Tag: SPG Security

  • ಮನಮೋಹನ್ ಸಿಂಗ್‍ಗೆ ನೀಡಿದ್ದ ಎಸ್‍ಪಿಜಿ ಭದ್ರತೆ ವಾಪಸ್

    ಮನಮೋಹನ್ ಸಿಂಗ್‍ಗೆ ನೀಡಿದ್ದ ಎಸ್‍ಪಿಜಿ ಭದ್ರತೆ ವಾಪಸ್

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಪಡೆ(ಎಸ್‍ಪಿಜಿ)ಯನ್ನು ಹಿಂಪಡೆಯಲಾಗಿದ್ದು, ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ.

    ಎಲ್ಲ ಏಜೆನ್ಸಿಗಳ ಅಂಕಿ ಅಂಶಗಳನ್ನು ಪರಿಗಣಿಸಿ ನಂತರ ಮೌಲ್ಯಮಾಪನ ಮಾಡಿ, ಗೃಹ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ. ಆಯ್ದ ಕೆಲವರಿಗೆ ಮಾತ್ರ ಒದಗಿಸಲಾಗಿರುವ ಎಸ್‍ಪಿಜಿ ಭದ್ರತೆಯ ವಾರ್ಷಿಕ ಬದಲಾವಣೆಯ ಭಾಗವಾಗಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆ ಕುರಿತು ಮರು ಮೌಲ್ಯಮಾಪನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಅತ್ಯಂತ ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರಿಗೆ ಮಾತ್ರ ಈ ಭದ್ರತೆ ಒದಗಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಈ ನಾಲ್ವರಿಗೆ ಮಾತ್ರ ಎಸ್‍ಪಿಜಿ ಭದ್ರತೆ ಒದಗಿಸಲಾಗಿದೆ.

    ಭದ್ರತೆಯ ಬದಲಾವಣೆಯ ವಿಮರ್ಶೆಯೂ ಕಾಲಕಾಲಕ್ಕೆ ನಡೆಯುತ್ತದೆ. ಅಲ್ಲದೆ, ಭದ್ರತಾ ಏಜೆನ್ಸಿಗಳ ವೃತ್ತಿಪರ ಮೌಲ್ಯಮಾಪನವನ್ನು ಆಧರಿಸಿದೆ. ಹೀಗಾಗಿ ಯಾರಿಗೆ ಯಾವ ರೀತಿ ಭದ್ರತೆ ನೀಡಬೇಕೆಂದು ಭದ್ರತಾ ಏಜೆನ್ಸಿಗಳು ಚರ್ಚಿಸಿ ತೀರ್ಮಾನಿಸುತ್ತವೆ. ಡಾ.ಮನಮೋಹನ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮನಮೋಹನ್ ಸಿಂಗ್ ಅವರು 2004 ರಿಂದ 2014ರ ವರೆಗೆ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು. ವೈಯಕ್ತಿಕವಾಗಿ ನನ್ನ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದೇ ರೀತಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಮತ್ತು ವಿಪಿ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸದಿದ್ದರೂ ಸಹ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೃತಪಡುವರೆಗೂ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು.

    ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.