Tag: spinner

  • ಇಂಗ್ಲೆಂಡ್‌ಗೆ ತೆರಳಬೇಕಿದ್ದ ಅಶ್ವಿನ್‌ಗೆ ಕೊರೊನಾ

    ಇಂಗ್ಲೆಂಡ್‌ಗೆ ತೆರಳಬೇಕಿದ್ದ ಅಶ್ವಿನ್‌ಗೆ ಕೊರೊನಾ

    ಮುಂಬೈ: ಇಂಗ್ಲೆಂಡ್‌ಗೆ ತೆರಳಬೇಕಿದ್ದ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಆರ್.ಅಶ್ವಿನ್‌ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

    ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಶ್ವಿನ್ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಸದ್ಯ ಅವರು ಕ್ವಾರಂಟೈನ್‌ಗೆ ಒಳಗಾಗಿದ್ದು, ಸಂಪೂರ್ಣ ಗುಣಮುಖರಾದ ಬಳಿಕ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: 2021-22ರ ಅವಧಿಯಲ್ಲಿ ಟೀಂ ಇಂಡಿಯಾಗೆ 6 ನಾಯಕರು

    ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸಮಯದ ಹೊತ್ತಿಗೆ ಅಶ್ವಿನ್ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ? 

    ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯವಾಡಲಿದೆ. ಒಂದು ವೇಳೆ ಅಭ್ಯಾಸ ಪಂದ್ಯ ಪೂರ್ಣಗೊಳ್ಳುವುದರೊಳಗೆ ಅಶ್ವಿನ್ ಚೇತರಿಸಿಕೊಳ್ಳದೇ ಇದ್ದಲ್ಲಿ, ಅವರು ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

    Live Tv

  • ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ಇನ್ನಿಲ್ಲ

    ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ರಾಜಿಂದರ್ ಗೋಯೆಲ್ ಇನ್ನಿಲ್ಲ

    ಕೋಲ್ಕತ್ತಾ: ರಣಜಿ ಕ್ರಿಕೆಟ್‍ನ ದಿಗ್ಗಜ, ಶ್ರೇಷ್ಠ ಸ್ಪಿನ್ನರ್ ಖ್ಯಾತಿಯ ರಾಜಿಂದರ್ ಗೋಯೆಲ್ (77) ಭಾನುವಾರ ರಾತ್ರಿ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

    ರಾಜಿಂದರ್ ಗೋಯೆಲ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ರಣಜಿ ಟ್ರೋಫಿ ಇತಿಹಾಸದಲ್ಲಿ ಅತ್ಯಧಿಕ 637 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆ ಈಗಲೂ ರಾಜಿಂದರ್ ಗೋಯೆಲ್ ಅವರ ಹೆಸರಿನಲ್ಲಿದೆ.

    ಮಾಜಿ ಕ್ರಿಕೆಟರ್ ರಾಜಿಂದರ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಪುತ್ರ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ಹಾಲಿ ದೇಶೀಯ ಮ್ಯಾಚ್ ರೆಫ್ರಿ ನಿತಿನ್ ಗೋಯೆಲ್ ಅವರನ್ನು ಅಗಲಿದ್ದಾರೆ. ರಾಜಿಂದರ್ ಗೋಯೆಲ್ ಅವರ ನಿಧನಕ್ಕೆ ಬಿಸಿಸಿಐ, ಟೀಂ ಇಂಡಿಯಾ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೆಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

    44ನೇ ವಯಸ್ಸಿನವರೆಗೂ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ರಾಜಿಂದರ್ ಗೋಯೆಲ್ ಅವರು ಹರಿಯಾಣ, ಪಂಜಾಬ್, ದೆಹಲಿ ತಂಡಗಳನ್ನು ಪ್ರತಿನಿಧಿಸಿದ್ದರು. ಒಟ್ಟು 157 ಪ್ರಥಮ ದರ್ಜೆ ಪಂದ್ಯಗಳಲ್ಲಿ 750 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ 18.58ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ ಗೋಯೆಲ್ ಅವರು ತಮ್ಮ ವೃತ್ತಿ ಜೀವನದಲ್ಲಿ ಗೋಯೆಲ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್‍ಗಳನ್ನು 59 ಬಾರಿ ಮತ್ತು 10 ವಿಕೆಟ್‍ಗಳನ್ನು 18 ಬಾರಿ ಪಡೆದುಕೊಂಡಿದ್ದಾರೆ.

  • ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    – ಹಿಂದೂ ಆಟಗಾರನಾಗಿ ಪಾಕ್ ತಂಡದಲ್ಲಿ ಬಚಾವ್ ಆಗೋದು ಅತ್ಯಂತ ಕಷ್ಟ

    ಇಸ್ಲಾಮಾಬಾದ್: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಶಹೀದ್ ಅಫ್ರಿದಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್ ಕರೇನಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ 39 ವರ್ಷದ ದಾನಿಶ್, “ಧರ್ಮದ ಹೊರತಾಗಿ ಅಫ್ರಿದಿ ಅವರ ತಾರಮ್ಯದ ಹಿಂದಿನ ಕಾರಣ ತಿಳಿಯಲು ಕಷ್ಟವಾಗುತ್ತಿತ್ತು. ದೇಶಿಯ ಕ್ರಿಕೆಟ್ ಅಥವಾ ಏಕದಿನ ಕ್ರಿಕೆಟ್ ಆಡುವಾಗ ಅಫ್ರಿದಿ ಯಾವಾಗಲೂ ನನ್ನ ವಿರುದ್ಧವೇ ಇರುತ್ತಿದ್ದರು. ಒಬ್ಬ ವ್ಯಕ್ತಿ ನಿಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದರೆ ಅದು ಧರ್ಮವನ್ನು ಬಿಟ್ಟು ಬೇರೆ ಏನೂ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    “ಹಿಂದೂ ಆಟಗಾರನಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬಚಾವ್ ಆಗುವುದು ಅತ್ಯಂತ ಕಷ್ಟ. ಹಿಂದೂ ಧರ್ಮದವರಾಗಿದ್ದರಿಂದ ನನ್ನನ್ನು ತಂಡದಲ್ಲಿ ಅತ್ಯಂತ ಹೀನಾಯವಾಗಿ ನೋಡಲಾಗಿತ್ತು. ನಾನು ಹಿಂದೂ ಧರ್ಮದವನಾಗಿದ್ದರಿಂದ ಅಫ್ರಿದಿ ಯಾವಾಗಲೂ ನನ್ನ ವಿರುದ್ಧ ಕಿಡಿಕಾರುತ್ತಿದ್ದ. ಅಂತಹ ಸನ್ನವೇಶದಲ್ಲಿ ನನ್ನ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು” ಎಂದು ದಾನಿಶ್ ಕನೇರಿಯಾ ತಿಳಿಸಿದರು.

    ಅಫ್ರಿದಿಯಿಂದಾಗಿಯೇ ನಾನು ವೃತ್ತಿ ಜೀವನದಲ್ಲಿ ಕೇವಲ 18 ಏಕದಿನ ಪಂದ್ಯಗಳನ್ನು ಆಡಿದೆ. ಇಲ್ಲವಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೆ. ಏಕದಿನ ಕ್ರಿಕೆಟ್‍ನಲ್ಲಿ ಶಾಹೀದ್ ಅಫ್ರಿದಿ ಬೇರೆ ಸ್ಪಿನ್ನರ್‍ಗಳಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ನನಗೆ ನೀಡಲಿಲ್ಲ. ಆದರೂ ಪಾಕಿಸ್ತಾನ 10 ವರ್ಷಗಳ ಕಾಲ ಆಡಿದ್ದೇನೆಂಬ ಸಂತೋಷ ಹಾಗೂ ಗೌರವ ಇದೆ” ಎಂದು ನೆನೆದರು.

    “ಆಡುವ ಇಲೆವೆನ್‍ನಲ್ಲಿ ಇಬ್ಬರು ಸ್ಪಿನ್ನರ್ ಗಳು ಇರುತ್ತಾರೆ. ಆದರೆ ನನ್ನ ಫಿಲ್ಡಿಂಗ್ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿತ್ತು. ಆಗ ತಂಡದಲ್ಲಿ ಯಾರು ಹೇಳಿಕೊಳ್ಳುವ ಮಟ್ಟಿಗೆ ಉತ್ತಮ ಫಿಲ್ಡರ್ ಗಳಾಗಿರಲಿಲ್ಲ. ಅಷ್ಟೇ ಅಲ್ಲದೆ ಆಗ ಪಾಕ್ ತಂಡ ಅಷ್ಟೇನು ಹೆಸರು ಮಾಡಿರಲಿಲ್ಲ. ಮೋಯಿನ್ ಖಾನ್, ರಶೀದ್ ಲತೀಫ್, ಇಂಜಾಮಾಮ್ ಉಲ್ ಹಕ್ ಹಾಗೂ ಯೂನಿಸ್ ಖಾನ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ಅಫ್ರಿದಿ ನಾಯಕತ್ವದಲ್ಲಿ ಅತ್ಯಂತ ಕಡಿಮೆ ಪಂದ್ಯಗಳನ್ನಾಡಿದ್ದೇನೆ. ಇಂಜಾಮಾಮ್ ಹಾಗೂ ಯೂನಿಸ್ ಭಾಯ್ ನನಗೆ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡಿದ್ದರು” ಎಂದು ತಿಳಿಸಿದರು.

  • ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆ ಮುರಿದು ಅಜಿತ್ ಅಗರ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಚಹಲ್ 6 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ 48.4 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟ್ ಆಗಿದೆ. 10 ಓವರ್ ಎಸೆದು, 42 ರನ್ ನೀಡಿ 6 ವಿಕೆಟ್ ಕಿತ್ತ ಚಹಲ್ ಕೋಚ್ ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 1991 ರಲ್ಲಿ ಪರ್ತ್ ಪಂದ್ಯದಲ್ಲಿ ಸ್ಪಿನ್ನರ್ ಆಗಿದ್ದ ಶಾಸ್ತ್ರಿ 15 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

    ಅಜಿತ್ ಅಗರ್ಕರ್ ಮೆಲ್ಬರ್ನ್ ಕ್ರೀಡಾಂಗಣದಲ್ಲಿ 9.3 ಓವರ್ ಎಸೆದು 42 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಉಸ್ಮಾನ್ ಖವಜಾ, ಶೇನ್ ಮಾರ್ಶ್, ಪೀಟರ್ ಹ್ಯಾಂಡ್ಸ್‍ಕಾಂಬ್, ಸ್ಟೋಯಿನ್ ಸನ್, ರಿಚರ್ಡ್ ಸನ್, ಆಡಂ ಜಂಪಾ ಅವರ ವಿಕೆಟ್ ಪಡೆದು ಆಸ್ಟ್ರೇಲಿಯಾದ ರನ್ ವೇಗಕ್ಕೆ ಕಡಿವಾಣ ಹಾಕಿದರು.

    ಪೀಟರ್ ಹ್ಯಾಂಡ್ಸ್‍ಕಾಂಬ್ 58 ರನ್(63 ಎಸೆತ, 2 ಬೌಂಡರಿ) ಹೊಡೆದು ಆಸೀಸ್ ರನ್ ಹೆಚ್ಚಿಸಲು ನೆರವಾದರು. ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು.

    ಈ ಪಂದ್ಯ ಸೇರಿದಂತೆ ಒಟ್ಟು 35 ಪಂದ್ಯ ಆಡಿರುವ ಚಹಲ್ 62 ವಿಕೆಟ್ ಪಡೆದಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 22 ರನ್ ನೀಡಿ 5 ವಿಕೆಟ್ ಪಡೆದಿದ್ದು ಇದೂವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    ಮೊನ್ನೆ ಮದುವೆ, ನಿನ್ನೆ ಟೀಂ ಇಂಡಿಯಾ ಬೆಚ್ಚಿ ಬೀಳಿಸಿದ ಸ್ಪಿನ್ನರ್!

    – ಮದುವೆಯಾದ 24 ಗಂಟೆಯಲ್ಲೇ ತಂಡಕ್ಕೆ ವಾಪಾಸಾದ ಧನಂಜಯ
    – ಟೀಂ ಇಂಡಿಯಾದ 6 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್

    ಬೆಂಗಳೂರು: ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಒಂದು ಹಂತದಲ್ಲಿ ಟೀಂ ಇಂಡಿಯಾವನ್ನು ಸೋಲಿನ ದವಡೆಯಲ್ಲಿತ್ತು. ಆದರೆ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹಾಗೂ ಭುವನೇಶ್ವರ್ ಕುಮಾರ್ ಉತ್ತಮ ಆಟವಾಡಿ ಭಾರತವನ್ನು ಗೆಲ್ಲಿಸಿದರು.

    ಆದರೆ ಭಾರತದ 6 ವಿಕೆಟ್ ಕಿತ್ತ ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯ. ಮದುವೆಯಾಗಿ ಕೇವಲ 24 ಗಂಟೆ ಮುಗಿಯುವಷ್ಟರಲ್ಲಿ ತಂಡವನ್ನು ಸೇರಿ ಭಾರತವನ್ನು ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ. ಕೊಲಂಬೋದ ರಾಮಾದಿಯಾ ರನಮಲ್ ಹಾಲಿಡೇ ರೆಸಾರ್ಟ್ ನಲ್ಲಿ ಆಗಸ್ಟ್ 23ರಂದು 23 ವರ್ಷದ ಅಕಿಲ ಧನಂಜಯ್ ವಿವಾಹ ಗರ್ಲ್ ಫ್ರೆಂಡ್ ನತಾಲಿ ತೆಕ್ಶಿನಿ ಜೊತೆ ನೆರವೇರಿತ್ತು. ಆಗಸ್ಟ್ 23ರಂದು ರಾತ್ರಿಯೇ ಧನಂಜಯ ಭಾರತ ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾ ತಂಡ ಉಳಿದಿದ್ದ ಹೋಟೆಲ್ ಗೆ ಬಂದು ಸೇರಿಕೊಂಡಿದ್ದರು. ಧನಂಜಯ ಮದುವೆಯಲ್ಲಿ ಶ್ರೀಲಂಕಾದ ಹಿರಿಯ ಆಟಗಾರರಾದ ರಂಗನಾ ಹೀರತ್ ಮತ್ತು ಅಜಂತಾ ಮೆಂಡಿಸ್ ಕೂಡಾ ಪಾಲ್ಗೊಂಡಿದ್ದರು.

    ಪಂದ್ಯದಲ್ಲಿ ಧನಂಜಯ್ ಕಮಾಲ್: 10 ಓವರ್ ನಲ್ಲಿ 54 ರನ್ ನೀಡಿ 6 ವಿಕೆಟ್ ಗಳಿಸಿದ ಧನಂಜಯ ಆರಂಭದ 13 ಎಸೆತಗಳಲ್ಲೇ 5 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದರು.
    ರೋಹಿತ್ ಶರ್ಮಾ, ರಾಹುಲ್, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡಿ ಭಾರತದ ಬ್ಯಾಟಿಂಗ್ ಪಡೆಯನ್ನು ಪೆವಿಲಿಯನ್ ಗೆ ಕಳಿಸಿದರು.

    ಅಕಿಲ ಧನಂಜಯ್ ಗೆ ಇದು 4ನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಆಡಿದ 3 ಪಂದ್ಯಗಳಲ್ಲಿ ಧನಂಜಯ ಒಟ್ಟು 5 ವಿಕೆಟ್ ಗಳಿಸಿದ್ದರು. ಐಪಿಎಲ್ ನಲ್ಲೂ ಧನಂಜಯ ಆಟವಾಡಿದ್ದಾರೆ. 2013ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.