Tag: Speaker Ramesh Kumar

  • ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಮಂಡನೆ ಮಾಡಿದ್ದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಖಡಕ್ ಸಂದೇಶ ನೀಡಿದ್ದಾರೆ.

    ಭೋಜನ ವಿರಾಮದ ವೇಳೆ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಸ್ಪೀಕರ್ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಅಧಿಕಾರಿಗಳಿಂದ ವರದಿ ಪಡೆದಿದ್ದರು. ವರದಿ ಪಡೆದ ಬಳಿಕ ಸ್ಪೀಕರ್ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಇಂದೇ ವಿಶ್ವಾಸಮತಯಾಚನೆಯನ್ನು ಮುಗಿಸಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಓದಿ ವಿವರಣೆ ನೀಡಿದ್ದು, ಸದನ ಸದಸ್ಯರ ಗಮನಕ್ಕೆ ತಂದಿದ್ದಾರೆ.

    ಇತ್ತ ರಾಜ್ಯಪಾಲರ ಪತ್ರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಇಂದು ಸದನದಲ್ಲಿ ವಿಶ್ವಾಸಮತ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾನೂನಿನ ಗೊಂದಲಗಳು ಆರಂಭವಾಗಿದೆ. ಆದ್ದರಿಂದ ಇದನ್ನು ಅಷ್ಟು ಬೇಗ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಚರ್ಚೆ ನಡೆಯಬೇಕಿದೆ ಎಂದು ಸ್ಪೀಕರ್ ಅವರಿಗೆ ತಿಳಿಸಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದರು.

    ಕಾಂಗ್ರೆಸ್ ಸದಸ್ಯರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ ಅವರು, ನಮಗೆ ಚರ್ಚೆ ನಡೆಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ ಎಂದರು. ಆದರೆ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿ. ಆಡಳಿತ ಪಕ್ಷದ ಎಲ್ಲಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇವಲ 5 ನಿಮಿಷ ಅವಕಾಶ ನೀಡಿದರೆ ಸಾಕು ಒಬ್ಬರೋ ಇಬ್ಬರೋ ಮಾತನಾಡುತ್ತಾರೆ ಎಂದು ತಿಳಿಸಿದರು.

    ಈ ವೇಳೆ ಕೃಷ್ಣಬೈರೇಗೌಡರು ಮಾತನಾಡಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಹಿಂದಿನ ಬಾಗಿಲಿನಿಂದ ಹೋಗಿ ರಾಜ್ಯಪಾಲರ ಮೂಲಕ ಸೂಚನೆ ತರುವುದಿಲ್ಲ ಸರಿಯಲ್ಲ. ಇಲ್ಲೇ ಚರ್ಚೆ ಮಾಡಬಹುದು ಎಂದಾಗ ಈಶ್ವರಪ್ಪ ಇಡಿ ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಪಾಲರಲ್ಲಿ ಹೋಗಿ ದೂರು ನೀಡಿದ್ದೇವೆ ಎಂದರು. ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಇಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಎಳೆ ತರುವುದು ಬೇಡ. ನಾವು ಹೋಗಿ ಮನವಿ ನೀಡಿದ್ದೇವೆ ಎಂದು ಬಿಜೆಪಿ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಹೋಗದೇ ರಾಜ್ಯಪಾಲರು ಸೂಚನೆ ನೀಡಿದ್ದರೆ ಆಗ ಪ್ರಶ್ನಿಸಬಹುದಿತ್ತು. ದಯವಿಟ್ಟು ರಾಜ್ಯಪಾಲರನ್ನು ಈ ಚರ್ಚೆಗೆ ಎಳೆದು ತರಬೇಡಿ ಎಂದು ಮನವಿ ಮಾಡಿದರು.

  • ಆಡಳಿತ ಪಕ್ಷ ಗಿಮಿಕ್ ಮಾಡ್ತಿದೆ, ನಮಗೆ ಭಯ ಆಗ್ತಿದೆ: ಜಗದೀಶ್ ಶೆಟ್ಟರ್

    ಆಡಳಿತ ಪಕ್ಷ ಗಿಮಿಕ್ ಮಾಡ್ತಿದೆ, ನಮಗೆ ಭಯ ಆಗ್ತಿದೆ: ಜಗದೀಶ್ ಶೆಟ್ಟರ್

    ಬೆಂಗಳೂರು: ಬಹುಮತ ಸಾಬೀತು ಮಾಡಲು ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಪ್ರಸ್ತಾಪ ಸಲ್ಲಿಸಿದ್ದರು. ಆದರೆ ಇಂದು ವಿಶ್ವಾಸ ಮತಯಾಚನೆಗೆ ಮುಂದಾಗದೇ ಬಹುಮತ ಸಾಬೀತು ಮಾಡಲು ನಿಯಮಗಳ ಹೆಸರು ಹೇಳಿ ಅನಗತ್ಯ ಚರ್ಚೆ ಮಾಡುತ್ತಾರೆ. ಆದ್ದರಿಂದ ನಾವು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡದೇ ಕಾಲದೂಡಲು ಚರ್ಚೆಗೆ ಸ್ಪೀಕರ್ ಅವರ ಅನುಮತಿಯೊಂದಿಗೆ ಚರ್ಚೆಗೆ ದಾರಿ ಮಾಡಿದ್ದಾರೆ. ಸಿದ್ದರಾಮಯ್ಯ, ಕೃಷ್ಣಬೈರೇಗೌಡ, ಎಚ್‍ಕೆ ಪಾಟೀಲ್ ಅವರು ರೂಲ್ ಮುಂದೂಡಲು ಮನವಿ ಮಾಡಿದ್ದಾರೆ. ಆದರೆ ಇದು ಬಹುಮತ ಸಾಬೀತು ಮಾಡಲು ತಡವಾಗಲಿದೆ. ಆದ್ದರಿಂದಲೇ ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದರು. ಅವರಿಗೆ ಕೋರ್ಟ್ ಅಭಿಪ್ರಾಯದ ಬಗ್ಗೆ ಅನುಮಾನ ಇದ್ದರೆ ಕೋರ್ಟಿಗೆ ತೆರಳಬೇಕು ವಿನಾ: ಸದನದಲ್ಲಿ ಅನಗತ್ಯ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದರು.

    ಮುಖ್ಯಮಂತ್ರಿಗಳು ವಿಶ್ವಾಸಮತ ಎಂದು ಚರ್ಚೆಯನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಬೇರೆ ಬೇರೆ ವಿಚಾರಕ್ಕೆ ಚರ್ಚೆ ನಡೆಸುತ್ತಿದ್ದಾರೆ. ಈ ರೀತಿ ಆಡಳಿತ ಪಕ್ಷ ಮಾಡುವಂತಿಲ್ಲ, ಆಡಳಿತ ಪಕ್ಷ ಗಿಮಿಕ್ ಮಾಡುತ್ತಿದ್ದು, ಬಹುಮತ ಸಾಬೀತು ಪಡಿಸುವ ಕ್ರಮವನ್ನು ತಡ ಮಾಡುತ್ತಿದ್ದಾರೆ ಎಂಬ ಭಯ ನಮಗೆ ಕಾಡುತ್ತಿದೆ. ಹಾಗಾಗಿ ವಿಶ್ವಾಸ ಮತ ಸಾಬೀತು ಮಾಡಬೇಕು ಎಂದು ಸ್ಪೀಕರ್ ಅವರಿಗೂ ಮನವಿ ಮಾಡಿದ್ದೇವೆ. ಆದರೆ ಸ್ಪೀಕರ್ ಅವರು ಸರ್ಕಾರ ಉಳಿಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

    ಸದ್ಯ ಸ್ಪೀಕರ್ ಅವರಿಗೆ ನಿರ್ದೇಶನ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಆ ಮೂಲಕ ರಾಜ್ಯಪಾಲರು ಸ್ಪೀಕರ್ ಅವರಿಗೆ ಮಾಡಿ ಬೇಗ ವಿಶ್ವಾಸ ಮತ ಸಾಬೀತು ಪಡಿಸಬೇಕು ಎಂಬುದು ನಮ್ಮ ಒತ್ತಾಯ ಎಂದರು. ಇದುವರೆಗೂ ಕರ್ನಾಟಕದ ಇತಿಹಾಸದಲ್ಲಿ 7 ಬಾರಿ ವಿಶ್ವಾಸ ಮತಯಾಚನೆ ಮಾಡಿದ್ದಾರೆ. ಎಲ್ಲಾ ಸಂದರ್ಭದಲ್ಲೂ 1 ದಿನದಲ್ಲೇ ಚರ್ಚೆಯೊಂದಿಗೆ ನಿರ್ಧಾರ ಮಾಡಿ ಮತಕ್ಕೆ ಹಾಕಲಾಗಿತ್ತು. ಆದರೆ ಇಂದು ಸಂಖ್ಯಾ ಬಲ ಇಲ್ಲದ ಸರ್ಕಾರವನ್ನು ಉಳಿಸಲು ಎಲ್ಲರೂ ಪ್ರಯತ್ನ ನಡೆಸುತ್ತಿದ್ದಾರೆ.

  • ಮಾಜಿ, ಹಾಲಿ, ಭಾವಿ ಮುಖ್ಯಮಂತ್ರಿಗಳ ಮಧ್ಯೆ ಒಡೆದು ಹೋಗುತ್ತಿರುವೆ: ಸ್ಪೀಕರ್

    ಮಾಜಿ, ಹಾಲಿ, ಭಾವಿ ಮುಖ್ಯಮಂತ್ರಿಗಳ ಮಧ್ಯೆ ಒಡೆದು ಹೋಗುತ್ತಿರುವೆ: ಸ್ಪೀಕರ್

    – ಸದನದಲ್ಲಿ ನಗೆ ಚಟಾಕೆ ಹಾರಿಸಿದ ರಮೇಶ್ ಕುಮಾರ್

    ಬೆಂಗಳೂರು: ಮಾಜಿ, ಹಾಲಿ ಹಾಗೂ ಭಾವಿ ಮುಖ್ಯಮಂತ್ರಿಗಳ ಮಧ್ಯೆ ನಾನು ಒಡೆದು ಹೋಗುತ್ತಿರುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ನಗೆ ಹರಿಸಿದ್ದಾರೆ.

    ವಿಶ್ವಾಸಮತಯಾಚನೆ ಕಾವು ಸದನದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದ ಸದಸ್ಯರನ್ನು ಕೆಲವು ಸಂದರ್ಭದಲ್ಲಿ ನಗಿಸಿ, ಕಾಲೆಳೆದು ಕಾನೂನು ಜ್ಞಾನವನ್ನು ನೀಡುತ್ತಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಶ್ವಾಸ ಮತಯಾಚನೆಯ ಕುರಿತ ಚರ್ಚೆಯ ವೇಳೆ ನಾನು ವಿಪಕ್ಷ ನಾಯಕ ಎಂದು ಬಾಯಿತಪ್ಪಿ ಹೇಳಿದರು. ಆಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಖುಷಿ ವ್ಯಕ್ತಪಡಿಸಿದರು. ಸ್ವಲ್ಪ ಗುಡುಗಿದ ಮಾಜಿ ಸಿಎಂ, ನಾನು ನಾಲ್ಕು ವರ್ಷ ಲೀಡರ್ ಆಫ್ ಆಪೋಸಿಷನ್ ಆಗಿದ್ದೆ. ಏನೋ ಈಗ ಬಾಯಿ ತಪ್ಪಿ ಬಂದು ಮಾತನಾಡಿದೆ. ಈಗ ಏನ್ ಖುಷಿ ಆಯಿತೋ ಇವರಿಗೆ, ಸಿಎಂ ಹೇಳಿದಂತೆ ಏನ್ ಆತುರ ಇದೆ ಎಂದು ಹೇಳಿ ತಿರುಗೇಟು ನೀಡಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ಸ್ವಲ್ಪ ಖುಷಿಯಾಗಿರಲು ಅವರನ್ನು ಬಿಡಿ ಎಂದು ಬಿಜೆಪಿ ಶಾಸಕರಿಗೆ ಮನವಿ ಮಾಡಿ, ಸಿದ್ದರಾಮಯ್ಯ ಅವರ ಕಾಲೆಳೆದರು. ಹೀಗಾಗಿ ವಿಪಕ್ಷ ನಾಯಕರಲ್ಲಿ ನಗೆ ಜೋರಾಗಿ ಕೇಳಿ ಬಂದಿತು. ಆಗ ಮಾಜಿ ಸಿಎಂ, ಪಾಪಾ ಅವರು ಬಹಳ ಸಂತೋಷದಲ್ಲಿ ತೇಲಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರಿಗೆ ಟಾಂಗ್ ಕೊಟ್ಟರು.

    ವಿಶ್ವಾಸ ಮತಯಾಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದನ್ನು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಸ್ಪೀಕರ್ ಅವರು ಪ್ರತಿಕ್ರಿಯೆ ನೀಡಿ ಸಮಾಧಾನ ಪಡಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿ, ಪಾಪ ಅವರು ಮಾಜಿ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದು ಕಾಲೆಳೆದರು. ಆಗ ಸ್ಪೀಕರ್ ಅವರು, ನಮ್ಮ ಸಮಸ್ಯೆಯೇ ಅದು. ಮಾಜಿ ಮುಖ್ಯಮಂತ್ರಿಗಳು, ಹಾಲಿ ಮುಖ್ಯಮಂತ್ರಿಗಳು ಹಾಗೂ ಭಾವಿ ಮುಖ್ಯಮಂತ್ರಿಗಳ ಮಧ್ಯೆ ಸಿಕ್ಕು ನಾನು ಒಡೆದು ಹೋಗುತ್ತಿರುವೆ ಎಂದು ಸದನದಲ್ಲಿ ನಗೆ ಹರಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮುಂದುವರಿಸಿ, ನೀವು ಎರಡನೇ ಬಾರಿ ಸ್ಪೀಕರ್ ಆಗಿರುವುದರಿಂದ ಇದನ್ನು ತಡೆದುಕೊಳ್ಳುವ ಶಕ್ತಿ ನಿಮಗೆ ಇದೆ ಅಂತ ನಾನು ಭಾವಿಸಿರುವೆ ಎಂದು ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

  • ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

    ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

    – ನನ್ನ ಮೇಲೆ ಬಿಎಸ್‍ವೈಗೆ ವಿಶೇಷ ಕಾಳಜಿ ಬಂದಿದೆ
    – ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ?

    ಬೆಂಗಳೂರು: ಅಧಿಕಾರ ಶಾಶ್ವತವಲ್ಲ. ನಾವು ಗೂಟಾ ಹೊಡೆದುಕೊಂಡು ಕೂತಿದ್ದೇವೆ ಎನ್ನುವ ಭ್ರಮೆಯೂ ನನಗಿಲ್ಲ ಸಿಎಂ ಹೇಳಿದ್ದಾರೆ.

    ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಸಿಎಂ, ಸರ್ಕಾರ ರಚನೆ ಮಾಡಲು ವಿರೋಧ ಪಕ್ಷದ ನಾಯಕರು ಬಹಳ ಅತುರದಲ್ಲಿದ್ದಾರೆ ಎಂದರು. ಆಗ ಸ್ಪೀಕರ್ ರಮೇಶ್ ಕುಮಾರ್ ಅವರು, ಯಾಕೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ವಿಶ್ವಾಸ ಮತಯಾಚನೆ ಚರ್ಚೆಯೇ ಆಗದೇ ಮನವಿ ಮಾಡುತ್ತಿದ್ದಾರೆ. ಈ ಹಿಂದಿನ ವಿಶ್ವಾಸಮತದ ಯಾಚನೆಯ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಉಲ್ಲೇಖಿಸಿದ್ದಾರೆ. ಹಿಂದಿನ ವಿಶ್ವಾಸಮತ, ಅವಿಶ್ವಾಸಮತ ಮಂಡನೆಯಾಗಿರುವ ಸಂದರ್ಭ ಬೇರೆ ಇತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಎಂದು ಕುಟುಕಿದರು.

    ವಿಶ್ವಾಸಮತ ಮಂಡನೆ ಮಾಡುವ ಪರಿಸ್ಥಿತಿ ಯಾವ ಹಿನ್ನಲೆಯಲ್ಲಿ ಬಂದಿದೆ? ಯಾವ ಕಾರಣಕ್ಕೆ ಬಂದಿದೆ ಎನ್ನುವುದು ಗೊತ್ತಿದೆ. ಸ್ಪೀಕರ್ ಅಧಿಕಾರದ ಸ್ಥಾನದ ಬಗ್ಗೆಯೂ ಅಪನಂಬಿಕೆ ಮೂಡವಂತೆ ಮಾಡಿ ಸುಪ್ರೀಂ ಮೊರೆ ಹೋಗಿದ್ದಾರೆ. ನಿಮ್ಮ ಬಗ್ಗೆ ವಿಪಕ್ಷಗಳಿಗೆ ನಂಬಿಕೆ ಇಲ್ಲ ಎಂದು ಸಿಎಂ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.

    ವಿಪಕ್ಷಕ್ಕೆ ಮಾನ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಅಲ್ಪ ಸ್ವಲ್ಪ ಮರ್ಯಾದೆ ಇದೆ. ಇಲ್ಲಿ ಇರುವರರಿಗೆ ಸ್ವಲ್ಪ ಮರ್ಯಾದೆ ಇದೆ ಅಂದುಕೊಳ್ಳುತ್ತೇನೆ ಎಂದು ಕಿಡಿಕಾರಿದರು.

    ರೆಬಲ್ ಶಾಸಕರು ಸ್ಪೀಕರ್ ಅವರಿಗೆ ಸಲ್ಲಿಸಿದ ರಾಜೀನಾಮೆಯಲ್ಲಿರುವ ಕಾರಣ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಮಂಡಿಸಿದ ಕಾರಣ ಇವೆರಡನ್ನೂ ಇಟ್ಟಕೊಂಡು ಚರ್ಚೆ ನಡೆಸಲೇ ಬೇಕು. ಇದಕ್ಕೆ ಸ್ಪಷ್ಟನೆ ಬೇಕು ಎಂದು ಸಿಎಂ ಪಟ್ಟು ಹಿಡಿದರು.

    ಆರಂಭದಲ್ಲಿ ನಗುತ್ತಾ ಭಾಷಣ ಆರಂಭಿಸಿದ ಸಿಎಂ ಕೆಲ ನಿಮಿಷಗಳಲ್ಲೇ ಆವೇಶದಿಂದ ಮಾತು ಮುಂದುವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರದದ ಬಗ್ಗೆ ಟೀಕಿಸಿದ್ದಾರೆ. ಬರಗಾಲದ ಬಗ್ಗೆ ಚರ್ಚೆ ಮಾಡಬೇಕಾಗಿದೆ. ನಮಗಿಂತ ಹೆಚ್ಚಾಗಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಿದ್ದೇವೆ ಎನ್ನುವ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

    ಜಿಂದಾಲ್ ಪ್ರಕರಣ ಎತ್ತಿಕೊಂಡ ಸಿಎಂ, ಜಿಂದಾಲ್ ವಿಚಾರದಲ್ಲಿ ಸಾಕಷ್ಟು ಅನುಮಾನ ಜನರಲ್ಲಿ ಹುಟ್ಟುಹಾಕಿದ್ದಾರೆ. ಜನರಿಗೆ ಈಗ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ನಾನು ಇತ್ತೀಚೆಗೆ ಮಾಧ್ಯಮದ ಜೊತೆಯೂ ಮಾತನಾಡಿಲ್ಲ. ಈಗ ಸ್ಪಷ್ಟನೆ ಕೊಡಬೇಕು. ನನ್ನ ಆಡಳಿತದ ಮಾಹಿತಿಯನ್ನು ಬಗ್ಗೆ ಜನರ ಮುಂದೆ ಇಡಬೇಕು ಎಂದು ಹೇಳಿದರು.

    ಐಎಂಎ ಪ್ರಕರಣದಲ್ಲಿ ನಮ್ಮ ನಿಲುವಿನ ಬಗ್ಗೆ ಚರ್ಚೆಯಾಗಬೇಕು. ಬರಗಾಲ, ಜಿಂದಾಲ್, ಐಎಂಎ ವಿಚಾರ ಹಾಗೂ ಆಡಳಿತ ಯೋಜನೆ, ಈ ಮೂರು ವಿಚಾರದಲ್ಲಿ ಚರ್ಚೆ ಹಾಗೂ ಸ್ಪಷ್ಟನೆಗೆ ಅವಕಾಶ ನೀಡುವಂತೆ ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಮನವಿ ಮಾಡಿಕೊಂಡರು.

    ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ? ಬೇರೆ ಯಾರಾದರೂ ಮುಂದುವರಿಸುತ್ತಾರೋ ಇಲ್ವೋ ಗೊತ್ತಿಲ್ಲ ಎಂದು ಹೇಳಿ ಕುತೂಹಲ ಮೂಡಿಸಿದರು.

  • ಅನರ್ಹತೆಯ ಅಸ್ತ್ರದಿಂದ ಪಕ್ಷೇತರ ಶಾಸಕ ಆರ್.ಶಂಕರ್ ಬಚಾವ್?

    ಅನರ್ಹತೆಯ ಅಸ್ತ್ರದಿಂದ ಪಕ್ಷೇತರ ಶಾಸಕ ಆರ್.ಶಂಕರ್ ಬಚಾವ್?

    ಬೆಂಗಳೂರು: ಎರಡನೇ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಜೂನ್ 14 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಕೆಪಿಜೆಪಿ ಪಕ್ಷದ ಶಾಸಕ ಆರ್.ಶಂಕರ್ ಅಲ್ಪ ಸಮಯದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಇದರ ಬೆನ್ನಲ್ಲೇ ಆರ್.ಶಂಕರ್ ಅನರ್ಹತೆಯ ಅಸ್ತ್ರ ಪ್ರಯೋಗ ಆಗಲಿದೆಯಾ ಎಂಬ ಅನುಮಾನ ಮೂಡಿತ್ತು.

    ಸಚಿವ ಸ್ಥಾನ ಪಡೆಯುವ ವೇಳೆ ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಲು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ಪೀಕರ್ ಈ ಪತ್ರವನ್ನು ನಿರಾಕರಿಸಿ ಪಕ್ಷದಿಂದ ಪತ್ರವನ್ನು ನೀಡುವಂತೆ ತಿಳಿಸಿದ್ದರು.

    ಇತ್ತ 2ನೇ ಬಾರಿಗೆ ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದು ಮುಂಬೈಗೆ ತೆರಳಿದ್ದ ಆರ್. ಶಂಕರ್ ಜುಲೈ 12 ರಂದು ಸ್ಪೀಕರ್ ಗೆ ಬರೆದು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು. ಅಲ್ಲದೇ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಸ್ಪೀಕರ್ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಶಂಕರ್ ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೆ ಸ್ಪೀಕರ್ ಸೂಚಿಸಿದ್ದಾರೆ.

    ಇತ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಅವರನ್ನು ಅನರ್ಹತೆ ಮಾಡುವಂತೆ ಕಾಂಗ್ರೆಸ್ ಸ್ಪೀಕರ್ ಅವರಿಗೆ ಮನವಿ ಮಾಡಿದೆ. ಹಳೆ ಪ್ರಕರಣದಲ್ಲಿ ವಿಚಾರಣೆ ನಡೆಸಲಿರುವ ಸ್ಪೀಕರ್ ಅವರು ಈ ವಿಚಾರದ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿ ಅವರ ವಿರುದ್ಧ ಕಾಂಗ್ರೆಸ್ ಕೆಲ ಸಾಕ್ಷಿಗಳನ್ನು ನೀಡಿದೆ. ಈ ಅಂಶಗಳೊಂದಿಗೆ ಸ್ಪೀಕರ್ ಅವರು ವಿಚಾರಣೆ ನಡೆಲಿದ್ದಾರೆ.

  • ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಬೆಂಗಳೂರು: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿ ಮಾಜಿ ಸಚಿವ ರೋಷನ್ ಬೇಗ್, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

    ರೋಷನ್ ಬೇಗ್ ಅವರು ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ 4:30 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮೂರು ದಿನ ಬಿಟ್ಟು ವಿಚಾರಣೆಗೆ ದಿನಾಂಕ ನಿಗದಿ ಮಾಡಿ ಎಂದು ಸ್ಪೀಕರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ತಮ್ಮ ಆಪ್ತರ ಬಳಿ ಕೊಟ್ಟು ಸ್ಪೀಕರ್ ಕಚೇರಿಗೆ ಕಳುಹಿಸಿದ್ದಾರೆ.

    ಪಕ್ಷ ವಿರೋಧಿ ಚಟುವಟಿಕೆಯಿಂದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ಸಿನಿಂದ ವಜಾ ಮಾಡಲಾಗಿತ್ತು. ಈ ಬೆನ್ನಲ್ಲೇ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಯಿತು. ಹೀಗಾಗಿ ರೋಷನ್ ಬೇಗ್ ಅವರು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ನಿಗದಿಯಂತೆ ಶಾಸಕರ ವಿಚಾರಣೆ ನಡೆಸುತ್ತೇನೆ: ಸ್ಪೀಕರ್

    ನಿಗದಿಯಂತೆ ಶಾಸಕರ ವಿಚಾರಣೆ ನಡೆಸುತ್ತೇನೆ: ಸ್ಪೀಕರ್

    ಕೋಲಾರ: ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ. ಮುಂದೆ ಕಾಲಕಾಲಕ್ಕೆ ತಕ್ಕಂತೆ ಉಳಿದ ಕೆಲಸ ನಿರ್ವಹಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸ್ಪೀಕರ್, ಸುಪ್ರೀಂಕೋರ್ಟ್ ನನ್ನ ಮೇಲೆ ವಿಧಿಸಿದ ಕರ್ತವ್ಯ ನಿರ್ವಹಿಸುತ್ತೇನೆ. ನ್ಯಾಯಧೀಶರು ನೀಡಿದ ಗೌರವವನ್ನು ಸಂವಿಧಾನದ ಪ್ರಕಾರ ವಿವೇಚನೆಯಿಂದ ಪಾಲಿಸುವೆ. ಇದನ್ನೇ ಲಾಬಿ ಮಾಡದೇ ಗೌರವವಾಗಿ ಸ್ವೀಕರಿಸಿ ವಿಳಂಬ ಮಾಡದೇ ಕೆಲಸ ಮುಗಿಸುತ್ತೇನೆ ಎಂದು ತಿಳಿಸಿದರು.

    ಸದನದಲ್ಲಿ ಗುರುವಾರ ವಿಶ್ವಾಸಮತಯಾಚನೆ ನಡೆಸಲಾಗುತ್ತದೆ. ಶಾಸಕರು ಅಧಿವೇಶನಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು.ಪ್ರಕಟವಾದ ಆದೇಶದಿಂದ ಯಾರು ಗೆದ್ದಿಲ್ಲ, ಯಾರೂ ಸೋತಿಲ್ಲ. ಪ್ರಜಾಪ್ರಭುತ್ವ ಸಂಸದೀಯ ಸಂವಿಧಾನದ ಪ್ರಕಾರ ಎಲ್ಲರಿಗೂ ಗೆಲುವು ಸಿಕ್ಕಿದೆ. ಸಂವಿಧಾನಕ್ಕೆ ನಾನು ತಲೆಬಾಗುತ್ತೇನೆಯೇ ಹೊರತು ಬೇರೆ ಯಾರಿಗೂ ನಾನು ತಲೆ ಬಾಗಲ್ಲ ಎಂದರು.

    ಸಂಸದ ಉಮೇಶ್ ಜಾಧವ್ ಅವರ ಕೇಸ್‍ನಲ್ಲಿ ಏನು ಮಾಡಿದ್ದೇನೋ ಅದನ್ನೇ ಈಗ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಹೇಳಿದಂತೆ ಶಾಸಕರ ವಿಚಾರಣೆ ನಡೆಯಲಿದೆ. ಅವರು ಹಾಜರಾಗುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಅತೃಪ್ತ ಅತೃಪ್ತರು ಯಾರೂ ನನಗೆ ಗೊತ್ತಿಲ್ಲ. ಅವರೆಲ್ಲರೂ ನನ್ನ ಆತ್ಮೀಯರೇ. ಅವರು ಕೊರಗಿನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

    ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ನಾನು ಅದನ್ನು ಉಳಿಸಿಕೊಂಡು ಸಾಮಾನ್ಯರಂತೆ ಸಾಮಾನ್ಯನಾಗಿ ತೀರ್ಮಾನ ಕೈಗೊಳ್ಳುತ್ತೇನೆ. ಗುರುವಾರ ಅಧಿವೇಶನವು ನಾಳೆ ನಡೆಯಲಿದೆ. ಸದನದ ನಡೆಯುವ ಹಾದಿಯಲ್ಲಿ ಹಂತ ಹಂತವಾಗಿ ಉಳಿದ ಕೆಲಸ ಮಾಡುತ್ತೇನೆ. ನನ್ನ ಅಧಿಕಾರವನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ತಿಳಿಸಿದರು.

    ಸುಪ್ರೀಂಕೋರ್ಟ್ ಕಾಲವನ್ನು ನಿಗದಿ ಮಾಡಿಲ್ಲ. ಹಾಗಂತ ನಾನು ಯಾರ ಮನವೊಲಿಕೆಗೆ ಮುಂದಾಗಿ ತೀರ್ಮಾನವನ್ನು ಮುಂದೂಡುವುದಿಲ್ಲ. ಸಂವಿಧಾನ ಯಾರ ಕೈಗೂ ಸಿಕ್ಕು ನರಳಬಾರದು, ಅದು ವಿಜೃಂಭಿಸಬೇಕು. ಎಲ್ಲರೂ ಅದನ್ನು ಗೌರವಿಸುವಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.

    ಶಾಸಕರ ರಾಜೀನಾಮೆ ಅಂಗೀಕರಿಸುವುದೋ ಅಥವಾ ಅನರ್ಹತೆ ನಿರ್ಧಾರ ಕೈಗೊಳ್ಳುವುದೋ ಎನ್ನುವುದರ ಬಗ್ಗೆ ಸ್ಪೀಕರ್ ಯಾವುದೇ ಸ್ಪಷ್ಟವಾದ ನಿರ್ಧಾರವನ್ನು ತಿಳಿಸಲಿಲ್ಲ.

  • ದೋಸ್ತಿ ಸರ್ಕಾರ ಮತ್ತು ಅತೃಪ್ತರ ಭವಿಷ್ಯ ಏನಾಗುತ್ತೆ – ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ತೀರ್ಪು

    ದೋಸ್ತಿ ಸರ್ಕಾರ ಮತ್ತು ಅತೃಪ್ತರ ಭವಿಷ್ಯ ಏನಾಗುತ್ತೆ – ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ತೀರ್ಪು

    – ಸಿಜಿಐ ಪೀಠದತ್ತ ಇಡೀ ದೇಶದ ಚಿತ್ತ

    ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಅಳಿವು, ಉಳಿವಿನ ಪ್ರಶೆಯಾಗಿರೋ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಸಂಬಂಧಿತ ತೀರ್ಪನ್ನು ಇವತ್ತು ಸುಪ್ರೀಂಕೋರ್ಟ್ ನೀಡಲಿದೆ. ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇವತ್ತು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.

    ವಿಶ್ವಾಸ ಮತಯಾಚನೆಗೆ ಮುನ್ನವೇ ರಾಜೀನಾಮೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಸ್ಪೀಕರ್ ಗೆ ಸೂಚಿಸಿದ್ರೆ ಬಿಜೆಪಿಗೆ ಲಾಭವಾಗಲಿದೆ. ಯಾಕಂದ್ರೆ ಸ್ಪೀಕರ್ ರಾಜೀನಾಮೆ ಅಂಗೀಕರಿಸಿದ್ರೂ, ಶಾಸಕರನ್ನು ಅನರ್ಹಗೊಳಿಸಿದ್ರೂ ಸರ್ಕಾರ ಪತನ ಪಕ್ಕಾ ಆಗಲಿದೆ. ಅದೇ ರಾಜೀನಾಮೆ ಅಂಗೀಕಾರ ಅಥವ ತಿರಸ್ಕಾರದ ತೀರ್ಮಾನವನ್ನು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟರೇ, ರಾಜೀನಾಮೆ ನೀಡಿದವರಿಗೂ ವಿಪ್ ಅನ್ವಯವಾಗಲಿದೆ. ಇದ್ರಿಂದ ದೋಸ್ತಿಗಳಿಗೆ ಅನುಕೂಲವಾಗಲಿದೆ. ಅನರ್ಹತೆ ಅಸ್ತ್ರ ಬಳಸಿ ಅತೃಪ್ತರನ್ನು ಸೆಳೆಯಲು ಇದು ನೆರವಾಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಿಗಿದೆ.

    ಸುಪ್ರೀಂಕೋರ್ಟ್ ತೀರ್ಪು ಏನಾಗಬಹುದು?
    ಸಾಧ್ಯತೆ ನಂ.1: ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬಹುದು. ಸ್ವೀಕರ್ ಹುದ್ದೆಯೂ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿದೆ ಎಂದು ಸಮರ್ಥಿಸಿಕೊಳ್ಳಬಹುದು. ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರಕ್ಕೆ ಸ್ಪೀಕರ್‍ಗೆ ಸೂಚನೆ ನೀಡಬಹುದು. ವಿಶ್ವಾಸಮತಕ್ಕೂ ಮುನ್ನ ರಾಜೀನಾಮೆ ಪರಿಶೀಲಿಸಿ, ಅಂಗಿಕಾರಕ್ಕೆ ಸೂಚಿಸಬಹುದು. ಮೊದಲು ರಾಜೀನಾಮೆ ಅಂಗೀಕರಿಸಿ, ಬಳಿಕ ಅನರ್ಹತೆ ಬಗ್ಗೆ ವಿಚಾರಣೆ ನಡೆಸಿ ಎನ್ನಬಹುದು.

    ಸಾಧ್ಯತೆ ನಂ.2: ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದಿರಲು ಸುಪ್ರೀಂಕೋರ್ಟ್ ನಿರ್ಧರಿಸಬಹುದು. ಸಮಯ ನಿಗದಿಪಡಿಸಿ, ಸ್ಪೀಕರ್ ವಿವೇಚನೆಯಡಿ ಕಾರ್ಯ ನಿರ್ವಹಿಸಲು ಅವಕಾಶ..? ಸ್ಪೀಕರ್ ಅಂತಿಮ ನಿರ್ಣಯವನ್ನು ಮಾತ್ರ ಕಾನೂನು ವ್ಯಾಪ್ತಿಯಲ್ಲಿ ಪರಿಶೀಲನೆಗೆ ಮುಂದಾಗಬಹುದು.

    ಸಾಧ್ಯತೆ ನಂ.3: ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ಪ್ರಕರಣಕ್ಕೆ ಮಧ್ಯಂತರ ರೀಲಿಫ್ ನೀಡಿ, ನಂತರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬಹುದು. ರಾಜೀನಾಮೆ, ಅನರ್ಹತೆ ಬಗ್ಗೆ ಮತ್ತಷ್ಟು ಕಾನೂನು ಪರಿಶೀಲನೆಗೆ ಮುಂದಾಗಬಹುದು.

    ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ನೀಡುವ ತೀರ್ಪಿನ ಮೇಲೆ ದೋಸ್ತಿ ಸರ್ಕಾರದ ಅಳಿವು ಮತ್ತು ಅತೃಪ್ತರ ಹಣೆ ಬರಹ ನಿರ್ಧಾರವಾಗಲಿದೆ. ಯಾರ ಪರ ತೀರ್ಪು ಬಂದ್ರೆ ಏನು ಆಗಬಹುದು.
    ಸ್ಪೀಕರ್ ವಿವೇಚನೆಗೆ ಬಿಟ್ಟರೆ?
    * ಸ್ಪೀಕರ್ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರಬಹುದು
    * ಅನರ್ಹತೆ ಭೀತಿಯಲ್ಲಿ ಶಾಸಕರು ವಿಶ್ವಾಸಮತಕ್ಕೆ ಬರಬಹುದು
    * ಸದ್ಯದ ಸಂಕಷ್ಟದಿಂದ ಸರ್ಕಾರ ಬಚಾವಾಗಬಹುದು

    ಅತೃಪ್ತರ ಪರ ತೀರ್ಪು ಬಂದರೇ?
    * ಅತೃಪ್ತರ ರಾಜೀನಾಮೆ ಇವತ್ತೇ ಅಂಗೀಕಾರ ಆಗಬಹುದು
    * ರಾಜೀನಾಮೆ ಅಂಗೀಕಾರವಾದರೆ ಸರ್ಕಾರ ಅಲ್ಪಮತಕ್ಕೆ
    * ವಿಶ್ವಾಸಮತಕ್ಕೆ ಮುನ್ನವೇ ಸಿಎಂ ರಾಜೀನಾಮೆ ನೀಡಬಹುದು

  • ವೈದ್ಯಕೀಯ ಸಲಕರಣೆ ನೀಡದ್ದಕ್ಕೆ ವೈದ್ಯಾಧಿಕಾರಿ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ವೈದ್ಯಕೀಯ ಸಲಕರಣೆ ನೀಡದ್ದಕ್ಕೆ ವೈದ್ಯಾಧಿಕಾರಿ ವಿರುದ್ಧ ಸ್ಪೀಕರ್ ಕೆಂಡಾಮಂಡಲ

    ಕೋಲಾರ: ಶಟಪ್, ನೀವೆಲ್ಲಾ ಸ್ಕೌಂಡ್ರಲ್ಸ್. ನಿಮಗೆ ಈಗಲೇ ಏನಾದರು ಆಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಇಂದು ಬೆಳಗ್ಗೆ ಆಯುರ್ವೇದ ಆಸ್ಪತ್ರೆ ಹಾಗೂ ಕ್ಷೇತ್ರದ ಸಮಸ್ಯೆ ಪರಿಶೀಲನೆ ನಡೆಸಿದ ರಮೇಶ್ ಕುಮಾರ್, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಉಪಕರಣಗಳನ್ನು ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಡ ರೋಗಿಗಳ ಸೇವೆಗೆ ಬೇಕಾದ ಉಪಕರಣಗಳನ್ನು ನೀಡಲು ನಿಮಗೇನು ಕಷ್ಟ? ಶಟಪ್ ನೀವೆಲ್ಲ ಸ್ಕೌಂಡ್ರಲ್ಸ್, ನಿಮಗೆಲ್ಲ ಮಾನವೀಯತೆ ಇದೆಯಾ? ಬಡತನದ ಬಗ್ಗೆ ಕಿಂಚಿತ್ತಾದರೂ ಕರುಣೆ ಇದೆಯಾ? ಭಗವಂತ ಏನಾದರೂ ಇದ್ದರೆ, ನಿಮಗೆಲ್ಲ ಈಗಿಂದಿಗಲೇ ಏನಾದರೂ ತೊಂದರೆಯಾಗುತ್ತದೆ ಎಂದು ಹೇಳಿ ಕೆಂಡಾಮಂಡಲರಾಗಿದ್ದಾರೆ.

    ಒಂದೆಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸುದ್ದಿಯಾಗುತ್ತಿರುವ ರಮೇಶ್ ಕುಮಾರ್ ಕ್ಷೇತ್ರದ ಸಮಸ್ಯೆ ಪರಿಶೀಲನೆ ವೇಳೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳಿಲ್ಲದ್ದನ್ನು ಕಂಡು ಇನ್ನೂ ಸಿಟ್ಟಾಗಿದ್ದಾರೆ.

    ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ಸ್ಪಷ್ಟನೆ ನೀಡಲು ಬಂದರೂ ಸಹ, ಕೇಳದ ಸ್ಪೀಕರ್ ರಮೇಶ್ ಕುಮಾರ್ ಸಿಕ್ಕಾಪಟ್ಟೆ ತರಾಟೆ ತೆಗದುಕೊಂಡಿದ್ದಾರೆ. ಅಗತ್ಯವಿರುವ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರೂ ಸಹ, ಶಟಪ್ ಸ್ಕೌಂಡ್ರಲ್ ಎಂದು ಬೈಯ್ಯುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

  • ರಾಮಲಿಂಗಾ ರೆಡ್ಡಿ ನಡೆ ನಿಗೂಢ – ಸ್ಪೀಕರ್ ವಿಚಾರಣೆಗೆ ಗೈರು

    ರಾಮಲಿಂಗಾ ರೆಡ್ಡಿ ನಡೆ ನಿಗೂಢ – ಸ್ಪೀಕರ್ ವಿಚಾರಣೆಗೆ ಗೈರು

    ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರ ನಡೆ ಇಂದಿಗೂ ನಿಗೂಢವಾಗಿದ್ದು, ಇಂದು ಸ್ಪೀಕರ್ ಎದುರು ವಿಚಾರಣೆ ಹಾಜರಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಸಚಿವ ಎಂಟಿಬಿ ನಾಗರಾಜ್ ಅವರ ರೀತಿಯಲ್ಲೇ ರಾಮಲಿಂಗಾ ರೆಡ್ಡಿ ಅವರು ಕೂಡ ಮುಂಬೈಗೆ ತೆರಳುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕಪೋಲಕಲ್ಪಿತ ಎಂದಿದ್ದರು. ಅಲ್ಲದೇ ಇಂತಹ ಸುದ್ದಿಗಳಿಗೆ ಮಾಧ್ಯಮ ಸ್ನೇಹಿತರು ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದರು.

    ಇತ್ತ ಶಾಸಕ ಸ್ಥಾನದ ರಾಜೀನಾಮೆ ವಿಚಾರವಾಗಿ ಸ್ಪೀಕರ್ ಎದುರು ಇವತ್ತು ರಾಮಲಿಂಗಾರೆಡ್ಡಿ ಹಾಗೂ ಗೋಪಾಲಯ್ಯ ಹಾಜರಾಗಬೇಕಿತ್ತು. ಆದರೆ, ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದ್ದೇನೆ. ಹಾಗಾಗಿ, ಇವತ್ತು ಬರಲು ಸಾಧ್ಯವಾಗ್ತಿಲ್ಲ ಅಂತ ಕರೆ ಮಾಡಿ ಸ್ಪೀಕರ್‍ಗೆ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಮಂಗಳವಾರ ಅಥವಾ ಬುಧವಾರ ಭೇಟಿಯಾಗುವಂತೆ ಸ್ಪೀಕರ್ ತಿಳಿಸಿದ್ದಾರೆ.

    ಇದೇ ವೇಳೆ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಮಾತನಾಡಿ, ನಿನ್ನೆಯೇ ಎಲ್ಲ ನಾಯಕರು ಬಂದಿದರು. ಅವರು ಆಹ್ವಾನ ನೀಡಿದ್ದರೆ ನಾನೇ ಹೋಗಿ ನಾಯಕರನ್ನ ಭೇಟಿ ಮಾಡುತ್ತಿದೆ ಎಂದರು. ಅಲ್ಲದೇ ರಾಜೀನಾಮೆ ಅಂಗೀಕಾರ ಆಗುವವರೆಗೂ ನಾನು ಸದನದ ಸದಸ್ಯ ಆಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಈ ನಡುವೆ ಮಹಾಲಕ್ಷ್ಮಿ ಲೇಔಟ್‍ನ ಜೆಡಿಎಸ್ ಶಾಸಕ, ಮುಂಬೈನಲ್ಲಿರೋ ಅತೃಪ್ತ ಗೋಪಾಲಯ್ಯ ಸಹ, ಕೆಲವೊಂದು ಅನಿವಾರ್ಯ ಕಾರಣಗಳಿಂದ ಸ್ಪೀಕರ್ ವಿಚಾರಣೆಗೆ ಬರಲು ಆಗತ್ತಿಲ್ಲ. ಮುಂದಿನ ವಿಚಾರಣೆಗೆ ಹಾಜರಾಗುತ್ತೇವೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.