Tag: Speaker Ramesh Kumar

  • ಜೈಪಾಲ್ ರೆಡ್ಡಿಯನ್ನ ನೆನೆದು ಕಣ್ಣೀರಿಟ್ಟ ಸ್ಪೀಕರ್

    ಜೈಪಾಲ್ ರೆಡ್ಡಿಯನ್ನ ನೆನೆದು ಕಣ್ಣೀರಿಟ್ಟ ಸ್ಪೀಕರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿಯಲ್ಲಿ ಅನಾರೋಗ್ಯ ಕಾರಣದಿಂದ ಮೃತಪಟ್ಟ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್, ಅನಿವಾರ್ಯವಾಗಿ ಉಳಿದ ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧಿಸಿದ ಪತ್ರಗಳನ್ನು ವಿಲೇವಾರಿ ಮಾಡಲೇಬೇಕಾಗಿದೆ. ಜೈಪಾಲ್ ರೆಡ್ಡಿಯವರನ್ನ ಕಳೆದುಕೊಂಡಿದ್ದು ಇಂದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದರು. ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ಜೈಪಾಲ್ ರೆಡ್ಡಿ ಬಗ್ಗೆ ಮಾತನಾಡಿದರು.

    ಅತ್ಯಂತ ಪ್ರಮಾಣಿಕ ರಾಜಕಾರಣಿಯಾಗಿದ್ದರು. ವಿಶೇಷವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಪಾರ್ಲಿಮೆಂಟ್‍ನಲ್ಲಿ ಬಂದಾಗ ಇದರಲ್ಲಿ ಭಾಗವಹಿಸಿ ಜೈಪಾಲ್ ರೆಡ್ಡಿ ಅವರು ಮಾತನಾಡಿದ್ದರು. ಜೈಪಾಲ್ ರೆಡ್ಡಿ ಅವರು 1969ರಲ್ಲಿ ಉಪಚುನಾವಣೆ ಮೂಲಕ ಆಂಧ್ರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1984ರ ವರೆಗೂ ವಿಧಾನಸಭೆಯ ಸದಸ್ಯರಾಗಿರುತ್ತಾರೆ. ಕಾಂಗ್ರೆಸ್ ಪಕ್ಷದ ತುರ್ತು ಪರಿಸ್ಥಿತಿಯಿಂದ ವಿರೋಧಿಸಿ ಕಾಂಗ್ರೆಸ್‍ನಿಂದ ಹೊರ ಬೀಳುತ್ತಾರೆ. 1985 ರಿಂದ 5 ಬಾರಿ ಲೋಕಸಭೆಯಲ್ಲಿ ಎರಡು ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಬರುತ್ತಾರೆ. ಕೇಂದ್ರದ ಮಂತ್ರಿಯಾಗಿಗೂ ಕೆಲಸ ಮಾಡಿದ್ದಾರೆ ಎಂದು ಜೈಪಾಲ್ ರೆಡ್ಡಿಯನ್ನ ನೆನೆದು ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರಿಟ್ಟರು.

    ಅಟಲ್ ವಾಜಪೇಯಿ, ಗೀತಾ ಚಟರ್ಜಿ, ಜಾರ್ಜ್ ಫರ್ನಾಂಡೀಸ್, ಇಂತಹ ಮೇರು ವ್ಯಕ್ತಿಗಳೆಲ್ಲಾ ಸಾರ್ವಜನಿಕ ಜೀವನದಲ್ಲಿದ್ರಾ, ನಮ್ಮ ಪಾರ್ಲೀಮೆಂಟಿನಲ್ಲಿ ಇದ್ದಾರ, ನಾವು ಎಲ್ಲಿದ್ದೇವೆ. ನನ್ನ ನಾಲ್ಕು ದಶಕದ ರಾಜಕೀಯ ಜೀವನದ ಪ್ರಮುಖ ಘಟ್ಟದಲ್ಲಿ ಬಹುಶ: ಕಡೆಯ ಘಟ್ಟ ಆಗುತ್ತೆ ಎಂದು ತಿಳಿದುಕೊಂಡಿದ್ದೇನೆ. ನನ್ನ ಮೇಲೆ ಅತ್ಯಂತ ಜವಾಬ್ದಾರಿ ಇರುವುದರಿಂದ ಇಂತಹ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಸ್ಪೀಕರ್ ಹೇಳಿದರು.

    ಸೋಮವಾರ ಕಲಾಪದ ಕಾರ್ಯಸೂಚಿಯಲ್ಲಿ ನೂತನ ಸಿಎಂ ಬಹುಮತ ಸಾಬೀತು ಹಾಗೂ ಧನವಿನಿಯೋಗ ಮಸೂದೆ ಮೇಲೆ ಚರ್ಚೆ ಎರಡು ನಡೆಯಲಿದೆ. ಎಲ್ಲ ಶಾಸಕರು ಸೋಮವಾರ 11 ಗಂಟೆಗೆ ವಿಧಾನಸೌಧಕ್ಕೆ ಬರಬೇಕು ಎಂದು ಸಭಾಧ್ಯಕ್ಷನಾಗಿ ನಾನು ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಾರ್ಯಸೂಚನೆಯಲ್ಲಿ ಧನವಿನಿಯೋಗ ಮಸೂದೆಯ ಬಗ್ಗೆ ಸೂಚನಾಪತ್ರ ಕಳುಹಿಸಿಕೊಟ್ಟಿದ್ದೇನೆ. ನಮಗೆ ಎರಡೇ ದಿನ ಸಮಯ ಇದ್ದಿದ್ದರಿಂದ ಶನಿವಾರ ಭಾನುವಾರ ಕೆಲಸ ನಡೆದಿದೆ ಎಂದರು.

  • 14 ಅತೃಪ್ತ ಶಾಸಕರನ್ನು ಅನರ್ಹ – ಸ್ಪೀಕರ್ ರಮೇಶ್ ಕುಮಾರ್ ಆದೇಶ

    14 ಅತೃಪ್ತ ಶಾಸಕರನ್ನು ಅನರ್ಹ – ಸ್ಪೀಕರ್ ರಮೇಶ್ ಕುಮಾರ್ ಆದೇಶ

    ಬೆಂಗಳೂರು: ಸೋಮವಾರ ನೂತನ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸುವ ಮುನ್ನ ದಿನವೇ 14 ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ.

    ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದರು.

    ಜುಲೈ 23ರಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವಲ್ಲಿ ವಿಫಲವಾಗಿದ್ದರಿಂದ ರಾಜೀನಾಮೆ ನೀಡಿದ್ದರು. ಅಂತೆಯೇ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಜುಲೈ 26ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಸಿಎಂ ಆದಮೇಲೆ ಯಡಿಯೂರಪ್ಪನವರು ಸೋಮವಾರ ಬಹುಮತ ಸಾಬೀತಿಗೆ ಅವಕಾಶ ಕೇಳಿದ್ದಾರೆ. ಇದೇ ವೇಳೆ ಹಣಕಾಸಿನ ಮಸೂದೆಯ ಅಂಗೀಕಾರದ ಮತದಾನಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ವಿಧಾನಸಭೆಯ ಅಧಿವೇಶನಕ್ಕೆ ಎಲ್ಲ ಸದಸ್ಯರು ಭಾಗವಹಿಸಬೇಕೆಂದು ಕಚೇರಿಯಿಂದ ಸೂಚನಾ ಪತ್ರ ಕಳುಹಿಸಲಾಗಿದೆ. ಇದೇ ವೇಳೆ ಮಾಜಿ ಕೇಂದ್ರ ಸಚಿವ ಜೈಪಾಲ ರೆಡ್ಡಿ ಅವರ ನಿಧನಕ್ಕೆ ಕಂಬನಿ ಮಿಡಿದರು.

    ಸೋಮವಾರ ಅಧಿವೇಶನ ನಡೆಸಲು ಸಿದ್ಧ ನಡೆಸುವಂತೆ ಕಚೇರಿಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದೇನೆ. ಬಹುಮತ ಸಾಬೀತಿಗೆ ಸೋಮವಾರ ಕರೆದ ಹಿನ್ನೆಲೆಯಲ್ಲಿ ಉಳಿದ ಎಲ್ಲ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ. ಹಾಗಾಗಿ ನಮ್ಮ ಕಚೇರಿಯ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ಕೂಡ ಕೆಲಸ ಮಾಡಿದ್ದಾರೆ. ಸೋಮವಾರ ಸದನದಲ್ಲಿ ನಾವು ತೊಡಗಿಕೊಳ್ಳುವದರಿಂದ ಇಂದೇ ಎಲ್ಲ ಅತೃಪ್ತ ರಾಜೀನಾಮೆ ಅರ್ಜಿಗಳ ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

    ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹ ಗೊಳಿಸಿದ್ದರು.

  • ಇಂದು ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್

    ಇಂದು ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.

    ಸ್ಪೀಕರ್ ರಮೇಶ್ ಅವರು ಇಂದು ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಮೂಲಕ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ಕೆಲ ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡುತ್ತಾರಾ, ಉಳಿದ ಅತೃಪ್ತರನ್ನು ಅನರ್ಹತೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳಬಹುದು ಎಂಬುದು ಕುತೂಹಲಕಾರಿಯಾಗಿದೆ.

    ಈ ಹಿಂದೆ ಅಂದರೆ ಬುಧವಾರ ಸ್ಪೀಕರ್ ಅವರು ಸಂಜೆ ವೇಳೆ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಅತೃಪ್ತ ಶಾಸಕರಲ್ಲಿ ಪಕ್ಷೇತರ ಶಾಸಕರ ಆರ್. ಶಂಕರ್, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಹಳ್ಳಿ ಮೂವರು ಶಾಸಕರನ್ನು ಅನರ್ಹ ಮಾಡಿದ್ದರು. ಮೂವರು ಶಾಸಕರನ್ನು ಅನರ್ಹ ಮಾಡಿದ್ದಕ್ಕೆ ಕಾರಣಗಳ ವಿವರಗಳನ್ನು ನೀಡಿದ್ದರು. ಆದರೆ ಈ ಬಾರಿ ಸುದ್ದಿಗೋಷ್ಠಿಯಲ್ಲಿ ಏನು ಹೇಳುತ್ತಾರೆ ಎಂದು ಅತೃಪ್ತ ಶಾಸಕರಲ್ಲಿ ಅನರ್ಹ ಭೀತಿ ಶುರುವಾಗಿದೆ. ಇದನ್ನೂ ಓದಿ: ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಇನ್ನೊಂದೆಡೆ ಸೋಮವಾರ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲೇ ಸ್ಪೀಕರ್ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಆದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ತಮ್ಮ ವೈಯಕ್ತಿಯ ವಿಚಾರವನ್ನು ಮಾತನಾಡುತ್ತಾರಾ ಅಥವಾ ಅತೃಪ್ತ ಶಾಸಕರ ಭವಿಷ್ಯವನ್ನು ನಿರ್ಧರಿಸಲಿದ್ದಾರಾ ಎಂದು ಪ್ರಶ್ನೆ ಮೂಡಿದೆ.

  • ದೋಸ್ತಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಸ್ಪೀಕರ್ ಆದೇಶ

    ದೋಸ್ತಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ ಸ್ಪೀಕರ್ ಆದೇಶ

    ಬೆಂಗಳೂರು: ಮೂವರು ಅತೃಪ್ತರ ಶಾಸಕರ ಅನರ್ಹತೆ ಹಾಗೂ 14 ಶಾಸಕರ ರಾಜೀನಾಮೆ ಪ್ರಕರಣ ಕಾಯ್ದಿರಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆ ದೋಸ್ತಿ ನಾಯಕರ ಪಾಲಿಗೆ ವರದಾನವಾಗಿದೆ. ಎಲ್ಲಾ ಮುಗೀತು ಎಂದು ವಿಪಕ್ಷ ಸ್ಥಾನಕ್ಕೆ ಕೂರಲು ಯೋಚನೆಯಲ್ಲಿದ್ದವರಿಗೆ ಸ್ಪೀಕರ್ ಆದೇಶ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೂ ಬಿಜೆಪಿ ಸರ್ಕಾರ ರಚನೆ ಮಾಡುವಂತೆ ಕಾಣುತ್ತಿಲ್ಲ. ಇತ್ತ ಸ್ಪೀಕರ್, ಅತೃಪ್ತರ ರಾಜೀನಾಮೆ ಪ್ರಕ್ರಿಯೆಯನ್ನು ನಿಯಮಾನುಸಾರ ಮುಗಿಸಲು ಮುಂದಾಗಿದ್ದಾರೆ. ಇದಕ್ಕೆ ಕನಿಷ್ಠ ಒಂದು ವಾರವಾದರೂ ಬೇಕಾಗುವ ಸಾಧ್ಯತೆ ಇದೆ. ಸದ್ಯ ಮೂವರ ತಲೆದಂಡ ಕಂಡು ಬೆದರಿರುವ ಉಳಿದ ಅತೃಪ್ತ ಶಾಸಕರು ಬಂಡಾಯದ ಬಾವುಟ ಇಳಿಸಿ ಪಕ್ಷಕ್ಕೆ ಮರಳಿದರೂ ಅಚ್ಚರಿಯಿಲ್ಲ ಎಂಬ ಮಾತು ದೋಸ್ತಿ ವಲಯದಲ್ಲಿ ಕೇಳಿ ಬಂದಿದೆ. ಒಂದು ವೇಳೆ ಈ ನಡೆಗೆ ಅತೃಪ್ತ ಶಾಸಕರು ಮುಂದಾದರೆ ದೋಸ್ತಿಗಳ ಪಾಲಿಗೆ ಮತ್ತೊಂದು ಸುತ್ತಿನ ಸಮ್ಮಿಶ್ರ ಆಟಕ್ಕೆ ವೇದಿಕೆ ಸಿಕ್ಕಂತಾಗಬಹುದು ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿದೆ.

    ಇತ್ತ ಮೂವರು ಶಾಸಕರ ಅನರ್ಹ ಬಗ್ಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕಿಡಿಕಾರಿದ್ದಾರೆ. ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಉಳಿದವರನ್ನು ಯಾಕೆ ಅನರ್ಹ ಮಾಡಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಅಲ್ಲದೆ ಉಳಿದವರಿಗೆ ಸಂದೇಶ ರವಾನಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಇದಿಗೆ ಹಂಗಾಮಿ ಸಿಎಂ ಆಗಿರುವ ಕುಮಾರಸ್ವಾಮಿ ಅವರು ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇತ್ತ ದಿಢೀರ್ ಬೆಳವಣಿಗೆಯಲ್ಲಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಮೈತ್ರಿ ಸರ್ಕಾರ ಪತನ ಬಳಿಕ ಡಿಕೆಶಿ ದೆಹಲಿ ಭೇಟಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

  • ಸ್ಪೀಕರ್ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ: ದಿನೇಶ್ ಗುಂಡೂರಾವ್

    ಸ್ಪೀಕರ್ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಮೂವರು ರೆಬೆಲ್ ಶಾಸಕರನ್ನು ಅನರ್ಹಹೊಳಿಸಿ ಆದೇಶ ಹೊರಡಿಸಿದ್ದಕ್ಕೆ ಕಾಂಗ್ರೆಸ್ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ನಮ್ಮ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಅವರ ನಿರ್ಣಯವನ್ನು ಸ್ವಾಗರಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಇಂತ ನಿರ್ಧಾರಗಳು ಅತ್ಯಗತ್ಯ. ಸ್ವಾರ್ಥ ಸಾಧನೆಗಾಗಿ ಜನಾದೇಶವನ್ನು ಉಲ್ಲಂಘಿಸಿದವರಿಗೆ ಈ ಐತಿಹಾಸಿಕ ನಿರ್ಣಯ ಎಚ್ಚರಿಕೆಯ ಗಂಟೆಯಗಲಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಅವರು, ಬಂಡಾಯ ಶಾಸಕರು ಅಧಿಕಾರದ ಆಸೆಗೆ ಪಕ್ಷ ತೊರೆದು ಹೋದರು. ಈ ಮೂಲಕ ತಮ್ಮನ್ನು ಆರಿಸಿದ ಜನರನ್ನು ಇಡೀ ದೇಶದ ಜನರ ಎದುರಿಗೆ ನಗೆಪಾಟಲಿಗೆ ತಳ್ಳಿದರು. ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಆರ್.ಶಂಕರ್ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅಮಾನತು ಮಾಡಿರುವ ಸಭಾಧ್ಯಕ್ಷರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಬಂಡಾಯ ಶಾಸಕರ ನಡವಳಿಕೆಯಿಂದಾಗಿ ರಾಜಕಾರಣದ ಬಗ್ಗೆ ಜನರಲ್ಲಿ ಹೇಸಿಗೆ ಹುಟ್ಟಿದೆ ಎಂದು ಕಿಡಿಕಾರಿದ್ದಾರೆ.

  • ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇರಲ್ಲ: ಸ್ಪೀಕರ್ ಆತಂಕ

    ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇರಲ್ಲ: ಸ್ಪೀಕರ್ ಆತಂಕ

    ಬೆಂಗಳೂರು: ಮೈತ್ರಿ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ರಚನೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇರಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

    ಮೈತ್ರಿ ಸರ್ಕಾರದ ಪತನದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಹೊಸ ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗುವ ಅಂಚಿನಲ್ಲಿ ಇದ್ದು, ಜುಲೈ ತಿಂಗಳ ಅಂತ್ಯದ ವೇಳೆಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಜ್ಯದಲ್ಲಿ ಹೊಸ ಬಿಕ್ಕಟ್ಟು ಶುರುವಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರು. ಅಲ್ಲದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವುದು ನಿಶ್ಚಿತ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ 31ರ ಒಳಗೆ ಹೊಸ ಸರ್ಕಾರ ರಚನೆಯಾಗಿ ಹಣಕಾಸು ವಿಧೇಯಕ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾಗಬೇಕು. ಇಲ್ಲದಿದ್ದರೆ ಹಣಕಾಸು ವಿಚಾರದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತದೆ. ಬಿಜೆಪಿಯವರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು.

    ಅತೃಪ್ತ ಶಾಸಕರನ್ನು ರಾಜೀನಾಮೆ ಕುರಿತು ವಿಚಾರಣೆ ನಡೆಸಲು ಕರೆದದ್ದಾಗಿದೆ. ಈ ಕುರಿತು ಅವರ ವಕೀಲರೂ ಸ್ಪಷ್ಟಪಡಿಸಿದ್ದಾರೆ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಉಳಿದದ್ದು ಅವರಿಗೆ ಬಿಟ್ಟಿದ್ದು. ಶಾಸಕರು ರಾಜೀನಾಮೆ ನೀಡಿದ ನಂತರ ಆರ್ಟಿಕಲ್ 190 (3ಬಿ) ಪ್ರಕಾರ ಕರೆಸಿ ವಿಚಾರಣೆ ಮಾಡಬೇಕು. ಹೀಗಾಗಿ ನಾನು ಶಾಸಕರನ್ನು ವಿಚಾರಣೆಗೆ ಕರೆದಿದ್ದೆ, ಅವರು ಬಂದಿಲ್ಲ. ಈ ಕುರಿತು ಮತ್ತೆ ನೋಟಿಸ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ. ವಿಚಾರಣೆಗೆ ಕರೆದಿದ್ದೇನೆ, ಬೇಕಿದ್ದವರು ಬರಲಿ ಇಲ್ಲದಿದ್ದರೆ ಇಲ್ಲ ಎಂದು ತಿಳಿಸಿದರು.

  • ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ಮಂಗಳವಾರ ವಿಧಾನಸಭಾ ಕಲಾಪದಲ್ಲಿ ನಡೆಯಿತು.

    ಸಿಎಂ ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಭಾಷಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಎಚ್.ವಿಶ್ವನಾಥ್ ಅವರು ನಮ್ಮ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅವರು ಬರುತ್ತಿದ್ದೇವೆ ಅಂತ ಮೊದಲು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರನ್ನು ನೋಡಲು ಜಯದೇವ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿದ್ದ ಕಚೇರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡುವಂತೆ ಸೂಚನೆ ನೀಡಿದೆ. ಆದರೆ ಅವರು ನೇರವಾಗಿ ಸುಪ್ರೀಂಕೋರ್ಟಿಗೆ ಹೋದರು ಎಂದು ಕಿಡಿಕಾರಿದರು.

    ಸುಪ್ರೀಂಕೋರ್ಟ್ ಆದೇಶದ ಬಳಿಕ ಎಚ್.ವಿಶ್ವನಾಥ್ ಅವರು ಬಂದು ರಾಜೀನಾಮೆ ನೀಡಿದರು. ಈ ದೃಶ್ಯವನ್ನು ನಾನು ವಿಡಿಯೋ ಕೂಡ ಮಾಡಿಸಿದ್ದೇನೆ. ರಾಜೀನಾಮೆ ಪತ್ರದ ಹೇಗಿರಬೇಕು ಅಂತ ತಿಳಿ ಹೇಳಿದ್ದೇನೆ. ಆದರೂ ಅವರು ಉದ್ದೇಶ ಅದೇ ಎಂದು ಸರಳವಾಗಿ ಹೇಳಿಬಿಟ್ಟರು ಎಂದು ಅಸಮಾಧಾನ ಹೊರ ಹಾಕಿದರು.

    ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ, ವಿಧಾನಸಭಾ ಸದಸ್ಯ ಸೇರಿದಂತೆ ಅನೇಕ ಸ್ಥಾನಗಳನ್ನ ಅಲಂಕರಿಸಿದ್ದಾರೆ. ಆದರೂ ಅವರಿಗೆ ರಾಜೀನಾಮೆ ನೀಡುವುದು ಗೊತ್ತಿಲ್ಲವೇ? ಒಂದು ವೇಳೆ ರಾಜೀನಾಮೆ ಕೊಡುವ ನಿಯಮ ತಿಳಿದಿದ್ದರೆ ಯಾವ ಉದ್ದೇಶಕ್ಕಾಗಿ ಹಾಗೆ ಮಾಡಿದರು ಎನ್ನುವ ಅನುಮಾನ ಬರುತ್ತದೆ. ಇಂತಹ ವ್ಯಕ್ತಿ ಈಗ ಸ್ಪೀಕರ್ ಕುಮ್ಮಕ್ಕು ಕೊಡುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ನನ್ನಂತೆ ಬದುಕಲು ಅವರು ನೂರು ಜನ್ಮ ಪಡೆಯಬೇಕು ಎಂದು ವಿಶ್ವನಾಥ್ ಅವರ ವಿರುದ್ಧ ಚಾಟಿ ಬೀಸಿದರು.

    ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅನುಗ್ರಹದಿಂದ ನಾವು ವಿಧಾನಸಭೆಗೆ ಕಾಲಿಟ್ಟಿದ್ದೇವು. ನನ್ನ ಕ್ಷೇತ್ರದಲ್ಲಿ ನನಗೆ ಜಾತಿಯ ಬೆಂಬಲವಿಲ್ಲ. ಹಣ ಎಷ್ಟಿದೆ ಅಂತ ದೇಶದ ಜನರಿಗೆ ಗೊತ್ತಿದೆ. ಅವಕಾಶ ಸಿಕ್ಕಾಗ ಡಿ.ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಹಾಕಿದ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ ಎಂದು ಹೇಳಿದರು.

    ರಾಜೀನಾಮೆ ಕೊಡುವ ನಿಯಮದ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನಾನು ಈ ಸ್ಥಾನದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಮಾತನಾಡಿರುವುದು ಸಭಾ ನಿಂದನೆ ಎಂದು ಗುಡುಗಿದರು.

    ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದೇನೆ ಎಂದು ಹೇಳಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪತ್ರವನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡುವಂತೆ ಸಿಬ್ಬಂದಿಯನ್ನು ಕರೆದರು. ಬಳಿಕ ಮಾತು ಮುಂದುವರಿಸಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಒಂದೇ ಕ್ಷಣವೂ ಇರಲ್ಲ. ಅದಕ್ಕಾಗಿಯೇ ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಕೆ.ಎಚ್.ರಂಗನಾಥ್ ಅವರ ಕೈಯಲ್ಲಿ ಬೆಳೆದಿದ್ದೇನೆ. ಅವರು ನನಗೆ ರಾಜಕೀಯ ಸಂಸ್ಕಾರ ನೀಡಿದ್ದಾರೆ ಎಂದರು.

  • ರಾಜ್ಯದ ಜನರು ನಮ್ಮನ್ನು ಕ್ಷಮಿಸುವುದಿಲ್ಲ: ಸಿಎಂ

    ರಾಜ್ಯದ ಜನರು ನಮ್ಮನ್ನು ಕ್ಷಮಿಸುವುದಿಲ್ಲ: ಸಿಎಂ

    – ವಿಧಿಯ ಆಟದಿಂದ ರಾಜಕೀಯಕ್ಕೆ ಬಂದೆ
    – ಸಾಮಾಜಿಕ ಜಾಲತಾಣದಿಂದ ಯುವ ಪೀಳಿಗೆ ಹಾಳಾಗುತ್ತಿದೆ

    ಬೆಂಗಳೂರು: ಸದನದಲ್ಲಿ ನಾಲ್ಕು ದಿನಗಳಿಂದ ನಡೆದ ಘಟನೆಗಳು, ಮಾತುಗಳು ರಾಜ್ಯದ ಜನರ ಮುಂದಿವೆ. ಅವರು ತಮ್ಮನ್ನು ಕ್ಷಮಿಸುವುದಿಲ್ಲ. ವಿಶ್ವಾಸ ಮತಯಾಚನೆಯಲ್ಲಿ ವಿಪಕ್ಷದ ಯಾವುದೇ ಸದಸ್ಯರು ಭಾಗವಹಿಸಲಿಲ್ಲ. ಇದು ವಿಶೇಷವಾಗಿತ್ತು ಹಾಗೂ ಇತಿಹಾಸ ಕೂಡ ಆಯಿತು ಎಂದು ಸಿಎಂ ಹೇಳಿದ್ದಾರೆ.

    ವಿಶ್ವಾಸ ಮತಯಾಚನೆ ಚರ್ಚೆಯಲ್ಲಿ ಮಾತನಾಡಿದ ಸಿಎಂ, ರಾಜ್ಯಪಾಲರಿಂದ ಬಂದ ಆದೇಶವನ್ನು ಮತ್ತೆ ಪ್ರಸ್ತಾಪಿಸುವುದಿಲ್ಲ. ನಾವು ಕಾಲ ಹರಣ ಮಾಡುತ್ತಿದ್ದೇನೆ ಅಂತ ಚರ್ಚೆಯಾಗುತ್ತಿದೆ. ಹೌದು, ನಾವು ವಿಶ್ವಾಸ ಮತಯಾಚನೆಯನ್ನು ಮುಂದೂಡಿದ್ದು ನಿಜ. ಆದರೆ ಸಮಯವನ್ನು ವ್ಯರ್ಥ ಮಾಡಿಲ್ಲ. ಸರ್ಕಾರ ಬೀಳಿಸಲು ಮುಂದಾದವವರಿಗೆ ಸ್ವಲ್ಪ ಸಮಯದ ಬಳಿಕ ಬುದ್ಧಿ ಬರುತ್ತೆ ಅಂತ ಕಾದು ನೋಡಿದ್ದೇವೆ. ನಾಲ್ಕು ದಿನಗಳಲ್ಲಿ ನಿಮ್ಮ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಇದು ನಿಮಗೂ ನೋವು ತಂದೆ ಎಂದು ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಿಳಿಸಿದರು.

    ನಾನು ಮದುವೆ ಆಗುವುದಾದರೆ ರಾಜಕಾರಣಕ್ಕೆ ಬರಬಾರದು ಅಂತ ಪತ್ನಿ, ಶಾಸಕಿ ಅನಿತಾ ಅವರು ಷರತ್ತು ಹಾಕಿದ್ದರು. ನನಗೂ ರಾಜಕೀಯದಲ್ಲಿ ಆಸಕ್ತಿ ಕೂಡ ಇರಲಿಲ್ಲ. ಆದರೆ ವಿಧಿಯ ಆಟದಿಂದ ರಾಜಕೀಯಕ್ಕೆ ಬಂದುಬಿಟ್ಟೆ. ಜೊತೆಗೆ ಪತ್ನಿಯನ್ನು ಕರೆದುತಂದೆ ಎಂದು ಸದನದಲ್ಲಿ ನಗೆ ಹರಿಸಿದರು.

    ವಿಧಾನಸಭೆ ಗ್ಯಾಲರಿಯಲ್ಲಿ ಕುಳಿತು ಕಲಾಪಗಳನ್ನು ನೋಡುತ್ತಿದ್ದೆ. ನನ್ನ ವ್ಯವಹಾರ ಚಿತ್ರರಂಗದಲ್ಲಿ. ಸಿನಿಮಾ ಕ್ಷೇತ್ರದಲ್ಲಿ ಇದ್ದರೂ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹೋರಾಟವನ್ನು ನೋಡುತ್ತಾ ಬೆಳೆದೆ. ಅವರು ಯಾರ ಹಂಗಿನಲ್ಲಿಯೂ ಬದುಕಿಲ್ಲ, ಜನರ ಮಧ್ಯದಲ್ಲಿ ಬೆಳೆದಿದ್ದಾರೆ. ಎಚ್.ಡಿ.ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು.

    ಸಚಿವ, ಸಹೋದರ ಎಚ್.ಡಿ.ರೇವಣ್ಣ ಅವರ ಮೇಲೆ ತಂದೆಯ ಆಶೀರ್ವಾದ ಇದೆ. ನಾನು ರಾಜಕೀಯಕ್ಕೆ ಬರುವುದು ಎಚ್.ಡಿ.ದೇವೇಗೌಡ ಅವರಿಗೆ ಇಷ್ಟವಿರಲಿಲ್ಲ. ಅವರ ವಿರೋಧದ ನಡುವೆಯೂ 1996ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತೆ. ಶಾಸಕರ ಒತ್ತಾಯದ ಮೇರೆಗೆ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾಡಿದೆ. ಅಲ್ಲಿಯೂ ಸೋಲು ಕಂಡೆ. ಆಗಲೇ ರಾಜಕೀಯ ನಿವೃತ್ತಿ ಘೋಷಿಸಲು ಮುಂದಾಗಿದ್ದೆ. ಆದರೆ ಕಾರ್ಯಕರ್ತರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮತ್ತೆ ಬೆಂಬಲಕ್ಕೆ ನಿಂತರು ಎಂದರು.

    ಪತ್ನಿಯ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಾನು ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದಾರೆ. ತಪ್ಪು ಮಾಡಿದಾಗ ಸರಿಪಡಿಸಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ ಎಂದು ಶಾಸಕಿ ಅನಿತಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಚಿವ ಸಾರಾ ಮಹೇಶ್ ಅವರ ಬಗ್ಗೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಅಸಹ್ಯವಾಗಿ ಮಾತನಾಡಿದ್ದಾರೆ. ಇಂತಹ ಶಾಸಕರು ನಿಮಗೆ ಬೇಕಿತ್ತು ಅಲ್ವಾ ಸಿ.ಟಿ.ರವಿ ಅವರೇ? ಕರೆದುಕೊಂಡು ಹೋಗಿ ಎಂದು ಗುಡುಗಿದರು.

    ಸಾಮಾಜಿಕ ಜಾಲತಾಣದಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಅನೇಕರು ಟ್ವಿಟ್ಟರ್ ವಾಟ್ಸಪ್, ಫೇಸ್‍ಬುಕ್‍ನಲ್ಲಿಯೇ ಕಾಲ ಕಳೆಯುತ್ತಾರೆ. ಕೆಲವರು ಟ್ವೀಟ್ ಮಾಡಿ ಸಿಎಂ ವಿಶ್ವಾಸ ಮತಯಾಚನೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನೂ ಕೆಲವರು ತಮಗೆ ತೋಜಿದ್ದನ್ನು ಟ್ವೀಟ್ ಮಾಡುತ್ತಾರೆ ಎಂದು ಕಿಡಿಕಾರಿದರು.

    ಸಂತೋಷದಿಂದ ಅಧಿಕಾರ ತ್ಯಜಿಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ಜೊತೆಗೆ ಸೇರಿ 20 ತಿಂಗಳು ಸರ್ಕಾರ ನಡೆಸಿದೆ. ಬಳಿಕ ಅಧಿಕಾರ ಬಿಟ್ಟುಕೊಳ್ಳಲು ಮುಂದಾಗಿದ್ದೆ. ಆದರೂ ನನ್ನನ್ನು ವಚನ ಭ್ರಷ್ಟ ಎಂದು ಆರೋಪಿಸುತ್ತಾರೆ. ಇದು ನನಗೆ ಭಾರೀ ನೋವು ತರುತ್ತಿದೆ ಎಂದು ಕಿಡಿಕಾರಿದರು.

    ಮಾಧ್ಯಮಗಳ ವಿರುದ್ಧ ಕಿಡಿ:
    ಮಾಧ್ಯಮಗಳಿಂದ ನಮಗೆ ಖಾಸಗಿ ಜೀವನವೇ ಇಲ್ಲದಂತಾಗಿದೆ. ಸರ್ಕಾರ ರಚನೆ ಆದಾಗಿನಿಂದ ಮಾಧ್ಯಮಗಳು ಡೆಡ್‍ಲೈನ್ ಕೊಡುತ್ತಲೇ ಬಂದವು ಎಂದು ಗುಡುಗಿದರು. ದಿನಬೆಳಗಾದರೆ ಸರ್ಕಾರ ನನ್ನ ವಿರುದ್ಧ ಸುದ್ದಿಗಳು ಬರುತಿತ್ತು. ಆದರು ನಾನು ಇದ್ದೇನೆ ಅಂದರೆ ಅದು ತಂದೆ ತಾಯಿ ಪುಣ್ಯ ಎಂದು ತಿಳಿಸಿದರು.

    ಅಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಮಾಧ್ಯಮಗಳು ಕೊಟ್ಟ ಡೆಡ್‍ಲೈನ್‍ನಲ್ಲಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ನಾನು ಇಂತಹ ಕಷ್ಟದ ಸಮಯದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ ಅದಕ್ಕೆ ಕಾರಣ ಅಧಿಕಾರಿಗಳ ಸಹಕಾರ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.

    ಮೋದಿ ವಿರುದ್ಧ ಕಿಡಿ:
    ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿದರು. ನಾವು ರೈತರ ಸಾಲಮನ್ನಾ ಮಾಡಲು ಶ್ರಮಿಸಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಈಗಲೂ 1,500 ಕೋಟಿ ರೂ. ಇದೆ. ನಾಡಿನ ರೈತರಿಗೆ ನನ್ನಿಂದ ಯಾವುದೇ ಮೋಸವಾಗಿಲ್ಲ ಎಂದು ಹೇಳಿದರು.

  • ನುಡಿದಂತೆ ನಡೆಯಿರಿ – ದೋಸ್ತಿ ಸರ್ಕಾರಕ್ಕೆ ಬಿಜೆಪಿ ಗುದ್ದು

    ನುಡಿದಂತೆ ನಡೆಯಿರಿ – ದೋಸ್ತಿ ಸರ್ಕಾರಕ್ಕೆ ಬಿಜೆಪಿ ಗುದ್ದು

    ಬೆಂಗಳೂರು: ದೋಸ್ತಿ ಸರ್ಕಾರದ ವಿಶ್ವಾತ ಮತಯಾಚನೆ ಕುರಿತ ಗೊಂದಲಗಳು ಕೊನೆ ಗಳಿಗೆವರೆಗೂ ಮುಂದುವರಿದಿದ್ದು, ಇಂದಿನ ಸದನದ ಹಂತಿಮ ಹಂತದಲ್ಲಿ ದೋಸ್ತಿ ಸರ್ಕಾರದ ನಾಯಕರು ಸದನವನ್ನು ನಾಳೆಗೆ ಮುಂದೂಡಲು ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ.

    ಇಂದು ಸಂಜೆ 6.20ಕ್ಕೆ 10 ನಿಮಿಷಗಳ ಕಾಲ ಸದನ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ಕಚೇರಿಗೆ ತೆರಳಿದ್ದರು. ಆದರೆ ಸದನ ಮುಂದೂಡಿ ಒಂದೂವರೆ ಗಂಟೆಯಾದರೂ ಮತ್ತೆ ಸದನ ಆರಂಭಿಸಲಿಲ್ಲ. ಈ ನಡುವೆಯೇ ಸಿಎಂ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಆದರೆ ಯಾರ ಮನವೊಲಿಕೆಗೂ ಕರಗದ ಸ್ಪೀಕರ್ ಕೊಟ್ಟ ಮಾತಿಗೆ ಬದ್ಧರಾಗಿ ಎಂಬ ಖಡಕ್ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

    ಇತ್ತ ದೋಸ್ತಿ ನಾಯಕರ ನಡೆಗೆ ಗುದ್ದು ನೀಡಿರುವ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ‘ನುಡಿದಂತೆ ನಡೆಯಿರಿ’ ಎಂದು ಟ್ವೀಟ್ ಮಾಡಿ ಅಭಿಯಾನವನ್ನು ಆರಂಭಿಸಿದೆ. ಆ ಮೂಲಕ ಸದನ ಹೊರಗೂ ಹೋರಾಟವನ್ನು ಆರಂಭಿಸಿದೆ. ಇತ್ತ ಬಿಜೆಪಿಗೆ ಟಾಂಗ್ ನೀಡಿರುವ ಕಾಂಗ್ರೆಸ್, ಆಪರೇಷನ್ ಕಮಲ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ನಿಮ್ಮ ಕುತಂತ್ರ ಬಯಲಾಗುತ್ತಿದೆ ಸ್ವಲ್ಪ ತಡೆಯಿರಿ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಇದಕ್ಕೆ, ಒಂದು ವರ್ಷದಿಂದ ನಿಮ್ಮ ದುರಾಡಳಿತವನ್ನು ತಡೆದುಕೊಂಡು ಸಾಕಾಗಿದೆ ಈಗ ನಿಮ್ಮ ಡ್ರಾಮಾ ಸಾಕು ನಡಿಯಿರಿ ಎಂದು ಬಿಜೆಪಿ ತಿರುಗೇಟು ನೀಡಿದೆ.

    ಸದ್ಯ ಸ್ಪೀಕರ್ ಅವರು ತಮ್ಮ ಮಾತಿಗೆ ಬದ್ಧರಾಗಿ ಇಂದೇ ವಿಶ್ವಾಸ ಮತಯಾಚನೆ ಸಿದ್ಧತೆ ನಡೆಸಲು ಸೂಚನೆ ನೀಡಿದ್ದಾರೆ. ಅಲ್ಲದೇ 8.30ರ ವೇಳೆಗೆ ಮತ್ತೆ ಸದನ ಆರಂಭ ಮಾಡಿದ್ದು, ಆದರೆ ಸದನವನ್ನು ನಾಳೆಗೆ ಮುಂದೂಡುವಂತೆ ದೋಸ್ತಿ ಸರ್ಕಾರ ನಾಯಕರು ಗದ್ದಲವನ್ನು ನಡೆಸಿದ್ದಾರೆ. ಆದರೆ ಇಂದು ರಾತ್ರಿ 1 ಗಂಟೆಯಾದರೂ ನಾವು ಸದನದಲ್ಲಿ ಇರುತ್ತೇವೆ ಇಂದೇ ವಿಶ್ವಾಸ ಮತಯಾಚನೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

  • ವಿನಾಕಾರಣ ಸದನದಲ್ಲಿ ಕಾಲಹರಣ ಮಾಡಲಾಗುತ್ತಿದೆ: ಬಿಎಸ್‍ವೈ

    ವಿನಾಕಾರಣ ಸದನದಲ್ಲಿ ಕಾಲಹರಣ ಮಾಡಲಾಗುತ್ತಿದೆ: ಬಿಎಸ್‍ವೈ

    – ವಿಧಾನಸೌಧದಿಂದ ಮತ್ತೆ ರೆಸಾರ್ಟಿಗೆ ಶಾಸಕರು ಶಿಫ್ಟ್

    ಬೆಂಗಳೂರು: ಸದನದಲ್ಲಿ ವಿನಾಕಾರಣ ಸದಸ್ಯರಿಗೆ ಚರ್ಚೆ ನಡೆಸಲು ಹೆಚ್ಚು ಸಮಯ ಕೊಟ್ಟು ಕಾಲಹರಣ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

    ವಿಧಾನಸಭಾ ಕಲಾಪ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ಸ್ಪೀಕರ್ ರಮೇಶ್ ಕುಮಾರ್ ಅವರು ಶುಕ್ರವಾರ ಸಂಜೆ 8.15ರ ವೇಳೆಗೆ ಬಂದು ಸದನದಲ್ಲಿ ಸೋಮವಾರ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲಾ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಮುಂದೇ ಏನಾಗಲಿದೆ ಎಂದು ಕಾದು ನೋಡುತ್ತೇವೆ ಎಂದರು.

    ಇಡೀ ದೇಶನದ ಜನರು ಸದನವನ್ನು ಗಮನಿಸುತ್ತಿದ್ದಾರೆ. ಮುಂಬೈನಲ್ಲಿರುವ ಶಾಸಕರಿಗೆ ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅವರು 98 ಹಾಗೂ ನಾವು 106 ಶಾಸಕರು ಇದ್ದೇವೆ. ಸೋಮವಾರ ಏನಾಗುತ್ತೆ ಎನ್ನುವುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಇತ್ತ ಸೋಮವಾರ ಸದನ ಮುಂದೂಡಿಕೆ ಆಗಿರುವುದರಿಂದ ಬಿಜೆಪಿ ಶಾಸಕರು ರೆಸಾರ್ಟಿಗೆ ತೆರಳಲು ಸಿದ್ಧತೆ ನಡೆಸಿದರು. ನಿನ್ನೆ ಬೆಳಗ್ಗೆಯಿಂದಲೂ ವಿಧಾನಸೌಧದಲ್ಲೇ ಇರುವ ಶಾಸಕರು ಸೋಮವಾರದವರೆಗೂ ರೆಸಾರ್ಟ್ ವಾಸ್ತವ್ಯ ಮುಂದೂವರಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮೈತ್ರಿ ಸರ್ಕಾರದ ನಡೆಯಿಂದ ಬಿಎಸ್‍ವೈ ಶಾಸಕರಿಗೆ ಒಗ್ಗಟ್ಟಿನಿಂದ ಇರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ನಾಳೆ ಮತ್ತೆ ರೆಸಾರ್ಟಿನಲ್ಲಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಜೆಡಿಎಸ್ ಶಾಸಕರು ಕೂಡ ರೆಸಾರ್ಟ್ ಕಡೆ ನಡೆದಿದ್ದು, ಸೋಮವಾರದವರೆಗೂ ಅಲ್ಲಿಯೇ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಕೂಡ ಡಿಸಿಎಂ ಪರಮೇಶ್ವರ್ ಅವರ ನೇತೃತ್ವದಲ್ಲಿ ನಗರದ ತಾಜ್ ವಿವಾಂತ ಹೋಟೆಲ್‍ಗೆ ತೆರಳಿದ್ದಾರೆ.