Tag: Spectrum

  • ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    – ಹರಾಜು ಪ್ರಕ್ರಿಯೆಯನ್ನು ದಿಢೀರ್‌ ತಡೆ ಹಿಡಿದಿದ್ದು ಯಾಕೆ
    – ಟೆಲಿಕಾಂ ಸಚಿವಾಲಯಕ್ಕೆ ಜಿಯೋ ಪತ್ರ

    ನವದೆಹಲಿ: ಅದಷ್ಟು ಶೀಘ್ರವಾಗಿ ಸ್ಪೆಕ್ಟ್ರಂ ಹರಾಜು ನಡೆಸಬೇಕೆಂದು ರಿಲಯನ್ಸ್‌ ಜಿಯೋ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ.

    ಸೆ.28 ರಂದು ದೂರಸಂಪರ್ಕ ಸಚಿವಾಲಯಕ್ಕೆ ಪತ್ರ ಬರೆದ ಜಿಯೋ, ಸ್ಪೆಕ್ಟ್ರಂ ಹಂಚಿಕೆ ಸಂಬಂಧ ಯಾವ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನುತಡ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹೂಡಿಕೆದಾರರಿಗೂ ಸಮಸ್ಯೆಯಾಗುವುದರ ಜೊತೆಗೆ ದೇಶದ ಆದಾಯಕ್ಕೂ ನಷ್ಟವಾಗುತ್ತಿದೆ ಎಂದು ತಿಳಿಸಿದೆ.

    2012ರಲ್ಲಿ ಸುಪ್ರೀಂ ಕೋರ್ಟ್‌ ಪ್ರತಿವರ್ಷ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕೆಂದು ಸೂಚಿಸಿದೆ. ಹೀಗಿದ್ದರೂ ಯಾವ ಕಾರಣಕ್ಕೆ ಡಿಢೀರ್‌ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂಬುವುದು ತಿಳಿಯುತ್ತಿಲ್ಲ. ಕಂಪನಿಗಳು ತಮ್ಮ ಬಿಸಿನೆಸ್‌ಗೆ ಅನುಗುಣವಾಗಿ ಖರೀದಿ ಮಾಡಬಹುದು. ಕಾರ್ಯ ನಿರ್ವಹಿಸುವ ಎಲ್ಲ ಕಂಪನಿಗಳು ಎಲ್ಲ ಬ್ಯಾಂಡ್‌ ಖರೀದಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ದೇಶೀಯ ಫೋನ್‌ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ

    ಒಟ್ಟು 3.92 ಲಕ್ಷ ಕೋಟಿ ರೂ. ಮೌಲ್ಯದ 1,461.5 ಮೆಗಾಹರ್ಟ್ಸ್‌ ಪೇರ್ಡ್‌ ಸ್ಪೆಕ್ಟ್ರಂ ಮತ್ತು 790 ಮೆಗಾಹರ್ಟ್ಸ್‌ ಅನ್‌ ಪೇರ್ಡ್‌ ಸ್ಪೆಕ್ಟ್ರಂ ಇಲ್ಲಿಯವರೆಗೆ ಬಳಕೆಯಾಗಿಲ್ಲ.

    ಪತ್ರದಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಹೆಸರನ್ನು ಪ್ರಸ್ತಾಪ ಮಾಡದೇ, ಕೆಲವು ಸೇವಾ ಕಂಪನಿಗಳ ಸ್ಪೆಕ್ಟ್ರಂ ಹರಾಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಕೆಲವರ ಹಿತಾಸಕ್ತಿಗೆ ಪೂರಕವಾಗಿ ರಾಷ್ಟ್ರ ನಿರ್ಮಾಣದ ನೀತಿಗಳನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

    ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಟ್ರಾಫಿಕ್‌ ವಿಥ್‌ ಪರ್‌ ಯೂಸರ್‌ ವಾಯ್ಸ್‌ ದುಪ್ಪಟ್ಟು ಆಗಿದೆ. ಡೇಟಾ ಬಳಕೆ 50 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ಜಿಯೋ ಕೂಡಲೇ ಸ್ಪೆಕ್ಟ್ರಂ ಹರಾಜು ಮಾಡಿ ಎಂದು ಒತ್ತಾಯ ಮಾಡಿದರೆ ಏರ್‌ಟೆಲ್‌ ಮತ್ತು ವಿಐ ಸ್ಪೆಕ್ಟ್ರಂ ದರ ದುಬಾರಿಯಾಗಿದೆ ಎಂದು ಹೇಳಿದೆ.

    ಜಿಯೋ 700, 800, 900, 1800, 2100 ಮತ್ತು 2500 ಮೆಗಾಹರ್ಟ್ಸ್‌ ಬ್ಯಾಂಡ್‌ ಖರೀದಿಸಲು ಆಸಕ್ತಿ ತೋರಿಸಿದೆ. 5ಜಿ ಸೇವೆಗೆ ಇರುವ 3,300-3600 ಮೆಗಾಹರ್ಟ್ಸ್‌ ಬ್ಯಾಂಡ್‌ ಖರೀದಿಸಲು ಜಿಯೋ ಆಸಕ್ತಿ ತೋರಿಸಿಲ್ಲ.

    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್‌) ಬಿಡುಗಡೆ ಮಾಡಿದ ಜೂನ್‌ ತಿಂಗಳ ವರದಿಯಲ್ಲಿ ವಿಐ 48 ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ ಏರ್‌ಟೆಲ್‌ 11 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್‌ಎನ್‌ಎಲ್‌ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇತ್ತ ಜಿಯೋಗೆ 45 ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

  • ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ನವದೆಹಲಿ: ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ಕಂಗೆಟ್ಟಿದ್ದ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ.

    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 42,336 ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

    ಮೊದಲೇ ಆರ್ಥಿಕ ನಷ್ಟದಲ್ಲಿದ್ದ ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಂ ಹಣವನ್ನು ಪಾವತಿ ಮಾಡುವ ಸಂಬಂಧ ತಲೆಕೆಡಿಸಿದ್ದಾಗ ಕೇಂದ್ರ ಸರ್ಕಾರ ಪಾವತಿ ಅವಧಿಯನ್ನು 2 ವರ್ಷಗಳ ಕಾಲ ಮುಂದೂಡಿದೆ. ಕಂಪನಿಗಳು 2020-21, 2021-22 ವರ್ಷಕ್ಕೆ ಪಾವತಿಸಬೇಕಾದ ಹಣವನ್ನು 2022-23ರ ಹಣಕಾಸು ವರ್ಷದಲ್ಲಿ ಪಾವತಿಸಬೇಕು ಎಂದು ಸೂಚಿಸಿದೆ. ಇದರ ಜೊತೆ ವಿಸ್ತರಣೆಗೊಂಡ ಅವಧಿಗೆ ತಗಲುವ ಬಡ್ಡಿಯನ್ನು ಸಹ ಪಾವತಿಸಬೇಕೆಂದು ಹೇಳಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

    ಭಾರತಿ ಏರ್‌ಟೆಲ್‌ 11,746 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 23,920 ಕೋಟಿ ರೂ., ರಿಲಯನ್ಸ್ ಜಿಯೋ 6,670 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್ 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್‌ 23.8 ಲಕ್ಷ, ವೊಡಾಫೋನ್  25.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಜಿಯೋ ಮತ್ತು ಬಿಎಸ್‍ಎನ್‍ಎಲ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋಗೆ 69.83 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾದರೆ, ಬಿಎಸ್‍ಎನ್‍ಎಲ್‍ಗೆ 7.37 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ವೊಡಾಫೋನ್  37.24 ಕೋಟಿ, ರಿಲಯನ್ಸ್ ಜಿಯೋ 35.52 ಕೋಟಿ, ಏರ್‌ಟೆಲ್‌ 32.55 ಕೋಟಿ, ಬಿಎಸ್‍ಎನ್‍ಎಲ್ 11.69 ಕೋಟಿ ಹಾಗೂ ಎಂಟಿಎನ್‍ಎಲ್ 33.93 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.