Tag: Special Worship

  • ರಾಮ್‍ಸೇನಾ ಕರ್ನಾಟಕದಿಂದ ಯೋಗಿ ಮಠದಲ್ಲಿ ಭಜನೆ, ವಿಶೇಷ ಪೂಜೆ

    ರಾಮ್‍ಸೇನಾ ಕರ್ನಾಟಕದಿಂದ ಯೋಗಿ ಮಠದಲ್ಲಿ ಭಜನೆ, ವಿಶೇಷ ಪೂಜೆ

    – ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ ನಿಮಿತ್ತ ರಾಮಸೇನೆ ಕರ್ನಾಟಕ ಮಂಗಳೂರು ಇವರ ವತಿಯಿಂದ ರಾಮ ತಾರಕ ಮಂತ್ರ ಪಠಣ ಮತ್ತು ಭಜನಾ ಕಾರ್ಯಕ್ರಮ ಮಂಗಳೂರು ಕದ್ರಿ ಬಳಿ ಇರುವ ಯೋಗಿ ಮಠದಲ್ಲಿ ನಡೆಸಲಾಯಿತು.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷರಾಗಿರುವ ನಾಥ ಪಂಥದ ಜೋಗಿ ಮಠದ ಒಂಬತ್ತನೇ ಮಠವಾದ ಕದ್ರಿಯ ಯೋಗಿ ಮಠದಲ್ಲಿ ರಾಮ್‍ಸೇನಾ ಕರ್ನಾಟಕ ಈ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಮಂಗಳಾರತಿ ಮಾಡಲಾಯಿತು.

    ಯೋಗಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಜ್ಯೋತಿ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು, ಈ ಸಂದರ್ಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ ಪ್ರಸಾದ್ ಅತ್ತಾವರ್ ಹಾಗೂ ಪದಾಧಿಕಾರಿಗಳಾದ ಮಂಜುನಾಥ್ ಕುಂದರ್, ದಿನೇಶ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ರಾಮ್‍ಸೇನೆ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆ ಎದುರು ಜಿಲ್ಲೆಯಲ್ಲಿ ಸೆಕ್ಷನ್ ಇದ್ದರೂ ಕೂಡ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

  • ಗ್ರಹಣದ ಎಫೆಕ್ಟ್ – ಎರಡು ದಿನ ಕೇರಳದಲ್ಲಿ ಸಿಎಂ ವಿಶೇಷ ಪೂಜೆ

    ಗ್ರಹಣದ ಎಫೆಕ್ಟ್ – ಎರಡು ದಿನ ಕೇರಳದಲ್ಲಿ ಸಿಎಂ ವಿಶೇಷ ಪೂಜೆ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಳಗ್ಗೆ ಕೇರಳಕ್ಕೆ ತೆರಳಲಿದ್ದು, ಮುಂದಿನ 2 ದಿನಗಳ ಕಾಲ ಅವರು ಕೇರಳದ ವಿಶೇಷ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

    ಪ್ರತಿ ವರ್ಷವೂ ಸಿಎಂ ಈ ಸಮಯದಲ್ಲಿ ಕೇರಳದ ಆನಂತಪದ್ಮನಾಭ ದೇವಾಯಲಕ್ಕೆ ಭೇಟಿ ನೀಡುತ್ತಾರೆ. ಇತ್ತಿಚೇಗಷ್ಟೇ ಸಿಎಂ ನಿವಾಸದಲ್ಲಿ ಹೋಮ ಹವನ ನಡೆಸಲಾಗಿತ್ತು. ಸಿಎಂ ಬಿಎಸ್‍ವೈ ಅವರ ಕುಟುಂಬಕ್ಕೆ ಆಪ್ತರಾಗಿರುವ ಅರ್ಚಕರ ಸಲಹೆ ಮೇರೆಗೆ ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ಡಿ.26 ರಂದು ಅಮಾವಾಸ್ಯೆ ಇದ್ದು, ಈ ಬಾರಿ ವೃಶ್ಚಿಕ ರಾಶಿ ಅವರು ಗ್ರಹಣ ದೋಷ ನಿವಾರಣೆಗೆ ವಿಶೇಷ ಹೋಮ ಹವನ ನಡೆಸುವ ಅನಿವಾರ್ಯತೆ ಇದೆ ಎನ್ನಲಾಗಿದೆ.

    ಸಿಎಂ ಅವರದ್ದು ವೃಶ್ಚಿಕ ರಾಶಿ ಆಗಿದ್ದು, ಕೆಲ ದಿನಗಳ ಹಿಂದೆ ನಿವಾಸದಲ್ಲಿ ಸುದರ್ಶನ ನರಸಿಂಹಯಾಗವನ್ನು ಮಾಡಿದ್ದರು. ಕೇರಳದಲ್ಲಿ ಮಾಡಲಿರುವ ವಿಶೇಷ ಪೂಜೆ, ಹೋಮಗಳ ಇದರ ಮುಂದುವರಿದ ಭಾಗ ಎನ್ನಲಾಗಿದೆ. 26ರ ನಂತರ ಗ್ರಹಣ ದೋಷ ಇರುವುದರಿಂದಲೂ ಸಿಎಂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ವಿಶೇಷ ಸಂದರ್ಭದಲ್ಲಿ ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮವನ್ನು ಮಾಡಲಾಗುತ್ತದೆ. ಮುಂದಿನ 3 ವರ್ಷಗಳ ಕಾಲ ಸರ್ಕಾರ ಸುಸ್ಥಿರವಾಗಿ ನಡೆದುಕೊಂಡು ಹೋಗುವ ಉದ್ದೇಶದಿಂದ ಈ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಪ್ರವಾಸದ ಸಂದರ್ಭದಲ್ಲಿ ಸಿಎಂ ಕುಟುಂಬ ಸದಸ್ಯರು ಹಾಗೂ ಆಪ್ತರಷ್ಟೇ ಸಾಥ್ ನೀಡಲಿದ್ದಾರೆ.

    ಸಾಮಾನ್ಯವಾಗಿ ಗ್ರಹಣ ಸಂದರ್ಭದಲ್ಲಿ ಉಂಟಾಗಬಹುದಾದ ದೋಷವನ್ನು ನಿವಾರಿಸಲು ಈ ವಿಶೇಷ ಪೂಜೆ ನಡೆಯಲಿದೆ. ಕೇರಳ ರಾಜರಾಜೇಶ್ವರ ದೇವಾಲಯ ಸೇರಿದಂತೆ ಪ್ರಮುಖ 4 ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆನೆಯನ್ನು ದಾನ ಮಾಡಿದ್ದರು. ಬಿಎಸ್‍ವೈ ಅವರು ಸಿಎಂ ಆಗುವ ಮುನ್ನವೂ ಈ ದೇವಾಲಯಗಳಿಗೆ ಭೇಟಿ ನೀಡಿ ರಾತ್ರಿ ಇಡೀ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭವನ್ನು ನೆನೆಯಬಹುದಾಗಿದೆ.

  • ಮಂಡ್ಯದಲ್ಲಿರುವ ಬಿಎಸ್‍ವೈ ಸ್ವಗ್ರಾಮದಲ್ಲಿ ವಿಶೇಷ ಪೂಜೆ – ಮುಗಿಲು ಮುಟ್ಟಿದ ಸಂಭ್ರಮಾಚರಣೆ

    ಮಂಡ್ಯದಲ್ಲಿರುವ ಬಿಎಸ್‍ವೈ ಸ್ವಗ್ರಾಮದಲ್ಲಿ ವಿಶೇಷ ಪೂಜೆ – ಮುಗಿಲು ಮುಟ್ಟಿದ ಸಂಭ್ರಮಾಚರಣೆ

    ಮಂಡ್ಯ: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿಎಸ್‍ವೈ ಹುಟ್ಟೂರು ಬೂಕನಕೆರೆಯಲ್ಲಿಯೂ ಸಹ ಸಂಭ್ರಮ ಮುಗಿಲು ಮುಟ್ಟಿದೆ.

    ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಇಂದು ಸಂಜೆ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರದ ವೇಳೆ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗ್ರಾಮದ ಗೋಗಾಲಮ್ಮ, ಈಶ್ವರ-ಪಾರ್ವತಿ ದೇವಾಲಯ, ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಸೇರಿದಂತೆ ವಿಶೇಷ ಪೂಜೆಯನ್ನು ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಂಜೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಇದೇ ವೇಳೆ ಸಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಬಿಎಸ್‍ವೈ ಮನೆ ದೇವರಿಗೂ ಸಹ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

    ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿ ಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಬಿ.ಎಸ್.ಯಡಿಯೂರಪ್ಪನವರ ಮನೆ ದೇವರಾಗಿದ್ದು, ಗವಿ ಮಠದ ಪೀಠಾಧ್ಯಕ್ಷ ಸ್ವತಂತ್ರ ಚೆನ್ನವೀರಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಜೆ 5 ಗಂಟೆಯಿಂದ ವಿಶೇಷ ಪೂಜೆ ಆರಂಭವಾಗಲಿದೆ. ಯಾವುದೇ ಅಡೆ ತಡೆಗಳಿಲ್ಲದೇ ಅಧಿಕಾರ ನಿರ್ವಹಿಸುವ ಶಕ್ತಿಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡಲೆಂದು ಪ್ರಾರ್ಥಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.