Tag: sports

  • ಗುಜರಾತ್‌ಗೆ ಐಪಿಎಲ್‌ ಟ್ರೋಫಿ  – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಅಹಮದಾಬಾದ್‌: ಚೊಚ್ಚಲ ಐಪಿಎಲ್‌ ಗೆದ್ದ ಗುಜರಾತ್‌ ಟೈಟನ್ಸ್ 20 ಕೋಟಿ ನಗದು ಬಹುಮಾನ ಗೆದ್ದರೆ ದ್ವಿತೀಯ ಸ್ಥಾನಿ ರಾಜಸ್ಥಾನ್‌ ರಾಯಲ್ಸ್‌ 13 ಕೋಟಿ ರೂ. ಗೆದ್ದುಕೊಂಡಿದೆ.

    ರಾಜಸ್ಥಾನ ನೀಡಿದ 131 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌  11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 133 ರನ್‌ ಹೊಡೆದು 7 ವಿಕೆಟ್‌ಗಳ ಜಯವನ್ನು ಸಾಧಿಸಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

    ಯಾವ ತಂಡಕ್ಕೆ ಎಷ್ಟು ಕೋಟಿ?
    ಗುಜರಾತ್‌ ಟೈಟನ್ಸ್‌ – 20 ಕೋಟಿ ರೂ.
    ರಾಜಸ್ಥಾನ್‌ ರಾಯಲ್ಸ್‌ – 13 ಕೋಟಿ ರೂ.
    ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ.
    ಲಕ್ನೋ ಸೂಪರ್ ಜೈಂಟ್ಸ್ – 6.5 ಕೋಟಿ ರೂ.

    ಯಾವ ಆಟಗಾರರಿಗೆ ಏನು?
    ಉದಯೋನ್ಮುಖ ಆಟಗಾರ: ಉಮ್ರಾನ್ ಮಲಿಕ್ (10 ಲಕ್ಷ ರೂ.)
    ಹೆಚ್ಚು ಸಿಕ್ಸರ್‌ಗಳು: ಜೋಸ್ ಬಟ್ಲರ್ (10 ಲಕ್ಷ ರೂ)
    ಸೂಪರ್ ಸ್ಟ್ರೈಕರ್: ದಿನೇಶ್ ಕಾರ್ತಿಕ್ (10 ಲಕ್ಷ ರೂ., ಟಾಟಾ ಪಂಚ್)

    ಗೇಮ್ ಚೇಂಜರ್ ಪ್ರಶಸ್ತಿ: ಜೋಸ್ ಬಟ್ಲರ್ (10 ಲಕ್ಷ ರೂ.)
    ಪವರ್ ಪ್ಲೇಯರ್ ಆಫ್ ದಿ ಸೀಸನ್: ಜೋಸ್ ಬಟ್ಲರ್ ( 10 ಲಕ್ಷ ರೂ.)
    ಋತುವಿನ ವೇಗದ ಎಸೆತ: ಲಾಕಿ ಫರ್ಗುಸನ್ (157.3 KPH) (10 ಲಕ್ಷ ರೂ.) ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    ಹೆಚ್ಚಿನ ಬೌಂಡರಿಗಳು: ಜೋಸ್ ಬಟ್ಲರ್ (ರೂ 10 ಲಕ್ಷ ರೂ.)
    ಪರ್ಪಲ್ ಕ್ಯಾಪ್: ಯುಜುವೇಂದ್ರ ಚಹಾಲ್ (27 ವಿಕೆಟ್, 10 ಲಕ್ಷ ರೂ.)
    ಆರೆಂಜ್ ಕ್ಯಾಪ್: ಜೋಸ್ ಬಟ್ಲರ್ (863 ರನ್, ರೂ 10 ಲಕ್ಷ)

    ಹೆಚ್ಚು ಕ್ಯಾಚ್: ಎವಿನ್ ಲೂಯಿಸ್ (ರೂ. 10 ಲಕ್ಷ)
    ಮೋಸ್ಟ್‌ ವಾಲ್ಯುಬೆಲ್‌ ಪ್ಲೇಯರ್‌(MVP): ಜೋಸ್ ಬಟ್ಲರ್ (ರೂ 10 ಲಕ್ಷ)
    ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್

  • ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

    ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

    ಮುಂಬೈ: ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಗ್ರ ಕ್ರಮಾಂಕದ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಮತ್ತು ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.

    ಅಹಮದಾಬಾದ್‌ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಇಂದು ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ. ನೂತನವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಫೈನಲ್ಸ್ ಪ್ರವೇಶಿಸಿದ್ದು, ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದೆ. 2008ರ ಬಳಿಕ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿರುವ ರಾಜಾಸ್ಥಾನ ರಾಯಲ್ಸ್ ಸಹ 2ನೇ ಬಾರಿಗೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

    IPL 2022 BATLER

    ಐಪಿಎಲ್ ಆರಂಭಗೊಂಡಾಗ ಲೀಗ್‌ನಲ್ಲೇ ಹೊರಬೀಳುತ್ತವೆ ಎಂಬ ಟೀಕೆಗಳನ್ನು ಮೀರಿ ಉಭಯ ತಂಡದ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಫೈನಲ್‌ವರೆಗೂ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.

    ಟೈಟಾನ್ಸ್ ಬೌಲಿಂಗ್, ರಾಯಲ್ಸ್ ಬ್ಯಾಟಿಂಗ್: ರಾಜಾಸ್ಥಾನ್‌ ರಾಯಲ್ಸ್‌ನ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾನ್ಸನ್, ದೇವದತ್ ಪಡಿಕ್ಕಲ್, ಶಿಮೊನ್ ಹೆಟ್ಮಾಯರ್ ರಾಜಾಸ್ಥಾನ್ ರಾಯಲ್ಸ್‌ನಲ್ಲಿ ಬಲಿಷ್ಠ ಬ್ಯಾಟರ್‌ಗಳಿಗೆ ಗುಜರಾತ್ ಟೈಟಾನ್ಸ್ ಮೊಹಮದ್ ಶಮಿ, ರಶೀದ್ ಖಾನ್, ಅಲ್ವಾರಿ ಜೋಸೆಫ್, ಯಶ್ ದಯಾಳ್, ಸಾಯಿಕಿ ಶೋರ್‌ರ ಬೌಲರ್‌ಗಳಿಂದ ಕಠಿಣ ಸವಾಲು ಎದುರಾಗಲಿದೆ.

    818 ರನ್‌ಗಳನ್ನು ಗಳಿಸಿ ಆರೆಂಜ್‌ಕ್ಯಾಪ್ ಮುಡಿಗೇರಿಸಿಕೊಂಡಿರುವ ಜೋಸ್ ಬಟ್ಲರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಡೆಯುವುದು ಬೌಲರ್‌ಗಳಿಗೂ ಸವಾಲಾಗಿದೆ. ಈಗಾಗಲೇ ಮುಖಾಮುಖಿಯಾಗಿರುವ 2 ಪಂದ್ಯಗಳಲ್ಲಿ ಟೈಟಾನ್ಸ್ ಗೆಲುವು ಸಾಧಿಸಿದ್ದು, ಅಂತಿಮ ಫೈನಲ್‌ ಪಂದ್ಯದಲ್ಲಿ ಆರ್‌ಆರ್ ಗೆಲುವಿನ ಮೆಟ್ಟಿಲೇರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಇದರೊಂದಿಗೆ ಗುಜರಾತ್ ಬ್ಯಾಟರ್‌ಗಳಾದ ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ, ಮ್ಯಾಥ್ಯು ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್‌ಗೆ ಪ್ರಸಿದ್ ಕೃಷ್ಣ, ಟ್ವೆಂಟ್ ಬೌಲ್ಟ್, ಆರ್.ಅಶ್ವಿನ್, ಯಜುವೇಂದ್ರ ಚಾಹಲ್, ಒಬೆಡ್ ಮೆಕಾಮ್‌ರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

    IPL2022 GT VS RR - GT STARTS

    ಯಾವ ವರ್ಷ ಯಾರು ಚಾಂಪಿಯನ್?

    • 2008 – ರಾಜಸ್ಥಾನ ರಾಯಲ್ಸ್
    • 2009 – ಡೆಕ್ಕನ್ ಚಾರ್ಜರ್
    • 2010 – ಚೆನ್ನೈ ಸೂಪರ್ ಕಿಂಗ್ಸ್
    • 2011 – ಚೆನ್ನೈ ಸೂಪರ್‌ಕಿಂಗ್ಸ್
    • 2012 – ಕೋಲ್ಕತ್ತಾ ನೈಟ್ ರೈಡರ್
    • 2013 – ಮುಂಬೈ ಇಂಡಿಯನ್ಸ್
    • 2014 – ಕೋಲ್ಕತ್ತಾ ನೈಟ್ ರೈಡರ್
    • 2015 – ಮುಂಬೈ ಇಂಡಿಯನ್ಸ್
    • 2016 – ಸನ್‌ರೈಸರ್ಸ್‌ ಹೈದರಾಬಾದ್
    • 2017 – ಮುಂಬೈ ಇಂಡಿಯನ್ಸ್
    • 2018 – ಚೆನ್ನೈ ಸೂಪರ್ ಕಿಂಗ್ಸ್
    • 2019 – ಮುಂಬೈ ಇಂಡಿಯನ್ಸ್
    • 2020 – ಮುಂಬೈ ಇಂಡಿಯನ್ಸ್
    • 2021 – ಚೆನ್ನೈ ಸೂಪರ್‌ಕಿಂಗ್ಸ್

  • ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ಡೇವಿಡ್‌ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ ಸಿಡಿಸಿದ ಪರಿಣಾಮ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗುಜರಾತ್‌ ಟೈಟಾನ್ಸ್‌ ರೋಚಕ 7 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿದೆ.

    ಗೆಲ್ಲಲು 189 ರನ್‌ಗಳ ಗುರಿಯನ್ನು ಪಡೆದ ಗುಜರಾತ್‌ ಡೇವಿಡ್‌ ಮಿಲ್ಲರ್‌ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 191 ರನ್‌ ಹೊಡೆದು ಫೈನಲ್‌ ಪ್ರವೇಶಿಸಿತು. ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್‌ ಈಗ ಮೊದಲ ಐಪಿಎಲ್‌ ಸರಣಿಯಲ್ಲೇ ಫೈನಲ್‌ ಪ್ರವೇಶಿಸಿ ವಿಶಿಷ್ಟ ಸಾಧನೆ ಮಾಡಿದೆ.

    ಕೊನೆಯ ಓವರ್‌ನಲ್ಲಿ ಗುಜರಾತ್‌ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಬೌಲಿಂಗ್‌ನ ಸತತ ಮೂರು ಎಸೆತಗಳನ್ನು ಮಿಲ್ಲರ್‌ ಸಿಕ್ಸರ್‌ಗೆ ಅಟ್ಟಿ ಗುಜರಾತಿಗೆ ರೋಚಕ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ಆರಂಭದಲ್ಲೇ ವಿಕಟ್‌ ಪತನ:
    ಮೊದಲ ಓವರಿನ ಎರಡನೇ ಎಸೆತದಲ್ಲಿ ವೃದ್ಧಿಮಾನ್‌ ಸಹಾ ಅವರ ವಿಕೆಟ್‌ ಕಳೆದುಕೊಂಡರೂ ಶುಭಮನ್‌ ಗಿಲ್‌ ಮತ್ತು ಮ್ಯಾಥ್ಯು ವೇಡ್‌ ಎರಡನೇ ವಿಕೆಟ್‌ಗೆ 72 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶುಭಮನ್‌ ಗಿಲ್‌ 35 ರನ್‌(21 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮ್ಯಾಥ್ಯು ವೇಡ್‌ 35 ರನ್‌(30 ಎಸೆತ, 6 ಬೌಂಡರಿ) ಹೊಡೆದು ಔಟಾದರು.

    ನಂತರ ಜೊತೆಯಾದ ಹಾರ್ದಿಕ್‌ ಪಾಂಡ್ಯ ಮತ್ತು ಡೇವಿಡ್‌ ಮಿಲ್ಲರ್‌ ಮುರಿಯದ 4ನೇ ವಿಕೆಟ್‌ಗೆ 61 ಎಸೆತಗಳಿಗೆ 106 ರನ್‌ ಚಚ್ಚಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಡೇವಿಡ್‌ ಮಿಲ್ಲರ್‌ 68 ರನ್‌(38 ಎಸೆತ, 3 ಬೌಂಡರಿ, 5 ಸಿಕ್ಸರ್)‌ ಹಾರ್ದಿಕ್‌ ಪಾಂಡ್ಯ 40 ರನ್‌(27 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

    ರನ್‌ ಏರಿದ್ದು ಹೇಗೆ?
    50 ರನ್‌ 31 ಎಸೆತ
    100 ರನ್‌ 65 ಎಸೆತ
    150 ರನ್‌ 98 ಎಸೆತ
    191 ರನ್‌ 117 ಎಸೆತ

    ಸವಾಲಿನ ಮೊತ್ತ:
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ಜೋಸ್ ಬಟ್ಲರ್ ಅವರ ಅಮೋಘ ಅರ್ಧಶತಕದ ನೆರವಿನಿಂದ 6 ವಿಕೆಟ್‌ ನಷ್ಟಕ್ಕೆ 88 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

    ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದರು. ಮೊದಲ 5 ಓವರ್‌ಗಳಲ್ಲೇ 50 ರನ್ ಕಲೆಹಾಕಿದ್ದರು. ಇದೇ ವೇಳೆ ಯಶಸ್ವಿ ಜೈಸ್ವಾಲ್ 3 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

    2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಂಜು ಸಾಮ್ಸನ್ 26 ಎಸೆತಗಳಲ್ಲಿ 47 ರನ್ (5 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಟೈಟಾನ್ಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇನ್ನೇನು ಅರ್ಧ ಶತಕ ಪೂರೈಸಬೇಕು ಎನ್ನುವಷ್ಟರಲ್ಲೇ ಸಾಯಿ ಕಿಶೋರ್ ಬೌಲಿಂಗ್‌ಗೆ ಬೌಂಡರಿಲೈನ್ ಕ್ಯಾಚ್ ನೀಡಿ ನಿರ್ಗಮಿಸಿದರು.

    ಜೋಸ್ ಬಟ್ಲರ್ ಜೊತೆಗೂಡಿದ ಕನ್ನಡಿಗ ದೇವದತ್ ಪಡಿಕ್ಕಲ್ 20 ಎಸೆತಗಳಲ್ಲಿ 28 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಶಿಮ್ರೋನ್ ಹೆಟ್ಮೆಯರ್ 4 ರನ್ ಗಳಿಸಿ ಔಟಾದರು.

    ಶತಕ ವಂಚಿತ ಬಟ್ಲರ್:
    ಆರಂಭಿಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಕೊನೆಯವರೆಗೂ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿದರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಮಾಡಿದ ಬಟ್ಲರ್ 42 ಎಸೆತಗಳಲ್ಲಿ ಅರ್ಧಶತಕ ಕಲೆಹಾಕಿದ್ದರು. ಬಳಿಕ ಬಿರುಸಿನ ದಾಳಿ ನಡೆಸಿ, 56 ಎಸೆತಗಳಲ್ಲಿ 89 ರನ್ (12 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಕೊನೆಯ ಒಂದು ಎಸೆತ ಬಾಕಿ ಇರುವಾಗಲೇ ರನೌಟ್ ಆದರು. ಬಟ್ಲರ್ ಅಬ್ಬರ ಬ್ಯಾಟಿಂಗ್‌ನಿಂದ ಆರ್‌ಆರ್ ತಂಡವು 180ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

    ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿದರು. ಇನ್ನುಳಿದ ಮೊಹಮ್ಮದ್ ಶಮಿ 4 ಓವರ್‌ಗಳಲ್ಲಿ 43, ಸಾಯಿ ಕಿಶೋರ್ 4 ಓವರ್‌ಗಳಲ್ಲಿ 43, ಯಶ್ ದಯಾಳ್ 4 ಓವರ್‌ನಲ್ಲಿ 46 ರನ್, ಹಾರ್ದಿಕ್ ಪಾಂಡ್ಯ 2 ಓವರ್‌ಗಳಲ್ಲಿ 14 ರನ್ ನೀಡಿ ತಲಾ ಒಂದೊಂದು ವಿಕೆಟ್ ಪಡೆದರು.

    ಆರ್‌ ಆರ್‌ ರನ್ ಏರಿದ್ದು ಹೇಗೆ?
    34 ಎಸೆತ 50 ರನ್
    79 ಎಸೆತ 100 ರನ್
    104 ಎಸೆತ 450 ರನ್
    120 ಎಸೆತ 188 ರನ್

  • ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಬೆಂಗಳೂರು: ಇದೇ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

    KCN

    14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    THOMAS (1)

    ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಭಾರತದ ಗೆಲುವಿಗೆ ತಮ್ಮದೇ ಕೊಡುಗೆ ನೀಡಿರುವ ಬೆಂಗಳೂರಿನ ಲಕ್ಷ್ಯ ಸೇನ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಲಕ್ಷ್ಯ ಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್‌ ರೌಂಡರ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಆಂಡ್ರ್ಯೂ ಸೈಮಂಡ್ಸ್‌(46) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಆಲಿಸ್ ನದಿ ಸೇತುವೆ ಬಳಿ ಇರುವ ಹರ್ವೆ ರೇಂಜ್ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

    ಮಾರ್ಚ್‌ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಈ ವರ್ಷ ಹಠಾತ್‌ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟರ್‌ ಆಗಿದ್ದಾರೆ. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?

    ಶನಿವಾರ ರಾತ್ರಿ 11 ಗಂಟೆಯ ವೇಳೆ ಸೇತುವೆ ಬಳಿ ಸಂಚರಿಸುತ್ತಿದ್ದಾಗ ಸೈಮಂಡ್ಸ್‌ ಕಾರು ರಸ್ತೆಯಿಂದ ಉರುಳಿದೆ ಎಂದು ಕ್ವೀನ್ಸ್‌ಲ್ಯಾಂಡ್‌ ಪೊಲೀಸರು ತಿಳಿಸಿದ್ದಾರೆ. ದುರಂತ ಸಂಭವಿಸುವ ಸಮಯದಲ್ಲಿ ಸೈಮಂಡ್ಸ್‌ ಒಬ್ಬರೇ ಕಾರಿನಲ್ಲಿ ಸಂಚರಿಸುತ್ತಿದ್ದರು.

    1999 ಮತ್ತು 2007 ರ ಅವಧಿಯಲ್ಲಿ ಸೈಮಂಡ್ಸ್‌ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 198 ಏಕದಿನ, 26 ಟೆಸ್ಟ್‌, 14 ಟಿ 20 ಪಂದ್ಯಗಳನ್ನು ಸೈಮಂಡ್ಸ್‌ ಆಡಿದ್ದರು. ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದರು.

  • ದುಬಾರಿ ಡೀಲ್‌ – ಕ್ರೀಡಾ ವೀಕ್ಷಕ ವಿವರಣೆಗಾರನಿಗೆ ಸಾವಿರ ಕೋಟಿ ಸಂಬಳ

    ದುಬಾರಿ ಡೀಲ್‌ – ಕ್ರೀಡಾ ವೀಕ್ಷಕ ವಿವರಣೆಗಾರನಿಗೆ ಸಾವಿರ ಕೋಟಿ ಸಂಬಳ

    ನ್ಯೂಯಾರ್ಕ್‌: ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ ವೀಕ್ಷಕ ವಿವರಣೆಗಾರರಿಗೆ ವಾಹಿನಿಯೊಂದು ಮಿಲಿಯನ್‌ ಡಾಲರ್‌ ಆಫರ್‌ ನೀಡಿ ಸುದ್ದಿಯಾಗಿದೆ.

    7 ಬಾರಿ ಸೂಪರ್‌ ಬೌಲ್‌ ಚಾಂಪಿಯನ್‌ ಆಟಗಾರ ಟಾಮ್‌ ಬ್ರಾಡಿ ಅವರಿಗೆ ಫಾಕ್ಸ್‌ ಸ್ಫೋರ್ಟ್ಸ್‌ 10 ವರ್ಷದ ಅವಧಿಗೆ 375 ದಶಲಕ್ಷ ಡಾಲರ್‌(ಅಂದಾಜು 2,900 ಕೋಟಿ ರೂ.) ಪ್ಯಾಕೇಜ್‌ ನೀಡಿದೆ.

    44 ವರ್ಷದ ಟಾಮ್‌ ಬ್ರಾಡಿ 19 ವರ್ಷಗಳ ಕಾಲ ನ್ಯೂ ಇಂಗ್ಲೆಂಡ್‌ ಪ್ಯಾಟ್ರಿಯಟ್ಸ್‌ ತಂಡದ ಪರ ಆಡಿದ್ದರು. 2019ರಿಂದ ಟ್ಯಾಂಪಾ ಬೇ ಬುಕಾನಿಯರ್ಸ್ ಪರ ಆಡಿದ್ದರು. ಈಗ ತಮ್ಮ ಕ್ರೀಡಾ ಜೀವನಕ್ಕೆ ಗುಡ್‌ಬೈ ಹೇಳಿ ವೀಕ್ಷಕ ವಿವರಣೆಗಾರರಾಗಲು ಹೊರಟಿದ್ದಾರೆ.

    ಅಮೆರಿಕದ ಕ್ರೀಡಾ ಇತಿಹಾಸದಲ್ಲಿ ಈ ಪ್ಯಾಕೇಜ್‌ ಮೊತ್ತ ಬಹಳ ದುಬಾರಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಸಿಬಿಎಸ್‌ ಸ್ಫೋರ್ಟ್ಸ್‌ ವಾಹಿನಿ ರೊಮೊ ಅವರ ಜೊತೆ 18 ದಶಲಕ್ಷ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು.

    ವೀಕ್ಷಕ ವಿವರಣೆಗಾರದಿಂದಾಗಿ ಪಂದ್ಯದ ವೀಕ್ಷಣೆ ಹೆಚ್ಚಾಗುವುದರಿಂದ ಕ್ರೀಡಾ ವಾಹಿನಿಗಳು ದುಬಾರಿ ಮೊತ್ತದ ಪ್ಯಾಕೇಜ್‌ ನೀಡುತ್ತಿವೆ.

    20 ವರ್ಷಗಳ ಕಾಲ ಆಡಿರುವುದರಿಂದ ಬ್ರಾಡ್‌ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅನುಭವದ ಜೊತೆ ವಿವರಣೆ ಹೇಳುವುದರಿಂದ ವೀಕ್ಷಕರಿಗೆ ಪಂದ್ಯ ಇಷ್ಟವಾಗಲಿದೆ ಎಂದು ಫಾಕ್ಸ್‌ ಸ್ಫೋರ್ಟ್ಸ್‌ ಈ ಡೀಲ್‌ ಬಗ್ಗೆ ಪ್ರತಿಕ್ರಿಯಿಸಿದೆ.

    ಟ್ವಿಟ್ಟರ್‌ನಲ್ಲಿ ಬ್ರಾಡಿ ಅವರನ್ನು 27 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ ಫೇಸ್‌ಬುಕ್‌ನಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

  • ಮಾರ್ಷ್‌, ವಾರ್ನರ್‌ ಅಬ್ಬರಕ್ಕೆ ರಾಜಸ್ಥಾನ ಪಂಚರ್‌ – ಡೆಲ್ಲಿಗೆ 8 ವಿಕೆಟ್‌ಗಳ ಭರ್ಜರಿ ಜಯ

    ಮಾರ್ಷ್‌, ವಾರ್ನರ್‌ ಅಬ್ಬರಕ್ಕೆ ರಾಜಸ್ಥಾನ ಪಂಚರ್‌ – ಡೆಲ್ಲಿಗೆ 8 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಮಿಚೆಲ್ ಮಾರ್ಷ್ ಮತ್ತು ಡೇವಿಡ್‌ ವಾರ್ನರ್‌ ಅವರ ಅಬ್ಬರದ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 161 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 18.1 ಓವರ್‌ಗಳಲ್ಲಿ 2  ವಿಕೆಟ್‌ ನಷ್ಟಕ್ಕೆ 161 ರನ್‌ ಹೊಡೆಯುವ ಮೂಲಕ ಗೆಲುವು ಸಾಧಿಸಿತು. ಪ್ಲೇ ಆಫ್‌ಗೆ ಹೋಗಲು ಡೆಲ್ಲಿಗೆ ಇಂದಿನ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು.

    ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಟ್ರೆಂಟ್‌ ಬೌಲ್ಟ್‌ ಎಸೆತದಲ್ಲಿ ಶ್ರೀಕಾರ್‌ ಭರತ್‌ ಖಾತೆ ತೆರೆಯದೇ ಕೀಪರ್‌ ಸ್ಯಾಮ್ಸನ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದರು.

    ಸಂಕಷ್ಟದ ಸಮಯದಲ್ಲಿ ಒಂದಾದ ಆಸ್ಟ್ರೇಲಿಯಾದ ಆಟಗಾರರಾದ ಮಾರ್ಷ್‌ ಮತ್ತು ಡೇವಿಡ್‌ ವಾರ್ನರ್‌ ನಿಧನವಾಗಿ ಇನ್ನಿಂಗ್ಸ್‌ ಕಟ್ಟಲು ಆರಂಭಿಸಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 101 ಎಸೆತಗಳಲ್ಲಿ 144 ರನ್‌ ಜೊತೆಯಾಡುವ  ಮೂಲಕ ಭದ್ರವಾದ ಅಡಿಪಾಯ ಹಾಕಿದರು.  ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    ನಾಯಕ ಸಂಜು ಸ್ಯಾಮ್ಸನ್‌ ಅವರು ವಾರ್ನರ್‌ ಮತ್ತು ಮಾರ್ಷ್‌ ಅವರನ್ನು ಬೇರ್ಪಡಿಸಲು ಸಾಕಷ್ಟು ತಂತ್ರ ಮಾಡಿದರೂ ಇಬ್ಬರು ಸಿಕ್ಸರ್‌, ಬೌಂಡರಿಗಳನ್ನು ಸಿಡಿಸುತ್ತಿದ್ದರು.  ಮಾರ್ಷ್‌ 89 ರನ್‌(62 ಎಸೆತ, 5 ಬೌಂಡರಿ, 7 ಸಿಕ್ಸ್‌)  ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು.

    ಡೇವಿಡ್‌ ವಾರ್ನರ್‌ ಔಟಾಗದೇ 52 ರನ್‌( 41 ಎಸೆತ, 5 ಬೌಂಡರಿ, 1 ಸಿಕ್ಸರ್‌) ನಾಯಕ ರಿಷಭ್‌ ಪಂತ್‌ ಔಟಾಗದೇ  13 ರನ್‌( 4 ಎಸೆತ, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಇಂದಿನ ಪಂದ್ಯವನ್ನು ಜಯಗಳಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಮುಂದುವರಿದಿದೆ. 12 ಪಂದ್ಯವಾಡಿರುವ ಡೆಲ್ಲಿ 6 ಜಯದೊಂದಿಗೆ 12 ಅಂಕವನ್ನು ಪಡೆದಿದೆ. ಗುಜರಾತ್‌ ಟೈಟನ್ಸ್‌ 18 ಅಂಕದೊಂದಿಗೆ ಈಗಾಗಲೇ ಫ್ಲೇ ಆಫ್‌ ಪ್ರವೇಶಿಸಿದೆ. 16 ಅಂಕ ಸಂಪಾದಿಸಿರುವ ಲಕ್ನೋ ಎರಡನೇ ಸ್ಥಾನದಲ್ಲಿದೆ. 14 ಅಂಕ ಪಡೆದಿರುವ ರಾಜಸ್ಥಾನ ಮತ್ತು ಬೆಂಗಳೂರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.

    ಸಾಧಾರಣ ಮೊತ್ತ:
    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ 11 ರನ್‌ ಗಳಿಸುವಷ್ಟರಲ್ಲೇ ಜೋಸ್‌ ಬಟ್ಲರ್‌ ವಿಕೆಟ್‌ ಕಳೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್‌ 19 ರನ್‌ ಹೊಡೆದು ಔಟಾದರೆ ಸ್ಪಿನ್ನರ್‌ ಅಶ್ವಿನ್‌ ಸ್ಫೋಟಕ ಅರ್ಧಶತಕ ಸಿಡಿಸಿ ಔಟಾದರು.

    ಅಶ್ವಿನ್‌ 50 ರನ್‌(38 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದರೆ ದೇವದತ್‌ ಪಡಿಕ್ಕಲ್‌ 48 ರನ್‌(30 ಎಸೆತ, 6 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ಅಂತಿಮವಾಗಿ ರಾಜಸ್ಥಾನ 6 ವಿಕೆಟ್‌ ನಷ್ಟಕ್ಕೆ 160 ರನ್‌ ಹೊಡೆಯಿತು.

    ಚೇತನ್‌ ಸಕಾರಿಯಾ, ಅನ್ರಿಚ್ ನಾರ್ಟ್ಜೆ, ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್‌ ಪಡೆದರು.

  • ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಮನಿಲಾ: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು ಅಂಪೈರ್‌ ವಿರುದ್ಧ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫಿಲಿಪ್ಪೀನ್ಸ್‌ನಲ್ಲಿ ನಡೆದ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಜಪಾನಿನ ಯಮಗುಚಿ ವಿರುದ್ಧ 21-13, 19-21, 16-21 ಸೆಟ್‌ನಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಡೆದಿದ್ದಾರೆ.

    ಎರಡನೇ ಗೇಮ್‌ ವೇಳೆ ಸಿಂಧು 14-12 ರಲ್ಲಿ ಮುಂದಿದ್ದಾಗ ಸರ್ವ್‌ ಮಾಡಲು ಬಹಳ ಸಮಯ ತೆಗೆಯುತ್ತಿದ್ದಾರೆಂದು ಎದುರಾಳಿ ಆಟಗಾರ್ತಿಗೆ ಅಂಪೈರ್‌ 1 ಪೆನಾಲ್ಟಿ ಅಂಕವನ್ನು ನೀಡಿದ್ದರು. ಈ ವೇಳೆ ಸಿಂಧು ಈ ರೀತಿ ಅಂಕ ನೀಡುವುದು ಎಷ್ಟು ಸರಿ ಎಂದು ಮೈದಾನದಲ್ಲೇ ಪ್ರಶ್ನೆ ಮಾಡಿ ಸಿಟ್ಟು ಹೊರ ಹಾಕಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಸಿಂಧು, ಸರ್ವ್‌ ಮಾಡಲು ತಡ ಮಾಡುತ್ತಿದ್ದೇನೆ ಎಂದು ಹೇಳಿ ಅಂಪೈರ್‌ ಎದುರಾಳಿ ಆಟಗಾರ್ತಿಗೆ ಪೆನಾಲ್ಟಿ ಅಂಕ ನೀಡಿದರು. ಆದರೆ ನಾನು ಸರ್ವ್‌ ಮಾಡುವ ಸಮಯದಲ್ಲಿ ಆಟಗಾರ್ತಿ ಸಿದ್ಧವಾಗಿರಲಿಲ್ಲ. ಆದರೆ ಅಂಪೈರ್‌ ದಿಢೀರ್‌ ಅಂಕವನ್ನು ನೀಡಿದ್ದು ಸರಿಯಲ್ಲ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಕುಗ್ಗಿತು. ಅಂಪೈರ್‌ ನಿರ್ಧಾರದಿಂದ ನಾನು ಸೋತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    ಅಂಪೈರ್‌ ಪನಾಲ್ಟಿ ನೀಡುವ ಸಮಯದಲ್ಲಿ ನಾನು ಮುಂದಿದ್ದೆ. ಈ ರೀತಿ ಅಂಕ ನೀಡಿದ್ದು ಅನ್ಯಾಯ. ಪಂದ್ಯದ ರೆಫ್ರಿ ಜೊತೆ ನಾನು ಮಾತನಾಡಿದೆ. ಆದರೆ ರೆಫ್ರಿ ಈಗಾಗಲೇ ಅಂಕ ನೀಡಲಾಗಿದೆ ಏನು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ರಿಪ್ಲೈ ನೋಡುವಾಗ ಅವರಿಗೆ ಈ ತಪ್ಪು ಅರ್ಥವಾಗಬಹುದು. ಅಂಪೈರ್‌ ಈ ರೀತಿ ಅಂಕ ನೀಡದೇ ಇದ್ದಲ್ಲಿ ನಾನು ಪಂದ್ಯವನ್ನು ಗೆದ್ದು ಫೈನಲ್‌ ತಲುಪುತ್ತಿದ್ದೆ ಎಂದು ತಿಳಿಸಿದರು.

    ಸಿಂಧು ತಂದೆ ರಮಣ ಮಾತನಾಡಿ, ಈ ಟೂರ್ನಿಯಲ್ಲಿ ಸಿಂಧು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಳು. ಆಂಪೈರ್‌ ಯಾವುದೇ ಎಚ್ಚರಿಕೆ ನೀಡದೇ ಪೆನಾಲ್ಟಿ ನೀಡಿದ್ದು ತಪ್ಪು. ಮಗಳ ಜೊತೆ ಮಾತನಾಡುವಾಗ ಆಕೆ ಕಣ್ಣೀರಿಟ್ಟಳು ಎಂದು ಹೇಳಿದರು.

    ಅಂಪೈರ್‌ ವಿರುದ್ಧ ಸಿಟ್ಟು ಹೊರ ಹಾಕಿದ್ದ ಸಿಂಧು ಪಂದ್ಯದ ಬಳಿಕ ನಡೆದ ಪದಕ ವಿತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದರು.

  • ಹಿಂದೂ ಸಂಪ್ರದಾಯದಂತೆ ಮದುವೆಯಾದ ಆಸ್ಟ್ರೇಲಿಯಾ ಆಟಗಾರ ಮಾಕ್ಸ್‌ವೆಲ್‌

    ಹಿಂದೂ ಸಂಪ್ರದಾಯದಂತೆ ಮದುವೆಯಾದ ಆಸ್ಟ್ರೇಲಿಯಾ ಆಟಗಾರ ಮಾಕ್ಸ್‌ವೆಲ್‌

    ಚೆನ್ನೈ: ಆಸ್ಟ್ರೇಲಿಯಾದ ಆಲ್‍ರೌಂಡರ್ ಗ್ಲೆನ್ ಮಾಕ್ಸ್‌ವೆಲ್‌, ವಿನಿ ರಾಮನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಡಾನ್ಸ್ ಮಾಡುತ್ತಾ ಹಾರ ಬದಲಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾಕ್ಸ್‌ವೆಲ್‌ ಮತ್ತು ವಿನಿ ರಾಮನ್ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಮಾರ್ಚ್ 18 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.

     

    View this post on Instagram

     

    A post shared by VINI (@vini.raman)

     

    ಭಾರತಕ್ಕೆ ಆಗಮಿಸಿರುವ ದಂಪತಿ ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ತಮಿಳು ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರಿಗೆ ಮಾಕ್ಸ್‌ವೆಲ್‌ ಮಾಂಗಲ್ಯವನ್ನು ಕಟ್ಟಿದ್ದಾರೆ. ಡ್ಯಾನ್ಸ್ ಮಾಡುತ್ತಾ ಹಾರ ಬದಲಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

    ವೀಡಿಯೋದಲ್ಲಿ ಏನಿದೆ?: ಗ್ಲೆನ್ ಮಾಕ್ಸ್‌ವೆಲ್‌ ಭಾರತೀಯ ವರನಂತೆ ಶೇರ್ವಾನಿ ಧರಿಸಿದ್ದಾರೆ. ಕೈಯಲ್ಲಿ ಹೂವಿನ ಮಾಲೆ ಹಿಡಿದು ನೃತ್ಯ ಮಾಡುತ್ತಾ ವಿನಿ ರಾಮನ್ ಅವರಿಗೆ ಹಾರ ಹಾಕುತ್ತಿರುವುದು ಈ ವೀಡಿಯೋದಲ್ಲಿ ಕಾಣಬಹುದಾಗಿದೆ.

    ಮಾಕ್ಸ್‌ವೆಲ್‌ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ. ಅವರು ಹುಟ್ಟಿದ್ದು ಮತ್ತು ಓದಿದ್ದು ಆಸ್ಟ್ರೇಲಿಯಾದಲ್ಲಿ. ತಮಿಳುನಾಡು ಮೂಲದವರಾದ ವಿನಿ ಅವರ ತಂದೆ ವೆಂಕಟ ರಾಮನ್ ಮತ್ತು ತಾಯಿ ವಿಜಯಲಕ್ಷ್ಮಿ ಮಗಳು ಜನಿಸುವ ಮೊದಲೇ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದರು. ಮಾಕ್ಸ್‌ವೆಲ್‌ ಮದುವೆಯ ಕಾರಣದಿಂದ ಪಾಕ್ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು.

  • ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ – ಲಕ್ಷ್ಯ ಸೇನ್‌ ರನ್ನರ್‌ ಅಪ್‌

    ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ – ಲಕ್ಷ್ಯ ಸೇನ್‌ ರನ್ನರ್‌ ಅಪ್‌

    ಬರ್ಮಿಂಗ್‌ಹ್ಯಾಮ್‌: ಭಾರತದ ಯುವ ಶಟ್ಲರ್‌ 20 ವರ್ಷದ ಲಕ್ಷ್ಯ ಸೇನ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ ಆಗಿ ಹೊರಹೊಮ್ಮಿದ್ದಾರೆ.

    ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಪರಾಭವಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಅಕ್ಸೆಲ್ಸೆನ್‌ ವಿರುದ್ಧ 21-10, 21-15 ಅಂತರದಿಂದ ಲಕ್ಷ್ಯ ಸೇನ್‌ ಸೋತಿದ್ದಾರೆ. 6.3 ಅಡಿ ಎತ್ತರದ ಅಕ್ಸೆಲ್ಸೆನ್‌ ವಿರುದ್ಧ 5.8 ಎತ್ತರದ ಲಕ್ಷ್ಯ ಸೇನ್‌ ಎರಡನೇ ಸುತ್ತಿನಲ್ಲಿ ಸ್ವಲ್ಪ ಪ್ರತಿರೋಧ ತೋರಿದರೂ ಯಶಸ್ವಿಯಾಗಲಿಲ್ಲ.

    ಒಂದು ವೇಳೆ ಪ್ರಶಸ್ತಿ ಗೆದ್ದಿದ್ದರೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನೆತ್ತಿದ ಭಾರತದ ಮೂರನೇ ಬ್ಯಾಡ್ಮಿಂಟನ್‌ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದರು. 1980ರಲ್ಲಿ ಪ್ರಕಾಶ್‌ ಪಡುಕೋಣೆ, 2001ರಲ್ಲಿ ಪುಲ್ಲೇಲ ಗೋಪಿಚಂದ್‌ ಪ್ರಶಸ್ತಿ ಎತ್ತಿದ್ದರು.

    ಇದು ಅಕ್ಸೆಲ್ಸೆನ್‌ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಲಕ್ಷ್ಯ ಸೇನ್‌ ಅನುಭವಿಸಿದ 5ನೇ ಸೋಲು. ಕಳೆದ ಜರ್ಮನ್‌ ಓಪನ್‌ ಸೆಮಿಫೈನಲ್‌ನಲ್ಲಿ ಮಾತ್ರ ಲಕ್ಷ್ಯ ಸೇನ್‌ ಗೆದ್ದಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ನೀವು ಉತ್ಸಾಹಭರಿತ ಹೋರಾಟವನ್ನು ಮಾಡಿದ್ದೀರಿ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ನೀವು ಯಶಸ್ಸಿನ ಹೊಸ ಎತ್ತರಗಳನ್ನು ಏರುತ್ತಲೇ ಇರುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಕ್ಷ್ಯ ಸೇನ್‌ ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.

    ಭಾರತದ ಜೋಡಿಗೆ ಸೋಲು: ವನಿತಾ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್‌ ಜೋಡಿ ಪರಾಭವಗೊಂಡಿತು. ಚೀನದ ಶು ಕ್ಸಿಯಾನ್‌ ಜಾಂಗ್‌-ಯು ಜೆಂಗ್‌ 21-17, 21-16 ನೇರ ಗೇಮ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು.