Tag: Speaker Vishweshwara Hegde Kageri

  • ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

    ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

    ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸಿರುವ ಹೊತ್ತಲ್ಲೇ ಪಕ್ಷಾಂತರ ಪರ್ವ ಮತ್ತೆ ಶುರುವಾಗಿದೆ. ಜೆಡಿಎಸ್‌ (JDS) ಅರಸೀಕೆರೆ (Arsikere) ಶಾಸಕ ಶಿವಲಿಂಗೇಗೌಡ (Sivalinge Gowda) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬೆಂಬಲಿಗರೊಂದಿಗೆ ತೆರಳಿದ ಶಿವಲಿಂಗೇಗೌಡರು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ತಮ್ಮಯ್ಯ ವಿರುದ್ಧ ತಣ್ಣಗಾಗದ ಆಕ್ರೋಶ – ಕಾಫಿನಾಡಲ್ಲಿ ನಿಂತಿಲ್ಲ ಬಂಡಾಯದ ಕೂಗು

    ತಮ್ಮ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್ ನಾಯಕರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಹೋಗದ ಕಾರಣ ಪಕ್ಷ ಬಿಡುವಂತಾಗಿದೆ. ಎಂಎಲ್‌ಸಿ ಎಲೆಕ್ಷನ್‌ನಲ್ಲಿನ ವಿಷಯದಲ್ಲಿ ಆದ ಸಣ್ಣ ಭಿನ್ನಾಭಿಪ್ರಾಯ ರಾಜೀನಾಮೆ ಕೊಡುವಂತಾಗಿದೆ. ಕಾರ್ಯಕರ್ತರ ಅಭಿಪ್ರಾಯದಂತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತಿದ್ದೇನೆ ಎಂದು ತಿಳಿಸಿದರು.

    ರಾಜಕೀಯದಲ್ಲಿ ಯಾರು ಬೇಕಾದರೂ ಪಕ್ಷಾಂತರ ಮಾಡುತ್ತಾರೆ. ಅಣ್ಣ-ತಮ್ಮಂದಿರೇ ಬೇರೆ ಆಗುತ್ತಾರೆ. ನಾನು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಕ್ಕೆ ಅವರು ತಪ್ಪು ತಿಳಿದುಕೊಳ್ಳಬಾರದು. ಎಷ್ಟು ದಿನ ಋಣ ಇತ್ತೋ ಅಷ್ಟು ದಿನ ಇದ್ದೆವು. ಋಣ ತೀರಿತು, ಈಗ ನಮ್ಮ ಕ್ಷೇತ್ರದ ಜನ ಹೇಳಿದಂತೆ ರಾಜೀನಾಮೆ ಕೊಟ್ಟು ಹೋಗಿದ್ದೇವೆ. ಯಾರಾದರೂ ಸವಾಲು ಹಾಕಲಿ, ಏನಾದ್ರೂ ಮಾಡಲಿ. ನಾನು ಸವಾಲು ಹಾಕುವುದಿಲ್ಲ. ಏನೂ ಮಾಡುವುದಿಲ್ಲ. ಎಲ್ಲವನ್ನೂ ಕ್ಷೇತ್ರದ ಜನಕ್ಕೆ ಬಿಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಣುಕಾಚಾರ್ಯಗೆ ಶಾಕ್ – ನೀತಿ ಸಂಹಿತೆ ಉಲ್ಲಂಘನೆ ಕೇಸ್?

    ಕಾಂಗ್ರೆಸ್‌ನಲ್ಲಿ ನನಗೇ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆ ಆಗಲಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬರುವ ನಾಯಕ ನನ್ನ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.

    ಜೆಡಿಎಸ್‌ ತೊರೆದಿದ್ದ ಅರಕಲಗೂಡು ಎ.ಟಿ. ರಾಮಸ್ವಾಮಿ ಶನಿವಾರ ಬಿಜೆಪಿ ಸೇರ್ಪಡೆಗೊಂಡರು. ಇವರ ಬೆನ್ನಲ್ಲೇ ಶಿವಲಿಂಗೇಗೌಡ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ಬಗ್ಗೆಯೂ ಮಾತನಾಡಿದ್ದಾರೆ.

  • ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

    ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

    ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.

    ಈ ಭೇಟಿಯ ವೇಳೆ, ಸ್ಪೀಕರ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತಂತೆ ವಿವರಿಸಿದ್ದಾರೆ. ಅಲ್ಲದೆ ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ.

    ಭೇಟಿ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ಭಾರತದ ಸಂವಿಧಾನ ಕುರಿತ ಚರ್ಚೆ, ಸಂಸದೀಯ ನಡೆವಳಿಕೆಯಲ್ಲಿ ಮೌಲ್ಯಗಳು ಮತ್ತು ತತ್ವ, ಸಿದ್ಧಾಂತಗಳು ಕುಸಿಯುತ್ತಿರುವ ಕುರಿತು ಚರ್ಚಿಸಿದ್ದಾರೆ ಎಂದು ವಿಧಾನಸಭಾಧ್ಯಕ್ಷರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ: ಸ್ಪೀಕರ್​​​ಗೆ ಸಿದ್ದರಾಮಯ್ಯ ಪತ್ರ

    ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ: ಸ್ಪೀಕರ್​​​ಗೆ ಸಿದ್ದರಾಮಯ್ಯ ಪತ್ರ

    ಬೆಂಗಳೂರು: ಕೊರೊನಾ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೋರಿದ್ದಾರೆ.

    ಈ ಸಂಬಂಧ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಝೂಮ್ ತಂತ್ರಾಂಶದ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದ 21 ತಿಂಗಳಲ್ಲಿ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ. ಕೋವಿಡ್ ಸಂದರ್ಭದಲ್ಲೂ ಸುಮಾರು 15ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ಇವುಗಳಿಗೆ ಇದುವರೆಗೂ ಸಹ ಒಂದು ಅಕ್ಷರದ ಉತ್ತರವೂ ಬಂದಿಲ್ಲ. ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು.

    ವಿರೋಧ ಪಕ್ಷವಾಗಿ ನಾವೂ ಸಹ ಜನರ ಜೊತೆ ನಿಂತು ಅವರ ದುಃಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ರಾಜ್ಯದ ಆರೋಗ್ಯ, ಆರ್ಥಿಕ ಮತ್ತು ಕೃಷಿ ವಲಯಗಳಲ್ಲಿ ಏನಾಗುತ್ತಿದೆ? ಎಂದು ತಿಳಿದುಕೊಂಡು ಅವುಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಬೇಕಾದುದು, ಸಲಹೆಗಳನ್ನು ನೀಡಬೇಕಾದುದು ವಿರೋಧ ಪಕ್ಷದ ನಾಯಕನ ಶಾಸನಾತ್ಮಕ ಅಧಿಕಾರ. ವಿಳಂಬ ಮಾಡದೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕಾಗಿರುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿ. ಆದರೆ ಈ ಜವಾಬ್ಧಾರಿಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಹಾಗಾಗಿ ಸರ್ಕಾರವು ಉದ್ದೇಶಪೂರ್ವಕವಾಗಿ ಮಾಹಿತಿ ಕೊಡದೆ ಹಕ್ಕು ಚ್ಯುತಿಯನ್ನುಂಟು ಮಾಡಿದೆ ಎಂಬ ನಿಲುವಿಗೆ ಬರಬೇಕಾದ ಕೃತ್ಯವೆಸಗುತ್ತಿದೆ.

    ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸುವ, ನಿರ್ದೇಶನಗಳನ್ನು ನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ಇದೆ. ಕೆಲವು ಮಾಹಿತಿ ಪಡೆಯುವುದಷ್ಟೇ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಆ ನಮೂನೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗಧಿ ಪಡಿಸಿದ್ದೆ. ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರ್ಕಾರವು ನಿರಾಕರಿಸಿರುವುದರಿಂದ ಅದು ಹಕ್ಕು ಚ್ಯುತಿಯಾಗುವುದಿಲ್ಲವೆ? ಜೊತೆಗೆ ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾರೆ. ಉಳಿದವರು ಬೇಜವಾಬ್ಧಾರಿ ವರ್ತನೆ ತೋರಿದ್ದಾರೆ. ಅವರ ವರ್ತನೆಗೆ ಯಾವ ಶಿಕ್ಷೆ ವಿಧಿಸುತ್ತೀರಿ?

    ಮುಖ್ಯ ಕಾರ್ಯದರ್ಶಿಗಳು ನನಗೆ ಕಳಿಸಿರುವ ಪತ್ರದಲ್ಲಿ 2009 ರ ಸುತ್ತೋಲೆಯನ್ನು ನಮೂದಿಸಿದ್ದಾರೆ. 2009 ರ ಸುತ್ತೋಲೆಯನ್ನು 2016 ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ಸರ್ಕಾರಕ್ಕೆ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ಅಪ್ಲಿಕೇಷನ್ನುಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರವೇನೂ ವ್ಯವಸ್ಥೆ ಮಾಡಬೇಕಾಗಿರಲಿಲ್ಲ. ಸರ್ಕಾರ ಇದಿಷ್ಟನ್ನೂ ಅರ್ಥಮಾಡಿಕೊಳ್ಳದ ಸ್ಥಿತಿ ತಲುಪಿದೆ.

    ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿ ಬರ ಮುಂತಾದ ವಿಚಾರಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರ್ಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿಸುವುದನ್ನು ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ಕ್ರಮವು ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

  • ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    – ಪ್ರತಿ ಸೀಟಿನ ನಡುವೆ ಗ್ಲಾಸ್ ಶೀಟ್ ವ್ಯವಸ್ಥೆ

    ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಕಾಗೇರಿ ಅವರು, ಸೆ. 21ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗುತ್ತೆ. ಕೊರೊನಾ ಹಿನ್ನೆಲೆ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳಿಗೂ ಕೊರೊನಾ ಸೋಂಕು ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

    ಅಧಿವೇಶನ ನಡೆಸುವ ಕುರಿತು ಅನೇಕ ಮಾರ್ಗಸೂಚಿಗಳನ್ನು ಮಾಡಲಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಸಾಮಾಜಿಕ ಅಂತರದಲ್ಲಿ ಸೀಟುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಸನಗಳಿಗೆ ಗ್ಲಾಸ್ ಶೀಟ್ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು, ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಏನು ಕ್ರಮ ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಶಾಸಕರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ನೀಡುವುದು ಸೇರಿದಂತೆ ಎಲ್ಲಾ ಕ್ರಮ ತೆಗೆದುಕೊಳ್ತಿದ್ದೇವೆ. ಅಲ್ಲದೇ ಎಲ್ಲರೂ ಮಾಸ್ಕ್, ಫೇಸ್ ಶೀಲ್ಡ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಎಲ್ಲರಿಗೂ ನಾವು ಮಾಸ್ಕ್, ಫೇಸ್ ಶೀಲ್ಡ್ ನೀಡುತ್ತೇವೆ. ಎಲ್ಲರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.

    ಕಲಾಪ ಎಂದಿನಂತೆ ನಡೆಯಲಿದ್ದು, ಪ್ರಶ್ನೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಪ್ರಶ್ನೆ ಸೇರಿದಂತೆ ಎಲ್ಲಾ ವಿಧಾನಗಳು ಇರುತ್ತೆ. ಈ ಅಧಿವೇಶನದಲ್ಲಿ ಮಂಡಿಸಲು 10 ಹೊಸ ಬಿಲ್‍ಗಳು ನಮ್ಮ ಬಳಿ ಇದ್ದು, ಸುಗ್ರೀವಾಜ್ಞೆ ಹೊರಡಿಸಿರುವ 19 ಬಿಲ್‍ಗಳಿದೆ. ಅಲ್ಲದೇ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಎರಡು ವಿಧೇಯಕ ಸೇರಿದಂತೆ ಒಟ್ಟು 31 ಬಿಲ್ ಈ ಅಧಿವೇಶನದಲ್ಲಿ ಅಂಗೀಕಾರ ಆಗಬೇಕು ಎಂದರು ವಿವರಿಸಿದರು.

    ಸಚಿವರು ಗನ್ ಮ್ಯಾನ್ ಹಾಗೂ ಅವರ ಪಿಎಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿಧಾನಸೌಧದ ಹೊಟೇಲ್ ಹೊರಗೆ ಶಿಫ್ಟ್ ಮಾಡಲಾಗಿದೆ. ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿದಂತೆ ಪತ್ರಕರ್ತರ ಗ್ಯಾಲರಿಗೆ ಸಿಮೀತ ಜನರಿಗೆ ಅವಕಾಶ ನೀಡಲು ವಾರ್ತಾ ಇಲಾಖೆ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.

    ಗ್ಯಾಲರಿಯಲ್ಲಿ ಮೀಡಿಯಾ ಶಿಫ್ಟ್ ಮಾಡೋ ಚಿಂತನೆ ಇದ್ದು, ಯಾವುದೇ ನಿರ್ಣಯ ಮಾಡಿದರೂ ಮಾಧ್ಯಮಗಳ ಸಹಕಾರ ಕೊಡಬೇಕು ಎಂದು ಕಾಗೇರಿ ಅವರು ಮನವಿ ಮಾಡಿದರು. ಅಲ್ಲದೇ ಎಲ್ಲರೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವವರು ಕೂಡ ಟೆಸ್ಟ್ ಮಾಡಿಸುವುದು ಕಡ್ಡಾಯ. ಇಂತಹ ಟೆಸ್ಟ್ ಗಳ ವರದಿ ಶೀಘ್ರವೇ ವರದಿ ಬರುವಂತೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದರು.

    ಸಚಿವರನ್ನು ಭೇಟಿ ಮಾಡುವ ನಿಯೋಗಗಳಿಗೆ ಅಧಿವೇಶನ ಜಾಗದಲ್ಲಿ ಈ ಬಾರಿ ಅವಕಾಶ ನೀಡಲಾಗುವುದಿಲ್ಲ. ಸಚಿವರನ್ನು ಶಾಸಕರ ಭವನದಲ್ಲಿ ನಿಯೋಗಗಳು ಭೇಟಿ ಮಾಡಬೇಕು ಅಥವಾ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಬೇಕು ಎಂದು ಸೂಚಿಸಿದರು.

    ವಿಧಾನಸೌಧದಲ್ಲಿ ಧರಣಿ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಕೊರೊನಾ ಇದೆ ಗೊತ್ತಿಲ್ಲ. ಹೇಗೆ ಪ್ರತಿಭಟನೆ ಮಾಡಬೇಕು ಅಂತಾ ಅವರೇ ನಿರ್ಧಾರ ಮಾಡಬೇಕು. ನಾವು ಹೀಗೆ ಮಾಡಿ ಎಂದು ಹೇಳಲು ಆಗೋದಿಲ್ಲ ಎಂದರು. ಅಲ್ಲದೇ 70 ವರ್ಷ ಮೇಲ್ಪಟ್ಟವರಿಗೆ ಅಧಿವೇಶನಕ್ಕೆ ಅವಕಾಶ ವಿಚಾರವಾಗಿ, ವಯಸ್ಸು ಹೆಚ್ಚಳ ಇರುವವರ ಪಟ್ಟಿ ಮಾಡಲಾಗಿದೆ. ಅವರಿಗೆ ವಿಶೇಷ ಕಾಳಜಿಯನ್ನು ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.