Tag: Speaker Ramesh Kumar

  • ಸ್ಪೀಕರ್ ವಿಧಾನಸಭೆಗೆ ಮಾತ್ರ ಸುಪ್ರೀಂ: ರಮೇಶ್ ಕುಮಾರ್‌ಗೆ ಬಾಲಚಂದ್ರ ಟಾಂಗ್

    ಸ್ಪೀಕರ್ ವಿಧಾನಸಭೆಗೆ ಮಾತ್ರ ಸುಪ್ರೀಂ: ರಮೇಶ್ ಕುಮಾರ್‌ಗೆ ಬಾಲಚಂದ್ರ ಟಾಂಗ್

    ಬೆಂಗಳೂರು: ಸ್ಪೀಕರ್ ಕರ್ನಾಟಕ ವಿಧಾನಸಭೆಗೆ ಮಾತ್ರ ಸುಪ್ರೀಂ. ಆದರೆ ಸುಪ್ರೀಂಕೋರ್ಟ್ ದೇಶಕ್ಕೆ ಸುಪ್ರೀಂ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಶಾಸಕರು, ಅನರ್ಹತೆ ಬಗ್ಗೆ 224 ಶಾಸಕರು ಹೆದರುವ ಅಗತ್ಯವಿಲ್ಲ. ಕಾನೂನಿನ ಅನ್ವಯ ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್ ಅವರಿಗೆ ಇದೆ. ಆದರೆ ಸ್ಪೀಕರ್ ಕೈಗೊಂಡ ಅನರ್ಹತೆ ಆದೇಶ ರದ್ದು ಮಾಡಲು ಸುಪ್ರೀಂ ಕೋರ್ಟ್ ಗೆ ಅಧಿಕಾರವಿದೆ. ಹೀಗಾಗಿ ಯಾವ ಶಾಸಕರು ಕೂಡ ಅನರ್ಹತೆ ಬಗ್ಗೆ ಭಯಪಡಬೇಡಿ ಎಂದು ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ.

    ಬಿಜೆಪಿ ಹೈಕಮಾಂಡ್‍ನಿಂದ ಬುಲಾವ್ ಬಂದಿದ್ದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರು ಕೂಡ ದೆಹಲಿಗೆ ತೆರಳುತ್ತಿದ್ದು, ಪಕ್ಷದ ನಾಯಕರಿಗೆ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • 10 ಮಂದಿಯ ಜೊತೆ ನಮ್ಮ ಅರ್ಜಿಯನ್ನೂ ಪರಿಗಣಿಸಿ – ಸುಪ್ರೀಂ ಮೆಟ್ಟಿಲೇರಿದ ಐವರು ಶಾಸಕರು

    10 ಮಂದಿಯ ಜೊತೆ ನಮ್ಮ ಅರ್ಜಿಯನ್ನೂ ಪರಿಗಣಿಸಿ – ಸುಪ್ರೀಂ ಮೆಟ್ಟಿಲೇರಿದ ಐವರು ಶಾಸಕರು

    ಬೆಂಗಳೂರು: ಮೈತ್ರಿ ನಾಯಕತ್ವದ ಮೇಲೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿ ಮುಂಬೈನಲ್ಲಿದ್ದ 10 ಶಾಸಕರು ರಾಜೀನಾಮೆಯನ್ನು ಪರಿಗಣಿಸುವಂತೆ ಸೂಚನೆ ನೀಡಲು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಐವರು ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗಾಗಲೇ 10 ಶಾಸಕರ ರಾಜೀನಾಮೆ ಕುರಿತ ಅಫಿಡವಿಟ್ ಸಲ್ಲಿಕೆ ಮಾಡಿದ್ದ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಸದ್ಯ ಕಾಂಗ್ರೆಸ್ ಶಾಸಕರಾದ ರೋಷನ್ ಬೇಗ್, ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ್, ಆನಂದ್ ಸಿಂಗ್, ಮುನಿರತ್ನ ಅವರು ಕೂಡ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿರುವುದರಿಂದ ಇವರ ಅರ್ಜಿಯನ್ನು ಇದೇ ವೇಳೆ ಪರಿಗಣಿಸುವ ಸಾಧ್ಯತೆ ಇದೆ.

    ಶಾಸಕರ ಮನವಿಯೇನು?: ಈ ಹಿಂದೆ 10 ಶಾಸಕರು ತಮ್ಮ ಅಫಿಡವಿಟ್‍ನಲ್ಲಿ ಪ್ರಸ್ತಾಪಿಸಿದ್ದ ಅಂಶಗಳನ್ನೇ ಈ ಐವರು ಕೂಡ ಪ್ರಸ್ತಾಪ ಮಾಡಿದ್ದಾರೆ. ನಿಯಮಾವಳಿಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆದರೆ ಇದುವರೆಗೂ ನಮ್ಮ ರಾಜೀನಾಮೆಯನ್ನು ಪರಿಗಣಿಸಿಲ್ಲ. ಅನಗತ್ಯವಾಗಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕಾಗಿ ಸ್ವ-ಇಚ್ಛೆಯಿಂದಲೇ ರಾಜೀನಾಮೆ ಸಲ್ಲಿಸಿದ್ದೇವೆ. ನಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಅವರಿಗೆ ನಿರ್ದೇಶಿಸಬೇಕು ಎಂದು ಅಫಿಡವಿಟ್‍ನಲ್ಲಿ ಮನವಿ ಮಾಡಿದ್ದಾರೆ.

    ಅತೃಪ್ತ ನಾಯಕರ ಮನವೊಲಿಕೆಗೆ ಈಗಾಗಲೇ ದೋಸ್ತಿ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿರುವುದರಿಂದ ಶಾಸಕರ ನಡೆ ಅಚ್ಚರಿ ಮೂಡಿಸಿದೆ. ಸಚಿವ ಎಂಟಿಬಿ ನಾಗರಾಜ್ ಅವರು ಮನವೊಲಿಕೆ ಸಂಬಂಧ ಯಾವುದೇ ಸ್ಪಷ್ಟ ಆಶ್ವಾಸನೆಯನ್ನು ನೀಡಿಲ್ಲ. ಪರಿಣಾಮ ಮಂಗಳವಾರ ನ್ಯಾಯಾಲಯ ಯಾವ ಅಭಿಪ್ರಾಯ ವ್ಯಕ್ತಪಡಿಸಲಿದೆ ಎಂಬುದು ಕೂಡ ತೀವ್ರ ಕುತೂಹಲ ಮೂಡಿಸಿದೆ. 10 ಶಾಸಕರ ಜೊತೆ ಮತ್ತೆ ಈ ಶಾಸಕರ ಅರ್ಜಿಯನ್ನು ಪರಿಗಣಿಸುತ್ತಾ ಎಂಬುದು ಕೂಡ ಕುತೂಹಲ ಮೂಡಿಸಿದೆ. ಆದರೆ ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮಾತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ರಾಜೀನಾಮೆ ಅಂಗೀಕಾರವೂ ಇಲ್ಲ, ಅನರ್ಹತೆಯೂ ಇಲ್ಲ – ವಾದ, ಪ್ರತಿವಾದ ಹೇಗಿತ್ತು?

    ರಾಜೀನಾಮೆ ಅಂಗೀಕಾರವೂ ಇಲ್ಲ, ಅನರ್ಹತೆಯೂ ಇಲ್ಲ – ವಾದ, ಪ್ರತಿವಾದ ಹೇಗಿತ್ತು?

    ನವದೆಹಲಿ: ಅತೃಪ್ತ ಶಾಸಕರು ಎಬ್ಬಿಸಿದ ಬಿರುಗಾಳಿಯಲ್ಲಿ ತೂರಿಬಂದ ರಾಜೀನಾಮೆ ಚೆಂಡು ಸುಪ್ರೀಂಕೋರ್ಟ್ ಅಂಗಳಕ್ಕೆ ಬಿದ್ದಿದೆ. ರೆಬೆಲ್ ಶಾಸಕರು ತಮ್ಮದೆ ಪಕ್ಷದ ನಾಯಕರು ಒಡ್ಡಿದ ಚಕ್ರವ್ಯೂಹ ಭೇದಿಸಲು ಭಾರೀ ಕಸರತ್ತು ನಡೆಸಿದ್ದಾರೆ.

    ನಮ್ಮ ರಾಜೀನಾಮೆ ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸ್ತಿದ್ದಾರೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ, ಸ್ಪೀಕರ್, ಸಿಎಂ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾ.ರಂಜನ್ ಗೊಗೋಯ್, ದೀಪಕ್ ಗುಪ್ತಾ, ಅನಿರುದ್ಧ್ ಬೋಸ್ ಅವರ ತ್ರಿಸದಸ್ಯ ಪೀಠದ ಎದುರು ಸ್ಪೀಕರ್ ಪರವಾಗಿ ಅಭಿಷೇಕ್ ಸಿಂಘ್ವಿ, ಸಿಎಂ ಪರ ರಾಜೀವ್ ಧವನ್ ಹಾಗೂ ಅತೃಪ್ತರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಮೂವರು ವಕೀಲರು ಸುಮಾರು 1 ಗಂಟೆಗಳ ವಾದ ಆಲಿಸಿದ ತ್ರಿಸದಸ್ಯ ಪೀಠ ಮಧ್ಯಾಹ್ನ 12.55ರ ಹೊತ್ತಿಗೆ ಮಧ್ಯಂತರ ಆದೇಶ ಪ್ರಕಟಿಸಿತು.

    ಅತೃಪ್ತರ ಪರ ಮೊದಲಿಗೆ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು, ಸ್ಪೀಕರ್ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದರು. ಇದಕ್ಕೆ ಸ್ಪೀಕರ್ ಪರ ವಕೀಲರಾದ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ, ರೋಹ್ಟಗಿ ಅವರಿಗೆ ವಾದ ಮಂಡಿಸಲು ಜಡ್ಜ್ ಅನುವು ಮಾಡಿಕೊಟ್ಟರು.

    ಅತೃಪ್ತರ ಪರ ವಕೀಲರ ವಾದ ಏನು?
    ಸ್ಪೀಕರ್ ಅವರು ಎರಡು ಕುದುರೆಗಳ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ನನಗೆ ಆದೇಶ ಕೊಡುವಂತೆ ಇಲ್ಲ ಎನ್ನುತ್ತಾರೆ. ಕೋರ್ಟ್ ಆದೇಶದ ಅನ್ವಯ ಶಾಸಕರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ. ನ್ಯಾಯಾಂಗ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 8 ಶಾಸಕರ ರಾಜೀನಾಮೆ ನಂತರ ಉದ್ದೇಶಪೂರ್ವಕವಾಗಿಯೇ ಅನರ್ಹತೆ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಕೂಡಲೇ ಸ್ಪೀಕರ್ ಕೈಗೊಂಡಿರುವ ಅನರ್ಹತೆ ಅರ್ಜಿಯ ವಿಚಾರಣೆಗೆ ತಡೆ ನೀಡಬೇಕು. ಸಂವಿಧಾನದ ವಿಧಿ 32 ಅನ್ವಯ ಶಾಸಕರಿಗೆ ರಿಲೀಫ್ ನೀಡಬೇಕು ಎಂದು ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು.

    ಮುಕುಲ್ ರೋಹ್ಟಗಿ ಅವರ ವಾದ ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು, ಸುಪ್ರೀಂಕೋರ್ಟ್ ಪರಮಾಧಿಕಾರವನ್ನು ಸ್ಪೀಕರ್ ಪ್ರಶ್ನಿಸುತ್ತಿದ್ದಾರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಇಲ್ಲ ಸರ್. ಆ ರೀತಿ ಏನಿಲ್ಲ. ರಮೇಶ್ ಕುಮಾರ್ ಅವರು ಹಾಗೆ ಹೇಳಿಲ್ಲ ಎಂದು ತಮ್ಮ ವಾದವನ್ನು ಆರಂಭಿಸಿದರು.

    ಸ್ಪೀಕರ್ ಪರ ವಕೀಲರ ವಾದ ಏನು?
    1974ರ ತಿದ್ದುಪಡಿ ಅನ್ವಯ ಶಾಸಕರ ರಾಜೀನಾಮೆಯನ್ನು ವಿಚಾರಣೆ ಮಾಡಿಯೇ ಸ್ಪೀಕರ್ ಅಂಗೀಕರಿಸಬೇಕು. ಅನರ್ಹತೆ ಅರ್ಜಿಯ ವಿಚಾರಣೆ ಶುರುವಾದ ಮೇಲೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಅನರ್ಹತೆಯ ತೂಗುಗತ್ತಿಯಿಂದ ಪಾರಾಗುವ ಸಲುವಾಗಿಯೇ ಈ ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೋ? ಇಲ್ಲವೋ ಎಂದು ಸ್ಪೀಕರ್ ಪರಿಶೀಲಿಸಬೇಕು. ಹೀಗಾಗಿ ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸಿ ಅಂತ ಗಡುವು ವಿಧಿಸಬೇಡಿ. ರಮೇಶ್ ಕುಮಾರ್ ಅವರ ವಿರುದ್ಧ ಅತೃಪ್ತರು ಮಾಡಿರುವ ಆರೋಪ ಸರಿಯಲ್ಲ. ಸಂವಿಧಾನದ ಪರಿಧಿಯಲ್ಲಿಯೇ ಸ್ಪೀಕರ್ ಕೆಲಸ ಮಾಡುತ್ತಿದ್ದಾರೆ. ಅವರು ಸದನದ ಹಿರಿಯರಿದ್ದಾರೆ. ಅವರಿಗೆ ಸಂವಿಧಾನದ ಅರಿವಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಸಿಎಂ ಪರ ವಕೀಲರ ವಾದ ಏನಿತ್ತು?
    ಸರ್ಕಾರ ಹಗರಣಗಳಲ್ಲಿ ಮುಳುಗಿದೆ ಎಂದು ಅತೃಪ್ತರು ಹೇಳಿರುವುದು ಸುಳ್ಳು. ರಾಜೀನಾಮೆ ನೀಡಿದ ಶಾಸಕರೊಬ್ಬರ ಹೆಸರು ಹಗರಣವೊಂದರಲ್ಲಿ ಕೇಳಿಬಂದಿದೆ. ಇದು ರಾಜಕೀಯ ಪ್ರೇರಿತ ದೂರು. ಇದನ್ನು ಮಾನ್ಯ ಮಾಡಬೇಡಿ. ಅತೃಪ್ತ ಶಾಸಕರ ದೂರಿನ ಸಂಬಂಧ ಯಾವುದೇ ತೀರ್ಪು ಹೊರಡಿಸಬೇಡಿ. ಸ್ಪೀಕರ್ ಗೆ ರಾಜೀನಾಮೆ ಅರ್ಜಿಗಳನ್ನು ಇತ್ಯರ್ಥಪಡಿಸಲು ಗಡುವು ನೀಡಬೇಡಿ. ಹರ್ಯಾಣ ಪ್ರಕರಣದಲ್ಲಿ ಸ್ಪೀಕರ್ ಗೆ ಹೈಕೋರ್ಟ್ 4 ತಿಂಗಳು ಗಡುವು ನೀಡಿತ್ತು ಎಂದು ರಾಜೀವ್ ಧವನ್ ಅವರು ಪ್ರಸ್ತಾಪಿಸಿದರು.

    ಈ ಮೂವರ ವಾದ ಆಲಿಸಿದ ಸಿಜೆ ಗೊಗೊಯ್ ನೇತೃತ್ವದ ಪೀಠ, ಶಾಸಕರ ಅನರ್ಹತೆ ಬಗ್ಗೆ ಉಲ್ಲೇಖಿಸಲಾಗಿರುವ ಸಂವಿಧಾನದ 190 ವಿಧಿ ಮತ್ತು ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಇರುವ 361ನೇ ವಿಧಿಯ ಬಗ್ಗೆ ಇಲ್ಲಿ ಹಲವು ಪ್ರಶ್ನೆಗಳು ಎದ್ದಿದೆ. ಸ್ಪೀಕರ್ ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬಹುದೋ. ಬೇಡವೋ ಎಂಬ ಪ್ರಶ್ನೆ ಎದ್ದಿದೆ. ಸಾಂವಿಧಾನಿಕ ಪೀಠದಲ್ಲಿ ಈ ಪ್ರಕರಣದ ವಿಚಾರಣೆಯ ಅಗತ್ಯತೆ ಇದೆಯಾ ಅಂತ ಪರಿಶೀಲಿಸಬೇಕಿದೆ. ಸ್ಪೀಕರ್ ಶಾಸಕರ ರಾಜೀನಾಮೆ, ಅನರ್ಹತೆ ವಿಚಾರಣೆ ಕೈಗೊಳ್ಳಬಾರದು. ಮಂಗಳವಾರದವರೆಗೂ ಸ್ಪೀಕರ್ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ಹೊರಡಿಸಿತು.

  • ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ – ಸ್ಪೀಕರ್ ಮಾರ್ಮಿಕ ನುಡಿ

    ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ – ಸ್ಪೀಕರ್ ಮಾರ್ಮಿಕ ನುಡಿ

    ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡಲು ವಿಳಂಬ ನೀತಿ ಮಾಡುತ್ತಿದ್ದಾರೆ ಎಂಬ ಸ್ಪೀಕರ್ ಮೇಲಿನ ಆರೋಪಕ್ಕೆ ರಮೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ. ಹಾಗೆಯೇ ನನ್ನ ಬಗ್ಗೆ ಏನೂ ಬಿಡಿ ಎಂದು ಹೇಳಿದ್ದಾರೆ.

    ಸ್ಪೀಕರ್ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಸಂವಿಧಾನವಷ್ಟೇ ಮುಖ್ಯ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಎಲ್ಲಿಂದ ಒತ್ತಡ ಬಂದರೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇನ್ನು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿ, ದೇಶದ ಉಳಿವಿಗಾಗಿ ನ್ಯಾಯಾಂಗ ಮತ್ತು ಶಾಸಕಾಂಗ ಕಾರ್ಯ ನಿರ್ವಹಿಸುತ್ತಿದೆ. ನಿಯಮಗಳ ಅನ್ವಯವೇ ನಾನು ಕೂಡ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ ಎಂದರು.

    ಇದೇ ವೇಳೆ ವಿರೋಧ ಪಕ್ಷಗಳು ಸ್ಪೀಕರ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಗಾಂಧಿಜೀ ಅವರನ್ನು ಉದಾಹರಣೆ ಕೊಟ್ಟರು. ಗಾಂಧೀಜಿ ಅವರನ್ನೇ ಗುಂಡಿಕ್ಕಿ ಕೊಲ್ಲಲಿಲ್ಲವೇ? ಹಾಗೆಯೇ ನನ್ನ ಬಗ್ಗೆ ಏನೂ ಬಿಡಿಯೆಂದು ಮಾರ್ಮಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು.

  • ಇಂದು ಮೂವರು ಅತೃಪ್ತ ಶಾಸಕರ ವಿಚಾರಣೆ

    ಇಂದು ಮೂವರು ಅತೃಪ್ತ ಶಾಸಕರ ವಿಚಾರಣೆ

    ಬೆಂಗಳೂರು: ಇಂದು ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಲ್ಲಿ ಮೂವರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

    ರಾಜೀನಾಮೆ ಕ್ರಮ ಬದ್ಧವಾಗಿರುವ ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್ ಮತ್ತು ನಾರಾಯಣಗೌಡ ಈ ಮೂವರು ವಿಚಾರಣೆಗೆ ಬರಬೇಕಿದೆ. ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಸ್ಪೀಕರ್ ವಿಚಾರಣೆಯನ್ನು ನಡೆಸಲಿದ್ದಾರೆ.

    ಕ್ರಮಬದ್ಧವಾಗಿ ಸಲ್ಲಿಸಿರುವ ಈ ಮೂವರು ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಯಾವ ರೀತಿ ವಿಚಾರಣೆ ಮಾಡಿ ರಾಜೀನಾಮೆಯನ್ನು ಅಂಗೀಕಾರ ಮಾಡುತ್ತಾರೋ ಅಥವಾ ಇನ್ನಷ್ಟು ದಿನ ಕಾಯಿಸುತ್ತಾರೋ ಅನ್ನೋದರ ಮೇಲೆ ಸಮ್ಮಿಶ್ರ ಸರ್ಕಾರ ಅಳಿವು ಉಳಿವು ನಿಂತಿದೆ ಎಂದು ಹೇಳಲಾಗುತ್ತದೆ.

    ಮೊದಲಿಗೆ ಜುಲೈ 6 ಶನಿವಾರ ರಾಜೀನಾಮೆ ಸಲ್ಲಿಕೆಯಾಗಿತ್ತು. ಆದರೆ ಭಾನುವಾರ ರಜೆ, ಸೋಮವಾರ ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸ್ಪೀಕರ್ ರಜೆಯಲ್ಲಿದ್ದರು. ಮಂಗಳವಾರ ರಾಜೀನಾಮೆ ಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಸಿ ಸರಿಯಾಗಿ ರಾಜೀನಾಮೆ ಸಲ್ಲಿಸಲಿಲ್ಲ. ಮತ್ತೆ ಬಂದು ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು.

    ಇತ್ತ ತಾವು ನೀಡಿದ್ದ ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದರು. ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುಪ್ರೀಂ ನಿರ್ದೇಶನದಂತೆ 10 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಅತೃಪ್ತ ಶಾಸಕರ ಕೇಸ್ ಹೊಸ ತೀರ್ಪಿಗೆ ನಾಂದಿಯಾಗುತ್ತಾ ಎಂಬುದನ್ನು ಕಾದು ನೋಡಬೇಕು.

  • ಅಧಿವೇಶನಕ್ಕೆ ಹಾಜರಾಗುವಂತೆ ಶಾಸಕರಿಗೆ ವಿಪ್ ಜಾರಿ – ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗುತ್ತಾ?

    ಅಧಿವೇಶನಕ್ಕೆ ಹಾಜರಾಗುವಂತೆ ಶಾಸಕರಿಗೆ ವಿಪ್ ಜಾರಿ – ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗುತ್ತಾ?

    ಬೆಂಗಳೂರು: ಶುಕ್ರವಾರದಿಂದ ಅಧಿವೇಶನ ಆರಂಭವಾಗಲಿದ್ದು ದೋಸ್ತಿ ಸರ್ಕಾರದ ಎಲ್ಲ ಶಾಸಕರಿಗೆ ವಿಪ್ ಜಾರಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

    15ನೇ ವಿಧಾನಸಭೆಯ 4ನೇ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಸರ್ಕಾರ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ಅಲ್ಲದೇ ಗೈರು ಹಾಜರಾದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ-10 (ಪಕ್ಷಾಂತರ ನಿಷೇಧ ಕಾಯ್ದೆ)ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.

    ಅತೃಪ್ತ ಶಾಸಕರು ಇಂದು ಸಂಜೆಯಷ್ಟೇ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಲಾಗಿದ್ದು, ಸ್ಪೀಕರ್ ಅವರು ರಾಜೀನಾಮೆ ಸ್ವೀಕರಿಸಿದ್ದಾರೆ. ಆದರೆ ಸದ್ಯ ವಿಪ್ ಜಾರಿ ಆಗಿರುವುದರಿಂದ ಯಾವ ರೀತಿ ವಿಪ್ ನೀಡುತ್ತಾರೆ ಹಾಗೂ ಅತೃಪ್ತ ಶಾಸಕರು ಸದನಕ್ಕೆ ಗೈರಾದರೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
    ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

    ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸುವುದಿಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

    ವಿಪ್ ಅನ್ವಯವಾಗುತ್ತಾ?
    ರಾಜೀನಾಮೆ ಅಂಗೀಕಾರವಾಗದ ಶಾಸಕರಿಗೆ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಇನ್ನು ಗೊಂದಲದಲ್ಲಿದೆ. ರಾಜೀನಾಮೆ ಅಂಗೀಕಾರವಾಗುವವರೆಗೂ ವಿಪ್ ಅನ್ವಯವವಾಗುತ್ತದೆ ಎಂದು ಕೆಲ ಕಾನೂನು ಪಂಡಿತರು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಸ್ಪೀಕರ್ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ನಾವು ರಾಜೀನಾಮೆಯನ್ನು ನೀಡಿದ್ದರೂ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಲು ತಡ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ದೂರು ನೀಡಿದ್ದಾರೆ. ಹೀಗಾಗಿ ಈ ಅರ್ಜಿಯ ವಿಚಾರಣೆ ಶುಕ್ರವಾರ ನ್ಯಾಯಾಲಯದಲ್ಲಿ ಬರುವ ಕಾರಣ ಏನು ನಡೆಯಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

  • ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸಲ್ಲ – ಹಿಂದಿನ ನಿಲುವಿಗೆ ಬದ್ಧರಾದ ಸ್ಪೀಕರ್

    ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸಲ್ಲ – ಹಿಂದಿನ ನಿಲುವಿಗೆ ಬದ್ಧರಾದ ಸ್ಪೀಕರ್

    ಬೆಂಗಳೂರು: ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸುವುದಿಲ್ಲ. ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ನಾನು ವಿಳಂಬ ಮಾಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಮುಂಬೈನಿಂದ ಓಡೋಡಿ ಬಂದ 11 ಶಾಸಕರು ರಾತ್ರಿ ಸ್ಪೀಕರ್ ಕಚೇರಿಗೆ ಬಂದು ತಮ್ಮ ಕೈ ಬರಹದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಿದ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಇಲ್ಲಿಯವರೆಗೆ ನಡೆದ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರನ್ನು ಉಳಿಸುವುದು ಕಳುಹಿಸುವುದು ನನ್ನ ಕೆಲಸ ಅಲ್ಲ. 40 ವರ್ಷದಿಂದ ಸಾರ್ವಜನಿಕರ ಜೀವನದಲ್ಲಿ ಇದ್ದೇನೆ. ಆದರೆ ಕೆಲ ಮಾಧ್ಯಮಗಳ ವರದಿಗಳು ನನಗೆ ಬೇಸರ ತಂದಿದೆ. ನನ್ನ ಅನುಮಾನಗಳನ್ನು ಬಗೆ ಹರಿಸಿಕೊಳ್ಳಬೇಕಿದೆ. ಈ ಬಗ್ಗೆ ಇಡೀ ರಾತ್ರಿ ಚಿಂತನೆ ನಡೆಸುತ್ತೇನೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

    ಶನಿವಾರ ಜುಲೈ 6 ರಂದು ಶಾಸಕರು ಕಚೇರಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಆದರೆ ಈ ಬಗ್ಗೆ ನನಗೆ ಮೊದಲು ಮೊಬೈಲ್ ಕರೆ ಅಥವಾ ಪತ್ರದ ಮೂಲಕ ಮಾಹಿತಿ ನೀಡಿರಲಿಲ್ಲ. ನಾನು ಅವರನ್ನು ಬರುವುದನ್ನು ನೋಡಿ ಓಡಿ ಹೋಗಿರಲಿಲ್ಲ. 13 ಶಾಸಕರ ರಾಜೀನಾಮೆ ಪತ್ರದಲ್ಲಿ 8 ಶಾಸಕರ ರಾಜೀನಾಮೆ ನಿಯಮಗಳ ಅನ್ವಯ ಸಲ್ಲಿಕೆ ಆಗಿರಲಿಲ್ಲ. ಆದ್ದರಿಂದಲೇ ಅವರಿಗೆ ಮತ್ತೊಂದು ಅವಕಾಶ ನೀಡಿ ರಾಜೀನಾಮೆ ನೀಡಲು ಸೂಚನೆ ನೀಡಿದ್ದೆ ಎಂದು ತಿಳಿಸಿದರು.

    ಉಳಿದ ರಾಜೀನಾಮೆಗಳು ಸಹಜ, ಸ್ವಯಂ ಪ್ರೇರಿತವಾಗಿದೆಯೇ ಎಂಬುದನ್ನು ವಿಚಾರಣೆ ಮಾಡುವುದು ನನ್ನ ಹೊಣೆ. ಜುಲೈ 12 ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶಾಸಕರಿಗೆ ಸಂಜೆಯಿಂದ ಸಂದರ್ಶನಕ್ಕೆ ಅವಕಾಶ ನೀಡಿದ್ದೇನೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಾನು ಯಾರ ಒತ್ತಡಕ್ಕೂ ಮಣಿದು ಶಾಸಕರ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದಲ್ಲಿ ನಿಯಮಗಳನ್ನು ಪಾಲನೆ ಮಾಡಿ ರಾಜೀನಾಮೆ ಅಂಗೀಕರಿಸುತ್ತೇನೆ ಎಂದರು.

    ಈಗಾಗಲೇ ಇತಿಹಾಸದಲ್ಲಿ ಹಲವು ಬಾರಿ ಶಾಸಕರು ಮಂತ್ರಿಗಿರಿಗಾಗಿಯೇ ಪಕ್ಷಾಂತರ ಮಾಡಿದ್ದಾರೆ. ಇದಕ್ಕೆ ತಡೆ ನೀಡಲು ರಾಜೀವ್ ಗಾಂಧಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಸ್ವಚ್ಛ ರಾಜಕಾರಣ ದೇಶಕ್ಕೆ ನೀಡಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು ಎಂದು ಕೆಲ ಗಣ್ಯರ ಹೇಳಿಕೆಗಳನ್ನು ಸ್ಪೀಕರ್ ಪ್ರಸ್ತಾಪ ಮಾಡಿದರು. ನನಗೆ 100 ವರ್ಷ ಬದುಕುವ ಆಸೆ ಇಲ್ಲ, ಈಗ 70 ವರ್ಷ ಆಗಿದ್ದು ನೆಮ್ಮದಿಯಿಂದ ಸಾವು ಬಯಸುತ್ತೇನೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆದೇಶ ಪಡೆದು ಸ್ಪೀಕರ್ ಭೇಟಿಗೆ ಆಗಮಿಸಿದ್ದಾರೆ. ಆದರೆ ನನ್ನನ್ನು ಭೇಟಿ ಮಾಡಲು ನ್ಯಾಯಾಲಯದ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸುತ್ತೇನೆ ಸತ್ಯವನ್ನು ವರದಿ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ನಾನು ನಿಯಮಗಳನ್ನು ಪಾಲಿಸದೆ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದರು.

    ನಾನು ಇಂದು ಶಾಸಕ ರಾಜೀನಾಮೆ ಸ್ವೀಕರಿಸಿದ್ದು, ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೆಲವರು ಅಡ್ಡಿ ಪಡಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಈ ಬಗ್ಗೆ ನನಗೆ ಶಾಸಕರು ಮಾಹಿತಿ ನೀಡಿದ್ದರೆ ನಾನು ರಕ್ಷಣೆ ನೀಡುತ್ತಿದೆ. ಈವರೆಗಿನ ಎಲ್ಲಾ ಮಾಹಿತಿಯನ್ನು ನಾನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದೇನೆ. ಅಲ್ಲದೇ ಇಂದಿನ ಘಟನೆಯ ಬಗ್ಗೆ ಸಂಪೂರ್ಣ ಚಿತ್ರೀಕರಣ ಮಾಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾನು ಕರ್ನಾಟಕ ಜನರಿಗೆ ಮತ್ತು ಸಂವಿಧಾನಕ್ಕೆ ಮಾತ್ರ ಅಧೀನವಾಗಿರುತ್ತೇನೆ ಎಂದರು.

    ಶುಕ್ರವಾರದಿಂದ ಅಧಿವೇಶನ ನಡೆಯಲಿದೆ ಹಣಕಾಸು ಬಿಲ್ ಪಾಸ್ ಆಗಬೇಕಿದೆ, ಶಾಸಕರಿಗೆ ವಿಪ್ ಜಾರಿಯಾಗಿದೆ ಹೀಗಾಗಿ ಸ್ಪೀಕರ್ ಅವರಿಗೆ ಜವಾಬ್ದಾರಿ ಏನು ಎಂದು ಪ್ರಶ್ನೆ ಕೇಳಿದ್ದಕ್ಕೆ ನಮಗೆ ಯಾವುದೇ ಜವಾಬ್ದಾರಿ ಇಲ್ಲ. ಸರಿಯಾದ ಸಮಯಕ್ಕೆ ಬೆಲ್ ಹೊಡೆಯುವುದು ಅಜೆಂಡಾ ತಯಾರಿಸುವುದು, ಮೃತರಾದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರುವುದು ಅಷ್ಟೇ ಕೆಲಸ ಎಂದು ಉತ್ತರಿಸಿದರು.

    ರಾಜೀನಾಮೆ ಕೊಟ್ಟ ಅತೃಪ್ತರು:
    ಗೋಕಾಕ್‍ನ ರಮೇಶ್ ಜಾರಕಿಹೊಳಿ, ಹಿರೇಕೆರೂರುನ ಬಿ.ಸಿ. ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಟಳ್ಳಿ, ಹುಣಸೂರುನ ಎಚ್. ವಿಶ್ವನಾಥ್, ರಾಜರಾಜೇಶ್ವರಿ ನಗರದ ಮುನಿರತ್ನ, ಕೆ.ಆರ್.ಪೇಟೆಯ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯ, ಯಶವಂತಪುರದ ಎಸ್.ಟಿ ಸೋಮಶೇಖರ್, ಕೆ.ಆರ್. ಪುರಂನ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ.

    ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ, ವಿಜಯನಗರದ ಆನಂದ ಸಿಂಗ್, ಶಿವಾಜಿನಗರದ ರೋಷನ್ ಬೇಗ್ ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿದೆ ಎಂದು ಈ ಹಿಂದೆ ಸ್ಪೀಕರ್ ತಿಳಿಸಿದ್ದರು.

  • ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?

    ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?

    ಬೆಂಗಳೂರು: ಇಂದು ಸಂಜೆ 6 ಗಂಟೆಯ ಒಳಗಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ನಿರ್ಧಾರ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ನಾನು ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇಂದು ತುರ್ತು ವಿಚಾರಣೆ ನಡೆಸುವುದಿಲ್ಲ. ಶುಕ್ರವಾರ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದೆ.

    ಸ್ಪೀಕರ್ ವಾದವೇನು?
    ಸ್ಪೀಕರ್ ಆಗಿರುವ ನನಗೆ ಗಡುವು ಕೊಟ್ಟು ನೀವು ಆದೇಶ ಕೊಡಲು ಬರುವುದಿಲ್ಲ. ಸ್ಪೀಕರ್ ಆಗಿ ನನಗೆ ಸಾಂವಿಧಾನಿಕ ಕರ್ತವ್ಯಗಳಿದ್ದು, ಸಾಂವಿಧಾನಿಕ ಮತ್ತು ವಿಧಾನಸಭೆಯ ನಿಯಮಗಳನ್ನು ಪಾಲಿಸಲೇಬೇಕಿದೆ. ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೋ? ಬಲವಂತವೋ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಅತೃಪ್ತ ಶಾಸಕರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತೆ ಅರ್ಜಿಯ ಪರಿಶೀಲನೆ ಕೆಲಸ ಬಾಕಿ ಇದೆ. ಹೀಗಾಗಿ ಅನರ್ಹತೆಯ ಅರ್ಜಿ ಪರಿಶೀಲನೆ ಸಮಯವಕಾಶ ಬೇಕಾಗುತ್ತದೆ. ಹೀಗಾಗಿ ಅತೃಪ್ತರ ರಾಜೀನಾಮೆಯ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

    ಸುಪ್ರೀಂ ಹೇಳಿದ್ದೇನು?
    ನಿಮ್ಮ ಅರ್ಜಿಯ್ನು ಈ ಕ್ಷಣವೇ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪರಿಶೀಲನೆ ಸಂಬಂಧ ನಾವು ಬೆಳಗ್ಗೆ ಆದೇಶ ಕೊಟ್ಟಿದ್ದೇವೆ. ಹಾಗಾಗಿ ಶಾಸಕರ ರಾಜೀನಾಮೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಾಳೆ (ಶುಕ್ರವಾರ) ಅತೃಪ್ತ ಶಾಸಕರ ಅರ್ಜಿಯ ಜೊತೆಗೆ ನಿಮ್ಮ ವಾದವನ್ನು ಆಲಿಸುತ್ತೇವೆ.

    ಸುಪ್ರೀಂ ಆದೇಶ ಏನು?
    ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು. ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ನಾಳೆ ತನಗೆ ತಿಳಿಸಬೇಕು.

  • ಮೈತ್ರಿ ಸರ್ಕಾರದ ಉಳಿವಿಗೆ ಎರಡೇ ಬ್ರಹ್ಮಾಸ್ತ್ರ ಬಾಕಿ

    ಮೈತ್ರಿ ಸರ್ಕಾರದ ಉಳಿವಿಗೆ ಎರಡೇ ಬ್ರಹ್ಮಾಸ್ತ್ರ ಬಾಕಿ

    ಬೆಂಗಳೂರು: ಸಮಯವಕಾಶ ಬಳಸಿಕೊಂಡು ಸರ್ಕಾರವನ್ನು ಉಳಿಸಲು ಮುಂದಾಗಿರುವ ದೋಸ್ತಿ ನಾಯಕರ ತಂತ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಡೆ ತಂದಿದೆ. ಈ ಆದೇಶ ಬಂದರೂ ಸರ್ಕಾರ ಮೈತ್ರಿ ಸರ್ಕಾರದ ರಕ್ಷಣೆಗೆ ಎರಡು ಬ್ರಹ್ಮಾಸ್ತ್ರಗಳನ್ನು ನಾಯಕರು ಹೊಂದಿದ್ದಾರೆ.

    ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೇ ದಿನ ದೂಡಿ ಅವರನ್ನು ಮನ ಒಲಿಸುವ ತಂತ್ರಕ್ಕೆ ದೋಸ್ತಿ ನಾಯಕರು ಮುಂದಾಗಿದ್ದರು. ಆದರೆ ಅತೃಪ್ತರ ರಾಜೀನಾಮೆ ಬಗ್ಗೆ ಇಂದು ಸಂಜೆ ನಿರ್ಧಾರ ತಿಳಿಸಿ, ಶುಕ್ರವಾರ ವಿವರ ನೀಡಬೇಕು ಎಂದು ಸ್ಪೀಕರ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶದ ಮಧ್ಯೆಯೂ ಸರ್ಕಾರ ಉಳಿಸಲು ನಾಯಕರು ಎರಡು ತಂತ್ರವನ್ನು ಬಳಸಿ ಸರ್ಕಾರ ಉಳಿಸಲು ಮುಂದಾಗಿದ್ದಾರೆ.

    ಹೌದು. ಒಂದನೆಯದಾಗಿ ಈ ಹಿಂದೆ ಬಿಡುಗಡೆಯಾಗಿದ್ದ ಆಪರೇಷನ್ ಆಡಿಯೋ ಬಗ್ಗೆ ಕ್ರಮಕೈಗೊಳ್ಳಲು ಸ್ಪೀಕರ್ ಅವರಿಗೆ ಒತ್ತಡ ಹಾಕಬಹುದು. ಇದರ ಜೊತೆ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆನಂದ್ ಸಿಂಗ್, ಪ್ರತಾಪ್ ಸಿಂಗ್ ಪಾಟೀಲ್ ಅನರ್ಹತೆಯನ್ನ ಕೋರಿ ದೂರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮುಂದಾಗಬಹುದಾಗಿದೆ.

    ಈಗಾಗಲೇ ಕಾನೂನು ನಿಯಮಗಳ ಅಡಿಯೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಸಂವಿಧಾನ ನಿಯಮಗಳ ಅಡಿ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ನಾಲ್ಕು ಕೈ ಶಾಸಕರ ಪೈಕಿ ಆನಂದ್ ಸಿಂಗ್ ಅವರ ಹೆಸರು ಇದ್ದು, ಆನಂದ್ ಸಿಂಗ್ ಬಗ್ಗೆ ಕಾಂಗ್ರೆಸ್ ನಾಯಕರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕೂಡ ಪ್ರಮುಖವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಸಂಜೆ ವೇಳೆಗೆ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ. ಅಲ್ಲದೇ ನ್ಯಾಯಾಲಯ ಕೂಡ ಸ್ಪೀಕರ್ ಅವರ ವಾದ ಮಂಡನೆಗೆ ಅವಕಾಶ ನೀಡಿದೆ.

  • ಕೈ ನಾಯಕರ ಸಂಧಾನ ವಿಫಲ – ಕ್ಷಮೆ ಕೋರಿದ ಸುಧಾಕರ್

    ಕೈ ನಾಯಕರ ಸಂಧಾನ ವಿಫಲ – ಕ್ಷಮೆ ಕೋರಿದ ಸುಧಾಕರ್

    ಬೆಂಗಳೂರು: ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ವಿಧಾನಸೌಧದಲ್ಲಿ ನಡೆದ ಘಟನೆಗಳ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಕ್ಷಮೆ ಕೋರಿದ್ದಾರೆ.

    ಇಂದು 4 ಗಂಟೆಗೆ ವಿಧಾನಸೌಧಕ್ಕೆ ತೆರಳಿದ್ದೆ. ಆ ವೇಳೆ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದೆ. ನಾನು ಸೇರಿದಂತೆ ಎಂಟಿಬಿ ನಾಗರಾಜ್ ಅವರೊಂದಿಗೆ ಆತ್ಮಸಾಕ್ಷಿಯಿಂದ ರಾಜೀನಾಮೆ ಪತ್ರವನ್ನ ಸ್ವಇಚ್ಛೆಯಿಂದ ಕೊಟ್ಟಿದೇವೆ. ನನ್ನ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್ ಅವರು ಜುಲೈ 17 ಕ್ಕೆ ಸಂದರ್ಶನ ಅವಧಿ ಕೊಟ್ಟಿದ್ದಾರೆ ಎಂದರು.

    ನನಗೆ ಹಾಗೂ ನಾಗರಾಜ್ ಅಣ್ಣ ಅವರಿಗೆ ಪಕ್ಷದ ಮೇಲೆ ಗೌರವ ಇದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಕಳೆದ 13 ತಿಂಗಳಿನಿಂದ ಉಂಟಾದ ಒತ್ತಡದ ಪರಿಣಾಮ ರಾಜೀನಾಮೆ ನಿರ್ಧಾರ ಮಾಡಿದ್ದೇನೆ. ಕ್ಷೇತ್ರ ಜನರ ಅಭಿವೃದ್ಧಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಂಠಿತ ಆಗಿದ್ದ ಕಾರಣ ಅತ್ಯಂತ ಕಠಿಣ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

    ವಿಧಾನಸೌಧದಲ್ಲಿ ನಡೆದ ಘಟನೆಯಿಂದ ಮಾಧ್ಯಮ ಸ್ನೇಹಿತರಿಗೆ ತೊಂದರೆ ಆಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ರಾಜೀನಾಮೆ ಬಳಿಕ ನನ್ನ ಮನವೊಲಿಕೆ ಮಾಡಲು ಮುಂದಾಗಿದ್ದರು. ಆದರೆ ಈ ಸಮಯದಲ್ಲಿ ಎಂಎಲ್‍ಸಿ ಒಬ್ಬರು ನಡೆದುಕೊಂಡ ರೀತಿ ಸರಿಯಲ್ಲ. ಆದರೆ ಸಿದ್ದರಾಮಯ್ಯ ಅವರು ರಾಜಿನಾಮೆ ವಾಪಸ್ ಪಡೆಯುವಂತೆ ಮನ ಒಲಿಸಿದರು. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇನೆ. ನಾನು ಮುಂಬೈಗೂ ಹೋಗುವುದಿಲ್ಲ, ದೆಹಲಿಗೂ ಹೋಗುವುದಿಲ್ಲ. ನಮ್ಮಗೆ ಯಾವುದೇ ಒತ್ತಡ ಕೂಡ ಇಲ್ಲ. 13 ತಿಂಗಳ ರಾಜಕೀಯ ಅಸ್ಥಿರತೆಯಿಂದ ನೋವುಂಟಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಿಲ್ಲ. ಈ ಬಗ್ಗೆ ನಾನು ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.