Tag: spekaer

  • ಸ್ವಾತಂತ್ರ್ಯ ನಂತರ ಸ್ಪೀಕರ್‌ ಹುದ್ದೆಗೆ ಫಸ್ಟ್‌ ಟೈಂ ಚುನಾವಣೆ – INDIA ಒಕ್ಕೂಟ ಆಡಳಿತ ಇರೋ ರಾಜ್ಯಗಳಲ್ಲಿ ಯಾರಿಗೆ ನೀಡಿವೆ?

    ಸ್ವಾತಂತ್ರ್ಯ ನಂತರ ಸ್ಪೀಕರ್‌ ಹುದ್ದೆಗೆ ಫಸ್ಟ್‌ ಟೈಂ ಚುನಾವಣೆ – INDIA ಒಕ್ಕೂಟ ಆಡಳಿತ ಇರೋ ರಾಜ್ಯಗಳಲ್ಲಿ ಯಾರಿಗೆ ನೀಡಿವೆ?

    ನವದೆಹಲಿ: ಸಂಪ್ರದಾಯದಂತೆ ಸರ್ವಾನುಮತದಿಂದ ಸ್ಪೀಕರ್ (Spekaer) ಆಯ್ಕೆ ಮಾಡಲು ಎನ್‌ಡಿಎ (NDA) ನಡೆಸಿದ ಪ್ರಯತ್ನ ಫಲ ನೀಡದ ಕಾರಣ ಲೋಕಸಭೆ ಸ್ಪೀಕರ್ ಹುದ್ದೆಗೆ ಸ್ವಾತಂತ್ರ್ಯ ನಂತರ ಮೊಟ್ಟ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ.

    ಸರ್ವಾನುಮತದಿಂದ ಸ್ಪೀಕರ್ ಆಯ್ಕೆಗೆ INDIA ಕೂಟ ಷರತ್ತನ್ನು ವಿಧಿಸಿತ್ತು. ವಿಪಕ್ಷಗಳಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡುವ ಯಾವುದೇ ಭರವಸೆಯನ್ನು ಎನ್‌ಡಿಎ ನೀಡದ ಕಾರಣ ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸಿದೆ.

    ವಿಪಕ್ಷಗಳೊಡನೆ ರಕ್ಷಣಾಮಂತ್ರಿ ರಾಜನಾಥ್ ಸಿಂಗ್ ಮಂಥನ ನಡೆಸಿದರೂ ಪ್ರಯೋಜನ ಆಗಲಿಲ್ಲ. ಎನ್‌ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ (Om Birla), ಇಂಡಿ ಕೂಟದ ಅಭ್ಯರ್ಥಿಯಾಗಿ ಕೆ ಸುರೇಶ್ (K Suresh) ನಾಮಪತ್ರ ಸಲ್ಲಿಸಿದ್ದು ನಾಳೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಸೂರಜ್‌ ಪರ ದೂರು ನೀಡಿದ್ದ ಶಿವಕುಮಾರ್‌ ವಿರುದ್ಧ ಹಣ ದುರುಪಯೋಗ ಆರೋಪ, ಎಫ್‌ಐಆರ್‌ ದಾಖಲು

    INDIA ಕೂಟದ ಅಭ್ಯರ್ಥಿಗೆ ಈವರೆಗೂ ಟಿಎಂಸಿ (TMC) ಬೆಂಬಲ ಸೂಚಿಸಿಲ್ಲ. ನಮ್ಮನ್ನು ಸಂಪರ್ಕಿಸದೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದೆ.

    ಇಂದು ರಾತ್ರಿ ಖರ್ಗೆ ನೇತೃತ್ವದಲ್ಲಿ ಇಂಡಿ ಕೂಟದ ನಾಯಕರು ಸಭೆ ಸೇರಿದ್ದಾರೆ. ಉಭಯ ಕೂಟಗಳು ತಮ್ಮ ಸಂಸದರಿಗೆ ವಿಪ್ ಜಾರಿ ಮಾಡಿವೆ. ವೈಎಸ್‌ಆರ್ ಪಕ್ಷ ಎನ್‌ಡಿಎ ಅಭ್ಯರ್ಥಿ ಬೆಂಬಲಿಸುವ ಸಂಭವ ಇದೆ. ಬೆಂಬಲ ನೀಡಿದರೆ 4 ಸದಸ್ಯರ ಮತ ಓಂ ಬಿರ್ಲಾ ಅವರಿಗೆ ಬೀಳುವ ಸಾಧ್ಯತೆಯಿದೆ.

    ಲೋಕಸಭೆಯಲ್ಲಿ ಉಪ ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ವಿಪಕ್ಷಗಳು ಆಡಳಿತದಲ್ಲಿರುವ ಯಾವುದೇ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಗೆ ಡೆಪ್ಯೂಟಿ ಸ್ಥಾನ ನೀಡಿಲ್ಲ. ಸ್ಪೀಕರ್‌ ಮತ್ತು ಡೆಪ್ಯೂಟಿ ಸ್ಪೀಕರ್‌ ಹುದ್ದೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿವೆ.

    ಎಲ್ಲಿ ಯಾರಿಗೆ ನೀಡಲಾಗಿದೆ?
    ತಮಿಳುನಾಡು (ಡಿಎಂಕೆ) , ಕರ್ನಾಟಕ ಕಾಂಗ್ರೆಸ್‌), ಕೇರಳ (ಎಲ್‌ಡಿಎಫ್‌),ಪಂಜಾಬ್‌ ಮತ್ತು ದೆಹಲಿ (ಆಪ್‌), ಹಿಮಾಚಲ ಪ್ರದೇಶ (ಕಾಂಗ್ರೆಸ್‌) ಪಶ್ಚಿಮ ಬಂಗಾಳದಲ್ಲಿ(ಟಿಎಂಸಿ) ಆಡಳಿತ ಪಕ್ಷದ ಸದಸ್ಯರೇ ಎರಡು ಸ್ಥಾನವನ್ನು ಆಲಂಕರಿಸಿದ್ದಾರೆ. ತೆಲಂಗಾಣದಲ್ಲಿ ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ ಬಳಿಯಿದ್ದರೆ ಡೆಪ್ಯೂಟಿ ಸ್ಪೀಕರ್‌ ಸ್ಥಾನ ಇನ್ನೂ ನೇಮಕವಾಗಿಲ್ಲ. ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರವಿದ್ದು ಜೆಎಂಎಂ ಸ್ಪೀಕರ್‌ ಸ್ಥಾನ ಹೊಂದಿದೆ. ಡೆಪ್ಯೂಟಿ ಸ್ಥಾನಕ್ಕೆ ಇನ್ನೂ ನೇಮಕವಾಗಿಲ್ಲ.

    ಹಿಂದೆ ಏನಾಗಿತ್ತು?
    1925 – ಆಗಿನ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಎಲೆಕ್ಷನ್, ಸ್ಪೀಕರ್ ಸ್ಥಾನಕ್ಕೆ ಟಿ.ರಂಗಾಚಾರಿಯಾರ್, ವಿಠಲ್‌ಭಾಯ್ ಪಟೇಲ್ ಸ್ಪರ್ಧೆ ನಡೆದು ಸ್ವರಾಜ್ ಪಕ್ಷದ ವಿಠಲ್‌ಭಾಯ್ ಜೆ ಪಟೇಲ್ 2 ಮತದಿಂದ ಗೆಲುವು
    1925-1946 – ಸ್ಪೀಕರ್ ಸ್ಥಾನಕ್ಕೆ ಆರು ಬಾರಿ ಚುನಾವಣೆ
    1946 – ಕೊನೆಯ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಜಿವಿ ಮಾಳವಂಕರ್
    1956 – ಮಾಳವಂಕರ್ ನಿಧನದಿಂದ ಸ್ಪೀಕರ್ ಆಗಿ ಡೆಪ್ಯೂಟಿ ಸ್ಪೀಕರ್ ಎಂಎ ಅಯ್ಯಂಗಾರ್ ಆಯ್ಕೆ
    1957- 2ನೇ ಸಾರ್ವತ್ರಿಕ ಚುನಾವಣೆ ನಂತರ ಸರ್ವಾನುಮತದಿಂದ ಎಂಎ ಅಯ್ಯಂಗಾರ್ ಆಯ್ಕೆ. ಅಲ್ಲಿಂದ ಈವರೆಗೂ ಲೋಕಸಭೆ ಸ್ಪೀಕರ್ ಚುನಾವಣೆ ನಡೆದಿರಲ್ಲ ಸರ್ವಾನುಮತದ ಆಯ್ಕೆ ನಡೆದಿತ್ತು.

     

  • ಬಹುಮತ ಸಾಬೀತು ಪಡಿಸದಿದ್ದರೆ ನಾನೇ ರಾಜೀನಾಮೆ ಕೊಡ್ತೀನಿ- ಸಿಎಂಗೆ ಸ್ಪೀಕರ್ ಎಚ್ಚರಿಕೆ

    ಬಹುಮತ ಸಾಬೀತು ಪಡಿಸದಿದ್ದರೆ ನಾನೇ ರಾಜೀನಾಮೆ ಕೊಡ್ತೀನಿ- ಸಿಎಂಗೆ ಸ್ಪೀಕರ್ ಎಚ್ಚರಿಕೆ

    ಬೆಂಗಳೂರು: ವಿಶ್ವಾಸ ಮತಯಾಚನೆಯ ಚರ್ಚೆಯ ವೇಳೆ ಸದನದಲ್ಲಿ ಗದ್ದಲ ಎದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪ ಮುಂದೂಡಿದ್ದು, ಇಂದು ರಾತ್ರಿ 9 ಗಂಟೆವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    9 ಗಂಟೆಯಷ್ಟರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲವೆಂದಲ್ಲಿ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ವಿಧಾನಸಭೆಯಲ್ಲಿ ನಡೆಯುತ್ತಿದ್ದ ದೋಸ್ತಿಗಳ ಚರ್ಚೆ ನಾಲ್ಕನೇ ದಿನವಾದ ಇಂದೂ ಮುಂದುವರಿದಿತ್ತು. ಇಂದು ಕೂಡ ದೋಸ್ತಿಗಳೇ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಬಿಜೆಪಿ ಇಂದೂ ಮೌನಕ್ಕೆ ಶರಣಾಗಿತ್ತು.

    ಈ ಹಿಂದೆ ರಾಜ್ಯಪಾಲರು ಗಡುವು ನೀಡಿದ್ದರೂ ದೋಸ್ತಿಗಳು ಕ್ಯಾರೇ ಎಂದಿಲ್ಲ. ಅಲ್ಲದೆ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಮೂಲಕ ದಿನ ದೂಡಿದ್ದರು. ಆದರೆ ಈ ಚರ್ಚೆ ಇಂದು ಕೂಡ ಮುಂದುವರಿದಿದ್ದರಿಂದ ಸಿಟ್ಟಾದ ಸ್ಪೀಕರ್ ವಿಧಾನಸಭೆಯಿಂದ ಹೊರ ನಡೆದು 9 ಗಂಟೆಯ ವರೆಗೆ ಗಡುವು ನೀಡಿದ್ದಾರೆ ಎನ್ನಲಾಗಿದೆ.

  • ಸೋಮವಾರದವರೆಗೆ ದೋಸ್ತಿಗಳಿಗೆ ಜೀವದಾನ- 2 ದಿನದಲ್ಲಿ ಅತೃಪ್ತರ ಮನವೊಲಿಕೆಗೆ ಸರ್ಕಸ್

    ಸೋಮವಾರದವರೆಗೆ ದೋಸ್ತಿಗಳಿಗೆ ಜೀವದಾನ- 2 ದಿನದಲ್ಲಿ ಅತೃಪ್ತರ ಮನವೊಲಿಕೆಗೆ ಸರ್ಕಸ್

    ಬೆಂಗಳೂರು: ವಿಧಾನಸಭೆ ಅಧಿವೇಶನ ಶುರುವಾದಾಗ ಸಿಎಂ ತಾನಾಗಿಯೇ ವಿಶ್ವಾಸದಿಂದ ಗುರುವಾರ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಆದರೆ ಆ ಬಳಿಕ ನಡೆದಿದ್ದು ಕೇವಲ ಡ್ರಾಮಾ ಎಂದೇ ಹೇಳಬಹುದು. ಗುರುವಾರ 11 ಗಂಟೆ ಕಳಿತವರು ಸಂಜೆಯಾದರೂ ಮುಖ್ಯಮಂತ್ರಿಗಳ ಬಾಯಲ್ಲಿ ವಿಶ್ವಾಸದ ಮಾತೇ ಬರಲಿಲ್ಲ. ಹೀಗಾಗಿ ರಾತ್ರಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಿತ್ತು.

    ಇತ್ತ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವರೆಗೆ ಡೆಡ್‍ಲೈನ್ ಕೊಟ್ಟರು. ಆದರೂ ಕೇವಲ ಚರ್ಚೆಯಲ್ಲಿ ಕಾಲಹರಣವಾಯ್ತೇ ಹೊರತು ಸಿಎಂ ವಿಶ್ವಾಸದಲ್ಲಿರುವಂತೆ ಕಾಣಲೇ ಇಲ್ಲ. ಹೀಗಾಗಿ ರಾಜ್ಯಪಾಲರು ಇನ್ನೊಂದು ಡೆಡ್‍ಲೈನ್ ಕೊಟ್ಟರು. 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸಲೇಬೇಕು ಎಂದು ನಿರ್ದೇಶಿಸಿದರು. ಆದರೂ ದೋಸ್ತಿಗಳು ಕ್ಯಾರೇ ಅನ್ನದೆ ರಾಜ್ಯಪಾಲರ ಮಾತನ್ನೇ ಧಿಕ್ಕರಿಸಿದರು. ಬಳಿಕ ಸಂಜೆ 7.30ಕ್ಕೆ ಸಮಯ ನಿಗದಿ ಮಾಡಲಾಯ್ತು.

    ಇದರ ನಡುವೆ 7.30ಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯತ್ತದೆ ಎನ್ನಲಾಗುತ್ತಿತ್ತು. ಆದರೆ ಮತ್ತೆ ಸದನ ಆ ಚರ್ಚೆ, ಈ ಚರ್ಚೆ ಎಂದು ಕಾಲಹರಣದಲ್ಲೇ ಸಾಗಿತು. ಏಳೂವರೆ ಆಗುತ್ತಿದ್ದಂತೆ ಮತ್ತೆ ಸೋಮವಾರಕ್ಕೆ ಮುಂದೂಡಲು ಕಾಂಗ್ರೆಸ್-ಜೆಡಿಎಸ್ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು. ಆಗ ಯಡಿಯೂರಪ್ಪ ಮಾತನಾಡಿ, ಸ್ಪೀಕರ್ ಬಗ್ಗೆ ಗೌರವವಿದೆ. ರಾತ್ರಿ 11-12 ಗಂಟೆಯಾಗಲಿ. ಎಲ್ಲವೂ ಇವತ್ತೇ ಮುಗಿಯಲಿ ಎಂದು ಒತ್ತಾಯಿಸಿದರು.

    ಇದಕ್ಕೆ ಎದ್ದುನಿಂತ ಸಿಎಂ, ಎಲ್ಲಾ ಸದಸ್ಯರು ಮಾತಾನಾಡಿದ ಬಳಿಕ ಮೈತ್ರಿ ಸರ್ಕಾರದ ಕಾರ್ಯಕ್ರಮದ ಪ್ರಸ್ತಾಪ ಮಾಡಬೇಕು. ಸದಸ್ಯರಿಗೆ ಮಾತಾನಾಡಲು ಅವಕಾಶ ಕೊಡಿ. ಅದಾದ ಬಳಿಕ ವಿಶ್ವಾಸಮತ ಯಾಚನೆ ಎಂದು ಹೇಳಿದ್ರೆ, ನಾವು ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ. ಸೋಮವಾರಕ್ಕೆ ಮುಂದೂಡಿ ಎಂದು ರೇವಣ್ಣ ಮನವಿ ಮಾಡಿದರು.

    ಇತ್ತ ಸಿದ್ದರಾಮಯ್ಯ ಮಾತನಾಡಿ, ನಾವು ಓಡಿ ಹೋಗೋದಿಲ್ಲ. ವಿಶ್ವಾಸಮತ ಯಾಚನೆ ಅಂತಿಮವಾಗಲೇ ಬೇಕು. ಸೋಮವಾರ ಮಾತಾನಾಡುವ ಸದಸ್ಯರು ಪಾಲ್ಗೊಳ್ಳಲಿ. ಸೋಮವಾರ ಅಂತಿಮ ಮಾಡೋಣ ಎಂದು ಹೇಳಿದರು.

    ಎಲ್ಲವನ್ನೂ ನೋಡಿದ ಸ್ಪೀಕರ್ ರಮೇಶ್ ಕುಮಾರ್ ಕೊನೆಗೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಒಟ್ಟಿನಲ್ಲಿ ಇದರಿಂದ ದೋಸ್ತಿಗಳಿಗಂತೂ 2 ದಿನ ಜೀವದಾನ ಸಿಕ್ಕಿದಂತಾಗಿದೆ. ರಾಜ್ಯ ರಾಜಕೀಯ ಡ್ರಾಮಾದ ಮುಂದಿನ ಎಪಿಸೋಡ್‍ಗೆ ಸೋಮವಾರದವರೆಗೆ ಕಾಯಲೇಬೇಕು.

  • ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಕುತೂಹಲಕ್ಕೆ ಇಂದು ತೆರೆ

    ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಕುತೂಹಲಕ್ಕೆ ಇಂದು ತೆರೆ

    ಬೆಂಗಳೂರು: ಕಳೆದ ವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಯವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

    ದೋಸ್ತಿ ಪಕ್ಷಗಳ ನಾಯಕರು ಅದೆಷ್ಟೇ ಮನವೊಲಿಸಲು ಯತ್ನಿಸಿದರೂ ಅವರ ಬಾಯಿಂದ ಬರ್ತಿರೋದು ಇಂದು ಹೇಳುತ್ತೇನೆ ಎಂದಾಗಿತ್ತು. ಇಂದು ಸದನಕ್ಕೆ ಹಾಜರಾಗಲಿರುವ ರಾಮಲಿಂಗಾರೆಡ್ಡಿ, ಮಧ್ಯಾಹ್ನ ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ತಮ್ಮ ಮನದಲ್ಲೇನಿದೆ ಅನ್ನೋದನ್ನು ಬಹಿರಂಗಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಜೀನಾಮೆ ಹಿಂಪಡೆದು ಸರ್ಕಾರಕ್ಕೆ ಗುಟುಕು ಜೀವ ಕೊಡುವರೋ ಅಥವಾ ರಾಜೀನಾಮೆ ಹಿಂಪಡೆಯಲ್ಲ ಎಂದು ಹೇಳಿ ಶಾಕ್ ಕೊಡುವರೋ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

    ತೋಟದ ಮನೆಯಲ್ಲಿ ಓಲೈಕೆ:
    ಭಾನುವಾರ ಸಂಜೆ, ಬೆಂಗಳೂರು ಹೊರವಲಯದ ತೋಟದ ಮನೆಗೆ ಹೋಗಿದ್ದ ಸಿಎಂ, ಡಿಸಿಎಂ ಪರಮೇಶ್ವರ್, ಮಾಜಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆ ಬ್ರದರ್ಸ್, ರಾಮಲಿಂಗಾರೆಡ್ಡಿ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ರಾಮಲಿಂಗಾರೆಡ್ಡಿ ಹಾಗೂ ಪರಮೇಶ್ವರ್ ಅವರನ್ನು ಎದುರು- ಬದುರು ಕೂರಿಸಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪರಮೇಶ್ವರ್ ಎದುರೇ ರಾಮಲಿಂಗಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದು ಬಂದಿದೆ.

    ಕೊನೆಗೆ ರಾಮಲಿಂಗಾರೆಡ್ಡಿ, ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ ಸಿದ್ದರಾಮಯ್ಯ ಹೊರಟು ಬಂದಿದ್ದಾರೆ. ಆದರೆ ಪಟ್ಟು ಬಿಡದ ಸಿಎಂ ಮತ್ತು ಡಿಕೆ ಶಿವಕುಮಾರ್ ಮತ್ತೆ ಒಂದೂವರೆ ಗಂಟೆ ಕಾಲ ಸರ್ಕಸ್ ಮಾಡಿದರು. ಕೊನೆಗೆ ನಿರಾಸೆಯ ಮೊಗ ಹೊತ್ತು ಹಿಂತಿರುಗಿದರು. ನಂತರ ಮಾತನಾಡಿದ ರಾಮಲಿಂಗಾರೆಡ್ಡಿ, ನಾನಿನ್ನು ಶಾಸಕ. ಸದನಕ್ಕೆ ಹಾಜರಾಗುತ್ತೇನೆ. ಎಲ್ಲಾ ಕುತೂಹಲಗಳಿಗೂ ಇಂದು ಮಧ್ಯಾಹ್ನ ತೆರೆ ಎಳೆಯುತ್ತೇನೆ ಎಂದು ಹೇಳಿದರು.

    ಚರ್ಚೆಯಲ್ಲೇನಿತ್ತು..?
    ಕಳೆದ 45 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ನನ್ನ ಶ್ರಮಕ್ಕೆ ಏನು ಬೆಲೆ ಇದೆ. ನನಗೆ ಸಚಿವ ಸ್ಥಾನ ಕೊಡಲಿಲ್ಲ ಓಕೆ, ಆದರೆ ಯಾವ ಕಾರಣಕ್ಕೆ ಕೊಡಲಿಲ್ಲ ಅನ್ನೋದನ್ನು ಸೌಜನ್ಯಕ್ಕಾದರೂ ನನಗೆ ತಿಳಿಸಲಿಲ್ಲ ಯಾಕೆ. ನನ್ನ ಮಗಳಿಗೆ ಟಿಕೆಟ್ ಕೊಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗಿದೆ. ಹಲವರ ಮಕ್ಕಳಿಗೆ, ಕುಟುಂಬದವರಿಗೆ ಟಿಕೆಟ್ ಕೊಟ್ಟಿಲ್ವಾ. ಬೇರೆ ಯಾರು ಟಿಕೆಟ್ ಪಡೆದೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಲ್ಲಿ ರಾಮಲಿಂಗಾರೆಡ್ಡಿ ಪವರ್‍ಫುಲ್ ಅಂತೀರಿ, ಆದರೆ ಈ ಸರ್ಕಾರದಲ್ಲಿ ನನ್ನ ಯಾವ ಮಾತು ನಡೆದಿದೆ. ಮೇಯರ್ ನಮ್ಮವರು ಆದರು ನಿಜ. ಆದರೆ ಅವರ ಕೆಲಸಕ್ಕೆ ಎಷ್ಟೆಲ್ಲಾ ಅಡ್ಡಿಪಡಿಸಲಾಯ್ತು ಗೊತ್ತಾ. ನಾವು ಇಲ್ಲೇ ಹುಟ್ಟಿ- ಇಲ್ಲೇ ಬೆಳೆದವರು, ಆದರೆ ನಮ್ಮನ್ನು ಇನ್ಯಾರೋ ಆಳುತ್ತಿದ್ದಾರೆ ಎಂದು ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಕ್ಷ ಬೇರೆ ಯಾರನ್ನೋ ಬೆಂಗಳೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದೆ. ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಕೈಕಟ್ಟಿ ಕೂರಬೇಕಾ. ಈಗ ಸರ್ಕಾರ ಸಂಕಷ್ಟದಲ್ಲಿ ಇದೆ ಅಂತೀರಿ. ಆದರೆ ಇಷ್ಟು ದಿನ ಎಲ್ಲರೂ ಎಲ್ಲಿದ್ರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.