Tag: spain

  • ದೇಶದಲ್ಲಿ ಇಂದು ಒಂದೇ ದಿನ 2,411 ಜನರಿಗೆ ಕೊರೊನಾ

    ದೇಶದಲ್ಲಿ ಇಂದು ಒಂದೇ ದಿನ 2,411 ಜನರಿಗೆ ಕೊರೊನಾ

    – ಮಹಾರಾಷ್ಟ್ರ ಸಿಎಂ ಮನೆಯ ಪೇದೆಗಳಿಗೂ ಸೋಂಕು
    – ವಿಶ್ವದಲ್ಲಿ ಕೊರೊನಾಗೆ 2.40 ಲಕ್ಷ ಮಂದಿ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇವತ್ತು ಒಂದೇ ದಿನ 2,411 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 37,776 ಜನರಿಗೆ ಕೊರೊನಾ ವೈರಸ್ ತಗುಲಿದೆ. 1,223ಜನ ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 1,008 ಕೇಸ್ ಪತ್ತೆಯಾಗಿದ್ದು, ಬಾಧಿತರ ಸಂಖ್ಯೆ 11 ಸಾವಿರ ದಾಟಿದೆ. ಮುಂಬೈಯೊಂದರಲ್ಲೇ ಸುಮಾರು 8 ಸಾವಿರ ಸೋಂಕಿತರು ಇದ್ದಾರೆ. ಪೂರ್ವ ದೆಹಲಿಯ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಮಂದಿ ಸಿಆರ್‍ಪಿಎಫ್ ಯೋಧರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಇದೇ ಬೆಟಾಲಿಯನ್‍ನ 122 ಮಂದಿ ಸಿಆರ್‍ಪಿಎಫ್ ಯೋಧರಿಗೆ ಸೋಂಕು ವ್ಯಾಪಿಸಿದೆ. ಸದ್ಯ 1,100 ಯೋಧರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಮೂವರು ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. 130 ಸೆಕ್ಯೂರಿಟಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಾಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿ ಕೊರೊನಾ ಆಸ್ಪತ್ರೆಗಳ ವಾರಿಯರ್ಸ್ ಮೇಲೆ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿ ಧನ್ಯವಾದ ಹೇಳಲಿದೆ. ನೌಕಾಪಡೆಯ ಹಡಗುಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ.

    ವಿಶ್ವದಲ್ಲಿ ಮಹಾಮಾರಿ ಕೊರೊನಾಗೆ 2.40 ಲಕ್ಷ ಮಂದಿ ಬಲಿಯಾಗಿದ್ದಾರೆ. 34 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 11 ಲಕ್ಷದಷ್ಟು ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ 66 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 11.34 ಲಕ್ಷ ಮಂದಿ ಸೋಂಕಿತರಿದ್ದಾರೆ. ವಿಶ್ವದಲ್ಲೇ ಅಮೆರಿಕ ಕೊರೊನಾ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಸ್ಪೇನ್‍ನಲ್ಲಿ ಸಾವಿನ ಸಂಖ್ಯೆ 25 ಸಾವಿರ ಗಡಿ ಮುಟ್ಟುತ್ತಿದೆ. 2 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಇಟಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ರಾಷ್ಟ್ರವನ್ನೇ ಮೀರಿಸಿದೆ. 28 ಸಾವಿರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 269 ಮಂದಿ ಸಾವನಪ್ಪಿದ್ದಾರೆ.

    ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ರೆಮಿಡೆಸಿವರ್ ಲಸಿಕೆ ಪ್ರಯೋಗ ಮಾಡಬಹುದು ಅಂತ ಭಾರತೀಯ ಆಹಾರ ಮತ್ತು ಮಾದಕ ನಿಯಂತ್ರಕ ಸಂಸ್ಥೆ ಹೇಳಿದೆ. ಭಾರತೀಯ ಮತ್ತು ಅಮೆರಿಕ ವೈದ್ಯರ ನೇತೃತ್ವದ ತಂಡ ಲಸಿಕೆ ಬಗ್ಗೆ ಹಲವು ಪ್ರಯೋಗಗಳನ್ನ ನಡೆಸಿದೆ. ಕೊರೊನಾ ಸೋಂಕಿತ ಕೆಲವು ಪ್ರಕರಣಗಳು ವಾಸಿಯಾಗಲು ರೆಮಿಡೆಸಿವರ್ ಸಹಾಯ ಮಾಡಿದೆ ಅಂತಾ ಹೇಳಿದ್ದಾರೆ. ಅಮೆರಿಕದ ಹಲವು ಜಿಲ್ಲೆಗಳಲ್ಲಿ ಈ ಲಸಿಕೆಯನ್ನ ವ್ಯಾಪಕವಾಗಿ ಬಳಸಿರುವ ಉದಾಹರಣೆ ನೀಡಿದೆ.

  • 1918ರಲ್ಲಿ ಸ್ಪ್ಯಾನಿಶ್ ಜ್ವರದಿಂದ ಬದುಕುಳಿದು ಇಂದು ಕೊರೊನಾ ಸೋಲಿಸಿದ ವೃದ್ಧೆ

    1918ರಲ್ಲಿ ಸ್ಪ್ಯಾನಿಶ್ ಜ್ವರದಿಂದ ಬದುಕುಳಿದು ಇಂದು ಕೊರೊನಾ ಸೋಲಿಸಿದ ವೃದ್ಧೆ

    ಮ್ಯಾಡ್ರಿಡ್: 1918ರಲ್ಲಿ ಬಂದಿದ್ದ ಸ್ಪ್ಯಾನಿಶ್ ಜ್ವರದ ವಿರುದ್ಧ ಹೋರಾಡಿದ್ದ ವೃದ್ಧೆಯೊಬ್ಬರು ಮತ್ತೆ ನೂರು ವರ್ಷ ಬಿಟ್ಟು ಬಂದ ಕೊರೊನಾ ವೈರಸ್ ವಿರುದ್ಧವೂ ಹೋರಾಡಿ ಬದುಕುಳಿದಿರುವ ಅಪರೂಪದ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಈ ವೃದ್ಧೆಯನ್ನು ಅಲ್ಲಾಲಾ ಡೆಲ್ ವ್ಯಾಲೆ (106) ಎಂದು ಗುರುತಿಸಲಾಗಿದೆ. ಇವರು 1913ರಲ್ಲಿ ಜನಿಸಿದ್ದರು. ಈ ವೇಳೆ ಇವರು ಆರು ವರ್ಷದ ಮಗುವಿದ್ದಾಗ ಅಂದರೆ 1918ರಲ್ಲಿ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಸ್ಪ್ಯಾನಿಶ್ ಜ್ವರಕ್ಕೆ ತುತ್ತಾಗಿದ್ದರು. ಈ ವೇಳೆ ಸೂಕ್ತ ಚಿಕಿತ್ಸೆ ಪಡೆದು ಈ ಸೋಂಕಿನಿಂದ ಗುಣಮುಖವಾಗಿ ಬಂದಿದ್ದರು.

    ಇದಾದ ಬಳಿಕ ಈ ವೃದ್ಧೆಗೆ ಈಗ 106 ವರ್ಷ, ಸುಮಾರು 102 ವರ್ಷಗಳ ಬಳಿಕ 2019ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡು ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಸೋಂಕಿಗೂ ತುತ್ತಾಗಿದ್ದಾರೆ. ಇವರು ಒಂದು ನರ್ಸಿಂಗ್ ಹೋಂನಲ್ಲಿ ವಾಸಿಸುತ್ತಿದ್ದು, ಇಲ್ಲಿ ಅವರು ಸೋಂಕಿಗೆ ತುತ್ತಾಗಿದ್ದರು. ಇವರ ಜೊತೆಗೆ ಇದ್ದ ಉಳಿದ 60 ಜನಕ್ಕೂ ಕೊರೊನಾ ಸೋಂಕು ತಗುಲಿತ್ತು. ಆದರೆ ಈ ವೃದ್ಧೆ ಕೊರೊನಾ ವಿರುದ್ಧವೂ ಹೋರಾಡಿ ಈ ಇಳಿ ವಯಸ್ಸಿನಲ್ಲಿ ಗುಣಮುಖರಾಗಿದ್ದಾರೆ.

    ವೃದ್ಧೆಗೆ ಸೋಂಕು ಇರುವುದು ಪತ್ತೆಯಾದ ನಂತರ ಆಕೆಯನ್ನು ಲಾ ಲಿನಿಯಾ ಎಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ನಂತರ ಅವರನ್ನು ವೆಂಟಿಲೇಟರ್‍ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖವಾಗಿರುವ ಅಲ್ಲಾಲಾ ಡೆಲ್ ವ್ಯಾಲೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸ್ಪೇನ್‍ನಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಗಳಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೊಸೆ ಪ್ಯಾಕ್ವಿ ಸ್ಯಾಂಚೆ, ವೈದ್ಯರು ನಮ್ಮ ಅತ್ತೆಗೆ ಬಹಳ ಒಳ್ಳೆಯ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ನಮ್ಮ ಕುಟುಂಬ ಕೃತಜ್ಞರಾಗಿರಬೇಕು. ಆದರೆ ನಾವು ಅವರು ಗುಣಮುಖರಾಗಿದ್ದಾರೆ ಎಂದು ಅಸಡ್ಡೆ ತೋರಬಾರದು ಮತ್ತು ಅವರ ಆರೋಗ್ಯದ ಬಗ್ಗೆ ಗಮನಕೊಡಬೇಕು. ನಾವು ಜಾಗರೂಕತೆಯಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಯಾಂಚೆ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

    ಸ್ಪ್ಯಾನಿಶ್ ಜ್ವರ ಸುಮಾರು 1918 ರಿಂದ 1920ರವೆರೆಗೆ ವಿಶ್ವವನ್ನು ಕಾಡಿತ್ತು. ಸುಮಾರು 36 ತಿಂಗಳುಗಳ ಕಾಲ ಈ ಸಾಂಕ್ರಾಮಿಕ ರೋಗವೂ ಮನುಕುಲಕ್ಕೆ ಮಾರಕವಾಗಿತ್ತು. ಇದು ಅಂದು ಸುಮಾರು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗ ಅಂದರೆ 500 ದಶಲಕ್ಷ ಜನರಿಗೆ ಈ ಸೋಂಕು ತಗುಲಿತ್ತು.

    ಸ್ಪ್ಯಾನಿಶ್ ಫ್ಲೂ:
    “ಇನ್ಫ್ಲೂಎಂಜಾ” ಎನ್ನುವ ವೈರಾಣುವಿನಿಂದ ಕಳೆದ 300 ವರ್ಷಗಳಲ್ಲಿ 9 ವಿವಿಧ ಡೆಡ್ಲಿ ರೋಗಗಳು ಜನಿಸಿದ್ದು ಸಂಪೂರ್ಣ ಮನುಷ್ಯಕುಲವನ್ನು ಕಾಡಿವೆ. ಅವುಗಳಲ್ಲಿ 1918 ರ ಇನ್ಫ್ಲೂಎಂಜ ಪ್ಯಾಂಡೆಮಿಕ್ ಕೂಡ ಒಂದು. ಈ ರೋಗವನ್ನು “ಸ್ಪ್ಯಾನಿಶ್ ಫ್ಲೂ” ಎಂದು ಕೂಡ ಕರೆಯಲಾಗುತ್ತದೆ. ಈ ರೋಗದಿಂದ ಅಂದು ಬರೋಬ್ಬರಿ 10 ಕೋಟಿ ಜನರು ಪ್ರಾಣ ಕಳೆದುಕೊಂಡಿದ್ದರು. ಇನ್ನು ಇದೇ ವೈರಾಣುವಿನಿಂದ 2009 ರಲ್ಲಿ ಪ್ರಪಂಚದೆಲ್ಲೆಡೆ “ಹಂದಿ ಜ್ವರ” ಎನ್ನುವ ರೋಗವು ಜನಿಸಿತ್ತು. ಇದರಿಂದ 4 ಲಕ್ಷ ಜನರು ಪ್ರಪಂಚದೆಲ್ಲೆಡೆ ಸತ್ತಿದ್ದರು.

  • ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    – ಅಮೆರಿಕದಲ್ಲಿ 50 ಸಾವಿರಕ್ಕೂ ಅಧಿಕ ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, 723 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 23 ಸಾವಿರ ಗಡಿದಾಟಿದೆ.

    ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ಕೊರೊನಾಗೆ ಕೇರಳದಲ್ಲಿ 4 ತಿಂಗಳ ಮಗು ಅಸುನೀಗಿದೆ. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. 6,430 ಜನರಿಗೆ ಸೋಂಕು ತಗುಲಿದ್ದು, 283 ಮಂದಿ ಸಾವನಪ್ಪಿದ್ದಾರೆ. ದೆಹಲಿ ಮತ್ತು ಗುಜರಾತ್‍ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, 3 ಸಾವಿರ ಗಡಿ ತಲುಪುತ್ತಿದೆ.

    ತಮಿಳುನಾಡಿನಲ್ಲಿ ಕೊರೊನಾ ಬಾದಿತರ ಪ್ರಮಾಣ ಗಣನೀಯವಾಗಿ ಏರುತ್ತಿದೆ. ತಮಿಳುನಾಡು ಸರ್ಕಾರ ಚೆನ್ನೈ, ಮಧುರೈ, ಕೊಯಂಬತ್ತೂರ್‍ನಲ್ಲಿ ಏಪ್ರಿಲ್ 28ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದೆ. ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2 ಹೊಸ ಸಾವು ಪ್ರಕರಣ ಸೇರಿ 29 ಮಂದಿ ಬಲಿಯಾಗಿದ್ದಾರೆ.

    ಯಾವ ರಾಜ್ಯಗಳಲ್ಲಿ ಹೆಚ್ಚು?
    ಮಹಾರಾಷ್ಟ್ರದಲ್ಲಿ 6,430 ಜನರಿಗೆ ಸೋಂಕು ತಗುಲಿದ್ದು, 283 ಜನ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ ಸೋಂಕಿತರ ಸಂಖ್ಯೆ 2,624ಕ್ಕೆ ಹೆಚ್ಚಿದರೆ 112 ಜನ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 2,376 ಜನರಿಗೆ ಸೋಂಕು ತಗುಲಿದೆ. 50 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,852 ಜನರಿಗೆ ಸೋಂಕು ತಗುಲಿದೆ. 83 ಜನ ಅಸು ನೀಗಿದ್ದಾರೆ.

    ವಿಶ್ವ ಮಟ್ಟದಲ್ಲಿ ಸಹ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 2 ಲಕ್ಷದ ಗಡಿ ತಲುಪುತ್ತಿದೆ. ಸೋಂಕಿತರ ಸಂಖ್ಯೆ 27 ಲಕ್ಷದ ದಾಟಿದೆ. ಅಮೆರಿಕಾದಲ್ಲಿ ಸಾವಿನ, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 50,849 ಮಂದಿ ಅಮೆರಿಕದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 8,92,761 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸ್ಪೇನ್‍ನಲ್ಲಿ 22,549 ಮಂದಿ ಬಲಿಯಾಗಿದ್ದು, 2,19,764 ಮಂದಿ ಸೋಂಕಿತರಿದ್ದಾರೆ. ಇಟಲಿಯಲ್ಲೂ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, 1,89,973 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಲ್ಜಿಯಂನಲ್ಲಿ ಕಳೆದ 24 ಗಂಟೆಗಳಲ್ಲಿ 189 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ಅಮೆರಿಕ, ಇಂಗ್ಲೆಂಡ್, ಇಟಲಿಗೆ ಹೋಲಿಸಿದ್ರೆ ಭಾರತ ಸೋಂಕಿತರ ಸಂಖ್ಯೆ ಕಡಿಮೆ – ಕೇಂದ್ರ ಸರ್ಕಾರ

    ಅಮೆರಿಕ, ಇಂಗ್ಲೆಂಡ್, ಇಟಲಿಗೆ ಹೋಲಿಸಿದ್ರೆ ಭಾರತ ಸೋಂಕಿತರ ಸಂಖ್ಯೆ ಕಡಿಮೆ – ಕೇಂದ್ರ ಸರ್ಕಾರ

    ನವದೆಹಲಿ: ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ನಾವು ತೆಗೆದುಕೊಂಡ ಕ್ರಮಗಳಿಂದ ಕೊರೊನಾ ಹರಡುವ ವೇಗ ಕಡಿಮೆಯಾಗಿದೆ ಎಂದು ಎಂದು ಭಾರತ ಸರ್ಕಾರ ತಿಳಿಸಿದೆ.

    ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1409 ಮಂದಿಗೆ ಸೋಂಕು ಬಂದಿದ್ದು, ಒಟ್ಟು 16,454 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗುಣಮುಖರಾದ ರೋಗಿಗಳ ಸಂಖ್ಯೆ ಹೆಚ್ಚಿದೆ. 21,393 ಸೋಂಕಿತರ ಪೈಕಿ 4,257(ಶೇ.20) ಮಂದಿ ಗುಣಮುಖರಾಗಿದ್ದಾರೆ. ಬುಧವಾರ 388 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.

    ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲಾವ್ ಅಗರ್‍ವಾಲ್ ಮಾತನಾಡಿ, 8 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಈ ಮೂಲಕ ಕೊರೊನಾ ಪ್ರಕರಣವಿಲ್ಲದ ಜಿಲ್ಲೆಗಳ ಸಂಖ್ಯೆ 78ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

    ಇಟಲಿ, ಇಂಗ್ಲೆಂಡ್, ಸ್ಪೇನ್, ಅಮೆರಿಕದಲ್ಲಿ 5 ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆದಿದ್ದು, ಈ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಮಂದಿಗೆ ಸೋಂಕು ಬಂದಿದೆ. ಈ ವಿಚಾರದಲ್ಲಿ ದಕ್ಷಿಣ ಕೊರಿಯಾ ಭಾರತಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದರು.

    ಮೇ 3ರ ಲಾಕ್‍ಡೌನ್ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾದರೆ ಏನು ಎಂಬ ಪ್ರಶ್ನೆಗೆ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್, ಈಗಲೇ ಈ ಪ್ರಶ್ನೆಗೆ ಊಹಿಸಿ ಉತ್ತರ ಹೇಳುವುದು ಕಷ್ಟ. ಆದರೂ ಈಗ ಗ್ರಾಫ್ ನೋಡಿದರೆ ಇಳಿಕೆ ಆಗುತ್ತಿರುವುದು ಕಂಡು ಬರುತ್ತದೆ ಎಂದು ಪ್ರತಿಕ್ರಿಯಿಸಿದರು.

  • ಬಂಧಿಸಿದ ಕೋಪಕ್ಕೆ ಬೆತ್ತಲಾಗಿ ಪೊಲೀಸರ ಕಾರು ಮೇಲೆ ಹತ್ತಿನಿಂತ ಮಹಿಳೆ

    ಬಂಧಿಸಿದ ಕೋಪಕ್ಕೆ ಬೆತ್ತಲಾಗಿ ಪೊಲೀಸರ ಕಾರು ಮೇಲೆ ಹತ್ತಿನಿಂತ ಮಹಿಳೆ

    – ರಸ್ತೆ ಮೇಲೆ ಪೊಲೀಸರ ಎದುರೇ ಬಟ್ಟೆ ಬಿಚ್ಚಿದಳು
    – ಮಹಿಳೆ ಬೆತ್ತಲಾದ ವಿಡಿಯೋ ವೈರಲ್

    ಮ್ಯಾಡ್ರಿಡ್: ಕೊರೊನಾ ವೈರಸ್ ಹಾವಳಿಗೆ ಹಲವು ರಾಷ್ಟ್ರಗಳು ಲಾಕ್‍ಡೌನ್ ಆಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯೊಬ್ಬಳು ಹುಚ್ಚಾಟ ಮೆರೆದಿದ್ದಾಳೆ. ರಸ್ತೆ ಮಧ್ಯೆ ಪೊಲೀಸರ ಎದುರೇ ಬಟ್ಟೆ ಬಿಚ್ಚಿ ಬೆತ್ತಲಾಗಿ ರಂಪಾಟ ಮಾಡಿದ್ದಾಳೆ.

    ಸ್ಪೇನ್‍ನ ಟೊರೆಮೊಲಿನೋಸ್ ನಗರದಲ್ಲಿ ಈ ಘಟನೆ ನಡೆದಿದೆ. ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್‍ನಲ್ಲಿ ತಂಗಿದ್ದ 41 ವರ್ಷದ ಮಹಿಳೆ ಈ ರೀತಿ ಹುಟ್ಟಾಟ ಮೆರೆದಿದ್ದಾಳೆ. ಟೊರೆಮೊಲಿನೋಸ್‍ನಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಮಹಿಳೆ ಹೊರಬಂದಿದ್ದಳು. ಹೀಗಾಗಿ ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ತನ್ನನ್ನೇ ಬಂಧಿಸಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿದರಲ್ಲ ಎಂಬ ಕೋಪಕ್ಕೆ ಮಹಿಳೆ ಬೆತ್ತಲಾಗಿ ವಿಚಿತ್ರ ಪ್ರತಿಭಟನೆ ನಡೆಸಿದ್ದಾಳೆ. ರಸ್ತೆಯಲ್ಲಿಯೇ ಮೈಮೇಲಿದ್ದ ಬಟ್ಟೆಗಳನ್ನೆಲ್ಲಾ ಬಿಚ್ಚಿ ಪೊಲೀಸರ ಕಾರಿನ ಮೇಲೆ ಹತ್ತಿ ಮಹಿಳೆ ಘೋಷಣೆ ಕೂಗಿದ್ದಾಳೆ. ಹೀಗೆ ಹುಚ್ಚಾಟ ಮೆರೆಯುತ್ತಿದ್ದ ಮಹಿಳೆಯನ್ನು ಪೊಲೀಸರು ಹರಸಾಹಸಪಟ್ಟು ಸೆರೆಹಿಡಿದು, ಅಂಬುಲೆನ್ಸ್ ಮೂಲಕ ಕರೆದೊಯ್ದರು.

    ಮಹಿಳೆ ರಸ್ತೆ ಮಧ್ಯೆ ರಂಪಾಟ ಮಾಡುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ಹುಚ್ಚಾಟ ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

  • ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಸ್ಪೇನ್: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 30ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂದು ಕೊರೊನಾ ವೈರಸ್‍ಗೆ ರಾಜವಂಶಸ್ಥ ಮನೆತನದಲ್ಲಿ ಮೊದಲ ಸಾವಾಗಿದೆ.

    ಸ್ಪೇನ್‍ನ ರಾಣಿ ಮಾರಿಯಾ ಥೆರೇಸಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ ಎಂದು ಸಹೋದರ ಪ್ರಿನ್ಸ್ ಸಿಕ್‍ಸ್ಟೋ ಎನ್ರಿಕ್ ಡಿ ಬೊರ್ಬನ್ ತಿಳಿಸಿದ್ದಾರೆ.

    86 ವರ್ಷದ ರಾಣಿ ಮಾರಿಯಾ ಸ್ಪೇನ್ ರಾಜಮನೆತನದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆಯಾಗಿದ್ದರು. 1933ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದ್ದ ಮಾರಿಯಾ ಥೆರೇಸಾ ಫ್ರಾನ್ಸ್ ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಿಸ್‍ನ ಸೊರ್ಬೊನ್‍ನಲ್ಲಿ ಹಾಗೂ ಮ್ಯಾಡ್ರಿಡ್‍ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

    ವಿದೇಶಿ ಮಾಧ್ಯಮ ವರದಿಗಳ ಪ್ರಕಾರ, ರಾಣಿ ಮಾರಿಯಾ ಥೆರೇಸಾ ಅವರ ನೇರ ಅಭಿಪ್ರಾಯಗಳು ಮತ್ತು ಕಾರ್ಯಕರ್ತರ ಕೆಲಸದಿಂದಾಗಿ ಅವರನ್ನು ‘ಕೆಂಪು ರಾಜಕುಮಾರಿ’ (ರೆಡ್ ಪ್ರಿನ್ಸ್) ಎಂದು ಕರೆಯಲಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ರಾಣಿ ಮಾರಿಯಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    https://www.facebook.com/sixtoenriquedeborbon/photos/a.264181261771/10158048240541772/?type=3&theater

    ಭಾನುವಾರ ಮಧ್ಯಾಹ್ನ 12:30 ಗಂಟೆ ಮಾಹಿತಿ ಪ್ರಕಾರ ಕೊರೊನಾ ವೈರಸ್‍ಗೆ ಸ್ಪೇನ್‍ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 5,982ಕ್ಕೆ ಏರಿದೆ. ಇದು ಚೀನಾದನ್ನು ಮೀರಿಸಿದೆ. ಸ್ಪೇನ್‍ನಲ್ಲಿ 73,235 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 54,968 ಜನರು ಚಿಕಿತ್ಸೆ ಪಡೆಯುತ್ತಿದ್ದು, 12,285 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸ್ಪೇನ್ ಸಂಸತ್ತು ಒಪ್ಪಿಗೆ ನೀಡಿದೆ.

  • 345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    345 ಬಲಿ, ಅಮೆರಿಕದಲ್ಲಿ 1 ಲಕ್ಷ ಗಡಿ ದಾಟಿತು ಕೊರೊನಾ ಪ್ರಕರಣ

    ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿದ್ದು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಕಳೆದ 24 ಗಂಟೆಯಲ್ಲಿ ಅಮೆರಿಕದಲ್ಲಿ 18 ಸಾವಿರ ಮಂದಿಗೆ ಕೊರೊನಾ ಬಂದಿದ್ದರೆ 345 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಅಮೆರಿಕದಲ್ಲಿ 1.04 ಲಕ್ಷ ಜನರಿಗೆ ಕೊರೊನಾ ಬಂದಿದೆ. ಈ ಪೈಕಿ 1,706 ಮಂದಿ ಕೊರೊನಾದಿಂದ ಮೃತಪಟ್ಟರೆ 2,465 ಮಂದಿ ಗುಣಮುಖರಾಗಿದ್ದಾರೆ.

    ಒಟ್ಟು ವಿಶ್ವದಲ್ಲಿ 5,96,852 ಮಂದಿಗೆ ಕೊರೊನಾ ಬಂದಿದ್ದು 27,352 ಮಂದಿ ಮೃತಪಟ್ಟಿದ್ದಾರೆ. ಸದ್ಯ ಈಗ 4.36ಲಕ್ಷ ಮಂದಿ ಕೊರೊನಾದಿಂದ ಬಳಲುತ್ತಿದ್ದು 1.33 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಇಟಲಿಯಲ್ಲಿ 969 ಮಂದಿ ಮೃತಪಟ್ಟರೆ, ಸ್ಪೇನ್‍ನಲ್ಲಿ 773 ಮಂದಿ ಮೃತರಾಗಿದ್ದಾರೆ.

    ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ(1.04 ಲಕ್ಷ), ಇಟಲಿ(86,498), ಚೀನಾ(81,285), ಸ್ಪೇನ್ (65,718), ಜರ್ಮನಿ(50,871) ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿದೆ.

  • ವೈದ್ಯರಿಗೆ ಕೊರೊನಾ – ಈಗ ಆಸ್ಪತ್ರೆಯ 30 ಸಿಬ್ಬಂದಿ ಮೇಲೆ ನಿಗಾ

    ವೈದ್ಯರಿಗೆ ಕೊರೊನಾ – ಈಗ ಆಸ್ಪತ್ರೆಯ 30 ಸಿಬ್ಬಂದಿ ಮೇಲೆ ನಿಗಾ

    – ವಿದೇಶದಿಂದ ಮಾರ್ಚ್ 2 ರಂದು ಮರಳಿದ್ದ ವೈದ್ಯ
    – ಭಾನುವಾರ ನಡೆಸಿದ ಎರಡನೇ ಪರೀಕ್ಷೆಯಲ್ಲಿ ದೃಢ

    ತಿರುವನಂತಪುರಂ: ಕೇರಳದ ವೈದ್ಯರೊಬ್ಬರಿಗೆ ಕೊರೊನಾ ಬಂದಿದ್ದು ಈಗ ಆಸ್ಪತ್ರೆಗೆ 30 ಮಂದಿ ಸಿಬ್ಬಂದಿ ಮೇಲೆ ನಿಗಾ ಇಡಲಾಗಿದೆ.

    ತಿರುವನಂತಪುರದ ಶ್ರೀ ಚಿತ್ರ ತಿರುನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ ಮತ್ತು ಟೆಕ್ನಾಲಜಿಯ ವೈದ್ಯರೊಬ್ಬರು ಮಾರ್ಚ್ 1 ರಂದು ಸ್ಪೇನ್ ದೇಶದಿಂದ ಬಂದಿದ್ದರು. ಭಾನುವಾರ ಈ ವೈದ್ಯರ ಫಲಿತಾಂಶದಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ವೈದ್ಯರ ಜೊತೆ ಇವರ ಸಂಪರ್ಕಕ್ಕೆ ಬಂದ ಎಲ್ಲ ವೈದ್ಯ ಸಿಬ್ಬಂದಿಯನ್ನು ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ.

    ಮಾರ್ಚ್ 2 ರಂದು ಈ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಮಾರ್ಚ್ 8 ರಂದು ಗಂಟಲು ನೋವಿನ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದರು.

    ಕರ್ತವ್ಯದ ವೇಳೆ ಮಾಸ್ಕ್ ಧರಿಸಿದ್ದ ಇವರು ಮಾರ್ಚ್ 10, 11 ರಂದು ರೋಗಿಗಳ ತಪಾಸಣೆ ಸಹಾ ಮಾಡಿದ್ದರು. ನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ಮಾರ್ಚ್ 14 ರಂದು ಮತ್ತೆ ಕೊರೊನಾ ಪರೀಕ್ಷೆ ನಡೆಸಿದಾಗ ಭಾನುವಾರ ಪಾಸಿಟಿವ್ ಫಲಿತಾಂಶ ಬಂದಿದೆ.

    ತಿರುವನಂತಪುರದ ದೊಡ್ಡ ವೈದ್ಯಕೀಯ ಸಂಸ್ಥೆ ಇದಾಗಿದ್ದು ಉಳಿದ ವೈದ್ಯರನ್ನು ಕರ್ತವ್ಯದಿಂದ ತೆರವುಗೊಳಿಸಿ ನಿಗಾ ಇರಿಸಿದ ಕಾರಣ ನಿತ್ಯದ ಸೇವೆಗೆ ಕೆಲ ಸಮಸ್ಯೆಯಾಗಿದೆ.

  • ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

    ಮ್ಯಾಡ್ರಿಡ್: ಅಂಗಾಂಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕಿಯೊಬ್ಬರು ಮಾನವನ ಅಂಗ ರಚನೆಗಳ ಚಿತ್ರವಿರುವ ಸೂಟ್ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಸ್ಪೇನ್‍ನ ಶಾಲೆಯೊಂದರ ಶಿಕ್ಷಕಿ ಈ ಪ್ರಯೋಗ ಮಾಡಿದ್ದು, ಜೀವಶಾಸ್ತ್ರ ತರಗತಿಯ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಮನುಷ್ಯನ ಅಂಗಾಗಳ ರಚನೆ ಇರುವ ಸೂಟ್ ಧರಿಸಿ ತಿಳಿಸಿದ್ದಾರೆ. ಶಿಕ್ಷಕಿ ವೆರೋನಿಕಾ ಡ್ಯೂಕ್ 15 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ 3ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಇಂಗ್ಲಿಷ್, ಕಲೆ, ಸಮಾಜ ಹಾಗೂ ಸ್ಪ್ಯಾನಿಷ್ ವಿಷಯಗಳನ್ನು ಬೋಧಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    43 ವರ್ಷದ ಶಿಕ್ಷಕಿ ಬೋಧಿಸುತ್ತಿರುವ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಡ್ಯೂಕ್ ಅವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಹಾಗೂ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಿಡಿದಿಡಲು ಮಾನವನ ದೇಹದ ಅಂಗಾಂಗಳನ್ನು ಸೂಚಿಸುವ ಸೂಟ್ ಹಾಕಿಕೊಂಡೇ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧಿಸುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ಅಂಗಾಂಗಳ ದೇಹದ ಸೂಟ್ ಧರಿಸಿ ವಿವರಿಸುವುದೇ ಸೂಕ್ತ ಎಂದು ಈ ಪ್ರಯತ್ನಕ್ಕೆ ಮುಂದಾದೆ ಎಂದು ಶಿಕ್ಷಕಿ ಡ್ಯೂಕ್ ತಿಳಿಸಿದ್ದಾರೆ.

    ಒಂದು ದಿನ ಶಿಕ್ಷಕಿಯ ಪತಿ ಶಾಲೆಯ ತರಗತಿ ಕೊಠಡಿಗೆ ತೆರಳಿದ್ದು, ಈ ವೇಳೆ ಕೆಲ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಅಲ್ಲದೆ ಬಹುತೇಕರು ಶಿಕ್ಷಕಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ 66 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದಿದ್ದು, 13 ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

    ಪತ್ನಿಯ ಈ ಆಲೋಚನೆ ಕುರಿತು ಹೆಮ್ಮೆಯಾಗುತ್ತಿದೆ. ಇವಳನ್ನು ಪತ್ನಿಯಾಗಿ ಪಡೆದ ನಾನೇ ಅದೃಷ್ಟಶಾಲಿ. ಇಂದು ತನ್ನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗಗಳ ಕುರಿತು ವಿವರಿಸಿದ ರೀತಿ ತುಂಬಾ ಇಷ್ಟವಾಯಿತು. ಈ ಕುರಿತು ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಕಲಿತರು ಎಂದು ತಮ್ಮ ಟ್ವೀಟ್ ನಲ್ಲಿ ಶಿಕ್ಷಕಿ ಪತಿ ಬರೆದುಕೊಂಡಿದ್ದಾರೆ.

    ಇದೊಂದೆ ಅಲ್ಲ ಡ್ಯೂಕ್ ಅವರು ಈ ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳ ಮೂಲಕ ಪಾಠ ಮಾಡಿದ್ದಾರೆ. ಇತಿಹಾಸ ಹಾಗೂ ಇಂಗ್ಲಿಷ್ ವ್ಯಾಕರಣ ಪಾಠ ಮಾಡುವಾಗಲೂ ಇವರು ಕಾರ್ಡ್ ಬೋರ್ಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಿ ಪರಿಣಾಮಕಾರಿಯಾಗಿ ಪಾಠ ಮಾಡಿದ್ದರು ಎಂದು ಹೇಳಲಾಗಿದೆ. ಯಾವಾಗಲೂ ಗಂಟು ಮುಖ ಹಾಕಿಕೊಂಡು, ಬೇಸರದಿಂದ ಪಾಠ ಮಾಡುವ ಶಿಕ್ಷಕ, ಶಿಕ್ಷಕಿಯರಲ್ಲಿ ಇದು ಬದಲಾವಣೆ ತರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಡ್ಯೂಕ್ ಅಭಿಪ್ರಾಯ ಪಟ್ಟಿದ್ದಾರೆ.

  • ಸೆಕ್ಸ್‌ನಿಂದ ಕೂಡ ಡೆಂಗ್ಯೂ ಹರಡುತ್ತೆ ಎಚ್ಚರ!

    ಸೆಕ್ಸ್‌ನಿಂದ ಕೂಡ ಡೆಂಗ್ಯೂ ಹರಡುತ್ತೆ ಎಚ್ಚರ!

    ಮ್ಯಾಡ್ರಿಡ್: ಸಾಮಾನ್ಯವಾಗಿ ಡೆಂಗ್ಯೂ ಜ್ವರ ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚಿದರೆ ಬರುತ್ತದೆ ಎಂದು ಬಹುತೇಕ ಮಂದಿಗೆ ತಿಳಿದಿದೆ. ಆದರೆ ಲೈಂಗಿಕ ಕ್ರಿಯೆಯಿಂದಲೂ ಡೆಂಗ್ಯೂ ಹರಡುತ್ತದೆ ಎನ್ನುವ ಅಚ್ಚರಿಯ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಸ್ಪೇನ್‍ನ ಆರೋಗ್ಯ ಇಲಾಖೆ ಲೈಂಗಿಕ ಕ್ರಿಯೆಯಿಂದ ಕೂಡ ಡೆಂಗ್ಯೂ ವೈರಾಣು ಹರಡಿ ಜ್ವರ ಬರುತ್ತದೆ ಎನ್ನುವುದನ್ನ ಪತ್ತೆಹಚ್ಚಿದೆ. ಸ್ಪೇನ್ ವೈದ್ಯರ ತಂಡ, ಕೇವಲ ಸೊಳ್ಳೆ ಕಚ್ಚಿದರೆ ಮಾತ್ರವಲ್ಲದೆ ಡೆಂಗ್ಯೂ ಪೀಡಿತ ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ಮಾಡಿದರೂ ಡೆಂಗ್ಯೂ ಜ್ವರ ಹರಡುತ್ತೆ ಎನ್ನುವುದನ್ನ ಪತ್ತೆ ಮಾಡಿದ್ದಾರೆ. ಇದನ್ನೂ ಓದಿ:ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

    ಈ ವಿಚಾರ ಬಯಲಾಗಿದ್ದು ಮ್ಯಾಡ್ರಿಡ್‍ನ 41 ವರ್ಷದ ವ್ಯಕ್ತಿಯಿಂದ. ಕಳೆದ ಸೆಪ್ಟೆಂಬರ್ ನಲ್ಲಿ ಈ ವ್ಯಕ್ತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿತ್ತು. ಆದರೆ ಈ ವ್ಯಕ್ತಿ ಡೆಂಗ್ಯೂ ಸೊಂಕು ಹರಡಿದ ಪ್ರದೇಶದಲ್ಲಿ ತಂಗಿಲ್ಲ. ಅಲ್ಲದೆ ಕೆಲವೊಂದು ಡೆಂಗ್ಯೂ ಪೀಡಿತ ಪ್ರದೇಶಕ್ಕೆ ಭೇಟಿಕೊಟ್ಟಿದ್ದರೂ ಡೆಂಗ್ಯೂ ವೈರಾಣು ಆತನ ದೇಹ ಸೇರಿರಲಿಲ್ಲ. ಆದರೂ ಈತನಿಗೆ ಡೆಂಗ್ಯೂ ಬಂದಿದ್ದು ಹೇಗೆ ಎಂಬುದೇ ವೈದ್ಯರಿಗೆ ಯಕ್ಷ ಪ್ರಶ್ನೆಯಾಗಿ ತಲೆಕೊರಿಯುತ್ತಿತ್ತು. ಆಗ ವೈದ್ಯರ ತಂಡ ಆ ವ್ಯಕ್ತಿಯನ್ನು ಸಂಪೂರ್ಣ ಪರೀಕ್ಷೆ ನಡೆಸಿದಾಗ, ಲೈಂಗಿಕ ಕ್ರಿಯೆ ಮೂಲಕ ಡೆಂಗ್ಯೂ ವೈರಾಣು ಆತನ ದೇಹ ಸೇರಿತು ಎನ್ನುವುದು ಪತ್ತೆಯಾಗಿದೆ. ಇದನ್ನೂ ಓದಿ:ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    ಈ ವ್ಯಕ್ತಿಯ ಸಂಗಾತಿ ಕ್ಯೂಬಾ ದೇಶಕ್ಕೆ ಹೋಗಿದ್ದಾಗ ಡೆಂಗ್ಯೂ ವೈರಾಣು ಆಕೆಯ ದೇಹ ಸೇರಿತ್ತು. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆ ವೈರಾಣು ಪುರುಷನ ದೇಹ ಸೇರಿತ್ತು. ಇದರಿಂದಲೇ ಆತನಿಗೆ ಡೆಂಗ್ಯೂ ವೈರಾಣು ಹರಡಿತ್ತು. ಈ ವ್ಯಕ್ತಿಯಲ್ಲಿ ಡೆಂಗ್ಯೂ ಪತ್ತೆಯಾಗುವ 10 ದಿನಗಳ ಮೊದಲೇ ಆತನ ಸಂಗಾತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಕ್ಯೂಬಾ ಹಾಗೂ ಡೊಮಿನಿಕನ್ ರಿಪಬ್ಲಿಕ್ ದೇಶಗಳ ಪ್ರವಾಸ ಹೋಗಿದ್ದಾಗ ಆಕೆಯ ದೇಹಕ್ಕೆ ಡೆಂಗ್ಯೂ ವೈರಾಣು ಸೇರಿತ್ತು. ಇದನ್ನೂ ಓದಿ:ಬಾಣಂತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಡೆಂಗ್ಯೂಗೆ ಬಲಿ

    ಈ ವ್ಯಕ್ತಿಯ ವೈದ್ಯಕೀಯ ವರದಿಯನ್ನು ಸ್ಪೇನ್ ಆರೋಗ್ಯ ಇಲಾಖೆ ಎಎಫ್‍ಪಿಗೆ ಇ-ಮೇಲ್ ಕಳುಹಿಸಿತ್ತು. ಎಎಫ್‍ಪಿ ಒಂದು ಯೂರೇಪ್‍ನ ಸ್ಟಾಕ್ಹೋಮ್ ಮೂಲದ ರೋಗ ತಡಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರವಾಗಿದೆ. ಯೂರೋಪ್‍ನ ಆರೋಗ್ಯ ಮತ್ತು ರೋಗಗಳ ಮೇಲ್ವಿಚಾರಣೆ ಮಾಡುವುದು ಇದರ ಕಾರ್ಯವಾಗಿದೆ. ವರದಿ ನೋಡಿದ ಬಳಿಕ, ಸೆಕ್ಸ್‌ನಿಂದ ಕೂಡ ಡೆಂಗ್ಯೂ ವೈರಾಣು ಹರಡಿರುವುದು ಇದೇ ಮೊದಲ ಪ್ರಕರಣ. ಹಿಂದೆ ಈ ಬಗ್ಗೆ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.