Tag: Spectator

  • ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗೆ ಕೊರೊನಾ

    ಮೆಲ್ಬರ್ನ್: ಇತಿಹಾಸ ಸೃಷ್ಟಿಸಿದ್ದ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಈಗ ಅಪಖ್ಯಾತಿಗೆ ಗುರಿಯಾಗಿದೆ.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಮೆಲ್ಬರ್ನ್ ನಲ್ಲಿ ನಡೆದಿತ್ತು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಓರ್ವ ಕ್ರಿಕೆಟ್ ಅಭಿಮಾನಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.

    ಮೆಲ್ಬರ್ನ್ ಸ್ಟೇಡಿಯಂನ ಉತ್ತರ ಭಾಗದ 2ನೇ ಹಂತದ ಸ್ಟ್ಯಾಂಡ್‍ನ ಎನ್ 42 ಸೀಟ್‍ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಡಿಎಚ್‍ಹೆಚ್‍ಎಸ್)ಯು ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ದಯವಿಟ್ಟು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದೆ ಎಂದು ವರದಿಯಾಗಿದೆ.

    ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಪಂದ್ಯ ವೀಕ್ಷಿಸಲು 86,174 ಮಂದಿ ಆಗಮಿಸಿದ್ದರು. ಈ ಮೂಲಕ ಅತಿ ಹೆಚ್ಚು ಮಂದಿ ವೀಕ್ಷಿಸಿದ ಮಹಿಳಾ ಕ್ರಿಕೆಟ್ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ ಮಹಿಳಾ ಪಂದ್ಯ ಎಂಬ ಮತ್ತೊಂದು ದಾಖಲೆಯನ್ನು ಬರೆದಿದೆ.

    ಮೆಲ್ಬರ್ನ್ ಸ್ಟೇಡಿಯಂ 1,00,024 ಆಸನ ಸಾಮರ್ಥ್ಯ ಹೊಂದಿದ್ದು ಇಲ್ಲಿಯವರೆಗೆ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈಗ ಗುಜರಾತಿನ ಅಹಮದಾಬಾದಿನ ಮೊಟೆರಾ ಸ್ಟೇಡಿಯಂ ವಿಶ್ವದ ನಂಬರ್ ಒನ್ ಸ್ಟೇಡಿಯಂ ಆಗಿದ್ದು, 1.10 ಲಕ್ಷ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

    185 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರಿನಲ್ಲಿ 99 ರನ್‍ಗಳಿಗೆ ಸರ್ವಪತನ ಕಂಡಿತು. 85 ರನ್ ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.