Tag: sports

  • ನಾನು ಬಿಜೆಪಿ ಸೇರುವುದು Fake News: ಹರ್ಭಜನ್ ಸಿಂಗ್

    ನಾನು ಬಿಜೆಪಿ ಸೇರುವುದು Fake News: ಹರ್ಭಜನ್ ಸಿಂಗ್

    ನವದೆಹಲಿ: ಬಿಜೆಪಿ ಸೇರುವ ವದಂತಿಗಳು ಸುಳ್ಳಾಗಿದ್ದು, ನಾನು ಬಿಜೆಪಿ ಸೇರುವುದಿಲ್ಲ ಎಂದು ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.

    ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಬಗ್ಗೆ ಹರಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದು, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಜನರು ಇಂತಹ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಭಜ್ಜಿ ಜೊತೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಬಗ್ಗೆ ಕೂಡ ಇದೇ ರೀತಿಯ ಪ್ರಚಾರ ನಡೆಯುತ್ತಿದೆ. ಈ ವಿಷಯದ ಬಗ್ಗೆ ಯುವಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ನಡುವೆ 2017ರ ವಿಧಾನಸಭೆ ಚುನಾವಣೆ ವೇಳೆಯೂ ಹರ್ಭಜನ್ ಸಿಂಗ್ ಬಗ್ಗೆ ಇದೇ ರೀತಿಯ ಪ್ರಚಾರ ನಡೆದಿತ್ತು. ಆಗ ಭಜ್ಜಿ ಕಾಂಗ್ರೆಸ್ ಪಕ್ಷ ಸೇರುವ ಸುದ್ದಿ ಬಂದಿತ್ತು. ಮತ್ತೊಂದೆಡೆ, ಹರ್ಭಜನ್ ಐಪಿಎಲ್‍ ತಂಡವೊಂದರ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.

  • ಟೀಂ ಇಂಡಿಯಾ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

    ಟೀಂ ಇಂಡಿಯಾ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

    ಮುಂಬೈ: ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಇಂದು ತನ್ನ ಗೆಳತಿ ಮಿಥಾಲಿ ಪರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಮುಂಬೈನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ ನಡೆದಿದೆ. ಕೆಲವು ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಆಪ್ತರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಶಾರ್ದೂಲ್ ಠಾಕೂರ್ ಮದುವೆಯಾಗಬಹುದು ಎಂಬ ಸುದ್ದಿಯು ಹರಿದಾಡುತ್ತಿದೆ.

    30 ವರ್ಷದ ಶಾರ್ದೂಲ್ ಠಾಕೂರ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ವಿಶ್ರಾಂತಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ ನಾಲ್ಕು ಟೆಸ್ಟ್, 15  ಏಕದಿನ ಮತ್ತು 24 T20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಇತ್ತೀಚೆಗೆ ಟಿ20 ವಿಶ್ವಕಪ್‍ಗಾಗಿ ಭಾರತ ತಂಡದ ಭಾಗವಾಗಿದ್ದರು. ಇದಕ್ಕೂ ಮೊದಲು ಐಪಿಎಲ್ 2021 ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಇತ್ತೀಚಿನ ದಿನಗಳಲ್ಲಿ ಶಾರ್ದೂಲ್ ಅವರು ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಆಡುತ್ತಿದ್ದಾರೆ. ಟೆಸ್ಟ್‌ನಲ್ಲಿ ಅವರು ಬ್ಯಾಟ್‍ನಲ್ಲೂ ಅದ್ಭುತಗಳನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಅರ್ಧಶತಕಗಳನ್ನುಗಳಿಸಿದ್ದರು. ಇದೀಗ ತನ್ನ ಗೆಳತಿ ಮಿಥಾಲಿ ಪರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಓಮಿಕ್ರಾನ್ ವಕ್ಕರಿಸುವ ಭೀತಿ – ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು

  • 5 ಕೋಟಿ ಬೆಲೆಯ 2 ವಾಚ್ ಸೀಜ್: ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

    5 ಕೋಟಿ ಬೆಲೆಯ 2 ವಾಚ್ ಸೀಜ್: ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

    ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ದುಬಾರಿ ಬೆಲೆಯ 2 ವಾಚ್‍ಗಳನ್ನು ಮುಂಬೈ ವಿಮಾನ‌ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

    ವಿಶ್ವಕಪ್‍ನಲ್ಲಿ ಸೋಲನ್ನು ಅನುಭವಿಸಿ ಹಾರ್ದಿಕ್ ಪಾಂಡ್ಯ ಹಾಗೂ ಟೀಂ ಇಂಡಿಯಾದ ಕೆಲವು ಆಟಗಾರರು ಭಾನುವಾರ ದೇಶಕ್ಕೆ ವಾಪಸ್ ಆಗಿದ್ದಾರೆ. ಅದರಂತೆ ಹಾರ್ದಿಕ್ ಪಾಂಡ್ಯ ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಪಾಂಡ್ಯರ 2 ವಾಚ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

    ಈಗಿರುವ ಮಾಹಿತಿ ಪ್ರಕಾರ, ವಾಚ್‍ಗಳನ್ನ ಲಗೇಜ್‍ನಲ್ಲಿ ಇಟ್ಟುಕೊಂಡಿದ್ದರು. ಆದರೆ ಲಗೇಜ್‍ನಲ್ಲಿ ದುಬಾರಿ ಬೆಲೆಯ ವಾಚ್ ಇರುವ ಕುರಿತಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಆ ವಾಚ್‍ಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ 2 ವಾಚ್‍ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    ಪಾಂಡ್ಯ ಹೇಳಿದ್ದೇನು?: ನಾನು ತಂದ ವಸ್ತುಗಳ ಕುರಿತಾಗಿ ಹೇಳಲು ಮತ್ತು ಕಸ್ಟಮ್ಸ್ ಸುಂಕವನ್ನು ಪಾವತಿಸಲು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಕೌಂಟರಿಗೆ ಹೋದೆ. ಆದರೆ 1.5 ಕೋಟಿ ರೂ. ಮೌಲ್ಯದ ಒಂದು ವಾಚ್‍ಅನ್ನು ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತಾಗಿ ತಪ್ಪು ಮಾಹಿತಿ ಹರಿದಾಡುತ್ತಿವೆ. ಏನಾಯಿತು ಎಂಬುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ.

    ನಾನು ದುಬೈನಿಂದ ಖರೀದಿಸಿದ ಎಲ್ಲಾ ವಸ್ತುಗಳ ಸುಂಕವನ್ನು ಪಾವತಿಸಲು ಸಿದ್ಧನಿದ್ದೇನೆ. ಕಸ್ಟಮ್ಸ್ ಇಲಾಖೆ ಖರೀದಿ ದಾಖಲೆಗಳನ್ನು ಕೇಳಿದೆ. ಆದಾಗ್ಯೂ ಕಸ್ಟಮ್ಸ್ ಇಲಾಖೆ ಈ ಕುರಿತಾಗಿ ತನಿಖೆ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ವಾಚ್‍ನ ಬೆಲೆ ಅಂದಾಜು 1.5 ಕೋಟಿ ರೂಪಾಯಿಯೇ ಹೊರತು 5 ಕೋಟಿ ಅಲ್ಲ. ಕಾನೂನುಬದ್ಧ ದಾಖಲೆಗಳನ್ನು ಅವರಿಗೆ ಒದಗಿಸುತ್ತೇನೆ. ಯಾವುದೇ ಕಾನೂನಿನ ಚೌಕಟ್ಟನ್ನು ದಾಟಿ ನನ್ನ ವಿರುದ್ಧದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ದುಬೈನಲ್ಲಿ ಐಪಿಎಲ್ ಪಂದ್ಯ ಆಡಿ ವಾಪಸ್ ಆದ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿಇವರ ಸಹೋದರ ಕೃನಾಲ್ ಪಾಂಡ್ಯರನ್ನು
    ವಶಕ್ಕೆ ಪಡೆಯಲಾಗಿತ್ತು. ಇವರು ಯಾವುದೇ ದಾಖಲೆಗಳಿಲ್ಲದ 4 ವಾಚ್‍ಗಳನ್ನು ದುಬೈನಿಂದ ತಂದಿದ್ದರು.

  • ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

    ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

    ದುಬೈ: ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೂ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಸಂಭ್ರಮಿಸದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಬುಧವಾರ ನಡೆದ ಪಂದ್ಯದಲ್ಲಿ ಡ್ಯಾರೆಲ್ ಮಿಚೆಲ್ ಹಾಗೂ ನೀಶಮ್ ಸಾಹಸದಿಂದ ಕಿವೀಸ್ ಅಮೋಘ ಜಯ ಸಾಧಿಸಿತ್ತು. ಆದರೆ ಪಂದ್ಯದ ಬಳಿಕ ಉಳಿದೆಲ್ಲಾ ಆಟಗಾರರು ಸಂಭ್ರಮಿಸುತ್ತಿದ್ದರೂ ನೀಶಮ್ ಮಾತ್ರ ಬೇಸರದಿಂದ ಕುಳಿತಿರುವ ಫೋಟೋ ವೈರಲ್ ಆಗಿತ್ತು. ದನ್ನೂ ಓದಿ: ವೇಡ್‌ ಹ್ಯಾಟ್ರಿಕ್‌ ಸಿಕ್ಸರ್‌ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್‌ ಮನೆಗೆ

    ಬಳಿಕ ಈ ಬ್ಗಗೆ ಬಾಸ್ಕೆಟ್‍ಬಾಲ್ ದಿಗ್ಗಜ ಕೋಬ್ ಬ್ರ್ಯಾಂಟ್ ಹೇಳಿಕೆಯ ರೀತಿಯಲ್ಲೇ ಟ್ವೀಟ್ ಮಾಡಿದ ನೀಶಮ್, ಕೆಲಸ ಮುಗಿಯಿತೇ? ನಾನು ಹಾಗೆ ಭಾವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 2009ರಲ್ಲಿ ಎನ್‍ಬಿಎ ಫೈನಲ್‍ನಲ್ಲಿ 2-0ನಲ್ಲಿ ಗೆದ್ದರೂ ಕೋಬನ್ ಸಂಭ್ರಮಿಸದೆ, ಕೆಲಸ ಇನ್ನೂ ಮುಗಿದಿಲ್ಲ ಎಂದಿದ್ದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ

  • ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

    ನವದೆಹಲಿ: ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ (Neeraj Chopra), ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    NEERAJ

    ಪ್ಯಾರಾಲಿಂಪಿಕ್ಸ್ ಪದಕ ವಿಜೇತ, ಕನ್ನಡಿಗ ಐಎಎಸ್ ಅಧಿಕಾರಿ ಸುಭಾಶ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಅವಾರ್ಡ್ ಪ್ರಕಟಿಸಲಾಗಿದೆ. ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿಗೆ ಒಲಂಪಿಯನ್ ಅಥ್ಲಿಟ್ ನೀರಜ್ ಚೋಪ್ರಾ ಸೇರಿ 12 ಸಾಧಕರು ಭಾಜನರಾಗಿದ್ದಾರೆ. ಇದನ್ನೂ ಓದಿ:  ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಒಲಂಪಿಯನ್‍ಗಳಾದ ಕುಸ್ತಿಪಟು ರವಿ ಕುಮಾರ್ ದಹಿಯಾ, ಹಾಕಿ ಆಟಗಾರ ಶ್ರೀಜೇಶ್, ಮನ್‍ಪ್ರೀತ್ ಸಿಂಗ್, ಬಾಕ್ಸರ್ ಲವ್ಲಿನಾ, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಪ್ಯಾರಾ ಒಲಂಪಿಯನ್‍ಗಳಾದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಜಾವೆಲಿನ್ ತ್ರೋ ಕ್ರೀಡಾಪಟು ಸುಮಿತ್ ಅಂಟಿಲ್, ಶೂಟರ್ ಅವನಿ ಲಖರಾ, ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್ ಮತ್ತು ಮನೀಶ್ ನರ್ವಾಲ್‍ಗೆ ಖೇಲ್‍ರತ್ನ ಪಶಸ್ತಿ ಘೋಷಣೆ ಆಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ನವೆಂಬರ್ 13ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.

  • ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

    ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

    ಬೆಂಗಳೂರು: ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ಕ್ಷೇತ್ರದಂತೆ, ಕ್ರೀಡಾ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಐಪಿಎಲ್‍ನಲ್ಲಿ ಕರ್ನಾಟಕ ತಂಡವಾಗಿದ್ದ ಆರ್​ಸಿಬಿ, ಪ್ರೋ ಕಬಡ್ಡಿ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿ ಹುರಿದುಂಬಿಸುತ್ತಿದ್ದ ಅಪ್ಪು ಅಗಲಿಕೆಯ ನೋವು ಕ್ರೀಡಾ ಕ್ಷೇತ್ರಕ್ಕೂ ತಟ್ಟಿದೆ.

    ಪುನೀತ್ ರಾಜ್‍ಕುಮಾರ್(46) ಹೃದಯಾಘಾತದಿಂದ ಅಕ್ಟೋಬರ್ 29ರಂದು ಕೊನೆಯುಸಿರೆಳೆದಿದ್ದಾರೆ. ಕನ್ನಡಿಗರ ಪಾಲಿನ ನೆಚ್ಚಿನ ಅಪ್ಪು, ಕ್ರೀಡಾಪಟುಗಳಂತೆ ತಮ್ಮ ದೇಹವನ್ನು ಅಚ್ಚುಕಟ್ಟಾಗಿ ಫಿಟ್ ಆಗಿ ಬೆಳೆಸಿದ್ದರು. ಜೊತೆಗೆ ಕ್ರಿಕೆಟ್, ಕಬಡ್ಡಿ, ಫುಟ್‍ಬಾಲ್ ಕ್ರೀಡೆಗಳಲ್ಲಿ ಕರ್ನಾಟಕ ರಾಜ್ಯ ತಂಡಗಳಿಗೆ ಯಾವತ್ತು ಬೆಂಬಲವಾಗಿದ್ದರು. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

    PUNEET

    ಪುನೀತ್ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದು, ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಪ್ರೊ ಕಬಡ್ಡಿಯ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ತಂಡಕ್ಕೆ ಪವರ್ ಹೆಚ್ಚಿಸಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪುನೀತ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಕೂತು ವೀಕ್ಷಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದರು.

    ಪ್ರೀಮಿಯರ್ ಫುಟ್‍ಬಾಲ್ ಲೀಗ್ ಆರಂಭಗೊಂಡಾಗ ಪುನೀತ್ ರಾಜ್‍ಕುಮಾರ್ ಬೆಂಗಳೂರು ಎಫ್‍ಸಿ ತಂಡದೊಂದಿಗೂ ಕೈ ಜೋಡಿಸಿದ್ದರು. ಜೊತೆಗೆ ಪಂದ್ಯಗಳ ವೀಕ್ಷಣೆಗಳಿಗಾಗಿ ಅಂಕಣಕ್ಕೆ ಬಂದು ನಗು ಮೊಗದಿಂದ ಆಟಗಾರರಿಗೆ ಹುರಿದುಂಬಿಸುತ್ತಿದ್ದ ಅಪ್ಪು ಇನ್ನೂ ನೆನಪು ಮಾತ್ರ. ಇದನ್ನೂ ಓದಿ: T20 ವಿಶ್ವಕಪ್ – ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ

    ಅಪ್ಪು ಅಗಲಿಕೆಗೆ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಕೆ.ಎಲ್ ರಾಹುಲ್, ರಾಬಿನ್ ಉತ್ತಪ್ಪ, ವೀರೇಂದ್ರ ಸೆಹ್ವಾಗ್, ಸಹಿತ ಕ್ರೀಡಾಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

  • ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಫ್ರಾಂಚೈಸಿಗಳು ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಚಿನ್ನದ ಮೊಟ್ಟೆಯ ಮೌಲ್ಯ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ? ಮುಂದೆ ಎಷ್ಟು ಏರಿಕೆಯಾಗಬಹುದು ಎಂಬ ಪ್ರಶ್ನೆಗಳಿಗೆ ಸೋಮವಾರ ನಡೆದ ಬಿಡ್ಡಿಂಗ್‌ ಉತ್ತರ ನೀಡಿದೆ.

    ಹೌದು. ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ.

    ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

    ಬಿಡ್‌ ಎಷ್ಟಿತ್ತು?
    ಅದಾನಿ ಗ್ರೂಪ್‌ ಅಹಮದಾಬಾದ್‌, ಲಕ್ನೋಗೆ 5,100 ಕೋಟಿ ರೂ. ಬಿಡ್‌ ಮಾಡಿತ್ತು. ಕೋಟಕ್‌ ಅಹಮದಾಬಾದ್‌ಗೆ 4,513 ಕೋಟಿ ರೂ., ಲಕ್ನೋಗೆ 4,512 ಕೋಟಿ ರೂ. ಬಿಡ್‌ ಮಾಡಿದ್ದರೆ ಆಲ್‌ ಕಾರ್ಗೋ ಲಾಜಿಸ್ಟಿಕ್ಸ್‌ ಅಹಮದಾಬಾದ್‌ಗೆ 4,140 ಕೋಟಿ ರೂ., ಲಕ್ನೋಗೆ 4,304 ಕೋಟಿ ರೂ. ನೀಡುವುದಾಗಿ ತಿಳಿಸಿತ್ತು.

    ಅವರಾಂ ಗ್ಲೇಜರ್‌ ಅಹಮಾದಾಬಾದ್‌ಗೆ 4,128.65 ಕೋಟಿ ರೂ., ಲಕ್ನೋಗೆ 4,023.99 ಕೋಟಿ ರೂ.ನೀಡಲು ಸಿದ್ಧವಿತ್ತು. ಹಿಂದೂಸ್ತಾನ್‌ ಟೈಮ್ಸ್‌ ಮೀಡಿಯಾ ಅಹಮದಾಬಾದ್‌ಗೆ 4,275 ಕೋಟಿ ರೂ., ಲಕ್ನೋಗೆ 4,510 ಕೋಟಿ ರೂ. ಬಿಡ್‌ ಮಾಡಿತ್ತು.

    ಕ್ಯಾಪ್ರಿ ಗ್ಲೋಬಲ್‌ ಅಹಮದಾಬಾದ್‌ ಮತ್ತು ಲಕ್ನೋಗೆ 4,204 ಕೋಟಿ ರೂ. ಬಿಡ್‌ ಮಾಡಿದ್ದರೆ ಅಹಮದಾಬಾದ್‌ಗೆ ಸಿವಿಸಿ 5,625 ಕೋಟಿ ರೂ., ಲಕ್ನೋಗೆ 5,166 ಕೋಟಿ ರೂ. ಬಿಡ್‌ ಮಾಡಿತ್ತು.

    ಆರ್‌ಪಿಎಸ್‌ಜಿ ಅಹಮದಾಬಾದ್‌ ಮತ್ತು ಲಕ್ನೋಗೆ 7,090 ಕೋಟಿ ರೂ. ಬಿಡ್‌ ಮಾಡಿತ್ತು. ಟೊರೆಂಟ್‌ ಸ್ಪೋರ್ಟ್ಸ್‌ ಅಹಮದಾಬಾದ್‌ಗೆ 4,653 ಕೋಟಿ ರೂ., ಲಕ್ನೋಗೆ 4,356 ಕೋಟಿ ರೂ. ಬಿಡ್‌ ಮಾಡಿತ್ತು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    8 ತಂಡಗಳ ಬಿಡ್‌ ಎಷ್ಟಿತ್ತು?
    2008ರಲ್ಲಿ ಐಪಿಎಲ್‌ ಆರಂಭಗೊಂಡಗೊಂಡಾಗ ಮುಂಬೈ ತಂಡವನ್ನು ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ 447.6 ಕೋಟಿಗೆ ಬಿಡ್‌ ಮಾಡಿದ್ದೆ ದೊಡ್ಡ ಮೊತ್ತವಾಗಿತ್ತು.

    ಮುಂಬೈ ಇಂಡಿಯನ್ಸ್‌ 447.6 ಕೋಟಿ ರೂ., ರಾಯಲ್‌ ಚಾಲೆಂಜರ್ಸ್‌ 446 ಕೋಟಿ ರೂ., ಚೆನ್ನೈ ಸೂಪರ್‌ ಕಿಂಗ್ಸ್‌ 364 ಕೋಟಿ ರೂ., ಪಂಜಾಬ್‌ ಕಿಂಗ್ಸ್‌ 304 ಕೋಟಿ ರೂ., ಕೋಲ್ಕತ್ತಾ ನೈಟ್‌ ರೈಡರ್ಸ್‌ 300 ಕೋಟಿ ರೂ., ರಾಯಸ್ಥಾನ್‌ ರಾಯಲ್ಸ್‌ 268 ಕೋಟಿ ರೂ., ಕೊಚ್ಚಿ ಟಸ್ಕರ್ಸ್‌ 1,533 ಕೋಟಿ ರೂ., ಸಹರಾ ವಾರಿಯರ್ಸ್‌ ಪುಣೆ ತಂಡವನ್ನು 1,702 ಕೋಟಿ ರೂ. ಬಿಡ್‌ ಮಾಡಿ ಖರೀದಿಸಿತ್ತು.

    ಮುಂದೆ ಎಷ್ಟಾಗಬಹುದು?
    2008ರಲ್ಲಿ ಮುಂಬೈ ತಂಡವನ್ನು 447.6 ಕೋಟಿ ರೂ. ನೀಡಿ ರಿಲಯನ್ಸ್‌ ಖರೀದಿಸಿತ್ತು. ಈ ಮೊತ್ತಕ್ಕೆ ಹೋಲಿಸಿದಾಗ ಈಗ ಲಕ್ನೋ ತಂಡದ ಬಿಡ್‌ ಮೊತ್ತ 15 ಪಟ್ಟು ಹೆಚ್ಚಾಗಿದೆ. ಇದು ಕೇವಲ 13 ವರ್ಷದಲ್ಲಿ ನಡೆದ ಬೆಳವಣಿಗೆ. ಐಪಿಎಲ್‌ ಅನ್ನು ಇಂಗ್ಲೀಷ್‌ ಪ್ರೀಮಿಯರ್‌ ಫುಟ್‌ಬಾಲ್‌ನಂತೆ ಜನಪ್ರಿಯತೆಗೊಳಿಸಬೇಕೆಂಬ ಉದ್ದೇಶವನ್ನು ಬಿಸಿಸಿಐ ಹೊದಿದೆ. ಈ ಫುಟ್‌ಬಾಲ್‌ ಲೀಗ್‌ನಲ್ಲಿ 20 ತಂಡಗಳು ಭಾಗವಹಿಸುತ್ತವೆ.

    ಸದ್ಯ ಈಗ ಶನಿವಾರ, ಭಾನುವಾರ ಎರಡು ಐಪಿಎಲ್‌ ಪಂದ್ಯಗಳು ನಡೆಯುತ್ತಿವೆ. ಮುಂದೆ ಮತ್ತಷ್ಟು ತಂಡಗಳು ಸೇರ್ಪಡೆಯಾದರೆ ವಾರದ ಇತರೇ ದಿನಗಳಲ್ಲೂ ಪಂದ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಹೊಸ ತಂಡಗಳಿಂದಾಗಿ ಆಟಗಾರರಿಗೂ ಅವಕಾಶ ಸಿಕ್ಕಿದಂತಾಗುತ್ತದೆ. ಇದರಿಂದಾಗಿ ಬಿಸಿಸಿಐ ಜೊತೆ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಆದಾಯ ಹೆಚ್ಚು ಬರಲಿದೆ.

  • ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಯತಿರಾಜ್‌ಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೋ ಒಲಂಪಿಕ್ಸ್ ಮತ್ತು ಪ್ಯಾರಾಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಲಾ ಒಂದು ಲಕ್ಷ ರೂ. ನೀಡಿ ಸನ್ಮಾನಿಸಿದರು.

    Rajabhavana

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ಕೆಸಿ ನಾರಾಯಣ ಗೌಡ ಅವರು, ಕರ್ನಾಟಕ ಒಲಂಪಿಕ್ಸ್‌  ಸಂಸ್ಥೆ ಅಧ್ಯಕ್ಷರು, ಪರಿಷತ್ ಸದಸ್ಯರಾದ ಗೋವಿಂದರಾಜು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

  • ಬೆಂಗಳೂರಿನಲ್ಲೇ ನಡೆಯಲಿದೆ ಪ್ರೊ ಕಬಡ್ಡಿ ಲೀಗ್

    ಬೆಂಗಳೂರಿನಲ್ಲೇ ನಡೆಯಲಿದೆ ಪ್ರೊ ಕಬಡ್ಡಿ ಲೀಗ್

    ಬೆಂಗಳೂರು: ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ. 8ನೇ ಆವೃತ್ತಿಯ ಬೆಂಗಳೂರಿನಲ್ಲೇ ನಡೆಯಲಿದೆ ಪ್ರೊ ಕಬಡ್ಡಿ ಲೀಗ್   (Pro Kabaddi League) (ಪಿಕೆಎಲ್) ಡಿಸೆಂಬರ್ 22ರಿಂದ ಆರಂಭಗೊಳ್ಳಲಿದ್ದು, ಇಡೀ ಟೂರ್ನಿಗೆ ಬೆಂಗಳೂರು Bengaluru) ಆತಿಥ್ಯ ವಹಿಸಲಿದೆ.

    ಬಹು ನಗರಗಳಲ್ಲಿ ನಡೆಯುತ್ತಿದ್ದ ಟೂರ್ನಿಯನ್ನು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಒಂದೇ ನಗರಕ್ಕೆ ಸೀಮಿತಗೊಳಿಸಲಾಗಿದ್ದು, ಬೆಂಗಳೂರಿನ ಕಂಠೀರವ ಕ್ರಿಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.

    2014ರಲ್ಲಿ ಆರಂಭಗೊಂಡಿದ್ದ ಪ್ರೊ ಕಬಡ್ಡಿ ಲೀಗ್‍ಗೆ ಮೊದಲ ಆವೃತ್ತಿಯಿಂದಲೂ ಬೆಂಗಳೂರು ಆತಿಥ್ಯ ವಹಿಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ 2017, 2018ರಲ್ಲಿ ಬೆಂಗಳೂರಿನಿಂದ ಟೂರ್ನಿ ಎತ್ತಂಗಡಿಯಾಗಿತ್ತು. ಬಳಿಕ 2019ರಲ್ಲಿ ಟೂರ್ನಿಯು ಬೆಂಗಳೂರಿಗೆ ವಾಪಸಾಗಿತ್ತು. ಇದೀಗ ಬೆಂಗಳೂರಿನಲ್ಲೇ ಟೂರ್ನಿ ನಡೆಯಲಿದೆ. ಇದನ್ನೂ ಓದಿ: ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ

    ಕೊರೊನಾ ಕಾರಣ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿ ಆಯೋಜಿಸಲು ಮುಂದಾಗಿರುವ ಆಯೋಜಕರಾದ ಮಶಾಲ್ ಸ್ಪೊಟ್ರ್ಸ್ ಸಂಸ್ಥೆ, ಕಠಿಣ ಬಯೋ ಬಬಲ್ Bio Bubble) ಸಿದ್ಧಪಡಿಸಿ ಆಟಗಾರರನ್ನು ಉಳಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರಿಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.\

    ತಂಡಗಳ ಆಟಗಾರರು ಟೂರ್ನಿ ಆರಂಭಗೊಳ್ಳುವ 14 ದಿನಗಳ ಮೊದಲೇ ಬೆಂಗಳೂರಿಗೆ ಆಗಮಿಸಲಿದ್ದು, ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ 2 ಡೋಸ್ ಕೊರೊನಾ ಲಸಿಕೆ ಪಡೆದಿರಬೇಕು ಎಂದು ಆಯೋಜಕರು ಷರತ್ತು ವಿಧಿಸಿದ್ದಾರೆ. ಇದನ್ನೂ ಓದಿ: ಭಾರತ, ಪಾಕಿಸ್ತಾನ ಟಿ20 – ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್ 

    ದೇಶದ ಅತಿದೊಡ್ಡ ಸ್ಪರ್ಧಾತ್ಮಕ ಟೂರ್ನಿಯನ್ನು ಆಯೋಜಿಸಲು ಬೆಂಗಳೂರಿನಲ್ಲಿ ಸಕಲ ಸೌಲಭ್ಯಗಳು ಇವೆ. 8ನೇ ಆವೃತ್ತಿಯ ಪ್ರೊ ಕಬಡ್ಡಿಯನ್ನು ಯಶಸ್ವಿಯಾಗಿ ಆಯೋಜಿಸುತ್ತೆವೆ ಎಂದು ಮಶಾಲ್ ಸ್ಪೋರ್ಟ್ಸ್‌ನ ಸಿಇಒ ಹಾಗೂ ಲೀಗ್‍ನ ಆಯುಕ್ತ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ. ಟೂರ್ನಿಯನ್ನು ಒಂದೇ ನಗರದಲ್ಲಿ ನಡೆಸಲು ನಿರ್ಧರಿಸಿದಾಗ ಅಹಮದಾಬಾದ್, ಬೆಂಗಳೂರು ಹಾಗೂ ಜೈಪುರ ನಗರಗಳನ್ನು ಗುರುತಿಸಲಾಗಿತ್ತು. ಬಳಿಕ ಎಲ್ಲಾ ರೀತಿಯಲ್ಲೂ ಸೂಕ್ತ ಎನ್ನುವ ಕಾರಣ ಬೆಂಗಳೂರನ್ನು ಅಂತಿಮಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

  • ಕೊಟ್ಟ ಮಾತಿನಂತೆ ಪವಿತ್ರಾಗೆ ಸೈಕಲ್ ಉಡುಗೊರೆ ನೀಡಿದ ಸಿಎಂ ಬೊಮ್ಮಾಯಿ

    ಕೊಟ್ಟ ಮಾತಿನಂತೆ ಪವಿತ್ರಾಗೆ ಸೈಕಲ್ ಉಡುಗೊರೆ ನೀಡಿದ ಸಿಎಂ ಬೊಮ್ಮಾಯಿ

    -5 ಲಕ್ಷ ಬೆಲೆಯ ಸೈಕಲ್

    ಬೆಂಗಳೂರು: ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಿಂಚಿದ್ದ ಪ್ರತಿಭೆಯ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊಟ್ಟ ಮಾತಿನಂತೆ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ.

    ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಮಗಳಾದ ಪವಿತ್ರಾ ಕುರ್ತಕೋಟಿ, 5 ನೇ ತರಗತಿಯಲ್ಲಿರುವಾಗ ಸೈಕ್ಲಿಂಗ್ ಕ್ರೀಡೆಯತ್ತಾ ಪ್ರವೇಶ ಪಡೆದು ಬಳಿಕ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಪ್ರಸ್ತುತ ಪ್ರಥಮ ಪಿಯುಸಿ ವಿಡಿಎಫ್‍ಟಿ ಬಾಲಕಿಯರ ಕಾಲೇಜಿನಲ್ಲಿ ಓದುತ್ತಿದ್ದಾರೆ. ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪವಿತ್ರ ಅವರಿಗೆ ಮೊದಲಿನಿಂದಲೂ ಸೈಕ್ಲಿಂಗ್‍ನಲ್ಲಿ ಆಸಕ್ತಿ. ಆದರೆ ಗುಣಮಟ್ಟದ ಸೈಕಲ್ ಖರೀದಿಸುವ ಶಕ್ತಿ ಇಲ್ಲ. ಈ ಮೊದಲು ದಾನಿಗಳ ಸಹಾಯದಿಂದ ಪವಿತ್ರ ಅವರು ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗೆದ್ದಿದ್ದರು. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?

    ಸಿಎಂ ಖಾಸಗಿ ಸುದ್ದಿವಾಹಿನಿಯಲ್ಲಿ ಸಂದರ್ಶನದಲ್ಲಿದ್ದಾಗ ಪವಿತ್ರ ಅವರು ದೂರವಾಣಿಯಲ್ಲಿ ಮಾತನಾಡಿ, ಗುಣಮಟ್ಟದ ಸೈಕಲ್ ಕೊಡಿಸುವಂತೆ ಮನವಿ ಮಾಡಿದ್ದರು. ಉತ್ತಮ ಗುಣಮಟ್ಟದ ಸೈಕಲ್ ಕೊಡಿಸುವುದಾಗಿ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕ್ರೀಡಾ ಇಲಾಖೆ ಹಾಗೂ ಎಂಬೈಸಿ ಗ್ರೂಪ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್ ಅನ್ನು ಖರೀದಿಸಿ ಪವಿತ್ರ ಅವರಿಗೆ, ಮುಖ್ಯಮಂತ್ರಿ ಹಸ್ತಾಂತರಿಸಿದ್ದಾರೆ. ಈ ಮೂಲಕ ಪವಿತ್ರ ಅವರ ಕನಸು ನನಸುಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ. ಕೆನಡಾದಿಂದ ತರಿಸಿರುವ ಈ ಸೈಕಲ್ ಸುಮಾರು 5 ಲಕ್ಷ ಬೆಲೆಯದ್ದಾಗಿದೆ.

    ಪವಿತ್ರಾ ಅವರ ಸಾಧನೆ:
    2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್ ಸೈಕ್ಲಿಂಗ್ 15 ಕಿ.ಮೀ ಸ್ಪರ್ಧೆಯಲ್ಲಿ 5ನೇ ಸ್ಥಾನ. 2019ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕಲ್ ಸ್ಪರ್ಧೆಯಲ್ಲಿ 9ನೇ ಸ್ಥಾನ. 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ. 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈಗ ನ್ಯಾಶನಲ್ ಲೆವೆಲ್ ಗೇಮ್ಸ್ ಚಾಂಪಿಯನ್‍ಶಿಪ್ ಪಂಜಾಬ್‍ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಟೀಂಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತರಾಷ್ಟ್ರೀಯ ಮಟ್ಟದ ಸೈಕಲ್ ಅವಶ್ಯಕತೆ ಇತ್ತು, ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ. ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ: ಸಿದ್ದರಾಮಯ್ಯ

    ಸೈಕಲ್ ಹಸ್ತಾಂತರ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್