Tag: Special POSCO court

  • 6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    6ರ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗೆ ಮರಣದಂಡನೆ

    ಭುವನೇಶ್ವರ: 6 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಆರೋಪಿಗೆ ಒಡಿಶಾ ವಿಶೇಷ ಪೋಸ್ಕೋ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

    ಕಳೆದ ವರ್ಷ ಅಪರಾಧಿ ಮುಸ್ತಾಕ್ ಒಡಿಶಾದ ಸಲಿಪುರ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕಲ್ಲಿನಿಂದ ಜಜ್ಜಿ ಬಾಲಕಿಯನ್ನು ಕೊಲೆ ಮಾಡಿದ್ದನು. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ, ಆಕೆಯನ್ನು ಶಾಲೆಯ ಆವರಣಕ್ಕೆ ಕರೆದೊಯ್ದು ಮುಸ್ತಾಕ್ ಅತ್ಯಾಚಾರ ಮಾಡಿದ್ದನು. ಬಳಿಕ ಈ ಬಗ್ಗೆ ಬಾಲಕಿ ಯಾರಿಗಾದರೂ ಹೇಳುತ್ತಾಳೆ ಎಂಬ ಭಯದಿಂದ ಬಾಲಕಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.

    ಮಗಳು ಮನೆಯಲ್ಲಿ ಕಾಣದಿದ್ದಾಗ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ಮುಸ್ತಾಕ್ ಎಂಬುದು ತಿಳಿದುಬಂದು, ಆತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಬಗ್ಗೆ ಒಡಿಶಾದ ವಿಶೇಷ ಪೋಸ್ಕೋ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಗುರುವಾರ ಆರೋಪ ಪ್ರಕರಣ ಸಾಬೀತಾಗಿದ್ದು ನ್ಯಾಯಾಧೀಶರು ಅಪರಾಧಿಗೆ ಮರಣದಂಡನೆ ವಿಧಿಸಿದ್ದಾರೆ.

    ಈ ಬಗ್ಗೆ ಸಂತ್ರಸ್ತ ಬಾಲಕಿಯ ತಾಯಿ ಮಾತನಾಡಿ, ನನ್ನ ಮಗಳ ಸಾವಿಗೆ ಕಾರಣವಾದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ನೀಡಿರುವುದು ಖುಷಿಯಾಗಿದೆ. ಇದರಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ, ನ್ಯಾಯಾಲಯಕ್ಕೆ ಧನ್ಯವಾದ. ಈ ತೀರ್ಪು ಅತ್ಯಾಚಾರಿಗಳಿಗೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

    ಪೋಸ್ಕೋ ಕಾಯ್ದೆ ಅನ್ವಯ 12 ವರ್ಷದ ಒಳಗಿನ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ಐಪಿಸಿ ಸೆಕ್ಷನ್ 302(ಕೊಲೆ), 363(ಅಪಹರಣ), 376ಬಿ (12 ವರ್ಷದ ಒಳಗಡೆ ಇರುವ 12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರ) ಅಡಿಯಲ್ಲಿ ಮುಸ್ತಾಕ್ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ವಾದ, ಪ್ರತಿವಾದ ಹಾಗೂ ಸಾಕ್ಷಿಯ ಆಧಾರದ ಮೇಲೆ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದೆ.