Tag: Special Package

  • ಶ್ರಮಿಕರಿಗಾಗಿ ಇಂದು ವಿಶೇಷ ಪ್ಯಾಕೇಜ್ ವಿಸ್ತರಣೆ ಮಾಡ್ತಾರಾ ಬಿಎಸ್‍ವೈ?

    ಶ್ರಮಿಕರಿಗಾಗಿ ಇಂದು ವಿಶೇಷ ಪ್ಯಾಕೇಜ್ ವಿಸ್ತರಣೆ ಮಾಡ್ತಾರಾ ಬಿಎಸ್‍ವೈ?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾತ್ರಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರಮಿಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ.

    ಹೌದು. ಇಂದು ಲಾಕ್ ಡೌನ್ ನ ಮತ್ತೊಂದು ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೆಲವು ಕಸುಬುದಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು. ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಅರ್ಚಕರು, ಟೈಲರ್ ಗಳು, ಅಡುಗೆ ಕೆಲಸದವರು ಹಾಗೂ ಹೂಮಾರಾಟಗಾರರು ಸೇರಿ ಕೆಲವು ಕಾಯಕ ವರ್ಗಗಳಿಗೆ ಒನ್ ಟೈಂ ಪರಿಹಾರ ನೀಡೋ ನಿರೀಕ್ಷೆ ಇದೆ. ಪ್ರತೀ ಸಮುದಾಯಕ್ಕೆ ಈ ಸಲ 3,000ದಂತೆ ಒನ್ ಟೈಂ ಪರಿಹಾರಕ್ಕೆ ಪ್ಲಾನ್ ಮಾಡಲಾಗಿದೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸುಮಾರು 500ರಿಂದ 800 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಭಾನುವಾರವೇ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆಯಾಗಬೇಕಿತ್ತು. ಆದರೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಕಾರಣದಿಂದ ಮುಂದೂಡಿಕೆಯಾಗಿತ್ತು. ನಿನ್ನೆ ಮಂಗಳವಾರವೂ ಮೋದಿಯವರ ರಾಷ್ಟ್ರೀಯ ಭಾಷಣ ಕಾರಣದಿಂದ ಘೋಷಣೆಯಾಗಲಿಲ್ಲ. ಹಾಗಾಗಿ ಇವತ್ತು ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡಬಹುದು ಎಂಬುದಾಗಿ ತಿಳಿದುಬಂದಿದೆ.

    ಕಳೆದ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು, 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.

  • ಕುಂಬಾರರಿಗೂ ವಿಶೇಷ ಪರಿಹಾರ ನೆರವು ನೀಡಲು ಸಿಎಂಗೆ ಮನವಿ

    ಕುಂಬಾರರಿಗೂ ವಿಶೇಷ ಪರಿಹಾರ ನೆರವು ನೀಡಲು ಸಿಎಂಗೆ ಮನವಿ

    ಮಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ಕುಂಬಾರಿಕೆ ವೃತ್ತಿ ಮಾಡುವವರಿಗೂ ಐದು ಸಾವಿರ ರೂಪಾಯಿಗಳ ವಿಶೇಷ ಪರಿಹಾರ ನೆರವು ನೀಡಬೇಕೆಂದು ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

    ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಇರುವವರ ನೆರವಿಗೆ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸುವ ಮೂಲಕ ಹೆಚ್ಚಿನ ನೆರವು ನೀಡಿರುವ ತಮ್ಮ ನಡೆ ಸ್ವಾಗತಾರ್ಹ. ಆದರೆ ರಾಜ್ಯಾದ್ಯಂತ ಸಂಕಷ್ಟಕ್ಕೆ ಸಿಲುಕಿರುವ ಇನ್ನೂ ಹಲವು ಶ್ರಮಿಕ ಸಮುದಾಯಗಳಿವೆ. ಅದರಲ್ಲಿ ಕುಂಬಾರರು ಇದ್ದಾರೆ. ರಾಜ್ಯದ 40ರಿಂದ 50 ಸಾವಿರ ಕುಂಬಾರ ಕುಟುಂಬಗಳು ತಮ್ಮ ಕುಂಬಾರಿಕೆ ವೃತ್ತಿ ಮುಂದುವರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಡಿಕೆಗಳ ಮಾರಾಟ ಸ್ಥಗಿತಗೊಂಡಿದೆ ಎಂದು ಸಿಎಂಗೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು

    ಬೇಸಿಗೆ ಕಾಲದ ಮಡಿಕೆ ವ್ಯಾಪಾರಕ್ಕಾಗಿ ಮುಂಚಿತವಾಗಿ ಸಿದ್ಧಪಡಿಸಿದ ಮಡಿಕೆಗಳು ಮೂಲೆಯಲ್ಲಿ ಸಂಗ್ರಹಿಸಿದ ಕಾರಣ ಅಲ್ಲಿಯೇ ಒಡೆದು ಹೋಗುತ್ತಿವೆ. ಮಡಿಕೆ ಮಾರಾಟವೇ ಜೀವನ ನಿರ್ವಹಣೆಗೆ ಆಸರೆಯಾಗಿರುವ ಕುಂಬಾರರ ಬದುಕಿಗೆ ಕೊರೊನಾ ರೋಗ ಕೊಳ್ಳಿ ಹೊಡೆದಿದೆ. ಕಳೆದ 40 ದಿನಗಳಿಂದ ಕೆಲಸ ಇಲ್ಲದೇ ಮನೆಯಲ್ಲಿರುವ ಕಸುಬುದಾರರು ಸರ್ಕಾರದ ಆರ್ಥಿಕ ನೆರವಿಗಾಗಿ ಕಾಯುತ್ತಿದ್ದಾರೆ. ಇಂತಹ ದುರಿತ ಕಾಲದಲ್ಲಿ ಕುಂಬಾರಿಕೆ ಕಸುಬುದಾರರಿಗೂ ಐದು ಸಾವಿರ ರೂಪಾಯಿಗಳ ವಿಶೇಷ ಪರಿಹಾರ ನೆರವು ನೀಡಬೇಕು ಎಂದು ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವವೇದಿಕೆ ಹಾಗೂ ಕುಲಾಲ್ ಮಹಿಳಾ ಸಂಘಟನೆಗಳ ವತಿಯಿಂದ ಸಿಎಂಗೆ ಮನವಿ ಮಾಡಿದ್ದಾರೆ.

  • ಪ್ರಧಾನಿ ಮೋದಿ ಸರಣಿ ಸಭೆ – ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

    ಪ್ರಧಾನಿ ಮೋದಿ ಸರಣಿ ಸಭೆ – ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

    ನವದೆಹಲಿ: ಮೇ 17ರವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವರು ಹಾಗೂ ಪ್ರಮುಖ ಅಧಿಕಾರಿಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಹೀಗಾಗಿ ಆರ್ಥಿಕ ಉತ್ತೇಜನಕ್ಕೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ.

    ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲ ಸೀತರಾಮನ್, ಅತಿ ಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ಸಚಿವರು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೆ ನರೇಂದ್ರ ಮೋದಿ ವಿಸ್ತ್ರತ ಚರ್ಚೆ ನಡೆಸಿದ್ದಾರೆ. ಸಭೆ ಹಿನ್ನೆಲೆ ಶುಕ್ರವಾರದಂದು ಮಾಸಿಕ ಜಿಎಸ್‍ಟಿ ಸಂಗ್ರಹ ಸಂಖ್ಯೆಯ ಮಾಹಿತಿ ನೀಡುವುದನ್ನು ಕೇಂದ್ರ ಹಣಕಾಸು ಸಚಿವಾಲಯವು ಮುಂದೂಡಿತ್ತು. ಈಗ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಯೋಜಿಸಿರುವ ಹಲವಾರು ಉಪಕ್ರಮಗಳ ಬಗ್ಗೆ ನಿರ್ಮಲ ಸೀತರಾಮನ್ ಪ್ರಧಾನಿ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

    ಈಗಾಗಲೇ ನಾಗರಿಕ ವಿಮಾನಯಾನ, ಕಾರ್ಮಿಕ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ. ದೇಶಿ, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳಿಗೆ ಪುನರುಜ್ಜೀವನ ನೀಡುವ ಬಗ್ಗೆ ವಾಣಿಜ್ಯ ಹಾಗೂ ಎಂಎಸ್‍ಎಂಇ ಸಚಿವಾಲಯದೊಂದಿಗೆ ವಿಸೃತವಾದ ಚರ್ಚೆ ನಡೆಸಲಾಗಿದೆ.

    ಮಾರ್ಚ್ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು 1.7 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಪ್ಯಾಕೇಜ್‍ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಎರಡನೇ ಪ್ಯಾಕೇಜ್‍ನಲ್ಲಿ ಆರ್ಥಿಕತೆ ಚೇತರಿಕೆಗೆ ಟಾನಿಕ್ ನೀಡಬಹುದು ಎಂದು ಅಂದಾಜಿಸಲಾಗಿದೆ.

  • ಅಧಿಕಾರಿಗಳ ಮಾತು ಕೇಳಬೇಡಿ, ರೈತರ ಬೆಳೆಯನ್ನು ಸರ್ಕಾರವೇ ಖರೀದಿಸಲಿ: ಡಿ.ಕೆ ಸುರೇಶ್

    ಅಧಿಕಾರಿಗಳ ಮಾತು ಕೇಳಬೇಡಿ, ರೈತರ ಬೆಳೆಯನ್ನು ಸರ್ಕಾರವೇ ಖರೀದಿಸಲಿ: ಡಿ.ಕೆ ಸುರೇಶ್

    – ಸಚಿವರೇ ಅಧಿಕಾರಿಗಳ ಮಾತು ಕೇಳಬೇಡಿ, ಸುಳ್ಳು ಮಾಹಿತಿ ನೀಡ್ತಿದ್ದಾರೆ
    – ಸುಳ್ಳು ಮಾಹಿತಿ ಕೊಡಬೇಡಿ ಅಧಿಕಾರಿಗಳ ವಿರುದ್ಧ ಗರಂ

    ರಾಮನಗರ: ಸರ್ಕಾರವೇ ರೈತರಿಂದ ತರಕಾರಿ ಕೊಂಡು ಹಾಪ್‍ಕಾಮ್ಸ್, ಹಾಲು ಒಕ್ಕೂಟಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಒತ್ತಾಯಿಸಿದ್ದಾರೆ.

    ರಾಮನಗರ ಜಿಲ್ಲಾ ಪಂಚಾಯತ್‍ನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆ ಹಾಗೂ ನೆರವು ಯಾವ ರೀತಿಯಲ್ಲಿ ನೀಡಲಾಗುತ್ತಿದೆ ಎಂದು ಚರ್ಚೆ ನಡೆಸಲಾಯಿತು. ಚರ್ಚೆಯ ವೇಳೆ ರೈತರಿಂದ ತರಕಾರಿ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಅಧಿಕಾರಿಗಳ ಮಾತಿಗೆ ಗರಂ ಆದ ಡಿ.ಕೆ.ಸುರೇಶ್, ಸುಖಾಸುಮ್ಮನೆ ಸಚಿವರ ಮುಂದೆ ಸುಳ್ಳು ಮಾಹಿತಿ ಕೊಡಬೇಡಿ ಎಂದು ಗದರಿದರು.

    ಎಪಿಎಂಸಿಗಳಲ್ಲಿ ಬೆಳೆಗಳು ಸರಿಯಾಗಿ ಮಾರಾಟ ಆಗುತ್ತಿಲ್ಲ. ಹೊಲದ ಕೆಲಸಗಳಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಬೇರೆ ಊರುಗಳಿಂದ ಕಾರ್ಮಿಕರು ಬರಲು ಅಧಿಕಾರಿಗಳು, ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ಬೆಳೆಗಳನ್ನು ಕಟಾವು ಮಾಡಲು ಆಗದ ಪರಿಸ್ಥಿತಿ ಇದೆ. ರೈತರಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಿದಾಗ ಮಾತ್ರ ಮತ್ತೆ ಕೃಷಿ ಮಾಡಲು ಸಾಧ್ಯ ಎಂದು ತಿಳಿಸಿದರು.

    ಬೆಂಬಲ ಬೆಲೆಯಡಿ ಸರ್ಕಾರದಿಂದ ರಾಗಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಬೇಕು. ಒಬ್ಬರಿಂದ 15 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದ್ದು, ಅದನ್ನು ಹೆಚ್ಚಿಸಬೇಕು. ಹೆಚ್ಚುವರಿಯಾಗಿ ಬೆಳೆದ ರಾಗಿಯನ್ನೂ ಬೆಂಬಲ ಬೆಲೆ ಅಡಿ ಖರೀದಿ ಮಾಡಬೇಕು. ಅಲ್ಲದೆ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕಾರ್ಮಿಕರಿಗೆ ಹಣ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಪ್ರತಿ ರೈತನಿಗೆ 4-5 ಸಾವಿರ ಸಿಗುತ್ತದೆ ಎಂದರು.

    ಇದೇ ವೇಳೆ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಸರ್ಕಾರ ಅದನ್ನು ಭರ್ತಿ ಮಾಡಬೇಕು. ಗ್ರಾ.ಪಂ. ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಬೇಕು. ಎರಡು ವರ್ಷಗಳಿಂದ ರೈತರಿಗೆ ಟ್ರಾಕ್ಟರ್ ಖರೀದಿ ಸಬ್ಸಿಡಿ ಹಣ ಸ್ಥಗಿತಗೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

  • ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸಿಎಂ ಬಳಿ ಚರ್ಚೆ: ಸಚಿವ ಬಿ.ಸಿ ಪಾಟೀಲ್

    ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸಿಎಂ ಬಳಿ ಚರ್ಚೆ: ಸಚಿವ ಬಿ.ಸಿ ಪಾಟೀಲ್

    ರಾಮನಗರ: ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಸಂಬಂಧ ಭಾನುವಾರ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಸಹಕಾರಿ ಸಚಿವ ಜೊತೆ ಚರ್ಚೆ ನಡೆಸಿ ಬಳಿಕ ಸೋಮವಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾತ್ರಿ ನಡೆದ ಜಿಲ್ಲೆಯ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಅವರನ್ನು ಈ ಕೂಪದಿಂದ ಮೇಲೆತ್ತುವುದು ನಮ್ಮ ಮೊದಲ ಆದ್ಯತೆ ಆಗಲಿದೆ. ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ ಸಚಿವರ ಜೊತೆಗೂಡಿ ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಸದ್ಯ 19 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ರೈತರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಮೂರು ತಿಂಗಳು ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಮಾಡುವುದು ಕಷ್ಟವಿದೆ. ಹೀಗಾಗಿ ಕೃಷಿ ಚಟುವಟಿಕೆ ಉತ್ತೇಜನಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದರು. ಸಭೆಯಲ್ಲಿ ಸಂಸದ ಡಿಕೆ ಸುರೇಶ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ ಲಿಂಗಪ್ಪ, ಎಚ್.ಎಂ.ರೇವಣ್ಣ, ಎಸ್.ರವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

  • ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ವಿಶೇಷ ಪ್ಯಾಕೇಜ್ – ಮೋದಿ ನಡೆಗೆ ಸೋನಿಯಾ, ರಾಹುಲ್ ಬೆಂಬಲ

    ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ವಿಶೇಷ ಪ್ಯಾಕೇಜ್ – ಮೋದಿ ನಡೆಗೆ ಸೋನಿಯಾ, ರಾಹುಲ್ ಬೆಂಬಲ

    ನವದೆಹಲಿ: ಕೊರೊನಾ ವೈರಸ್‍ನಿಂದ ದೇಶದಲ್ಲಿ ಆಗುತ್ತಿರುವ ಪರಿಣಾಮವನ್ನು ತಡೆಗಟ್ಟಿ ಜನರಿಗೆ ನೆರವಾಗಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರು ಪುತ್ರ ರಾಹುಲ್ ಗಾಂಧಿಯವರು ಮೆಚ್ಚುಗೆ ಸೂಚಿಸಿದ್ದಾರೆ.

    ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದಾರೆ. ಇದು ಜನರ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೊರಬರಲು 1.70 ಲಕ್ಷ ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ಮೆಚ್ಚಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೊರೊನಾದಿಂದ ಆತಂಕಕೊಳಗಾದ ಜನರಿಗೆ ಹಣಕಾಸಿನ ನೆರವು ಪ್ಯಾಕೇಜ್ ಅನ್ನು ಇಂದು ಸರ್ಕಾರದ ಪ್ರಕಟಣೆ ಮಾಡುವ ಮೂಲಕ ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಈ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು, ದೈನಂದಿನ ಕೂಲಿ ಮಾಡುವವರು, ಕಾರ್ಮಿಕರು, ಮಹಿಳೆಯರು ಮತ್ತು ವೃದ್ಧರಿಗೆ ಭಾರತ ಸರ್ಕಾರವು ಸಾಲ ನೀಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದ ಸೋನಿಯಾ ಗಾಂಧಿ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ, ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದರು.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಕ್ಕಿ ಯೋಜನೆ ಅಡಿ ಈಗಾಗಲೇ 5 ಕೆಜಿ ಅಕ್ಕಿ/ ಗೋಧಿ ನೀಡಲಾಗುತ್ತಿದೆ. ಇದರ ಜೊತೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ವಲಸೆ ಕಾರ್ಮಿಕರು, ನಗರ ಮತ್ತು ಗ್ರಾಮೀಣ ಬಡವವರಿಗೆ, ತಕ್ಷಣದ ಸಹಾಯದ ಅಗತ್ಯವಿರುವ ಬಡವರಿಗೆ ಪ್ಯಾಕೇಜ್ ಸಿದ್ಧವಾಗಿದೆ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದು ನಮ್ಮ ಸರ್ಕಾರ ಉದ್ದೇಶ. ಹೀಗಾಗಿ 1.7 ಲಕ್ಷ ಕೋಟಿ ರೂ. ಮೌಲ್ಯದ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.

    8.69 ಕೋಟಿ ರೂ. ರೈತರ ಖಾತೆಗೆ ಈ ಕೂಡಲೇ ಏಪ್ರಿಲ್ ತಿಂಗಳ 2 ಸಾವಿರ ರೂ. ಹಣವನ್ನು ಹಾಕಲಾಗುವುದು. ನರೇಗಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.

    ಕೇಂದ್ರದ ವಿಶೇಷ ಪ್ಯಾಕೇಜ್‍ನ ಮುಖ್ಯಾಂಶಗಳು
    1. ಕೊರೊನಾ ವೈರಸ್ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ.
    2. ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ 1,000 ರೂ. ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲ.
    3. 3 ತಿಂಗಳ ಕಾಲ ಮಹಿಳಾ ಜನ ಧನ್ ಖಾತೆಗೆ 500 ರೂ. ಹಾಕಲಾಗುವುದು. ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್ಗಳು ಉಚಿತ ವಿತರಣೆ. ಈ ನಿರ್ಧಾರದಿಂದ 8 ಕೋಟಿ ಮಹಿಳೆಯರು ಲಾಭ.
    4. ಮುಂದಿನ ತಿಂಗಳ ಸಂಸ್ಥೆಗಳು ಮತ್ತು ಉದ್ಯೋಗಿಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ತುಂಬಲಿದೆ. 100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂ.ವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇದರ ಲಾಭ ಸಿಗಲಿದೆ.
    5. ಇಪಿಎಫ್ ಯೋಜನೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ.75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ಸಿಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ.75ರಷ್ಟು ಮುಂಗಡ ಮೊತ್ತ;, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.