರಾಷ್ಟ್ರಗಳಿಂದ ಒಟ್ಟು 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕ್ರೀಡಾಜ್ಯೋತಿ ಸಹ ಬೆಳಗಿಸಲಾಗಿದೆ. ಉದ್ಘಾಟನೆಯ ರೋಚಕ ಕ್ಷಣವನ್ನು ಸೇನ್‌ ನದಿಯ ಎರಡೂ ಬದಿಗಳಲ್ಲಿ ನಿಂತು ವೀಕ್ಷಿಸಲು ಸುಮಾರು 6,000 ಕ್ರೀಡಾಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ವಿವಿಧ ಭದ್ರತಾ ಕಾರಣಗಳಿಂದ 3 ಲಕ್ಷ ಮಂದಿಗೆ ಮಾತ್ರ ಕ್ರೀಡಾಕೂಟ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

    ಒಟ್ಟು 35 ಸ್ಥಳಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 10,500 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಾದಾಟ ನಡೆಸಲಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಪ್ರತಿದಿನ 6 ಲಕ್ಷಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯಿರಲಿದೆ. ಊಟದ ವ್ಯವಸ್ಥೆ ನಿರ್ವಹಣೆ ಮಾಡುವುದಕ್ಕಾಗಿಯೇ 31,500 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಒಲಿಂಪಿಕ್ಸ್‌ ಇತಿಹಾಸ ಏನು?

    ಒಲಿಂಪಿಕ್ಸ್‌ ಕ್ರೀಡಾಕೂಟದ ಮೂಲ ಗ್ರೀಸ್‌ ದೇಶದ್ದಾಗಿದೆ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. 3-4 ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಕ್ರಮೇಣ ಈ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು. ನಂತರ ಮತ್ತೆ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಎಂಬಾತ ಪ್ರಪ್ರಥಮವಾಗಿ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. ಬಳಿಕ 1894ರಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯೂಬರ್ತಿನ್ ಎಂಬುವವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಹುಟ್ಟುಹಾಕಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ಸ್‌ ಕ್ರೀಡಾಕೂಟವೂ ಆಗಿತ್ತು. 

    ಮೊದಲ ಒಲಿಂಪಿಕ್ಸ್‌ ದಿನ ನಡೆದಿದ್ದು ಯಾವಾಗ?:

    ಮೊದಲ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ದಿನವನ್ನು ಜೂನ್‌ 23, 1948 ರಂದು ಆಚರಿಸಲಾಯಿತು. ಇದರಲ್ಲಿ ಪೋರ್ಚಗಲ್, ಗ್ರೀಸ್‌, ಆಸ್ಟ್ರೀಯಾ, ಕೆನಡಾ, ಸ್ವಿಟ್ಜರ್ಲೆಂಡ್‌, ಗ್ರೇಟ್‌ ಬ್ರಿಟನ್, ಉರುಗ್ವೆ, ವೆನೆಜುವೆಲಾ, ಮತ್ತು ಬೆಲ್ಜಿಯಂ ಸೇರಿ ಒಟ್ಟು 9 ದೇಶಗಳು ಮೊದಲ ಬಾರಿಗೆ ಈ ಒಲಿಂಪಿಕ್ಸ್‌ ದಿನಾಚರಣೆಯಲ್ಲಿ ಭಾಗವಹಿಸಿದ್ದವು. 

    ಒಲಿಂಪಿಕ್ಸ್‌ನಲ್ಲಿ ಭಾರತದ ಆರಂಭ ಯಾವಾಗ?

    ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತ ಭಾಗವಹಿಸಿದ್ದು, 1900ರ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ. ಪ್ಯಾರಿಸ್‌ನಲ್ಲಿ ರಜೆ ಕಳೆಯಲೆಂದು ತೆರಳಿದ್ದ ಆಂಗ್ಲೋ-ಇಂಡಿಯನ್‌ ಅಥ್ಲೀಟ್‌ ನಾರ್ಮನ್‌ ಪಿಚರ್ಡ್‌ ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಬಳಿಕ 1920ರಲ್ಲಿ ಬೆಲ್ಜಿಯಂನ ಆಂಟ್ವರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ 1924ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 8 ಮಂದಿಯ ತಂಡ ಭಾಗವಹಿಸಿತ್ತು. 1928ರಲ್ಲಿ ನೆದರ್ಲೆಂಡ್‌ನ ಆಮ್‌ಸ್ಟರ್‌ಡಂ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಿಂಪಿಕ್ಸ್‌ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು. 2020 ರಂದು ಜಪಾನ್‌ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ 124 ಅಥ್ಲೀಟ್‌ಗಳನ್ನ ಕಳುಹಿಸಿತ್ತು. ಈ ಪೈಕಿ ಕೇವಲ 7 ಮಂದಿಯಷ್ಟೇ ಪದಕ ಗೆದ್ದಿದ್ದರು. ಒಂದೇ ಒಂದು ಚಿನ್ನದ ಪದಕವಷ್ಟೇ ಭಾರತದ ಪಾಲಾಗಿತ್ತು. ಇನ್ನು 2024ರ ಒಲಿಂಪಿಕ್ಸ್‌ಗೆ ಈಗಾಗಲೇ 49 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.

    ರೇಸ್‌ನಲ್ಲಿ ಭಾರತ:

    ಒಲಿಂಪಿಕ್ಸ್‌ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್‌ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಏಕೆಂದರೆ ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್‌ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್‌ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್‌ ಬಹುದೊಡ್ಡ ಬೂಸ್ಟರ್ ಡೋಸ್‌ ಆಗಿದ್ದು, ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ. 

    ಒಲಿಂಪಿಕ್ಸ್‌ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು?

    2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್‌ ಆಯೋಜಿಸಲು ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ ಎಂದು ಹೇಳಲಾಗಿದೆ.

    ಪ್ರಮುಖ ದಿನಾಂಕ – ಯಾವ ದಿನ ಯಾವ ಸ್ಪರ್ಧೆ? 

    • ಉದ್ಘಾಟನಾ ಸಮಾರಂಭ: ಜುಲೈ 26
    • ಸಮಾರೋಪ ಸಮಾರಂಭ: ಆಗಸ್ಟ್ 11
    • ಜಿಮ್ನಾಸ್ಟಿಕ್ಸ್ ಸ್ಪರ್ಧೆ: ಜುಲೈ 27, ಆಗಸ್ಟ್ 5
    • ಈಜು ಸ್ಪರ್ಧೆ: ಜುಲೈ 27, ಆಗಸ್ಟ್ 4
    • ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್): ಆಗಸ್ಟ್ 1, ಆಗಸ್ಟ್ 11
    • ಪುರುಷರ ಬಾಸ್ಕೆಟ್‌ಬಾಲ್: ಆಗಸ್ಟ್ 10
    • ಮಹಿಳೆಯರ ಬಾಸ್ಕೆಟ್‌ಬಾಲ್ – ಆಗಸ್ಟ್ 11
    • ಪುರುಷರ ಫುಟ್ಬಾಲ್‌ ಪಂದ್ಯ – ಆಗಸ್ಟ್ 9
    • ಮಹಿಳೆಯರ ಫುಟ್ಬಾಲ್‌ ಪಂದ್ಯ – ಆಗಸ್ಟ್ 10
    • ಪುರುಷರ ಗಾಲ್ಫ್ – ಆಗಸ್ಟ್ 4
    • ಮಹಿಳೆಯರ ಗಾಲ್ಫ್ – ಆಗಸ್ಟ್ 10
    • ಮಹಿಳೆಯರ ಟೆನ್ನಿಸ್‌ ಸಿಂಗಲ್ಸ್ – ಆಗಸ್ಟ್ 3
    • ಪುರುಷರ ಟೆನ್ನಿಸ್‌ ಸಿಂಗಲ್ಸ್ – ಆಗಸ್ಟ್ 4
    • ಮಹಿಳೆಯರ ಬೀಚ್ ವಾಲಿಬಾಲ್ ಪಂದ್ಯ – ಆಗಸ್ಟ್ 9
    • ಪುರುಷರ ಬೀಚ್ ವಾಲಿಬಾಲ್ ಪಂದ್ಯ- ಆಗಸ್ಟ್ 10
  • ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    – 15 -18 ಓವರ್‌ನಲ್ಲಿ ಆರ್‌ಸಿಬಿ ಹೊಡೆದದ್ದು ಕೇವಲ 29 ರನ್‌
    – ದಿಢೀರ್‌ ಕುಸಿತ ಕಂಡ ಆರ್‌ಸಿಬಿಯ ಮಧ್ಯಮ ಕ್ರಮಾಂಕ

    ಬೆಂಗಳೂರು: ಬೌಲರ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ತವರಿನಲ್ಲಿ ಆರ್‌ಸಿಬಿ (RCB) ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಐಪಿಎಲ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

    ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ  16.5 ಓವರ್‌ಗಳಲ್ಲಿ 3  ವಿಕೆಟ್‌ ನಷ್ಟಕ್ಕೆ  186 ರನ್‌ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ಸ್ಫೋಟಕ ಆರಂಭ: ಆರಂಭಿಕ ಆಟಗಾರರಾದ ಪಿಲ್‌ ಸಾಲ್ಟ್‌ (Phil Salt) ಮತ್ತು ಸುನೀಲ್‌ ನರೈನ್‌ (Sunil Narine) ಕೇವಲ 39 ಎಸೆತಗಳಲ್ಲಿ 86 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿದರು. ನರೈನ್‌ 47 ರನ್‌ (22 ಎಸೆತ, 2 ಬೌಂಡರಿ, 5 ಸಿಕ್ಸ್‌) ಹೊಡೆದರೆ ಕೀಪರ್‌ ಪಿಲ್‌ ಸಾಲ್ಟ್‌ 30 ರನ್‌ (20 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಆರಂಭಿಕ ಆಟಗಾರರು ಔಟಾದರೂ ವೆಂಕಟೇಶ್‌ ಅಯ್ಯರ್‌ ಬಿರುಸಿನ ಆಟವಾಡಿ 50 ರನ್‌ (30 ಎಸೆತ, 3 ಬೌಂಡರಿ, 4 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿ ಹೊರನಡೆದರು. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

    ನಾಯಕ ಶ್ರೇಯಸ್‌ ಅಯ್ಯರ್‌ ಔಟಾಗದೇ 39 ರನ್‌(24 ಎಸೆತ, 2 ಬೌಂಡರಿ, 2 ಸಿಕ್ಸ್‌), ರಿಂಕು ಸಿಂಗ್‌ ಔಟಾಗದೇ 5 ರನ್‌ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಕುಸಿತ:   ಡುಪ್ಲೆಸಿಸ್‌ 8 ರನ್‌ ಗಳಿಸಿ ಔಟಾದರೂ ಕ್ಯಾಮರೂನ್‌ ಗ್ರೀನ್‌ 33 ರನ್‌ (21 ಎಸೆತ, 4 ಬೌಂಡರಿ, 2 ಸಿಕ್ಸರ್‌), ಮ್ಯಾಕ್ಸ್‌ವೆಲ್‌ 28 ರನ್‌(19 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.

    ರಜತ್‌ ಪಾಟೀದರ್‌ ಮತ್ತು ಅನುಜ್‌ ರಾವತ್‌ ತಲಾ 3 ರನ್‌ ಗಳಿಸಿ ಔಟಾದ್ದರಿಂದ ರನ್‌ ದಿಢೀರ್‌ ಕುಸಿತವಾಯಿತು. ಹೀಗಿದ್ದರೂ ಕೊಹ್ಲಿ (Virat Kohli) ಮತ್ತು ದಿನೇಶ್‌ ಕಾರ್ತಿಕ್‌ (Dinesh Karthik) ಕೊನೆಯಲ್ಲಿ ಸಿಕ್ಸ್‌, ಬೌಂಡರಿ ಸಿಡಿಸಿದ ಪರಿಣಾಮ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತು.

    ಆರ್‌ಸಿಬಿ ಸೋತಿದ್ದು ಹೇಗೆ?
    ಇನ್ನಿಂಗ್ಸ್‌ 15ನೇ ಓವರ್‌ನಲ್ಲಿ 10 ರನ್‌, 16ನೇ ಓವರ್‌ನಲ್ಲಿ 7 ರನ್‌, 17ನೇ ಓವರ್‌ನಲ್ಲಿ 7 ರನ್‌, 18ನೇ ಓವರ್‌ನಲ್ಲಿ 5 ರನ್‌ ಗಳಿಸಿತು. ಈ ಓವರ್‌ಗಳಲ್ಲಿ ಸಿಕ್ಸ್‌, ಬೌಂಡರಿಗಳು ಸಿಡಿಯಲ್ಪಟ್ಟಿದ್ದರೆ ಪಂದ್ಯ ಸ್ವಲ್ಪ ಫೈಟ್‌ ಬರುತ್ತಿತ್ತು. ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 13 ರನ್‌ ಬಂದರೆ 20ನೇ ಓವರ್‌ನಲ್ಲಿ 16 ರನ್‌ ಬಂದಿತ್ತು. ಇದರೊಂದಿಗೆ ಬೌಲರ್‌ಗಳು ವಿಕೆಟ್‌ ಕಿತ್ತು ಒತ್ತಡ ಹೇರಲಿಲ್ಲ. ಇತರೇ ರೂಪದಲ್ಲಿ 15 ರನ್‌ ( ಲೆಗ್‌ ಬೈ7, ವೈಡ್‌ 8 ) ಬಿಟ್ಟು ಕೊಟ್ಟ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿದೆ.

  • ಪರಾಗ್‌ ಬೆಂಕಿ ಆಟಕ್ಕೆ ಡೆಲ್ಲಿ ಭಸ್ಮ – ರಾಯಲ್ಸ್‌ಗೆ 12 ರನ್‌ಗಳ ಗೆಲುವು

    ಪರಾಗ್‌ ಬೆಂಕಿ ಆಟಕ್ಕೆ ಡೆಲ್ಲಿ ಭಸ್ಮ – ರಾಯಲ್ಸ್‌ಗೆ 12 ರನ್‌ಗಳ ಗೆಲುವು

    ಜೈಪುರ: ರಿಯಾನ್‌ ಪರಾಗ್‌ (Riyan Parag) ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 12 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 173 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ ಎರಡು ಪಂದ್ಯಗಳನ್ನು ಗೆದ್ದ ರಾಜಸ್ಥಾನ 4 ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.

    ಕೊನೆಯ 18 ಎಸೆತಗಳಲ್ಲಿ ಡೆಲ್ಲಿ ತಂಡಕ್ಕೆ 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಅವೇಶ್‌ ಖಾನ್‌ (Avesh Khan) 9 ರನ್‌, 19ನೇ ಓವರ್‌ನಲ್ಲಿ ಸಂದೀಪ್‌ ಶರ್ಮಾ (Sandeep Sharma) 15 ರನ್‌ ಕೊಟ್ಟರೆ ಕೊನೆಯ ಓವರ್‌ನಲ್ಲಿ ಅವೇಶ್‌ ಖಾನ್‌ ಕೇವಲ 4 ರನ್‌ ನೀಡಿದ್ದರಿಂದ ರಾಜಸ್ಥಾನ ಗೆಲುವು ಸಾಧಿಸಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಆರಂಭ ಉತ್ತಮವಾಗಿತ್ತು. ಮಿಚೆಲ್ ಮಾರ್ಷ್ 23 ರನ್‌ (12 ಎಸೆತ, 5 ಬೌಂಡರಿ) ಹೊಡೆದು ಔಟಾದರು. ನಂತರ ರಿಕಿ ಭುಯಿ ಸೊನ್ನೆ ಸುತ್ತಿದರು.

    ನಾಯಕ ರಿಷಭ್‌ ಪಂತ್‌ 28 ರನ್‌ (26 ಎಸೆತ, 2 ಬೌಂಡರಿ, 1 ಸಿಕ್ಸರ್)‌ ಹೊಡೆದರೆ, ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 49 ರನ್‌(34 ಎಸೆತ, 5 ಬೌಂಡರಿ, 3 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಕ್ಷರ್‌ ಪಟೇಲ್‌ ಮುರಿಯದ 6ನೇ ವಿಕೆಟಿಗೆ 27 ಎಸೆತದಲ್ಲಿ 51 ರನ್‌ ಜೊತೆಯಾಟವಾಡಿದರೂ ತಂಡಕ್ಕೆ ಜಯ ದಕ್ಕಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ ಔಟಾಗದೇ 44 ರನ್‌ (23 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದರೆ ಅಕ್ಷರ್‌ ಪಟೇಲ್‌ ಔಟಾಗದೇ 15 ರನ್‌ (13 ಎಸೆತ, 1 ಬೌಂಡರಿ) ಹೊಡೆದರು.  ಇದನ್ನೂ ಓದಿ: 42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

    ಆರಂಭದಲ್ಲೇ ಕುಸಿತ: ರಾಜಸ್ಥಾನ 36 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್‌ 5 ರನ್‌, ಜೋಸ್‌ ಬಟ್ಲರ್‌ 11 ರನ್‌, ನಾಯಕ ಸಂಜು ಸ್ಯಾಮ್ಸನ್‌ 15 ರನ್‌ ಗಳಿಸಿ ಔಟಾಗಿದ್ದರು.

    ಈ ಹಂತದಲ್ಲಿ ಬೌಲರ್‌ ಅಶ್ವಿನ್‌ ಸ್ಫೋಟಕ ಬ್ಯಾಟ್‌ ಮಾಡಿ 19 ಎಸೆತಗಳಲ್ಲಿ 29 ರನ್‌ (3 ಸಿಕ್ಸರ್‌) ಸಿಡಿಸಿ ಚೇತರಿಕೆ ನೀಡಿದರು. ವಿಕೆಟ್‌ ಉರುಳುತ್ತಿದ್ದರೂ ರಿಯನ್‌ ಪರಾಗ್‌ ಸಿಡಿಲಬ್ಬರದ ಬ್ಯಾಟ್‌ ಬೀಸಿದ ಪರಿಣಾಮ ರಾಜಸ್ಥಾನ 5 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು.

    34 ಎಸೆತದಲ್ಲಿ ಅರ್ಧಶತಕ ಹೊಡೆದ ಪರಾಗ್‌ ಅಂತಿಮವಾಗಿ 45 ಎಸೆತದಲ್ಲಿ ಔಟಾಗದೇ 84 ರನ್‌ (7 ಬೌಂಡರಿ, 6 ಸಿಕ್ಸರ್‌) ಹೊಡೆದರೆ ಧ್ರುವ್‌ ಜರೇಲ್‌ 20 ರನ್‌(12 ಎಸೆತ, 3 ಬೌಂಡರಿ) ಹೇಟ್ಮೆಯರ್‌ ಔಟಾಗದೇ 14 ರನ್‌ (7 ಎಸೆತ, 1 ಬೌಂಡರಿ, 1ಸಿಕ್ಸರ್‌) ಚಚ್ಚಿದರು.

    ಅಶ್ವಿನ್‌ ಮತ್ತು ಪರಾಗ್‌ 37 ಎಸೆತಗಳಲ್ಲಿ 54 ರನ್‌ ಜೊತೆಯಾಟವಾಡಿದರೆ, ಪರಾಗ್‌ ಮತ್ತು ಜರೇಲ್‌ 23 ಎಸೆತಗಳಲ್ಲಿ 52 ರನ್‌ ಹೊಡೆದರು. ಅಂತಿಮವಾಗಿ ಹೇಟ್ಮೆಯರ್‌ ಮತ್ತು ಜರೇಲ್‌ ಮುರಿಯದ 6ನೇ ವಿಕೆಟಿಗೆ ಕೇವಲ 16 ಎಸೆತಗಳಲ್ಲಿ 43 ರನ್‌ ಜೊತೆಯಾಟವಾಡಿದ ಪರಿಣಾಮ ತಂಡದ ಮೊತ್ತ 180ರ ಗಡಿ ದಾಟಿತು.