Tag: Speaker Ramesh Kumar

  • 1 ತಿಂಗ್ಳ ಬಳಿಕ ರಾಜ್ಯಕ್ಕೆ ಅನರ್ಹ ಶಾಸಕ ಬಿಸಿ ಪಾಟೀಲ್ ವಾಪಸ್

    1 ತಿಂಗ್ಳ ಬಳಿಕ ರಾಜ್ಯಕ್ಕೆ ಅನರ್ಹ ಶಾಸಕ ಬಿಸಿ ಪಾಟೀಲ್ ವಾಪಸ್

    – ಮೈತ್ರಿ ಸರ್ಕಾರ, ಎಚ್‍ಡಿಕೆ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ

    ಬೆಂಗಳೂರು: ಅನರ್ಹಗೊಂಡಿದ್ದ ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಅವರು ಬರೋಬ್ಬರಿ ಒಂದು ತಿಂಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಇಂದು ಸಂಜೆ 05.45ರ ವೇಳೆಗೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷ 2 ತಿಂಗಳಿನಿಂದ ರಾಜ್ಯದಲ್ಲಿ ರಾಕ್ಷಸ ಸರ್ಕಾರವಿತ್ತು. ಕಾಂಗ್ರೆಸ್ಸಿನ ಇಬ್ಬರು, ಮೂವರು ನಾಯಕರಿಗೆ ಬಿಟ್ಟರೆ ಸಂಪೂರ್ಣ ಆಡಳಿತ ಒಂದೇ ಕುಟುಂಬದ ಹಿಡಿತದಲ್ಲಿತ್ತು. ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸರ್ಕಾರ ಆಡಳಿತ ನಡೆಯುತಿತ್ತು. ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಹಾಗೂ ಉತ್ತರ ಕರ್ನಾಟಕ, ನಮ್ಮ ಕ್ಷೇತ್ರಗಳಿಗೆ ಆಗುತ್ತಿದ್ದ ಅನ್ಯಾಯ ತಡೆಯಲು ನಾವು ರಾಜೀನಾಮೆ ನೀಡಿದ್ದೇವೆ ಎಂದರು.

    ಸ್ಪೀಕರ್ ಅನರ್ಹತೆ ತೀರ್ಮಾನದ ಕುರಿತು ಮಾತನಾಡಿದ ಅವರು, ಈ ನಿರ್ಧಾರದ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್ ಮೊರೆಹೋಗಿದ್ದು ಮುಂದಿನ ವಾರ ಉತ್ತಮ ನಿರ್ಣಯ ಬರುತ್ತೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸ್ಪಷ್ಟ ಪಡಿಸಿದ ಅವರು, ಕ್ಷೇತ್ರಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು ರಾಜೀನಾಮೆ ನೀಡಿ ಸರ್ಕಾರ ಕೆಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಹಿರೇಕೆರೂರಿನಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷದಿಂದ ಎಂಬ ತೀರ್ಮಾನ ಮಾಡುತ್ತೇನೆ ಎಂದರು.

    ಚುನಾವಣೆಯಲ್ಲಿ ಪುತ್ರಿ ಸ್ಪರ್ಧೆ ಮಾಡುತ್ತರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗಳು ಕೂಡ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ನಾನು ಕೇವಲ ಹಿರೇಕೆರೂರು ಕ್ಷೇತ್ರಕ್ಕೆ ಮಾತ್ರ ಸಮೀತವಾಗಿಲ್ಲ. ಇಡೀ ರಾಜ್ಯಕ್ಕೆ ನನ್ನ ಬಗ್ಗೆ ತಿಳಿದಿದೆ. ನನ್ನ ಜೀವನದಲ್ಲಿ ಎರಡನೇ ರಾಜೀನಾಮೆ ನೀಡಿದ್ದೇನೆ. 2002 ರಲ್ಲಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಅಂದು ಸಹ ನಾನು ಆಸೆ ಆಕಾಂಕ್ಷೆಗಳನ್ನು ಹೊಂದಿರಲಿಲ್ಲ. ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗುವ ವ್ಯಕ್ತಿ ನಾನಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಗೆದ್ದು ಮತ್ತೆ ವಿಧಾನಸಭೆ ಪ್ರವೇಶ ಮಾಡುವ ಅರ್ಹತೆ ಪಡೆದುಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

    ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ

    ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಹುಮತ ಸಾಬೀತು ಮಾಡಿದ ನಂತರ ಧನ ವಿಧೇಯಕ ಅಂಗೀಕಾರವಾದ ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿದರು.

    ಪಕ್ಷದ ಹಿರಿಯರ ಮಾತಿನಂತೆ ಸ್ಪೀಕರ್ ಆಗಿ ಆಯ್ಕೆಯಾದೆ. ನಾನು ಯಾರನ್ನು ಕೇಳಲಿಲ್ಲ, ಪಕ್ಷದ ವರಿಷ್ಠರ ಸಲಹೆಯಂತೆ ಈ ಸ್ಥಾನವನ್ನು ಅಲಂಕರಿಸಿದೆ. ಇದೂವರೆಗೂ ಈ ಸ್ಥಾನದ ಗೌರವ ಕಡಿಮೆಯಾಗದಂತೆ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲ ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದರು.

    ದಯವಿಟ್ಟು ಯಾರು ವೈಯಕ್ತಿಕ ವಿಚಾರಗಳನ್ನು ಕೆದಕಬೇಡಿ. ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರ ದೂರಿನ ಅನ್ವಯ ಸಂವಿಧಾನದ ಪ್ರಕಾರವೇ 17 ಶಾಸಕರ ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೇನೆ. ಯಾವುದೇ ಒತ್ತಡ, ಪ್ರಚೋದನೆಗೆ ಒಳಗಾಗದೇ ಆದೇಶವನ್ನು ಪ್ರಕಟಿಸಿದ್ದೇನೆ ಎಂದರು.

  • ಶಾಸಕರ ಅನರ್ಹತೆ ಬೆನ್ನಲ್ಲೇ ಬಿಎಸ್‍ವೈ ಸಂಪುಟ ರಚನೆಯ ಲೆಕ್ಕಾಚಾರ ಬದಲು!

    ಶಾಸಕರ ಅನರ್ಹತೆ ಬೆನ್ನಲ್ಲೇ ಬಿಎಸ್‍ವೈ ಸಂಪುಟ ರಚನೆಯ ಲೆಕ್ಕಾಚಾರ ಬದಲು!

    ಬೆಂಗಳೂರು: ಅತೃಪ್ತ ಶಾಸಕರೆಲ್ಲ ಸದ್ಯ ಅನರ್ಹಗೊಂಡಿದ್ದಾರೆ. ಶಾಸಕರ ಅನರ್ಹತೆಯ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ರಚನೆಯ ಲೆಕ್ಕಾಚಾರವನ್ನು ಬದಲಿಸಿಕೊಂಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ರಾಜೀನಾಮೆ ನೀಡುವ ಮೊದಲು ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಹೇಳಿತ್ತು ಎನ್ನಲಾಗುತ್ತಿದೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗಿದ್ದರೆ ಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋಗುವ ಪ್ಲಾನ್ ಬಿಜೆಪಿಗಿತ್ತು. ಆದರೆ ಈಗ ಶಾಸಕರನ್ನು ಅನರ್ಹ ಮಾಡಿದ್ದರಿಂದ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ.

    ಈಗ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಅನರ್ಹತೆಯನ್ನು ರದ್ದುಗೊಳಿಸುವ ಆದೇಶ ಸುಪ್ರೀಂನಿಂದ ಪ್ರಕಟವಾದರೆ ಮಾತ್ರ ಅವರೆಲ್ಲರಿಗೂ ಸಂಪುಟದಲ್ಲಿ ಸ್ಥಾನ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆ. ಹೀಗಾಗಿ ತನ್ನ ಸಂಪುಟದಲ್ಲಿ ಈಗ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲಾವಾರು/ ಜಾತಿವಾರು ಪ್ರತಿನಿಧ್ಯ ನೀಡಬೇಕಾದ ಕಾರಣ ಬಿಎಸ್‍ವೈ ಅಳೆದು ತೂಗಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾನು ಗುರುತಿಸಿದವರೇ, ನನಗೆ ಮೋಸ ಮಾಡಿದರು – ಸುದ್ದಿಗೋಷ್ಠಿಯಲ್ಲಿ ಎಚ್‍ಡಿಡಿ ಕಣ್ಣೀರು

    ಮುಂಜಾಗ್ರತಾ ಕ್ರಮಗಳೇನು?
    ಕಾನೂನು ಪ್ರಕಾರ ಸಿಎಂ ಸೇರಿ ಗರಿಷ್ಟ ಒಟ್ಟು 34 ಮಂದಿಗಷ್ಟೇ ಮಂತ್ರಿಯಾಗಲು ಸಾಧ್ಯ. ಸದ್ಯ ಅನರ್ಹಗೊಂಡಿರುವ ಶಾಸಕರನ್ನು ಹೊರತುಪಡಿಸಿ ಕೇವಲ 23 ಶಾಸಕರನ್ನು ಒಳಗೊಂಡ ಸಚಿವ ಸಂಪುಟ ರಚನೆ ಮಾಡುವುದು. 11 ಮಂತ್ರಿ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, 6 ತಿಂಗಳ ಬಳಿಕ ಸಂಪುಟ ವಿಸ್ತರಣೆಗೆ ಮುಂದಾಗುವುದು. ಆ ಸಮಯದಲ್ಲಿ ರೆಬೆಲ್ ಶಾಸಕರು ಅನರ್ಹತೆಯಿಂದ ಪಾರಾಗಿದ್ದರೆ, ಅವರಲ್ಲಿ 11 ನಾಯಕರು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಹಾಗಾಗಿ ಕಾದು ನೋಡುವ ತಂತ್ರಕ್ಕೆ ಯಡಿಯೂರಪ್ಪನವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸುತ್ತೆ: ಚಲುವರಾಯಸ್ವಾಮಿ

    ಕಾದು ನೋಡುವ ತಂತ್ರ ಸೇರಿದಂತೆ ಸಂಪುಟ ರಚನೆಯ ನಾಲ್ಕೈದು ಅಂಶಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಅಮಿತ್ ಶಾ ಮುಂದೆ ಇಡಲು ಯಡಿಯೂರಪ್ಪನವರು ತೀರ್ಮಾನಿಸಿದ್ದಾರೆ. ಅಮಿತ್ ಶಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ರಾಜ್ಯ ಬಿಜೆಪಿಯ ಸಂಪುಟ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!

    ಅನರ್ಹಗೊಂಡಿರುವ ಎಲ್ಲ 17 ಶಾಸಕರಿಗೂ 15ನೇ ವಿಧಾನಸಭೆಯ ಬಾಗಿಲು ಬಂದ್ ಆಗಿದೆ. ವಿಶ್ವಾಸಮತ ಯಾಚನೆ ವೇಳೆ ಗೈರಾಗಿದ್ದರಿಂದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಇದೀಗ ಬಿಜೆಪಿ ನೇತೃತ್ವದ ಸರ್ಕಾರ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದು, ಅತೃಪ್ತರೆಲ್ಲರಿಗೂ ಸಚಿವ ಸ್ಥಾನ ಸೇರಿದಂತೆ ಹಲವು ಭರವಸೆಗಳನ್ನು ಕಮಲ ನಾಯಕರು ನೀಡಿದ್ದರು ಎನ್ನಲಾಗಿತ್ತು. ಅನರ್ಹಗೊಂಡಿರುವ ಎಲ್ಲ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿಕೊಂಡೇ ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಅನರ್ಹಗೊಂಡ ಶಾಸಕರು:
    ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಕಾಂಗ್ರೆಸ್ಸಿನ ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರನ್ನು ಅನರ್ಹಗೊಳಿಸಿದ್ದಾರೆ. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

  • ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬೆಂಗಳೂರು: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಕಾನೂನು ಬಾಹಿರವಾಗಿದೆ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಹಿರಿಯ ವಕೀಲರು, ರಾಜೀನಾಮೆಯನ್ನು ಮಾತ್ರ ಅಂಗೀಕಾರ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತೇ ಹೊರತು ಅನರ್ಹತೆ ಬಗ್ಗೆ ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ ರಾಜೀನಾಮೆಯನ್ನು ಕೈಬಿಟ್ಟು ಅನರ್ಹತೆ ಗೊಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ರಾಜೀನಾಮೆಯನ್ನು ಮೊದಲು ಅಂಗೀಕಾರ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

    ಕಾನೂನಿನ ಪ್ರಕಾರ ಅನರ್ಹತೆಗೆ ಒಂದು ವಾರದ ಕಾಲಾವಕಾಶ ನೀಡಬೇಕಿತ್ತು. ಆದರೆ ಸ್ಪೀಕರ್ ಮೂರು ದಿನಗಳಲ್ಲಿ ದಿಢೀರನೆ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಅತೃಪ್ತ ಶಾಸಕರು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ, ಆದೇಶವನ್ನು ತಡೆಹಿಡಿಯುವ ಅವಕಾಶವಿದೆ ಎಂದರು.

    ಶನಿವಾರ ಹಾಗೂ ಭಾನವಾರ ರಜೆ ಇದ್ದರೂ ಕಚೇರಿಯಲ್ಲಿ ಕುಳಿತು ತರಾತುರಿಯಲ್ಲಿ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಅದೇ ಶಾಸಕರು ರಾಜೀನಾಮೆ ಸ್ವೀಕರಿಸುವಾಗ ರಜೆ ಇದೆ, ಖಾಸಗಿ ಕಾರ್ಯಕ್ರಮದ ಅಂತ ಹೇಳಿ ವಿಳಂಬ ನೀತಿ ಅನುಸರಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಅನುಕೂಲವಾಗುವಂತೆ ನಡೆದುಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    ಸ್ಪೀಕರ್ ರಮೇಶ್ ಕುಮಾರ್ ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಾಸಕರ ಅನರ್ಹತೆಯಿಂದ ವಿಧಾನಸಭೆಯ ಸಂಖ್ಯಾಬಲ ಕಡಿಮೆಯಾಗಿದೆ. ಹೀಗಾಗಿ ಬಿಜೆಪಿಯವರು ಯಾರ ಸಹಾಯವಿಲ್ಲದೇ ವಿಶ್ವಾಸಮತ ಸಾಬೀತು ಮಾಡುತ್ತಾರೆ ಎಂದರು.

    ಶಾಸಕರನ್ನು 2023ರ ವರೆಗೆ ಅನರ್ಹತೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳುತ್ತಾರೆ. ಇದು ಅಸಂವಿಧಾನಿಕವಾಗಿದೆ. ಕಾನೂನಿನ ಪ್ರಕಾರ ಅನರ್ಹಗೊಂಡ ಶಾಸಕ ಮುಂದಿನ ಉಪ ಚುನಾಮಣೆ ಇಲ್ಲವೇ, ಮುಖ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸ್ಪೀಕರ್ ಅವರು ಶಾಸಕರನ್ನು ಹೆದರಿಸುವ ತಂತ್ರವನ್ನು ಹೂಡುತ್ತಾ ಬಂದಿದ್ದಾರೆ ಎನ್ನುವ ವಾದಕ್ಕೆ ಸಾಂದರ್ಭಿಕ ಸಾಕ್ಷಿ ಸಿಗುತ್ತದೆ. ಮೊನ್ನೆಯಷ್ಟೇ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಮೂಲಕ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವಂತೆ ಬಿಸಿ ಮುಟ್ಟಿಸಿದ್ದರು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅವರ ತಂತ್ರ ವಿಫಲವಾಗಿದ್ದರಿಂದ ಇಂದು 14 ಜನರನ್ನೂ ಅನರ್ಹಗೊಳಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಆದೇಶಕ್ಕೆ ತಡೆತಂದು ಮತ್ತೆ ಕಲಾಪದಲ್ಲಿ ಭಾಗವಹಿಸಬಹುದು. ರೆಬೆಲ್ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಶಾಸಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕಾಂಗ್ರೆಸ್ ನಾಯಕರು ವಿಪ್ ಜಾರಿ ಮಾಡಿದ್ದಾರೆ. ಈ ಮೂಲಕ ಸ್ಪೀಕರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

    ಅತೃಪ್ತ ಶಾಸಕರಿಗೆ ಬಿಜೆಪಿಯು ಸಚಿವ ಸ್ಥಾನ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರು, ಕೊಟ್ಟರೆ ಏನು ತಪ್ಪು? ಮಂತ್ರಿಗಿರಿ ನೀಡಿದರೆ ಪ್ರಳಯವಾಗಲ್ಲ ಬಿಡಿ. ಮಂತ್ರಿಗಿರಿಗಾಗಿಯೇ ಅವರು ರಾಜೀನಾಮೆ ನೀಡಿದ್ದರೆ ತಪ್ಪು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರಾಜೀನಾಮೆ ನೀಡುವುದು ಸರಿ ಎಂದು ಅಭಿಪ್ರಾಯಪಟ್ಟರು.

  • ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!

    ಆಪರೇಷನ್ ಕಮಲ-2: ದೋಸ್ತಿಗಳಿಗೆ ಕೈ ಕೊಡಲು ‘6’ ಮಂದಿ ರೆಡಿ!

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದು ನೆರೆಯ ಮಹಾರಾಷ್ಟ್ರ ಸೇರಿಕೊಂಡಿರುವ 17 ಶಾಸಕರಿಗೆ ವಿಧಾನಸಭೆ ಬಾಗಿಲು ಬಂದ್ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನಲಾಗಿದ್ದು, ದೋಸ್ತಿ ಪಕ್ಷಗಳ ಆರು ಜನರು ಬಾಜಪದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜೆಡಿಎಸ್ ಓರ್ವ ಶಾಸಕ ಸೇರಿದಂತೆ ಒಟ್ಟು ಆರು ಜನರು ಕಮಲ ಅಂಗಳಕ್ಕೆ ಪಾದಾರ್ಪಣೆ ಮಾಡಲು ನಿಂತಿದ್ದು, ಇಷ್ಟು ದಿನ ಅನರ್ಹತೆ ಭೀತಿಯಿಂದಾಗಿ ದೂರ ಉಳಿದುಕೊಂಡಿದ್ದರು ಎನ್ನಲಾಗಿದೆ. ಸೋಮವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ ಬಳಿಕ ರಮೇಶ್ ಕುಮಾರ್ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ರಮೇಶ್ ಕುಮಾರ್ ರಾಜೀನಾಮೆ ನೀಡಿದ್ರೆ ಬಿಜೆಪಿಯ ನಾಯಕರೊಬ್ಬರು ಸ್ಪೀಕರ್ ಆಗಲಿದ್ದಾರೆ. ಇದನ್ನೂ ಓದಿ: ಸ್ಪೀಕರ್ ನಿರ್ಧಾರ ಕಾನೂನು ಬಾಹಿರ – ಬಿ.ವಿ.ಆಚಾರ್ಯ

    ಬಿಜೆಪಿ ಬೆಂಬಲಿತ ಸ್ಪೀಕರ್ ಆಯ್ಕೆಯಾದ್ರೆ ರಾಜೀನಾಮೆ ಸಹ ಬೇಗ ಅಂಗೀಕಾರವಾಗಲಿದೆ ಎಂದು ಆರು ಶಾಸಕರು ಇಷ್ಟು ದಿನ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಾಗಿ ಇಷ್ಟು ದಿನ ರಾಜೀನಾಮೆಯಿಂದ ದೂರ ಉಳಿದುಕೊಂಡಿದ್ದರು. ಒಂದು ವೇಳೆ ಅತೃಪ್ತರೊಂದಿಗೆ ರಾಜೀನಾಮೆ ಸಲ್ಲಿಸಿದ್ದರೆ ಇಂದು ಅನರ್ಹವಾಗಬೇಕಿತ್ತು ಎಂಬ ಲೆಕ್ಕಾಚಾರಗಳಿಂದಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿವೆ.  ಇದನ್ನೂ ಓದಿ: ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು: ಸಿದ್ದರಾಮಯ್ಯ

    ಬಹುಮತ ಸಾಬೀತುಪಡಿಸುವ ನೂತನ ಬಿಜೆಪಿ ಸರ್ಕಾರ ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸಬಹುದು. ಸಭಾಧ್ಯಕ್ಷರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನೋಟಿಸ್ ನೀಡಲಾಗುತ್ತದೆ. 15 ದಿನಗಳ ಬಳಿಕ ದಿನಾಂಕ ನಿಗದಿ ಮಾಡಿ ಅವಿಶ್ವಾಸವನ್ನು ಅದನ್ನು ಮತಕ್ಕೆ ಹಾಕಲಾಗುತ್ತದೆ. ಬಹುಮತ ಸಿಗದೇ ಇದ್ದಲ್ಲಿ ಸ್ಪೀಕರ್ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿಯಬೇಕಾಗುತ್ತದೆ.

    ಯಾಕೆ ಈ ಆಪರೇಷನ್?
    ಅನರ್ಹಗೊಂಡ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಮತ್ತೆ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

    ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ. ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಸೋತರೆ ಮತ್ತೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಬಹುದು. ಈ ರೀತಿ ಆಗದಂತೆ ತಡೆಯಲು ಬಿಜೆಪಿ ಈಗ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅತೃಪ್ತ ಶಾಸಕರ ಜೊತೆ ಸ್ನೇಹಿತರಾಗಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

  • ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು: ಸಿದ್ದರಾಮಯ್ಯ

    ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು: ಸಿದ್ದರಾಮಯ್ಯ

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿ ಕರೆದು ಇಂದು 14 ಮಂದಿ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಸ್ಪೀಕರ್ ಅವರ ತೀರ್ಪಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರು ಮೊದಲಿಗೆ, “ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರಾದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ” ಎಂದು ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿದ ಸಿದ್ದರಾಮಯ್ಯ, “ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪದವಿ, ಅಧಿಕಾರ ರಾಜಕಾರಣದಲ್ಲಿ ಎಂದಿಗೂ ಶಾಶ್ವತವಲ್ಲ. ಮುಂದಿನ ಪೀಳಿಗೆಯ ರಾಜಕಾರಣಕ್ಕೆ ನಾವು ಮಾದರಿಯಾಗಿ ಏನನ್ನು ಬಿಟ್ಟುಹೋಗುತ್ತೇವೆ ಎಂಬುದು ಮುಖ್ಯ. ಸಭಾಧ್ಯಕ್ಷರ ಇಂದಿನ ನಿರ್ಣಯ ಅವಕಾಶವಾದಿ ರಾಜಕಾರಣಕ್ಕೆ ನೀಡಿರುವ ಕೊಡಲಿ ಏಟು. ಅವರ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ” ಎಂದು ಅತೃಪ್ತ ಶಾಸಕರಿಗೆ ಟ್ವೀಟ್ ಮೂಲಕ ಏಟು ಕೊಟ್ಟಿದ್ದಾರೆ.

  • ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    ಬಿಲ್ ಪಾಸಾಗಿಲ್ಲ ಅಂದ್ರೆ ಒಂದು ನಯಾ ಪೈಸೆ ಡ್ರಾ ಆಗಲ್ಲ: ಸ್ಪೀಕರ್ ಗರಂ

    – ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲವಾ

    ಬೆಂಗಳೂರು: ಜುಲೈ 31 ರಂದು ಫೈನಾನ್ಸ್ ಬಿಲ್ ಪಾಸಾಗದಿದ್ದರೆ ಒಂದು ನಯಾ ಪೈಸೆ ಡ್ರಾ ಮಾಡುವುದಕ್ಕೆ ಆಗುವುದಿಲ್ಲ. ಇಡೀ ರಾಜ್ಯ ಮಣ್ಣು ತಿನ್ನಬೇಕಾಗುತ್ತದೆ. ಇವರ ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲವಾ ಎಂದು ಸ್ಪೀಕರ್ ರಮೇಶ್ ಕುಮಾರ್ ಭಾನುವಾರ ಸುದ್ದಿಗೋಷ್ಠಿ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ.

    ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ಪೀಕರ್, ನನ್ನ ಜೀವನದಲ್ಲಿ ನಾನು ಯಾರಿಗೂ ಒತ್ತಡ ಹಾಕೋನು ಅಲ್ಲ, ಯಾರ ಒತ್ತಡಕ್ಕೂ ಬಗ್ಗೋನು ಅಲ್ಲ. ಈ ಮಾತನ್ನು ಹೇಳಿದರು ಸ್ವಂತ ಅನುಭವನ್ನು ಹೊಂದಿರಬಹುದು. ಆದರೆ ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಮಾನ್ಯ ಯಡಿಯೂರಪ್ಪ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ಜುಲೈ 31ರಂದು ಹಣಕಾಸಿನ ಬಿಲ್ ಪಾಸ್ ಮಾಡಬೇಕಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸೋಮವಾರ ಸಭೆ ಕರೆಯಬೇಕೆಂದು ಮನವಿ ಮಾಡಿಕೊಂಡಿದ್ದರು ಎಂದರು.

    ಸೋಮವಾರ ಅಂದರೆ 29 ರಂದು ಸಭೆ ಕರೆದರೆ, ಇದರಿಂದ ನಮಗೆ ಉಳಿದಿರುವುದು ಒಂದೇ ದಿನ. ಹಣಕಾಸಿನ ಬಿಲ್ ಪಾಸಾಗಿಲ್ಲ ಎಂದರೆ ಇಡೀ ರಾಜ್ಯಕ್ಕೆ ಸಮಸ್ಯೆಯಾಗುತ್ತದೆ. ನಮಗೆ ಇರುವುದು ಶನಿವಾರ, ಭಾನುವಾರ ಮಾತ್ರ, ನಾನು ಹೊಸ ದಿನ ಸೃಷ್ಟಿ ಮಾಡಲು ಬ್ರಹ್ಮನಾ ಎಂದು ಪ್ರಶ್ನೆ ಮಾಡಿದರು. ಇರುವ ರಜಾ ದಿನದಲ್ಲೇ ಕೆಲಸ ಮಾಡಿದ್ದೇವೆ. ಅದು ಬಿಟ್ಟು ತಲೆಯೊಳಗೆ ಪ್ರಜ್ಞೆ, ಜವಾಬ್ದಾರಿ ಇಲ್ಲದೆ ತಮ್ಮ ತಮ್ಮದು ಏನೇನೋ ಇಟ್ಟುಕೊಂಡು ಬಾಯಿಗೆ ಬಂದಾಗೆ ಮಾತನಾಡುವುದು ಬೇಡ ಲೈವಲ್ಲಿ ಎಲ್ಲವನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಆಕ್ರೋಶಗೊಂಡು ಪ್ರತಿಕ್ರಿಯಿಸಿದರು.

    ಜುಲೈ 31ರ ಒಳಗಡೆ ಬಿಲ್ ಪಾಸಾಗಲಿಲ್ಲ ಅಂದರೆ ಒಂದು ನಯಾ ಪೈಸೆ ಡ್ರಾ ಮಾಡುವುದಕ್ಕೆ ಆಗಲ್ಲ. ಆಗ ಇಡೀ ರಾಜ್ಯ ಮಣ್ಣು ತಿನ್ನಬೇಕಾಗುತ್ತದೆ. ವಿನಿಯೋಗ ಮಸೂದೆ ಎಂದರೆ ಇವರಿಗೆ ಪ್ರಜ್ಞೆ ಇಲ್ಲವಾ, ಬಿಲ್ ಪಾಸ್ ಮಾಡಿ ರಾಜ್ಯಪಾಲರಿಗೆ ಕಳುಹಿಸಬಾರದಾ? ಶುಕ್ರವಾರ ಸಂಜೆ ಮುಖ್ಯಮಂತ್ರಿಗಳು 6.30ಗೆ ಪ್ರಮಾಣ ವಚನ ಸ್ವೀಕಾರ ಮಾಡಿ ಸಂಜೆ 7.30ಕ್ಕೆ ನಮಗೆ ಸೋಮವಾರ ಸಭೆ ಕರೆಯಿರಿ ಎಂದು ಹೇಳಿದ್ದರು. ಸೋಮವಾರ ಸಭೆ ಕರೆಯಿರಿ ಎಂದು ಹೇಳಿ ಶನಿವಾರ ಭಾನುವಾರ ರಜೆ ಕೊಟ್ಟರೆ, ಅಸೆಂಬ್ಲಿಯನ್ನು ಹೇಗೆ ಕರೆಯಲಿ, ಹೇಗೆ ನಿಭಾಯಿಸಲಿ. ಬಿಲ್ ಪಾಸ್ ಮಾಡುವುದು ಬೇಡವಾ, ಜವಾಬ್ದಾರಿ ಬೇಡವೇ? ವಿಶ್ವಾಸ ಮತಯಾಚನೆ ತೆಗೆದುಕೊಳ್ಳುವುದು ಬೇಡವಾ, ವಿಶ್ವಾಸ ಮತ ಇಲ್ಲದೇ ಹೋದರೆ ಹಣಕಾಸು ಮಸೂದೆ ಅಂಗೀಕಾರವಾಗುತ್ತದಾ? ಏನಾಗಿದೆ ಇವರ ಬುದ್ಧಿಗೆ ಯಾರು ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿರುವುದು ಅವರಾ, ನಾನಾ ಎಂದು ಸ್ಪೀಕರ್ ಗರಂ ಆದರು.

  • ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    ಯಾವ ಕಾನೂನಿನಡಿಯಲ್ಲಿ ಅನರ್ಹ ಮಾಡಿದ್ರಿ: ಶೋಭಾ ಕರಂದ್ಲಾಜೆ ಪ್ರಶ್ನೆ

    -ಸ್ಪೀಕರ್ ಅವರದ್ದು ಭಂಡ ನಿರ್ಧಾರ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ನ 14 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಸ್ಪೀಕರ್ ನಿರ್ಣಯದ ಕುರಿತು ಅಸಮಾಧಾನ ಹೊರ ಹಾಕಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಯಾವ ಕಾನೂನಿನಡಿಯಲ್ಲಿ ಸ್ಪೀಕರ್ ಆದೇಶ ನೀಡಿದ್ದಾರೆ ಎಂಬುದನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಇಂದು ಪ್ರಜಾತಂತ್ರ ಮತ್ತು ಸಂವಿಧಾನದ ಕಗ್ಗೊಲೆಯಾಗಿದೆ. ಕರ್ನಾಟಕ ಸ್ಪೀಕರ್ ತುಂಬಾ ಬುದ್ಧಿವಂತರು ಮತ್ತು ಅನುಭವಿಗಳು ಎನ್ನುವ ಗೌರವ ನಮಗೆಲ್ಲರಿಗಿತ್ತು. ಇಂದು ಸ್ಪೀಕರ್ ರಮೇಶ್ ಸಂವಿಧಾನದ ವಿರೋಧಿ ನಿರ್ಣಯವನ್ನು ಪ್ರಕಟಿಸುವ ಮೂಲಕ ಕರ್ನಾಟಕ ವಿಧಾನಸಭೆಯ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಕಿಡಿಕಾರಿದರು.

    ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋದಾಗ ಕೆಲವರು ರಾಜೀನಾಮೆಯನ್ನು ಕ್ರಮಬದ್ಧವಾಗಿ ಸಲ್ಲಿಸಿಲ್ಲ ಎಂದು ಹೇಳಿದ್ದರು. ತದನಂತರ ಸುಪ್ರೀಂಕೋರ್ಟ್ ಅದೇಶದನ್ವಯ ಎಲ್ಲ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದರೂ ಅಂಗೀಕಾರ ಮಾಡಿಲ್ಲ ಯಾಕೆ ಎಂದು ಗುಡುಗಿದರು.

    ಶಾಸಕರ ಅನರ್ಹತೆಯ ವಿಚಾರವಾಗಿ ಸ್ಪೀಕರ್ ಅವರಿಗೆ ಶೋಭಾ ಕರಂದ್ಲಾಜೆ ಕೆಲವು ಪ್ರಶ್ನೆಗಳಿಗೆ ಉತ್ತರ ಕೇಳಿದ್ದಾರೆ.
    1. ಅಂದು ಶಾಸಕರು ರಾಜೀನಾಮೆ ಕಾನೂನಬದ್ಧವಾಗಿದ್ದರೆ, ಇವತ್ತು ಅನರ್ಹ ಮಾಡಿದ್ಯಾಕೆ?
    2. ಯಾವ ಕಾನೂನಿನ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಲಾಗಿದೆ?
    3. ಯಾವ ಮತ್ತು ಯಾರ ಆದೇಶದಡಿಯಲ್ಲಿ ಅನರ್ಹ ಮಾಡಲಾಗಿದೆ?
    4. ಯಾರ ಒತ್ತಡದಲ್ಲಿ ಶಾಸಕರನ್ನು ಅನರ್ಹಗೊಳಿಸಿದ್ದೀರಿ ಎಂಬುದರ ಬಗ್ಗೆ ವಿವರಣೆಯನ್ನು ನೀಡಬೇಕು?

    ಸ್ಪೀಕರ್ ರಮೇಶ್ ಕುಮಾರ್ ಎಲ್ಲರ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂಬ ನಂಬಿಕೆ ಇತ್ತು. ದೇಶದ ಇತಿಹಾಸದಲ್ಲಿ ಯಾವ ಸ್ಪೀಕರ್ ಈ ರೀತಿಯ ಭಂಡ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಸ್ಪೀಕರ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಸ್ಪೀಕರ್ ಆದೇಶ ಪ್ರಜಾತಂತ್ರ ಮತ್ತು ಸಂವಿಧಾನ ವಿರೋಧಿಯಾಗಿದ್ದು, ಅನರ್ಹಗೊಂಡಿರುವ ಎಲ್ಲ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ನಮಗೆಲ್ಲರಿಗೂ ನ್ಯಾಯ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

    ಅನರ್ಹಗೊಂಡಿರುವ ಶಾಸಕರ ಪಟ್ಟಿ:
    ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಕಾಂಗ್ರೆಸ್ಸಿನ ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರನ್ನು ಅನರ್ಹಗೊಳಿಸಿದ್ದಾರೆ.

  • ಪಕ್ಷಕ್ಕೆ, ಜನತೆಗೆ ದ್ರೋಹ ಬಗೆದ ಶಾಸಕರಿಗೆ ಕೋರ್ಟ್ ಕೂಡ ತಕ್ಕ ಶಿಕ್ಷೆ ನೀಡಲಿದೆ: ಕಾಂಗ್ರೆಸ್

    ಪಕ್ಷಕ್ಕೆ, ಜನತೆಗೆ ದ್ರೋಹ ಬಗೆದ ಶಾಸಕರಿಗೆ ಕೋರ್ಟ್ ಕೂಡ ತಕ್ಕ ಶಿಕ್ಷೆ ನೀಡಲಿದೆ: ಕಾಂಗ್ರೆಸ್

    ಬೆಂಗಳೂರು: ಅತೃಪ್ತ ಶಾಸಕರ ಅನರ್ಹಗೊಳಿಸಿದ ಸ್ಪೀಕರ್ ತೀರ್ಪನ್ನು ಸ್ವಾಗತಿಸುತ್ತೇವೆ. ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹ ಮಾಡಿದಕ್ಕೆ ನ್ಯಾಯಾಲಯ ಕೂಡ ಶಾಸಕರಿಗೆ ತಕ್ಕ ಶಿಕ್ಷೆ ನೀಡಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಸೋಮವಾರ ನೂತನ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸುವ ಮುನ್ನ ದಿನವೇ 14 ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಸ್ಪೀಕರ್ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದಿದೆ.

    ಟ್ವೀಟ್‍ನಲ್ಲಿ ಏನಿದೆ?
    ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಮೈತ್ರಿ ಸರ್ಕಾರವನ್ನು ಉರುಳಿಸಬೇಕೆಂದೇ ಬಿಜೆಪಿಯೊಂದಿಗೆ ಕೈ ಜೋಡಿಸಿ ತಮ್ಮ ಪಕ್ಷಗಳಿಗೆ, ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದ ಈ ಶಾಸಕರುಗಳಿಗೆ ಜನತಾ ನ್ಯಾಯಾಲಯ ಕೂಡ ತಕ್ಕ ಶಿಕ್ಷೆಯನ್ನು ವಿಧಿಸಲಿದೆ ಎಂದು ಬರೆದು ಟ್ವೀಟ್ ಮಾಡಲಾಗಿದೆ.

    ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

    ಹಾಗೆಯೇ ಈ ಹಿಂದೆ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

  • ಸ್ಪೀಕರ್ ನಿರ್ಧಾರದ ಕುರಿತು ಎದ್ದಿರುವ 4 ಪ್ರಶ್ನೆಗಳಿಗೆ ಸಿಗಬೇಕಿದೆ ಉತ್ತರ

    ಸ್ಪೀಕರ್ ನಿರ್ಧಾರದ ಕುರಿತು ಎದ್ದಿರುವ 4 ಪ್ರಶ್ನೆಗಳಿಗೆ ಸಿಗಬೇಕಿದೆ ಉತ್ತರ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ಸಿನ 14 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆದೇಶ ನೀಡಿದ್ದಾರೆ. ಸ್ಪೀಕರ್ ಆದೇಶಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಪ್ರಶ್ನೆ 1:
    ಶಾಸಕರು ಎರಡನೇ ಬಾರಿಗೆ ರಾಜೀನಾಮೆ ನೀಡಿರುವ ದಿನವನ್ನು ಸ್ಪೀಕರ್ ಅನರ್ಹತೆ ಪ್ರಕರಣಕ್ಕೆ ಪರಿಗಣಿಸಿದ್ದಾರೆ. ಜುಲೈ 6ರಂದು ಸ್ಪೀಕರ್ ಕಚೇರಿಗೆ ತೆರಳಿ ರಮೇಶ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಶಾಸಕರು ರಾಜೀನಾಮೆ ನೀಡಿದ್ದರು. ಶಾಸಕರ ರಾಜೀನಾಮೆ ನಿಯಮ 202ರ ಅನ್ವಯ ಇಲ್ಲ. ಹಾಗಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಬೇಕು ಎಂದು ಸೂಚಿಸಿದ್ದರು. ಈ ನಡುವೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಶಾಸಕರು ನ್ಯಾಯಾಲಯದ ಸೂಚನೆ ಮೇರೆಗೆ ಜುಲೈ 9ರಂದು ಪುನಃ ಕ್ರಮಬದ್ಧವಾಗಿ ರಾಜೀನಾಮೆ ನೀಡಿದ್ದರು. ಎರಡನೇ ಬಾರಿಗೆ ಸಲ್ಲಿಸಿರುವ ದಿನವನ್ನು ಸ್ಪೀಕರ್ ಪರಿಗಣನೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘಿಸಿದ್ದಾರೆಂದು ಶಾಸಕರನ್ನು ಅನರ್ಹಗೊಳಿಸಿದ್ದಾರೆ.

    ರಾಜೀನಾಮೆ ಸಲ್ಲಿಸಿದ ದಿನವನ್ನೇ ಸ್ಪೀಕರ್ ಗಣನೆಗೆ ತೆಗೆದುಕೊಂಡಿದ್ದರೆ ವಿಪ್ ಉಲ್ಲಂಘನೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಜುಲೈ 6ರಂದು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕ ವಿಪ್ ಜಾರಿ ಮಾಡಿದ್ದರು. ಹೀಗಾಗಿ ವಿಪ್ ಉಲ್ಲಂಘನೆ ಆಗುತ್ತಾ? ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದೆ.

    ಪ್ರಶ್ನೆ 2:
    ವಿಶ್ವಾಸಮತ ಸಾಬೀತು ದಿನ ಶಾಸಕರಾದ ನಾಗೇಂದ್ರ ಮತ್ತು ಶ್ರೀಮಂತ್ ಪಾಟೀಲ್ ಅನಾರೋಗ್ಯ ಹಿನ್ನೆಲೆಯಲ್ಲಿ ಸದನಕ್ಕೆ ಗೈರಾಗಿದ್ದರು. ಕಲಾಪದಲ್ಲಿ ಸ್ಪೀಕರ್ ಮುಂದೆ ಶ್ರೀಮಂತ್ ಪಾಟೀಲ್ ಬರೆದ ಪತ್ರವನ್ನು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸಲ್ಲಿಸಿದ್ದರು. ಆದ್ರೆ ಸ್ಪೀಕರ್ ರಮೇಶ್ ಕುಮಾರ್ ಪತ್ರ ಕ್ರಮಬದ್ಧವಾಗಿಲ್ಲ. ಯಾವುದೇ ಲೆಟರ್ ಹೆಡ್‍ನಲ್ಲಿ ಇಲ್ಲ ಮತ್ತು ಪತ್ರದಲ್ಲಿ ದಿನಾಂಕ ಸಹ ನಮೂದಿಸಿಲ್ಲ ಎಂದು ಹೇಳಿ ಪತ್ರವನ್ನು ತಿರಸ್ಕರಿಸಿದ್ದರು. ಶಾಸಕ ನಾಗೇಂದ್ರ ಆರೋಗ್ಯದ ಕಾರಣ ಹೇಳಿ ಸದನಕ್ಕೆ ಗೈರಾಗಿದ್ದರು. ವಿಪ್ ಅನ್ವಯವಾದರೆ ನಾಗೇಂದ್ರ ಅವರಿಗೂ ಸಹ ಅನ್ವಯವಾಗುತ್ತದೆ. ಆದರೆ ನಾಗೇಂದ್ರ ಅವರನ್ನು ಅನರ್ಹಗೊಳಿಸದೇ ಕೇವಲ ಶ್ರೀಮಂತ್ ಪಾಟೀಲ್ ರನ್ನು ಅನರ್ಹಗೊಳಿಸಿದ್ದು ಯಾಕೆ ಎನ್ನುವ ಎರಡನೇ ಪ್ರಶ್ನೆ ಎದ್ದಿದೆ.

    ಪ್ರಶ್ನೆ 3:
    ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಫೆಬ್ರವರಿಯಲ್ಲಿ ವಿಪ್ ಉಲ್ಲಂಘನೆ ಮಾಡಿದ್ದಾರೆಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರು ಸಲ್ಲಿಸಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಜುಲೈ 25ರಂದು ಆರ್.ಶಂಕರ್ ಸೇರಿದಂತೆ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಅನರ್ಹಗೊಳಿಸಿದ್ದರು. ಈಗ ವಿಪ್ ಜಾರಿಯಾಗುವುದು ಕಲಾಪಕ್ಕೋ ಅಥವಾ ಸದನದ ಹೊರಗಡೆಯೇ ಎನ್ನುವ ಪ್ರಶ್ನೆ ಎದ್ದಿದೆ.

    ಪ್ರಶ್ನೆ 4:
    ರಾಜೀನಾಮೆ ನೀಡಿದ ಶಾಸಕರ ಅರ್ಜಿಯನ್ನು ಪರಿಶೀಲಿಸಲು ಸ್ಪೀಕರ್ ಮೂರು ದಿನ ಸಮಯ ತೆಗೆದುಕೊಂಡಿದ್ದರು. ಅಂದು ಶನಿವಾರ ಮತ್ತು ಭಾನುವಾರ ರಜೆ ದಿನವಾಗಿದ್ದರಿಂದ ಕಚೇರಿ ಬಂದ್ ಆಗಿತ್ತು. ಸೋಮವಾರ ವೈಯಕ್ತಿಕ ಕೆಲಸಗಳ ನಿಮಿತ್ತ ಕಚೇರಿಗೆ ಬಂದಿರಲಿಲ್ಲ. ಹಾಗಾಗಿ ಮಂಗಳವಾರ ಕಚೇರಿಗೆ ಬಂದು ರಾಜೀನಾಮೆ ಅರ್ಜಿ ಪರಿಶೀಲಿಸಿದೆ ಎಂದು ಹೇಳಿದ್ದರು. ಇದೀಗ ಅನರ್ಹಗೊಳಿಸುವ ಮುನ್ನ ಮಾತನಾಡಿದ್ದ ಸ್ಪೀಕರ್ ರಮೇಶ್ ಕುಮಾರ್, ರಜೆ ದಿನವಾಗಿದ್ದರೂ ಶನಿವಾರ ಮತ್ತು ಭಾನುವಾರ ಕೆಲಸ ಮಾಡಿದ್ದೇವೆ ಎಂದಿದ್ದರು. ಈಗ ರಾಜೀನಾಮೆ ಸ್ವೀಕರಿಸುವ ವಿಚಾರದ ಬಂದಾಗ ಭಾನುವಾರ ಅಡ್ಡಿಯಾಗುತ್ತದೆ. ಅನರ್ಹತೆ ನಿರ್ಧಾರ ಪ್ರಕಟಿಸುವಾಗ ಭಾನುವಾರ ಯಾಕೆ ಅಡ್ಡಿಯಾಗುವುದಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

    ಸ್ಪೀಕರ್ ನಮ್ಮ ರಾಜೀನಾಮೆಯನ್ನು ಅಂಗೀಕರಿಸದೇ ತಡ ಮಾಡುತ್ತಿದ್ದಾರೆ ಎಂದು ಈಗಾಗಲೇ ಅತೃಪ್ತ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸುಪ್ರೀಂ ಈಗಾಗಲೇ ಮಧ್ಯಂತರ ಆದೇಶ ಪ್ರಕಟಿಸಿದೆ. ಈಗ ಅನರ್ಹತೆ ಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಮೊರೆ ಹೋಗಲಿದ್ದಾರೆ.

    17 ಶಾಸಕರು ಅನರ್ಹ:
    ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ರಮೇಶ್ ಕುಮಾರ್ ಜುಲೈ 25 ರಂದು ಸುದ್ದಿಗೋಷ್ಠಿ ಕರೆದು ಅನರ್ಹಗೊಳಿಸಿದ್ದರು. ಇಂದು ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಎಲ್ಲ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ.